sp with pm

ಶ್ರೀಲ ಪ್ರಭುಪಾದರು ಭಾರತದ ಅಮೂಲ್ಯ ಆಧ್ಯಾತ್ಮಿಕ ಸಂಪತ್ತನ್ನು ಇಂಗ್ಲಿಷ್‌ನಲ್ಲಿ ಲಭ್ಯವಾಗುವಂತೆ ಮಾಡಿ ಲೋಕಕ್ಕೆ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ. ಧರ್ಮ ಗ್ರಂಥಗಳ ಮೂಲ ಸಂಸ್ಕ್ರತ ಮತ್ತು ಬಂಗಾಳಿ ಶ್ಲೋಕಗಳನ್ನು ಅವುಗಳ ಇಂಗ್ಲಿಷ್ ಲಿಪ್ಯಂತರ, ಸಮಾನಾರ್ಥಕ, ಭಾಷಾಂತರ ಮತ್ತು ವಿವರವಾದ ಭಾವಾರ್ಥಗಳೊಂದಿಗೆ ಓದುಗರ ಮುಂದಿರಿಸಿದ್ದಾರೆ. ಇದು ವಿಷಯದ ಬಗೆಗೆ ಅವರಿಗಿರುವ ಗಹನವಾದ ಜ್ಞಾನಕ್ಕೆ ಸಾಕ್ಷ್ಯಿಯಾಗಿದೆ.

ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಆರ್.ಇ. ಅಶರ್ ಹೇಳಿದ್ದಾರೆ, “ಯಾವುದೇ ಪುಸ್ತಕವು ತನ್ನ ಎಲ್ಲ ಓದುಗರನ್ನು ಸಂಪೂರ್ಣವಾಗಿ ತೃಪ್ತಿಪಡಿಸುವುದು ಸಾಧ್ಯವಿಲ್ಲ ಎನ್ನುವುದು ಸರ್ವವೇದ್ಯ. ಆದರೆ ಆ ಆದರ್ಶಕ್ಕೆ ಅತ್ಯಂತ ಸಮೀಪಕ್ಕೆ ಬಂದಿದೆ ಎನ್ನಬಹುದಾದುದು ಇಲ್ಲಿದೆ . . . ಪಾಶ್ಚಿಮಾತ್ಯ ವಾಚಕರಿಗೆ ಸಂಸ್ಕೃತ ಪಠ್ಯವು ಹೇಗಿರಬೇಕು ಎನ್ನುವುದರ ಮಾದರಿ ಇಲ್ಲಿದೆ.”

ಓಬರ್‌ಲಿನ್ ಕಾಲೇಜಿನಲ್ಲಿ ಧರ್ಮಶಾಸ್ತ್ರದ ಪ್ರಾಧ್ಯಾಪಕ ಡಾ. ಲಾರೆನ್ಸ್ ಶಿನ್ ಅವರು ಹೀಗೆ ಹೇಳಿದ್ದಾರೆ, “ಹರೇ ಕೃಷ್ಣ ಆಂದೋಲನದ ಉತ್ತಮ ಲಕ್ಷಣವೆಂದರೆ ಅದು ಕೃಷ್ಣಭಕ್ತಿ ಕುರಿತಂತೆ ಅಪರೂಪದ ಪುಸ್ತಕಗಳ ಅತ್ಯುತ್ತಮ ಭಾಷಾಂತರವನ್ನು ವಿದ್ವಾಂಸರಿಗೆ ಒದಗಿಸುತ್ತಿದೆ.”

