ಐದು ನೂರು ವರ್ಷಗಳ ಹಿಂದೆ ಆವಿರ್ಭವಿಸಿದ ಶ್ರೀ ಚೈತನ್ಯ ಮಹಾಪ್ರಭುಗಳು ಭಕ್ತಿ ಪಥದ ಮಹಾನ್ ಪ್ರತಿಪಾದಕರು. ಅವರು ಹರೇ ಕೃಷ್ಣ ಮಹಾ ಮಂತ್ರದ ರೂಪದಲ್ಲಿ ಶ್ರೀ ಕೃಷ್ಣನ ಪವಿತ್ರ ನಾಮಗಳ ಜಪವನ್ನು ಆರಂಭಿಸಿದರು. ಭಾರತದಾದ್ಯಂತ ಸಂಕೀರ್ತನೆ ಆಂದೋಲನವನ್ನು ಹರಡುತ್ತ ಆಧ್ಯಾತ್ಮಿಕ ಕ್ರಾಂತಿಯ ಪ್ರವರ್ತಕರಾದ ಶ್ರೀ ಚೈತನ್ಯರು ಸ್ವತಃ ಶ್ರೀ ಕೃಷ್ಣ.
ಕಲಿಸಂತರಣ ಉಪನಿಷತ್‌ನಲ್ಲಿ ಹೀಗೆ ಹೇಳಿದೆ : “ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ, ಕೃಷ್ಣ ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ// – 16 ನಾಮಗಳಿಂದ ಕಲಿಯುಗದ ದುಷ್ಟ ಪ್ರಭಾವಗಳನ್ನು ನಿಷ್ಫಲಗೊಳಿಸಬಹುದು. ಅಜ್ಞಾನದ ಸಾಗರವನ್ನು ದಾಟಲು ಪವಿತ್ರ ನಾಮದ ಜಪಕ್ಕೆ ಪರ್ಯಾಯವಾದುದು ಇಲ್ಲ ಎಂದು ಎಲ್ಲ ವೇದಗಳಲ್ಲಿಯೂ ಹೇಳಲಾಗಿದೆ.”
ದೇವೋತ್ತಮನಿಗೆ ಅವನ ರೂಪ, ಲಕ್ಷಣ, ಲೀಲೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಸಾವಿರಾರು ಹೆಸರುಗಳಿದ್ದರೂ ಅವುಗಳಲ್ಲಿ ಕೃಷ್ಣನ ಹೆಸರು ಪ್ರಮುಖವಾದುದು. ಕೃಷ್ಣ ಎಂದರೆ ಸರ್ವಾಕರ್ಷಕ. ಶ್ರೀ ಕ್ರಷ್ಣನು ಎಲ್ಲ ವೈಭವಗಳನ್ನೂ ಹೊಂದಿದ್ದಾನೆ – ಸಂಪತ್ತು, ಶಕ್ತಿ, ಕೀರ್ತಿ, ಸೌಂದರ್ಯ, ಜ್ಞಾನ ಮತ್ತು ವೈರಾಗ್ಯ. ಆದುದರಿಂದ ಅವನು ಎಲ್ಲ ಜೀವಿಗಳನ್ನೂ ಆಕರ್ಷಿಸುತ್ತಾನೆ.
ಹರೇ ಕೃಷ್ಣ ಮಹಾಮಂತ್ರದಲ್ಲಿನ ಕೃಷ್ಣ ಮತ್ತು ರಾಮ ಶಬ್ದಗಳು ಭಗವಂತನನ್ನು ಕುರಿತು ಮಾತನಾಡುವ ರೂಪಗಳಾಗಿವೆ. ಹರೇ ಶಬ್ದವು ಭಗವಂತನ ಪರಮಾನಂದ ಶಕ್ತಿಯನ್ನು ಕುರಿತು ಹೇಳುವುದಾಗಿದೆ. ವ್ಯಕ್ತಿಯು ಈ ಮಂತ್ರವನ್ನು ನಿಷ್ಠೆಯಿಂದ ಜಪಿಸಿದರೆ, ಮಾತೆ ಹರಳು ಪ್ರಾಮಾಣಿಕ ಭಕ್ತರಿಗೆ ಪರಮ ಪಿತೃ ಹರಿ ಅಥವಾ ಕೃಷ್ಣನ ಅನುಗ್ರಹವನ್ನು ಪಡೆಯಲು ಸಹಾಯ ಮಾಡುತ್ತಾಳೆ.
