ಶ್ರೀ ನಿತ್ಯಾನಂದ ಪ್ರಭುಗಳ ಆವಿರ್ಭಾವದ ಶುಭ ದಿನವೇ ನಿತ್ಯಾನಂದ ತ್ರಯೋದಶಿ. ಸಂಕೀರ್ತನ ಆಂದೋಲನವನ್ನು ಸ್ಥಾಪಿಸಲು ದೇವೋತ್ತಮ ಶ್ರೀ ಕೃಷ್ಣನು ನವದ್ವೀಪದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿದನು. ಈ ಧ್ಯೇಯದಲ್ಲಿ ನೆರವಾಗಲು ಶ್ರೀ ಬಲರಾಮನು ನಿತ್ಯಾನಂದ ಪ್ರಭುವಾಗಿ ಆವಿರ್ಭವಿಸಿದನು. ಶ್ರೀ ನಿತ್ಯಾನಂದ ಪ್ರಭುಗಳು ಬಂಗಾಳದಾದ್ಯಂತ ಭಗವಂತನ ಪವಿತ್ರ ನಾಮವನ್ನು ಹರಡುವ ಮೂಲಕ ಶ್ರೀ ಚೈತನ್ಯರಿಗೆ ನೆರವಾದರು.
ಶ್ರೀ ನಿತ್ಯಾನಂದರು ಪಶ್ಚಿಮ ಬಂಗಾಳದ ಬೀರ್ಭುಂ ಜಿಲ್ಲೆ ಏಕಚಕ್ರ ಗ್ರಾಮದಲ್ಲಿ ಕ್ರಿಸ್ತ ಶಕ 1474 ರಲ್ಲಿ ಅವತರಿಸಿದರು. ಅವರು ಪದ್ಮಾವತಿ ಮತ್ತು ಹಡಾಯ್ ಪಂಡಿತರ ಪುತ್ರ. ಅವರು ಮಾಘ ಶುಕ್ಲ ತ್ರಯೋದಶಿಯಂದು ಜನಿಸಿದರು. ಇಂದಿಗೂ ಯಾತ್ರಿಗಳು ಏಕಚಕ್ರ ಗ್ರಾಮದಲ್ಲಿ ಶ್ರೀ ನಿತ್ಯಾನಂದರು ಆವಿರ್ಭವಿಸಿದ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ಮಂದಿರವನ್ನು ಗರ್ಭವಾಸ ಎಂದು ಕರೆಯುತ್ತಾರೆ.
ನಿತ್ಯಾನಂದ ತ್ರಯೋದಶಿಯಂದು ಭಕ್ತರು ಮಧ್ಯಾಹ್ನದವರೆಗೆ ಉಪವಾಸವಿರುತ್ತಾರೆ ಮತ್ತು ಆಧ್ಯಾತ್ಮಿಕ ಶಕ್ತಿಗಾಗಿ ಶ್ರೀ ನಿತ್ಯಾನಂದರನ್ನು ಪ್ರಾರ್ಥಿಸುತ್ತಾರೆ. ಶ್ರೀ ಶ್ರೀ ನಿತಾಯ್ ಗೌರಾಂಗರ (ಶ್ರೀ ಚೈತನ್ಯ ಮಹಾಪ್ರಭು ಮತ್ತು ಶ್ರೀ ನಿತ್ಯಾನಂದ ಪ್ರಭು) ಪಲ್ಲಕ್ಕಿ ಉತ್ಸವದೊಂದಿಗೆ ಸಂಜೆ ಕಾರ್ಯಕ್ರಮ ಆರಂಭವಾಗುತ್ತದೆ. ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ವಿಗ್ರಹಗಳ ಉತ್ಸವವು ಹರಿನಾಮ ಸಂಕೀರ್ತನೆಯ ಜೊತೆಯಲ್ಲಿ ನಡೆಯುತ್ತದೆ.
ಉತ್ಸವದ ಅನಂತರ ಶ್ರೀ ಶ್ರೀ ನಿತಾಯ್ ಗೌರಾಂಗರಿಗೆ ವೈಭವದ ಅಭಿಷೇಕ ನಡೆಯುತ್ತದೆ. ಸುವಾಸಿತ ನೀರಿನಲ್ಲಿ ವಿಗ್ರಹಗಳಿಗೆ ಪವಿತ್ರ ಸ್ನಾನವಾದ ಮೇಲೆ ಗಂಧದ ತೈಲದ ಅಂಗಮರ್ದನ ನೀಡಲಾಗುವುದು. ಅನಂತರ ಪಂಚಾಮೃತ ಮತ್ತು ಪಂಚಗವ್ಯದ ಅಭಿಷೇಕ ನಡೆಯುತ್ತದೆ. ಇದಾದ ಮೇಲೆ ವಿಗ್ರಹಗಳಿಗೆ ಹಣ್ಣಿನ ರಸ ಮತ್ತು ಗಿಡ ಮೂಲಿಕೆಗಳ ಜಲದಿಂದ ಅಭಿಷೇಕ ನೆರವೇರಿಸಲಾಗುತ್ತದೆ. ಸರ್ವೌಷಧಿ ಸ್ನಾನದ ಅನಂತರ 108 ಕಳಶಗಳ ಜಲದಿಂದ ಪುಣ್ಯ ಸ್ನಾನ.
ಪುಷ್ಪ ವೃಷ್ಟಿಯಿಂದ ಕಾರ್ಯಕ್ರಮ ಪೂರ್ಣಗೊಳ್ಳುತ್ತದೆ. ಇದಾದ ಮೇಲೆ ಛಪ್ಪನ್ ಭೋಗ್ ಅನ್ನು ಅರ್ಪಿಸಲಾಗುವುದು. ಶಯನ ಆರತಿ ಮತ್ತು ಶಯನ ಪಲ್ಲಕ್ಕಿಯೊಂದಿಗೆ ಉತ್ಸವವು ಸಮಾಪ್ತಗೊಳ್ಳುತ್ತದೆ.