ವೈದಿಕ ಪರಂಪರೆಯಲ್ಲಿ ಗೋವುಗಳನ್ನು ತಾಯಿಯೆಂದು ಪೂಜಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ಏಳು ಮಾತೆಯರಿದ್ದಾರೆ : ಆತ್ಮ ಮಾತಾ (ಒಬ್ಬರ ಸ್ವಂತ ತಾಯಿ), ಗುರೋ: ಪತ್ನಿ (ಗುರುಗಳ ಪತ್ನಿ), ಬ್ರಾಹ್ಮಣಿ (ಬ್ರಾಹ್ಮಣನ ಪತ್ನಿ), ರಾಜ ಪತ್ನಿಕಾ (ರಾಜನ ಪತ್ನಿ), ಧೇನು (ಗೋವು), ಧಾತ್ರಿ (ದಾದಿ) ಮತ್ತು ಭೂಮಿ. ಹೇಗೆ ಮಗುವು ತನ್ನ ತಾಯಿಯ ಹಾಲನ್ನು ಪಡೆಯುತ್ತದೆಯೋ ಹಾಗೆ ಮಾನವ ಸಮಾಜವು ಗೋವುಗಳಿಂದ ಹಾಲನ್ನು ಪಡೆಯುತ್ತದೆ.
ಹೇಗೆ ತಂದೆಯು ತನ್ನ ಮಕ್ಕಳ ಪೋಷಣೆಗಾಗಿ ದುಡಿಯುವನೋ ಅದೇ ರೀತಿ ಆಹಾರ ಧಾನ್ಯಗಳಿಗಾಗಿ ಎತ್ತು ಭೂಮಿಯನ್ನು ಉಳುತ್ತದೆ. ಆದುದರಿಂದ ಎತ್ತನ್ನು ತಂದೆ ಎಂದು ಪರಿಗಣಿಸಲಾಗಿದೆ.
ಆದುದರಿಂದ ಒಬ್ಬ ನಾಗರಿಕ ಮಾನವನು ಎತ್ತು ಮತ್ತು ಗೋವುಗಳಿಗೆ ಎಲ್ಲ ರಕ್ಷಣೆಯನ್ನೂ ನೀಡಬೇಕೆಂದು ನಿರೀಕ್ಷಿಸಲಾಗುತ್ತದೆ. ಋಗ್ವೇದದಲ್ಲಿ (9.46.4) ಹೀಗೆ ಹೇಳಿದೆ : ಗೋಭಿಃ ಪ್ರಿಣೀತ ಮತ್ಸರಂ : ಗೋಹತ್ಯೆ ಮಾಡುವ ಅಪೇಕ್ಷೆ ಉಳ್ಳವನು ತೀರಾ ಅಜ್ಞಾನಿ. ಹಸುಗಳನ್ನು ಕೊಂದು ಅವುಗಳ ಮಾಂಸವನ್ನು ಭಕ್ಷಿಸುವ ಬದಲು ನಾಗರಿಕ ಮಾನವನು ಹಾಲು ಮತ್ತು ಕೃಷಿ ಉತ್ಪನ್ನಗಳಿಂದ ಜೀವಿಸಬೇಕು.
ಪಂಚ ಗವ್ಯ
ಶ್ರೀಮದ್ ಭಾಗವತದಲ್ಲಿ ಹೀಗೆ ಹೇಳಿದೆ : ಗಾವಃ ಪಂಚ ಪವಿತ್ರಾಣಿ : ಗೋವುಗಳು ಐದು ಉತ್ಪನ್ನಗಳನ್ನು ನೀಡುತ್ತವೆ ಮತ್ತು ಅವುಗಳೆಲ್ಲವೂ ಶುದ್ಧ ಹಾಗೂ ಅಕಲುಷಿತ. ಹಸುವಿನಿಂದ ಪಡೆಯುವ ಐದು ಉತ್ಪನ್ನಗಳೆಂದರೆ, ಹಾಲು, ತುಪ್ಪ, ಮೊಸರು, ಸಗಣಿ ಮತ್ತು ಮೂತ್ರ. ಪಂಚ ಗವ್ಯ ಎಂದು ಕರೆಯುವ ಈ ಐದು ವಸ್ತುಗಳು ಎಲ್ಲ ವೈದಿಕ ಕಾರ್ಯಗಳಲ್ಲಿ ಅಗತ್ಯ.
