ಅಧ್ಯಾಯ  ೧

ಅರ್ಜುನ ವಿಷಾದ ಯೋಗ

ಕುರುಕ್ಷೇತ್ರದ ರಣರಂಗದಲ್ಲಿ ಸೇನಾವಲೋಕನ

ಶ್ಲೋಕ – ೧

ಧೃತರಾಷ್ಟ್ರ ಉವಾಚ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |

ಮಾಮಕಾಃ ಪಾಣ್ಡವಾಶ್ಚೈವ ಕಿಮಕುರ್ವತ ಸಞ್ಜಯ ||೧||

ಧೃತರಾಷ್ಟ್ರಃ ಉವಾಚ-ಧೃತರಾಷ್ಟ್ರ ರಾಜನು ಹೇಳಿದನು; ಧರ್ಮಕ್ಷೇತ್ರೇ-ಯಾತ್ರಾ ಸ್ಥಳವಾದ; ಕುರುಕ್ಷೇತ್ರೇ-ಕುರುಕ್ಷೇತ್ರವೆಂಬ ಸ್ಥಳದಲ್ಲಿ; ಸಮವೇತಾಃ-ಸೇರಿದ; ಯುಯುತ್ಸವಃ-ಯುದ್ಧಮಾಡಲು ಅಪೇಕ್ಷಿಸುವವರಾದ; ಮಾಮಕಾಃ-ನನ್ನ ಪಕ್ಷದವರು (ಪುತ್ರರು); ಪಾಣ್ಡವಾಃ-ಪಾಂಡು ಪುತ್ರರು; ಚ-ಮತ್ತು; ಏವ-ಖಂಡಿತವಾಗಿ; ಕಿಮ್‌-ಏನನ್ನು; ಅಕುರ್ವತ-ಮಾಡಿದರು; ಸಞ್ಜಯ-ಸಂಜಯನೇ. ಅನುವಾದ ಧೃತರಾಷ್ಟ್ರನು ಕೇಳಿದನು, ಹೇ ಸಂಜಯ, ಯುದ್ಧಾಪೇಕ್ಷೆಯಿಂದ ನನ್ನ ಮಕ್ಕಳು ಮತ್ತು ಪಾಂಡವರು ಧರ್ಮಕ್ಷೇತ್ರದಲ್ಲಿ ಸೇರಿದನಂತರ ಏನು ಮಾಡಿದರು? ಭಾವಾರ್ಥ ಗೀತಾಮಾಹಾತ್ಮ್ಯದಲ್ಲಿ ಸಂಗ್ರಹವಾಗಿ ಹೇಳಿದ ಮತ್ತು ಬಹುಜನರು ಓದುವ ಧರ್ಮಶಾಸ್ತ್ರ ಭಗವದ್ಗೀತೆ. ಕೃಷ್ಣನ ಭಕ್ತರೊಬ್ಬರ ಸಹಾಯವನ್ನು ಪಡೆದು ಸೂಕ್ಷ್ಮವಾಗಿ ಪರಿಶೀಲಿಸುತ್ತ ಓದಿ, ಸ್ವಪ್ರೇರಿತ ವ್ಯಾಖ್ಯಾನಗಳಿಲ್ಲದೆ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಅಲ್ಲಿ ಹೇಳಿದೆ. ಅರ್ಜುನನು ಭಗವದ್ಗೀತೆಯನ್ನು ಕೃಷ್ಣನಿಂದಲೇ ನೇರವಾಗಿ ಕೇಳಿ ಅರ್ಥಮಾಡಿಕೊಂಡ. ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ರೀತಿಗೆ ಇದೇ ಉದಾಹರಣೆ. ಇದು ಗೀತೆಯಲ್ಲೇ ಇದೆ. ಈ ಗುರುಶಿಷ್ಯಪರಂಪರೆಯಲ್ಲಿ ಸ್ವಪ್ರೇರಿತ ವ್ಯಾಖ್ಯಾನವಿಲ್ಲದೆ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳುವ ಭಾಗ್ಯಶಾಲಿಯು, ಎಲ್ಲ ವೇದಗಳ ಜ್ಞಾನದ ಅಧ್ಯಯನವನ್ನೂ ಜಗತ್ತಿನ ಎಲ್ಲ ಧರ್ಮಗ್ರಂಥಗಳ ಅಧ್ಯಯನವನ್ನೂ ಮೀರುತ್ತಾನೆ. ಇತರ ಧರ್ಮಗ್ರಂಥಗಳಲ್ಲಿ ಇರುವುದೆಲ್ಲವೂ ಓದುಗನಿಗೆ ಭಗವದ್ಗೀತೆಯಲ್ಲಿ ದೊರೆಯುತ್ತದೆ. ಜೊತೆಗೆ ಬೇರೆಲ್ಲೂ ದೊರೆಯದಿರುವುದೂ ಇಲ್ಲಿದೆ. ಇದು ಗೀತೆಯ ವಿಶಿಷ್ಟ ಗುಣಮಟ್ಟ. ಇದು ಪರಿಪೂರ್ಣವಾದ ಧರ್ಮಶಾಸ್ತ್ರ. ಏಕೆಂದರೆ ಇದು ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನ ನೇರವಾದ ಮಾತು. ಮಹಾಭಾರತದಲ್ಲಿ ವರ್ಣಿಸಿರುವಂತೆ ಧೃತರಾಷ್ಟ್ರನೂ ಸಂಜಯನೂ ಚರ್ಚಿಸಿದ ವಿಷಯಗಳು ಈ ಸಿದ್ಧಾಂತದ ಮೂಲತತ್ತ್ವ. ಈ ಸಿದ್ಧಾಂತವು ಕುರುಕ್ಷೇತ್ರದ ರಣಭೂಮಿಯಲ್ಲಿ ರೂಪಿತವಾಯಿತು ಎಂದು ತಿಳಿಯಲಾಗಿದೆ. ನೆನಪಿಗೆ ಮೀರಿದ ಪ್ರಾಚೀನ ವೇದಯುಗದ ಕಾಲದಿಂದ, ಕುರುಕ್ಷೇತ್ರವು ಪವಿತ್ರವಾದ ಯಾತ್ರಾಸ್ಥಳವಾಗಿದೆ. ಶ್ರೀಕೃಷ್ಣನೇ ಭೂಮಿಯ ಮೇಲಿದ್ದಾಗ ಮಾನವಕುಲದ ಮಾರ್ಗದರ್ಶನಕ್ಕಾಗಿ ಇದನ್ನು ಹೇಳಿದ. ಧರ್ಮಕ್ಷೇತ್ರ (ಧಾರ್ಮಿಕ ವಿಧಿಗಳು ನಡೆಯುವ ಕ್ಷೇತ್ರ) ಎನ್ನುವ ಪದ ಮಹತ್ತ್ವದ್ದು. ಏಕೆಂದರೆ ಕುರುಕ್ಷೇತ್ರ ರಣರಂಗದಲ್ಲಿ ದೇವೋತ್ತಮ ಪರಮ ಪುರುಷನು ಅರ್ಜುನನ ಪಕ್ಷದಲ್ಲಿದ್ದ. ಕುರುಗಳ ತಂದೆಯಾದ ಧೃತರಾಷ್ಟ್ರನಿಗೆ ತನ್ನ ಮಕ್ಕಳು ಕಟ್ಟಕಡೆಗೆ ವಿಜಯವನ್ನು ಸಂಪಾದಿಸುತ್ತಾರೆಯೇ ಎನ್ನುವುದರಲ್ಲಿ ತೀವ್ರ ಸಂದೇಹವಿತ್ತು. ಅವನು ಸಂದೇಹಗ್ರಸ್ತನಾಗಿ ತನ್ನ ಕಾರ್ಯದರ್ಶಿ ಸಂಜಯನನ್ನು “ಅವರು ಏನು ಮಾಡಿದರು?” ಎಂದು ಪ್ರಶ್ನಿಸಿದ. ತನ್ನ ಮಕ್ಕಳೂ ತನ್ನ ತಮ್ಮ ಪಾಂಡುವಿನ ಮಕ್ಕಳೂ ದೃಢ ಸಂಕಲ್ಪದಿಂದ ಘನಘೋರ ಸಮರಕ್ಕಾಗಿ ಕುರುಕ್ಷೇತ್ರ ರಣಭೂಮಿಯಲ್ಲಿ ನೆರೆದಿದ್ದರು ಎಂದು ಅವನಿಗೆ ಖಚಿತವಾಗಿ ತಿಳಿದಿತ್ತು. ಆದರೂ, ಅವನ ಪ್ರಶ್ನೆ ಮಹತ್ತ್ವದ್ದು. ಅಣ್ಣತಮ್ಮಂದಿರ ಮಕ್ಕಳ ನಡುವೆ ರಾಜಿಯಾಗುವುದು ಅವನಿಗೆ ಇಷ್ಟವಿರಲಿಲ್ಲ. ಅವನು ರಣರಂಗದಲ್ಲಿ ತನ್ನ ಪುತ್ರರ ವಿಧಿಯನ್ನು ಕುರಿತು ಖಚಿತವಾಗಿ ತಿಳಿಯಲು ಬಯಸಿದ್ದ. ವೇದಗಳಲ್ಲಿ ಕುರುಕ್ಷೇತ್ರವನ್ನು ಪವಿತ್ರ ಪೂಜಾಸ್ಥಳ, ಸ್ವರ್ಗದ ನಿವಾಸಿಗಳಿಗೂ ಪೂಜಾಸ್ಥಳ ಎಂದು ಹೆಸರಿಸಿದೆ. ಇಂತಹ ಸ್ಥಳವನ್ನು ಯುದ್ಧಕ್ಕಾಗಿ ಆರಿಸಿದುದರಿಂದ ಈ ಪವಿತ್ರಕ್ಷೇತ್ರವು ಯುದ್ಧದ ಫಲಿತಾಂಶದ ಮೇಲೆ ಯಾವ ಪ್ರಭಾವವನ್ನು ಬೀರುವುದೋ ಎಂದು ಧೃತರಾಷ್ಟ್ರನಿಗೆ ಬಹಳ ಭಯವಿತ್ತು. ಅರ್ಜುನನೂ ಪಾಂಡುವಿನ ಇತರ ಮಕ್ಕಳೂ ಸ್ವಭಾವತಃ ಧರ್ಮಿಷ್ಠರಾದುದರಿಂದ ಪವಿತ್ರಕ್ಷೇತ್ರದ ಪ್ರಭಾವವು ಪ್ರಬಲವಾಗಿ ಅವರ ಪರವಾಗಿರುತ್ತದೆ ಎಂದು ಆತ‌ನಿಗೆ ತಿಳಿದಿತ್ತು. ಸಂಜಯನು ವ್ಯಾಸರ ಶಿಷ್ಯ. ಅವರ ಕೃಪೆಯಿಂದ ಆತನು ಧೃತರಾಷ್ಟ್ರನ ಕೋಣೆಯಲ್ಲಿದ್ದಂತೆಯೇ ಕುರುಕ್ಷೇತ್ರ ಯುದ್ಧವನ್ನು ಕಾಣಲು ಸಮರ್ಥನಾಗಿದ್ದ. ಆದುದರಿಂದ ಧೃತರಾಷ್ಟ್ರನು ಯುದ್ಧಭೂಮಿಯಲ್ಲಿ ಏನಾಗುತ್ತಿದೆ ಎಂದು ಕೇಳಿದ. ಪಾಂಡವರೂ ಧೃತರಾಷ್ಟ್ರನ ಮಕ್ಕಳೂ ಒಂದೇ ಕುಟುಂಬದವರು. ಆದರೆ ಧೃತರಾಷ್ಟ್ರನ ಮನಸ್ಸು ಇಲ್ಲಿ ಬಯಲಾಗುತ್ತದೆ. ಉದ್ದೇಶಪೂರ್ವಕವಾಗಿ ತನ್ನ ಮಕ್ಕಳನ್ನು ಮಾತ್ರ ಕುರುವಂಶದವರೆಂದು ಹೆಸರಿಸಿ ಪಾಂಡವರನ್ನು ಕುಟುಂಬದ ಪಿತ್ರಾರ್ಜಿತ ಸ್ವತ್ತಿನಿಂದ ದೂರವಿರಿಸಿದ. ಪಾಂಡುವಿನ ಮಕ್ಕಳ ವಿಷಯದಲ್ಲಿ ಧೃತರಾಷ್ಟ್ರನ ನಿರ್ದಿಷ್ಟವಾದ ನಿಲುವನ್ನು ಇದರಿಂದ ತಿಳಿಯಬಹುದು. ಧರ್ಮದ ಜನಕನೆನಿಸಿರುವ ಶ್ರೀಕೃಷ್ಣನೇ ಉಪಸ್ಥಿತನಾಗಿದ್ದ ಕುರುಕ್ಷೇತ್ರ ಒಂದು ಧರ್ಮಕ್ಷೇತ್ರವಾಗಿತ್ತು. ಅಲ್ಲಿ, ಭತ್ತದ‌ ಗದ್ದೆಯಲ್ಲಿ ಕಳೆಯನ್ನು ಕಿತ್ತೆಸೆಯುವ ಹಾಗೆ ದುರ್ಯೋಧನನಂತಹ ಅನಗತ್ಯವಾದ ಸಸ್ಯಗಳನ್ನು ಪ್ರಭುವು ಕಿತ್ತೆಸೆಯುತ್ತಾನೆ. ಅಲ್ಲದೆ ಯುಧಿಷ್ಠಿರನಂತಹ ನಾಯಕರನ್ನುಳ್ಳ ಧರ್ಮಿಷ್ಠರನ್ನು ಮತ್ತೆ ಪ್ರತಿಷ್ಠಾಪನೆ ಮಾಡುತ್ತಾನೆ. ಈ ನಿರೀಕ್ಷೆ ಪ್ರಸ್ತುತ ವಿಷಯಗಳ ಆರಂಭದಿಂದಲೇ ಇದೆ. ಐತಿಹಾಸಿಕ ಮತ್ತು ವೈದಿಕ ಪ್ರಾಮುಖ್ಯದ ಜೊತೆಗೆ ಧರ್ಮಕ್ಷೇತ್ರ, ಕುರುಕ್ಷೇತ್ರ ಎಂಬ ಶಬ್ದಗಳಿಗೆ ಈ ಮಹತ್ತ್ವವೂ ಇದೆ. ಶ್ಲೋಕ – ೨ ಸಞ್ಜಯ ಉವಾಚ ದೃಷ್ಟ್ವಾ ತು ಪಾಣ್ಡವಾನೀಕಂ ವ್ಯೂಢಂ ದುರ್ಯೋಧನಸ್ತದಾ | ಆಚಾರ್ಯಮುಪಸಙ್ಗಮ್ಯ ರಾಜಾ ವಚನಮಬ್ರವೀತ್ ||೨|| ಸಞ್ಜಯಃ ಉವಾಚ-ಸಂಜಯನು ಹೇಳಿದನು; ದೃಷ್ಟ್ವಾ-ನೋಡಿದನಂತರ; ತು-ಆದರೆ; ಪಾಣ್ಡವ ಅನೀಕಮ್‌-ಪಾಂಡವರ ಸೈನಿಕರನ್ನು; ವ್ಯೂಢಮ್‌-ವ್ಯೂಹದ ವ್ಯವಸ್ಥೆಯಲ್ಲಿದ್ದ; ದುರ್ಯೋಧನಃ-ದುರ್ಯೋಧನ ರಾಜನು; ತದಾ-ಆಗ; ಆಚಾರ್ಯಮ್‌-ಗುರುಗಳನ್ನು; ಉಪಸಙ್ಗಮ್ಯ-ಸಮೀಪಿಸಿ; ರಾಜಾ-ರಾಜನಾದ; ವಚನಮ್‌-ಮಾತುಗಳನ್ನು; ಅಬ್ರವೀತ್‌-ಹೇಳಿದನು. ಅನುವಾದ ಸಂಜಯನು ಹೇಳಿದ – ರಾಜನೇ, ಪಾಂಡು ಪುತ್ರರ ಸೇನಾವ್ಯೂಹವನ್ನು ವೀಕ್ಷಿಸಿ ರಾಜಾ ದುರ್ಯೋಧನನು ತನ್ನ ಗುರುಗಳ ಬಳಿಗೆ ಹೋಗಿ ಈ ಕೆಳಗಿನ ಮಾತುಗಳನ್ನು ಹೇಳಿದನು. ಭಾವಾರ್ಥ ಧೃತರಾಷ್ಟ್ರನು ಹುಟ್ಟು ಕುರುಡ. ದುರದೃಷ್ಟವಶಾತ್ ಅವನು ಆಧ್ಯಾತ್ಮಿಕವಾಗಿಯೂ ಕುರುಡ. ಧರ್ಮದ ವಿಷಯದಲ್ಲಿ ತನ್ನ ಮಕ್ಕಳು ತನ್ನಷ್ಟೇ ಕುರುಡರು ಎಂದು ಅವನಿಗೆ ತಿಳಿದಿತ್ತು. ಹುಟ್ಟಿದಾಗಿನಿಂದ ಧರ್ಮಿಷ್ಠರಾಗಿದ್ದ ಪಾಂಡವರೊಡನೆ ತನ್ನ ಮಕ್ಕಳು ಒಪ್ಪಂದ ಮಾಡಿಕೊಳ್ಳಲು ಎಂದೂ ಸಾಧ್ಯವೇ ಇಲ್ಲ ಎಂದು ಅವನಿಗೆ ಖಚಿತವಾಗಿತ್ತು. ಆದರೂ ಅವನಿಗೆ ಯಾತ್ರಾಸ್ಥಳದ ಪ್ರಭಾವದ ಬಗ್ಗೆ ಅನುಮಾನವಿದ್ದೇ ಇತ್ತು. ರಣರಂಗದಲ್ಲಿ ಏನಾಯಿತು ಎಂದು ಕೇಳುವುದರಲ್ಲಿ ಧೃತರಾಷ್ಟ್ರನ ಉದ್ದೇಶವೇನು ಎಂದು ಸಂಜಯ ಅರ್ಥಮಾಡಿಕೊಳ್ಳಬಲ್ಲವನಾಗಿದ್ದ. ಆದುದರಿಂದ ಸಂಜಯನು ವಿಷಣ್ಣನಾಗಿದ್ದ ರಾಜನಿಗೆ ಉತ್ಸಾಹ ಬರಿಸಲು ಬಯಸಿದ. ರಾಜನಿಗೆ, ಅವನ ಮಕ್ಕಳು ಧರ್ಮಕ್ಷೇತ್ರದ ಪ್ರಭಾವದಿಂದ ಯಾವುದೇ ರೀತಿಯ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ. ದುರ್ಯೋಧನನು ಪಾಂಡವರ ಸೇನಾಬಲವನ್ನು ವೀಕ್ಷಿಸಿದನಂತರ ಸನ್ನಿವೇಶವನ್ನು ವಾಸ್ತವವಾಗಿ ತಿಳಿಸಿಕೊಡಲು ಸೈನ್ಯಾಧಿಪತಿ ದ್ರೋಣಾಚಾರ್ಯರ ಬಳಿಗೆ ಹೋದ ಎಂದು ಹೇಳಿದ. ದುರ್ಯೋಧನನು ರಾಜನೆಂದು ಹೇಳಿದ್ದರೂ ಸನ್ನಿವೇಶವು ಗಂಭೀರವಾಗಿದ್ದುದರಿಂದ ಅವನು ಸೈನ್ಯಾಧಿಪತಿಗಳ ಬಳಿಗೆ ಹೋಗಬೇಕಾಯಿತು. ಆದುದರಿಂದ ಅವನು ರಾಜಕಾರಣಿಯಾಗಲು ಅರ್ಹನಿದ್ದ. ಆದರೆ ದುರ್ಯೋಧನನ ರಾಜತಾಂತ್ರಿಕ ಸೋಗು ಪಾಂಡವರ ಸೇನಾವ್ಯೂಹವನ್ನು ಕಂಡಾಗ ಆತನಿಗಾದ ಭಯವನ್ನು ಮುಚ್ಚಿಡಲಾಗಲಿಲ್ಲ. ಶ್ಲೋಕ – ೩ ಪಶ್ಯೈತಾಂ ಪಾಣ್ಡು ಪುತ್ರಾಣಾಂ ಆಚಾರ್ಯ ಮಹತೀಂ ಚಮೂಮ್ | ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ||೩|| ಪಶ್ಯ-ನೋಡಿರಿ; ಏತಾಮ್‌-ಈ; ಪಾಣ್ಡು ಪುತ್ರಾಣಾಮ್‌-ಪಾಂಡು ಪುತ್ರರ; ಆಚಾರ್ಯ-ಗುರುಗಳೇ; ಮಹತೀಮ್‌-ಮಹತ್ತಾದ; ಚಮೂಮ್‌-ಸೇನಾ ಬಲವನ್ನು; ವ್ಯೂಢಾಮ್‌-ವ್ಯೂಹರಚನೆಯಲ್ಲಿರುವ; ದ್ರುಪದ ಪುತ್ರೇಣ-ದ್ರುಪದನ ಮಗನಿಂದ; ತವ-ನಿಮ್ಮ; ಶಿಷ್ಯೇಣ-ಶಿಷ್ಯನಾದ; ಧೀ-ಮತಾ-ಬಹಳ ಬುದ್ಧಿವಂತನಾದ. ಅನುವಾದ ಆಚಾರ್ಯರೇ, ನಿಮ್ಮ ಚತುರ ಶಿಷ್ಯನಾದ ದ್ರುಪದನ ಮಗನು ಕೌಶಲದಿಂದ ವ್ಯೂಹರೂಪವಾಗಿ ರಚಿಸಿರುವ ಈ ಪಾಂಡು ಪುತ್ರರ ಸೈನ್ಯವನ್ನು ನೋಡಿ. ಭಾವಾರ್ಥ ವ್ಯವಹಾರ ಚತುರನಾದ ದುರ್ಯೋಧನನು ಶ್ರೇಷ್ಠ ಬ್ರಾಹ್ಮಣ ಸೈನ್ಯಾಧಿಪತಿಯಾದ ದ್ರೋಣಾಚಾರ್ಯರ ದೋಷಗಳನ್ನು ಎತ್ತಿತೋರಿಸಲು ಬಯಸಿದ. ಅರ್ಜುನನ ಹೆಂಡತಿ ದ್ರೌಪದಿ; ಅವಳ ತಂದೆ ದ್ರುಪದ. ದ್ರೋಣಾಚಾರ್ಯರಿಗೂ ದ್ರುಪದನಿಗೂ ಒಂದು ರಾಜಕೀಯ ಕಲಹವಾಯಿತು. ಕಲಹದ ಫ‌ಲವಾಗಿ ದ್ರುಪದನು ಒಂದು ಮಹಾಯಾಗವನ್ನು ಮಾಡಿ, ದ್ರೋಣಾಚಾರ್ಯರನ್ನು ಕೊಲ್ಲಬಲ್ಲ ಮಗನನ್ನು ಪಡೆಯುವ ವರವನ್ನು ಗಳಿಸಿದ. ಇದು ದ್ರೋಣಾಚಾರ್ಯರಿಗೆ ಚೆನ್ನಾಗಿ ತಿಳಿದಿತ್ತು. ಆದರೂ ದ್ರುಪದನ ಮಗ ಧೃಷ್ಟದ್ಯುಮ್ನನಿಗೆ ಯುದ್ಧ ವಿದ್ಯೆಯನ್ನು ಕಲಿಸಲು ಅವರಿಗೆ ಒಪ್ಪಿಸಿದಾಗ, ಉದಾರ ಮನಸ್ಸಿನ ಬ್ರಾಹ್ಮಣರಾಗಿ ಅವರು, ತಮಗೆ ತಿಳಿದ ಎಲ್ಲ ಅಸ್ತ್ರಶಸ್ತ್ರರಹಸ್ಯಗಳನ್ನೂ ಅವನಿಗೆ ಹೇಳಿಕೊಡಲು ಹಿಂದೆಗೆಯಲಿಲ್ಲ. ಕುರುಕ್ಷೇತ್ರ ರಣಭೂಮಿಯಲ್ಲೀಗ ಧೃಷ್ಟದ್ಯುಮ್ನನು ಪಾಂಡವರ ಪಕ್ಷವನ್ನು ಸೇರಿದ್ದ ಸೇನಾವ್ಯೂಹದ ರಚನೆಯ ಕಲೆಯನ್ನು ದ್ರೋಣಾಚಾರ್ಯರಿಂದ ಕಲಿತು ಈಗ ಅವನೇ ವ್ಯೂಹರಚನೆ ಮಾಡಿದ್ದ. ದ್ರೋಣಾಚಾರ್ಯರು ಸಮರದಲ್ಲಿ ಎಚ್ಚರದಿಂದಿದ್ದು ಯಾವ ರೀತಿಯಲ್ಲಿಯೂ ಬಿಗಿ ಸಡಿಲಿಸದಂತೆ ಇರಬೇಕೆಂಬ ಉದ್ದೇಶದಿಂದ ದುರ್ಯೋಧನನು ಅವರ ತಪ್ಪನ್ನು ಅವರಿಗೆ ತೋರಿಸಿಕೊಟ್ಟ. ಅವನಿಗೆ ಮತ್ತೊಂದು ಉದ್ದೇಶವೂ ಇತ್ತು. ದ್ರೋಣಾಚಾರ್ಯರು ತಮ್ಮ ಪ್ರಿಯಶಿಷ್ಯರಾಗಿದ್ದ ಪಾಂಡವರ ವಿಷಯದಲ್ಲಿ ಇದೇ ರೀತಿ ಉದಾರವಾಗಿರಬಾರದು ಎಂದು ಎತ್ತಿ ಹೇಳಲು ಬಯಸಿದ. ಅರ್ಜುನನಂತೂ ದ್ರೋಣಾಚಾರ್ಯರ ಅತ್ಯಂತ ಪ್ರೀತಿಪಾತ್ರನಾದ ಮತ್ತು ತೀಕ್ಷ್ಣ ಬುದ್ಧಿಯ ಶಿಷ್ಯ. ಯುದ್ಧದಲ್ಲಿ ಅಂತಹ ಔದಾರ್ಯ ತೋರಿಸಿದರೆ ಸೋಲಾಗುತ್ತದೆ ಎಂದೂ ದುರ್ಯೋಧನನು ಎಚ್ಚರಿಸಿದ. ಶ್ಲೋಕ – ೪ ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯು-| ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ ||೪|| ಅತ್ರ-ಇಲ್ಲಿ; ಶೂರಾಃ-ವೀರರು; ಮಹಾ ಇಷು ಆಸಾಃ-ಮಹಾ ಬಿಲ್ಗಾರರು; ಭೀಮ ಅರ್ಜುನ-ಭೀಮ, ಅರ್ಜುನರಿಗೆ; ಸಮಾಃ-ಸಮಾನರಾದ; ಯುಧಿ-ಯುದ್ಧದಲ್ಲಿ; ಯುಯುಧಾನಃ-ಯುಯುಧಾನನು; ವಿರಾಟಃ-ವಿರಾಟನು; ಚ-ಕೂಡ; ದ್ರುಪದಃ-ದ್ರುಪದನು; ಚ-ಸಹಾ; ಮಹಾ ರಥಃ-ಮಹಾಯೋಧ. ಅನುವಾದ ಹೋರಾಟದಲ್ಲಿ ಭೀಮಾರ್ಜುನರಿಗೆ ಸಮಾನರಾದ ಅನೇಕ ವೀರ ಬಿಲ್ಲಾಳುಗಳು ಈ ಸೈನ್ಯದಲ್ಲಿದ್ದಾರೆ: ಯುಯುಧಾನ, ವಿರಾಟ ಮತ್ತು ದ್ರುಪದರಂತಹ ಮಹಾರಥರಿದ್ದಾರೆ. ಭಾವಾರ್ಥ ದ್ರೋಣಾಚಾರ್ಯರಿಗೆ ಯುದ್ಧಕಲೆಯಲ್ಲಿದ್ದ ಮಹಾಶಕ್ತಿಯ ಎದುರಿನಲ್ಲಿ ಧೃಷ್ಟದ್ಯುಮ್ನನು ಬಹು ದೊಡ್ಡ ತಡೆಯೇನೂ ಆಗಿರಲಿಲ್ಲ. ಆದರೆ ಆತಂಕವನ್ನುಂಟುಮಾಡಬಲ್ಲ ಇತರರು ಅನೇಕರಿದ್ದರು. ಅವರಲ್ಲಿ ಪ್ರತಿಯೊಬ್ಬರೂ ಭೀಮಾರ್ಜುನರಷ್ಟೇದುರ್ಜಯರಾದದ್ದರಿಂದ ಕೌರವರ ಜಯಕ್ಕೆ ಅಡ್ಡಿಯಾಗಬಲ್ಲರೆಂದು ದುರ್ಯೋಧನನು ಅವರನ್ನು ಹೆಸರಿಸುತ್ತಾನೆ. ಅವನಿಗೆ ಭೀಮಾರ್ಜುನರ ಶಕ್ತಿಯ ಅರಿವಿತ್ತು. ಆದ್ದರಿಂದ ಅವನು ಇತರರನ್ನು ಅವರೊಂದಿಗೆ ಹೋಲಿಸಿದನು. ಶ್ಲೋಕ – ೫ ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ | ಪುರುಜಿತ್ ಕುನ್ತಿಭೋಜಶ್ಚ ಶೈಬ್ಯಶ್ಚ ನರಪುಙ್ಗವಃ ||೫|| ಧೃಷ್ಟಕೇತುಃ-ಧೃಷ್ಟಕೇತು; ಚೇಕಿತಾನಃ-ಚೇಕಿತಾನ; ಕಾಶಿರಾಜಃ-ಕಾಶಿರಾಜ; ಚ-ಕೂಡ; ವೀರ್ಯವಾನ್‌-ಮಹಾ ಬಲಶಾಲಿಯಾದ; ಪುರುಜಿತ್‌-ಪುರುಜಿತನು; ಕುಂತಿಭೋಜಃ-ಕುಂತಿಭೋಜನು; ಚ-ಮತ್ತು; ಶೈಬ್ಯಃ-ಶೈಬ್ಯನು; ಚ-ಮತ್ತು; ನರ ಪುಙ್ಗವಃ-ಮಾನವ ಸಮಾಜದಲ್ಲಿ ಶ್ರೇಷ್ಠನಾದ. ಅನುವಾದ ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ್, ಕುಂತಿಭೋಜ ಮತ್ತು ಶೈಬ್ಯನಂತಹ ಮಹಾನ್ ವೀರರು, ನರಪುಂಗವರು ಇದ್ದಾರೆ. ಶ್ಲೋಕ – ೬ ಯುಧಾಮನ್ಯುಶ್ಚ ವಿಕ್ರಾನ್ತ ಉತ್ತಮೌಜಾಶ್ಚ ವೀರ್ಯವಾನ್ | ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ ||೬|| ಯುಧಾಮನ್ಯುಃ-ಯುಧಾಮನ್ಯುವು; ಚ-ಮತ್ತು; ವಿಕ್ರಾನ್ತ-ಮಹಾ ಬಲಶಾಲಿಯಾದ; ಉತ್ತಮೌಜಾಃ-ಉತ್ತಮೌಜನು; ಚ-ಮತ್ತು; ವೀರ್ಯ-ವಾನ್‌-ಮಹಾಬಲಿಷ್ಠನಾದ; ಸೌಭದ್ರಃ-ಸುಭದ್ರೆಯ ಮಗನು; ದ್ರೌಪದೇಯಾಃ-ದ್ರೌಪದಿಯ ಪುತ್ರರು; ಚ-ಮತ್ತು; ಸರ್ವೇ-ಎಲ್ಲರೂ; ಏವ-ನಿಶ್ಚಯವಾಗಿಯೂ; ಮಹಾರಥಾಃ-ಮಹಾರಥಿಕರಾದ. ಅನುವಾದ ಬಲಶಾಲಿ ಯುಧಾಮನ್ಯು, ಬಹುಶಕ್ತಿವಂತನಾದ ಉತ್ತಮೌಜ, ಸುಭದ್ರೆಯ ಮಗ, ದ್ರೌಪದಿಯ ಪುತ್ರರು ಇವರೆಲ್ಲ ಇದ್ದಾರೆ. ಇವರೆಲ್ಲ ಮಹಾರಥರು. ಶ್ಲೋಕ – ೭ ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ನಿಬೋಧ ದ್ವಿಜೋತ್ತಮ | ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ||೭|| ಅಸ್ಮಾಕಮ್‌-ನಮ್ಮ; ತು-ಆದರೆ; ವಿಶಿಷ್ಟಾಃ-ವಿಶೇಷವಾಗಿ ಬಲಿಷ್ಠರಾದ; ಯೇ-ಯಾರು; ತಾನ್‌-ಅವರನ್ನು; ನಿಬೋಧ-ಗಮನಿಸಿ; ದ್ವಿಜ-ಉತ್ತಮ-ಬ್ರಾಹ್ಮಣ ಶ್ರೇಷ್ಠರೇ; ನಾಯಕಾಃ-ನಾಯಕರು; ಮಮ-ನನ್ನ; ಸೈನ್ಯಸ್ಯ-ಸೈನಿಕರ; ಸಂಜ್ಞಾ ಅರ್ಥಮ್‌-ತಿಳಿವಳಿಕೆಗಾಗಿ; ತಾನ್‌-ಅವರನ್ನು; ಬ್ರವೀಮಿ-ಹೇಳುತ್ತೇನೆ; ತೇ-ನಿಮಗೆ. ಅನುವಾದ ಬ್ರಾಹ್ಮಣೋತ್ತಮರೇ, ನಿಮಗೆ ತಿಳಿಸಲೆಂದು ನನ್ನ ಸೈನ್ಯವನ್ನು ನಡೆಸಬಲ್ಲ ವಿಶೇಷ ಅರ್ಹತೆಯಿರುವ ನಾಯಕರ ವಿಷಯವನ್ನು ಹೇಳಬಯಸುತ್ತೇನೆ. ಶ್ಲೋಕ – ೮             ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಮ್‌ಜಯಃ |             ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ||೮|| ಭವಾನ್‌-ತಾವು; ಭೀಷ್ಮಃ-ಪಿತಾಮಹರಾದ ಭೀಷ್ಮಾಚಾರ್ಯರು; ಚ-ಕೂಡ; ಕರ್ಣಃ-ಕರ್ಣನು; ಚ-ಮತ್ತು; ಕೃಪಃ-ಕೃಪರು; ಚ-ಮತ್ತು; ಸಮಿತಿಮ್‌ಜಯಃ-ಯುದ್ಧದಲ್ಲಿ ಸದಾ ಜಯಶಾಲಿಯಾದ; ಅಶ್ವತ್ಥಾಮಾ-ಅಶ್ವತ್ಥಾಮನು; ವಿಕರ್ಣಃ-ವಿಕರ್ಣನು; ಚ-ಹಾಗೆಯೇ; ಸೌಮದತ್ತಿಃ-ಸೋಮದತ್ತನ ಪುತ್ರನು; ತಥಾ-ಹಾಗೆಯೇ; ಏವ-ಖಂಡಿತವಾಗಿಯೂ; ಚ-ಕೂಡ. ಅನುವಾದ ಇಲ್ಲಿರುವವರು ತಾವು, ಭೀಷ್ಮರು, ಕರ್ಣ, ಕೃಪ, ಅಶ್ವತ್ಥಾಮ, ವಿಕರ್ಣ, ಸೋಮದತ್ತನ ಮಗನಾದ ಭೂರಿಶ್ರವ. ಇವರೆಲ್ಲ ಯಾವಾಗಲೂ ಯುದ್ಧದಲ್ಲಿ ವಿಜಯಿಗಳಾಗುವವರು. ಭಾವಾರ್ಥ ದುರ್ಯೋಧನನು ಸದಾ ವಿಜಯಿಗಳಾಗುವ ಅಸಾಧಾರಣ ವೀರರನ್ನು ಹೆಸರಿಸುತ್ತಾನೆ. ವಿಕರ್ಣನು ದುರ್ಯೋಧನನ ತಮ್ಮ. ಅಶ್ವತ್ಥಾಮನು ದ್ರೋಣಾಚಾರ್ಯರ ಮಗ. ಸೌಮದತ್ತಿ ಅಥವಾ ಭೂರಿಶ್ರವನು ಬಾಹ್ಲೀಕರ ಅರಸನ ಮಗ. ಕರ್ಣನು ಅರ್ಜುನನ ಮಲ ಅಣ್ಣ; ಪಾಂಡುರಾಜನನ್ನು ಕುಂತಿಯು ಮದುವೆಯಾಗುವ ಮೊದಲು ಅವಳು ಹೆತ್ತ ಮಗ. ಕೃಪಾಚಾರ್ಯರ ಅವಳಿ ಸೋದರಿ ದ್ರೋಣಾಚಾರ್ಯರನ್ನು ಮದುವೆಯಾದಳು. ಶ್ಲೋಕ – ೯ ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ | ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ||೯|| ಅನ್ಯೇ-ಇತರರು; ಚ-ಕೂಡ; ಬಹವಃ-ಬಹು ಸಂಖ್ಯೆಯಲ್ಲಿ; ಶೂರಾಃ-ಶೂರರು; ಮತ್ ಅರ್ಥೇ-ನನ್ನ ಸಲುವಾಗಿ; ತ್ಯಕ್ತ ಜೀವಿತಾಃ-ಪ್ರಾಣಾರ್ಪಣೆಗೆ ಸಿದ್ಧರಾದವರು; ನಾನಾ-ಅನೇಕ; ಶಸ್ತ್ರ-ಆಯುಧಗಳು; ಪ್ರಹರಣಾಃ-ಸಜ್ಜಿತರಾಗಿ; ಸರ್ವೇ-ಎಲ್ಲರೂ; ಯುದ್ಧ ವಿಶಾರದಾಃ-ಯುದ್ಧ ವಿಜ್ಞಾನದಲ್ಲಿ ಅನುಭವ ಪಡೆದವರು. ಅನುವಾದ ನನಗಾಗಿ ಪ್ರಾಣವನ್ನೇ ಕೊಡಲು ಸಿದ್ಧರಾಗಿರುವ ಇನ್ನೂ ಅನೇಕ ಮಂದಿ ವೀರರಿದ್ದಾರೆ. ಅವರೆಲ್ಲ ವಿವಿಧ ಅಸ್ತ್ರ ಶಸ್ತ್ರಗಳನ್ನು ಹೊಂದಿರುವವರು. ಎಲ್ಲರೂ ಯುದ್ಧ ವಿಶಾರದರು. ಭಾವಾರ್ಥ ಜಯದ್ರಥ, ಕೃತವರ್ಮ ಮತ್ತು ಶಲ್ಯರಂತಹವರ ವಿಷಯ ಹೇಳುವುದಾದರೆ ಅವರೆಲ್ಲ ದುರ್ಯೋಧನನಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸಂಕಲ್ಪ ಮಾಡಿದ್ದಾರೆ. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪಾಪಿ ದುರ್ಯೋಧನನ ಪಕ್ಷವನ್ನು ಸೇರಿರುವುದರಿಂದ ಅವರೆಲ್ಲ ಕುರುಕ್ಷೇತ್ರ ಯುದ್ಧದಲ್ಲಿ ಸಾಯಬೇಕೆಂದು ಆಗಲೇ ನಿರ್ಧಾರವಾಗಿಹೋಗಿದೆ. ದುರ್ಯೋಧನನು ಮಾತ್ರ ಈ ಎಲ್ಲ ಸ್ನೇಹಿತರ ಬಲವು ಒಂದುಗೂಡಿರುವುದರಿಂದ ವಿಜಯವು ತನ್ನದೇ ಎಂದು ವಿಶ್ವಾಸ ಹೊಂದಿದ್ದನು. ಶ್ಲೋಕ – ೧೦ ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ | ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ||೧೦|| ಅಪರ್ಯಾಪ್ತಮ್‌-ಅಳೆಯಲಾಗದ; ತತ್‌-ಅದು; ಅಸ್ಮಾಕಮ್‌-ನಮ್ಮ; ಬಲಮ್‌-ಬಲವು; ಭೀಷ್ಮ-ಪಿತಾಮಹ ಭೀಷ್ಮರಿಂದ; ಅಭಿರಕ್ಷಿತಮ್‌-ಪರಿಪೂರ್ಣವಾಗಿ ರಕ್ಷಿತವಾಗಿದೆ; ಪರ್ಯಾಪ್ತಮ್‌-ಪರಿಮಿತವಾದ; ತು-ಆದರೆ; ಇದಮ್‌-ಈ; ಏತೇಷಾಮ್‌-ಪಾಂಡವರ; ಬಲಮ್‌-ಬಲವು; ಭೀಮ-ಭೀಮನಿಂದ; ಅಭಿರಕ್ಷಿತಮ್‌-ಬಹು ಎಚ್ಚರಿಕೆಯಿಂದ ರಕ್ಷಿತವಾಗಿದೆ. ಅನುವಾದ ನಮ್ಮ ಶಕ್ತಿಯು ಅಳತೆಯನ್ನು ಮೀರಿದ್ದು, ಮತ್ತು ತಾತ ಭೀಷ್ಮರಿಂದ ನಮಗೆ ಪರಿಪೂರ್ಣ ರಕ್ಷಣೆ ಇದೆ. ಭೀಮನು ಎಚ್ಚರದಿಂದ ರಕ್ಷಿಸುತ್ತಿರುವ ಪಾಂಡವರ ಶಕ್ತಿಯಾದರೋ ಮಿತವಾದದ್ದು. ಭಾವಾರ್ಥ ಇಲ್ಲಿ ದುರ್ಯೋಧನನು ಎರಡು ಸೈನ್ಯಗಳ ಶಕ್ತಿಯನ್ನು ಹೋಲಿಸಿ ಅಂದಾಜು ಮಾಡುತ್ತಿದ್ದಾನೆ. ಅತ್ಯಂತ ಅನುಭವಶಾಲಿ ದಂಡನಾಯಕರಾದ ಪಿತಾಮಹ ಭೀಷ್ಮರೇ ಸಂರಕ್ಷಿಸುತ್ತಿರುವುದರಿಂದ ತನ್ನ ಸೈನ್ಯದ ಶಕ್ತಿಯನ್ನು ಅಳೆಯುವುದೇ ಸಾಧ್ಯವಿಲ್ಲ ಎಂದು ಅವನ ಭಾವನೆ. ಇದಕ್ಕೆ ಪ್ರತಿಯಾಗಿ ಪಾಂಡವರ ಸೇನೆಯನ್ನು ಸಂರಕ್ಷಿಸುತ್ತಿರುವವನು ಅಷ್ಟೊಂದು ಅನುಭವವಿಲ್ಲದ ಭೀಮ. ಭೀಷ್ಮರೊಂದಿಗೆ ಹೋಲಿಸಿದರೆ ಅವನು ತೃಣಕ್ಕೆ ಸಮಾನ. ಆದ್ದರಿಂದ ಆ ಸೇನೆಯ ಶಕ್ತಿಯು ಮಿತವಾದದ್ದು. ತನಗೆ ಸಾವು ಬರುವುದೇ ಆದರೆ ತನ್ನನ್ನು ಕೊಲ್ಲುವವನು ಭೀಮನೇ ಎಂದು ದುರ್ಯೋಧನನಿಗೆ ಚೆನ್ನಾಗಿ ತಿಳಿದಿತ್ತು. ಆದುದರಿಂದ ಅವನಿಗೆ ಭೀಮನೆಂದರೆ ಯಾವಾಗಲೂ ಅಸೂಯೆ. ಆದರೆ ಭೀಮನಿಗಿಂತ ಬಹು ಶ್ರೇಷ್ಠ ಸೇನಾನಾಯಕರಾದ ಭೀಷ್ಮರು ತನ್ನ ಕಡೆ ಇರುವುದರಿಂದ ತನ್ನ ವಿಜಯದ ದೃಢ ವಿಶ್ವಾಸ ಅವನಿಗಿತ್ತು. ತಾನು ಯುದ್ಧದಲ್ಲಿ ಜಯಶಾಲಿಯಾಗುತ್ತೇನೆ ಎನ್ನುವ ಅವನ ನಿರ್ಣಯಕ್ಕೆ ಆಧಾರವಿತ್ತು. ಶ್ಲೋಕ – ೧೧             ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ |             ಭೀಷ್ಮಮೇವಾಭಿರಕ್ಷನ್ತು ಭವನ್ತಃ ಸರ್ವ ಏವ ಹಿ ||೧೧|| ಅಯನೇಷು-ಮುಖ್ಯ ಸ್ಥಳಗಳಲ್ಲಿ; ಚ-ಕೂಡ; ಸರ್ವೇಷು-ಎಲ್ಲಕಡೆಗಳಲ್ಲಿ; ಯಥಾ-ಭಾಗಮ್‌-ವಿಭಿನ್ನವಾಗಿ ವ್ಯವಸ್ಥೆ ಮಾಡಿದಂತೆ; ಅವಸ್ಥಿತಾಃ-ಇರುವ; ಭೀಷ್ಮಮ್‌-ಪಿತಾಮಹ ಭೀಷ್ಮರನ್ನು; ಏವ-ಖಂಡಿತವಾಗಿಯೂ; ಅಭಿರಕ್ಷನ್ತು-ಬೆಂಬಲಿಸಬೇಕು; ಭವನ್ತಃ-ತಾವು; ಸರ್ವೇ-ಎಲ್ಲರೂ; ಏವ ಹಿ-ನಿಶ್ಚಿತವಾಗಿಯೂ. ಅನುವಾದ ಸೈನ್ಯವ್ಯೂಹವನ್ನು ಪ್ರವೇಶಿಸಲು ಇರುವ ಆಯಕಟ್ಟಿನ ಬಿಂದುಗಳಲ್ಲಿ ನಿಮ್ಮ ನಿಮ್ಮ ಸ್ಥಳಗಳಲ್ಲಿ ನಿಂತಿರುವ ನೀವು ಈಗ ಪಿತಾಮಹ ಭೀಷ್ಮರಿಗೆ ಸಂಪೂರ್ಣ ಬೆಂಬಲವನ್ನು ನೀಡಬೇಕು. ಭಾವಾರ್ಥ ದುರ್ಯೋಧನನು ಭೀಷ್ಮರ ಸಾಮರ್ಥ್ಯವನ್ನು ಪ್ರಶಂಸಿಸಿದನಷ್ಟೆ. ಇದನ್ನು ಕಂಡು ಉಳಿದವರಿಗೆ ದುರ್ಯೋಧನನ ದೃಷ್ಟಿಯಲ್ಲಿ ತಾವು ಭೀಷ್ಮರಷ್ಟು ಮುಖ್ಯರಲ್ಲ ಎನ್ನಿಸಬಹುದು. ಈ ಆಲೋಚನೆ ಬಂದ ಕೂಡಲೆ ದುರ್ಯೋಧನನು ತನ್ನ ಎಂದಿನ ವ್ಯವಹಾರ ಕೌಶಲದ ರೀತಿಯಲ್ಲಿ ಮೇಲಿನ ಮಾತುಗಳನ್ನಾಡಿ ಸನ್ನಿವೇಶವನ್ನು ಸರಿಹೊಂದಿಸಲು ಪ್ರಯತ್ನಿಸಿದ. ಭೀಷ್ಮರು ನಿಸ್ಸಂದೇಹವಾಗಿಯೂ ವೀರ ಶ್ರೇಷ್ಠರಲ್ಲಿ ಶ್ರೇಷ್ಠರು ಎಂದು ಒತ್ತಿ ಹೇಳಿದ. ಆದರೆ ಅವರು ವೃದ್ಧರಾದುದರಿಂದ ಎಲ್ಲ ದಿಕ್ಕುಗಳಿಂದ ಅವರನ್ನು ರಕ್ಷಿಸುವ ಯೋಚನೆಯನ್ನು ಎಲ್ಲರೂ ವಿಶೇಷವಾಗಿ ಮಾಡಬೇಕು. ಭೀಷ್ಮರು ಯುದ್ಧದಲ್ಲಿ ತೊಡಗಬಹುದು. ಅವರು ಸಂಪೂರ್ಣವಾಗಿ ಒಂದೆಡೆ ಮಗ್ನರಾಗಿರುವುದರ ಲಾಭವನ್ನು ಶತ್ರುಗಳು ಪಡೆದುಕೊಳ್ಳಬಹುದು. ಆದುದರಿಂದ, ಇತರ ವೀರರು ತಮ್ಮ ಆಯಕಟ್ಟಿನ ಸ್ಥಾನಗಳಲ್ಲಿ ಉಳಿದು ಶತ್ರುವು ಸೇನಾವ್ಯೂಹವನ್ನು ಚದುರಿಸಲು ಅವಕಾಶ ಕೊಡದಿರುವುದು ಮುಖ್ಯವಾಗಿತ್ತು. ಭೀಷ್ಮರು ಕೌರವರೊಡನೆ ಇದ್ದರೆ ಮಾತ್ರ ಕೌರವರಿಗೆ ವಿಜಯ ಎಂದೇ ಸ್ಪಷ್ಟವಾಗಿ ದುರ್ಯೋಧನನ ಭಾವನೆ. ಭೀಷ್ಮರೂ ದ್ರೋಣರೂ ಯುದ್ಧದಲ್ಲಿ ಸಂಪೂರ್ಣವಾಗಿ ತನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವು ಅವನಿಗಿತ್ತು. ಏಕೆಂದರೆ, ಮಹಾಯೋಧರಿಂದ ತುಂಬಿದ ಆಸ್ಥಾನದಲ್ಲಿ ಬಲಾತ್ಕಾರವಾಗಿ ದ್ರೌಪದಿಯ ವಸ್ತ್ರಾಪಹರಣ ಪ್ರಯತ್ನ ನಡೆದಾಗ, ನಿಸ್ಸಹಾಯಕಳಾದ ಅವಳು ಅವರಿಗೆ ನ್ಯಾಯಕ್ಕಾಗಿ ಮೊರೆ ಇಟ್ಟಳು. ಆದರೆ ಆಗ ಅವರಿಬ್ಬರೂ ಒಂದು ಮಾತನ್ನೂ ಆಡಲಿಲ್ಲ. ಆ ಇಬ್ಬರು ಮಹಾನಾಯಕರಿಗೂ ಪಾಂಡವರ ವಿಷಯದಲ್ಲಿ ಒಂದು ಬಗೆಯ ಪ್ರೀತಿ ಇದ್ದಿತು ಎಂದು ಅವನಿಗೆ ತಿಳಿದಿದ್ದರೂ, ಜೂಜಾಟದ ಸಮಯದಲ್ಲಿ ಅವರು ಆ ಪ್ರೀತಿಯನ್ನು ದೂರವಿಟ್ಟ ಹಾಗೆ ಈಗಲೂ ದೂರವಿಡುತ್ತಾರೆ ಎಂದು ಅವನು ಆಶಿಸಿದ. ಶ್ಲೋಕ – ೧೨ ತಸ್ಯ ಸಞ್ಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ | ಸಿಂಹನಾದಂ ವಿನದ್ಯೋಚ್ಚೈಃ ಶಙ್ಖಂ ದಧ್ಮೌ ಪ್ರತಾಪವಾನ್ ||೧೨|| ತಸ್ಯ-ಅವನ; ಸಞ್ಜನಯನ್‌-ಹೆಚ್ಚಿಸುತ್ತ; ಹರ್ಷಮ್‌-ಹರ್ಷವನ್ನು; ಕುರುವೃದ್ಧಃ-ಕುರುಕುಲದ ವೃದ್ಧರಾದ (ಭೀಷ್ಮರು); ಪಿತಾಮಹಃ-ಅಜ್ಜ; ಸಿಂಹನಾದಮ್‌-ಸಿಂಹನಾದವನ್ನು; ವಿನದ್ಯ-ಮೊಳಗಿಸಿ; ಉಚ್ಚೈಃ-ಎತ್ತರದ ಧ್ವನಿಯಲ್ಲಿ; ಶಙ್ಖಮ್‌-ಶಂಖವನ್ನು; ದಧ್ಮೌ-ಊದಿದರು; ಪ್ರತಾಪವಾನ್‌-ಪ್ರತಾಪವುಳ್ಳ. ಅನುವಾದ ಕುರುಕುಲ ಪಿತಾಮಹರು, ಯೋಧರ ತಾತ ಪ್ರತಾಪಶಾಲಿಗಳಾದ ಭೀಷ್ಮರು ಉಚ್ಚಸ್ವರದಿಂದ ಸಿಂಹ ಗರ್ಜನೆಯಂತೆ ಶಂಖವನ್ನು ಊದಿದರು. ಇದರಿಂದ ದುರ್ಯೋಧನನಿಗೆ ಹರ್ಷವಾಯಿತು. ಭಾವಾರ್ಥ ಕುರುಕುಲ ಪಿತಾಮಹರು ತಮ್ಮ ಮೊಮ್ಮಗ ದುರ್ಯೋಧನನ ಹೃದಯದ ಆಂತರ್ಯವನ್ನು ಅರಿತರು. ಅವರಿಗೆ ಅವನಲ್ಲಿದ್ದ ಸ್ವಾಭಾವಿಕ ಕರುಣೆಯಿಂದ ಸಿಂಹಸದೃಶರಾದ ಅವರು ತಮ್ಮ ಘನತೆಗೆ ತಕ್ಕಂತೆ ಗಟ್ಟಿಯಾಗಿ ಶಂಖನಾದವನ್ನು ಮಾಡಿ ದುರ್ಯೋಧನನಿಗೆ ಹರ್ಷವನ್ನುಂಟುಮಾಡಲು ಯತ್ನಿಸಿದರು. ಅವರ ಶಂಖನಾದ ಸಾಂಕೇತಿಕವಾಗಿತ್ತು. ಪರಮ ಪ್ರಭು ಶ್ರೀಕೃಷ್ಣನು ಎದುರು ಪಕ್ಷದಲ್ಲಿ ಇರುವುದರಿಂದ ದುರ್ಯೋಧನನಿಗೆ ಜಯದ ಸಾಧ್ಯತೆಯೇ ಇಲ್ಲ ಎನ್ನುವುದನ್ನು ಅದು ಪರೋಕ್ಷವಾಗಿ ಸೂಚಿಸಿತು. ಆದರೂ ಯುದ್ಧವನ್ನು ನಿರ್ವಹಿಸುವುದು ಅವರ ಕರ್ತವ್ಯವಾಗಿತ್ತು. ಈ ಕರ್ತವ್ಯ ನಿರ್ವಹಣೆಯಲ್ಲಿ ಅವರು ಯಾವ ನೋವನ್ನೂ ಸ್ವಲ್ಪವೂ ಲೆಕ್ಕಿಸುವವರಾಗಿರಲಿಲ್ಲ. ಶ್ಲೋಕ – ೧೩ ತತಃ ಶಙ್ಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ | ಸಹಸೈವಾಭ್ಯಹನ್ಯನ್ತ ಸ ಶಬ್ದಸ್ತುಮುಲೋಭವತ್ ||೧೩|| ತತಃ-ಅನಂತರ; ಶಙ್ಖಾಃ-ಶಂಖಗಳು; ಚ-ಕೂಡ; ಭೇರ್ಯಃ-ಭೇರಿಗಳು; ಚ-ಮತ್ತು; ಪಣವ ಆನಕ-ಮದ್ದಳೆ, ನಗಾರಿಗಳು; ಗೋಮುಖಾಃ-ಕಹಳೆಗಳು; ಸಹಸಾ-ಒಮ್ಮಿಂದೊಮ್ಮೆಗೇ; ಏವ-ನಿಶ್ಚಿತವಾಗಿ; ಅಭ್ಯಹನ್ಯನ್ತಧ-ಒಟ್ಟೊಟ್ಟಿಗೆ ಧ್ವನಿಮಾಡಿದವು; ಸಃ-ಆ; ಶಬ್ದಃ-ಸಮೂಹ ಶಬ್ದವು; ತುಮುಲಃ-ತುಂಬ ಜೋರಾಗಿ; ಅಭವತ್‌-ಉಂಟಾಯಿತು. ಅನುವಾದ ಅನಂತರ ಶಂಖಗಳೂ ಭೇರಿಗಳೂ ಕಹಳೆ, ತುತ್ತೂರಿ, ಕೊಂಬುಗಳು ಮೊದಲಾದ ವಾದ್ಯಗಳೂ ಇದ್ದಕ್ಕಿದ್ದಂತೆ ಒಟ್ಟಿಗೆ ಮೊಳಗಿದವು. ಆ ಶಬ್ದವು ಭೀಷಣವಾಗಿತ್ತು. ಶ್ಲೋಕ – ೧೪ ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯನ್ದನೇ ಸ್ಥಿತೌ | ಮಾಧವಃ ಪಾಣ್ಡವಶ್ಚೈವ ದಿವ್ಯೌ ಶಙೌ್ಖ ಪ್ರದಧ್ಮತುಃ ||೧೪|| ತತಃ-ಅನಂತರ; ಶ್ವೇತೈಃ-ಬಿಳಿಯಬಣ್ಣದ; ಹಯೈಃ-ಕುದುರೆಗಳು; ಯುಕ್ತೇ-ಹೂಡಲಾದ, ಮಹತಿ-ದೊಡ್ಡದಾದ; ಸ್ಯನ್ದನೇ-ರಥದಲ್ಲಿ; ಸ್ಥಿತೌ-ಕುಳಿತಿದ್ದ; ಮಾಧವಃ-ಕೃಷ್ಣನು (ಲಕ್ಷ್ಮೀರಮಣನು); ಪಾಣ್ಡವಃ-ಅರ್ಜುನನು (ಪಾಂಡುಪುತ್ರನು); ಚ-ಕೂಡ; ಏವ-ಖಂಡಿತವಾಗಿಯೂ; ದಿವ್ಯೌ-ದಿವ್ಯವಾದ; ಶಂಖೌ-ಶಂಖಗಳನ್ನು; ಪ್ರದಧ್ಮತುಃ-ಊದಿದರು. ಅನುವಾದ ಎದುರು ಪಕ್ಷದಲ್ಲಿ, ಬಿಳಿಯ ಕುದುರೆಗಳನ್ನು ಕಟ್ಟಿದ, ಮಹಾರಥದಲ್ಲಿ ಉಪಸ್ಥಿತರಾಗಿದ್ದ ಶ್ರೀಕೃಷ್ಣನೂ ಅರ್ಜುನನೂ ತಮ್ಮ ಅಲೌಕಿಕವಾದ ಶಂಖಗಳನ್ನು ಊದಿದರು. ಭಾವಾರ್ಥ ಭೀಷ್ಮರು ಊದಿದ ಶಂಖವನ್ನು ಅಲೌಕಿಕ ಎಂದು ವರ್ಣಿಸಿಲ್ಲ. ಕೃಷ್ಣಾರ್ಜುನರ ಶಂಖಗಳನ್ನು ಮಾತ್ರ ಅಲೌಕಿಕ ಎಂದು ವರ್ಣಿಸಿದೆ. ಅಲೌಕಿಕ ಶಂಖಗಳ ನಾದವು ಎದುರು ಪಕ್ಷಕ್ಕೆ ಜಯದ ಸಂಭವವೇ ಇಲ್ಲ ಎಂಬುದನ್ನು ಸೂಚಿಸಿತು. ಏಕೆಂದರೆ ಕೃಷ್ಣನು ಪಾಂಡವರ ಪಕ್ಷದಲ್ಲಿದ್ದ. ಜಯಸ್ತು ಪಾಂಡುಪುತ್ರಾಣಾಮ್ ಯೇಷಾಂ ಪಕ್ಷೇ ಜನಾರ್ದನಃ ಜಯವು ಯಾವಾಗಲೂ ಲಭಿಸುವುದು ಪಾಂಡವರಂತಹವರಿಗೇ. ಏಕೆಂದರೆ ಭಗವಾನ್ ಕೃಷ್ಣನು ಅವರ ಜೊತೆಗಿದ್ದಾನೆ. ಭಗವಾನ್ ಕೃಷ್ಣನು ಯಾವಾಗ, ಎಲ್ಲಿ ಇದ್ದರೆ ಆಗ, ಅಲ್ಲಿ ಭಾಗ್ಯಶ್ರೀ ಇರುತ್ತಾಳೆ. ಏಕೆಂದರೆ ಭಾಗ್ಯಶ್ರೀ ತನ್ನ ಪತಿಯನ್ನು ಬಿಟ್ಟು ಒಬ್ಬಳೇ ಎಂದೂ ಇರುವುದಿಲ್ಲ. ವಿಷ್ಣು, ಅಥವಾ ಶ್ರೀಕೃಷ್ಣನ ಶಂಖದ ಅಲೌಕಿಕ ನಾದವು ಸೂಚಿಸುವಂತೆ ವಿಜಯವೂ ಭಾಗ್ಯವೂ ಅರ್ಜುನನಿಗಾಗಿ ಕಾಯುತ್ತಿದ್ದವು. ಇಷ್ಟೇ ಅಲ್ಲದೆ, ಈ ಮಿತ್ರರಿಬ್ಬರೂ ಕುಳಿತಿದ್ದ ರಥವನ್ನು ಅಗ್ನಿಯು ಅರ್ಜುನನಿಗೆ ಉಡುಗೊರೆಯಾಗಿ ಕೊಟ್ಟಿದ್ದ. ತ್ರಿಲೋಕಗಳಲ್ಲಿ ಎಲ್ಲಿಯೇ ಯಾವ ದಿಕ್ಕಿನಲ್ಲೇ ಆದರೂ ಈ ರಥವು ವಿಜಯಿಯಾಗುವುದೆಂಬುದನ್ನು ಇದು ಸೂಚಿಸುತ್ತಿತ್ತು. ಶ್ಲೋಕ – ೧೫ ಪಾಞ್ಚಜನ್ಯಂ ಹೃಷೀಕೇಶೋ ದೇವದತ್ತಂ ಧನಞ್ಜಯಃ | ಪೌಣ್ಡ್ರಂ ದಧ್ಮೌ ಮಹಾಶಙ್ಖಂ ಭೀಮಕರ್ಮಾ ವೃಕೋದರಃ ||೧೫|| ಪಾಞ್ಚಜನ್ಯಮ್‌-ಪಾಂಚಜನ್ಯ ಎಂಬ ಶಂಖವನ್ನು; ಹೃಷೀಕ ಈಶಃ-ಹೃಷೀಕೇಶನು (ಭಕ್ತರ ಇಂದ್ರಿಯ ನಿಯಂತ್ರಕನಾದ ಕೃಷ್ಣನು); ದೇವದತ್ತಮ್‌-ದೇವದತ್ತವೆಂಬ ಶಂಖವನ್ನು; ಧನಞ್ಜಯಃ-ಧನಂಜಯನು (ಸಂಪತ್ತನ್ನು ಗೆಲ್ಲುವ ಅರ್ಜುನನು); ಪೌಣ್ಡ್ರಮ್‌-ಪೌಂಡ್ರ ಎಂಬ ಶಂಖ; ದಧ್ಮೌ-ಊದಿದನು; ಮಹಾಶಙ್ಖಮ್‌-ಭಯಂಕರವಾದ ಶಂಖವನ್ನು; ಭೀಮ ಕರ್ಮಾ-ಕಷ್ಟಸಾಧ್ಯವಾದ ಕೆಲಸಗಳನ್ನೆಸಗುವ; ವೃಕ ಉದ‌ರಃ-ತಿನ್ನುವುದರಲ್ಲಿ ಅಪಾರ ಆಸಕ್ತ (ಭೀಮನು); ಅನುವಾದ ಹೃಷೀಕೇಶನು ತನ್ನ ಪಾಂಚಜನ್ಯವೆನ್ನುವ ಶಂಖವನ್ನೂ, ಅರ್ಜುನನು ದೇವದತ್ತವನ್ನೂ, ವೃಕೋದರನೂ ಮತ್ತು ಅದ್ಭುತ ಸಾಹಸಗಳನ್ನು ಮಾಡಬಲ್ಲವನೂ ಆದ ಭೀಮನು ಪೌಂಡ್ರವೆನ್ನುವ ಮಹಾಶಂಖವನ್ನೂ ಊದಿದರು. ಭಾವಾರ್ಥ ಈ ಶ್ಲೋಕದಲ್ಲಿ ಕೃಷ್ಣನನ್ನು ಹೃಷೀಕೇಶ ಎಂದು ಕರೆದಿದೆ. ಏಕೆಂದರೆ ಅವನು ಎಲ್ಲ ಇಂದ್ರಿಯಗಳ ಒಡೆಯ. ಜೀವಿಗಳೆಲ್ಲ ಅವನ ಅವಿಭಾಜ್ಯ ಅಂಶಗಳು. ಆದ್ದರಿಂದ ಜೀವಿಗಳ ಇಂದ್ರಿಯಗಳು ಕೂಡ ಅವನ ಇಂದ್ರಿಯಗಳ ಅವಿಭಾಜ್ಯ ಅಂಗ. ನಿರಾಕಾರವಾದಿಗಳು ಜೀವಿಗಳಿಗೆ ಇಂದ್ರಿಯಗಳಿವೆ ಎನ್ನುವುದಕ್ಕೆ ವಿವರಣೆ ಕೊಡಲಾರರು. ಆದುದರಿಂದ ಅವರು ಎಲ್ಲ ಜೀವಿಗಳನ್ನೂ ಇಂದ್ರಿಯರಹಿತರು ಅಥವಾ ನಿರಾಕಾರ ಎಂದು ವರ್ಣಿಸಲು ಕಾತರರಾಗಿರುತ್ತಾರೆ. ಎಲ್ಲ ಜೀವಿಗಳ ಹೃದಯಗಳಲ್ಲಿ ನೆಲೆಸಿರುವ ಭಗವಂತನು ಅವರ ಇಂದ್ರಿಯಗಳನ್ನು ನಿರ್ದೇಶಿಸುತ್ತಾನೆ. ಆದರೆ ಆಯಾ ಜೀವಿಯು ಶರಣಾಗತನಾಗಿರುವ ರೀತಿಯಲ್ಲಿ ನಿರ್ದೇಶಿಸುತ್ತಾನೆ, ಮತ್ತು ಶುದ್ಧ ಭಕ್ತನ ವಿಷಯದಲ್ಲಿ ಇಂದ್ರಿಯಗಳನ್ನು ನೇರವಾಗಿ ನಿಯಂತ್ರಿಸುತ್ತಾನೆ. ಇಲ್ಲಿ ಕುರುಕ್ಷೇತ್ರದ ರಣಭೂಮಿಯಲ್ಲಿ ಭಗವಂತನು ನೇರವಾಗಿ ಅರ್ಜುನನ ಅಲೌಕಿಕ ಇಂದ್ರಿಯಗಳನ್ನು ನಿಯಂತ್ರಿಸುತ್ತಾನೆ. ಇದರಿಂದಲೇ ಅವನಿಗೆ ಹೃಷೀಕೇಶ ಎನ್ನುವ ನಿರ್ದಿಷ್ಟ ನಾಮ. ಭಗವಂತನಿಗೆ ಅವನ ಬೇರೆ ಬೇರೆ ಕಾರ್ಯಗಳಿಗೆ ಅನುಗುಣವಾಗಿ ಬೇರೆಬೇರೆ ಹೆಸರುಗಳು ಇವೆ. ಉದಾಹರಣೆಗೆ, ಅವನು ಮಧು ಎಂಬ ರಾಕ್ಷಸನನ್ನು ಕೊಂದ. ಆದುದರಿಂದ ಆತನ ಹೆಸರು ಮಧುಸೂದನ. ಅವನು ಗೋವುಗಳಿಗೂ, ಇಂದ್ರಿಯಗಳಿಗೂ ಸಂತೋಷವನ್ನು ಉಂಟುಮಾಡುತ್ತಾನೆ. ಆದುದರಿಂದ ಗೋವಿಂದ. ವಸುದೇವನ ಮಗನಾಗಿ ಅವತರಿಸಿದ್ದರಿಂದ ವಾಸುದೇವ. ದೇವಕಿಯನ್ನು ತಾಯಿಯಾಗಿ ಸ್ವೀಕರಿಸಿದ. ಆದುದರಿಂದ ದೇವಕಿನಂದನ. ತನ್ನ ಬಾಲಲೀಲೆಗಳನ್ನು ವೃಂದಾವನದಲ್ಲಿ ಯಶೋದೆಗೆ ಅನುಗ್ರಹಿಸಿದ ಕಾರಣ ಯಶೋದಾನಂದನ. ತನ್ನ ಗೆಳೆಯ ಅರ್ಜುನನ ಸಾರಥಿಯಾದನೆಂದು ಪಾರ್ಥಸಾರಥಿ. ಕುರುಕ್ಷೇತ್ರದ ರಣರಂಗದಲ್ಲಿ ಅರ್ಜುನನಿಗೆ ಮಾರ್ಗದರ್ಶನ ಮಾಡಿದುದರಿಂದ ಹೃಷೀಕೇಶ. ಈ ಶ್ಲೋಕದಲ್ಲಿ ಅರ್ಜುನನನ್ನು ಧನಂಜಯ ಎಂದು ಕರೆಯಲಾಗಿದೆ. ಏಕೆಂದರೆ ಅವನ ಅಣ್ಣನು ಕೈಗೊಂಡ ಹಲವು ಯಾಗಗಳಿಗೆ ಧನವು ಅಗತ್ಯವಾದಾಗ ಅದನ್ನು ಪಡೆಯಲು ಅವನು ನೆರವಾದ. ಭೀಮನಿಗೆ ವೃಕೋದರನೆಂದು ಹೆಸರು. ಏಕೆಂದರೆ ರಾಕ್ಷಸ ಹಿಡಿಂಬನನ್ನು ಕೊಲ್ಲುವಂತಹ ಅಸಾಧಾರಣ ಸಾಹಸಗಳನ್ನು ಮಾಡಿದಂತೆಯೇ ಅವನು ಆಹಾರವನ್ನು ತಿನ್ನುತ್ತಿದ್ದ. ಭಗವಂತನಿಂದ ಪ್ರಾರಂಭಿಸಿ ಪಾಂಡವ ಸೈನ್ಯದ ನಾಯಕರು ಊದಿದ ಶಂಖಗಳ ನಾದವು ಯೋಧರಿಗೆ ಹುರುಪನ್ನುಂಟುಮಾಡಿತು. ಅವರ ಎದುರು ಪಕ್ಷದಲ್ಲಿ ಇಂತಹ ಪುಣ್ಯವಿರಲಿಲ್ಲ. ಪರಮ ನಿಯಾಮಕನಾದ ಶ್ರೀಕೃಷ್ಣನೂ ಅಲ್ಲಿರಲಿಲ್ಲ, ಭಾಗ್ಯಲಕ್ಷ್ಮಿಯೂ ಇರಲಿಲ್ಲ. ಆದುದರಿಂದ ಅವರ ಸೋಲು ಆಗಲೇ ನಿಶ್ಚಯವಾಗಿಹೋಗಿತ್ತು. ಶಂಖಗಳ ನಾದವು ಘೋಷಿಸಿದ್ದು ಈ ಸಂದೇಶವನ್ನೇ. ಶ್ಲೋಕಗಳು  ೧೬-೧೮             ಅನನ್ತವಿಜಯಂ ರಾಜಾ ಕುನ್ತೀಪುತ್ರೋ ಯುಧಿಷ್ಠಿರಃ |             ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ ||೧೬||             ಕಾಶ್ಯಶ್ಚ ಪರಮೇಷ್ವಾಸಃ ಶಿಖಣ್ಡೀಚ ಮಹಾರಥಃ |             ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ ||೧೭||             ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ |             ಸೌಭದ್ರಶ್ಚ ಮಹಾಬಾಹುಃ ಶಙ್ಖಾನ್ ದಧ್ಮುಃ ಪೃಥಕ್ ಪೃಥಕ್ ||೧೮|| ಅನನ್ತ ವಿಜಯಮ್‌-ಅನಂತವಿಜಯವೆಂಬ ಶಂಖವನ್ನು; ರಾಜಾ-ರಾಜನಾದ; ಕುನ್ತೀಪುತ್ರಃ-ಕುಂತಿಯ ಮಗನಾದ; ಯುಧಿಷ್ಠಿರಃ-ಯುಧಿಷ್ಠಿರನೂ; ನಕುಲಃ-ನಕುಲನು; ಸಹದೇವಃ-ಸಹದೇವನು; ಚ-ಮತ್ತು; ಸುಘೋಷ ಮಣಿಪುಷ್ಪಕೌ-ಸುಘೋಷ ಮತ್ತು ಮಣಿಪುಷ್ಪಕಗಳೆಂಬ ಶಂಖಗಳನ್ನು; ಕಾಶ್ಯಃ-ಕಾಶಿಯ (ವಾರಾಣಸೀ) ರಾಜನು; ಚ-ಮತ್ತು; ಪರಮ ಇಷು ಆಸಃ-ಮಹಾಬಿಲ್ಗಾರನಾದ; ಶಿಖಣ್ಡೀ-ಶಿಖಂಡಿಯು; ಚ-ಕೂಡ; ಮಹಾರಥಃ-ಸಹಸ್ರಾರು ಸೈನಿಕರ ವಿರುದ್ಧ ಏಕಾಂಗಿಯಾಗಿ ಹೋರಾಡಬಲ್ಲ; ಧೃಷ್ಟದ್ಯುಮ್ನಃ-ಧೃಷ್ಟದ್ಯುಮ್ನನು (ರಾಜಾ ದ್ರುಪದನ ಮಗ); ವಿರಾಟಃ-ವಿರಾಟನು (ಪಾಂಡವರಿಗೆ ಅಜ್ಞಾತವಾಸದಲ್ಲಿದ್ದಾಗ ಆಶ್ರಯವಿತ್ತವನು); ಚ-ಸಹಾ; ಸಾತ್ಯಕಿಃ-ಸಾತ್ಯಕಿಯು (ಕೃಷ್ಣನ ಸಾರಥಿಯಾದ ಯುಯುಧಾನನು); ಚ-ಮತ್ತು; ಅಪರಾಜಿತಃ-ಎಂದೂ ಸೋಲದ; ದ್ರುಪದಃ-ಪಾಂಚಾಲರಾಜನಾದ ದ್ರುಪದನು; ದ್ರೌಪದೇಯಾಃ-ದ್ರೌಪದಿಯ ಪುತ್ರರು; ಚ-ಕೂಡ; ಸರ್ವಶಃ-ಎಲ್ಲರೂ; ಪೃಥಿವೀ ಪತೇ-ರಾಜನೇ; ಸೌಭದ್ರಃ-ಸುಭದ್ರೆಯ ಮಗನಾದ ಅಭಿಮನ್ಯುವು; ಚ-ಕೂಡ; ಮಹಾಬಾಹುಃ-ಮಹಾಬಲಶಾಲಿಯಾದ; ಶಙ್ಖಾನ್‌-ಶಂಖಗಳನ್ನು; ದಧ್ಮುಃ-ಊದಿದರು; ಪೃಥಕ್ ಪೃಥಕ್‌-ಬೇರೆಬೇರೆಯಾಗಿ. ಅನುವಾದ ಕುಂತೀಪುತ್ರನಾದ ಯುಧಿಷ್ಠಿರನು ಅನಂತವಿಜಯವೆಂಬ ತನ್ನ ಶಂಖವನ್ನು ಊದಿದನು. ನಕುಲ ಸಹದೇವರು ಸುಘೋಷ ಮತ್ತು ಮಣಿಪುಷ್ಪಕ ಶಂಖಗಳನ್ನು ಊದಿದರು. ಅರಸನೇ, ಮಹಾಧನುರ್ಧಾರಿಯಾದ ಕಾಶೀರಾಜ, ಮಹಾರಥನಾದ ಶಿಖಂಡಿ, ಧೃಷ್ಟದ್ಯುಮ್ನ, ವಿರಾಟ, ಅಜೇಯನಾದ ಸಾತ್ಯಕಿ, ದ್ರುಪದ, ದ್ರೌಪದಿಯ ಮಕ್ಕಳು, ಮಹಾಬಾಹುವೂ ಸುಭದ್ರೆಯ ಮಗನೂ ಆದ ಅಭಿಮನ್ಯು ಎಲ್ಲರೂ ತಮ್ಮ ತಮ್ಮ ಶಂಖಗಳನ್ನು ಊದಿದರು. ಭಾವಾರ್ಥ ಅರಸ ಧೃತರಾಷ್ಟ್ರನು ಪಾಂಡುಪುತ್ರರಿಗೆ ಮೋಸಮಾಡಿ ತನ್ನ ಮಕ್ಕಳನ್ನೇ ಸಿಂಹಾಸನದ ಮೇಲೆ ಕೂಡಿಸಲು ಕೈಗೊಂಡ ಅವಿವೇಕದ ನೀತಿಯು ಮೆಚ್ಚುವಂತಹುದಲ್ಲ ಎಂದು ಸಂಜಯನು ಜಾಣ್ಮೆಯಿಂದ ಅವನಿಗೆ ತಿಳಿಸಿದ. ಆ ಮಹಾಸಮರದಲ್ಲಿ ಇಡೀ ಕುರುಕುಲ ನಿರ್ನಾಮವಾಗುತ್ತದೆ ಎಂದು ಆಗಲೇ ಸ್ಪಷ್ಟವಾದ ಸೂಚನೆಗಳಿದ್ದವು. ಪಿತಾಮಹ ಭೀಷ್ಮನಿಂದ ಪ್ರಾರಂಭಿಸಿ ಅಭಿಮನ್ಯು ಮತ್ತಿತರ ಮೊಮ್ಮಕ್ಕಳವರೆಗೆ ಎಲ್ಲರೂ ಮತ್ತು ಜಗತ್ತಿನ ಅನೇಕ ರಾಜ್ಯಗಳ ದೊರೆಗಳೂ ಅಲ್ಲಿದ್ದರು. ಎಲ್ಲರ ಸಾವು ಖಚಿತವಾಗಿತ್ತು. ಈ ಭೀಕರ ವಿಪತ್ತಿಗೆ ರಾಜ ಧೃತರಾಷ್ಟ್ರನೇ ಕಾರಣ. ಏಕೆಂದರೆ ಅವನು ತನ್ನ ಮಕ್ಕಳು ಅನುಸರಿಸಿದ ನೀತಿಗೆ ಬೆಂಬಲ ನೀಡಿದ. ಶ್ಲೋಕ – ೧೯ ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ | ನಭಶ್ಚ ಪೃಥಿವೀಂ ಚೈವ ತುಮುಲೋಽಭ್ಯನುನಾದಯನ್ ||೧೯|| ಸ-ಆ; ಘೋಷಃ-ಕಂಪನ; ಧಾರ್ತರಾಷ್ಟ್ರಾಣಾಮ್‌-ಧೃತರಾಷ್ಟ್ರನ ಪುತ್ರರ; ಹೃದಯಾನಿ-ಹೃದಯಗಳು; ವ್ಯದಾರಯತ್‌-ಭೇದಿಸಿತು; ನಭಃ-ಆಕಾಶವನ್ನು; ಚ-ಕೂಡ; ಪೃಥಿವೀಮ್‌-ಭೂಮಿಯ ಮೇಲ್ಭಾಗವನ್ನು; ಚ-ಸಹಾ; ಏವ-ಖಂಡಿತವಾಗಿಯೂ; ತುಮುಲಃ-ಕೋಲಾಹಲವು; ಅಭ್ಯನುನಾದಯನ್‌-ಮೊಳಗಿಸುತ್ತ. ಅನುವಾದ ಈ ಶಂಖಗಳ ನಾದದಿಂದ ತುಮುಲ ಉಂಟಾಯಿತು. ಭೂಮಿ ಮತ್ತು ಆಕಾಶಗಳಲ್ಲಿ ಪ್ರತಿಧ್ವನಿಯನ್ನು ಮಾಡುತ್ತ ಅದು ಕೌರವರ ಹೃದಯಗಳನ್ನು ಚೂರುಚೂರು ಮಾಡಿತು. ಭಾವಾರ್ಥ ದುರ್ಯೋಧನನ ಪಕ್ಷದಲ್ಲಿದ್ದ ಭೀಷ್ಮರೂ ಮತ್ತಿತರರೂ ತಮ್ಮ ಶಂಖಗಳನ್ನು ಊದಿದಾಗ ಪಾಂಡವರ ಹೃದಯಗಳು ಬಿರಿಯಲಿಲ್ಲ. ಅಂತಹ ಘಟನೆಗಳನ್ನು ಇಲ್ಲಿ ಪ್ರಸ್ತಾವಿಸಿಲ್ಲ. ಆದರೆ ಇಲ್ಲಿ ಪಾಂಡವ ಪಕ್ಷದವರ ಸದ್ದುಗಳ ಪ್ರತಿಧ್ವನಿಯಿಂದ ಧೃತರಾಷ್ಟ್ರನ ಮಕ್ಕಳ ಹೃದಯಗಳು ನುಚ್ಚುನೂರಾದವು ಎಂದು ಹೇಳಿದೆ. ಇದಕ್ಕೆ ಕಾರಣ ಪಾಂಡವರು ಮತ್ತು ಕೃಷ್ಣನಲ್ಲಿ ಅವರಿಗಿದ್ದ ವಿಶ್ವಾಸ. ದೇವಾಧಿದೇವನಲ್ಲಿ ಆಶ್ರಯ ಪಡೆದವನು ಅತ್ಯಂತ ಘೋರ ಅನಾಹುತದ ನಡುವೆಯೂ ಹೆದರುವ ಅಗತ್ಯವೇ ಇಲ್ಲ. ಶ್ಲೋಕ – ೨೦             ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ |             ಪ್ರವೃತ್ತೇ ಶಸ್ತ್ರಸಮ್ಪಾತೇ ಧನುರುದ್ಯಮ್ಯ ಪಾಣ್ಡವಃ |             ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ ||೨೦|| ಅಥ-ಆಮೇಲೆ; ವ್ಯವಸ್ಥಿತಾನ್‌-ವ್ಯವಸ್ಥಿತವಾಗಿದ್ದ; ದೃಷ್ಟ್ವಾ-ನೋಡಿ; ಧಾರ್ತರಾಷ್ಟ್ರಾನ್-ಧೃತರಾಷ್ಟ್ರನ ಪುತ್ರರನ್ನು; ಕಪಿಧ್ವಜಃ-ಹನುಮಂತನ ಚಿಹ್ನೆಯ ಧ್ವಜವುಳ್ಳ; ಪ್ರವೃತ್ತೇ-ತೊಡಗುತ್ತಿರುವಾಗ; ಶಸ್ತ್ರಸಮ್ಪಾತೇ-ಬಾಣಗಳನ್ನು ಬಿಡಲು; ಧನುಃ-ಬಿಲ್ಲನ್ನು; ಉದ್ಯಮ್ಯ-ತೆಗೆದುಕೊಂಡು; ಪಾಣ್ಡವಃ-ಪಾಂಡುಪುತ್ರನು (ಅರ್ಜುನನು); ಹೃಷೀಕೇಶಮ್‌-ಶ್ರೀಕೃಷ್ಣನನ್ನು; ತದಾ-ಆಗ; ವಾಕ್ಯಮ್‌-ಮಾತುಗಳನ್ನು; ಇದಮ್‌-ಈ; ಆಹ-ಹೇಳಿದನು; ಮಹೀಪತೇ-ರಾಜನೇ. ಅನುವಾದ ಆಗ ಪಾಂಡುಪುತ್ರನಾದ ಅರ್ಜುನನು ಹನುಮಂತನ ಗುರುತಿರುವ ಧ್ವಜದ ರಥದಲ್ಲಿ ಆಸೀನನಾಗಿದ್ದು ತನ್ನ ಧನುಸ್ಸನ್ನು ಎತ್ತಿಕೊಂಡು ಬಾಣಗಳನ್ನು ಎಸೆಯಲು ಸಿದ್ಧನಾದನು. ಓ ರಾಜನೇ ಯುದ್ಧಸನ್ನದ್ಧರಾದ ಧೃತರಾಷ್ಟ್ರನ ಪುತ್ರನ ಕಡೆ ನೋಡಿ ಅರ್ಜುನನು ಶ್ರೀ ಕೃಷ್ಣನಿಗೆ ಈ ಮಾತನ್ನು ಹೇಳಿದನು. ಭಾವಾರ್ಥ ಯುದ್ಧವು ಇನ್ನೇನು ಪ್ರಾರಂಭವಾಗುವುದರಲ್ಲಿತ್ತು. ರಣಭೂಮಿಯಲ್ಲಿ ಶ್ರೀಕೃಷ್ಣನ ನೇರ ಉಪದೇಶಗಳನ್ನು ಅನುಸರಿಸಿದ ಪಾಂಡವರು ಅನಿರೀಕ್ಷಿತ ರೀತಿಯಲ್ಲಿ ತಮ್ಮ ಸೈನ್ಯದ ವ್ಯೂಹವನ್ನು ರಚಿಸಿದ್ದರಿಂದ ಕೌರವರು ಬಹುಮಟ್ಟಿಗೆ ಉತ್ಸಾಹವನ್ನು ಕಳೆದುಕೊಂಡರು. ಇದು ಮುಂಚೆ ಬಂದ ಮಾತುಗಳಿಂದ ತಿಳಿಯುವಂತಿದೆ. ಅರ್ಜುನನ ಧ್ವಜದಲ್ಲಿದ್ದ ಹನುಮಂತನ ಸಂಕೇತವು ವಿಜಯದ ಮತ್ತೊಂದು ಸೂಚನೆಯಾಗಿತ್ತು. ಏಕೆಂದರೆ ರಾಮರಾವಣರ ಯುದ್ಧದಲ್ಲಿ ಹನುಮಂತನು ರಾಮನ ಪಕ್ಷವನ್ನು ವಹಿಸಿದ್ದ. ಶ್ರೀರಾಮನು ವಿಜಯಿಯಾದನು. ಈಗ ಅರ್ಜುನನಿಗೆ ನೆರವಾಗಲು ರಾಮ, ಹನುಮಂತ ಇಬ್ಬರೂ ಆತನ ರಥದಲ್ಲಿದ್ದರು. ಶ್ರೀಕೃಷ್ಣನೇ ಶ್ರೀರಾಮ. ಶ್ರೀರಾಮನು ಎಲ್ಲಿದ್ದರೆ ಅಲ್ಲಿ ಅವನ ನಿರಂತರ ಸೇವಕ ಹನುಮಂತನೂ, ಆತನ ನಿರಂತರ ಧರ್ಮಪತ್ನಿ, ಭಾಗ್ಯಲಕ್ಷ್ಮಿಯಾದ ಸೀತೆಯೂ ಇರುತ್ತಾರೆ. ಆದುದರಿಂದ ಅರ್ಜುನನಿಗೆ ಶತ್ರುಭಯಕ್ಕೆ ಕಾರಣವೇ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಂದ್ರಿಯಗಳ ಸ್ವಾಮಿಯಾದ ಶ್ರೀಕೃಷ್ಣನೇ ಸ್ವತಃ ಅಲ್ಲಿದ್ದು ಅವನಿಗೆ ನಿರ್ದೇಶಿಸುತ್ತಿದ್ದ. ಹೀಗೆ ಅರ್ಜುನನಿಗೆ ಯುದ್ಧ ನಿರ್ವಹಣೆಯಲ್ಲಿ ಎಲ್ಲ ಸನ್ಮಾರ್ಗದರ್ಶನವೂ ಲಭ್ಯವಾಗಿತ್ತು. ಭಗವಂತ ತನ್ನ ಶಾಶ್ವತ ಭಕ್ತನಿಗಾಗಿ ರೂಪಿಸಿದ್ದ ಇಂತಹ ಶುಭ ಸನ್ನಿವೇಶಗಳಲ್ಲಿ ನಿಶ್ಚಯವಾದ ವಿಜಯದ ಸೂಚನೆಗಳಿದ್ದವು. ಶ್ಲೋಕ  ೨೧-೨೨ ಅರ್ಜುನ ಉವಾಚ ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಽಚ್ಯುತ | ಯಾವದೇತಾನ್ನಿರೀಕ್ಷೇಽಹಂ ಯೋದ್ಧುಕಾಮಾನವಸ್ಥಿತಾನ್ ||೨೧|| ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ||೨೨|| ಅರ್ಜುನಃ ಉವಾಚ-ಅರ್ಜುನನು ಹೇಳಿದನು; ಸೇನಯೋಃ-ಸೈನ್ಯಗಳ; ಉಭಯೋಃ-ಎರಡರ; ಮಧ್ಯೇ-ನಡುವಿನಲ್ಲಿ; ರಥಮ್‌-ರಥವನ್ನು; ಸ್ಥಾಪಯ-ದಯವಿಟ್ಟು ನಿಲ್ಲಿಸು; ಮೇ-ನನ್ನ; ಅಚ್ಯುತ-ಚ್ಯುತಿರಹಿತನೇ; ಯಾವತ್‌-ಎಲ್ಲಿಯವರೆಗೆ; ಏತಾನ್‌-ಈ ಎಲ್ಲ; ನಿರೀಕ್ಷೇ-ನೋಡಬಹುದು; ಅಹಮ್‌-ನಾನು; ಯೋದ್ಧುಕಾಮಾನ್‌-ಯುದ್ಧಮಾಡಲು ಅಪೇಕ್ಷಿಸುವವರನ್ನು; ಅವಸ್ಥಿತಾನ್‌-ಯುದ್ಧಭೂಮಿಯಲ್ಲಿ ವ್ಯೂಹಗೊಂಡ; ಕೈಃ-ಯಾರೊಂದಿಗೆ; ಮಯಾ-ನನ್ನಿಂದ; ಸಹ-ಜೊತೆ; ಯೋದ್ಧವ್ಯಮ್‌-ಯುದ್ಧಮಾಡಬೇಕು; ಅಸ್ಮಿನ್‌-ಇದರಲ್ಲಿ; ರಣ-ಕದನದ; ಸಮುದ್ಯಮೇ-ಪ್ರಯತ್ನದಲ್ಲಿ. ಅನುವಾದ ಅರ್ಜುನ ಹೇಳಿದ – ಹೇ ಅಚ್ಯುತ, ಯುದ್ಧ ಮಾಡಲು ಸನ್ನದ್ಧರಾಗಿರುವ ಇವರನ್ನು ಮತ್ತು ಈ ಘೋರ ಶಸ್ತ್ರಸ್ಪರ್ಧೆಯಲ್ಲಿ ನಾನು ಯಾರೊಡನೆ ಹೋರಾಡಬೇಕೋ ಅವರನ್ನು ನೋಡಲು ಸಾಧ್ಯವಾಗುವಂತೆ ಈ ಎರಡು ಸೈನ್ಯಗಳ ಮಧ್ಯೆ ನನ್ನ ರಥವನ್ನು ನಿಲ್ಲಿಸು. ಭಾವಾರ್ಥ ಶ್ರೀಕೃಷ್ಣನು ದೇವೋತ್ತಮ ಪರಮ ಪುರುಷನೇ ಆದರೂ ತನ್ನ ಅವ್ಯಾಜ ಕರುಣೆಯಿಂದ ತನ್ನ ಗೆಳೆಯನ ಸೇವೆಯಲ್ಲಿ ತೊಡಗಿದ್ದನು. ತನ್ನ ಭಕ್ತರ ಬಗೆಗೆ ಸ್ನೇಹ ತೋರುವುದರಲ್ಲಿ ಎಂದೂ ವಿಫಲನಾಗುವುದಿಲ್ಲ. ಆದ್ದರಿಂದ ಇಲ್ಲಿ ಆತನನ್ನು ಅಚ್ಯುತ ಎಂದು ಸಂಬೋಧಿಸಿದೆ. ಸಾರಥಿಯಾಗಿ ಅವನು ಅರ್ಜುನನ ಅಪ್ಪಣೆಯಂತೆ ನಡೆಯಬೇಕಾಗಿತ್ತು. ಹೀಗೆ ನಡೆದುಕೊಳ್ಳಲು ಆತನು ಹಿಂಜರಿಯಲಿಲ್ಲವಾದ್ದರಿಂದ ಆತನನ್ನು ಅಚ್ಯುತ ಎಂದು ಸಂಬೋಧಿಸಿದೆ. ತನ್ನ ಭಕ್ತನಿಗಾಗಿ ಸಾರಥಿಯ ಸ್ಥಾನವನ್ನು ಒಪ್ಪಿಕೊಂಡಿದ್ದರೂ ಅವನ ಸರ್ವೋಚ್ಚ ಸ್ಥಾನಕ್ಕೆ ಎದುರಿಲ್ಲ. ಎಲ್ಲ ಸನ್ನಿವೇಶಗಳಲ್ಲಿಯೂ ಅವನು ದೇವೋತ್ತಮ ಪರಮ ಪುರುಷ, ಹೃಷೀಕೇಶ, ಸಕಲೇಂದ್ರಿಯಗಳ ಸ್ವಾಮಿ. ಭಗವಂತನಿಗೂ ಅವನ ಸೇವಕನಿಗೂ ನಡುವಣ ಸಂಬಂಧ ಅತಿ ಮಧುರ ಮತ್ತು ಅಲೌಕಿಕ. ಸೇವಕನು ಭಗವಂತನ ಸೇವೆಗೆ ಸದಾ ಸಿದ್ಧ. ಹಾಗೆಯೇ ಭಗವಂತನು ತನ್ನ ಭಕ್ತನಿಗೆ ಒಂದಿಷ್ಟು ಸೇವೆ ಮಾಡಲು ಸದಾ ಅವಕಾಶವನ್ನು ಹುಡುಕುತ್ತಿರುತ್ತಾನೆ. ತಾನೇ ಅಪ್ಪಣೆ ನೀಡುವ ಪ್ರಭುವಾಗುವುದಕ್ಕಿಂತ ತನ್ನ ಪರಿಶುದ್ಧ ಭಕ್ತನೇ ತನಗೆ ಅಪ್ಪಣೆ ನೀಡುವ ಅನುಕೂಲಕರ ಸ್ಥಾನವನ್ನು ವಹಿಸಿಕೊಂಡಾಗ ಭಗವಂತನಿಗೆ ಹೆಚ್ಚು ಸಂತೋಷ. ಅವನೇ ಪ್ರಭುವಾದುದರಿಂದ ಎಲ್ಲರೂ ಅವನ ಆಜ್ಞಾಧಾರಕರು. ಅವನಿಗೆ ಅಪ್ಪಣೆ ಮಾಡಲು ಅವನಿಗಿಂತ ಉಚ್ಚರಾದವರು ಇಲ್ಲ. ಆದರೆ ತಾನೇ ಎಲ್ಲ ಆಗುಹೋಗುಗಳ ಪ್ರಭುವಾದರೂ ಪರಿಶುದ್ಧ ಭಕ್ತನೊಬ್ಬನು ತನಗೆ ಅಪ್ಪಣೆ ಮಾಡುವುದನ್ನು ಕಂಡಾಗ ಭಗವಂತನಿಗೆ ಅಲೌಕಿಕ ಆನಂದವಾಗುತ್ತದೆ. ಭಗವಂತನ ಪರಿಶುದ್ಧ ಭಕ್ತನಾದ ಅರ್ಜುನನಿಗೆ ತನ್ನ ದಾಯಾದಿಗಳೊಡನೆ ಮತ್ತು ಸೋದರರರೊಡನೆ ಯುದ್ಧಮಾಡಲು ಇಚ್ಛೆಯೇ ಇರಲಿಲ್ಲ. ಆದರೆ ಶಾಂತಿಯ ಮಾರ್ಗದ ಯಾವುದೇ ಸಂಧಾನಕ್ಕೆ ಒಪ್ಪದ ದುರ್ಯೋಧನನ ಹಠಮಾರಿತನದಿಂದ ಆತನು ರಣಭೂಮಿಗೆ ಬರಬೇಕಾಯಿತು. ಆದ್ದರಿಂದ ಆತನಿಗೆ ರಣಭೂಮಿಯಲ್ಲಿದ್ದ ಪ್ರಮುಖರನ್ನು ಕಾಣುವ ಆತಂಕ ಉಂಟಾತು. ರಣಭೂಮಿಯಲ್ಲಿ ಶಾಂತಿಯ ಪ್ರಯತ್ನದ ಪ್ರಶ್ನೆಯೇ ಇಲ್ಲದಿದ್ದರೂ ಅವರನ್ನು ಮತ್ತೆ ನೋಡುವ ಮತ್ತು ಈ ಅನಗತ್ಯವಾದ ಯುದ್ಧಕ್ಕೆ ಅವರು ಎಷ್ಟು ಕಾತರರಾಗಿದ್ದಾರೆ ಎಂದು ಕಾಣುವ ಬಯಕೆ ಅವನಿಗಾಯಿತು. ಶ್ಲೋಕ – ೨೩ ಯೋತ್ಸ್ಯಮಾನಾನವೇಕ್ಷೇಽಹಂ ಯ ಏತೇಽತ್ರ ಸಮಾಗತಾಃ | ಧಾರ್ತರಾಷ್ಟ್ರಸ್ಯ ದುರ್ಬುದ್ಧೇರ್ಯುದ್ಧೇ ಪ್ರಿಯಚಿಕೀರ್ಷವಃ ||೨೩|| ಯೋತ್ಸ್ಯಮಾನಾನ್‌-ಯುದ್ಧಮಾಡುವವರನ್ನು; ಅವೇಕ್ಷೇ-ನೋಡುತ್ತೇನೆ; ಅಹಮ್‌-ನಾನು; ಯೇ-ಯಾರು; ಏತೇ-ಅವರು; ಅತ್ರ-ಇಲ್ಲಿ; ಸಮಾಗತಾಃ-ಸೇರಿದ್ದಾರೆ; ಧಾರ್ತರಾಷ್ಟ್ರಸ್ಯ-ಧೃತರಾಷ್ಟ್ರನ ಮಗನಿಗಾಗಿ; ದುರ್ಬುದ್ಧೇಃ-ದುರ್ಬುದ್ಧಿಯವನಾದ; ಯುದ್ಧೇ-ಯುದ್ಧದಲ್ಲಿ; ಪ್ರಿಯ-ಹಿತವನ್ನು; ಚಿಕೀರ್ಷವಃ-ಮಾಡಬಯಸುವವರು. ಅನುವಾದ ದುರ್ಬುದ್ಧಿಯವನಾದ ಧೃತರಾಷ್ಟ್ರನ ಮಗನನ್ನು ಸುಪ್ರೀತಗೊಳಿಸುವ ಅಪೇಕ್ಷೆಯಿಂದ ಯುದ್ಧಮಾಡಲು ಇಲ್ಲಿಗೆ ಯಾರು ಯಾರು ಬಂದಿದ್ದಾರೆ ಎಂದು ನಾನು ನೋಡುವೆ. ಭಾವಾರ್ಥ ತನ್ನ ತಂದೆಯಾದ ಧೃತರಾಷ್ಟ್ರನ ಜೊತೆಗೂಡಿ ದುಷ್ಟಯೋಜನೆಗಳಿಂದ ಪಾಂಡವರ ರಾಜ್ಯವನ್ನು ಆಕ್ರಮಿಸಿಕೊಳ್ಳುವುದು ದುರ್ಯೋಧನನ ಬಯಕೆ ಎಂಬುದು ಎಲ್ಲರಿಗೂ ತಿಳಿದಿದ್ದ ರಹಸ್ಯ. ಆದುದರಿಂದ ದುರ್ಯೋಧನನ ಪಕ್ಷವನ್ನು ಸೇರಿದವರೆಲ್ಲ ಒಂದೇ ಬಗೆಯ ಜನರೇ ಆಗಿದ್ದಿರಬೇಕು. ಅವರು ಯಾರು ಎಂದು ತಿಳಿಯುವುದಕ್ಕಾಗಿ ಅರ್ಜುನನು ಯುದ್ಧಕ್ಕೆ ಮೊದಲು ಅವರನ್ನು ಕಾಣಲು ಬಯಸಿದ. ಅವರೊಡನೆ ಶಾಂತಿ ಸಂಧಾನವನ್ನು ನಡೆಸುವ ಉದ್ದೇಶವೇನೂ ಇರಲಿಲ್ಲ. ಕೃಷ್ಣನು ತನ್ನ ಪಕ್ಕದಲ್ಲಿಯೇ ಕುಳಿತಿದ್ದುದರಿಂದ ಅವನಿಗೆ ವಿಜಯದ ಸಂಪೂರ್ಣ ಭರವಸೆ ಇತ್ತು. ಆದರೂ ತಾನು ಎದುರಿಸಬೇಕಾಗಿದ್ದ ಬಲದ ಕಲ್ಪನೆಯನ್ನು ಪಡೆಯಲು ಅವನು ಬಯಸಿದ ಎನ್ನುವುದೂ ನಿಜ. ಶ್ಲೋಕ – ೨೪ ಸಞ್ಜಯ ಉವಾಚ ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ | ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ ||೨೪|| ಸಞ್ಜಯಃ ಉವಾಚ-ಸಂಜಯನು ಹೇಳಿದನು; ಏವಮ್‌-ಹೀಗೆ; ಉಕ್ತಃ-ಹೇಳಲ್ಪಟ್ಟನು; ಹೃಷೀಕೇಶಃ-ಶ್ರೀಕೃಷ್ಣನು; ಗುಡಾಕೇಶೇನ-ಅರ್ಜುನನಿಂದ; ಭಾರತ-ಭರತ ವಂಶದವನೇ; ಸೇನಯೋಃ-ಸೈನ್ಯಗಳ; ಉಭಯೋಃ-ಎರಡು; ಮಧ್ಯೇ-ಮಧ್ಯದಲ್ಲಿ; ಸ್ಥಾಪಯಿತ್ವಾ-ನಿಲ್ಲಿಸಿ; ರಥ ಉತ್ತಮಮ್‌-ಉತ್ತಮವಾದ ರಥವನ್ನು. ಅನುವಾದ ಸಂಜಯನು ಹೇಳಿದ – ಹೇ ಭರತವಂಶಜನೇ, ಅರ್ಜುನನ ಈ ಮಾತುಗಳನ್ನು ಕೇಳಿ ಶ್ರೀಕೃಷ್ಣನು ಎರಡು ಸೈನ್ಯಗಳ ನಡುವೆ ತನ್ನ ಶ್ರೇಷ್ಠ ರಥವನ್ನು ನಿಲ್ಲಿಸಿದ. ಭಾವಾರ್ಥ ಈ ಶ್ಲೋಕದಲ್ಲಿ ಅರ್ಜುನನನ್ನು ಗುಡಾಕೇಶ ಎಂದು ಕರೆದಿದೆ. ಗುಡಾಕಾ ಎಂದರೆ ನಿದ್ರೆ; ನಿದ್ರೆಯನ್ನು ಗೆದ್ದವನು ಗುಡಾಕೇಶ. ನಿದ್ರೆ ಎಂದರೆ ಅಜ್ಞಾನ ಎಂದೂ ಅರ್ಥ. ಕೃಷ್ಣನೊಡನೆ ತನ್ನ ಗೆಳೆತನದಿಂದ ಅರ್ಜುನನು ನಿದ್ರೆಯನ್ನೂ ಅಜ್ಞಾನವನ್ನೂ ಗೆದ್ದ. ಕೃಷ್ಣನ ಮಹಾಭಕ್ತನಾಗಿ ಅವನಿಗೆ ಕೃಷ್ಣನನ್ನು ಒಂದು ಕ್ಷಣವೂ ಮರೆಯಲು ಸಾಧ್ಯವಿರಲಿಲ್ಲ. ಏಕೆಂದರೆ ಇದೇ ಭಕ್ತನ ಸ್ವಭಾವ. ಜಾಗ್ರತಾವಸ್ಥೆಯಲ್ಲಾಗಲಿ ನಿದ್ರೆಯಲ್ಲಾಗಲೀ ಭಕ್ತನು ಕೃಷ್ಣನ ಹೆಸರು, ರೂಪ, ಗುಣ ಮತ್ತು ಲೀಲೆಗಳನ್ನು ಯೋಚಿಸದಿರುವುದೇ ಇಲ್ಲ. ಹೀಗೆ ಕೃಷ್ಣನನ್ನು ಕುರಿತು ಸದಾ ಚಿಂತಿಸುವಷ್ಟರಿಂದಲೇ ಅವನು ನಿದ್ರೆಯನ್ನೂ ಅಜ್ಞಾನವನ್ನೂ ಗೆಲ್ಲಬಲ್ಲ. ಇದಕ್ಕೆ ಕೃಷ್ಣ ಪ್ರಜ್ಞೆ ಅಥವಾ ಸಮಾ-ಎಂದು ಹೆಸರು. ಹೃಷೀಕೇಶನಾಗಿ ಎಲ್ಲ ಜೀವಿಗಳ ಇಂದ್ರಿಯಗಳ ಮತ್ತು ಮನಸ್ಸುಗಳ ನಿರ್ದೇಶಕನಾಗಿ ಕೃಷ್ಣನಿಗೆ ಅರ್ಜುನನು ರಥವನ್ನು ಸೈನ್ಯಗಳ ಮಧ್ಯೆ ನಿಲ್ಲಿಸು ಎಂದು ಹೇಳಿದುದಕ್ಕೆ ಕಾರಣವು ಅರ್ಥವಾಯಿತು. ಅವನು ಹಾಗೆಯೇ ಮಾಡಿ ಅನಂತರ ಕೆಳಗಿನ ಮಾತುಗಳನ್ನು ಹೇಳಿದನು. ಶ್ಲೋಕ – ೨೫   ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ | ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ ||೨೫|| ಭೀಷ್ಮ-ಪಿತಾಮಹ ಭೀಷ್ಮ; ದ್ರೋಣ-ಆಚಾರ್ಯ ದ್ರೋಣ; ಪ್ರಮುಖತಃ-ಮುಂದೆ; ಸರ್ವೇಷಾಮ್‌-ಎಲ್ಲರ; ಚ-ಕೂಡ; ಮಹೀಕ್ಷಿತಾಮ್‌-ಜಗತ್ಪತಿಗಳು; ಉವಾಚ-ಹೇಳಿದನು; ಪಾರ್ಥ-ಪೃಥೆಯ ಪುತ್ರನೇ; ಪಶ್ಯ-ನೋಡು; ಏತಾನ್‌-ಇವರೆಲ್ಲರನ್ನು; ಸಮವೇತಾನ್‌-ನೆರೆದ; ಕುರೂನ್‌-ಕುರುಕುಲದ ಸದಸ್ಯರಾದ; ಇತಿ-ಹೀಗೆ. ಅನುವಾದ ಭೀಷ್ಮ, ದ್ರೋಣ ಮತ್ತು ಜಗತ್ತಿನ ಇತರ ರಾಜರ ಸಮ್ಮುಖದಲ್ಲಿ ಭಗವಂತನು, ಪಾರ್ಥ, ಇಲ್ಲಿ ನೆರೆದಿರುವ ಎಲ್ಲ ಕುರು ವಂಶದವರನ್ನು ನೋಡು, ಎಂದನು. ಭಾವಾರ್ಥ ಎಲ್ಲ ಜೀವಿಗಳ ಪರಮಾತ್ಮನಾಗಿ ಕೃಷ್ಣನು ಪಾರ್ಥನ ಮನಸ್ಸಿನ ವ್ಯಾಪಾರಗಳನ್ನು ಅರ್ಥಮಾಡಿಕೊಳ್ಳಬಲ್ಲವನಾಗಿದ್ದ. ಇಲ್ಲಿ ಹೃಷೀಕೇಶ ಎನ್ನುವ ಪದವನ್ನು ಬಳಸಿರುವುದು ಆತನಿಗೆ ಎಲ್ಲವೂ ತಿಳಿದಿತ್ತು ಎನ್ನುವುದನ್ನು ಸೂಚಿಸುತ್ತದೆ. ಪಾರ್ಥ ಎಂದರೆ ಪೃಥಾ ಅಥವಾ ಕುಂತಿಯ ಮಗ. ಈ ಶಬ್ದದ ಬಳಕೆಯೂ ಅರ್ಥವತ್ತಾಗಿದೆ. ಅರ್ಜುನನು ಕೃಷ್ಣನ ತಂದೆ ವಸುದೇವನ ತಂಗಿಯಾದ ಪೃಥೆಯ ಮಗ. ಈ ಕಾರಣಕ್ಕಾಗಿ ತಾನು ಅರ್ಜುನನ ಸಾರಥಿಯಾದೆ ಎನ್ನುವುದನ್ನು ಕೃಷ್ಣ ಅರ್ಜುನನಿಗೆ ತಿಳಿಸಬಯಸಿದ. ಕೃಷ್ಣನು ಅರ್ಜುನನಿಗೆ “ಕೌರವರನ್ನು ನೋಡು” ಎಂದುದರ ಅರ್ಥವೇನು? ಅರ್ಜುನನು ಯುದ್ಧಮಾಡದಿರಲು ಬಯಸಿದ್ದನೆ? ಕೃಷ್ಣನು ತನ್ನ ಸೋದರತ್ತೆ ಕುಂತಿಯ ಮಗನಿಂದ ಇಂತಹ ನಡತೆಯನ್ನು ನಿರೀಕ್ಷಿಸಿರಲಿಲ್ಲ. ಅರ್ಜುನನ ಮನಸ್ಸಿನ ಮುಂದಿನ ಸ್ಥಿತಿಯನ್ನು ಹೀಗೆ ಭಗವಂತನು ವಿನೋದವಾಗಿ ಸೂಚಿಸಿದ. ಶ್ಲೋಕ – ೨೬ ತತ್ರಾಪಶ್ಯತ್ ಸ್ಥಿತಾನ್ ಪಾರ್ಥಃ ಪಿತೄನಥ ಪಿತಾಮಹಾನ್ | ಆಚಾರ್ಯಾನ್ಮಾತುಲಾನ್ ಭ್ರಾತೄನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ | ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ ||೨೬||