ಶ್ರೀ ಕೃಷ್ಣನ ಅಗ್ರಜ ಶ್ರೀ ಬಲರಾಮನು ಆವಿರ್ಭವಿಸಿದ ಶುಭ ದಿನವನ್ನು ಶ್ರಾವಣದ (ಆಗಸ್ಟ್) ಪೌರ್ಣಮಿಯಂದು ಆಚರಿಸಲಾಗುತ್ತದೆ. ಶ್ರೀ ಬಲರಾಮನು ರೋಹಿಣಿ ಮತ್ತು ವಸುದೇವರ ಪುತ್ರನಾಗಿ ಅವತರಿಸಿದ. ಅವನನ್ನು ಬಲದೇವ, ಸಂಕರ್ಷಣ ಎಂದೂ ಕರೆಯುತ್ತಾರೆ. ಆತ್ಮ ಸಾಕ್ಷಾತ್ಕಾರದ ಯಾತ್ರೆಯಲ್ಲಿನ ಎಲ್ಲ ಅಡೆತಡೆಗಳನ್ನು ದಾಟುವ ಶಕ್ತಿಯನ್ನು ಬಲರಾಮನು ನಮಗೆ ನೀಡುತ್ತಾನೆ.
ಭಕ್ತರು ಅಂದು ಮಧ್ಯಾಹ್ನದವರೆಗೆ ಉಪವಾಸ ಇರುತ್ತಾರೆ ಮತ್ತು ಆಧ್ಯಾತ್ಮಿಕ ಜೀವನದ ಆಚರಣೆಗೆ ಅಗತ್ಯವಾದ ಆಧ್ಯಾತ್ಮಿಕ ಶಕ್ತಿಯನ್ನು ನೀಡೆಂದು ಪ್ರಾರ್ಥಿಸುತ್ತಾರೆ.
ನಮ್ಮ ಮಂದಿರದಲ್ಲಿ ಉತ್ಸವವು ಸಡಗರ ಸಂಭ್ರಮದಿಂದ ನಡೆಯುತ್ತದೆ. ಅರ್ಚಾ ವಿಗ್ರಹಗಳನ್ನು ಹೊಸ ಉಡುಗೆ ಮತ್ತು ಆಭರಣಗಳಿಂದ ಅಲಂಕರಿಸಲಾಗುವುದು. ಉತ್ಸವದ ಆಚರಣೆಯು ಸಂಜೆ 6 ಗಂಟೆಗೆ ಆರಂಭವಾಗುತ್ತದೆ. ಉತ್ಸವ ವಿಗ್ರಹಗಳ ರೂಪದಲ್ಲಿ ಕೃಷ್ಣ ಮತ್ತು ಬಲರಾಮರು ಭವ್ಯವಾದ ಅಭಿಷೇಕವನ್ನು ಸ್ವೀಕರಿಸುತ್ತಾರೆ.
ಅವರಿಗೆ ಪಂಚಾಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಿಹಿ ನೀರು), ಪಂಚಗವ್ಯ, ವಿವಿಧ ಹಣ್ಣುಗಳ ರಸ, ಗಿಡ ಮೂಲಿಕೆಗಳ ಮಿಶ್ರಿತ ಜಲ ಮತ್ತು ಎಳನೀರುಗಳಿಂದ ಅಭಿಷೇಕ ಮಾಡಲಾಗುತ್ತದೆ. ಆರತಿಯನ್ನು ಬೆಳಗಲಾಗುತ್ತದೆ. ಪುರುಷ ಸೂಕ್ತದ ಪಠಣದೊಂದಿಗೆ ಶ್ರೀ ಕೃಷ್ಣ ಬಲರಾಮರ ದಿವ್ಯ ವಿಗ್ರಹಗಳಿಗೆ 108 ಕಳಶಗಳ ಪವಿತ್ರ ಜಲದಿಂದ ಅಭಿಷೇಕ ಮಾಡಲಾಗುತ್ತದೆ. ವಿಗ್ರಹಗಳ ಮೇಲೆ ವಿಧವಿಧವಾದ ಪುಷ್ಪ ವೃಷ್ಟಿಯ ಮೂಲಕ ಅಭಿಷೇಕ ವಿಧಿ ವಿಧಾನವು ಪೂರ್ಣಗೊಳ್ಳುತ್ತದೆ.
ಶ್ರೀ ಕೃಷ್ಣ ಬಲರಾಮರಿಗೆ ಛಪ್ಪನ್ ಭೋಗ್ ಅನ್ನು (56 ಬಗೆಯ ಖಾದ್ಯಗಳು) ಸಮರ್ಪಿಸಲಾಗುವುದು.