
ಪರಮಲೋಕದ ಸಂದೇಶದೊಂದಿಗೆ ಅವರು ಬಂದರು
ಅವರ ಯಾತ್ರೆ
ಐನೂರು ವರ್ಷಗಳ ಹಿಂದೆ ಶ್ರೀ ಕೃಷ್ಣನು ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಆವಿರ್ಭವಿಸಿದನು ಮತ್ತು ಹರೇ ಕೃಷ್ಣ, ಹರೇ ರಾಮ ಎಂಬ ತನ್ನ ಪವಿತ್ರ ನಾಮಗಳ ಜಪವು ಭಾರತದ ತೀರದ ಆಚೆಗೆ, ಈ ಲೋಕದ ಪ್ರತಿಯೊಂದು ಪಟ್ಟಣ ಮತ್ತು ಗ್ರಾಮಗಳಿಗೆ ಹರಡುವುದೆಂದು ಘೋಷಿಸಿದನು. ಅನಂತರ ನೂರಾರು ವರ್ಷಗಳು ಸರಿದವು, ಶ್ರೀ ಚೈತನ್ಯರ ನಿಷ್ಠಾವಂತ ಅನುಯಾಯಿಗಳು ಅವರ ಧ್ಯೇಯವನ್ನು ಹರಡಲು ಪ್ರಯತ್ನಿಸುತ್ತಿದ್ದರು.
ಅದು ಆಗಸ್ಟ್ 13, 1965. ತಮ್ಮ 70 ನೆಯ ಜನ್ಮದಿನಕ್ಕೆ ಕೆಲವೇ ದಿನಗಳ ಮುನ್ನ ತತ್ತ್ವಜ್ಞಾನಿ, ವಿದ್ವಾಂಸ ಮತ್ತು ಸಂತ ಎ. ಸಿ. ಭಕ್ತವೇದಾಂತ ಸ್ವಾಮಿ ಪ್ರಭುಪಾದ ಅವರು, ತಾವೇನು ಮಾಡಲು ಸಾಧ್ಯ ಎನ್ನುವುದನ್ನು ನೋಡಲು ಅಮೆರಿಕಕ್ಕೆ ಹೊರಟರು.
ತಮ್ಮ ಪ್ರಯಾಣಕ್ಕಾಗಿ ಸ್ಥಳೀಯ ಹಡಗು ಕಂಪನಿಯನ್ನು ಬೇಡಿಕೊಂಡ ಅವರು ಜಲದೂತ ಎಂಬ ಸರಕು ಸಾಗಣೆ ಹಡಗಿನಲ್ಲಿ ಏಕೈಕ ಪ್ರಯಾಣಿಕರಾಗಿ ತೆರಳಿದರು. ಆಗ ಅವರ ಬಳಿ ಒಂದು ಸೂಟ್‌ಕೇಸ್, ಒಂದು ಛತ್ರಿ, ಒಣ ಧಾನ್ಯಗಳು, ಸುಮಾರು ಏಳು ಡಾಲರ್ ಮೌಲ್ಯದ ರೂಪಾಯಿಗಳು ಮತ್ತು ಪುಸ್ತಕಗಳಿದ್ದ ಪೆಟ್ಟಿಗೆಗಳು ಇದ್ದವು.
37 ದಿನಗಳ ಅನಂತರ, ಜಲದೂತವು ನ್ಯೂಯಾರ್ಕ್ ಬಂದರಿಗೆ ಆಗಮಿಸಿದಾಗ, ಯಾರೂ ಗೊತ್ತಿಲ್ಲದೆ, ಗೋಚರಿಸುವ ಯಾವುದೇ ಬೆಂಬಲವಿಲ್ಲದೆ ಮತ್ತು ಹಡಗಿನಲ್ಲಿ ತಂದ ಕೆಲವೇ ವಸ್ತುಗಳೊಂದಿಗೆ ಅವರು ಅಮೆರಿಕಕ್ಕೆ ಬಂದಿದ್ದರು.
ಅವರ ಬಳಿ ಹಣವಿರಲಿಲ್ಲ, ಮಿತ್ರರಿರಲಿಲ್ಲ, ಅನುಯಾಯಿಗಳಿರಲಿಲ್ಲ, ಯೌವನವಿರಲಿಲ್ಲ, ಒಳ್ಳೆಯ ಆರೋಗ್ಯ ಇರಲಿಲ್ಲ ಮತ್ತು ವೇದಗಳ ಆಧ್ಯಾತ್ಮಿಕ ಜ್ಞಾನವನ್ನು ಇಡೀ ಪಾಶ್ಚಿಮಾತ್ಯ ಸಮಾಜಕ್ಕೆ ಪ್ರಸ್ತುತ ಪಡಿಸುವ ತಮ್ಮ ಧ್ಯೇಯವನ್ನು ಹೇಗೆ ಸಾಕಾರಗೊಳಿಸಬಹುದೆಂಬ ಸ್ಪಷ್ಟ ಕಲ್ಪನೆಯೂ ಅವರಿಗೆ ಇರಲಿಲ್ಲ.
ಅಮೆರಿಕಕ್ಕೆ ಆಗಮಿಸಿದ ಕೂಡಲೇ ಭಕ್ತಿವೇದಾಂತ ಸ್ವಾಮಿ ಅವರು ಶ್ರೀ ಕೃಷ್ಣನಲ್ಲಿ ತಮಗಿರುವ ಶ್ರದ್ಧೆಯನ್ನು ಮತ್ತು ಇಂಗ್ಲಿಶ್ ಭಾಷಿಕರ ಲೋಕದಾದ್ಯಂತ ಕೃಷ್ಣಪ್ರಜ್ಞೆಯ ಬೋಧನೆಗಳನ್ನು ಹರಡಲು ತಮ್ಮ ಆಧ್ಯಾತ್ಮಿಕ ಗುರುಗಳು ನೀಡಿದ್ದ ವಿಶೇಷ ಸೂಚನೆಗಳನ್ನು ಬಂಗಾಳಿಯಲ್ಲಿ ಬರೆದ ಪದ್ಯದಲ್ಲಿ ವ್ಯಕ್ತಪಡಿಸಿದ್ದರು.
