panihati festival 2016

ಪಶ್ಚಿಮ ಬಂಗಾಳದಲ್ಲಿ ಗಂಗಾ ನದಿಯ ದಡದಲ್ಲಿ ಪಾನಿಹಾಟಿ ಗ್ರಾಮವಿದೆ. ಕೋಲ್ಕತ್ತಾಗೆ 10 ಮೈಲಿ ದೂದಲ್ಲಿರುವ ಈ ಗ್ರಾಮವು ನದಿ ಮಾರ್ಗವೇ ಪ್ರಮುಖ ಸಂಪರ್ಕ ಸಾಧನವಾಗಿದ್ದ ಕಾಲದಲ್ಲಿ ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು. ಪೆನೇಟಿ ಎಂಬ ವಿಶೇಷ ಅಕ್ಕಿ ಮಾದರಿಯನ್ನು ಜೆಸ್ಸೂರಿನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಹುಶಃ ಆ ವ್ಯಾಪಾರ ಸಂಪರ್ಕದಿಂದ ಈ ಸ್ಥಳಕ್ಕೆ ಪಾನಿಹಾಟಿ ಎಂಬ ಹೆಸರು ಬಂದಿರಬೇಕು. ಒಂದಾನೊಂದು ಕಾಲದಲ್ಲಿ ಈ ಸ್ಥಳವು ಬೌದ್ಧ ತಾಂತ್ರಿಕರು ಮತ್ತು ಕಾಪಾಲಿಕರ ಪೂಜಾ ಕೇಂದ್ರವಾಗಿತ್ತು. ಆದರೆ ಅನಂತರ, 15 ನೆಯ ಶತಮಾನದಲ್ಲಿ, ಸಂಕೀರ್ತನೆ ಆಂದೋಲನವನ್ನು ಹರಡಲು ಶ್ರಿ ಚೈತನ್ಯ ಮಹಾಪ್ರಭುಗಳು ಆವಿರ್ಭವಿಸಿದಾಗ, ಪಾನಿಹಾಟಿಯು ಗೌಡೀಯ ವೈಷ್ಣವರ ಪ್ರಮುಖ ಕೇಂದ್ರವಾಯಿತು. ಶ್ರೀ ಚೈತನ್ಯರ ಸಹವರ್ತಿಗಳಲ್ಲಿ ಒಬ್ಬರಾದ ಶ್ರೀ ರಾಘವ ಪಂಡಿತರ ನಿವಾಸವು ಈಗಲೂ ಪಾಣಿಹಾಟಿಯಲ್ಲಿದೆ.

ದಂಡ ಮಹೋತ್ಸವ

ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನು ಪಶ್ಚಿಮ ಬಂಗಾಳದ ಶ್ರೀಧಾಮ ಮಾಯಾಪುರದಲ್ಲಿ, ಕ್ರಿಸ್ತ ಶಕ 1486 ರಲ್ಲಿ ಶ್ರೀ ಚೈತನ್ಯ ಮಹಾಪ್ರಭುವಾಗಿ ಆವಿರ್ಭವಿಸಿದನು. ಭಗವಂತನ ಪವಿತ್ರ ನಾಮಗಳ ಸಂಕೀರ್ತನೆ, ಯುಗಧರ್ಮವನ್ನು ಸ್ಥಾಪಿಸುವುದೇ ಅವನ ಅವತಾರದ ಉದ್ದೇಶ. ಶ್ರೀ ಬಲರಾಮನು ನಿತ್ಯಾನಂದ ಪ್ರಭುವಾಗಿ ಆವಿರ್ಭವಿಸಿದನು. ಹಾಗೆಯೇ ಭಗವಂತನ ಇತರ ಅನೇಕ ನಿರಂತರ ಸಹವರ್ತಿಗಳು ಪ್ರಭುವಿನ ಧ್ಯೇಯದಲ್ಲಿ ಸೇರಲು ಅದೇ ಸಮಯದಲ್ಲಿ ಅವತರಿಸಿದರು. ಶ್ರೀಲ ರಘುನಾಥ ದಾಸ ಗೋಸ್ವಾಮಿ ಅವರಲ್ಲಿ ಒಬ್ಬರು.

