ವೈದಿಕ ಸಾಹಿತ್ಯಗಳಲ್ಲಿ ಹೇಳಿರುವಂತೆ ಶ್ರೀಕೃಷ್ಣನು ಸುಮಾರು 500 ವರ್ಷಗಳ ಹಿಂದೆಯಷ್ಟೇ ಶ್ರೀ ಚೈತನ್ಯ ಮಹಾಪ್ರಭುಗಳ ರೂಪದಲ್ಲಿ ಅವತರಿಸಿದನು. ಇದೊಂದು ಸುವರ್ಣಾವತಾರ. ಮಹಾಪ್ರಭುಗಳು ಪಶ್ಚಿಮ ಬಂಗಾಲದ ಮಾಯಾಪುರದಲ್ಲಿ ಜನಿಸಿದರು. ಇವರು ಭಗವಂತನ ಪವಿತ್ರ ನಾಮ ಸ್ಮರಣೆಯಾದ ‘‘ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ’’ ಎಂಬ ಮಹಾಮಂತ್ರವು ಭಾರತದ ಸಮುದ್ರ ತಟವನ್ನು ದಾಟಿ ಪ್ರಪಂಚದಾದ್ಯಂತ ಪ್ರತಿಯೊಂದು ನಗರ ಮತ್ತು ಹಳ್ಳಿಗಳಲ್ಲಿ ಹರಡುತ್ತದೆಯೆಂಬ ಭವಿಷ್ಯವಾಣಿಯನ್ನು ನುಡಿದಿದ್ದರು.
ಶ್ರೀಲ ಪ್ರಭುಪಾದರು 1896, ಸೆಪ್ಟೆಂಬರ್ 1ನೇ ತಾರೀಖು (ಶ್ರೀಕೃಷ್ಣ ಜನ್ಮಾಷ್ಟಮಿಯ ಒಂದು ದಿನದ ನಂತರ) ಕಲ್ಕತ್ತಾದಲ್ಲಿ ಜನಿಸಿದರು. ಅವರು ಹುಟ್ಟಿದಾಗ ಜಾತಕ ನೋಡಿದ ಜ್ಯೋತಿಷಿ, ಪ್ರಭುಪಾದರು ಅವರ 70ನೆಯ ವಯಸ್ಸಿನಲ್ಲಿ ಸಮುದ್ರವನ್ನು ದಾಟಿ ಇಡೀ ಪ್ರಪಂಚದಾದ್ಯಂತ 108 ಶ್ರೀಕೃಷ್ಣ ದೇವಾಲಯಗಳನ್ನು ಸ್ಥಾಪಿಸುತ್ತಾರೆ ಎಂದು ಹೇಳಿದ.
ಶ್ರೀಲ ಪ್ರಭುಪಾದರು ತಮ್ಮ ಬಾಲ್ಯದಲ್ಲಿಯೇ ಶ್ರೀಕೃಷ್ಣನ ಪರಮ ಭಕ್ತರಾಗಿದ್ದರು. ಅವರ ತಂದೆ ಕೊಟ್ಟಿದ್ದ ಪುಟ್ಟ ರಾಧಾ-ಕೃಷ್ಣ ವಿಗ್ರಹಗಳನ್ನು ಅವರು ಬಾಲ್ಯದಿಂದಲೇ ಪೂಜಿಸುತ್ತಿದ್ದರು. ಅವರ ಆರನೆಯ ವಯಸ್ಸಿನಲ್ಲಿ ಪುರಿಯ ಜಗನ್ನಾಥ ರಥಯಾತ್ರೆಯ ಮಾದರಿಯಲ್ಲಿಯೇ ಒಂದು ಪುಟ್ಟ ರಥ ನಿರ್ಮಿಸಿ ಮನೆ ಮಂದಿಯೆಲ್ಲಾ ಸೇರಿ ರಥೋತ್ಸವ ಆಚರಿಸಿ ಆನಂದಪಟ್ಟರು. ಇದು 8 ದಿನಗಳ ಕಾಲ ತಡೆಯಿಲ್ಲದೆ ನಡೆಯಿತು.