“ನನ್ನ ಪ್ರೀತಿಯ ಪ್ರಭು ಶ್ರೀ ಕೃಷ್ಣ . . . ಕೃಷ್ಣಪ್ರಜ್ಞೆಯ ಈ ಸಂದೇಶವನ್ನು ನಾನು ಅವರಿಗೆ ಹೇಗೆ ಅರ್ಥಮಾಡಿಸಲಿ? ನಾನು ದುರ್ದೈವಿ, ಅನರ್ಹ, ಮತ್ತು ಅತ್ಯಂತ ಪತಿತ. ನಾನಾಗಿಯೇ ಹಾಗೆ ಮಾಡಲು ನಾನು ಶಕ್ತಿಹೀನನಾಗಿರುವುದರಿಂದ ಅವರಿಗೆ ಮನವರಿಕೆ ಮಾಡಿಕೊಡಲು ನಿನ್ನ ಅನುಗ್ರಹವನ್ನು ಕೋರುತ್ತಿರುವೆ . . . ಈ ಅಲೌಕಿಕ ಸಂದೇಶವು ಅವರ ಹೃದಯಗಳನ್ನು ವ್ಯಾಪಿಸಿದಾಗ ಅವರು ಖಂಡಿತವಾಗಿಯೂ ಆನಂದಿಸುತ್ತಾರೆ ಮತ್ತು ಈ ರೀತಿ ಬದುಕಿನ ಎಲ್ಲ ದುಃಖದಿಂದ ಮುಕ್ತರಾಗುತ್ತಾರೆ ಎಂಬ ವಿಶ್ವಾಸ ನನಗಿದೆ . . .”
ಈ ಪದ್ಯವನ್ನು ಸೆಪ್ಟೆಂಬರ್ 17, 1965 ರಂದು ಬರೆದದ್ದು. 12 ವರ್ಷಗಳ ಅನಂತರ, ನವೆಂಬರ್ 14, 1977 ರಂದು ಭಕ್ತಿವೇದಾಂತ ಸ್ವಾಮಿ ಅವರು ತಮ್ಮ 81 ನೆಯ ವಯಸ್ಸಿನಲ್ಲಿ ಈ ಲೋಕವನ್ನು ತ್ಯಜಿಸಿದರು. ಆ 12 ವರ್ಷಗಳಲ್ಲಿ ಏನಾಯಿತು? ಈ ಅಲ್ಪ ಕಾಲದಲ್ಲಿ ಭಕ್ತಿವೇದಾಂತ ಸ್ವಾಮಿ ಅವರು ಶೂನ್ಯದಿಂದ ಆರಂಭಿಸಿ ಎಲ್ಲರೂ ನಿವೃತ್ತರಾಗಲು ಸಿದ್ಧವಾಗುವ ವಯಸ್ಸಿನಲ್ಲಿ ಏನನ್ನು ಸಾಧಿಸಿದರು?
ಯಾವುದೇ ಗುಣಮಟ್ಟದಲ್ಲಿ ನೋಡಿದರೂ ಸಾಧನೆಯ ಪಟ್ಟಿಯು ಅಚ್ಚರಿ ಉಂಟುಮಾಡುವಂತಹುದು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, 1965 ಮತ್ತು 1977 ರ ಮಧ್ಯದಲ್ಲಿ, ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ವಿಶ್ವದ ಎಲ್ಲ ಪ್ರಮುಖ ನಗರಗಳಲ್ಲಿಯೂ ಕೃಷ್ಣಪ್ರಜ್ಞೆಯ ಬೋಧನೆಗಳನ್ನು ಹರಡಿದರು ಮತ್ತು ಸಾವಿರಾರು ನಿಷ್ಠಾವಂತ ಭಕ್ತರನ್ನು ಒಳಗೊಂಡ ಅಂತಾರಾಷ್ಟ್ರೀಯ ಸಂಘವನ್ನು ಸ್ಥಾಪಿಸಿದರು. ಅವರು 6 ಖಂಡಗಳಲ್ಲಿ ಹರಡಿದ 108 ಮಂದಿರಗಳನ್ನು ಸ್ಥಾಪಿಸಿದರು. ವಿಸ್ತಾರಗೊಳ್ಳುತ್ತಿದ್ದ ತಮ್ಮ ಧ್ಯೇಯದ ಸದಸ್ಯರಿಗೆ ವೈಯಕ್ತಿಕವಾಗಿ ಮಾರ್ಗದರ್ಶನ ಮಾಡಲು 12 ಬಾರಿ ವಿಶ್ವ-ಪರ್ಯಟನೆ ಮಾಡಿದರು.
ತಮ್ಮ 70 ನೆಯ ವರ್ಷದಿಂದ 81 ನೆಯ ವಯಸ್ಸಿಗೆ ಸಾಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಇದು ಸಾಕಷ್ಟು ಸಾಧನೆ ಅಲ್ಲವೇನೋ ಎಂಬಂತೆ, ಶ್ರೀಲ ಪ್ರಭುಪಾದರು 51 ಸಂಪುಟಗಳಷ್ಟು ಪುಸ್ತಕಗಳನ್ನು ಭಾಷಾಂತರಿಸಿದರು, ಸ್ವತಃ ಬರೆದರು ಮತ್ತು ಪ್ರಕಟಿಸಿದರು. 28 ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡಿರುವ ಈ ಪುಸ್ತಕಗಳ ಕೋಟ್ಯಂತರ ಪ್ರತಿಗಳು ಜಗತ್ತಿನಾದ್ಯಂತ ವಿತರಣೆಯಾಗಿದೆ. ಅವರು ಅಸಂಖ್ಯ ಉಪನ್ಯಾಸಗಳನ್ನು ನೀಡಿದ್ದಾರೆ, ಅಸಂಖ್ಯ ಪತ್ರಗಳನ್ನು ಬರೆದಿದ್ದಾರೆ ಮತ್ತು ಅನುಯಾಯಿಗಳು, ಅಭಿಮಾನಿಗಳು ಮತ್ತು ಟೀಕಾಕಾರರೊಂದಿಗೆ ಅಸಂಖ್ಯ ಬಾರಿ ಸಂವಾದ ನಡೆಸಿದ್ದಾರೆ. ಧರ್ಮ, ತತ್ತ್ವಜ್ಞಾನ ಮತ್ತು ಸಂಸ್ಕೃತಿಗೆ ಶ್ರೀಲ ಪ್ರಭುಪಾದರ ಕೊಡುಗೆ ಕುರಿತು ನಿಜವಾದ ಮೆಚ್ಚುಗೆ ಉಳ್ಳ ನೂರಾರು ಪ್ರಮುಖ ವಿದ್ವಾಂಸರು ಮತ್ತು ಸಾಮಾಜಿಕ ವ್ಯಕ್ತಿಗಳ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.
