ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೀಪಗಳ ಉತ್ಸವ – ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರಭುವಿನ ದಾಮೋದರ ಲೀಲೆಯನ್ನು ಸ್ಮರಿಸಲೆಂದೇ ಈ ಉತ್ಸವದ ಆಚರಣೆ. ಸಂಸ್ಕೃತದಲ್ಲಿ `ದಾಮ’ ಎಂದರೆ ಹಗ್ಗ ಮತ್ತು `ಉದರ’ ಎಂದರೆ ಹೊಟ್ಟೆ. ಬೆಣ್ಣೆ ಕಳ್ಳ ತುಂಟ ಬಾಲಕೃಷ್ಣನನ್ನು ಹಗ್ಗದಿಂದ ತಾಯಿ ಯಶೋದೆ ಕಟ್ಟಿಹಾಕಿದ ಕಾರಣ, ಶ್ರೀ ವಿಷ್ಣುವಿಗೆ ದಾಮೋದರ ಎಂಬ ಇನ್ನೊಂದು ನಾಮ.
ಕಾರ್ತಿಕದಲ್ಲಿ ಪ್ರತಿದಿನ ತುಪ್ಪದ ದೀಪವನ್ನು ಶ್ರೀಕೃಷ್ಣನಿಗೆ ಅರ್ಪಿಸುವ ವ್ರತವನ್ನು ಪಾಲಿಸುವವರಿಗೆ ನೂರಾರು ಜನ್ಮಗಳಲ್ಲಿ ಮಾಡಿದ ಪಾಪವೆಲ್ಲ ಕಳೆದು, ಸುಖ ಸಮೃದ್ಧಿಗಳು ದೊರಕುವವು ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ, ನೋವಿಲ್ಲದ ಶಾಶ್ವತ ಪರಮಪದವನ್ನು ಅವರು ಕೊನೆಗೆ ಪಡೆಯಬಹುದು.
ಇಸ್ಕಾನ್ ಬೆಂಗಳೂರು ದೇವಸ್ಥಾನದಲ್ಲಿ ಪ್ರತಿ ಸಂಜೆ 8ರ ಹೊತ್ತಿಗೆ ಇಡೀ ಮಂದಿರವು ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ಕೃಷ್ಣನನ್ನು ಕೊಂಡಾಡುವ ದಾಮೋದರ ಅಷ್ಟಕವನ್ನು ಭಕ್ತರು ಹಾಡುತ್ತಿದ್ದಂತೆಯೇ ದೇವರಿಗೆ ವಿಶೇಷ ಆರತಿಯನ್ನು ಅರ್ಚಕರು ಅರ್ಪಿಸುವರು. ಅನಂತರ ನೆರೆದ ಭಕ್ತರೆಲ್ಲರೂ ಒಬ್ಬೊಬ್ಬರಾಗಿ, ಸಾಲಾಗಿ ಬಂದು ತುಪ್ಪದ ದೀಪವನ್ನು ದೇವರಿಗೆ ಅರ್ಪಿಸುವರು. ಅನಂತ ಪಲ್ಲಕ್ಕಿ ಉತ್ಸವ ಮತ್ತು ಕೊನೆಗೆ ಪ್ರಸಾದ ವಿನಿಯೋಗ.
ಬನ್ನಿ, ಈ ದಿವ್ಯಾನಂದದ ಉತ್ಸವದಲ್ಲಿ ನೀವೂ ಪಾಲ್ಗೊಳ್ಳಿ.