ಶ್ರಾವಣ ಮಾಸದ (ಆಗಸ್ಟ್) ಏಕಾದಶಿಯಿಂದ ಪೌರ್ಣಮಿವರೆಗೆ ಐದು ದಿನಗಳ ಕಾಲ ಝೂಲನ್ ಉತ್ಸವವನ್ನು ಆಚರಿಸಲಾಗುವುದು. ಶ್ರೀ ಕೃಷ್ಣನು ತನ್ನ ಬಾಲ್ಯದ ಮಿತ್ರರಾದ ಗೋಪಾಲಕ ಬಾಲಕರು ಮತ್ತು ಗೋಪಿಯರೊಂದಿಗೆ ಮರದ ಕೆಳಗೆ ಉಯ್ಯಾಲೆ ತೂಗಿಕೊಂಡು ಆಡಿದ ಲೀಲೆಯನ್ನು ಕೊಂಡಾಡಲು ಝೂಲನ್ ಉತ್ಸವವನ್ನು ಆಚರಿಸಲಾಗುತ್ತದೆ.
ಶ್ರೀ ರಾಧಾ ಕೃಷ್ಣಚಂದ್ರ ವಿಗ್ರಹಗಳನ್ನು ಪ್ರತಿ ದಿನ ವಿವಿಧ ಆಭರಣಗಳಿಂದ ಅಲಂಕರಿಸಿ ಪುಷ್ಪಾಲಂಕೃತ ಉಯ್ಯಾಲೆಯಲ್ಲಿ ತೂಗಲಾಗುವುದು. ಪ್ರಧಾನ ಮಂದಿರದ ಆವರಣವನ್ನು ಹೂವು ಮತ್ತು ತೋರಣಗಳಿಂದ ಸುಂದರವಾಗಿ ಅಲಂಕರಿಸಲಾಗುವುದು. ಭವ್ಯವಾಗಿ ಅಲಂಕೃತಗೊಂಡ ಶ್ರೀ ಕೃಷ್ಣಚಂದ್ರ ಮತ್ತು ಶ್ರೀಮತಿ ರಾಧಾರಾಣಿ ವಿಗ್ರಹಗಳನ್ನು ವೈವಿಧ್ಯಮಯವಾದ ಹೂವುಗಳಿಂದ ಅಲಂಕೃತ ಉಯ್ಯಾಲೆಯಲ್ಲಿ ಆಸೀನಗೊಳಿಸಲಾಗುವುದು.
ವಿಶೇಷ ಆರತಿಯನ್ನು ಅರ್ಪಿಸುವಾಗ ಭಕ್ತರು ಸುಮಧುರ ಕೀರ್ತನೆಗಳನ್ನು ಹಾಡುವರು. ಅನಂತರ ಎಲ್ಲ ಭಕ್ತರಿಗೂ ಭಗವಂತನನ್ನು ತೂಗುವ ಅವಕಾಶ ಲಭಿಸುತ್ತದೆ. ಈ ರೀತಿ ಅವರು ಭಗವಂತನಿಗೆ ನೇರವಾಗಿ ವೈಯಕ್ತಿಕ ಸೇವೆ ಸಲ್ಲಿಸಬಹುದು.