ಕೃಷ್ಣಪ್ರಜ್ಞಾ ಆಂದೋಲನದ ತಾತ್ತ್ವಿಕ ಮತ್ತು ಪ್ರಾಯೋಗಿಕ ಮೂಲಾಧಾರವೆಂದು ಪರಿಗಣಿತವಾಗಿರುವ ಈ ಪುಸ್ತಕಗಳು ತತ್ತ್ವಜ್ಞಾನಿಗಳನ್ನು, ಧರ್ಮಶಾಸ್ತ್ರ ವಿದ್ಯಾರ್ಥಿಗಳನ್ನು, ಇತಿಹಾಸಕಾರರನ್ನು, ಭಾಷಾ ತಜ್ಞರನ್ನು, ಸಮಾಜ ಶಾಸ್ತ್ರಜ್ಞರನ್ನು ಮತ್ತು ರಾಜಕೀಯ ವಿಜ್ಞಾನಿಗಳನ್ನು ಸಮಾನವಾಗಿ ಆಕರ್ಷಿಸಿವೆ. ಇಂದಿನ ಜಗತ್ತಿನ ಅಶಾಂತ ಮಾನವ ಸಮಾಜಕ್ಕೆ ಅದು ಶ್ರೇಷ್ಠವಾದ ಕೊಡುಗೆ ಎಂದು ಅವರು ಭಾವಿಸುತ್ತಾರೆ.

“ಪ್ರಭುಪಾದರ ಭಾಷಾಂತರವು ಅಕ್ಷರಶಃ ನಿಖರತೆ ಮತ್ತು ಧಾರ್ಮಿಕ ಒಳನೋಟದ ಮಿಶ್ರಣ ಮಾದರಿಯಾಗಿದೆ” ಎಂದು ಪೆನ್ಸಿಲ್ವೇನಿಯಾದ ಫ್ರಾಂಕ್ಲಿನ್ ಮತ್ತು ಮಾರ್ಷಲ್ ಕಾಲೇಜಿನ ಧರ್ಮಶಾಸ್ತ್ರ ಪ್ರಾಧ್ಯಾಪಕ ಡಾ. ಥಾಮಸ್ ಜೆ. ಹಾಪ್ಕಿನ್ಸ್ ಹೇಳಿದ್ದಾರೆ.

ಈ ಪುಸ್ತಕಗಳು “ಗಂಭೀರ ವಿದ್ಯಾರ್ಥಿಗಳಿಗೆ ಒಳನೋಟದ ಒಂದು ಮೂಲ” ಎಂದು ಕೆನಡಾದ ಓಂಟಾರಿಯೋದಲ್ಲಿರುವ ವಾಟರ್ಲೂ ವಿಶ್ವವಿದ್ಯಾಲಯದ ಮಾನವ ಸಂಬಂಧಗಳ ವಿಭಾಗದ ಡಾ. ರೋರಿ ಓ ಡೇ ಅವರು ಶಿಫಾರಸು ಮಾಡಿದ್ದಾರೆ.

ಫ್ಲಾರಿಡಾ ಎ ಮತ್ತು ಎಂ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಮತ್ತು ಧರ್ಮ ವಿಭಾಗದ ಅಧ್ಯಕ್ಷ ಡಾ. ಜೆರ್ರಿ ಎಂ. ಚಾನ್ಸ್ ಈ ಪುಸ್ತಕಗಳನ್ನು ತುಂಬ ಮೆಚ್ಚಿಕೊಂಡಿದ್ದಾರೆ ಮತ್ತು ಈ ಪುಸ್ತಕಗಳು “ಭಾರತೀಯ ಧಾರ್ಮಿಕ ಸಾಹಿತ್ಯದ ಇಂಗ್ಲಿಷ್ ವಾಚಕನಿಗೆ ಶ್ರೇಷ್ಠ” ವಾಗುತ್ತವೆ ಎಂದು ಹೇಳಿದ್ದಾರೆ.

