ಶ್ರೀ ರಾಮಚಂದ್ರನ ಶ್ರೇಷ್ಠ ಭಕ್ತ ಮತ್ತು ನಿತ್ಯ ಸೇವಕ ಶ್ರೀ ಹನುಮಂತನು ಆವಿರ್ಭವಿಸಿದ ಶುಭ ದಿನವನ್ನು ಶ್ರೀ ಹನುಮಾನ್ ಜಯಂತಿ ಎಂದು ಆಚರಿಸಲಾಗುತ್ತದೆ.
ಭಾರತದಲ್ಲಿ ಹನುಮಂತನ ಸಾವಿರಾರು ಮಂದಿರಗಳಿವೆ. ತಮ್ಮ ಭಕ್ತಿಸೇವೆಯ ಪಥದಲ್ಲಿ ಅಡ್ಡಿಗಳನ್ನು ನಿವಾರಿಸಬೇಕೆಂದು ಪ್ರಾರ್ಥಿಸಿ ಭಕ್ತರು ಶ್ರೀ ಹನುಮಂತನನ್ನು ಆರಾಧಿಸುವರು. ನಮ್ಮ ಮಂದಿರದಲ್ಲಿ ಪ್ರಹ್ಲಾದ ನರಸಿಂಹ ದೇವಸ್ಥಾನದ ಪ್ರವೇಶದಲ್ಲಿ ಹನುಮಂತನ ಸಣ್ಣ ಮಂದಿರವಿದೆ.
ದೇಶದ ವಿವಿಧ ಭಾಗಗಳಲ್ಲಿ ಹನುಮಾನ್ ಜಯಂತಿಯನ್ನು ಬೇರೆ ಬೇರೆ ದಿನಗಳಲ್ಲಿ ಆಚರಿಸಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ (ವಿಶೇಷವಾಗಿ ಮಹಾರಾಷ್ಟ್ರದಲ್ಲಿ) ಇದನ್ನು ಚೈತ್ರ ಪೌರ್ಣಮಿಯಂದು ಆಚರಿಸಲಾಗುತ್ತದೆ. ತಮಿಳುನಾಡು ಮತ್ತು ಕೇರಳಗಳಲ್ಲಿ ಮಾರ್ಗಳಿ (ದಿಸೆಂಬರ್-ಜನವರಿ) ಮಾಹೆಯಲ್ಲಿ ಆಚರಿಸಲಾಗುತ್ತದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ವೈಶಾಖ ಕೃಷ್ಣ ದಶಮಿಯಂದು ಆಚರಿಸಲಾಗುತ್ತದೆ. ನಮ್ಮ ಮಂದಿರದಲ್ಲಿ ಸ್ಥಳೀಯ ಪರಂಪರೆಯಂತೆ ವೈಶಾಖ (ಮೇ) ಕೃಷ್ಣ ಪಕ್ಷ ದಶಮಿಯಂದು ಹನುಮ ಜಯಂತಿ ಆಚರಣೆ ಇದೆ.
ಬೆಳಗ್ಗೆ ಹನುಮಂತನ ವಿಗ್ರಹಕ್ಕೆ ವಿಶೇಷ ಅಭಿಷೇಕದೊಂದಿಗೆ ಉತ್ಸವ ಆರಂಭವಾಗುತ್ತದೆ. ಅಭಿಷೇಕದ ಅನಂತರ ಹನುಮಂತನನ್ನು ಬೆಣ್ಣೆ ಮತ್ತು ಹಣ್ಣುಗಳಿಂದ ಅಲಂಕರಿಸಲಾಗುವುದು. ವಡೆ ಮಾಲೆಯನ್ನು ಅರ್ಪಿಸುವುದು ವಿಶೇಷ.