ಬೆಳಗಿನ ಪೂಜೆ

ಬ್ರಹ್ಮ ಮುಹೂರ್ತದ ಶುಭ ವೇಳೆಯಲ್ಲಿ ಮಾಡುವ ಆಧ್ಯಾತ್ಮಿಕ ಚಟುವಟಿಕೆಗಳು ಹೆಚ್ಚು ಪರಿಣಾಮಕಾರಿ ಎಂದು ಧರ್ಮಗ್ರಂಥಗಳು ಶಿಫಾರಸು ಮಾಡಿವೆ. ಭಕ್ತರು ಮುಂಜಾನೆ ಬೇಗನೆ ಏಳಬೇಕು ಮತ್ತು ಭಕ್ತಿಸೇವೆ ಅರ್ಪಿಸಲು ಸಿದ್ಧರಾಗಬೇಕು ಎಂದು ಶ್ರೀಲ ಪ್ರಭುಪಾದರು ಕಡ್ಡಾಯ ಮಾಡಿದ್ದರು. ಕೃಷ್ಣಪ್ರಜ್ಞೆಯ ತತ್ತ್ವಗಳನ್ನು ಅನುಸರಿಸುವ ಎಲ್ಲ ಭಕ್ತರೂ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಭಕ್ತರು ಮುಂಜಾನೆ 3.30 ಗಂಟೆಗೆ ಏಳುತ್ತಾರೆ, ಧರ್ಮಗ್ರಂಥಗಳಲ್ಲಿ ಶಿಫಾರಸು ಮಾಡಿರುವಂತೆ ಶುದ್ಧೀಕರಣ ಮಾಡಿಕೊಳ್ಳುತ್ತಾರೆ, ಶುಭ್ರ ಉಡುಪು ತೊಡುತ್ತಾರೆ, ತಮ್ಮ ದೇಹದ 12 ಭಾಗಗಳಲ್ಲಿ ಊರ್ಧ್ವ ಪುಂಡ್ರ ಅಥವಾ ವಿಷ್ಣುತಿಲಕ ಧಾರಣೆ ಮಾಡಿಕೊಳ್ಳುತ್ತಾರೆ ಮತ್ತು ದೇವೋತ್ತಮನ ದರ್ಶನ ಪಡೆಯಲು ಅತ್ಯಂತ ಉತ್ಸಾಹದಿಂದ ಮಂದಿರದಲ್ಲಿ ಸೇರುತ್ತಾರೆ. ಬೆಳಗಿನ ಪೂಜಾ ಕಾರ್ಯವು 4.30 ಕ್ಕೆ ಆರಂಭವಾಗಿ 9.15 ಗಂಟೆಗೆ ಪೂರ್ಣಗೊಳ್ಳುತ್ತದೆ.

ಬೆಳಗ್ಗೆ 4.30 – ಮಂಗಳ ಆರತಿ

mangalarati
ಸೂರ್ಯೋದಯಕ್ಕೆ ಒಂದೂವರೆ ತಾಸು ಮುನ್ನ ಮಂದಿರದಲ್ಲಿ ಕ್ರಮಬದ್ಧವಾಗಿ ಮಂಗಳ ಆರತಿ ಇರಬೇಕು ಎಂದು ಶ್ರೀಲ ಪ್ರಭುಪಾದರು ಕಡ್ಡಾಯಗೊಳಿಸಿದ್ದಾರೆ.