ಯುಟಾ ರಾಜ್ಯ ವಿಶ್ವವಿದ್ಯಾಲಯದ ಇಂಗ್ಲಿಷ್ ಮತ್ತು ತತ್ತ್ವಶಾಸ್ತ್ರದ ಪ್ರಾಧ್ಯಾಪಕ ಡಾ. ಎಚ್. ಬಿ. ಕುಲಕರ್ಣಿ ಅವರು ಈ ಪುಸ್ತಕಗಳನ್ನು “ಅತ್ಯಂತ ಜಾಗರೂಕತೆಯಿಂದ, ಲಕ್ಷ್ಯಪೂರ್ವಕವಾಗಿ ಮತ್ತು ಆಳವಾದ ಆಸಕ್ತಿಯಿಂದ” ಓದಿದ್ದಾರೆ ಮತ್ತು ಹೀಗೆ ತೀರ್ಮಾನಿಸಿದ್ದಾರೆ : “ಈ ಪುಸ್ತಕಗಳು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಬಗೆಗೆ ಕುತೂಹಲ ಇರುವವರಿಗೆ ಅಮೂಲ್ಯ ಕೃತಿಗಳಾಗಿವೆ.” ಅವರು ಮತ್ತೂ ಹೇಳಿದ್ದಾರೆ, “ಈ ಗ್ರಂಥಗಳ ಲೇಖಕರು ತಾವು ನಿರೂಪಿಸಿದ ವಿಷಯಗಳ ಬಗೆಗೆ ಪ್ರತಿಪುಟದಲ್ಲೂ ವಿಸ್ಮಯಕರ ವಿದ್ವತ್ತನ್ನು ತೋರಿದ್ದಾರೆ. ಗಹನವಾದ ವಿಷಯಗಳನ್ನು ಅರ್ಥಮಾಡಿಕೊಂಡು ಲೀಲಾಜಾಲವಾಗಿ ನಿರೂಪಿಸಿದ್ದಾರೆ. ಇದು ಅಪೂರ್ವವಾದ ದೈವದತ್ತ ಪ್ರತಿಭೆ.”

ಆಧುನಿಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜ್ಞಾನವನ್ನು ಕುರಿತ ಅನೇಕ ವಿಭಾಗಗಳಿದ್ದರೂ ಆತ್ಮ ಮತ್ತು ಭಗವಂತನನ್ನು ಕುರಿತು ವೈಜ್ಞಾನಿಕ ಬೋಧನೆ ಮಾಡುವ ವಿಭಾಗಗಳಿಲ್ಲ ಎಂದು ಶ್ರೀಲ ಪ್ರಭುಪಾದರು ಯಾವಾಗಲೂ ಹೇಳುತ್ತಿದ್ದರು. ದೈವ ಸಾಕ್ಷಾತ್ಕಾರದ ಮೂಲ ವೈದಿಕ ವಿಜ್ಞಾನವನ್ನು ತಮ್ಮ ಪುಸ್ತಕಗಳ ಮೂಲಕ ಪ್ರಸ್ತುತಪಡಿಸಿ ಶ್ರೀಲ ಪ್ರಭುಪಾದರು ಈ ಕಂದರವನ್ನು ತುಂಬಿದ್ದಾರೆ ಮತ್ತು ಈ ಮುಖ್ಯವಾದ ಶೈಕ್ಷಣಿಕ ಅಗತ್ಯವನ್ನು ಪೂರೈಸಿದ್ದಾರೆ.

ಶ್ರೀಲ ಪ್ರಭುಪಾದರು ತಮ್ಮ ಪುಸ್ತಕಗಳ ಮೂಲಕ ಅಗಾಧ ವೈದಿಕ ಬೋಧನೆಗಳ ಪ್ರಾಯೋಗಿಕ ಅನುಷ್ಠಾನಕ್ಕೆ ಮಾರ್ಗದರ್ಶನಗಳನ್ನು ನೀಡಿದ್ದಾರೆ ಮತ್ತು ಪಶ್ಚಿಮದಲ್ಲಿ ನಿಜವಾದ ವೈದಿಕ ಸಂಸ್ಕೃತಿಯನ್ನು ಯಶಸ್ವಿಯಾಗಿ ಸ್ಥಾಪಿಸಿದ್ದಾರೆ. ಈ ಪುಸ್ತಕಗಳನ್ನು ಓದಿ ಜನರು ನಮ್ಮ ಕಾಲಕ್ಕೂ ಪ್ರಸ್ತುತವಾಗುವ ಈ ತತ್ತ್ವಗಳನ್ನು ಮೆಚ್ಚುತ್ತಾರೆ.

