ನಿಯಂತ್ರಿತ ಭಕ್ತಿಸೇವೆಯ ಪಥದಲ್ಲಿ ಈ ಕೆಳಗಿನ ಅಂಶಗಳನ್ನು ಪಾಲಿಸಬೇಕೆಂದು ತಿಳಿಸಲಾಗಿದೆ :
- ಯೋಗ್ಯ ಆಧ್ಯಾತ್ಮಿಕ ಗುರುವನ್ನು ಸ್ವೀಕರಿಸಿ.
- ಅವರಿಂದ ದೀಕ್ಷೆ ಪಡೆದು ಅವರಿಗೆ ಸೇವೆ ಸಲ್ಲಿಸಿ.
- ಆಧ್ಯಾತ್ಮಿಕ ಗುರುಗಳಿಂದ ಆದೇಶ ಸ್ವೀಕರಿಸಿ ಮತ್ತು ವಿಚಾರಿಸಿ.
- ಹಿಂದಿನ ಆಚಾರ್ಯರ ಹೆಜ್ಜೆಗಳನ್ನು ಅನುಸರಿಸಿ.
ಯೋಗ್ಯ ಆಧ್ಯಾತ್ಮಿಕ ಗುರುಗಳನ್ನು ಸ್ವೀಕರಿಸುವ ವಿಷಯದಲ್ಲಿ ಶ್ರೀಲ ಪ್ರಭುಪಾದರು ಹೇಳುತ್ತಾರೆ, “ಆದೌ ಗುರ್ವಾಶ್ರಯಂ. ಮೊದಲು ಯೋಗ್ಯ ಗುರುಗಳನ್ನು ಸ್ವೀಕರಿಸಿ. ಇಲ್ಲವಾದರೆ, ಭಕ್ತಿಯೇ ಇಲ್ಲ. ಅದು ಸುಮ್ಮನೆ ಹುಸಿ ಅನುಕರಣೆಯಾಗುತ್ತದೆ. ಇದು ಭಕ್ತಿ ರಸಾಮೃತ ಸಿಂಧುವಿನಲ್ಲಿ ರೂಪ ಗೋಸ್ವಾಮಿ ಅವರ ಆದೇಶ. . . ” (ಸಂಜೆ ಉಪನ್ಯಾಸ, ಭುವನೇಶ್ವರ, ಜನವರಿ 23, 1977)
ನಿಮ್ಮ ಇನ್ನಿತರ ಚಟುವಟಿಕೆಗಳಲ್ಲಿ ತೊಡಗುತ್ತಲೇ ನೀವು ಮನೆಯಲ್ಲಿ ಆಚರಿಸಬಹುದಾದ ಭಕ್ತಿಸೇವೆಯ ಬದ್ಧತೆ ಮತ್ತು ಗುಣಮಟ್ಟಗಳು :
- ಪ್ರತಿದಿನ ಹರೇ ಕೃಷ್ಣ ಮಹಾಮಂತ್ರವನ್ನು ಕನಿಷ್ಠ 16 ಸುತ್ತು ಜಪಿಸುವುದು.
- ಶ್ರೀಲ ಪ್ರಭುಪಾದರು ಬೋಧಿಸಿರುವ ನಾಲ್ಕು ನಿಯಂತ್ರಣ ತತ್ತ್ವಗಳನ್ನು ಅನುಸರಿಸುವುದು : ಅಕ್ರಮ ಲೈಂಗಿಕ ಕ್ರಿಯೆ ಇಲ್ಲ, ಜೂಜು ಇಲ್ಲ, ಮದ್ಯ ಸೇವನೆ ಇಲ್ಲ (ಕಾಫಿ, ಚಹಾ ಕೂಡ ಇಲ್ಲ) ಮತ್ತು ಮೊಟ್ಟೆ, ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿದಂತೆ ಮಾಂಸ ಭಕ್ಷಣೆ ಇಲ್ಲ.
- ಮುಂಜಾನೆ ಬೇಗ ಏಳುವುದು, ಮಂಗಳ ಆರತಿ, ಗುರು ಪೂಜೆ ಮತ್ತು ಶ್ರೀಮದ್ ಭಾಗವತ ತರಗತಿಗಳಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಪ್ರತಿ ದಿನದ ಸಾಧನ ಕಾರ್ಯಕ್ರಮವನ್ನು ಅನುಸರಿಸುವುದು.
- ಶ್ರೀ ಕೃಷ್ಣನಿಗೆ ಅರ್ಪಿಸದ ಆಹಾರ ಸೇವನೆಯನ್ನು ತ್ಯಜಿಸುವುದು.
- ಸಾಧ್ಯವಾದಷ್ಟೂ ಮಂದಿರ ಸೇವೆಯಲ್ಲಿ ತೊಡಗುವುದು.