ಬೆಂಗಳೂರಿನಲ್ಲಿ ಒಂದು ಅಪೂರ್ವ ಧಾರ್ಮಿಕ ಥೀಮ್ ಪಾರ್ಕ್
ಭಾರತದ ಶ್ರೇಷ್ಠ ಮಹಾ ಕಾವ್ಯಗಳ ಸಂದೇಶ ಮತ್ತು ಲೀಲೆಗಳನ್ನು ಪ್ರಸ್ತುತ ಪಡಿಸಲು ವೈಕುಂಠ ಗಿರಿಯ ಮೇಲೆ ಕೃಷ್ಣ ಲೀಲ ಥೀಮ್ (ವಿಷಯಾಧಾರಿತ) ಪಾರ್ಕ್ ಎನ್ನುವ ಒಂದು ಬೃಹತ್ತಾದ ಸಾಂಸ್ಕೃತಿಕ ಸಂಕೀರ್ಣವನ್ನು ರೂಪಿಸಲಾಗುತ್ತಿದೆ. ವೈಕುಂಠ ಗಿರಿಯು ೨೮ ಎಕರೆ ಪ್ರದೇಶದ ಗಿರಿಯಾಗಿದ್ದು ಅದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿದೆ. ಇತರ ಯಾವುದೇ ಪ್ರವಾಸಿ ಯೋಜನೆಯ ಗುಣಾತ್ಮಕ ಅಂಶಗಳು ಮತ್ತು ಸಾಮಾಜಿಕ ಪ್ರಯೋಜನಗಳೊಂದಿಗೆ ಇದು ಬೆಂಗಳೂರಿನ ಮತ್ತೊಂದು ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಲಿದೆ.
ಸುಮಾರು ೭೦೦ ಕೋಟಿ ರೂಪಾಯಿ ಅಂದಾಜಿನ ಈ ಬೃಹತ್ ಯೋಜನೆಯನ್ನು ಇಸ್ಕಾನ್ ಬೆಂಗಳೂರಿನ ಭಕ್ತರಿಂದ ರೂಪಿಸಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಅಭೂತಪೂರ್ವ ಐತಿಹಾಸಿಕ ಸಾಹಸವೊಂದನ್ನು ಪ್ರಯತ್ನಿಸಲಾಗುತ್ತಿದೆ.
ಈಗ ನಮ್ಮ ಮಕ್ಕಳ ಮನಸ್ಸು ಸೂಪರ್‌ಮ್ಯಾನ್, ಸ್ಪೈಡರ್‌ಮ್ಯಾನ್ ಮತ್ತಿತರ ಪಶ್ಚಿಮ ರಾಷ್ಟ್ರಗಳಿಂದ ಬರುತ್ತಿರುವ ಅಂತಹ ಇತರ ಪಾತ್ರಗಳ ಗೀಳಿನಿಂದ ತುಂಬಿದೆ. ಆದುದರಿಂದ ಕೃಷ್ಣ, ರಾಮ ಮತ್ತು ಹನುಮಾನ್ ಅವರಂತಹ ನಮ್ಮ ವೈದಿಕ ನಾಯಕರ ಮಹಿಮೆಯ ಲೀಲೆಗಳಿಂದ ಯುವ ಪೀಳಿಗೆಯು ಪ್ರಭಾವಿತರಾಗುವಂತೆ ಮಾಡುವುದೇ ಈ ಯೋಜನೆಯ ಗುರಿಯಾಗಿದೆ. ಈ ಮಹಾನ್ ನಾಯಕರ ಲೀಲೆಗಳು ಬಿಂಬಿಸುವ ಗಾಢ ಮೌಲ್ಯಗಳನ್ನು ಯುವ ಜನರ ಮನಸ್ಸಿನಲ್ಲಿ ಸ್ಥಾಪಿಸುವುದೂ ಈ ಯೋಜನೆಯ ಉದ್ದೇಶವಾಗಿದೆ.
ಈ ಸಾಂಸ್ಕೃತಿಕ ಸಂಕೀರ್ಣವು ಭೂಮಿ ಮಟ್ಟದಲ್ಲಿ ಶ್ರೀ ಪುರಿ ಜಗನ್ನಾಥ ಮಂದಿರ ಮತ್ತು ಶ್ರೀ ರಾಧಾ ಕೃಷ್ಣ ಮಂದಿರದೊಂದಿಗೆ ಪಾರಂಪರಿಕ ದೇವಸ್ಥಾನ ವಿನ್ಯಾಸ ಮತ್ತು ಆಧುನಿಕ ವಾಸ್ತು ಶಿಲ್ಪ ಶಾಸ್ತ್ರದ ಸೌಹಾರ್ದಯುತ ಸಮ್ಮಿಲನವಾಗಿದೆ.
