ಇಂದ್ರನ ಕೋಪದಿಂದ ವೃಂದಾವನದ ಜನರನ್ನು ರಕ್ಷಿಸಲು ಶ್ರೀ ಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿದ ಲೀಲೆಯನ್ನು ಕೊಂಡಾಡಲು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ (ಅಕ್ಟೋಬರ್-ನವೆಂಬರ್) ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ.
ವೃಂದಾವನದ ಜನರು ಇಂದ್ರಯಜ್ಞಕ್ಕೆ ಸಿದ್ಧರಾಗುತ್ತಿದ್ದರು. ಅದನ್ನು ನೋಡಿದ ದೇವೋತ್ತಮ ಶ್ರೀ ಕೃಷ್ಣನು ಇಂದ್ರನನ್ನು ಪೂಜಿಸುವುದನ್ನು ಬಿಟ್ಟು ಅವರು ಗೋವರ್ಧನ ಗಿರಿಯನ್ನು ಆರಾಧಿಸಬೇಕೆಂದು ಸೂಚಿಸಿದನು. ಇದನ್ನು ತಿಳಿದ ಇಂದ್ರನು ಕೋಪದಿಂದ ಭಾರಿ ಮಳೆ ಸುರಿಸಲು ಮೋಡಗಳನ್ನು ಕಳುಹಿಸಿದನು. ಆಗ ಕೃಷ್ಣನು ತನ್ನ ಕಿರು ಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ವೃಂದಾವನದ ಎಲ್ಲ ನಿವಾಸಿಗಳಿಗೆ ಅದರ ಕೆಳಗೆ ಆಶ್ರಯ ನೀಡಿದನು.
ಇಂದ್ರನಿಗೆ ತನ್ನ ತಪ್ಪಿನ ಅರಿವಾಯಿತು ಮತ್ತು ಅವನು ಕೃಷ್ಣನಲ್ಲಿ ಕ್ಷಮೆ ಯಾಚಿಸಿದ. ದೇವೋತ್ತಮನಿಗೆ ಶರಣಾದ ಮತ್ತು ಭಕ್ತಿಸೇವೆಯಲ್ಲಿ ತೊಡಗಿದ ಭಕ್ತರು ಎಲ್ಲ ಹೊಣೆಗಾರಿಕೆಯಿಂದ ಮುಕ್ತರು ಮತ್ತು ಅವರು ಲೌಕಿಕ ಅನುಕೂಲಕ್ಕಾಗಿ ಯಾವ ದೇವತೆಯನ್ನೂ ಪೂಜಿಸುವ ಅಗತ್ಯ ಇಲ್ಲ ಎನ್ನುವ ಅಂಶವನ್ನು ದೇವೋತ್ತಮನು ಈ ರೀತಿ ಸ್ಥಾಪಿಸಿದನು. ಇದು ಗೋವರ್ಧನ ಲೀಲೆ ಎಂದು ಪ್ರಸಿದ್ಧಿಯಾಗಿದೆ ಮತ್ತು ಇದನ್ನು ಭಾಗವತದ 10ನೆಯ ಸ್ಕಂಧದಲ್ಲಿ ವಿವರಿಸಲಾಗಿದೆ.
ಭಕ್ತರು ಧಾನ್ಯ ಮತ್ತು ತುಪ್ಪದ (ಅನ್ನ, ದಾಲ್, ಹಲ್ವ, ಪಕೋಡ, ಪೂರಿ ಇತ್ಯಾದಿ) ವಿವಿಧ ತಿನಿಸುಗಳನ್ನು ಮತ್ತು ಹಾಲಿನ ಖಾದ್ಯಗಳನ್ನು (ಸಿಹಿ ಅನ್ನ, ಪೊಂಗಲ್, ರಬ್ಡಿ, ಸಂದೇಶ್, ರಸಗುಲ್ಲ, ಲಡ್ಡು ಇತ್ಯಾದಿ) ತಯಾರಿಸುವರು. ಅನಂತರ ಅದನ್ನು ಬೆಟ್ಟದಂತೆ ಜೋಡಿಸಿ ಭಗವಂತನಿಗೆ ಅರ್ಪಿಸುತ್ತಾರೆ. ಅನಂತರ ಅದನ್ನು ಎಲ್ಲರಿಗೂ ಪ್ರಸಾದವಾಗಿ ಹಂಚುತ್ತಾರೆ. ಆದುದರಿಂದ ಈ ಉತ್ಸವವನ್ನು ಅನ್ನಕೂಟ ಉತ್ಸವ ಎಂದೂ ಕರೆಯುತ್ತಾರೆ.