ಬೆಳಗ್ಗೆ 3.45 ಗಂಟೆಗೆ ದೇವರಿಗೆ ಜಾಗರಣ ಸೇವೆಯನ್ನು ಅರ್ಪಿಸಲಾಗುತ್ತದೆ (ದೇವರನ್ನು ಎಚ್ಚರಗೊಳಿಸುವುದು). ಅದರ ಅನಂತರ ಬಾಲ್ಯ ಭೋಗವನ್ನು ಅರ್ಪಿಸುವುದು. ಅದಾದ ಮೇಲೆ ದಿನದ ಮೊದಲ ಆರತಿ, ಮಂಗಳ ಆರತಿಯನ್ನು ಸ್ವೀಕರಿಸಲು ಪ್ರಭುವು ಸಿದ್ಧನಾಗುತ್ತಾನೆ. ಭಗವಂತನ ಪ್ರಥಮ ದರ್ಶನಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಗರ್ಭಗುಡಿಯನ್ನು ತೆರೆಯಲಾಗುತ್ತಿದೆಯೆಂದು ಪ್ರಕಟಿಸಲು ಬೆಳಗ್ಗೆ 4.30 ಗಂಟೆಗೆ ಶಂಖವನ್ನು ಊದಲಾಗುವುದು. ಧೂಪ, ದೀಪ, ಜಲ, ಅರ್ಘ್ಯ, ಪುಷ್ಪ, ಚಾಮರ ಮತ್ತು ವ್ಯಜನಗಳನ್ನು (ನವಿಲು ಗರಿಗಳಿಂದ ಮಾಡಿದ ಬೀಸಣಿಗೆ) ಭಗವಂತನಿಗೆ ಅರ್ಪಿಸಿ ಭವ್ಯವಾದ ಆರತಿಯನ್ನು ಮಾಡಲಾಗುವುದು. ಆಧ್ಯಾತ್ಮಿಕ ಗುರುಗಳನ್ನು ಕೊಂಡಾಡಿ ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರು ರಚಿಸಿರುವ ಗುರು ಅಷ್ಟಕವನ್ನು ಭಕ್ತರು ಹಾಡುವರು.

ಬೆಳಗ್ಗೆ 4.45 – ಶ್ರೀ ತುಳಸಿ ಪೂಜೆ

tulasi archanaತುಳಸಿಯು ಶ್ರೀ ಕೃಷ್ಣನ ಶಾಶ್ವತ ಸತಿ ಮತ್ತು ಅತ್ಯಂತ ಪರಿಶುದ್ಧ ಭಕ್ತೆ. ಆದುದರಿಂದ ವೈಷ್ಣವರು ತುಳಸಿ ಗಿಡವನ್ನು ಪೂಜಿಸುವರು. ಶ್ರದ್ಧೆಯಿಂದ ಅವಳನ್ನು ಪೂಜಿಸುವುದರಿಂದಲೇ ಭಕ್ತರು ಲೌಕಿಕ ಸಂಕಷ್ಟಗಳಿಂದ ಮುಕ್ತರಾಗಬಹುದು. ಪ್ರತಿ ದಿನ ಬೆಳಗ್ಗೆ 4.45 ಮತ್ತು ಸಂಜೆ 6.45 ಗಂಟೆಗೆ ಮುಖ್ಯ ಮಂದಿರದಲ್ಲಿ ತುಳಸಿ ಪೂಜೆಯನ್ನು ನೆರವೇರಿಸಲಾಗುವುದು. ತುಳಸಿ ಪೂಜೆಯಲ್ಲಿ ಮೂರು ಪ್ರಮುಖ ಅಂಶಗಳಿವೆ :

  1. ತುಳಸಿ ಪ್ರಣಾಮ : ಭಕ್ತರು ತುಳಸಿ ಪ್ರಣಾಮ ಮಂತ್ರವನ್ನು ಮೂರು ಬಾರಿ ಜಪಿಸಿ ತುಳಸಿಗೆ ನಮಸ್ಕರಿಸುವರು.
  2. ತುಳಸಿ ಆರತಿ : ಭಕ್ತರು ತುಳಸಿ ಕೀರ್ತನೆಯನ್ನು ಹಾಡುತ್ತಿರುವಂತೆಯೇ ತುಳಸಿ ದೇವಿಗೆ ಧೂಪ, ದೀಪ ಮತ್ತು ಪುಷ್ಪಗಳನ್ನು ಅರ್ಪಿಸಲಾಗುವುದು.
  3. ತುಳಸಿ ಪ್ರದಕ್ಷಿಣೆ : ಭಕ್ತರು ಪ್ರದಕ್ಷಿಣೆ ಮಂತ್ರವನ್ನು ಜಪಿಸುತ್ತ ತುಳಸಿ ದೇವಿ ಪ್ರದಕ್ಷಿಣೆಯನ್ನು ಮಾಡುವರು. ತುಳಸಿ ದೇವಿಗೆ ಪ್ರದಕ್ಷಿಣೆ ಕೈಗೊಂಡಾಗ ವ್ಯಕ್ತಿಯು ಮಾಡಿರಬಹುದಾದ ಪಾಪ-ಕರ್ಮಗಳು ಪ್ರತಿ ಹೆಜ್ಜೆಯಲ್ಲಿಯೂ ನಾಶವಾಗುತ್ತವೆ. ಭಕ್ತರು ಪುನಃ ತುಳಸಿ ಪ್ರಣಾಮ ಮಂತ್ರವನ್ನು ಜಪಿಸುತ್ತ ಗೌರವವನ್ನು ಸಲ್ಲಿಸುವರು.

