ಇಸ್ಕಾನ್‌ನ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರ ಆವಿರ್ಭಾವ ದಿನವನ್ನು ವ್ಯಾಸ ಪೂಜೆಯಾಗಿ ಆಚರಿಸಲಾಗುತ್ತದೆ. ಶ್ರೀಲ ಪ್ರಭುಪಾದರು 1896 ರಲ್ಲಿ, ನಂದೋತ್ಸವದಂದು (ಜನ್ಮಾಷ್ಟಮಿಯ ಮರುದಿನ) ಜನಿಸಿದರು.
ವೇದಗಳು ಮೂಲತಃ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಂದ ಹೊರಹೊಮ್ಮಿದವು. ಶ್ರೀ ಕೃಷ್ಣನು ವೈದಿಕ ಜ್ಞಾನವನ್ನು ವಿಶ್ವದ ಸೃಷ್ಟಿಕರ್ತ ಬ್ರಹ್ಮನಿಗೆ ನೀಡಿದನು. ಬ್ರಹ್ಮನು ಅದನ್ನು ತನ್ನ ಪುತ್ರ ನಾರದದೇವರಿಗೆ ಬೋಧಿಸಿದನು. ನಾರದರು ಅದನ್ನು ವ್ಯಾಸದೇವರಿಗೆ ಬೋಧಿಸಿದರು. ವ್ಯಾಸದೇವರು ವೈದಿಕ ಜ್ಞಾನವನ್ನು ಬರೆದಿಟ್ಟರು. ತಮ್ಮ ಆಧ್ಯಾತ್ಮಿಕ ಗುರು ಶ್ರೀ ನಾರದರ ಆದೇಶದಂತೆ ವ್ಯಾಸದೇವರು ಶ್ರೀಮದ್ ಭಾಗವತವನ್ನು ರಚಿಸಿದರು. ಭಾಗವತವನ್ನು ನಿಷ್ಕಳಂಕ ಪುರಾಣ ಎಂದು ವರ್ಣಿಸುತ್ತಾರೆ.
ವ್ಯಾಸದೇವರಿಂದ ಬರುವ ಗುರು ಪರಂಪರೆಯ ಆಧ್ಯಾತ್ಮಿಕ ಗುರುವನ್ನು ವ್ಯಾಸದೇವರ ಪ್ರತಿನಿಧಿ ಎಂದು ಪರಿಗಣಿಸಲಾಗುತ್ತದೆ. ಈ ಗುರು ಶಿಷ್ಯ ಪರಂಪರೆಯಲ್ಲಿ ಶ್ರೀಲ ಪ್ರಭುಪಾದರು 32 ನೆಯ ಆಚಾರ್ಯರಾಗಿದ್ದಾರೆ ಮತ್ತು ಅವರ ಶಿಷ್ಯರು ಅವರ ಆವಿರ್ಭಾವ ದಿನವನ್ನು ವ್ಯಾಸ ಪೂಜೆಯಾಗಿ ಆಚರಿಸುವರು.
ಇಸ್ಕಾನ್ ಭಕ್ತರಿಗೆ ಇದು ವರ್ಷದ ಅತ್ಯಂತ ಮುಖ್ಯ ಉತ್ಸವವಾಗಿದೆ. ಭಕ್ತರು ಮಧ್ಯಾಹ್ನದವರೆಗೆ ಉಪವಾಸ ಇರುತ್ತಾರೆ. ಆಧ್ಯಾತ್ಮಿಕ ಗುರುಗಳಿಗೆ ಅರ್ಪಿಸಲು ಅನೇಕ ವಿಧವಾದ ಭಕ್ಷ್ಯಗಳನ್ನು ತಯಾರಿಸಲಾಗುವುದು ಮತ್ತು ಆಚಾರ್ಯರು ಅದನ್ನು ಶ್ರೀ ಕೃಷ್ಣನಿಗೆ ಸಮರ್ಪಿಸುವರು. ಶ್ರೀಲ ಪ್ರಭುಪಾದರನ್ನು ಕೊಂಡಾಡಿ ಬರೆದಿರುವ ಗೌರವ ಸಮರ್ಪಣೆಯನ್ನು ಭಕ್ತರು ಓದುವರು. ಭವ್ಯವಾದ ಅಭಿಷೇಕವನ್ನು ನೆರವೇರಿಸಲಾಗುವುದು. ಅನಂತರ ಪ್ರಸಾದವನ್ನು ಹಂಚಲಾಗುವುದು.