ಗೋವರ್ಧನ ಪೂಜೆಯಂದು ಭಕ್ತರು ಗೋವುಗಳನ್ನೂ ಪೂಜಿಸುತ್ತಾರೆ. ಕೃಷ್ಣನು ಗೋವುಗಳ ಸಂರಕ್ಷಕ, ಗೋಪಾಲ. ವಿಷ್ಣು ಪುರಾಣದಲ್ಲಿ ಒಂದು ಪ್ರಾರ್ಥನೆ ಇದೆ (1.19.65) : ನಮೋ ಬ್ರಾಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯ ಚ. ಇಲ್ಲಿ ಕೃಷ್ಣನನ್ನು ಗೋವುಗಳ ಮತ್ತು ಬ್ರಾಹ್ಮಣರ ಹಿತಚಿಂತಕ ಎಂದು ವರ್ಣಿಸಲಾಗಿದೆ. ಸಂಜೆ ಗೋವುಗಳನ್ನು ಅಲಂಕರಿಸಿ ಸಮೃದ್ಧವಾಗಿ ಆಹಾರ ನೀಡಲಾಗುವುದು. ಅನಂತರ ಗೋವುಗಳನ್ನು ಮುಂದಿಟ್ಟುಕೊಂಡು ಭಕ್ತರು ಗೋವರ್ಧನ ಗಿರಿಯ ಪ್ರದಕ್ಷಿಣೆ ಮಾಡುವರು.
ಇಸ್ಕಾನ್ ಬೆಂಗಳೂರಿನಲ್ಲಿ ಶ್ರೀ ಕೃಷ್ಣನ ವಿಗ್ರಹಕ್ಕೆ ಗಿರಿಧಾರಿ ಅಲಂಕಾರವನ್ನು ಮಾಡಲಾಗುವುದು. ಮಂದಿರದ ಬೇಕರಿಯಲ್ಲಿ ತಯಾರಿಸುವ ಮೊಟ್ಟೆ ಹಾಕದ ಕೇಕ್‌ಗಳಿಂದ ಭಕ್ತರು ಗೋವರ್ಧನ ಗಿರಿಯ ಪ್ರತಿರೂಪವನ್ನು ಮಾಡುವರು ಮತ್ತು ಕೂಕಿಸ್‌ಗಳನ್ನು ತಯಾರಿಸುವರು. ಗೋವರ್ಧನ ಕೇಕ್ ಅನ್ನು ಶ್ರೀ ಕೃಷ್ಣ ಬಲರಾಮರಿಗೆ ಅರ್ಪಿಸಿ ಅನಂತರ ಭಕ್ತರಿಗೆ ಹಂಚುತ್ತಾರೆ. ಗೋವುಗಳನ್ನು ಅಲಂಕರಿಸಿ ಪೂಜಿಸಲಾಗುವುದು. ಗೋವುಗಳ ರಕ್ಷಕ ಗೋಪಾಲನಿಗೆ ಆರತಿ ಮಾಡಲಾಗುವುದು. ಗೋವರ್ಧನ ಲೀಲೆಯನ್ನು ಎಲ್ಲರಿಗೂ ವಿವರಿಸಲಾಗುವುದು. ಗೊವರ್ಧನ ಗಿರಿಯನ್ನು ಕೊಂಡಾಡುವ ಶ್ರಿ ಗೋವರ್ಧಾನಾಷ್ಟಕಂ ಅನ್ನು ಭಕ್ತರು ಹಾಡುವರು.