ಶ್ರೀಲ ಪ್ರಭುಪಾದರು ತಮ್ಮ ಪದವಿ ವಿದ್ಯಾಭ್ಯಾಸವನ್ನು ಪ್ರಸಿದ್ಧ ‘ಸ್ಕಾಟಿಷ್ ಚರ್ಚ್‌ಸ್’ ಕಾಲೇಜಿನಲ್ಲಿ ಮುಗಿಸಿದರು. ಆ ಸಂದರ್ಭದಲ್ಲಿ ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತೀ ಠಾಕುರರ ದರ್ಶನ ಇವರಿಗಾಯಿತು. ಮುಂದೆ ಇವರೇ ಶ್ರೀಲ ಪ್ರಭುಪಾದರಿಗೆ ಆಧ್ಯಾತ್ಮಿಕ ಗುರುಗಳಾದರು. ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತೀ ಠಾಕುರ ಅವರು ಪ್ರಭುಪಾದರಿಗೆ ಕೃಷ್ಣಪ್ರಜ್ಞೆಯ ಬೋಧನೆಯನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹರಡಲು ಹೇಳಿದರು. ಈ ಒಂದು ಪ್ರಸ್ತಾವನೆಯೇ ಪ್ರಭುಪಾದರ ಹೃದಯ ತುಂಬಿ ಅವರು ತಮ್ಮ ಜೀವನವನ್ನೇ ಈ ಕಾರ್ಯಕ್ಕಾಗಿ ಮುಡುಪಾಗಿಸಿದರು.
ವೈವಾಹಿಕ ಜೀವನದಲ್ಲಿ ಅವರು ವ್ಯಾಪಾರದ ಜೊತೆ ಜೊತೆಯಲ್ಲೇ ತಮ್ಮ ಹೆಚ್ಚಿನ ಸಮಯ ಮತ್ತು ಹಣವನ್ನು ತಮ್ಮ ಆಧ್ಯಾತ್ಮಿಕ ಗುರುಗಳ ಧ್ಯೇಯ ಬೋಧನೆಗಳನ್ನು ಹರಡಲು ವಿನಿಯೋಗಿಸಿಕೊಂಡರು. ಅವರು ‘‘ಬ್ಯಾಕ್ ಟು ಗಾಡ್‌ಹೆಡ್’’ (ಮರಳಿ ಭಗವಂತನೆಡೆಗೆ) ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಅದನ್ನು ಸ್ವತಃ ಬರೆದು, ಮುದ್ರಿಸಿ ತಮ್ಮ ಕೈಯಿಂದಲೇ ಹಂಚುತ್ತಿದ್ದರು. ಝಾನ್ಸಿಯಲ್ಲಿ ಅವರು ಧರ್ಮಪ್ರಸಾರಕ್ಕಾಗಿ ‘ಲೀಗ್ ಆಫ್ ಡಿವೋಟೀಸ್’ (ಭಕ್ತರ ಒಕ್ಕೂಟ) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಭುಪಾದರ ತಾತ್ತ್ವಿಕ ಅರಿವು ಮತ್ತು ಭಕ್ತಿಯ ಬಗ್ಗೆ ಅವರ ಸಾಧನೆಯನ್ನು ಗುರುತಿಸಿ ಗೌಡೀಯ ವೈಷ್ಣವ ಸಂಘವು 1959 ರಲ್ಲಿ ‘‘ಭಕ್ತಿವೇದಾಂತ’’ ಎಂಬ ಬಿರುದನ್ನು ಕೊಟ್ಟು ಗೌರವಿಸಿತು.
ಪ್ರಭುಪಾದರು ತಮ್ಮ ಕೌಟುಂಬಿಕ ಜೀವನದಿಂದ ನಿವೃತ್ತಿಯನ್ನು ಹೊಂದಿ ಸಂನ್ಯಾಸವನ್ನು ಸ್ವೀಕರಿಸಿದರು. ಅನಂತರ ಅವರು ವೃಂದಾವನಧಾಮಕ್ಕೆ ತೆರಳಿ ಅಲ್ಲಿ ಸರಳ ಜೀವನವನ್ನು ನಡೆಸುತ್ತಾ ತಮ್ಮ ಅತ್ಯಮೂಲ್ಯ ಸಮಯವನ್ನು ಅಧ್ಯಯನ ಮತ್ತು ಬರವಣಿಗೆಯಲ್ಲಿಯೇ ಕಳೆದರು. ಅತ್ಯಮೂಲ್ಯ ಕೃತಿಯಾದ ಶ್ರೀಮದ್-ಭಾಗವತದ (ಭಾಗವತ ಪುರಾಣ) ಹದಿನೆಂಟು ಸಾವಿರ ಶ್ಲೋಕಗಳಿಗೆ ಅನುವಾದ, ತಾತ್ಪರ್ಯವನ್ನು ಬರೆಯಲು ಪ್ರಾರಂಭಿಸಿದರು.
