ರಥ ಯಾತ್ರೆ, ರಥಗಳ ಉತ್ಸವವನ್ನು ಜಗನ್ನಾಥ ಪುರಿಯಲ್ಲಿ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರು ಜಗತ್ತಿನಾದ್ಯಂತ ಇಸ್ಕಾನ್ ಕೇಂದ್ರಗಳಲ್ಲಿ ರಥ ಯಾತ್ರೆಯನ್ನು ಆರಂಭಿಸಿದರು. ಅವರೆಂದರು, “ನೀವು ಈ ರಥ ಯಾತ್ರೆ ಉತ್ಸವಗಳಲ್ಲಿ ಪಾಲ್ಗೊಂಡು ಈ ರಥಗಳಲ್ಲಿ ಸಾಗುತ್ತಿರುವ ದೇವರನ್ನು ನೋಡಿದರೆ ನೀವು ನಿಮ್ಮ ಜೀವನದ ಅಂತ್ಯದಲ್ಲಿ ಭಗವದ್ ಧಾಮಕ್ಕೆ ಹಿಂದಿರುಗುವಿರಿ.” ರಥೇ ಚ ವಾಮನಂ ದೃಷ್ಟ್ವಾ ಪುನರ್ ಜನ್ಮ ನ ವಿದ್ಯತೇ : ಭಗವಂತನನ್ನು ರಥದಲ್ಲಿ ನೋಡುವುದರಿಂದ ಮಾತ್ರವೇ ವ್ಯಕ್ತಿಯು ಪುನರ್ ಜನ್ಮವನ್ನು ತಡೆಯುವತ್ತ ಪ್ರಗತಿ ಸಾಧಿಸುತ್ತಾನೆ. ಬಡಾವಣೆಯ ಪ್ರತಿಯೊಬ್ಬರಿಗೂ ಈ ಸದವಕಾಶವನ್ನು ಕಲ್ಪಿಸಲು, ನಾವು ಪ್ರತಿ ವರ್ಷ ಜನವರಿಯಲ್ಲಿ ಶ್ರೀ ಶ್ರೀ ಕೃಷ್ಣ ಬಲರಾಮ ರಥ ಯಾತ್ರೆ ಉತ್ಸವವನ್ನು ಆಚರಿಸುತ್ತೇವೆ. ಉತ್ಸವಮೂರ್ತಿ ರೂಪದ ಕೃಷ್ಣ ಮತ್ತು ಬಲರಾಮರು ಸಂಜೆ ಮಂದಿರದಿಂದ ಹೊರಗೆ ಬರುತ್ತಾರೆ ಮತ್ತು ಜನರನ್ನು ಅನುಗ್ರಹಿಸಲು ತಮ್ಮ ರಥಗಳನ್ನು ಏರುತ್ತಾರೆ. ಬಣ್ಣ ಬಣ್ಣದ ದೀಪ ಮತ್ತು ಪುಷ್ಪಗಳಿಂದ ರಥವನ್ನು ಅಲಂಕರಿಸಲಾಗುತ್ತದೆ. ಸಾವಿರಾರು ಭಕ್ತರು ರಥವನ್ನು ಎಳೆಯುತ್ತಾರೆ, ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ, ಕೀರ್ತನೆಯಲ್ಲಿ ಜೊತೆಗೂಡುತ್ತಾರೆ ಮತ್ತು ರಥ ಯಾತ್ರೆ ಮಾರ್ಗದ ಉದ್ದಕ್ಕೂ ವಿತರಿಸುವ ಪ್ರಸಾದದಲ್ಲಿ ಭಾಗಿಯಾಗುತ್ತಾರೆ. ನಮ್ಮ ರಥವು ಆಧುನಿಕ ತಂತ್ರಜ್ಞಾನ ಮತ್ತು ಪುರಾತನ ಪರಂಪರೆಯ ಪರಿಪೂರ್ಣ ಸಮ್ಮಿಳನವಾಗಿದೆ. ಸಾಂಪ್ರದಾಯಕವಾಗಿ ಕಂಡರೂ ರಥದಲ್ಲಿ ಏರ್ ಬ್ರೆಕ್ ಮತ್ತು ಸ್ಟೀರಿಂಗ್ ವೀಲ್‌ನಂತಹ ಅನೇಕ ಪ್ರಸ್ತುತ ಲಕ್ಷಣಗಳಿವೆ. ದೂರ ಪ್ರಯಾಣಕ್ಕೂ ಅನುಕೂಲವಾಗುವಂತಹ ಸೌಲಭ್ಯಗಳು ಇದರಲ್ಲಿವೆ. ಈ ರಥದ ಮೇಲಾವರಣವು (ಕ್ಯಾನೊಪಿ) ಮತ್ತೊಂದು ಅಪೂರ್ವ ಲಕ್ಷಣವಾಗಿದೆ. ವಿದ್ಯುತ್ ಮೋಟಾರ್‌ನ ಸಹಾಯದಿಂದ ಅದನ್ನು ಲಂಬವಾಗಿ ಮೇಲೆ ಅಥವಾ ಕೆಳಗೆ ಚಲಿಸಬಹುದಾಗಿದೆ. ಕ್ಯಾನೊಪಿಯನ್ನು ಪೂರ್ಣವಾಗಿ ಎತ್ತಿದಾಗ, ರಥದ ಎತ್ತರವು ನೆಲ ಮಟ್ಟದಿಂದ ಸುಮಾರು 26 ಅಡಿ. ರಥದಲ್ಲಿ ಎರಡೂ ಕಡೆಗಳಲ್ಲಿ ಗಟ್ಟಿಯಾದ , 110 ಅಡಿ ಉದ್ದದ ಹಗ್ಗವಿದೆ. ಇದರಿಂದ ಒಮ್ಮೆಲೇ 500 ಜನರು ರಥವನ್ನು ಎಳೆಯಬಹುದು. ಎರಡು ಕಡೆಯ ಹಗ್ಗದ ಉದ್ದೇಶವೆಂದರೆ ಒಂದು ಕಡೆ ಮಹಿಳೆಯರು ಮತ್ತು ಮತ್ತೊಂದು ಕಡೆ ಪುರುಷರು ರಥವನ್ನು ಎಳೆಯಬಹುದಾಗಿದೆ. ಚಕ್ರ ಸುರಕ್ಷತೆ ತಂಡವನ್ನು (ಜನರು ಚಕ್ರದ ಬಳಿಗೆ ಬರದಂತೆ ನೋಡಿಕೊಳ್ಳವ) ನಿಯೋಜಿಸುವಂತಹ ಮತ್ತು ಧ್ವನಿವರ್ಧಕ ವ್ಯವಸ್ಥೆಯಂತಹ ರಕ್ಷಣಾ ಕ್ರಮಗಳನ್ನು ಮಂದಿರದ ಸಿಬ್ಬಂದಿ ಕೈಗೊಳ್ಳುತ್ತಾರೆ. ಇದು ರಥವು ಮುಂದೆ ಸಾಗಲು ನೆರವಾಗುತ್ತದೆ. ರಥ ಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ ಭಕ್ತರಿಗೂ ಪ್ರಸಾದವನ್ನು ಹಂಚಲಾಗುತ್ತದೆ.