sri brahmostava alankara

ಹರೇ ಕೃಷ್ಣ ಗಿರಿಯ ಮೇಲೆ ಭಗವಂತನ ಅರ್ಚಾ ವಿಗ್ರಹಗಳ ಆವಿರ್ಭಾವದ ಸುಸ್ಮರಣೆಯೇ ಬ್ರಹ್ಮೋತ್ಸವ. ಪ್ರತಿ ವರ್ಷ ಚೈತ್ರ ಮಾಸದಲ್ಲಿ (ಏಪ್ರಿಲ್-ಮೇ) 12 ದಿನಗಳ ಕಾಲ ಬ್ರಹ್ಮೋತ್ಸವ ನಡೆಯುತ್ತದೆ.

ನಮಗೆ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲು ದೇವೋತ್ತಮನು ಅರ್ಚಾ ವಿಗ್ರಹಗಳ ರೂಪದಲ್ಲಿ ಅವತರಿಸುತ್ತಾನೆ. ನಮ್ಮ ಲೌಕಿಕ ಪ್ರಜ್ಞೆಗೆ ಭಗವಂತನು ಅಲೌಕಿಕ. ನಮ್ಮ ಈಗಿನ ಕಣ್ಣುಗಳಿಂದ ನಾವು ಅವನನ್ನು ನೋಡಲಾರೆವು ಅಥವಾ ನಮ್ಮ ಈಗಿನ ಕಿವಿಗಳಿಂದ ಅವನನ್ನು ಕೇಳಲಾರೆವು.

ಭಗವಂತನ ಸೇವೆಯಲ್ಲಿ ನಾವು ಯಾವ ಮಟ್ಟವನ್ನು ತಲಪಿದ್ದೇವೆಯೋ ಅಥವಾ ಯಾವ ಪ್ರಮಾಣದಲ್ಲಿ ನಮ್ಮ ಬದುಕು ಪಾಪಗಳಿಂದ ಮುಕ್ತವಾಗಿದೆಯೋ ಅದರಂತೆ ನಾವು ಭಗವಂತನನ್ನು ಗ್ರಹಿಸಿಕೊಳ್ಳಬಹುದು. ನಾವು ಪಾಪ ಕರ್ಮಗಳಿಂದ ಮುಕ್ತರಾಗಿಲ್ಲವಾದರೂ ದೇವರು ಎಷ್ಟು ಕರುಣಾಮಯಿ ಎಂದರೆ ದೇವಸ್ಥಾನಗಳಲ್ಲಿ ಅವನ ವಿಗ್ರಹ ರೂಪವನ್ನು ನೋಡುವ ಸೌಭಾಗ್ಯವನ್ನು ನಮಗೆ ಕಲ್ಪಿಸಿಕೊಟ್ಟಿದ್ದಾನೆ.

ನಮ್ಮ ಮೇಲೆ ಕೃಪೆ ತೋರಿ ದೇವೋತ್ತಮನು 1997 ರಲ್ಲಿ ಹರೇ ಕೃಷ್ಣ ಗಿರಿಯ ಮೇಲೆ ಆವಿರ್ಭವಿಸಿದನು. ಈ ಸಂದರ್ಭವನ್ನು ಭಕ್ತರು ಬ್ರಹ್ಮೋತ್ಸವ ಎಂದು ಆಚರಿಸುತ್ತಾರೆ.

ಎಲ್ಲ ವೈಷ್ಣವ ಮಂದಿರಗಳಲ್ಲಿ ಬ್ರಹ್ಮೋತ್ಸವವನ್ನು ಭಕ್ತಿಯಿಂದ, ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ತಿರುಮಲದಲ್ಲಿ ನಡೆಯುವ ಶ್ರೀವಾರಿ ಬ್ರಹ್ಮೋತ್ಸವವು ಅತ್ಯಂತ ಪ್ರಸಿದ್ಧವಾದುದು.

