ವೃಂದಾವನ – ಭಾರತದ ಆಧ್ಯಾತ್ಮಿಕ ರಾಜಧಾನಿಯಲ್ಲಿ ನಿರ್ಮಾಣವಾಗುತ್ತಿದೆ ೭೦೦ ಅಡಿ ಎತ್ತರದ ಮಂದಿರ.
ವೃಂದಾವನ ಚಂದ್ರೋದಯ ಮಂದಿರ – ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದ ಪವಿತ್ರ ಭೂಮಿಯಲ್ಲಿ ನಿರ್ಮಿಸಲು ಯೋಜಿಸಿರುವ ಮಂದಿರವನ್ನು ಶ್ರೀಲ ಪ್ರಭುಪಾದರು ಶ್ರೀ ಕೃಷ್ಣ ಮತ್ತು ಅವನ ಆಧ್ಯಾತ್ಮಿಕ ವೈಭವವನ್ನು ಕುರಿತಂತೆ ಜಗತ್ತಿನಾದ್ಯಂತ ಬೋಧಿಸಿರುವುದನ್ನು ಪ್ರಸಾರ ಮಾಡಲು ಸಮರ್ಪಿಸಲಾಗಿದೆ. ಇಸ್ಕಾನ್ ಬೆಂಗಳೂರಿನ ಭಕ್ತರು ಕಲ್ಪಿಸಿರುವ ಈ ಯೋಜನೆಯು ಭಾರತದಲ್ಲಿಯೇ ಅತಿ ಎತ್ತರದ ದೇವಸ್ಥಾನವಾಗಲಿದೆ. ಇದರ ಎತ್ತರವು ೭೦೦ ಅಡಿ ಮತ್ತು ನಿರ್ಮಾಣ ಪ್ರದೇಶವು ೫,೪೦,೦೦೦ ಚದರ ಅಡಿಗಳು. ಇದು ಪಾರಂಪರಿಕ ಭಾರತೀಯ ಮಂದಿರ ಮತ್ತು ಆಧುನಿಕ ವಾಸ್ತು ಶಿಲ್ಪದ ಸಂಯೋಜನೆಯಾಗಿದೆ.
ವೃಂದಾವನ ಚಂದ್ರೋದಯ ಮಂದಿರವು ಶ್ರೀ ಕೃಷ್ಣನ ಆರಾಧನೆಗೆ ಮಂದಿರವನ್ನಷ್ಟೇ ಅಲ್ಲ, ಭಗವದ್ಗೀತೆ ಮತ್ತು ಶ್ರೀಮದ್ ಭಾಗವತದ ಗಾಢ ಸಂದೇಶವನ್ನು ಬಹು ಜನರಿಗೆ ಪ್ರಯೋಜನವಾಗುವಂತೆ ಆಧುನಿಕ ಸಂದರ್ಭದ ರೀತಿಯಲ್ಲಿ ಹೇಳುವ ಕೇಂದ್ರವೂ ಆಗಲಿದೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ತನ್ನ ಕಾಲಾತೀತ ಸಂದೇಶದ ಮೂಲಕ ಮತ್ತು ಶ್ರೀಮದ್ ಭಾಗವತಂನಲ್ಲಿ ತನ್ನ ಪ್ರಿಯವಾದ ಲೀಲೆಗಳ ಮೂಲಕ ಸಹಸ್ರಮಾನಕ್ಕಾಗಿ ಭಾರತದ ಬೌದ್ಧಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ರಮ್ಯನೋಟವನ್ನು ರೂಪಿಸಿದ್ದಾನೆ. ಮನುಕುಲಕ್ಕೆ ಶ್ರೀ ಕೃಷ್ಣನ ಕೊಡುಗೆಯನ್ನು ಪೂರ್ಣವಾಗಿ ಗ್ರಹಿಸುವುದು ಮತ್ತು ಅಂದಾಜಿಸುವುದು ಮನುಷ್ಯ ಮಾತ್ರದವನಿಗಂತೂ ಸಾಧ್ಯವಿಲ್ಲ. ಈ ಲೋಕಕ್ಕೆ ಅವನು ನೀಡಿರುವ ದಿವ್ಯ ಅನುಗ್ರಹವನ್ನು ಅಭಿವಂದಿಸುವ ಮತ್ತು ಸಂಭ್ರಮಿಸುವ ಪ್ರಯತ್ನ ಮಾತ್ರ ಇದಾಗಿದೆ. ವೃಂದಾವನದ ಪವಿತ್ರ ಭೂಮಿಯಲ್ಲಿ ಶ್ರೀ ಕೃಷ್ಣನಿಗೆ ವಿಶ್ವ ಮಾನ್ಯ ಅಪ್ರತಿಮ ಭವ್ಯ ಸ್ಮಾರಕವನ್ನು ಸೃಷ್ಟಿಸಬೇಕು ಮತ್ತು ಜಗತ್ತಿನ ಮನಸ್ಸುಗಳಲ್ಲಿ ಕೃಷ್ಣನನ್ನು ಹೆಮ್ಮೆಯಿಂದ ನೆಲೆಸುವಂತೆ ಮಾಡಬೇಕು ಹಾಗೂ ವೃಂದಾವನವನ್ನು ಭಾರತದ ಆಧ್ಯಾತ್ಮಿಕ ರಾಜಧಾನಿಗಳಲ್ಲಿ ಒಂದು ಎಂದು ವಿಶ್ವ ನಕ್ಷೆಯಲ್ಲಿ ತೋರುವಂತೆ ಮಾಡಬೇಕು ಎನ್ನುವುದು ಭಕ್ತರ ಆಶಯವಾಗಿದೆ.