ಶ್ರೀಲ ರಘುನಾಥ ದಾಸ ಗೋಸ್ವಾಮಿ ಅವರು ಶ್ರೇಷ್ಠ ಭಕ್ತರು. ಅವರು ಕಿರಿಯ ವಯಸ್ಸಿನಲ್ಲಿಯೇ ತ್ಯಾಗದ ಮನೋಭಾವವನ್ನು ತೋರಿದ್ದರು ಮತ್ತು ಲೌಕಿಕ ಲೋಕದಲ್ಲಿ ನಿರಾಸಕ್ತರಾಗಿದ್ದರು. ಅವರಿಗೆ ತಮ್ಮ ಮನೆಯನ್ನು ತೊರೆದು ಶ್ರೀ ಚೈತನ್ಯ ಮಹಾಪ್ರಭುಗಳ ಸಂಕೀರ್ತನ ಆಂದೋಲನದಲ್ಲಿ ಸೇರುವ ಅಪೇಕ್ಷೆ ಇತ್ತು. ಆದರೆ ಹಾಗೆ ಮಾಡಬಾರದೆಂದು ಹೇಳಿದ ಶ್ರೀ ಚೈತನ್ಯರು, ಅತಿ ಶೀಘ್ರದಲ್ಲಿ ಶ್ರೀ ಕೃಷ್ಣನು ಅವರನ್ನು ಮಾಯೆಯ ಹಿಡಿತದಿಂದ ಬಿಡುಗಡೆ ಮಾಡುವನು ಎಂಬ ಆಶ್ವಾಸನೆ ನೀಡಿದ್ದರು. ಎರಡು ವರ್ಷಗಳ ಅನಂತರ, ನಿತ್ಯಾನಂದ ಪ್ರಭುಗಳು ಪಾಣಿಹಾಟಿಗೆ ಬಂದು ತಂಗಿದರು. ಸಮೀಪದ ಶ್ರೀಕೃಷ್ಣಪುರ ಗ್ರಾಮದಲ್ಲಿದ್ದ ರಘುನಾಥ ದಾಸ ಅವರು ತಮ್ಮ ತಂದೆ ಗೋವರ್ಧನ ಮಜುಂದಾರ್ ಅವರ ಅನುಮತಿ ಪಡೆದು ನಿತ್ಯಾನಂದ ಪ್ರಭುಗಳನ್ನು ಭೇಟಿ ಮಾಡಲು ಪಾನಿಹಾಟಿಗೆ ಹೋದರು.

ಪಾನಿಹಾಟಿಯಲ್ಲಿ, ನಿತ್ಯಾನಂದ ಪ್ರಭುಗಳು ಗಂಗಾ ನದಿಯ ದಡದಲ್ಲಿ ಆಲದ ಮರದ ಕೆಳಗೆ ಬಂಡೆಯೊಂದರ ಮೇಲೆ ಕುಳಿತಿದ್ದರು. ಅನೇಕ ಭಕ್ತರು ಅವರನ್ನು ಸುತ್ತುವರಿದಿದ್ದರು. ರಘುನಾಥ ದಾಸರು ಅವರನ್ನು ಕಾಣಲು ಹೋದರು. ಆದರೆ ಸ್ವಲ್ಪ ಹಿಂಜರಿಕೆಯಿಂದ ಅವರು ದೂರದಿಂದಲೇ ಪ್ರಭುಗಳಿಗೆ ತಮ್ಮ ಗೌರವ ಅರ್ಪಿಸಿದರು. ಆದರೆ ಕೆಲವು ಭಕ್ತರು ಅವರನ್ನು ಕಂಡು ನಿತ್ಯಾನಂದ ಪ್ರಭುಗಳಿಗೆ ತಿಳಿಸಿದರು.

