lord rama

ಭಗವಾನ್ ಶ್ರೀ ರಾಮಚಂದ್ರನು ಆವಿರ್ಭವಿಸಿದ ಶುಭ ದಿನವೇ ಶ್ರೀ ರಾಮನವಮಿ. ಶ್ರೀ ರಾಮಚಂದ್ರನು ಚೈತ್ರ ಮಾಸ (ಮಾರ್ಚ್-ಏಪ್ರಿಲ್) ನವಮಿಯಂದು ಅವತರಿಸಿದನು. ಈ ಪವಿತ್ರ ದಿನವನ್ನು ಪ್ರತಿ ವರ್ಷ ಶ್ರೀ ರಾಮನವಮಿ ಎಂದು ಆಚರಿಸಲಾಗುತ್ತಿದೆ.

ಶ್ರೀ ರಾಮಚಂದ್ರನು ಅಯೋಧ್ಯೆಯ ಮಹಾರಾಜ ದಶರಥನ ಪುತ್ರನಾಗಿ ಆವಿರ್ಭವಿಸಿದನು. ಅವರದು ಇಕ್ಷ್ವಾಕು ವಂಶ. (ರಘು ವಂಶ ಎಂದೂ ಕರೆಯುತ್ತಾರೆ.) ದಶರಥನಿಗೆ ಮೂವರು ಪತ್ನಿಯರು : ಕೌಸಲ್ಯ, ಕೈಕೇಯಿ ಮತ್ತು ಸುಮಿತ್ರ. ಆದರೆ ಅವನಿಗೆ ಮಕ್ಕಳಿರಲಿಲ್ಲ. ಮಹರ್ಷಿ ವಸಿಷ್ಠರ ಸಲಹೆಯಂತೆ ದಶರಥನು ಪುತ್ರ ಕಾಮೇಷ್ಠಿ ಯಜ್ಞವನ್ನು ನೆರವೇರಿಸಿದನು. ಇದರ ಫಲವಾಗಿ ಮೂವರು ಪತ್ನಿಯರೂ ಪುತ್ರರಿಗೆ ಜನ್ಮ ನೀಡಿದರು. ಕೌಸಲ್ಯಳು ರಾಮಚಂದ್ರನಿಗೆ, ಕೈಕೇಯಿಯು ಭರತನಿಗೆ ಜನ್ಮ ನೀಡಿದರು. ಸುಮಿತ್ರಳಿಗೆ ಲಕ್ಷ್ಮಣ ಮತ್ತು ಶತ್ರುಘ್ನ ಎಂಬ ಅವಳಿ ಮಕ್ಕಳು ಹುಟ್ಟಿದರು.

ಶ್ರೇಷ್ಠ ಋಷಿಗಳಾದ ವಾಲ್ಮೀಕಿಯವರು ರಾಮಾಯಣದಲ್ಲಿ ಶ್ರೀ ರಾಮನ ಜೀವನ ಮತ್ತು ಲೀಲೆಗಳನ್ನು ಸೊಗಸಾಗಿ ವರ್ಣಿಸಿದ್ದಾರೆ. ಶ್ರೀ ಶುಕದೇವ ಗೋಸ್ವಾಮಿ ಅವರು ಪರೀಕ್ಷಿತ ಮಹಾರಾಜನಿಗೆ ನಿರೂಪಿಸಿದ ರಾಮಾಯಣದ ಸಂಕ್ಷಿಪ್ತ ರೂಪವನ್ನು ಶ್ರೀಮದ್ ಭಾಗವತದ (ಭಾಗವತ ಪುರಾಣ) 9ನೆಯ ಸ್ಕಂಧದಲ್ಲಿ ಸೇರಿಸಲಾಗಿದೆ.