ಬದುಕಿನಲ್ಲಿ ಉನ್ನತ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಮಿದುಳಿನ ನಯವಾದ ಅಂಗಾಂಶ ಬೆಳವಣಿಗೆಗೆ ಹಾಲು ನೆರವೀಯುತ್ತದೆ ಎಂದು ಪರಿಗಣಿಸಲಾಗಿದೆ. ಹಾಲನ್ನು ಮೊಸರು, ಬೆಣ್ಣೆ ಮತ್ತು ತುಪ್ಪವಾಗಿ ಪರಿವರ್ತಿಸಬಹುದು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಧಾನ್ಯಗಳೊಂದಿಗೆ ಸೇರಿಸಿ ವೈವಿಧ್ಯವಾದ ತಿನಿಸುಗಳನ್ನು ತಯಾರಿಸಬಹುದು.
ಗೋಮೂತ್ರ ಮತ್ತು ಸಗಣಿಯಲ್ಲಿ ಆಯುರ್ವೇದ ಔಷಧೀಯ ಗುಣಗಳಿವೆ. ಸಗಣಿಯಲ್ಲಿ ನಂಜು ನಿರೋಧಕ ಗುಣವಿದೆ ಮತ್ತು ಅದನ್ನು ಶುದ್ಧೀಕರಣ ವಸ್ತುವಾಗಿಯೂ ಬಳಸುತ್ತಾರೆ. ಸಗಣಿಯನ್ನು ಒಣಗಿಸಿ ಇಂಧನವಾಗಿ ಬಳಸಲಾಗುತ್ತದೆ. ಗೋಮೂತ್ರ ಮತ್ತು ಸಗಣಿಯನ್ನು ಮಂದಿರದ ವಿಗ್ರಹಗಳ ಅಭ್ಯಂಜನಕ್ಕಾಗಿಯೂ ಬಳಸುತ್ತಾರೆ.
ಗೋ ಪೂಜೆ
ವೈದಿಕ ಸಮಾಜದಲ್ಲಿ ಆರ್ಥಿಕ ವ್ಯವಸ್ಥೆಯು ಕೃಷಿ ಮತ್ತು ಗೋ ಸಂರಕ್ಷಣೆ ಆಧಾರಿತ. ಶ್ರೀ ಕೃಷ್ಣನು ಇದನ್ನು ಭಗವದ್ಗೀತೆಯಲ್ಲಿ ಹೇಳುತ್ತಾನೆ : ಕೃಷಿ ಗೋ ರಕ್ಷ್ಯ ವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಂ (ಗೀತೆ 18.44). ಶ್ರೀ ಕೃಷ್ಣನನ್ನು ಗೋ ಮತ್ತು ಬ್ರಾಹ್ಮಣ ಸಂಸ್ಕೃತಿಯ ಸಂರಕ್ಷಕ ಎಂದು ಕೊಂಡಾಡಲಾಗುತ್ತದೆ. (ಗೋ ಬ್ರಾಹ್ಮಣ ಹಿತಾಯ ಚ). ಅಪೇಕ್ಷೆಗಳನ್ನು ಈಡೇರಿಸುವ ಅಸಂಖ್ಯ ಮರಗಳಿಂದ ಸುತ್ತುವರಿಯಲ್ಪಟ್ಟ ತನ್ನ ಆಧ್ಯಾತ್ಮಿಕ ಧಾಮ ಗೋಲೋಕ ವೃಂದಾವನದಲ್ಲಿ ಶ್ರೀಕೃಷ್ಣನು ಸುರಭಿ ಗೋವುಗಳನ್ನು ರಕ್ಷಿಸುತ್ತಿದ್ದಾನೆ ಎಂದು ಬ್ರಹ್ಮ ಸಂಹಿತೆಯು ವಿವರಿಸುತ್ತದೆ. ಗೋವುಗಳಲ್ಲಿ ಎಲ್ಲ ದೇವತೆಗಳು ವಾಸಿಸುತ್ತಿದ್ದಾರೆ ಎಂದು ವೇದಗಳಲ್ಲಿ ಹೇಳಲಾಗಿದೆ. ಆದುದರಿಂದ ಹಿಂದೂಗಳು ಗೋ ಪೂಜೆ ಮಾಡುತ್ತಾರೆ.