ಬೆಳಗ್ಗೆ 5.00 ಗಂಟೆ – ಶ್ರೀ ನರಸಿಂಹ ಆರತಿ

Prahlada Narasimha Deityದೇವೋತ್ತಮನು ತನ್ನ ಭಕ್ತ ಪ್ರಹ್ಲಾದನನ್ನು ಕಾಪಾಡಲು ಅರ್ಧ ಸಿಂಹ ಮತ್ತು ಅರ್ಧ ಮಾನವ ರೂಪಿ ನರಸಿಂಹನಾಗಿ ಅವತರಿಸಿದ. ಮಹಾ ಅಸುರ ಹಿರಣ್ಯಕಶಿಪುವಿನ ಕಡುಕೋಪಕ್ಕೆ ಪ್ರಹ್ಲಾದನು ಗುರಿಯಾಗಿದ್ದ. ಶ್ರೀ ನರಸಿಂಹನು ಯಾವಾಗಲೂ ತನ್ನ ಭಕ್ತರನ್ನು ಕಾಪಾಡುವನು ಮತ್ತು ಅವರ ಭಕ್ತಿಸೇವೆಗೆ ಬರುವ ಅಡ್ಡಿಗಳನ್ನು ನಿವಾರಿಸುವನು.

ತಮ್ಮ ಸೇವೆಯನ್ನು ಆರಂಭಿಸುವ ಮುನ್ನ ಭಕ್ತರು ಅವನಿಗೆ ಪ್ರಾರ್ಥನೆ ಸಲ್ಲಿಸುವರು. ಭಕ್ತರು ನರಸಿಂಹ ಕೀರ್ತನೆಯನ್ನು ಹಾಡುತ್ತಿದಂತೆಯೇ ಆರತಿಯನ್ನು ಮಾಡಲಾಗುವುದು. ಅನಂತರ ಅವರು ನರಸಿಂಹ ಕವಚವನ್ನು ಜಪಿಸುವರು. (ಇದನ್ನು ಪ್ರಹ್ಲಾದ ಮಹಾರಾಜನು ರಚಿಸಿದ್ದಾನೆ ಮತ್ತು ಬ್ರಹ್ಮಾಂಡ ಪುರಾಣದಲ್ಲಿ ಇದೆ.)

ಬೆಳಗ್ಗೆ 5.10 – ಶ್ರೀ ಶ್ರೀನಿವಾಸನಿಗೆ ಸುಪ್ರಭಾತ ಸೇವೆ

srinivasa govindaಭಗವಂತನು ಎಚ್ಚರಗೊಳ್ಳುತ್ತಿದಂತೆಯೇ ಅವನನ್ನು ಸ್ವಾಗತಿಸಲು ಭಕ್ತರು ಪುರುಷಸೂಕ್ತ, ಬ್ರಹ್ಮ ಸಂಹಿತ, ಭಾಗವತದ ಆಯ್ದ ಪ್ರಾರ್ಥನೆಗಳು, ಸ್ವಸ್ತಿ ವಚನ, ಶ್ರೀ ವೆಂಕಟೇಶ ಸುಪ್ರಭಾತ ಮುಂತಾದ ವೈದಿಕ ಶ್ಲೋಕಗಳನ್ನು ಪಠಿಸುವರು. ಭಕ್ತರು ಭಗವಂತನನ್ನು ಕೊಂಡಾಡುತ್ತಿರುವಾಗ ಪೂರ್ಣ ಆರತಿಯನ್ನು ಮಾಡಲಾಗುವುದು.

