ಸುಖ, ಉತ್ತಮ ಆರೋಗ್ಯ, ನೆಮ್ಮದಿ ಮತ್ತು ಎಲ್ಲ ಸದ್ಗುಣಗಳು ಉಳ್ಳ ಬದುಕಿನ ಅವಕಾಶವನ್ನು
ದೈವ ಪ್ರಜ್ಞೆಯ ಮೂಲಕ ಮಾನವ ಸಮಾಜಕ್ಕೆ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ.

ಮಾನವ ಜನ್ಮದ ಧ್ಯೇಯ ಏನು? ಲೌಕಿಕ ಅಸ್ತಿತ್ವದ ದುಃಖಗಳನ್ನು ಕೊನೆಗಾಣಿಸುವುದು ಮತ್ತು ಪರಮಾನಂದದ ಬದುಕನ್ನು ಪಡೆಯುವುದೇ ಮಾನವ ಜನ್ಮದ ಧ್ಯೇಯ. ನಾವು ಸತತವಾಗಿ ಸುಖವನ್ನು ಹುಡುಕುತ್ತಿದ್ದೇವೆ. ಆದರೆ ನಾವು ನಮ್ಮ ಪ್ರಯತ್ನದಲ್ಲಿ ಸೋಲುತ್ತೇವೆ. ನಮಗೆ ಸುಖದ ಒಂದು ಕ್ಷಣಿಕ ನೋಟ ಲಭಿಸಬಹುದು. ಆದರೆ ಅದು ಸದಾಕಾಲ ಇರುವುದಿಲ್ಲ. ನಮಗೆ ನೋವುಗಳು ಬೇಡ. ಆದರೆ ನಮಗೆ ಅದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.

ನಾವು ಆಧ್ಯಾತ್ಮಿಕ ಜೀವಿಗಳು, ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಅವಿಭಾಜ್ಯ ಅಂಗ ಮತ್ತು ಸ್ವಭಾವತಃ ನಾವು ಸುಖ ಸಂತೋಷ ಉಳ್ಳವರು, ಆನಂದಮಯೋ ಅಭ್ಯಾಸಾತ್  (ವೇದಾಂತ ಸೂತ್ರ). ಹಾಗಾದರೆ ನಾವು ಏಕೆ ನೋವು ಅನುಭವಿಸಬೇಕು? ಕಳೆದು ಹೋಗಿರುವ ಸುಖವನ್ನು ಪುನಃ ಕಂಡುಕೊಳ್ಳುವುದು ಹೇಗೆ ಮತ್ತು ಆನಂದಮಯ ಜೀವನವನ್ನು ನಡೆಸುವುದು ಹೇಗೆ?

ನಮ್ಮ ಆಧ್ಯಾತ್ಮಿಕ ಗುರು ಮತ್ತು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ (ಇಸ್ಕಾನ್) ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರು ಸುಖ ಮತ್ತು ನೆಮ್ಮದಿಯ ಬದುಕಿಗಾಗಿ ನಮಗೆ ಈ ಅವಕಾಶವನ್ನು ಅನುಗ್ರಹಿಸಿದ್ದಾರೆ. ನಾವು ಈ ಕೆಳಗಿನ ತತ್ತ್ವಗಳನ್ನು ಆಚರಿಸಬೇಕಷ್ಟೆ :

1. ಪವಿತ್ರ ನಾಮಗಳನ್ನು – ಹರೇ ಕೃಷ್ಣ ಮಹಾ ಮಂತ್ರವನ್ನು ಪ್ರತಿ ದಿನ ಜಪಿಸಿ.
2. ದೇವೋತ್ತಮನನ್ನು ಕೊಂಡಾಡುವ ನಿಷ್ಕಳಂಕ ಪುರಾಣ ಶ್ರೀಮದ್ ಭಾಗವತವನ್ನು ಓದಿ.
3. ದೇವೋತ್ತಮನಿಗೆ ಅರ್ಪಿಸಿ ಪವಿತ್ರವಾಗಿರುವ ಆಹಾರ ಪ್ರಸಾದವನ್ನು ಗೌರವದಿಂದ ಸ್ವೀಕರಿಸಿ.

ಮೇಲಿನ ಮೂರೂ ತತ್ತ್ವಗಳನ್ನು ಅನುಸರಿಸುವುದರಿಂದಲೇ ಬದುಕಿನಲ್ಲಿ ನಿಜವಾದ ಸುಖವನ್ನು ಪಡೆಯಬಹುದು. ಇದು ಹೇಗೆ ಕಾರ್ಯಗತವಾಗುತ್ತದೆ?

ನಮ್ಮ ಬದುಕನ್ನು ದುಃಖಮಯಗೊಳಿಸುವ ನಮ್ಮ ಸಮಸ್ಯೆಗಳ ಮೂಲ ಕಾರಣವನ್ನು ನಾವು ಮೊದಲು ಅರ್ಥಮಾಡಿಕೊಳ್ಳೋಣ. ಅನಾದಿಕಾಲದಿಂದಲೂ ನಾವು ಈ ಲೌಕಿಕ ಲೋಕದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ನಾವು ಇಲ್ಲಿ ಪಡೆಯಲು ಪ್ರಯತ್ನಿಸುವ ಸುಖವು ತಾತ್ಕಾಲಿಕ ಮತ್ತು ಭ್ರಾಮಕ. ಅಂತಹ ಸುಖವನ್ನು ಹುಡುಕುವ ಪ್ರಯತ್ನದಲ್ಲಿ ನಾವು ಅನೇಕ ಪುಣ್ಯ ಮತ್ತು ಪಾಪ ಕರ್ಮಗಳಲ್ಲಿ ತೊಡಗುತ್ತೇವೆ. ಅವು ನಮ್ಮನ್ನು ಈ ಐಹಿಕ ಲೋಕದಲ್ಲಿ ಹೆಚ್ಚು ಹೆಚ್ಚು ಕಟ್ಟಿಹಾಕಿಬಿಡುತ್ತವೆ.