ಅಮೆರಿಕನ್ನರನ್ನು ಅನುಸರಿಸುವುದು ಆಗಿನ ಕಾಲಕ್ಕೆ ಹೆಮ್ಮೆಯ ವಿಷಯವಾಗಿತ್ತು. ಆದುದರಿಂದ ಕೃಷ್ಣಪ್ರಜ್ಞೆಯನ್ನು ಮೊದಲು ಅಮೆರಿಕನ್ನರಿಗೆ ತಿಳಿಹೇಳಿ ಬೋಧಿಸಿದರೆ ಇಡೀ ಪ್ರಪಂಚವೇ ಅವರನ್ನು ಅನುಕರಿಸುತ್ತದೆ ಎನ್ನುವುದು ಶ್ರೀಲ ಪ್ರಭುಪಾದರ ಉದ್ದೇಶವಾಗಿತ್ತು. ಇದರಿಂದ ಪ್ರಪಂಚಕ್ಕೆ ಶ್ರೀಕೃಷ್ಣ ಭಕ್ತಿಯನ್ನು ಹರಡಬಹುದು. ಈ ಒಂದು ಯೋಚನೆಯಿಂದ ಶ್ರೀಲ ಪ್ರಭುಪಾದರು ಅಮೆರಿಕದ ಹೃದಯಸ್ಥಾನವಾದ ನ್ಯೂಯಾರ್ಕಿಗೆ 1965 ರ ಆಗಸ್ಟ್ 13 ರಂದು ದಾನಿಯೊಬ್ಬರ ನೆರವನ್ನು ಪಡೆದುಕೊಂಡು ಹಡಗಿನಲ್ಲಿ ಪ್ರಯಾಣ ಮಾಡಿದರು.
ಆಗ ಕೆಲವೇ ದಿನಗಳ ಹಿಂದೆ ಅವರು ತಮ್ಮ 69 ನೇ ಜನ್ಮದಿನವನ್ನು ಪೂರೈಸಿದ್ದರು. ಬಹುಪಾಲು ಜನ ಈ ವಯಸ್ಸಿಗೆ ಕೆಲಸದಿಂದಲೇ ನಿವೃತ್ತಿಯನ್ನು ಪಡೆದಿರುತ್ತಾರೆ. ಆದರೆ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ತಮ್ಮ ಧ್ಯೇಯ, ಉದ್ದೇಶ ಮತ್ತು ಕೃಷ್ಣಪ್ರಜ್ಞೆಯ ಪ್ರಚಾರಕ್ಕಾಗಿ ಈ ಇಳಿವಯಸ್ಸಿನಲ್ಲಿ ಪಾಶ್ಚಾತ್ಯ ದೇಶಕ್ಕೆ ಪಯಣ ಬೆಳೆಸಿದ್ದರು. ತಮ್ಮ ಪ್ರಯಾಣದ ಅವಧಿಯಲ್ಲಿ ಶ್ರೀಲ ಪ್ರಭುಪಾದರು ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಅವರಿಗೆ ಎರಡು ಸಲ ಹೃದಯಾಘಾತವಾಯಿತು.
