garuda panchami

ಶ್ರೇಷ್ಠ ಭಕ್ತ ಮತ್ತು ಶ್ರೀ ವಿಷ್ಣುವಿನ ವಾಹಕನಾದ ಗರುಡನ ಜನ್ಮ ದಿನವನ್ನು ಕೊಂಡಾಡಲು ಗರುಡ ಪಂಚಮಿ ಉತ್ಸವವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಕೃಷ್ಣ ಪಕ್ಷ ಪಂಚಮಿಯನ್ನು ಗರುಡ ಪಂಚಮಿ ಎಂದು ಆಚರಿಸಲಾಗುತ್ತದೆ. ವಿನುತಾ ಮತ್ತು ಕಶ್ಯಪ ಮುನಿ ದಂಪತಿ ಪುತ್ರನಾದ ಗರುಡನು ಶಾಲ್ಮಲೀ ದ್ವೀಪ ಎಂಬ ಗ್ರಹದಲ್ಲಿ ವಾಸಿಸುತ್ತಾನೆ. ಅಲ್ಲಿ ಅವನು ನಿರಂತರವಾಗಿ ಭಗವಾನ್ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾನೆ.

ಗರುಡೋ       ಭಗವಾನ್     ಸ್ತೋತ್ರಸ್ತೋಭಶ್ಛಂದೋಮಯಃ      ಪ್ರಭುಃ  |   ರಕ್ಷತ್ವಶೇಷಕೃಚ್ಛ್ರೇಭ್ಯೋ       ವಿಶ್ವಕ್ಸೇನಃ          ಸ್ವನಾಮಭಿಃ  ||

“ಭಗವಾನ್ ವಿಷ್ಣುವಿನ ವಾಹನವಾದ ಗರುಡನು ಪರಮ ಪೂಜನೀಯ. ಏಕೆಂದರೆ ಅವನು ಪರಮ ಪ್ರಭುವಿನಷ್ಟೇ ಸಮರ್ಥನಾಗಿದ್ದಾನೆ. ಅವನು ವೇದಗಳ ಸಾಕಾರರೂಪ. ಆಯ್ದ ಶ್ಲೋಕಗಳಿಂದ ಅವನನ್ನು ಆರಾಧಿಸುತ್ತಾರೆ. ಅವನು ನಮ್ಮನ್ನು ಎಲ್ಲ ಅಪಾಯಕರ ಸನ್ನಿವೇಶಗಳಿಂದಲೂ ರಕ್ಷಿಸಲಿ. ದೇವೋತ್ತಮ ಪುರುಷನಾದ ವಿಶ್ವಕ್ಸೇನನು ಕೂಡ ತನ್ನ ಪುಣ್ಯನಾಮಗಳಿಂದ ನಮ್ಮನ್ನು ಸಕಲ ಅಪಾಯಗಳಿಂದ ರಕ್ಷಿಸಲಿ. ”    (ಭಾಗವತ 6.8.29)

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ವೈನತೇಯಶ್ಚ ಪಕ್ಷಿಣಾಮ್,  “ಪಕ್ಷಿಗಳಲ್ಲಿ ನಾನು ಗರುಡ”. ಗರುಡನು ಸದಾ ವಿಷ್ಣುವನ್ನು ತನ್ನ ಬೆನ್ನ ಮೇಲೆ ಕರೆದೊಯ್ಯುವನು.

ಅಲೌಕಿಕ ಪಕ್ಷಿ ಗರುಡನ ಎರಡು ರೆಕ್ಕೆಗಳನ್ನು ಸಾಮ ವೇದದ ಎರಡು ವಿಭಾಗಗಳೆಂದು – ಬೃಹತ್ ಮತ್ತು ರಥಾಂತರ – ವೈದಿಕ ಸಾಹಿತ್ಯದಲ್ಲಿ ಹೇಳಲಾಗಿದೆ. ಗರುಡನು ತನ್ನ ರೆಕ್ಕೆಗಳನ್ನು ಬಡಿದಾಗ, ಸಾಮ ವೇದದ ಮಂತ್ರ ಪಠಣವನ್ನು ಕೇಳಬಹುದು. ಗರುಡನು ವೈಕುಂಠದಲ್ಲಿ ಶ್ರೀ ವಿಷ್ಣುವಿನ ಸೇವೆಯಲ್ಲಿ ಸದಾ ನಿರತನಾಗಿದ್ದಾನೆ. ವಿಷ್ಣುವಿನ ಮಂದಿರಗಳಲ್ಲಿ ಭಗವಂತನ ಮುಂದೆ ಕೈ ಜೋಡಿಸಿ ಕುಳಿತಿರುವ ಗರುಡನ ವಿಗ್ರಹವನ್ನು ಕಾಣಬಹುದು.

ಗರುಡನನ್ನು ಈ ಹೆಸರುಗಳಿಂದಲೂ ಕರೆಯುತ್ತಾರೆ : ಪಕ್ಷಿರಾಜ, ವೈನತೇಯ, ಸುಪರ್ಣ, ಗರುತ್ಮನ್, ಪೆರಿಯ ತಿರುವಡಿ, ವಿನತಾಸುತ, ವಿಷ್ಣುವಾಹನ, ನಾಗಾಂತಕ ಮತ್ತು ಕಶ್ಯಪೇಯ.