ಪಾಪ ಪ್ರಕ್ರಿಯೆಗಳೇ ನಮ್ಮ ಎಲ್ಲ ಸಂಕಷ್ಟಗಳಿಗೆ ಕಾರಣ ಮತ್ತು ನಾವು ಮೇಲಿನ ಮೂರು ತತ್ತ್ವಗಳನ್ನು ಅನುಸರಿಸಿದರೆ ಎಲ್ಲ ಲೌಕಿಕ ಕಲ್ಮಶಗಳು ಮತ್ತು ಪಾಪಗಳು ತೊಡೆದು ಹೋಗುತ್ತವೆ. ತತ್‌ಪರಿಣಾಮವಾಗಿ, ನಾವು ಅಸೀಮಿತ ಆನಂದ ಮತ್ತು ಸುಖದ ನಮ್ಮ ನಿಜ ಸ್ವರೂಪ ಸ್ಥಿತಿಯಲ್ಲಿ ಪುನರ್‌ಸ್ಥಾಪನೆಗೊಳ್ಳುತ್ತೇವೆ.

ಶ್ರೀ ಚೈತನ್ಯ ಮಹಾಪ್ರಭುಗಳು ನುಡಿದರು : ಚೇತೋ ದರ್ಪಣ ಮಾರ್ಜನಂ ಭವ ಮಹಾ ದಾವಾಗ್ನಿ ನಿರ್ವಾಪಣಂ : ಭಗವಂತನ ಪವಿತ್ರ ನಾಮಗಳ ಪಠಣವು ಹೃದಯದ ಕನ್ನಡಿಯನ್ನು ಶುದ್ಧಗೊಳಿಸುತ್ತದೆ ಮತ್ತು ಲೌಕಿಕ ಅಸ್ತಿತ್ವದ ಜ್ವಾಲೆಯ ನೋವನ್ನು ಸ್ಥಗಿತಗೊಳಿಸುತ್ತದೆ.

ಶ್ರೀಮದ್ ಭಾಗವತವು ಹೇಳುತ್ತದೆ : ನಷ್ಟ ಪ್ರಾಯೇಶ್ವ್ಭದ್ರೇಶು ನಿತ್ಯಂ ಭಾಗವತ ಸೇವಯಾ : ಪ್ರತಿ ದಿನ ಭಾಗವತವನ್ನು ಅಧ್ಯಯನ ಮಾಡುವುದರಿಂದ ನಮ್ಮ ಹೃದಯದಲ್ಲಿರುವ ಎಲ್ಲ ಅಶುಭ ವಿಷಯಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅಜ್ಞಾನದ ಕತ್ತಲು ಚದುರಿಹೋಗುತ್ತದೆ ಮತ್ತು ನಾವು ಸತ್ತ್ವ ಗುಣದಲ್ಲಿ ನೆಲೆಗೊಳ್ಳುತ್ತೇವೆ ಮತ್ತು ದೇವತೆಗಳಿಗೆ ಸಮಾನವಾದ ಎಲ್ಲ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುತ್ತೇವೆ.

ಪ್ರಸಾದವನ್ನು ಗೌರವಿಸುವುದರಿಂದ ನಾವು ಪಾಪ ಪ್ರಕ್ರಿಯೆಗಳಿಗೆ ಗುರಿಯಾಗುವುದಿಲ್ಲ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ (3.13) : ಯಜ್ಞ ಶಿಷ್ಟಾಶಿನಃ ಸಂತೋ ಮುಚ್ಯನ್ತ್ಯೇ ಸರ್ವ ಕಿಲ್ಬಿಷೈಃ : ಯಜ್ಞದ ಆಚರಣೆಯ ಅನಂತರ – ಭಗವಂತನಿಗೆ ಅರ್ಪಿಸಿದ ಆಹಾರವನ್ನು ಸೇವಿಸಿದವರು ಎಲ್ಲ ವಿಧವಾದ ಪಾಪಗಳಿಂದ ಮುಕ್ತರಾಗುತ್ತಾರೆ.

ಆದುದರಿಂದ ಶ್ರೀಲ ಪ್ರಭುಪಾದರು ಅನುಗ್ರಹಿಸಿರುವ ಸರಳವಾದ, ಆದರೆ ಪರಿಣಾಮಕಾರಿಯಾದ ಈ ಮೂರು ತತ್ತ್ವಗಳನ್ನು ಅನುಸರಿಸುವ ಮೂಲಕ ನಾವು ಸುಖ, ಉತ್ತಮ ಆರೋಗ್ಯ, ನೆಮ್ಮದಿ ಮತ್ತು ಎಲ್ಲ ಸದ್ಗುಣಗಳ ಜೀವನವನ್ನು ಹೊಂದಬಹುದು.