ಅವರ ಸಂಘ
ಶ್ರೀಲ ಪ್ರಭುಪಾದರು ಸೆಪ್ಟೆಂಬರ್ 1965 ರಲ್ಲಿ ನ್ಯೂಯಾರ್ಕ್‌ಗೆ ಬಂದ ಮೇಲೆ, ದೈವ ಪ್ರಜ್ಞೆ ಆಂದೋಲನವನ್ನು ಸ್ಥಾಪಿಸಲು ಮೊದಲ ವರ್ಷ ಏಕಾಂಗಿಯಾಗಿ ಹೋರಾಟ ನಡೆಸಿದರು. ಅವರು ಸರಳವಾಗಿ ಬದುಕಿದರು, ಯಾವಾಗ ಮತ್ತು ಎಲ್ಲೆಲ್ಲಿ ಅವಕಾಶ ಲಭ್ಯವಾಯಿತೋ ಅಲ್ಲೆಲ್ಲ ಉಪನ್ಯಾಸ ನೀಡಿದರು ಮತ್ತು ಕ್ರಮೇಣ ಆಸಕ್ತಿ ಬೆಳೆಯುವಂತೆ ಮಾಡಿದರು.
ನ್ಯೂಯಾರ್ಕ್ ಸಿಟಿಯ ಲೋಯರ್ ಈಸ್ಟ್ ಸೈಡ್‌ನಲ್ಲಿ ಗಾಳಿ ಬೆಳಕು ಸಾಕಷ್ಟು ಇಲ್ಲದ ಅಂಗಡಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾಗಲೇ, ಶ್ರೀಲ ಪ್ರಭುಪಾದರು 1966 ರ ಜುಲೈನಲ್ಲಿ ವಿಶ್ವವ್ಯಾಪಿ ಸಹಯೋಗದ ಉದ್ದೇಶದಿಂದ ಆಧ್ಯಾತ್ಮಿಕ ಸಂಘವನ್ನು ಸ್ಥಾಪಿಸಿದರು. ಅವರು ಅದನ್ನು ‘ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ’ ಎಮದು ಕರೆದರು. ಸಂಕ್ಷಿಪ್ತವಾಗಿ ಅದು ಇಸ್ಕಾನ್.
ಸಂಘ ರಚನೆಯ ಸಂದರ್ಭದಲ್ಲಿ ಶ್ರೀಲ ಪ್ರಭುಪಾದರು ಒಂದೇ ಒಂದು ಬದ್ಧ ಅನುಯಾಯಿಯನ್ನೂ ಆಕರ್ಷಿಸಿರಲಿಲ್ಲ. ವಿಚಲಿತರಾಗದ ಅವರು ತಮ್ಮ ಸಂಜೆಯ ಉಪನ್ಯಾಸಗಳಿಗೆ ಕ್ರಮವಾಗಿ ಬರುತ್ತಿದ್ದ ಸಣ್ಣ ಗುಂಪಿನಿಂದ ಆಯ್ದ ಸ್ವಯಂ ಸೇವಕರನ್ನು ಇಸ್ಕಾನ್‌ನ ಮೊದಲ ಟ್ರಸ್ಟಿಗಳಾಗಿ ಸೆರಿಸಿಕೊಂಡರು.
ಅದು ಆಗಿನದು. ಇಂದು, ಇಸ್ಕಾನ್‌ನಲ್ಲಿ 300 ಕ್ಕೂ ಹೆಚ್ಚು ಮಂದಿರಗಳಿವೆ, ಫಾರ್ಮ್‌ಗಳಿವೆ, ಶಾಲೆಗಳಿವೆ ಮತ್ತು ವಿಶೇಷ ಯೋಜನೆಗಳಿವೆ. ಇವು ವಿಶ್ವದಾದ್ಯಾಂತ ಹರಡಿವೆ.
ಇಸ್ಕಾನ್‌ನ ಉದ್ದೇಶ
ಕೃಷ್ಣ ಪ್ರಜ್ಞೆಯು ಇತರ ಯಾವುದೇ ಪಂಥಾಭಿಮಾನಕ್ಕಿಂತ ತುಂಬ ಮೇಲ್ಮಟ್ಟದ್ದು. ಇದು ಪುರಾತನ ಭಾರತೀಯ ವೈದಿಕ ಸಾಹಿತ್ಯದಲ್ಲಿ ಸಂಪೂರ್ಣವಾಗಿ ವಿವರಿಸಿರುವ ಆಧ್ಯಾತ್ಮಿಕ ಮೌಲ್ಯದ ವಿಜ್ಞಾನ. ದೈವ ಸಾಕ್ಷಾತ್ಕಾರದ ಈ ಸಾರ್ವತ್ರಿಕ ತತ್ತ್ವದೊಂದಿಗೆ ವಿಶ್ವದ ಎಲ್ಲ ಜನರನ್ನು ಸಂಪರ್ಕಿಸುವುದೇ ಕೃಷ್ಣಪ್ರಜ್ಞೆಯ ಧ್ಯೇಯ. ಆಧ್ಯಾತ್ಮಿಕ ಏಕತೆ ಮತ್ತು ಶಾಂತಿಯನ್ನು ಪಡೆಯುವುದೇ ಇದರ ಉದ್ದೇಶವಾಗಿದೆ.
ಪ್ರಸ್ತುತ ಯುಗದಲ್ಲಿ ಆತ್ಮ ಸಾಕ್ಷಾತ್ಕಾರವನ್ನು ಪಡೆಯಲು, ದೇವೋತ್ತಮನ ಬಗೆಗೆ ಸದಾ ಕೇಳುವುದು, ಕೊಂಡಾಡುವುದು ಮತ್ತು ಸ್ಮರಿಸುವುದೇ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ವೇದಗಳು ಶಿಫಾರಸು ಮಾಡುತ್ತವೆ.
