ಬೆಂಗಳೂರು, ಜುಲೈ 6 : ಭಾರತೀಯ ವಿದ್ಯಾ ಭವನ ಮತ್ತು ಇಸ್ಕಾನ್ ಬೆಂಗಳೂರು ಜೊತೆಗೂಡಿ ರಾಮಾಯಣ ಸಂದೇಶವನ್ನು ಕುರಿತಂತೆ ಇಸ್ಕಾನ್ ಬೆಂಗಳೂರಿನಲ್ಲಿ ಏರ್ಪಡಿಸಿರುವ ಮೂರು ದಿನಗಳ ರಾಷ್ಟ್ರೀಯ ಸಮಾವೇಶವನ್ನು ವಾರಾಣಸಿ ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಮಹಾಮಹೋಪಾದ್ಯಾಯ ಪ್ರೊ. ರಾಜೇಂದ್ರ ಮಿಶ್ರ ಅವರು ಉದ್ಘಾಟಿಸಿದರು.
ಶ್ರೀ ರಾಮನು ಒಬ್ಬ ಕಾಲ್ಪನಿಕ ವ್ಯಕ್ತಿ ಎಂಬ ಭಾವನೆಯನ್ನು ಕಿತ್ತು ಹಾಕಿ, ಅವನು ಐತಿಹಾಸಿಕ ವ್ಯಕ್ತಿ ಎನ್ನುವುದನ್ನು ಅರಿಯಿರಿ ಎಂದು ಪ್ರೊ. ಮಿಶ್ರ ಈ ಸಂದರ್ಭದಲ್ಲಿ ಕರೆ ನೀಡಿದರು.
ಕಳೆದ ವರ್ಷ ಭಾಗವತ ಸಂದೇಶ ಕುರಿತಂತೆ ಏರ್ಪಡಿಸಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಸ್ತುತಪಡಿಸಲಾಗಿದ್ದ ಪ್ರಬಂಧಗಳನ್ನು ಒಳಗೊಂಡ ಪುಸ್ತಕವನ್ನು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಲೋಕಾರ್ಪಣೆ ಮಾಡಿ ಪುಸ್ತಕದ ವಿವರ ನೀಡಿದರು.
ರಾಜ ಧರ್ಮ
ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ಮಾಜಿ ರಾಜ್ಯಪಾಲ ನ್ಯಾಯಮೂರ್ತಿ ಡಾ. ಎಂ. ರಾಮ ಜೋಯಿಸ್ ಅವರು ಮಾತನಾಡಿ ರಾಮಾಯಣದ ಸಂದೇಶ ಅತ್ಯಂತ ಮಹತ್ತ್ವವಾದುದು ಎಂದರು. ರಾಮಾಯಣದಲ್ಲಿ ಏನಿದೆ ಎಂದು ಪ್ರಶ್ನಿಸಿ ಉತ್ತರಿಸಿದ ನ್ಯಾಯಮೂರ್ತಿ ರಾಮ ಜೋಯಿಸ್ ಅವರು, ರಾಮಾಯಣದಲ್ಲಿ ರಾಜ ಧರ್ಮವಿದೆ, ವಚನ ನಿರ್ವಹಣೆ ಇದೆ, ಪಿತೃ ವಾಕ್ಯ ಪರಿಪಾಲನೆ ಇದೆ ಎಂದರು.
ದಶರಥನ ಧರ್ಮ ಸಂಕಟ, ರಾಮನ ವಿಧೇಯತೆ ಮತ್ತು ಜ್ಯೇಷ್ಠ ಪುತ್ರನಿಗೇ ಪಟ್ಟಾಭಿಷೇಕ ಎಂಬ ರಾಜ ಧರ್ಮವನ್ನು ಪಾಲಿಸುವ ಭರತ ಇವೆಲ್ಲವೂ ರಾಮಾಯಣದಲ್ಲಿವೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಪ್ರೊ. ರಾಜೇಂದ್ರ ಮಿಶ್ರ, ಡಾ. ಕಾಮೇಶ್ವರ ಉಪಾದ್ಯಾಯ, ಪ್ರೊ. ಶಶಿಪ್ರಭಾ ಕುಮಾರ್ ಮತ್ತು ಡಾ. ಎಸ್. ನಾಗರಾಜು ಅವರುಗಳನ್ನು ಸನ್ಮಾನಿಸಲಾಯಿತು. ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಶ್ರೀ ಮಧು ಪಂಡಿತ ದಾಸ ಅವರು ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ವಿದ್ಯಾ ಭವನ, ಬೆಂಗಳೂರಿನ ಅಧ್ಯಕ್ಷ ಎನ್. ರಾಮಾನುಜ ಅವರು ಸ್ವಾಗತಿಸಿದರು. ಸಂದೀಪನಿ ಗುರುಕುಲದ, 3 ರಿಂದ 12 ವರ್ಷದೊಳಗಿನ 108 ವಿದ್ಯಾರ್ಥಿಗಳು ಆದಿತ್ಯಹೃದಯವನ್ನು ವಾಚಿಸಿದ್ದು ಗಮನಾರ್ಹವಾಗಿತ್ತು. ಇದೇ ಸಂದರ್ಭದಲ್ಲಿ ಡಾ. ಟಿ.ಎಸ್. ಸತ್ಯವತಿ ಅವರ ನಿರ್ದೇಶನದಲ್ಲಿ ವ್ಯಾಖ್ಯಾನದೊಂದಿಗೆ ಸಂಗೀತ ರಾಮಾಯಣವನ್ನು ಪ್ರಸ್ತುತಪಡಿಸಲಾಯಿತು.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಸ್ಕಾನ್ ನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರದ ವಿವಿಧ ಭಾಗಗಳ ವಿದ್ವಾಂಸರು ರಾಮಾಯಣದ ವಿವಿಧ ಆಯಾಮಗಳ ಬಗೆಗೆ ಪ್ರಬಂಧಗಳನ್ನು ಪ್ರಸ್ತುತ ಪಡಿಸುವರು.