ಶ್ರೀ ಕೃಷ್ಣನಿಗೆ ಒಂದು ಚೆನ್ನಾದ ಗಗನಚುಂಬಿ ಮಂದಿರವನ್ನು ನಿರ್ಮಿಸುವುದೂ ಕೂಡ ಕೃಷ್ಣಪ್ರಜ್ಞೆಯ ನೋಟ, ದೃಷ್ಟಿಯಾಗಿದೆ ಎಂದು ಶ್ರೀಲ ಪ್ರಭುಪಾದರು ಮುಂಬಯಿಯಲ್ಲಿ ಮಾಡಿದ ಉಪನ್ಯಾಸವೊಂದರಲ್ಲಿ ಹೇಳಿದರು. ಇದು ಕೃಷ್ಣಪ್ರಜ್ಞೆಯ ದೃಷ್ಟಿಯಾಗಿದೆ. ಓ, ಎಷ್ಟೊಂದು ಗಗನಚುಂಬಿ ಕಟ್ಟಡಗಳಿವೆ! ಕೃಷ್ಣನಿಗಾಗಿ ಒಂದು ಗಗನಚುಂಬಿ ಮಂದಿರವನ್ನೇಕೆ ನಿರ್ಮಿಸಬಾರದು? ಅದೇ ಕೃಷ್ಣಪ್ರಜ್ಞೆ. ನಮ್ಮ ಲೌಕಿಕ ಚಟುವಟಿಕೆಗಳನ್ನು ಪರಿಶುದ್ಧಗೊಳಿಸಲು ನಮ್ಮ ಪ್ರವೃತ್ತಿಯನ್ನು ಹೇಗೆ ಕೃಷ್ಣನಿಗಾಗಿ ಉಪಯೋಗಿಸಕೊಳ್ಳಬಹುದು ಎನ್ನುವುದನ್ನು ಅವರು ಮತ್ತೊಂದು ಉಪನ್ಯಾಸದಲ್ಲಿ ವಿವರಿಸಿದ್ದರು.
ಮಂದಿರದ ಸಂಕೀರ್ಣದಲ್ಲಿ ವೃಂದಾವನ ಚಂದ್ರೋದಯ ಮಂದಿರ, ಕೃಷ್ಣ ಲೀಲ ಪಾರ್ಕ್, ಕೃಷ್ಣ ಪಾರಂಪರಿಕ ವಸ್ತು ಸಂಗ್ರಹಾಲಯ, ಕೃಷ್ಣ ವಾಸ್ ಮತ್ತು ಕೃಷ್ಣ ಕುಟೀರ ಆಶ್ರಯಗಳಿರುತ್ತವೆ. ಈ ಯೋಜನೆಯಲ್ಲಿ ಇನ್ನೂ ಹೆಚ್ಚಿನ ಆಕರ್ಷಕ ಅಂಶಗಳೂ ಇವೆ. ಕೋಶ ಮಾದರಿಯ (ಕ್ಯಾಪ್ಸೂಲ್) ಲಿಫ್ಟ್ ಸಂದರ್ಶಕರನ್ನು ಗ್ರಹಮಂಡಲ ವ್ಯವಸ್ಥೆಯ ಮೂಲಕ ಕಟ್ಟಡದ ಮೇಲ್ಭಾಗದಲ್ಲಿರುವ ವೀಕ್ಷಣೆ ಗ್ಯಾಲರಿಗೆ ಕರೆದೊಯ್ಯುತ್ತದೆ. ಅಲ್ಲಿಂದ ನಿಮಗೆ ವ್ರಜ ಮಂಡಲದ ಅಪೂರ್ವ ದರ್ಶನವಾಗುತ್ತದೆ. ವೃಂದಾವನದ ೧೨ ವೇದಾಂತ ವನಗಳು ಇಲ್ಲಿ ಪುನರ್ ರೂಪಗೊಳ್ಳುತ್ತವೆ. (ದಾದಶ ಕಾನನ). ಸುಂದರವಾದ ಪುಷ್ಪ ಮತ್ತು ಫಲಭರಿತ ಮರಗಿಡಗಳು, ಹಕ್ಕಿಗಳ ಇಂಪಾದ ಗಾನವನ್ನು