“ಈ ಪುಸ್ತಕಗಳು ಸುಂದರವಾಗಿ ಮಾತ್ರವಲ್ಲ, ನಮ್ಮ ಕಾಲಕ್ಕೆ ಪ್ರಸ್ತುತವಾಗಿಯೂ ಇದೆ” ಎಂದು ಸ್ಟೀಫನ್ ಎಫ್. ಆಸ್ಟಿನ್ ಸ್ಟೇಟ್ ಯೂನಿವರ್ಸಿಟಿಯ ಸಮಾಜ ವಿಜ್ಞಾನ ಪ್ರಾಧ್ಯಾಪಕ ಡಾ. ಸಿ.ಎಲ್. ಸ್ಪ್ರೆಡ್‌ಬರಿ ಹೇಳಿದ್ದಾರೆ.

ಅವುಗಳ ಪ್ರಾಮಾಣ್ಯ, ಗಹನತೆ ಮತ್ತು ಸ್ಪಷ್ಟತೆಗಳಿಂದಾಗಿ ಶೈಕ್ಷಣಿಕ ವಲಯಗಳಲ್ಲಿ ಅತ್ಯಂತ ಗೌರವಾನ್ವಿತವಾದ ಶ್ರೀಲ ಪ್ರಭುಪಾದರ ಪುಸ್ತಕಗಳನ್ನು ತತ್ತ್ವಶಾಸ್ತ್ರ, ಧರ್ಮ, ವಿಶ್ವ ಸಾಹಿತ್ಯ, ಇತಿಹಾಸ ಮತ್ತು ಸಮಾಜ ವಿಜ್ಞಾನಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ ಕಾಲೇಜಿನ ಕೋರ್ಸ್ ಮತ್ತು ಸೆಮಿನಾರ್‌ಗಳಲ್ಲಿ ಉತ್ತಮ ಗುಣಮಟ್ಟದ ಪಠ್ಯವಾಗಿ ಬಳಸಲಾಗುತ್ತಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಧರ್ಮ (ಶಾಸ್ತ್ರ) ವಿಭಾಗದ ಪ್ರಾಧ್ಯಾಪಕ ಡಾ. ಫ್ರೆಡ್ರಿಕ್ ಬಿ. ಅಂಡರ್‌ವುಡ್ ಅವರು ಈ ಪುಸ್ತಕಗಳನ್ನು ಪರೀಶೀಲಿಸಿ ಉದ್ಗರಿಸಿದರು, “ಅವು ಅತ್ಯುನ್ನತ ಗುಣಮಟ್ಟದವು ಮತ್ತು ಭಾರತೀಯ ಧರ್ಮ ಕುರಿತ ತರಗತಿಗಳಲ್ಲಿ ಬೋಧಿಸಲು ಅಮೂಲ್ಯವಾದವು.”

ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಡಾ. ಸ್ಯಾಮ್ಯುಯಲ್ ಡಿ. ಅಟ್ಕಿನ್ಸ್ ಹೇಳಿದ್ದಾರೆ, “ಇವು ವಿದ್ವಾಂಸರು ಮತ್ತು ಸಾಮಾನ್ಯರು – ಇಬ್ಬರಿಗೂ ಅಮೂಲ್ಯವಾದ ಪುಸ್ತಕಗಳು. ಇವು ಆಕರ ಮತ್ತು ಪಠ್ಯವಾಗಿಯೂ ಉಪಯೋಗಕರ. ಈ ಪ್ರಕಟಣೆಗಳನ್ನು ನಾನು ನನ್ನ ವಿದ್ಯಾರ್ಥಿಗಳಿಗೆ ಶಿಫಾರಸು ಮಾಡುತ್ತೇನೆ.”