ಶ್ರೀ ನರಸಿಂಹ ಜಯಂತಿಯು ದೇವೋತ್ತಮನು ಶ್ರೀ ನರಸಿಂಹನಾಗಿ ಆವಿರ್ಭವಿಸಿದ ದಿನ. ಶ್ರೇಷ್ಠ ಭಕ್ತ ಪ್ರಹ್ಲಾದನನ್ನು ಅವನ ಅಸುರ ತಂದೆ ಹಿರಣ್ಯಕಶಿಪುವಿನಿಂದ ರಕ್ಷಿಸಲು ದೇವೋತ್ತಮ ಶ್ರೀ ಕೃಷ್ಣನು ಅರ್ಧ ಸಿಂಹ ಮತ್ತು ಅರ್ಧ ಮಾನವ ರೂಪದಲ್ಲಿ ಅವತರಿಸಿದನು.

ಯಾವುದೇ ಮಾನವ ಜೀವಿ, ದೇವತೆ ಅಥವಾ ಪ್ರಾಣಿಗಳಿಂದ ತನಗೆ ಸಾವು ಬರಬಾರದೆಂದು ಹಿರಣ್ಯಕಶಿಪು ಬ್ರಹ್ಮನಿಂದ ವಿಶೇಷ ವರವನ್ನು ಪಡೆದುಕೊಂಡಿದ್ದ. ಅಲ್ಲದೆ ಯಾವುದೇ ಅಸ್ತ್ರಗಳಿಂದ ತನ್ನನ್ನು ಕೊಲ್ಲಬಾರದು, ಹಗಲು ಅಥವಾ ರಾತ್ರಿಯಲ್ಲಿ ತನಗೆ ಸಾವುಂಟಾಗಬಾರದು ಎಂದೂ ಅವನು ವರವನ್ನು ಪಡೆದಿದ್ದ. ಆದುದರಿಂದ ಭಗವಂತನು ಅರ್ಧ ಸಿಂಹ ಮತ್ತು ಅರ್ಧ ಮಾನವ ರೂಪದಲ್ಲಿ ಆವಿರ್ಭವಿಸಿ ತನ್ನ ಉಗುರುಗಳಿಂದ ಮುಸ್ಸಂಜೆ ಹೊತ್ತಿನಲ್ಲಿ ಹಿರಣ್ಯಕಶಿಪುವನ್ನು ಸಂಹರಿಸಿದ.

ನರಸಿಂಹದೇವನು ವೈಶಾಖ ಮಾಹೆ (ಮೇ) ಶುಕ್ಲ ಚತುದರ್ಶಿಯಂದು ಮುಸ್ಸಂಜೆಯಲ್ಲಿ ಅವತರಿಸಿದನು. ಭಕ್ತರು ಅಂದು ಮುಸ್ಸಂಜೆವರೆಗೆ ಉಪವಾಸ ಕೈಗೊಳ್ಳುವರು.

ನರಸಿಂಹ ಜಯಂತಿಯ ಶುಭ ದಿನದಂದು ಪ್ರಹ್ಲಾದ ನರಸಿಂಹ ಮಂದಿರವನ್ನು ಸುವಾಸಿತ ಬಣ್ಣಬಣ್ಣದ ಪುಷ್ಪಗಳಿಂದ ಅಲಂಕರಿಸಲಾಗುವುದು.

ಬೆಳಗ್ಗೆ 5 ಗಂಟೆಗೆ : ಪ್ರಹ್ಲಾದ ನರಸಿಂಹನ ಮೂಲ ವಿಗ್ರಹಕ್ಕೆ ಅಭಿಷೇಕ. ಪಂಚಗವ್ಯ, ಪಂಚಾಮೃತ, ಗಿಡ ಮೂಲಿಕೆ ಜಲ, ಹಣ್ಣುಗಳ ರಸ ಮತ್ತು ಪುಷ್ಪಗಳಿಂದ ಮೂಲ ವಿಗ್ರಹಕ್ಕೆ ಅಭಿಷೇಕ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಗುತ್ತದೆ. ಭಗವಂತನನ್ನು ಹೊಸ ವಸ್ತ್ರ ಮತ್ತು ಆಭರಣಗಳಿಂದ ಅಲಂಕರಿಸಲಾಗುವುದು. ದುಷ್ಟ ಶಕ್ತಿಗಳಿಂದ ಸಮಾಜವನ್ನು ರಕ್ಷಿಸಲು ನರಸಿಂಹ ಯಜ್ಞವನ್ನು ನೆರವೇರಿಸಲಾಗುವುದು.