ಕೃಷ್ಣನ ಮೂಲ ಗ್ರಂಥಗಳಲ್ಲಿ ವಿವರಿಸಿರುವಂತೆಯೇ ಪುನರ್ ರೂಪಿಸುವುದು ಇಲ್ಲಿನ ವಿಶೇಷ ಆಕರ್ಷಣೆ. ಅಲ್ಲಿ ಅಂಕುಡೊಂಕಾದ ಮತ್ತು ಜುಳು ಜುಳು ಹರಿಯುವ ಯಮನಾ ನದಿಯ ತೊರೆ (ನದಿಯ ಖಾರಿ) ಇರುತ್ತದೆ. ಅದರಲ್ಲಿನ ಕಮಲ ಭರಿತ ಕೊಳಗಳು ವೀಕ್ಷಕರನ್ನು ಕೃಷ್ಣನ ಲೋಕ ಮತ್ತು ಕಾಲಕ್ಕೆ ಕರೆದೊಯ್ಯುತ್ತದೆ. ವ್ರಜದಲ್ಲಿ ಶ್ರೀ ಕೃಷ್ಣನ ಲೀಲೆಗಳ ಪ್ರಮುಖ ಸ್ಥಳಗಳನ್ನು ಇಡೀ ಕುಟುಂಬಕ್ಕೆ ರಂಜಿಸುವಂತೆ ಬಿಂಬಿಸಲಾಗುವುದು.
ಸಾವಿರಾರು ವರ್ಷಗಳಿಂದ ಭಾರತದ ವಿಭಿನ್ನ ಸಂಸ್ಕೃತಿಯಲ್ಲಿ ಆಚರಿಸುತ್ತ ಪರಿಪೂರ್ಣಗೊಳಿಸಿರುವ ಕೃಷ್ಣನ ಭವ್ಯ ಪರಂಪರೆ ಮತ್ತು ಕಲಾತ್ಮಕ ಉತ್ಸವಾಚರಣೆಗಳನ್ನು ಇಲ್ಲಿ ಪ್ರತಿಬಿಂಬಿಸಲಾಗುವುದು. ವೃಂದಾವನ ಚಂದ್ರೋದಯ ಮಂದಿರವು ಭಾರತೀಯರಲ್ಲಿ ಎಚ್ಚರವನ್ನು, ಆಸಕ್ತಿಯನ್ನು ಉಂಟು ಮಾಡುವ ಉದ್ದೇಶಹೊಂದಿದೆ ಮತ್ತು ಒಂದು ಅಪೂರ್ವ ರಾಷ್ಟ್ರವನ್ನು ಬಿಂಬಿಸುತ್ತದೆ. ಎಂತಹ ರಾಷ್ಟ್ರ? ಅದು ಕೇವಲ ಪ್ರತಿಭೆ, ಸೃಜನಾತ್ಮಕ ಮತ್ತು ಶಕ್ತಿಯಿಂದ ತುಂಬಿರುವುದಷ್ಟೇ ಅಲ್ಲ, ಆಧ್ಯಾತ್ಮಿಕ ದೇಷ್ಟಿಕೋನದಿಂದ ಮಾರ್ಗದರ್ಶಕವಾದ ಉದಾತ್ತ ಮೌಲ್ಯಗಳು ಮತ್ತು ಗುಣಗಳಿಂದಲೂ ಅಲಂಕೃತಗೊಂಡಿರುತ್ತದೆ.
ವೃಂದಾವನ ಚಂದ್ರೋದಯ ಮಂದಿರವು ವೃಂದಾವನವನ್ನು ವಿಶ್ವ ನಕ್ಷೆಯಲ್ಲಿ ವಿಜೃಂಬಿಸುವಂತೆ ಮಾಡುವ ಆಶಯಹೊಂದಿದೆ.
ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ – www.vcm.org.in