ಶ್ರೀ ರಾಮನವಮಿ ಆಚರಣೆ

ಇಸ್ಕಾನ್ ಬೆಂಗಳೂರಿನಲ್ಲಿ ಆಚರಿಸುವ ಪ್ರಮುಖ ಉತ್ಸವಗಳಲ್ಲಿ ಶ್ರೀ ರಾಮನವಮಿ ಕೂಡ ಒಂದು. ಭಕ್ತರು ಇಡೀ ದಿನ ಉಪವಾಸ ಇರುತ್ತಾರೆ ಮತ್ತು  ಶ್ರೀ ರಾಮನ ಪವಿತ್ರ ನಾಮಗಳನ್ನು ಪಠಿಸುತ್ತಾರೆ ಅಥವಾ ರಾಮಾಯಣವನ್ನು ಕೇಳುತ್ತಾರೆ. ಸೂರ್ಯಾಸ್ತದ ಅನಂತರ ಅವರು ಉಪವಾಸವನ್ನು ಅಂತ್ಯಗೊಳಿಸುವರು.

ಶ್ರೀ ಶ್ರೀ ಕೃಷ್ಣ ಬಲರಾಮ ಅರ್ಚಾ ವಿಗ್ರಹಗಳನ್ನು ರಾಮ ಮತ್ತು ಲಕ್ಷ್ಮಣರಂತೆ ಅಲಂಕರಿಸಲಾಗುವುದು. ಈ ವಿಶೇಷ ಅಲಂಕಾರವು ವರ್ಷದಲ್ಲಿ ಒಮ್ಮೆ ಮಾತ್ರ. ವೃಂದಾವನದ ಗೋಪಾಲಕ ಬಾಲಕರಾದ ಶ್ರೀ ಶ್ರೀ ಕೃಷ್ಣ ಬಲರಾಮರು ಬಿಲ್ಲು ಬಾಣಗಳನ್ನು ಹಿಡಿದು ಅಯೋಧ್ಯ ರಾಜಕುಮಾರರಂತೆ ಕಾಣಿಸಿಕೊಳ್ಳುವರು.

ಸೀತಾ ರಾಮರಂತೆ ಅಲಂಕೃತಗೊಂಡ ಶ್ರೀ ಶ್ರೀ ರಾಧಾ ಕೃಷ್ಣಚಂದ್ರ ಉತ್ಸವ ವಿಗ್ರಹಗಳ ಉತ್ಸವವು ಸಂಜೆ ಮಂದಿರದ ಆವರಣದಲ್ಲಿ ನಡೆಯುತ್ತದೆ. ಭಕ್ತರು ಶ್ರೀ ರಾಮಚಂದ್ರನ ವೈಭವಗಳನ್ನು ಕೊಂಡಾಡುತ್ತ ಹಾಡುವರು. ಉತ್ಸವದ ಅನಂತರ ಭಕ್ತರು ಶ್ರೀ ರಾಮ ಅಷ್ಟೋತ್ತರ ಶತ ನಾಮವನ್ನು ಜಪಿಸುತ್ತ ರಾಮ ತಾರಕ ಹೋಮವನ್ನು ನೆರವೇರಿಸುವರು.

ಹೋಮದ ಅನಂತರ ವಿಶೇಷ ಆರತಿಯನ್ನು ನೆರವೇರಿಸಲಾಗುವುದು. ಭಕ್ತರು ಇಡೀ ರಾಮಾಯಣವನ್ನು ನಿರೂಪಿಸುವ ನಾಮ ರಾಮಾಯಣವನ್ನು ಹಾಡುವರು. ಅನಂತರ ಪಲ್ಲಕ್ಕಿ ಉತ್ಸವ ನಡೆಯುತ್ತದೆ.

ಶ್ರೀ ರಾಮನವಮಿಯಂದು ಸಂಜೆ ಮಂದಿರಕ್ಕೆ ಬರುವ ಎಲ್ಲರಿಗೂ ಪಾನಕ ಮತ್ತು ಕೋಸಂಬರಿಯನ್ನು ಪ್ರಸಾದವಾಗಿ ನೀಡಲಾಗುವುದು. ಈ ಶುಭ ದಿನದಂದು ಮಂದಿರಕ್ಕೆ ಭೇಟ ನೀಡಿ ಭಗವಂತನ ಅನುಗ್ರವನ್ನು ಪಡೆಯಿರಿ.