ಭಾದ್ರಪದ (ಆಗಸ್ಟ್-ಸೆಪ್ಟೆಂಬರ್), ಶುಕ್ಲ ಅಷ್ಟಮಿಯಂದು ರಾಧಾಷ್ಟಮಿಯನ್ನು ಆಚರಿಸಲಾಗುತ್ತದೆ. ಭಕ್ತರಿಗೆ ಇದು ಒಂದು ಪ್ರಮುಖವಾದ ಉತ್ಸವ. ರಾಧಾ ರಾಣಿಯು ಇಡೀ ಜಗತ್ತಿನ ಮಾತೆ. ಈ ಶುಭ ದಿನದಂದು ಭಕ್ತರು ತಮಗೆ ಕೃಷ್ಣಭಕ್ತಿಯನ್ನು ಅನುಗ್ರಹಿಸಬೇಕೆಂದು ರಾಧಾ ರಾಣಿಯಲ್ಲಿ ಪ್ರಾರ್ಥಿಸುವರು.
ಈ ಶುಭ ಸಂದರ್ಭದಲ್ಲಿ ಶ್ರೀ ರಾಧಾ ಕೃಷ್ಣಚಂದ್ರ ಹೊಸ ವಸ್ತ್ರಗಳಿಂದ ಕಂಗೊಳಿಸುತ್ತಾರೆ. ಪೂಜಾ ವೇದಿಕೆಯನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗುವುದು.
ಶ್ರೀ ರಾಧಾ ಕೃಷ್ಣಚಂದ್ರ ಉತ್ಸವ ಮೂರ್ತಿಗಳಿಗೆ ಅಂದು ಸಂಜೆ ವೈಭವದ ಅಭಿಷೇಕ. ಭಕ್ತರು ಕೀರ್ತನೆಗಳನ್ನು ಮತ್ತು ವೈಷ್ಣವ ಆಚಾರ್ಯರು ರಚಿಸಿರುವ ಅದ್ಭುತ ಗೀತೆಗಳನ್ನು ಹಾಡಿ ರಾಧಾ ರಾಣಿಯನ್ನು ಕೊಂಡಾಡುವರು. ವಿಗ್ರಹಗಳಿಗೆ ಹಾಲು, ಮೊಸರು, ತುಪ್ಪ, ಮಧು ಮತ್ತು ಬೆಲ್ಲದ ನೀರಿನ ಅಭಿಷೇಕ. ಅನಂತರ ಖರ್ಬೂಜ, ಕಲ್ಲಂಗಡಿ ಹಣ್ಣು, ಸೇಬು, ಅನಾನಸ್, ದಾಳಿಂಬೆ, ಕಿತ್ತಳೆ, ಮೂಸಂಬಿ, ಪಪಾಯ, ದ್ರಾಕ್ಷಿ ಮುಂತಾದ ಹಣ್ಣುಗಳ ರಸದಿಂದ ಅಭಿಷೇಕ.
ಭಕ್ತರು ಶ್ರೀ ರಾಧಿಕಾಷ್ಟಕವನ್ನು ಹಾಡುತ್ತಿದ್ದಂತೆಯೇ ಸುದೀರ್ಘವಾದ ಆರತಿಯನ್ನು ಮಾಡಲಾಗುವುದು. ಆರತಿಯ ಅನಂತರ ವಿಗ್ರಹಳಿಗೆ 108 ಕಳಶಗಳ ಜಲದಿಂದ ಪವಿತ್ರ ಸ್ನಾನ. ಇದಾದ ಮೇಲೆ ಪುಷ್ಟವೃಷ್ಟಿ. ಅಭಿಷೇಕದ ಅನಂತರ ಶ್ರೀ ರಾಧಾ ಕೃಷ್ಣಚಂದ್ರರಿಗೆ ಛಪ್ಪನ್ ಭೋಗ್ ( 56 ಭಕ್ಷಗಳು) ಅನ್ನು ಅರ್ಪಿಸಲಾಗುವುದು.
ಭವ್ಯವಾದ ಶಯನ ಆರತಿಯೊಂದಿಗೆ ಕಾರ್ಯಕ್ರಮವು ಸಮಾಪ್ತಗೊಳ್ಳುತ್ತದೆ.