ನಿತ್ಯಾನಂದ ಪ್ರಭುಗಳು ರಘುನಾಥ ದಾಸರನ್ನು ತಮ್ಮ ಬಳಿಗೆ ಕರೆದರು. “ರಘನಾಥ ದಾಸ, ನೀನು ಕಳ್ಳನಂತೆ ಬಚ್ಚಿಟ್ಟುಕೊಂಡಿರುವೆ. ನಾನು ನಿನ್ನನ್ನು ಹಿಡಿದಿರುವೆ. ಬಾ ಇಲ್ಲಿ. ಈವತ್ತು ನಾನು ನಿನಗೆ ಶಿಕ್ಷೆ ನೀಡುವೆ.” ಅನಂತರ ನಿತ್ಯಾನಂದ ಪ್ರಭುಗಳು ಬಲವಂತದಿಂದ ಅವರನ್ನು ಹಿಡಿದು ತಮ್ಮ ಕಮಲ ಚರಣವನ್ನು ಅವರ ಶಿರದ ಮೇಲೆ ಇರಿಸಿ ಹರಸಿದರು. ದೊಡ್ಡ ಉತ್ಸವವನ್ನು ಆಚರಿಸಿ ಭಕ್ತರಿಗೆ ಮೊಸರು ಮತ್ತು ಅವಲಕ್ಕಿ ಅರ್ಪಿಸಬೇಕೆಂದು ನಿತ್ಯಾನಂದ ಪ್ರಭುಗಳು ಆದೇಶಿಸಿದರು.

ಎಲ್ಲ ತಿನಿಸುಗಳನ್ನು ತರಬೇಕೆಂದು ರಘುನಾಥ ದಾಸರು ತತ್‌ಕ್ಷಣ ತಮ್ಮ ಜನರನ್ನು ಸ್ಥಳೀಯ ಗ್ರಾಮಗಳಿಗೆ ಕಳುಹಿಸಿದರು. ಅವರು ಅವಲಕ್ಕಿ, ಹಾಲು, ಮೊಸರು, ಸಿಹಿತಿಂಡಿ, ಬಾಳೆ ಹಣ್ಣು, ಸಕ್ಕರೆ ಮತ್ತು ಇತರ ತಿನಿಸುಗಳನ್ನು ತಂದರು. ಅವಲಕ್ಕಿಯನ್ನು ಹಾಲಿನಲ್ಲಿ ನೆನೆಸಲಾಯಿತು. ಅದರಲ್ಲಿ ಅರ್ಧ ಭಾಗವನ್ನು ಮೊಸರು, ಸಕ್ಕರೆ ಮತ್ತು ಬಾಳೆಹಣ್ಣಿನೊಂದಿಗೆ ಮಿಶ್ರಣ ಮಾಡಲಾಯಿತು. ಉಳಿದ ಅರ್ಧ ಭಾಗವನ್ನು ಘನೀಕರಿಸಿದ ಹಾಲು, ಬೆಣ್ಣೆ ಮತ್ತು ಕರ್ಪೂರದೊಂದಿಗೆ ಮಿಶ್ರಣ ಮಾಡಲಾಯಿತು. ಎಲ್ಲ ಭಕ್ತರಿಗೂ ಎರಡೆರಡು ಮಣ್ಣಿನ ಮಡಕೆಗಳನ್ನು ನೀಡಲಾಯಿತು. ಒಂದರಲ್ಲಿ ಅವಲಕ್ಕಿ ಮೊಸರು ಮಿಶ್ರಣ ಮತ್ತು ಮತ್ತೊಂದರಲ್ಲಿ ಅವಲಕ್ಕಿ ಮತ್ತು ಹಾಲಿನ ಮಿಶ್ರಣವನ್ನು ಹಾಕಿ ಕೊಡಲಾಗಿತ್ತು.

ಈ ಅದ್ಭುತ ಲೀಲೆಯ ಸಂಸ್ಮರಣೆಯಾಗಿ ಪ್ರತಿ ವರ್ಷ ಚಿಡಾ ದಹಿ ಮಹೋತ್ಸವವನ್ನು ಆಚರಿಸಲಾಗುತ್ತದೆ. ಇದನ್ನು ದಂಡ ಮಹೋತ್ಸವ (ಶಿಕ್ಷೆಯ ಉತ್ಸವ) ಎಂದು ಕರೆಯುತ್ತಾರೆ. ಇದನ್ನು ಜ್ಯೇಷ್ಠ ಮಾಸದಲ್ಲಿ (ಮೇ-ಜೂನ್) ತ್ರಯೋದಶಿ ದಿನದಂದು ಆಚರಿಸಲಾಗುವುದು. ಚಿಡಾ ದಹಿ ಉತ್ಸವ ಆಚರಣೆಗೆ ಈಗಲೂ ಭಕ್ತರು ಪಾಣಿಹಾಟಿಗೆ ಭೇಟಿ ನೀಡುತ್ತಾರೆ.

ಇಸ್ಕಾನ್ ಬೆಂಗಳೂರಿನಲ್ಲಿ . . .

ಇಸ್ಕಾನ್ ಬೆಂಗಳೂರಿನಲ್ಲಿ ನಿತಾಯ್ ಗೌರಾಂಗರಿಗೆ ಮಹಾ ಅಭಿಷೇಕ, ತೆಪ್ಪೋತ್ಸವ ಮತ್ತು ಚಿಡಾ ದಹಿ ನೈವೇದ್ಯವನ್ನು ವಿತರಿಸುವ ಮೂಲಕ ಪ್ರತಿ ವರ್ಷ ಚಿಡಾ ದಹಿ ಉತ್ಸವವನ್ನು ಆಚರಿಸಲಾಗುತ್ತದೆ.

ಮಂದಿರದ ಕೊಳವನ್ನು ಸುಂದರವಾಗಿ ಅಲಂಕರಿಸಲಾಗುವುದು. ಬಣ್ಣ ಬಣ್ಣದ ಹೂವುಗಳು ಕೊಳದ ನೀರಿನಲ್ಲಿ ತೇಲುತ್ತಿರುತ್ತವೆ. ಶ್ರೀ ಶ್ರೀ ನಿತಾಯ್ ಗೌರಾಂಗರ ಉತ್ಸವ ಮೂರ್ತಿಗಳನ್ನು ಮಂದಿರದಿಂದ ಕೊಳದ ಬಳಿಗೆ ಹೂವಿನಿಂದ ಅಲಂಕೃತವಾದ ಪಲ್ಲಕ್ಕಿಯಲ್ಲಿ ತರಲಾಗುವುದು. ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಬೆಲ್ಲದ ನೀರು ಮತ್ತು ಹಣ್ಣಗಳ ರಸದಿಂದ ವಿಗ್ರಹಗಳಿಗೆ ಅಭಿಷೇಕ ಮಾಡಲಾಗುವುದು. ಅನಂತರ ಭವ್ಯವಾದ ಆರತಿಯಾದ ಮೇಲೆ ತೆಪ್ಪೋತ್ಸವ ನಡೆಯುತ್ತದೆ. ಘನೀಕರಿಸಿದ ಹಾಲು, ಮೊಸರು, ಸಕ್ಕರೆ, ಬಾಳೆ ಹಣ್ಣು, ಮಾವಿನ ಹಣ್ಣು ಮತ್ತು ರುಚಿಕರವಾದ ವಿವಿಧ ಭಕ್ಷಗಳೊಂದಿಗೆ ಅವಲಕ್ಕಿಯನ್ನು ಮಿಶ್ರಣ ಮಾಡಿದ ವೈವಿಧ್ಯಮಯವಾದ ನೈವೇದ್ಯವನ್ನು ನಿತಾಯ್ ಗೌರಾಂಗರಿಗೆ ಅರ್ಪಿಸಲಾಗುವುದು. ಅನಂತರ ಅಲ್ಲಿ ನೆರೆದಿರುವ ಭಕ್ತರಿಗೆ ಪ್ರಸಾದವನ್ನು ಹಂಚಲಾಗುವುದು.