ವೇದಗಳ ಶಿಫಾರಸ್ಸನ್ನು ಅನುಸರಿಸುತ್ತ ಇಸ್ಕಾನ್ ಸದಸ್ಯರು ಸದಾ ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ/ ಹರೇ ರಾಮ ಹರೇ ರಾಮ, ರಾಮ ರಾಮ, ಹರೇ ಹರೇ // ಎಂದು ಜಪಿಸುವುದನ್ನು ನೋಡಬಹುದು. ಈ ಸರ್ವೋನ್ನತ ಜಪವು ಭಗವಂತನ ಪವಿತ್ರ ನಾಮಗಳ ಧ್ವನಿ ತರಂಗಗಳ ಮೂಲಕ ನಮ್ಮನ್ನು ದೇವೋತ್ತಮನ ಸಂಪರ್ಕಕ್ಕೆ ನೇರವಾಗಿ ಕೊಂಡೊಯ್ಯುತ್ತದೆ ಮತ್ತು ಕ್ರಮೇಣ ನಮ್ಮನ್ನು ಭಗವಂತನೊಂದಿಗಿನ ನಮ್ಮ ಮೂಲ ಬಾಂಧವ್ಯಕ್ಕೆ ಎಚ್ಚರಿಸುತ್ತದೆ.
ಆದುದರಿಂದ ಭಗವಂತನನ್ನು ಕುರಿತ ಈ ಕೇಳುವ ಮತ್ತು ಜಪಿಸುವ ವಿಧಾನದಲ್ಲಿ ತಮ್ಮ ಸಮಯ ಮತ್ತು ಶಕ್ತಿಯ ಅಲ್ಪ ಭಾಗವನ್ನಾದರೂ ವಿನಿಯೋಗಿಸಲು ಪ್ರೋತ್ಸಾಹಿಸುವುದೇ ಇಸ್ಕಾನ್‌ನ ಪ್ರಾಥಮಿಕ ಧ್ಯೇಯ.
ಆಧ್ಯಾತ್ಮಿಕ ಆಹಾರ ವಿತರಣೆ
ವೈದಿಕ ಜ್ಞಾನ ಪ್ರಸರಣ ಮತ್ತು ಭಗವಂತನ ಪವಿತ್ರ ನಾಮಗಳನ್ನು ಜಪಿಸುವುದನ್ನು ಹರಡುವುದರ ಜೊತೆಗೆ ಇಸ್ಕಾನ್ ವಿಶ್ವಾದ್ಯಂತ ಆಧ್ಯಾತ್ಮಿಕ ಆಹಾರವನ್ನು ಉಚಿತವಾಗಿ ವಿತರಿಸುತ್ತದೆ. ತತ್ತ್ವ ಮತ್ತು ಜಪದಂತೆ, ಭಗವಂತನಿಗೆ ಮೊದಲು ಅರ್ಪಿಸಿರುವ ಶಾಖಾಹಾರ ಪದಾರ್ಥಗಳು ಹೃದಯ ಮತ್ತು ಮನಸ್ಸನ್ನು ಶುದ್ಧೀಕರಿಸುತ್ತವೆ. ಹೀಗೆ ಅದು ಭಗವಂತನನ್ನು ಕುರಿತ ವ್ಯಕ್ತಿಯ ಮೂಲ ಅರಿವನ್ನು ಪುನಃ ಎಚ್ಚರಿಸುವ ವಿಧಾನದಲ್ಲಿ ನೆರವಾಗುತ್ತದೆ.
ಅವರ ಬೋಧನೆಗಳು
ಶ್ರೀಲ ಪ್ರಭುಪಾದರು ತಮ್ಮ ಎಲ್ಲ ಕೊಡುಗೆಗಳಲ್ಲಿ ಪುಸ್ತಕಗಳನ್ನು ಅತ್ಯಂತ ಮುಖ್ಯವಾದುದೆಂದು ಪರಿಗಣಿಸಿದ್ದರು. ವಾಸ್ತವವಾಗಿ ಅವರು ಪುರಾತನ ವೈದಿಕ ಗ್ರಂಥಗಳನ್ನು ಭಾಷಾಂತರಿಸುವ ಮತ್ತು ವಿವರಿಸುವ ತಮ್ಮ ಕಾರ್ಯವು ತಮ್ಮ ಜೀವ ಮತ್ತು ಆತ್ಮ ಎಂದು ಹೇಳುತ್ತಿದ್ದರು. ಶ್ರೀಲ ಪ್ರಭುಪಾದರು 1970 ರಲ್ಲಿ ಭಕ್ತಿವೇದಾಂತ ಬುಕ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಇಂದು ಇದು ವಿಶ್ವದಲ್ಲಿಯೇ ಅತ್ಯಧಿಕ ವೈದಿಕ ಸಾಹಿತ್ಯವನ್ನು ಪ್ರಕಟಿಸುವ ಸಂಸ್ಥೆಯಾಗಿದೆ. ಕಳೆದ ಅರ್ಧ ಶತಮಾನದಲ್ಲಿ, ಅದರ ಕೃತಿಗಳ ಮೂಲಕ ಲಕ್ಷಾಂತರ ಜನರು ಶ್ರೀಲ ಪ್ರಭುಪಾದರ ಒಂದಲ್ಲ ಒಂದು ಪುಸ್ತಕವನ್ನಾದರೂ ಓದಿದ್ದಾರೆ ಮತ್ತು ತಮ್ಮ ಜೀವನವು ನಿಜವಾಗಿಯೂ ಸಮೃದ್ಧಗೊಂಡಿದೆ ಎಂದು ಭಾವಿಸಿದ್ದಾರೆ.