ಶ್ರೀಲ ಪ್ರಭುಪಾದರು (ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯರು) ಯುಕ್ತ ವೈರಾಗ್ಯದ ತತ್ತ್ವಗಳನ್ನು ಬೋಧಿಸಿದರು. ಅಂದರೆ ಈ ಲೋಕದ ಕೆಲವನ್ನು ಲೌಕಿಕ ಎಂದು ತಿರಸ್ಕರಿಸಬಾರದು, ಬದಲಿಗೆ ಅವುಗಳನ್ನು ಮಾನವೀಯ ಉನ್ನತಿಗಾಗಿ ಕೃಷ್ಣನ ಸೇವೆಯಲ್ಲಿ ಸೂಕ್ತವಾಗಿ ತೊಡಗಿಸಿಕೊಳ್ಳಬೇಕು. ಅವರು ಬೋಧಿಸಿದ ಯುಕ್ತ ವೈರಾಗ್ಯದ ತತ್ತ್ವಗಳು ಕೃಷ್ಣ ಲೀಲ ಥೀಮ್ ಪಾರ್ಕ್‌ನ ಯೋಜನೆಗೆ ಪ್ರೇರಕವಾಗಿದೆ. ಭಗವಂತನ ಮತ್ತು ಮಾನವೀಯತೆಯ ಸೇವೆಯಲ್ಲಿ ಈ ಬೃಹತ್ ಪ್ರಯತ್ನದ ಕಾರ್ಯರೂಪಕ್ಕೆ ಆಧುನಿಕ ತಂತ್ರಜ್ಞಾನ ಮತ್ತು ಆಡಳಿತ ಪದ್ಧತಿಯು ಇಲ್ಲಿ ಸಂಯೋಜನೆಗೊಂಡಿದೆ.
ಶ್ರೀ ಜಗನ್ನಾಥ, ಬಲದೇವ ಮತ್ತು ಸುಭದ್ರಾರ ವಿಗ್ರಹಗಳನ್ನು ಹಾಗೂ ಶ್ರೀ ಸುದರ್ಶನ ನರಸಿಂಹ ವಿಗ್ರಹಗಳನ್ನು ೨೦೧೩ರಲ್ಲಿ ಈಗಾಗಲೇ ಪ್ರತಿಷ್ಠಾಪಿಸಲಾಗಿದೆ.
ಆಧುನಿಕ ಸಮಾಜಕ್ಕೆ ಶ್ರೀಲ ಪ್ರಭುಪಾದರ ಕೊಡುಗೆಯ ಗೌರವಾರ್ಥ ಪೂಜಾ ಮಂದಿರ ಉಂಟು. ಮಾನವ ತ್ಯಾಗ ಮತ್ತು ಕರುಣೆಯ ಮರ್ಮಸ್ಪರ್ಶ ಕಥೆಯನ್ನು ಹೇಳಲು ವ್ಯಾಪಕವಾದ ವಿಷಯಾಧಾರಿತ ನಿರಂತರ ದೃಶ್ಯಗಳನ್ನು ಪ್ರತಿನಿಧಿಸುವ ರಂಗಸಜ್ಜಿನ ಮೂಲಕ ಶ್ರೀಲ ಪ್ರಭುಪಾದರ ಜೀವನ ಮತ್ತು ಕಾರ್ಯವನ್ನು ಇಲ್ಲಿ ನಿರೂಪಿಸಲಾಗುವುದು.
ಸಂಕೀರ್ಣದಲ್ಲಿ ವೈದಿಕ ಜ್ಞಾನದ ಪ್ರಸರಣಕ್ಕಾಗಿ ತರಗತಿಯ ಅನೇಕ ಕೋಣೆಗಳು, ವಾಕ್ ದೃಶ್ಯ ಅಂಗಳಗಳು, ವೈದಿಕ ಗ್ರಂಥಾಲಯ, ಸಿಬ್ಬಂದಿ ಕೋಣೆಗಳು, ಆಡಳಿತ ಕಚೇರಿಗಳು ಮತ್ತು ತತ್ ಸಂಬಂಧಿತ ಸೌಲಭ್ಯಗಳನ್ನು ಹೊಂದಿರುತ್ತದೆ.