ದೇವೋತ್ತಮ ಶ್ರೀ ಕೃಷ್ಣನು ಈ ಕಲಿಯುಗದ ಯುಗ-ಧರ್ಮವಾಗಿ ಸಂಕೀರ್ತನೆಯನ್ನು ಸ್ಥಾಪಿಸಲು ಶ್ರೀ ಚೈತನ್ಯರಾಗಿ ಆವಿರ್ಭವಿಸಿದನು. ಅವರು ಕ್ರಿಸ್ತ ಶಕ 1486, ಫಾಲ್ಗುಣ ಮಾಸ (ಫೆಬ್ರವರಿ-ಮಾರ್ಚ್) ಪೂರ್ಣಿಮೆಯಂದು ಶ್ರೀಧಾಮ ಮಾಯಾಪುರದಲ್ಲಿ ಅವತರಿಸಿದರು. ಅವರ ತಂದೆ ಶ್ರೀ ಜಗನ್ನಾಥ ಮಿಶ್ರ ಮತ್ತು ತಾಯಿ ಶ್ರೀಮತಿ ಶಚಿದೇವಿ. ಮನೆಯ ಆವರಣದ ಬೇವಿನ ಮರದ ಕೆಳಗೆ ಹುಟ್ಟಿದ್ದರಿಂದ ಪೋಷಕರು ಅವನಿಗೆ ನಿಮಾಯ್ ಎಂದು ನಾಮಕರಣ ಮಾಡಿದರು.
ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವದ ಶುಭ ದಿನವೇ ಗೌರ ಪೂರ್ಣಿಮೆ. ಚಿನ್ನದ ಬಣ್ಣದ ಮೈಕಾಂತಿಯ ಕಾರಣ ಅವರನ್ನು ಶ್ರೀ ಗೌರಾಂಗ ಎಂದೂ ಕರೆಯುತ್ತಾರೆ. ಈ ಉತ್ಸವವು ಗೌಡೀಯ ವೈಷ್ಣವರಿಗೆ ಹೊಸ ವರ್ಷದ ಆರಂಭವೂ ಹೌದು
ಇಸ್ಕಾನ್ ಬೆಂಗಳೂರಿನಲ್ಲಿ . . .
ಶ್ರೀ ಶ್ರೀ ನಿತಾಯ್ ಗೌರಾಂಗರ (ಶ್ರೀ ಚೈತನ್ಯ ಮಹಾಪ್ರಭು ಮತ್ತು ಶ್ರೀ ನಿತ್ಯಾನಂದ ಪ್ರಭು) ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಗೌರ ಪೂರ್ಣಿಮೆ ಆಚರಣೆಯು ಸಂಜೆ ಆರಂಭವಾಗುತ್ತದೆ. ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ನಡೆಯುತ್ತದೆ. ಭಗವಂತನನ್ನು ಆನಂದ ಪಡಿಸಲು ಭಕ್ತರು ಮಹಾ ಸಂಕೀರ್ತನೆಯನ್ನು ನಡೆಸಿಕೊಡುವರು. ಸಂಕೀರ್ತನೆಯಲ್ಲಿ ಎಲ್ಲರೂ ಪಾಲ್ಗೊಳ್ಳುವುದರಿಂದ ಹರೇ ಕೃಷ್ಣ ಮಹಾ ಮಂತ್ರವು ಮಂದಿರದ ಎಲ್ಲ ಭಾಗಗಳಲ್ಲಿಯೂ ಮಾರ್ದನಿಸುತ್ತದೆ.