ಮಾನವ ರೂಪದ ಪ್ರಾಮುಖ್ಯ
ಈ ಗ್ರಹದಲ್ಲಿ ಬದುಕಿನ ಅನೇಕ ರೂಪಗಳಿವೆ. ಮರಗಳು ಮತ್ತು ಗಿಡಗಳಂತಹ ಸ್ಥಾವರ ರೂಪಗಳಿವೆ. ಜಲಜೀವಿ, ಕೀಟಗಳು, ಪಕ್ಷಿಗಳು, ಮೃಗಗಳು ಮತ್ತು ಸಸ್ತನಿಗಳ ರೂಪಗಳೂ ಇವೆ. ಬದುಕಿನ ಇಂತಹ ಅನೇಕ ರೂಪಗಳಲ್ಲಿ ನಮ್ಮ ಮಾನವ ರೂಪವೂ ಒಂದು. ಆದರೂ ಬದುಕಿನ ಇತರ ರೂಪಗಳಿಗಿಂತ ಭಿನ್ನವಾದ ಅನನ್ಯ ಶಕ್ತಿಯು ಮಾನವ ರೂಪಕ್ಕಿದೆ ಎನ್ನುವುದನ್ನು ಒಬ್ಬ ಸಾಮಾನ್ಯ ವೀಕ್ಷಕನೂ ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾದರೆ ಆ ಶಕ್ತಿಗಳಾವುವು?
ಯಾವುದು ನಿರ್ಜೀವ ರೂಪದಿಂದ ಸಜೀವ ರೂಪವನ್ನು ಭಿನ್ನವಾಗಿಸುತ್ತದೆ? ಪ್ರಜ್ಞೆ ಅಥವಾ ಅರಿವು ಎನ್ನುವುದೇ ಅದಕ್ಕೆ ಉತ್ತರ. ಪ್ರತಿಯೊಂದು ಜೀವ ರೂಪವೂ ಈ ಪ್ರಜ್ಞೆಯ ಲಕ್ಷಣವನ್ನು ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಪಡಿಸುತ್ತವೆ. ಆದುದರಿಂದಲೇ ನಾವು ಅವುಗಳನ್ನು ನಿರ್ಜೀವ ಎನ್ನುವುದಕ್ಕಿಂತ ಜೀವಿಗಳು ಎಂದು ಕರೆಯುತ್ತೇವೆ. ಅತಿ ಸೂಕ್ಷ್ಮ ಜೀವಿ ಅಥವಾ ಸಾಮಾನ್ಯವಾದ ಗಿಡವೂ ಪ್ರಜ್ಞೆಯ ಲಕ್ಷಣವನ್ನು ತೋರಿಸುತ್ತವೆ. ಆದರೆ ನಮ್ಮ ಊಟದ ಮೇಜು ಅಥವಾ ಕುರ್ಚಿಗಳು ಅದನ್ನು ತೋರುವುದಿಲ್ಲ.
ಬದುಕಿನ ಭಿನ್ನ ರೂಪಗಳು ಪ್ರಜ್ಞೆಯ ಭಿನ್ನ ಮಟ್ಟವನ್ನು ತೋರಿಸುತ್ತವೆ ಮತ್ತು ನಮಗೆ ತಿಳಿದಿರುವಂತೆ ಮಾನವ ರೂಪವು ಪ್ರಜ್ಞೆಯ ಅತ್ಯುನ್ನತ ಬೆಳವಣಿಗೆಯನ್ನು ಬಿಂಬಿಸುತ್ತದೆ ಎನ್ನುವುದೂ ಸ್ಪಷ್ಟ. ಪ್ರಜ್ಞೆಯ ಈ ಉನ್ನತ ಬೆಳವಣಿಗೆಯೇ ಈ ಗ್ರಹದ ಇತರ ರೂಪಗಳಿಗಿಂತ ಮಾನವ ರೂಪವು ಭಿನ್ನ ಎನ್ನುವುದನ್ನು ತೋರಿಸುತ್ತದೆ.
ಕೀಟ, ಪಕ್ಷಿ ಅಥವಾ ಮಂಗನಿಂದ ಅಷ್ಟೊಂದು ಭಿನ್ನ ಮಾಡುವ ನಮ್ಮ ಪ್ರಜ್ಞೆ, ಏನದು? ಈ ಪಶು ಪಕ್ಷಿಗಳೂ ತಿನ್ನತ್ತವೆ, ನಾವೂ ಸೇವಿಸುತ್ತೇವೆ; ಅವು ಮಲಗುತ್ತವೆ ಮತ್ತು ನಾವೂ ನಿದ್ರಿಸುತ್ತೇವೆ; ಅವು ಉತ್ಪತ್ತಿ ಮಾಡುತ್ತವೆ ಮತ್ತು ನಾವೂ ಉತ್ಪತ್ತಿ ಮಾಡುತ್ತೇವೆ; ಅವು ತಮ್ಮನ್ನು ರಕ್ಷಿಸಕೊಳ್ಳುತ್ತವೆ ಮತ್ತು ನಾವೂ ಕೂಡ. ಈ ಕಾರ್ಯ ಚಟುವಟಿಕೆಗಳನ್ನು ನಾವು ಹೆಚ್ಚು ಸುಸಂಸ್ಕೃತವಾಗಿ ಮಾಡುತ್ತೇವೆ ಎನ್ನುವುದೇ ನಾವು ಉನ್ನತ ಪ್ರಜ್ಞೆ ಹೊಂದಿರುವುದರ ಸೂಚನೆ ಇರಬಹುದು. ಆದರೆ ಇತರ ಎಲ್ಲ ಜೀವಿಗಳಿಗಿಂತ ನಮ್ಮ ಶ್ರೇಷ್ಠತೆ ಅಥವಾ ಹೆಚ್ಚುಗಾರಿಕೆಯನ್ನು ಅದು ಪೂರ್ಣವಾಗಿ ವಿವರಿಸುವುದಿಲ್ಲ.
ನಮ್ಮ ಅಸ್ತಿತ್ವವನ್ನು ಪ್ರಶ್ನಿಸುವ, ನಮ್ಮ ಮೇಲೆ ಪ್ರತಿಬಿಂಬಿಸುವ ಮತ್ತು ನಮ್ಮದೇ ಸ್ವಭಾವ ಹಾಗೂ ಭಗವಂತನ ಲಕ್ಷಣದ ಬಗೆಗೆ ವಿಚಾರಿಸುವ ನಮ್ಮ ಸಾಮರ್ಥ್ಯದಲ್ಲಿ ಹೆಚ್ಚು ತೃಪ್ತಿದಾಯಕ ವಿವರವನ್ನು ಕಾಣಬಹುದು. ನಾವು ಭಾಷೆಗಳನ್ನು ಸೃಷ್ಟಿಸಬಹುದು, ಬದುಕಿನ ಅರ್ಥವನ್ನು ಪರ್ಯಾಲೊಚಿಸಬಹುದು ಮತ್ತು ರಾತ್ರಿಕಾಲದ ಆಕಾಶದ ಅಚ್ಚರಿಗಳ ಬಗೆಗೆ ಚಿಂತನ ಮಂಥನ ಮಾಡಬಹುದು. ಇನ್ನಾವ ಜೀವ ರೂಪದಲ್ಲಿಯೂ ಅಂತಹ ಅರ್ಹತೆ ಇಲ್ಲ.
