sri krishna Janmashtami abhisheka
ಶ್ರೀ ಕೃಷ್ಣ ಜನ್ಮಾಷ್ಟಮಿಯು ನಮ್ಮ ಮಂದಿರದ ಅತ್ಯಂತ ಪ್ರಮುಖವಾದ ಉತ್ಸವ. ಶ್ರೀ ಕೃಷ್ಣನ ದಿವ್ಯ ಆವಿರ್ಭಾವವನ್ನು ಇಡೀ ಲೋಕವೇ ಆಚರಿಸುತ್ತದೆ. ನಮ್ಮ ಮಂದಿರದಲ್ಲಿ ಜನ್ಮಾಷ್ಟಮಿ ಆಚರಣೆಗೆ ಸಾಕಷ್ಟು ಮೊದಲೇ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಮಂದಿರವನ್ನು ಹೂವು ಮತ್ತು ತೋರಣಗಳಿಂದ ಅಲಂಕರಿಸಲಾಗುತ್ತದೆ.  ತರಕಾರಿ, ಧಾನ್ಯ ಮತ್ತು ಹಣ್ಣುಗಳು ಅಡುಗೆ ಮನೆಗೆ ಬಂದು ಸೇರುತ್ತವೆ. ಅಸಂಖ್ಯ ಜನರು ಪಾಕಶಾಲೆಯಲ್ಲಿ ಅನೇಕ ರೀತಿಯ ಕೆಲಸಗಳಲ್ಲಿ ನಿರತರಾಗುತ್ತಾರೆ.

ಜನ್ಮಾಷ್ಟಮಿಯಂದು  ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಗೆ 108 ಬಗೆಯ ಖಾದ್ಯಗಳನ್ನು ಅರ್ಪಿಸಲಾಗುವುದು. ತಮ್ಮ ಪ್ರೀತಿಯ ಪ್ರಭುವಿಗೆ ಅರ್ಪಿಸುವ ಈ ಖಾದ್ಯ ಪದಾರ್ಥಗಳನ್ನು ಭಕ್ತರು ಅತ್ಯಂತ ಎಚ್ಚರಿಕೆ ಮತ್ತು ಆಸಕ್ತಿಯಿಂದ ತಯಾರಿಸುವರು. ತಮ್ಮ ದೇವರ ದರ್ಶನಕ್ಕೆಂದು ಈ ಶುಭ ದಿನದಂದು ಮಂದಿರಕ್ಕೆ ಬರುವ ಅಸಂಖ್ಯ ಭಕ್ತರಿಗೆ ಹಂಚಲು ಟನ್ ಗಟ್ಟಲೆ ಸಿಹಿ ಪೊಂಗಲ್ ಅನ್ನು ಕೂಡ ತಯಾರಿಸಲಾಗುತ್ತದೆ.

ಭಗವಂತನ ಪೂಜೆಗೆಂದು ಬಳಸುವ ವಿಧವಿಧವಾದ ಹಿತ್ತಾಳೆ ದೀಪಗಳಿಗೆ ಚಿನ್ನದಂತಹ ಬಣ್ಣದ ಮೆರುಗು ನೀಡುವ ಕಾರ್ಯವು ಮಂದಿರದ ಮತ್ತೊಂದು ಭಾಗದಲ್ಲಿ ನಡೆಯುತ್ತದೆ. ದೇವೋತ್ತಮನ ಪೂಜೆಯ ಸಿದ್ಧತೆಯಲ್ಲಿ ಅನೇಕ ವಿವರಗಳಿರುತ್ತವೆ. ಅತ್ಯಂತ ಪೂಜ್ಯಭಾವದಿಂದ ಭಕ್ತರು ಭಗವಂತನ ವಿಧ್ಯುಕ್ತ ಜಳಕಕ್ಕಾಗಿ ಸಿದ್ಧತೆ ನಡೆಸುತ್ತಾರೆ.

ಕಲಾತ್ಮಕವಾಗಿ ಸುತ್ತಿದ ದಾರಗಳಿಂದ ಕಳಶಗಳನ್ನು ಅಲಂಕರಿಸಲಾಗುವುದು. ಅನಂತರ ಅವುಗಳಲ್ಲಿ ನೀರು ತುಂಬಲಾಗುವುದು. ಈ ಜಲವನ್ನು ಲವಂಗ, ಏಲಕ್ಕಿ, ಕೇಸರಿ, ತುಳಸಿ ಮತ್ತು ಗುಲಾಬಿ ದಳಗಳಿಂದ ಪವಿತ್ರಗೊಳಿಸಲಾಗುವುದು. ದೇವೋತ್ತಮನನ್ನು ಜಲದಲ್ಲಿ ಆಮಂತ್ರಿಸಲಾಗುವುದು. ಕಳಶವನ್ನು ತೆಂಗಿನ ಕಾಯಿಯಿಂದ ಮುಚ್ಚಲಾಗುವುದು.

ಜನ್ಮಾಷ್ಟಮಿಯ ಶುಭ ದಿನದಂದು ಮಂದಿರಕ್ಕೆ ಭೇಟಿ ನೀಡುವ ಅಸಂಖ್ಯ ಜನರ ಸುರಕ್ಷಣೆಗೆ ಮತ್ತು ಅವರ ಅಗತ್ಯಗಳನ್ನು ಪೂರೈಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಾವಿರಾರು ಭಕ್ತರು ಜನ್ಮಾಷ್ಟಮಿಯಂದು ಮಂದಿರಕ್ಕೆ ಭೇಟಿ ನೀಡಿ ಉತ್ಸವದ ಭಾಗಿಗಳಾಗುತ್ತಾರೆ.

ಅಂದು ಮಧ್ಯರಾತ್ರಿ ಭಗವಂತನ ಭವ್ಯ, ವಿಧ್ಯುಕ್ತ ಪವಿತ್ರ ಸ್ನಾನದಲ್ಲಿ ಅನೇಕ ದಿನಗಳ ಸಿದ್ಧತೆಗಳು ಪೂರ್ಣಗೊಳ್ಳುತ್ತದೆ. ಶ್ರೀ ರಾಧಾ ಕೃಷ್ಣಚಂದ್ರ ಉತ್ಸವ ವಿಗ್ರಹಗಳನ್ನು ಸುವಾಸಿತ ತೈಲಗಳು ಮತ್ತು ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಿಹಿ ಜಲ ಮತ್ತು ತಾಜಾ ಹಣ್ಣಿನ ರಸಗಳಿಂದ ಅಭಿಷೇಕ ಮಾಡಲಾಗುವುದು. ಅನಂತರ  ಅರಿಶಿನ ಚೂರ್ಣದಿಂದ ಲೇಪನ ಮಾಡಲಾಗುವುದು. ಅನಂತರ ಗಂಗಾ ಜಲದಲ್ಲಿ ಅಭ್ಯಂಜನ, ಪುಷ್ಪ ವೃಷ್ಟಿ.