ಸಂಜೆ 6 ಗಂಟೆಗೆ : ನರಸಿಂಹನ ಉತ್ಸವ ಮೂರ್ತಿಗೆ ಅಭಿಷೇಕ. ಸಂಜೆ ಶ್ರೀ ನರಸಿಂಹದೇವನ ಉತ್ಸವ ಮೂರ್ತಿಗೆ ಸುದೀರ್ಘವಾದ ಅಭಿಷೇಕ ನಡೆಯುತ್ತದೆ. ಪಂಚಗವ್ಯ, ಪಂಚಾಮೃತ, ಪವಿತ್ರ ಜಲ, ಗಿಡ ಮೂಲಿಕೆ ಜಲ, ಗಂಧದ ಜಲ, ಹಣ್ಣುಗಳ ರಸ ಮತ್ತು ಅರಿಶಿನ ಮಿಶ್ರಿತ ಜಲಗಳಿಂದ ಭಗವಂತನನ್ನು ಆನಂದಪಡಿಸಲು ಅಭಿಷೇಕ ನೆರವೇರುತ್ತದೆ. ಹಿರಣ್ಯಕಶಿಪುವನ್ನು ಸಂಹರಿಸಿದ ಮೇಲೆ ನರಸಿಂಹನನ್ನು ಶಾಂತಗೊಳಿಸಲು ಪ್ರಹ್ಲಾದನು ಜಪಿಸಿದ, ಭಾಗವತದಿಂದ ಆಯ್ಕೆ ಮಾಡಿದ ವಿಶೇಷ ಪ್ರಾರ್ಥನೆಯನ್ನು ಭಕ್ತರು ಪಠಿಸುವರು. ಅನಂತರ ಭವ್ಯವಾದ ಆರತಿಯನ್ನು ಮಾಡಲಾಗುವುದು. ಭಕ್ತರು ಪುರುಷಸೂಕ್ತವನ್ನು ಜಪಿಸುತ್ತಿದ್ದಂತೆಯೇ ಮಂತ್ರಗಳಿಂದ ಪವಿತ್ರಗೊಳಿಸಿದ 108 ಕಳಶಗಳ ಜಲದಿಂದ ಭಗವಂತನಿಗೆ ಅಭಿಷೇಕ ಮಾಡಲಾಗುವುದು.

ಸಂಜೆ 8 ಗಂಟೆಗೆ : ಶಯನ ಆರತಿ ಮತ್ತು ಪಲ್ಲಕ್ಕಿ ಉತ್ಸವ. ಅಭಿಷೇಕದ ಅನಂತರ ಶ್ರೀ ನರಸಿಂಹದೇವನು 56 ವಿಧಗಳ ಭೋಗವನ್ನು ಸ್ವೀಕರಿಸುವನು. ಅನಂತರ ಉತ್ಸವವು ಶಯನ ಆರತಿ ಮತ್ತು ಪಲ್ಲಕ್ಕಿ ಉತ್ಸವಗಳಿಂದ ಸಮಾಪ್ತಗೊಳ್ಳುತ್ತದೆ.

ಚಂದನ ಯಾತ್ರೆ : ಉತ್ಸವಕ್ಕೆ ಮೂರು ದಿನಗಳ ಮುನ್ನ ಶ್ರೀ ಪ್ರಹ್ಲಾದ ನರಸಿಂಹನಿಗೆ ಚಂದನದ ಚೂರ್ಣದಿಂದ ಅಲಂಕರಿಸಲಾಗುವುದು. ಭಕ್ತರಿಗೆ ವರ್ಷದಲ್ಲಿ ಒಮ್ಮೆ ಮಾತ್ರ ಈ ಚಂದನ ಅಲಂಕಾರದ ಭಗವಂತನ ದರ್ಶನ ಲಭಿಸುತ್ತದೆ. ದೇವೋತ್ತಮನ ಅಲೌಕಿಕ ದೇಹಕ್ಕೆ ಅಲಂಕಾರ ಮಾಡಲು ಬೇಕಾಗುವ ಚಂದನವನ್ನು ಅರೆಯುವ ಸೇವೆಯಲ್ಲಿ ಭಕ್ತರು ಪಾಲ್ಗೊಳ್ಳಬಹುದಾಗಿದೆ.