ಜೀವನದ ಈ ಮಾನವ ರೂಪದಲ್ಲಿ ನಮಗೆ ನಾವು ಯಾರು, ವಿಶ್ವ ಎನ್ನುವುದೇನು, ದೇವರು ಏನು ಮತ್ತು ನಮ್ಮ, ವಿಶ್ವ ಮತ್ತು ಭಗವಂತನ ನಡುವಣ ಬಾಂಧವ್ಯ ಏನು ಎನ್ನುವುದನ್ನು ಅರಿಯುವ ಕುತೂಹಲ ಇರಬೇಕು ಎಂದು ವೇದಗಳು ಸಲಹೆ ಮಾಡುತ್ತವೆ. ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗದಂತಹ ಬದುಕಿನ ಅಂತಿಮ ಸಮಸ್ಯೆಗಳಿಗೆ ಪರಿಹಾರವನ್ನು ನಾವು ವಿಚಾರಿಸಬೇಕು. ಅಂತಹ ಪ್ರಶ್ನೆಗಳನ್ನು ಬೆಕ್ಕು ಮತ್ತು ನಾಯಿಗಳು ಕೇಳಲಾರವು. ಆದರೆ ಅವು ನಿಜವಾದ ಮಾನವ ಜೀವಿಯ ಹೃದಯಗಳಲ್ಲಿ ಉದ್ಭವಿಸಬೇಕು.
ವೇದಗಳ ಪರಿಪೂರ್ಣ ಜ್ಞಾನ
ಈ ವಿಧವಾದ ವಿಚಾರಣೆಯ ಪ್ರಾಮುಖ್ಯವನ್ನು ನಾವು ಒಪ್ಪಿಕೊಂಡರೆ, ಅಂತಹ ಪ್ರಶ್ನೆಗಳಿಗೆ ಎಲ್ಲಿ ಅಧಿಕೃತ ಉತ್ತರವನ್ನು ಕಾಣಬಹುದು ಎನ್ನುವುದೇ ಸಹಜವಾಗಿ ನಮ್ಮ ಮುಂದಿನ ಪ್ರಶ್ನೆಯಾಗುತ್ತದೆ.
ನಮ್ಮ ಅನುಭವದ ವ್ಯಾಪ್ತಿಯನ್ನು ಮೀರಿದ, ಮಾನವನ ಗ್ರಹಣ-ಶಕ್ತಿ ಮತ್ತು ಭಾವನೆಯನ್ನು ಮೀರಿದ ವಿಷಯಗಳನ್ನು ತಿಳಿಯ ಬಯಸಿದರೆ, ನಾವು ಅದನ್ನು ಅರಿತವರಿಂದ ಕೇಳುವುದೇ ಸೂಕ್ತ ವಿಧಾನ ಎಂದು ವೇದಗಳು ವಿವರಿಸುತ್ತವೆ. ವೇದಗಳ ಅಲೌಕಿಕ ಜ್ಞಾನವನ್ನು ಸ್ವತಃ ದೇವೋತ್ತಮನೇ ಮೊದಲು ನೀಡಿದನು. ಭಗವಂತನು ಯಾವುದೇ ಇತರ ಶಕ್ತಿಯ ಪ್ರಭಾವಕ್ಕೆ ಒಳಗಾಗುವುದಿಲ್ಲ. ಅವನ ಜ್ಞಾನವು ಪರಿಪೂರ್ಣವಾಗಿರಬೇಕು. ಯಾವುದೇ ಬದಲಾವಣೆ ಇಲ್ಲದೆ ಯಾರು ಆ ಜ್ಞಾನವನ್ನು ಪಸರಿಸುವರೋ ಅವರು ಅದೇ ಪರಿಪೂರ್ಣ ಜ್ಞಾನವನ್ನು ನೀಡುವರು.
ಆಧ್ಯಾತ್ಮಿಕ ಗುರುಗಳ ಅಬೇಧ ಸರಪಳಿಯ ಮೂಲಕ ಹರಡುತ್ತ ಅನಾದಿ ಕಾಲದಿಂದಲೂ ವೇದಗಳ ಪರಿಪೂರ್ಣ ಜ್ಞಾನವನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಶ್ರೀಲ ಪ್ರಭುಪಾದರು ಅಂತಹ ಗುರು ಶಿಷ್ಯ ಸರಪಳಿ ಅಥವಾ ಪರಂಪರೆಗೆ ಸೇರಿದವರು. ಅಂತಹ ಪರಂಪರೆಯು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ, ಸ್ವತಃ ಶ್ರೀ ಕೃಷ್ಣನಲ್ಲಿಗೇ ಹೋಗುತ್ತದೆ. ಆದುದರಿಂದ ಶ್ರೀಲ ಪ್ರಭುಪಾದರ ಗ್ರಂಥಗಳಲ್ಲಿ ಕಾಣುವ ಜ್ಞಾನವು ದೇವೋತ್ತಮನಿಂದ ಪಡೆದ ಮೂಲ ಜ್ಞಾನಕ್ಕಿಂತ ಭಿನ್ನವಲ್ಲ. ಶ್ರೀಲ ಪ್ರಭುಪಾದರು ‘ಸತ್ಯ’ವನ್ನು ಉತ್ಪಾದಿಸಲಿಲ್ಲ. ಅವರು ಮೂಲ ವೇದಗಳ ಕಾಲಾತೀತ ಬೋಧನೆಯನ್ನು ಯಾವುದೇ ಸೇರ್ಪಡೆ, ಕಳೆಯುವಿಕೆ ಅಥವಾ ಬದಲಾವಣೆ ಇಲ್ಲದೆ ನೀಡಿದರು.