ಪ್ರಯಾಣ ಮಾಡುತ್ತಿದ್ದ ಹಡಗು ಸರಕು ಸಾಮಗ್ರಿಗಳನ್ನು ಒಯ್ಯುವ ಸಾಮಾನ್ಯ ಹಡಗಾಗಿದ್ದರಿಂದ ಅಲ್ಲಿ ಯಾವ ವೈದ್ಯರ ಅಥವಾ ಔಷಧಿಗಳ ಅನುಕೂಲತೆಗಳೂ ಇರಲಿಲ್ಲ. ಇಂತಹ ಸಂದಿಗ್ಧತೆಯ ಪರಿಸ್ಥಿತಿಯಲ್ಲಿ ಒಂದು ರಾತ್ರಿ ಪ್ರಭುಪಾದರಿಗೆ ಒಂದು ಅಪೂರ್ವವಾದ ಕನಸು ಬಿತ್ತು. ಪರಮ ಪುರುಷ ಶ್ರೀಕೃಷ್ಣನು ದೋಣಿಗೆ ಹುಟ್ಟು ಹಾಕಿ ಮುನ್ನಡೆಸುತ್ತಿದ್ದ. ಅವನು ಅವರ ಬಳಿ ಅಂಜದೇ ಮುಂದೆ ಸಾಗಬೇಕೆಂದು ಹೇಳಿದನು. ಇದರಿಂದ ಪ್ರಭುಪಾದರಲ್ಲಿ ಅಪಾರವಾದ ಧೈರ್ಯ ಹೆಚ್ಚಿತು. ಎಲ್ಲ ಅಪಾಯಗಳಿಂದ ಪಾರಾಗಲು ಪರಮಾತ್ಮನ ರಕ್ಷಣೆ ತಮ್ಮ ಮೇಲೆ ಇದೆ ಎಂದು ಭಾವಿಸಿದರು.
ಮೂವತ್ತೇಳು ದಿನಗಳನಂತರ ಅವರು ನ್ಯೂಯಾರ್ಕ್ ನಗರವನ್ನು ತಲಪಿದರು. ಅಲ್ಲಿ ಯಾರೊಬ್ಬರ ಪರಿಚಯವೂ ಇರಲಿಲ್ಲ. ಅವರ ಬಳಿ ಕೇವಲ 40 ರೂಪಾಯಿಗಳು ಮಾತ್ರ ಇದ್ದವು. ಕೈಯಲ್ಲಿ ಕೆಲವು ಪುಸ್ತಕಗಳನ್ನು ತುಂಬಿಕೊಂಡಿದ್ದ ಕಬ್ಬಿಣದ ಟ್ರಂಕ್, ಒಂದು ಕೊಡೆ. ಆದರೆ ಒಬ್ಬ ಏಕಾಂಗಿ ಮನುಷ್ಯ ಯಾವ ಸಹಾಯ, ಸಹಕಾರವಿಲ್ಲದೆ, ತನ್ನ ಆರೋಗ್ಯವು ಸರಿಯಿಲ್ಲದೆ, ಗುರುತು ಪರಿಚಯವಿಲ್ಲದ, ಯಾವ ಕೃಷ್ಣ ಬೋಧನೆಯನ್ನೂ ಕೇಳರಿಯದ, ಕಂಡರಿಯದ ಬೃಹತ್ ಅಮೆರಿಕದಂತಹ ದೇಶದಲ್ಲಿ ಯಶಸ್ಸನ್ನು ಸಾಧಿಸಬಲ್ಲನೇ? ಎಂಬುದೇ ಪ್ರಶ್ನೆಯಾಗಿತ್ತು.
ಈ ಅಲ್ಪಾವಧಿಯಲ್ಲಿ ಅಂದರೆ 1965 ರಿಂದ 1977 ರ ತನಕ ಶ್ರೀಲ ಪ್ರಭುಪಾದರು ಶ್ರೀಕೃಷ್ಣ ಬೋಧನೆಯನ್ನು ಪ್ರಪಂಚದ ಪ್ರಮುಖ ನಗರಗಳಲ್ಲಿ ಹರಡುವ ಕಾರ್ಯಕ್ರಮವನ್ನು ಮಾಡಿದರು ಮತ್ತು ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಜನರು ಅದರ ಸದಸ್ಯರಾಗುವಂತೆ ಮಾಡಿದರು. ಪ್ರಭುಪಾದರ ಬಾಲ್ಯ ಜೀವನದಲ್ಲಿ ಹೇಳಲಾಗಿದ್ದ ಭವಿಷ್ಯವಾಣಿಯು ಸತ್ಯವಾಯಿತು. ಅವರು 108 ಶ್ರೀಕೃಷ್ಣ ದೇವಾಲಯಗಳನ್ನು ಸ್ಥಾಪಿಸಿದರು. ಅದರಲ್ಲಿ ಮುಖ್ಯವಾಗಿ ಪ್ರಪಂಚದಲ್ಲಿಯೇ ಪ್ರಮುಖ ನಗರವಾದ ನ್ಯೂಯಾರ್ಕ್‌ನಲ್ಲಿ 13 ಅಂತಸ್ತಿನ ಕೃಷ್ಣಮಂದಿರ ಕಟ್ಟಡವೂ ಒಂದು.