ಇಸ್ಕಾನ್ ಬೆಂಗಳೂರಿನ ಶ್ರೀ ಶ್ರೀ ರಾಧಾ ಕೃಷ್ಣ ಮಂದಿರದಲ್ಲಿ ಧ್ವಜ ಆರೋಹಣದೊಂದಿಗೆ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಗುವುದು. ಗರುಡ ಧ್ವಜವನ್ನು ಆರೋಹಣ ಮಾಡುವುದೇ ಈ ಶಾಸ್ತ್ರ ವಿಧಿ. ಧ್ವಜ ಆರೋಹಣದ ಮುನ್ನಾ ದಿನದ ಸಂಜೆ ಗರುಡ ಧ್ವಜವನ್ನು ಪೂಜಿಸಲಾಗುವುದು ಮತ್ತು ವೈನತೇಯ ಹೋಮವನ್ನು ನೆರವೇರಿಸಲಾಗುವುದು.

ವಿಶ್ವಕ್ಸೇನ ಆರಾಧನೆ, ದ್ವಾರ ಪೂಜೆ, ಮೃತ್ತಿ ಸಂಗ್ರಹಣೆ, ಅಂಕುರಾರ್ಪಣೆ ಮತ್ತು ರಕ್ಷಾ ಬಂಧನ ಇವು ಅಂದಿನ ಸಂಜೆಯ ಇತರ ವಿಧಿ ವಿಧಾನಗಳು. ಉತ್ಸವಗಳಲ್ಲಿ ಪಾಲ್ಗೊಳ್ಳಬೇಕೆಂದು ಭಕ್ತರು ದೇವತೆಗಳನ್ನು ಧ್ವಜ ಆರೋಹಣ ಸಂದರ್ಭದಲ್ಲಿ ಆಹ್ವಾನಿಸುವರು.

ಪ್ರತಿ ಸಂಜೆ ವಿಶೇಷ ಅಲಂಕಾರಗಳಲ್ಲಿ ಕಂಗೊಳಿಸುವ ಶ್ರೀ ಶ್ರೀ ರಾಧಾ ಕೃಷ್ಣ ಉತ್ಸವ ಮೂರ್ತಿಗಳನ್ನು ಬೇರೆ ಬೇರೆ ವಾಹನಗಳಲ್ಲಿ ದೇವಸ್ಥಾನದ ಸುತ್ತ ಕರೆದೊಯ್ಯಲಾಗುವುದು.

ವಿವಿಧ ದಿನಗಳಲ್ಲಿ ಗಜ ವಾಹನ, ಚಂದ್ರ ಪ್ರಭ ವಾಹನ, ಸೂರ್ಯ ಪ್ರಭ ವಾಹನ, ಗರುಡ ವಾಹನ, ಹಂಸ ವಾಹನ, ಅಶ್ವ ವಾಹನ, ಅನಂತ ಶೇಷ ವಾಹನ, ಕಲ್ಪವೃಕ್ಷ ವಾಹನ, ಮಹಾ ಪಲ್ಲಕ್ಕಿ ಮತ್ತು ಹನುಮ ವಾಹನಗಳಲ್ಲಿ ವಿಜೃಂಭಿಸುವ ಭಗವಂತನನ್ನು ನೋಡಲು ಅಸಂಖ್ಯ ಜನರು ಹರೇ ಕೃಷ್ಣ ಗಿರಿಗೆ ಬರುತ್ತಾರೆ.

ಬ್ರಹ್ಮ ರಥವು ಈ ಎಲ್ಲ ಉತ್ಸವಗಳಿಗೆ ಶಿಖರಪ್ರಾಯವಾಗಿದೆ. ಈ ವಾಹನೋತ್ಸವಗಳ ಅನಂತರ ನೃತ್ಯ ಸೇವೆ, ಸಂಗೀತ ಸೇವೆ ಮತ್ತು ಡೋಲೋತ್ಸವ ನಡೆಯುತ್ತದೆ. ಪುಷ್ಪ ಪಲ್ಲಕ್ಕಿ, ಚೂರ್ಣಾಭಿಷೇಕ, ತೆಪ್ಪೋತ್ಸವ – ಚಕ್ರ ಸ್ನಾನ ಇವು ಬ್ರಹ್ಮೋತ್ಸವದ ಸಂದರ್ಭದ ಇತರ ಪ್ರಮುಖ ಕಾರ್ಯಕ್ರಮಗಳಾಗಿವೆ. ಧ್ವಜ ಅವರೋಹಣ ಮತ್ತು ಮಹಾ ಸಂಪ್ರೋಕ್ಷಣೆಯೊಂದಿಗೆ ಬ್ರಹ್ಮೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.