ಶ್ರೀಲ ಪ್ರಭುಪಾದರ ಬರವಣಿಗೆಯು ಮುಖ್ಯವಾಗಿ ಭಗವದ್ಗೀತೆ, ಭಾಗವತ ಮತ್ತು ಚೈತನ್ಯ ಚರಿತಾಮೃತ – ಈ ಮೂರು ವೈದಿಕ ಗ್ರಂಥಗಳನ್ನು ನಿರೂಪಿಸುತ್ತದೆ. ಸವಿವರಗಳೊಂದಿಗೆ ಅವುಗಳ ಭಾಷಾಂತರವು ವಿಶ್ವದ ಆಧ್ಯಾತ್ಮಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ಬದುಕಿಗೆ ಶ್ರೀಲ ಪ್ರಭುಪಾದರ ವಿಶಿಷ್ಟ ಕೊಡುಗೆಯಾಗಿದೆ.
ಭಗವತ್ ಸಾಕ್ಷಾತ್ಕಾರದ ವಿಜ್ಞಾನ
ಶ್ರೀಲ ಪ್ರಭುಪಾದರ ಗ್ರಂಥಗಳಲ್ಲಿ ಪ್ರಸ್ತುತಪಡಿಸಿರುವ ವೈದಿಕ ಬೋಧನೆಗಳನ್ನು ಮೂರು ಶೀರ್ಷಿಕೆಗಳಡಿ ಸಂಕ್ಷಿಪ್ತಗೊಳಿಸಬಹುದು – ಸಂಸ್ಕೃತದಲ್ಲಿ ಹೇಳುವ ಸಂಬಂಧ, ಅಭಿಧೇಯ ಮತ್ತು ಪ್ರಯೋಜನ.
ಸಂಬಂಧ ಎಂದರೆ ಭಗವಂತನೊಂದಿಗಿನ ನಮ್ಮ ಬಾಂಧವ್ಯ. ಅಭಿಧೇಯ ಎಂದರೆ ಆ ಬಾಂಧವ್ಯದಲ್ಲಿನ ಕ್ರಿಯೆ, ಮತ್ತು ಪ್ರಯೋಜನ ಎಂದರೆ ಅಂತಿಮ ಧ್ಯೇಯ ಅಥವಾ ಪರಿಪೂರ್ಣತೆ.
ಶ್ರೀಲ ಪ್ರಭುಪಾದರ ಪುಸ್ತಕಗಳಲ್ಲಿ ವಿವರಿಸಿರುವ ಜ್ಞಾನವು ವ್ಯಕ್ತಿಗೆ ತನ್ನ ಪ್ರಸ್ತುತ ಧರ್ಮ, ರಾಷ್ಟ್ರಿಯತೆ ಅಥವಾ ಸಾಂಸ್ಕೃತಿಕ ಸ್ಥಾನವನ್ನು ಬದಲಿಸಿಕೊಳ್ಳದೆ ಭಗವಂತನನ್ನು ಕುರಿತ ಗ್ರಹಿಕೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.
ಭಗವಂತನನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಭಗವಂತನೊಂದಿಗಿನ ಬಾಂಧವ್ಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಮತ್ತು ದೇವರಲ್ಲಿ ಹೇಗೆ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂಬ ವಿಜ್ಞಾನಕ್ಕೂ ಪಂಥೀಯ ಶ್ರದ್ಧೆಗೂ ಸಂಬಂಧವಿಲ್ಲ. ಇವು ಜಗತ್ತಿನ ಯಾವುದೇ ಧರ್ಮವು ನಿರಾಕರಿಸಲಾಗದಂತಹ ವಾಸ್ತವಾಂಶಗಳು.
ಭಗವಂತನ ಪವಿತ್ರ ನಾಮಗಳನ್ನು ಕುರಿತ ಆದ್ಯತೆಯು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಭಿನ್ನವಾಗಬಹುದು, ಪೂಜೆಯ ವಿಧಾನವೂ ಬದಲಾಗಬಹುದು ಮತ್ತು ವಿಧಿ, ಸಿದ್ಧಾಂತಗಳೂ ಭಿನ್ನವಾಗಬಹುದು. ಆದರೆ ಆಚರಿಸುವವರು ಭಗವಂತನನ್ನು ಕುರಿತ ಜ್ಞಾನವನ್ನು ಮತ್ತು ಭಗವತ್ ಪ್ರೇಮವನ್ನು ವಾಸ್ತವವಾಗಿ ಎಷ್ಟು ಬೆಳೆಸಿಕೊಂಡಿದ್ದಾರೆ ಎನ್ನುವುದೇ ಪರೀಕ್ಷೆಯಾಗಿದೆ.
ಭಗವಂತನನ್ನು ಪ್ರೀತಿಸುವುದನ್ನು ಕಲಿಯುವುದೇ ನಿಜವಾದ ಧರ್ಮ. ಭಗವಂತನನ್ನು ಪ್ರೀತಿಸುವುದು ಹೇಗೆ? ಅದೇ ಶ್ರೀಲ ಪ್ರಭುಪಾದರ ಪುಸ್ತಕಗಳಲ್ಲಿ ಕಾಣುವ ಬೋಧನೆಯ ಒಟ್ಟಾರೆ ಅಂಶ.
ಆತ್ಮ ಮತ್ತು ದೇಹದ ನಡುವಣ ವ್ಯತ್ಯಾಸ
ದೇಹದೊಂದಿಗೆ ಆತ್ಮವು ಅಂತ್ಯಗೊಳ್ಳುತ್ತದೆ ಎಂಬ ಕಲ್ಪನೆಯು ಆಧುನಿಕ ಲೌಕಿಕ ಚಿಂತನೆಯ ಶ್ರದ್ಧೆಯ ಪ್ರಮುಖ ವಿಷಯ, ವಸ್ತುವಾಗಿ ಉಳಿದಿದೆ. ವೈದಿಕ ಮೂಲ ಬೋಧನೆಯು ಪ್ರಜ್ಞೆ ಮತ್ತು ಬದುಕನ್ನು ಕುರಿತ ಆಧುನಿಕ ವೈಜ್ಞಾನಿಕ ಅಭಿಪ್ರಾಯಕ್ಕೆ ನೇರವಾಗಿ ವಿರುದ್ಧವಾಗಿಯೇ ನಿಲ್ಲುತ್ತದೆ. ಆ ಬೋಧನೆಯ ಪ್ರಕಾರ, ವೈಯಕ್ತಿಕ ಪ್ರಜ್ಞೆಯು ನರಜೀವ ವಿಜ್ಞಾನದ ನಿರ್ವಹಣೆಯ ಮೇಲೆ ಅವಲಂಬಿತವಾಗಿಲ್ಲ. ಆದರೆ ಸ್ವತಂತ್ರ ವಾಸ್ತವವಾಗಿ, ಶಾಶ್ವತವಾಗಿ ಅಸ್ತಿತ್ವದಲ್ಲಿ ಇರುತ್ತದೆ.
ನಮ್ಮಲ್ಲಿ ಪ್ರತಿಯೊಬ್ಬರೂ ಭಿನ್ನವಾದ ತಾತ್ಕಾಲಿಕ ದೈಹಿಕ ಉಡುಗೆಗಳಿಂದ ಮಾತ್ರ ಮುಚ್ಚಲ್ಪಟ್ಟ ಶಾಶ್ವತ ಆತ್ಮ. ಎಲ್ಲ ಮಾನವ ಸಮಾಜದ ಅತ್ಯುನ್ನತ ಕಲ್ಯಾಣ ಕಾರ್ಯವೆಂದರೆ ನಮ್ಮನ್ನು ನಿಜವಾದ ಆಧ್ಯಾತ್ಮಿಕ ಗುರುತಿಗೆ ಎಚ್ಚರಿಸುವಂತಹುದು ಮತ್ತು ಭಗವಂತನೊಂದಿಗಿನ ನಮ್ಮ ನಿಷ್ಕ್ರಿಯ ಬಾಂಧವ್ಯವನ್ನು ಎಚ್ಚರಿಸುವಂತಹುದು ಎಂದು ನಾವು ವಿವೇಚನೆಯಿಂದ ನಿರ್ಣಯಿಸಬಹುದು. ಆ ಚಟುವಟಿಕೆಯನ್ನೇ ಕೃಷ್ಣಪ್ರಜ್ಞೆ ಎಂದು ಕರೆಯುತ್ತಾರೆ.
ಮುಳುಗುತ್ತಿರುವ ವ್ಯಕ್ತಿಯ ಉಡುಪನ್ನು ಕಾಪಾಡುವಲ್ಲಿ ಹೆಮ್ಮೆಪಡುವಂತಹುದೇನೂ ಇಲ್ಲ, ಅಥವಾ ಲಾಭವೂ ಇಲ್ಲ. ಅದೇ ರೀತಿ ಅಂತ್ಯದಲ್ಲಿ ವೃದ್ಧಾಪ್ಯವನ್ನು ಮುಟ್ಟುವ, ರೋಗಕ್ಕೆ ತುತ್ತಾಗುವ ಮತ್ತು ಸಾಯುವ ಈ ತಾತ್ಕಾಲಿಕ ಲೌಕಿಕ ದೇಹದ ಸ್ಥಿತಿಯನ್ನು ಸುಧಾರಿಸುವ ಮಾನವೀಯ ಪ್ರಯತ್ನಗಳಲ್ಲಿಯೂ ಕೂಡ ವಿಶೇಷವೂ ಇಲ್ಲ, ಲಾಭವೂ ಇಲ್ಲ.
ಶ್ರೀಲ ಪ್ರಭುಪಾದ ಭಾಗವತದಲ್ಲಿ ಬರೆಯುತ್ತಾರೆ, “ನಿಜವಾದ ಆತ್ಮವು ಐಹಿಕ ದೇಹ ಮತ್ತು ಸೂಕ್ಷ್ಮ ಮನಸ್ಸನ್ನು ಮೀರಿದುದು. ಅದು ದೇಹ ಮತ್ತು ಮನಸ್ಸಿನ ಶಕ್ತಿ, ಕ್ರಿಯೆಗೆ ಮೂಲ. ಸುಪ್ತವಾದ ಆತ್ಮದ ಅಗತ್ಯವನ್ನು ಅರಿಯದೆ ದೇಹ ಮತ್ತು ಮನಸ್ಸಿನ ಸುಖದಿಂದಲೇ ವ್ಯಕ್ತಿಯು ಸಂತೋಷದಿಂದ ಇರುವುದು ಸಾಧ್ಯವಿಲ್ಲ. . . ಆಧ್ಯಾತ್ಮಿಕ ಆತ್ಮದ ಅಗತ್ಯವನ್ನು ಪೂರೈಸಬೇಕು. ಪಂಜರವನ್ನು ಶುದ್ಧ ಮಾಡುವುದರಿಂದಲೇ ಹಕ್ಕಿಯನ್ನು ತೃಪ್ತಿಪಡಿಸುವುದು ಸಾಧ್ಯವಿಲ್ಲ . . .
“ಪ್ರತಿಯೊಬ್ಬರಲ್ಲಿಯೂ ಭಗವಂತನಿಗಾಗಿ ಸುಪ್ತವಾದ ಪ್ರೀತಿ ಇದೆ. ಆದುದರಿಂದ ನಾವು ನಮ್ಮ ದಿವ್ಯ ಪ್ರಜ್ಞೆಯನ್ನು ಎಚ್ಚರಿಸುವಂತಹ ಚಟುವಟಿಕೆಗಳಲ್ಲಿ ತೊಡಗಬೇಕು. ದೇವೋತ್ತಮನ ದಿವ್ಯ ಲೀಲೆಗಳನ್ನು ಕೇಳುವುದರಿಂದ ಮತ್ತು ಜಪಿಸುವುದರಿಂದ ಅದು ಸಾಧ್ಯ.”
“ವೇದಗಳು ಮಾನವ ಜ್ಞಾನದ ರಚನೆಯಲ್ಲ. ವೈದಿಕ ಜ್ಞಾನವು ಕೃಷ್ಣನಿಂದ, ಆಧ್ಯಾತ್ಮಿಕ ಲೋಕದಿಂದ ಬರುತ್ತದೆ.”