ಗೋಶಾಲೆ
ಇಸ್ಕಾನ್ ಬೆಂಗಳೂರು 1986 ರಲ್ಲಿ ಗೋಶಾಲೆಯನ್ನು ಆರಂಭಿಸಿತು. ಆಗ ಒಂದು ಹಸು ಮತ್ತು ಕರು ಇತ್ತು. ಈಗ 25 ಗೋವುಗಳಿದ್ದು, ಮಂದಿರದ ಹಿಂಭಾಗದಲ್ಲಿ ಅವುಗಳಿಗೆ ವಸತಿ ಕಲ್ಪಿಸಲಾಗಿದೆ. ತರಬೇತಿ ಪಡೆದಿರುವ ಮೂರು ಜನರ ತಂಡವು ಗೋಶಾಲೆಯನ್ನು ಅತ್ಯಂತ ಶುದ್ಧವಾಗಿ ಇಟ್ಟಿದೆ. ಪ್ರತಿದಿನ ಗೋವುಗಳಿಗೆ ಸ್ನಾನ ಮಾಡಿಸಲಾಗುವುದು. ಬೇಸಿಗೆಯಲ್ಲಿ ಎರಡು ಬಾರಿ ಸ್ನಾನ. ಅವುಗಳಿಗೆ ಗೋಶಾಲೆಯಲ್ಲಿ ನಡೆದಾಡಲು ಸಾಕಷ್ಟು ಸ್ಥಳವಿದ್ದು ಅವು ಆರಾಮವಾಗಿವೆ.
ಗೋವುಗಳಿಗೆ ವಯಸ್ಸಾದಾಗ, ಅವುಗಳನ್ನು ಮಂಡ್ಯ ಜಿಲ್ಲೆ ಮಹದೇವಪುರದಲ್ಲಿರುವ ಇಸ್ಕಾನ್ ಬೆಂಗಳೂರಿನ ಫಾರಂಗೆ ಕರೆದೊಯ್ಯಲಾಗುವುದು. ಅಲ್ಲಿ ಸದಾ ಸಿಗುವ ತಾಜಾ ಹುಲ್ಲನ್ನು ಮೇಯುತ್ತ ಅವು ತಮ್ಮ ಜೀವನದ ಉಳಿದ ಕಾಲವನ್ನು ಶಾಂತಿಯುತವಾಗಿ ಕಳೆಯುತ್ತವೆ. ಹೊಲ ಉಳಲೆಂದು ಯುವ ಎತ್ತುಗಳನ್ನೂ ಅಲ್ಲಿಗೆ ಕರೆದೊಯ್ಯಲಾಗುವುದು.
ಯಾರು ಗೋವಿಗೆ ಹುಲ್ಲು ಮತ್ತು ನೀರನ್ನು ಪ್ರತಿ ದಿನ ನೀಡುವರೋ ಅವರು ಅಶ್ವಮೇಧ ಯಾಗವನ್ನು ಮಾಡಿದಷ್ಟು ಪುಣ್ಯವನ್ನು ಪಡೆಯುವರು ಎಂದು ಬೃಹತ್ ಪರಾಶರ ಸ್ಮೃತಿಯಲ್ಲಿ (5.26.27) ಹೇಳಲಾಗಿದೆ.
ಗೋ ಪಾಲನೆಗಾಗಿ ಕೊಡುಗೆ ನೀಡಲು ನಿಮಗೆ ಆಸಕ್ತಿ ಇದ್ದರೆ ಇಲ್ಲಿ ಕ್ಲಿಕ್ ಮಾಡಿ. ನೀವು ಮಹದೇವಪುರ ಫಾರಂನಲ್ಲಿನ ಗೋವುಗಳ ಪಾಲನೆಗೂ ಪ್ರಾಯೋಜಕರಾಗಬಹುದು.