ಬೆಳಗ್ಗೆ 5.20 – ನಿತ್ಯ ಷೋಡಶ ಉಪಚಾರ ಪೂಜೆ ಮತ್ತು ಜಪ ಧ್ಯಾನ

ಭಕ್ತರು ಮುಖ್ಯ ಮಂದಿರದಲ್ಲಿ ಸೇರುವರು ಮತ್ತು ಹರೇ ಕೃಷ್ಣ ಮಹಾಮಂತ್ರದ ಸಂಕೀರ್ತನೆ ಮಾಡುವರು. ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಪವಿತ್ರ ನಾಮಗಳನ್ನು ಜಪಿಸುವುದು ಯುಗಧರ್ಮ. ನಾವು ಪ್ರತಿದಿನ ಕೊನೆ ಪಕ್ಷ 16 ಸುತ್ತು (ಒಂದು ಸುತ್ತು = 108 ಬಾರಿ) ಮಹಾಮಂತ್ರವನ್ನು ಜಪಿಸಬೇಕೆಂದು ಶ್ರೀಲ ಪ್ರಭುಪಾದರು ಶಿಫಾರಸು ಮಾಡಿದ್ದರು. ಜಪಿಸುವುದರಿಂದ ವ್ಯಕ್ತಿಯು ತತ್‌ಕ್ಷಣ ಮಂಗಳಕರನಾಗುತ್ತಾನೆ ಮತ್ತು ಲೌಕಿಕ ಗುಣಗಳ ಸೋಂಕಿಗೆ ಅಲೌಕಿಕನಾಗುತ್ತಾನೆ.

ಗರ್ಭಗುಡಿಯ ಮುಚ್ಚಿದ ಬಾಗಿಲ ಒಳಗಡೆ ಶ್ರೀ ಶ್ರೀ ರಾಧಾ ಕೃಷ್ಣಚಂದ್ರ, ಶ್ರೀ ಶ್ರೀ ಕೃಷ್ಣ ಬಲರಾಮ ಮತ್ತು ಶ್ರೀ ಶ್ರೀ ನಿತಾಯ್ ಗೌರಾಂಗರ ಕೌತುಕ ಮೂರ್ತಿಗಳಿಗೆ ಷೋಡಶೋಪಚಾರ ಸೇವೆ ಸಲ್ಲಿಸಲಾಗುತ್ತದೆ. (16 ಉಪಚಾರಗಳಿಂದ ವಿಗ್ರಹಗಳನ್ನು ಪೂಜಿಸುವುದು.) ಷೋಡಶೋಪಚಾರ ಸೇವೆಯ ಭಾಗವಾಗಿ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ ಮಾಡಲಾಗುವುದು ಮತ್ತು ವೈಭವದ ಉಡುಗೆಗಳಿಂದ ಅತ್ಯಂತ ಆಕರ್ಷಿತವಾಗಿ ಅಲಂಕರಿಸಲಾಗುವುದು. ಮೂಲ ವಿಗ್ರಹಗಳನ್ನೂ ವೈಭವದ ಉಡುಗೆ ಮತ್ತು ಹಾರಗಳಿಂದ ಅಲಂಕರಿಸಲಾಗುವುದು.

ಬೆಳಗ್ಗೆ 7.15 – ಶೃಂಗಾರ ದರ್ಶನ ಆರತಿ ಮತ್ತು ಗುರು ಪೂಜೆ

ಭಗವಂತನ ದರ್ಶನವನ್ನು ಸಾರಲು 7.15 ಗಂಟೆಗೆ ಶಂಖವನ್ನು ಊದಲಾಗುವುದು. ಬಾಗಿಲುಗಳು ತೆರೆದುಕೊಳ್ಳುತ್ತವೆ ಮತ್ತು ಧೂಪದ ಸುವಾಸನೆಯು ಮುಖ್ಯ ಮಂದಿರದ ಆಂಗಳದಲ್ಲಿ ವ್ಯಾಪಿಸುತ್ತದೆ. ಭಗವಂತನ ಶೃಂಗಾರ ದರ್ಶನ ಆರತಿಯನ್ನು ವೀಕ್ಷಿಸಲು ಮುಖ್ಯ ಮಂದಿರದಲ್ಲಿ ಉಪಸ್ಥಿತರಾಗಿರುವುದು ನಿಜಕ್ಕೂ ಅಪೂರ್ವ ಅನುಭವ.

ಆರತಿಯ ಅನಂತರ ಭಕ್ತರು ಶ್ರೀಲ ಪ್ರಭುಪಾದರ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ಗರ್ಭಗುಡಿಗೆ ಪ್ರದಕ್ಷಿಣೆ ಮಾಡುತ್ತಾರೆ. ಶ್ರೀಲ ಪ್ರಭುಪಾದರು ಚರಣಾಮೃತ ಮತ್ತು ಶಟಾರಿಯನ್ನು ಸ್ವೀಕರಿಸುವರು. ಅನಂತರ ಅವರು ಶ್ರೀ ಶ್ರೀ ಪ್ರಹ್ಲಾದ ನರಸಿಂಹ ಮತ್ತು ಶ್ರೀ ಶ್ರೀ ಶ್ರೀನಿವಾಸ ಗೋವಿಂದ ಮಂದಿರಗಳಿಗೆ ಭೇಟಿ ನೀಡುವರು. ಅಲ್ಲಿ ಅವರು ಶೃಂಗಾರ ದರ್ಶನ ಆರತಿಯಲ್ಲಿ ಪಾಲ್ಗೊಳ್ಳುವರು. ಈ ಮಂದಿರಗಳಲ್ಲಿ ಆರತಿಯಾದ ಮೇಲೆ ಶ್ರೀಲ ಪ್ರಭುಪಾದರು ಮುಖ್ಯ ಮಂದಿರಕ್ಕೆ ಹಿಂದಿರುಗುವರು ಮತ್ತು ಭಕ್ತರು ಸಲ್ಲಿಸುವ ವಿವರವಾದ ಆರತಿ, ಗುರು ಪೂಜೆಯನ್ನು ಸ್ವೀಕರಿಸುವರು.

ಬೆಳಗ್ಗೆ 8.30 – ಭಾಗವತ ಉಪನ್ಯಾಸ

srimad bhagavatamಪ್ರತಿ ದಿನ ಬೆಳಗ್ಗೆ 8.30 ಕ್ಕೆ ಭಾಗವತವನ್ನು ಕುರಿತಂತೆ ಉಪನ್ಯಾಸವಿರುತ್ತದೆ. ಗುರು ಪೂಜೆಯ ಅನಂತರ ಭಕ್ತರು ಭಗವಂತನ ಚರಣಾಮೃತವನ್ನು ಸ್ವೀಕರಿಸುವರು ಮತ್ತು ಉಪನ್ಯಾಸ ಕೊಠಡಿಯಲ್ಲಿ ಸೇರುವರು. ಈ ರೀತಿ ಕ್ರಮಬದ್ಧವಾಗಿ ಕೇಳುವುದರಿಂದ ನಮ್ಮ ಹೃದಯಗಳು ಪರಿಶುದ್ಧವಾಗುತ್ತವೆ ಮತ್ತು ಭಕ್ತಿಭಾವ ಬೆಳೆಯುತ್ತದೆ.

ಈ ಬೆಳಗಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತ್ತು ನಿಮ್ಮ ಆನಂದವನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ನಾವು ನಿಮ್ಮನ್ನು ಕೋರುತ್ತೇವೆ.

ಅಪರಾಹ್ನ 12.30 – ರಾಜಭೋಗ ಆರತಿ

ಧೂಪ, ದೀಪ, ಅರ್ಘ್ಯ, ವಸ್ತ್ರ, ಪುಷ್ಪ, ಚಾಮರ ಮತ್ತು ವ್ಯಜನಗಳೊಂದಿಗೆ ಭಗವಂತನಿಗೆ ರಾಜಭೋಗ ಆರತಿಯನ್ನು ಸಮರ್ಪಿಸಲಾಗುವುದು. ಈ ಆರತಿಗೆ ಮುನ್ನ, 12 ಗಂಟೆಗೆ ಭಗವಂತನಿಗೆ ರಾಜಭೋಗ ನೈವೇದ್ಯವನ್ನು ಅರ್ಪಿಸಲಾಗುವುದು. ರಾಜಭೋಗದಲ್ಲಿ ಸಿಹಿ ಭಕ್ಷಗಳು, ಕೋಸಂಬರಿ, ಪಲ್ಯಗಳು, ಅನ್ನ, ರೊಟ್ಟಿ, ದಾಲ್, ಹಣ್ಣಿನ ರಸ ಮುಂತಾದ ವೈವಿಧ್ಯಮಯ ತಿನಿಸುಗಳಿರುತ್ತವೆ.

ಸಾಯಂಕಾಲದ ಪೂಜೆ

ಸಂಜೆ 4.15- ಧೂಪ ಆರತಿ

ಧೂಪದ ಆರತಿಗಾಗಿ ಗರ್ಭಗುಡಿಯ ಬಾಗಿಲನ್ನು ತೆರೆದಾಗ ಭಗವಂತನು ಭಕ್ತರಿಗೆ ದರ್ಶನ ನೀಡುವನು. ಧೂಪ, ಪುಷ್ಪ, ಚಾಮರ ಮತ್ತು ವ್ಯಜನಗಳ ಸೇವೆಯನ್ನು ಭಗವಂತನಿಗೆ ಅರ್ಪಿಸಲಾಗುವುದು.

