ಏಕಾದಶಿಯು ತಿಂಗಳಿನಲ್ಲಿ ಎರಡು ಬಾರಿ ಬರುತ್ತದೆ. ಆದರೆ ಮಾರ್ಗಶಿರ ಮಾಸದಲ್ಲಿ (ಡಿಸೆಂಬರ್-ಜನವರಿ), ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯು ವಿಶೇಷವಾಗಿದ್ದು ಅದನ್ನು ವೈಕುಂಠ ಏಕಾದಶೀ ಎಂದು ಕೊಂಡಾಡಲಾಗುತ್ತದೆ. ಇದು ದಕ್ಷಿಣ ಭಾರತದ ಪ್ರಮುಖ ಉತ್ಸವಗಳಲ್ಲಿ ಒಂದಾಗಿದ್ದು ಎಲ್ಲ ವಿಷ್ಣು ಮಂದಿರಗಳಲ್ಲಿ ಆಚರಿಸಲಾಗುತ್ತದೆ.
ಶ್ರೀ ಸಂಪ್ರದಾಯದ ಶ್ರೇಷ್ಠ ಭಕ್ತರಲ್ಲಿ ಒಬ್ಬರಾದ ನಮ್ಮಾಳ್ವಾರ್ ಅವರು ಇದೇ ದಿನ ಭಗವದ್‌ಧಾಮಕ್ಕೆ ಹಿಂದಿರುಗಿದರು. ಇದರ ಸಂಸ್ಮರಣೆಯಾಗಿ, ವಿಷ್ಣು ಮಂದಿರಗಳಲ್ಲಿ, ದೇವಸ್ಥಾನದ ಉತ್ತರ ಭಾಗದಲ್ಲಿ ವಿಶೇಷ ದ್ವಾರ – ವೈಕುಂಠ ದ್ವಾರವನ್ನು ಈ ದಿನ ತೆರೆಯುತ್ತಾರೆ. ವೈಕುಂಠ ಏಕಾದಶಿಯಂದು ವೈಕುಂಠ ದ್ವಾರವನ್ನು ಪ್ರವೇಶಿಸುವವರು ಆಧ್ಯಾತ್ಮಿಕ ಧಾಮವನ್ನು ಪಡೆಯುವರು ಎಂಬ ನಂಬಿಕೆ ಇದೆ.
ವೈಕುಂಠ ಏಕಾದಶೀ ಆಚರಣೆ ಇಂತಿದೆ :
ಮುಂಜಾನೆ 3.00 ಗಂಟೆಗೆ ಸುಪ್ರಭಾತ ಸೇವೆ. ಭಗವಂತನನ್ನು ಎಬ್ಬಿಸಲು ಭಕ್ತರು ಶ್ರೀ ವೆಂಕಟೇಶ್ವರ ಸುಪ್ರಭಾತ ಸ್ತೋತ್ರವನ್ನು ಹಾಡುವರು. ಶ್ರೀ ಶ್ರೀನಿವಾಸ ಗೋವಿಂದನಿಗೆ ಧೂಪ, ದೀಪ, ಅರ್ಘ್ಯ, ವಸ್ತ್ರ, ಪುಷ್ಪ ಮತ್ತು ಚಾಮರಗಳಿಂದ ಭವ್ಯವಾದ ಆರತಿಯನ್ನು ಅರ್ಪಿಸಲಾಗುವುದು.
ಮುಂಜಾನೆ 3.45 ಕ್ಕೆ : ಶ್ರೀ ಶ್ರೀನಿವಾಸ ಗೋವಿಂದ ಮೂಲ ವಿಗ್ರಹಕ್ಕೆ ಅಭಿಷೇಕ. ಶ್ರೀ ಶ್ರೀನಿವಾಸ ಗೋವಿಂದ ಮೂಲ ವಿಗ್ರಹಕ್ಕೆ ವೈಭವದ ಅಭಿಷೇಕ ಮಾಡಲಾಗುವುದು. ಭಗವಂತನಿಗೆ ಪಂಚಾಮೃತ, ಪಂಚಗವ್ಯ, ಹಣ್ಣುಗಳ ರಸ, ಗಿಡ ಮೂಲಿಕೆ ಜಲ ಮತ್ತು ಇತರ ಅನೇಕ ಶುಭ ವಸ್ತುಗಳಿಂದ ಅಭಿಷೇಕ ಮಾಡುವಾಗ ಭಕ್ತರು ಬ್ರಹ್ಮ ಸಂಹಿತ ಮತ್ತು ಇತರ ಅನೇಕ ಪ್ರಾರ್ಥನೆಗಳನ್ನು ಪಠಿಸುವರು.
ಮುಂಜಾನೆ 5.00 ಕ್ಕೆ : ವೈಕುಂಠ ದ್ವಾರ ವಿಧಿಗಳು. ಪ್ರಧಾನ ದೇವಸ್ಥಾನದ ಅಂಗಳದ ಉತ್ತರದ ದ್ವಾರವನ್ನು ವೈಕುಂಠ ದ್ವಾರ ಎಂದು ಅಲಂಕರಿಸಲಾಗುತ್ತದೆ. ಲಕ್ಷ್ಮಿ ನಾರಾಯಣ ಅಲಂಕಾರದಲ್ಲಿ ಶ್ರೀ ರಾಧಾ ಕೃಷ್ಣಚಂದ್ರ ವಿಗ್ರಹಗಳನ್ನು ಮೆರವಣಿಗೆಯಲ್ಲಿ ವೈಕುಂಠ ದ್ವಾರಕ್ಕೆ ಕರೆದುಕೊಂಡು ಹೋಗಿ ಉಯ್ಯಾಲೆಯಲ್ಲಿ ಆಸೀನಗೊಳಿಸಲಾಗುವುದು.
ದರ್ಶನವು ಬೆಳಗ್ಗೆ 8 ರಿಂದ ರಾತ್ರಿ 11 ಗಂಟೆವರೆಗೆ ಇರುತ್ತದೆ. ಭಗವಂತನ ದರ್ಶನ ಮತ್ತು ವೈಕುಂಠ ದ್ವಾರವನ್ನು ಪ್ರವೇಶಿಸಲು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಅಂದು ಮಂದಿರಕ್ಕೆ ಭೇಟಿ ನೀಡುತ್ತಾರೆ.
ಪ್ರಸಾದದ ತಯ್ಯಾರಿ ಮತ್ತು ವಿತರಣೆಗಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಶ್ರೀ ಶ್ರೀನಿವಾಸ ಗೋವಿಂದನ ಅನುಗ್ರಹ ಪಡೆಯಲು ಅಂದಾಜು ಒಂದು ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದ್ದು, ಎಲ್ಲರಿಗೂ ಉಚಿತ ಪ್ರಸಾದವನ್ನು ಹಂಚಲು ವ್ಯವಸ್ಥೆ ಮಾಡಲಾಗುತ್ತದೆ.