ಉತ್ಸವದ ಅನಂತರ ನಿತಾಯ್ ಗೌರಾಂಗರು ಭವ್ಯವಾದ ಅಭಿಷೇಕವನ್ನು ಸ್ವೀಕರಿಸುವರು. ಅರ್ಚಾ ವಿಗ್ರಹಗಳಿಗೆ ಮೊದಲು ಪಂಚಾಮೃತ, ಅನಂತರ ಪಂಚಗವ್ಯದ ಅಭಿಷೇಕ ನೆರವೇರುತ್ತದೆ. ಅದಾದ ಮೇಲೆ ಅನೇಕ ಫಲಗಳ ರಸದಿಂದ ಅಭಿಷೇಕ. ಭಕ್ತರು ಭಗವಂತನನ್ನು ಕೊಂಡಾಡುತ್ತ ಬ್ರಹ್ಮ ಸಂಹಿತೆಯಿಂದ ಪ್ರಾರ್ಥನೆಗಳನ್ನು ಪಠಿಸುವರು. ಶ್ರೀಲ ಭಕ್ತಿವಿನೋದ ಠಾಕುರ ಅವರು ರಚಿಸಿರುವ ಗೌರ ಆರತಿ ಹಾಡಿನ ಜೊತೆಗೆ ಭವ್ಯವಾದ ಆರತಿಯನ್ನು ನೆರವೇರಿಸಲಾಗುವುದು. ಆರತಿಯ ಅನಂತರ 108 ಕಳಶಗಳ ಪವಿತ್ರ ಜಲದಿಂದ ಪವಿತ್ರ ಸ್ನಾನ ಕಾರ್ಯ ನಡೆಯುತ್ತದೆ. ಆ ಸಮಯದಲ್ಲಿ ಭಕ್ತರು ಪುರುಷಸೂಕ್ತ ಪ್ರಾರ್ಥನೆ ಮಾಡುವರು. ಅನಂತರ ಅರ್ಚಾ ವಿಗ್ರಹಗಳ ಮೇಲೆ ಪುಷ್ಪವೃಷ್ಟಿಯಾಗುತ್ತದೆ. ಇದಾದ ಮೇಲೆ ಛಪ್ಪನ್ ಭೋಗ್ ನೈವೇದ್ಯವನ್ನು ಅರ್ಪಿಸಲಾಗುವುದು.
ಅನಂತರ ನಡೆಯುವುದೇ ಶಯನ ಆರತಿ. ನೆರೆದಿರುವ ಎಲ್ಲ ಭಕ್ತರೂ ಶ್ರೀ ಸಚಿತನಯ ಅಷ್ಟಕಂ ಅನ್ನು ಹಾಡುತ್ತ ಶ್ರೀ ಚೈತನ್ಯ ಮಹಾಪ್ರಭುಗಳನ್ನು ಕೊಂಡಾಡುವರು. ಈ ಅಷ್ಟಕದಲ್ಲಿ ಶ್ರೀ ಚೈತನ್ಯರ ಅಲೌಕಿಕ ರೂಪ, ಗುಣ ಮತ್ತು ಲೀಲೆಗಳನ್ನು ವರ್ಣಿಸಲಾಗಿದೆ. ಶಯನ ಪಲ್ಲಕ್ಕಿ ಉತ್ಸವದೊಂದಿಗೆ ಕಾರ್ಯಕ್ರಮವು ಸಮಾಪ್ತಗೊಳ್ಳುತ್ತದೆ.
ಗೌರ ಪೂರ್ಣಿಮೆಯಂದು ಭಕ್ತರು ಚಂದ್ರೋದಯದವರೆಗೆ ಉಪವಾಸ ಇರುತ್ತಾರೆ ಮತ್ತು ಅನಂತರ ಅನುಕಲ್ಪ (ಧಾನ್ಯ ರಹಿತ) ಖಾದ್ಯವನ್ನು ಸ್ವೀಕರಿಸುವರು. ಮರುದಿನ, ಭಗವಂತನಿಗೆ ಜಗನ್ನಾಥ ಮಿಶ್ರ ಹಬ್ಬದೂಟವನ್ನು ಅರ್ಪಿಸಲಾಗುವುದು. ಶ್ರೀ ಚೈತನ್ಯ ಮಹಾಪ್ರಭುಗಳ ತಂದೆ ಶ್ರೀ ಜಗನ್ನಾಥ ಮಿಶ್ರ ಅವರು ತಮ್ಮ ಸುಪುತ್ರನ ಆವಿರ್ಭಾವದ ಸಂಭ್ರಮಾಚರಣೆಗೆ ಭಾರೀ ಭೋಜನ ವ್ಯವಸ್ಥೆಯನ್ನು ಮಾಡಿದ್ದರು.