ಯಜ್ಞ ಎಂದರೆ ಶ್ರೀ ವಿಷ್ಣು ಅಥವಾ ಕೃಷ್ಣ ಎಂದು ಅರ್ಥ. ಈ ಶಬ್ದವು ವಿಷ್ಣುವಿನ ತೃಪ್ತಿಗಾಗಿ ನಾವು ಮಾಡುವ ಯಾವುದೇ ಕಾರ್ಯಕ್ಕೂ ಸಂಬಂಧಿಸುತ್ತದೆ. ಭಗವಂತನ ಪವಿತ್ರ ನಾಮಗಳನ್ನು ಭಕ್ತಿಯಿಂದ ಕೊಂಡಾಡಿ ಜಪಿಸುವ ಮೂಲಕ ಪ್ರಭುವನ್ನು ತೃಪ್ತಿಪಡಿಸುವುದು ಸಂಕೀರ್ತನ ಯಜ್ಞದ ಉದ್ದೇಶವಾಗಿದೆ.
ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, (10.25) “ಯಜ್ಞಗಳಲ್ಲಿ ನಾನು ಜಪಯಜ್ಞ”
ಪದ್ಮ ಪುರಾಣದಲ್ಲಿ (ಉತ್ತರ ಖಂಡ, 71.270) ಭಗವಂತನು ನಾರದ ಮುನಿಗಳಿಗೆ ಹೇಳುತ್ತಾನೆ, “ನನ್ನ ಪ್ರೀತಿಯ ನಾರದ, ವಾಸ್ತವವಾಗಿ ನಾನು ನನ್ನ ಧಾಮ, ವೈಕುಂಠದಲ್ಲಿ ವಾಸಿಸುವುದಿಲ್ಲ. ಅಥವಾ ಯೋಗಿಗಳ ಹೃದಯದಲ್ಲಿಯೂ ನೆಲೆಸುವುದಿಲ್ಲ. ಆದರೆ ನನ್ನ ಶುದ್ಧ ಭಕ್ತರು ಎಲ್ಲಿ ನನ್ನ ಪವಿತ್ರ ನಾಮಗಳನ್ನು ಜಪಿಸುವರೋ ಮತ್ತು ನನ್ನ ರೂಪ, ಲೀಲೆ ಹಾಗೂ ಲಕ್ಷಣಗಳನ್ನು ಚರ್ಚಿಸುವರೋ ಅಲ್ಲಿ ನಾನು ವಾಸಿಸುತ್ತೇನೆ.”
ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸಲು ಕಟ್ಟುನಿಟ್ಟಿನ ನಿಯಮಗಳೇನೂ ಇಲ್ಲ. ಯಾವುದೇ ದೇಶ, ಧರ್ಮ ಅಥವಾ ಜನಾಂಗಕ್ಕೆ ಸೇರಿದವರು ಈ ಮಂತ್ರವನ್ನು ಯಾವುದೇ ಸಮಯ ಅಥವಾ ಸಂದರ್ಭದಲ್ಲಿಯೂ ಜಪಿಸಬಹುದು. ಮಂತ್ರವನ್ನು ಗಟ್ಟಿಯಾಗಿ – ವೈಯಕ್ತಿಕವಾಗಿ ಅಥವಾ ಗುಂಪಿನಲ್ಲಿ ಸಂಗೀತ ವಾದ್ಯಗಳೊಂದಿಗೆ (ಸಂಕೀರ್ತನೆ), ಅಥವಾ ಮೃದುವಾಗಿ (ಜಪ) ಉದ್ಗರಿಸಬಹುದು.