ತಮ್ಮ ಧ್ಯೇಯ ಸಾಧನೆಗಾಗಿ ಪ್ರಭುಪಾದರು ಇಡೀ ಜಗತ್ತನ್ನು ಹದಿನಾಲ್ಕು ಸಲ ಪರ್ಯಟನೆ ಮಾಡಿ ಪ್ರಚಾರ ಕಾರ್ಯವನ್ನು ನಡೆಸಿದರು. ಹೀಗೆ ಜಗತ್ತಿನ ಮನೆ ಮನೆಯಲ್ಲೂ, ಮನಸ್ಸಿನಲ್ಲೂ ‘ಹರೇ ಕೃಷ್ಣ’ ಎಂಬ ನಾಮಜಪವನ್ನು ತುಂಬುವುದರ ಮೂಲಕ ಶ್ರೀ ಚೈತನ್ಯ ಮಹಾಪ್ರಭುಗಳು 500 ವರ್ಷಗಳ ಹಿಂದೆಯೇ ನುಡಿದ ಭವಿಷ್ಯವಾಣಿಯನ್ನು ಸತ್ಯವನ್ನಾಗಿಸಿದರು.
ಶ್ರೀಲ ಪ್ರಭುಪಾದರು ತಮ್ಮ 70 ರಿಂದ 82ನೆಯ ವಯಸ್ಸಿನ ಅವಧಿಯಲ್ಲಿ 70 ಸಂಪುಟ ಪುಸ್ತಕಗಳನ್ನು ಬರೆದು ಮುದ್ರಿಸಿದ್ದಾರೆ. ಆ ಪುಸ್ತಕಗಳು ಈಗ 28 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡು, ಕೋಟ್ಯಾಂತರ ಸಂಖ್ಯೆಗಳಲ್ಲಿ ಜಗತ್ತಿನಾದ್ಯಾಂತ ಮಾರಾಟವಾಗಿವೆ. ಪ್ರಭುಪಾದರು ಸಾವಿರಾರು ಪ್ರವಚನಗಳನ್ನು ನೀಡಿದ್ದಾರೆ; ಸಾವಿರಾರು ಪತ್ರ, ಲೇಖನಗಳನ್ನು ಬರೆದಿದ್ದಾರೆ; ತಮ್ಮ ಅನುಯಾಯಿಗಳೊಡನೆ ಸಾವಿರಾರು ಸಂವಾದಗಳಲ್ಲಿ ಭಾಗವಹಿಸಿದ್ದಾರೆ.
ಅಪೂರ್ವ ವಿಚಾರದ ವಿದ್ವತ್ತನ್ನು ತಮ್ಮ ಟೀಕೆ ಟಿಪ್ಪಣಿಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಅವರು ಪ್ರಮುಖ ವಿದ್ವಾಂಸರು, ಪ್ರಾಧ್ಯಾಪಕರು, ಸಾಮಾಜಿಕ ಕಾರ್ಯಕರ್ತರು, ರಾಜಕೀಯ ತಜ್ಞರು ಮುಂತಾದವರ ಹೃದಯವನ್ನು ತೀವ್ರವಾಗಿ ಆಕರ್ಷಿಸಿದ್ದಾರೆ. ಧರ್ಮ, ತತ್ತ್ವಶಾಸ ಮತ್ತು ಸಂಸ್ಕೃತಿಗೆ ಪ್ರಭುಪಾದರ ಕೊಡುಗೆಗಳು ಅಪಾರವಾದುದು. ಶಿಕ್ಷಣವೇತ್ತರು, ವಿದ್ವಾಂಸರು, ಧಾರ್ಮಿಕ ಸುಧಾರಕರು, ರಾಜಕೀಯ ಮತ್ತು ಸಾಮಾಜಿಕ ಧುರೀಣರು – ಇವರೆಲ್ಲರೂ ಶ್ರೀಕೃಷ್ಣನ ಬೋಧನೆಗಳಿಂದ ಆಕರ್ಷಿತರಾಗಿದ್ದಾರೆ.