ಸಂಜೆ 6.45 – ಶ್ರೀ ತುಳಸಿ ಪೂಜೆ

ಮುಖ್ಯ ಮಂದಿರದಲ್ಲಿ ಪ್ರಣಾಮ, ತುಳಸಿ ಆರತಿ ಮತ್ತು ಪ್ರದಕ್ಷಿಣೆಗಳ ಮೂಲಕ ತುಳಸಿ ಪೂಜೆಯನ್ನು ಮಾಡಲಾಗುವುದು.

ಸಂಜೆ 7.00 ಗಂಟೆ – ಸಂಧ್ಯಾ ಆರತಿ

ಸಂಧ್ಯಾ ಆರತಿಯನ್ನು ಆನಂದಿಸುವುದು ಭಕ್ತರಿಗೆ ಆಧ್ಯಾತ್ಮಿಕವಾಗಿ ಅಪೂರ್ವವಾದ ಅನುಭವ. ಸುಮುಧುರ ಸಂಗೀತದೊಂದಿಗೆ ಗೌರ ಆರತಿ ಹಾಡಿನ ಜೊತೆಯಲ್ಲಿ ಭಗವಂತನಿಗೆ ಧೂಪ, ದೀಪ, ಅರ್ಘ್ಯ, ವಸ್ತ್ರ, ಪುಷ್ಪ, ಚಾಮರ ಮತ್ತು ವ್ಯಜನಗಳನ್ನು ಅರ್ಪಿಸುವುದನ್ನು ನೋಡಿಯೇ ಆನಂದಿಸಬೇಕು.

ರಾತ್ರಿ 8.15 ಗಂಟೆಗೆ – ಶಯನ ಆರತಿ

ದಿನದ ಕೊನೆಯ ಆರತಿಯಾದ ಶಯನ ಆರತಿಯು ಮಂದಿರಕ್ಕೆ ಭೇಟಿ ನೀಡುವವರಿಗೆ ಅಪೂರ್ವ ದೈವೀ ಅನುಭವವನ್ನು ನೀಡುತ್ತದೆ. ಭಗವಂತನಿಗೆ ಧೂಪ, ದೀಪ, ಪುಷ್ಪ ಮುಂತಾದವುಗಳನ್ನು ಅರ್ಪಿಸಲಾಗುವುದು. ಶ್ರೀಮತಿ ರಾಧಾರಾಣಿ ಮತ್ತು ಶ್ರೀ ಕೃಷ್ಣನ ಚರಣ ಕಮಲಗಳಿಗೆ ಸೇವೆ ಸಲ್ಲಿಸುವುದನ್ನು ಕುರಿತ ಸೊಗಸಾದ ಹಾಡನ್ನು ಭಕ್ತರು ಸುಮಧುರ ಸಂಗೀತದೊಂದಿಗೆ ಹಾಡುವರು.

ಆರತಿಯಾದ ಮೇಲೆ ಭವ್ಯವಾದ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಭಗವಂತನ ಕೌತುಕ ವಿಗ್ರಹಗಳನ್ನು ಪಲ್ಲಕ್ಕಿಯಲ್ಲಿ ಇಟ್ಟು ಗರ್ಭಗುಡಿಯ ಸುತ್ತ ಕರೆದೊಯ್ಯಲಾಗುವುದು ಮತ್ತು ಪೂಜಿಸಲಾಗುವುದು. ಹರಿನಾಮ ಸಂಕೀರ್ತನೆ ಜೊತೆಗಿನ ಪಲ್ಲಕ್ಕಿ ಉತ್ಸವವು ಕಣ್ಣಿಗೆ ಆನಂದವನ್ನು ನೀಡುವುದಷ್ಟೇ ಅಲ್ಲ, ಆಧ್ಯಾತ್ಮಿಕಕಾಗಿಯೂ ಉನ್ನತಕ್ಕೇರುವ ಅನುಭವ ಕೂಡ.

ಕೌತುಕ ಮೂರ್ತಿಗಳನ್ನು ವಿಶ್ರಾಂತಿಗೆಂದು ಶಯನ ಕೊಠಡಿಗೆ ಕರೆದುಕೊಂಡು ಹೋದಮೇಲೆ ದಿನದ ದರ್ಶನಕ್ಕೆ ತೆರೆ ಬೀಳುತ್ತದೆ.