Search
Sunday 17 January 2021
  • :
  • :

ಯಕ್ಷ ಪ್ರಶ್ನೆ (ಭಾಗ ೧)

ವೇದ ಎಂದರೆ ಜ್ಞಾನ ಎಂದರ್ಥ. ಐಹಿಕ ಜಗತ್ತಿನ ಮೊಟ್ಟ ಮೊದಲ ಜೀವಿಯಾದ ಬ್ರಹ್ಮದೇವನಿಗೆ ಭಗವಂತನಾದ ಶ್ರೀಕೃಷ್ಣನು ಅದನ್ನು ನೀಡಿದನು. ಅನಂತರ ಅದನ್ನು ವ್ಯಾಸ ಮಹರ್ಷಿಗಳು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ ಎಂಬ ನಾಲ್ಕು ವೇದಗಳಾಗಿ ಸಂಕಲಿಸಿದರು. ಅವುಗಳಲ್ಲಿನ ಜ್ಞಾನವು ಸಾಮಾನ್ಯರಿಗೆ ಎಟುಕದ ಕಾರಣ ಮಹಾಭಾರತ ಎಂಬ ಮಹಾಕಾವ್ಯದ ಮೂಲಕ ಆ ಜ್ಞಾನವನ್ನು ಸರಳೀಕರಿಸಿದರು. ಈ  ಮಹಾಕಾವ್ಯವು ಸಹ ಸನಾತನವಾಗಿರುವ ನಮ್ಮ ವೈದಿಕ ಧರ್ಮದ ಛಾಪನ್ನು ನಮ್ಮ ಸಮಾಜದಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂಬುದು ಉತ್ಪ್ರೇಕ್ಷೆಯ ಮಾತಲ್ಲ.

ಮಹಾಭಾರತವು ಒಂದು ಲಕ್ಷ ಶ್ಲೋಕಗಳಿಂದ ಕೂಡಿರುವ ಒಂದು ಬೃಹತ್ ಗ್ರಂಥ. ಇಷ್ಟು ದೊಡ್ಡ ಪ್ರಮಾಣದ ಗ್ರಂಥವನ್ನು ಇದುವರೆವಿಗೂ ಇಡೀ ಪ್ರಪಂಚದಲ್ಲಿ ಯಾರೂ ರಚಿಸಿಲ್ಲ ಎಂಬುದು ವಾಸ್ತವವೇ. ಜ್ಞಾನದ ನಿಧಿಯಾಗಿರುವ ಇದು ಸಹಜವಾಗಿಯೇ `ಪಂಚಮವೇದ’ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ.

ಒಂದು ಲಕ್ಷ ಶ್ಲೋಕಗಳಿಂದ ಕೂಡಿರುವ ಆ ಮಹಾಕಾವ್ಯವನ್ನು ಒಟ್ಟು ಹದಿನೆಂಟು ಪರ್ವಗಳಾಗಿ ವಿಭಾಗಿಸಿ ಆ ಪರ್ವಗಳಲ್ಲಿ ಬರುವ ಘಟನಾವಳಿಗಳನ್ನು ಹಲವಾರು ಉಪಪರ್ವಗಳನ್ನಾಗಿ ಹೆಸರಿಸಿ ಅವುಗಳ ಮೂಲಕ ಆಖ್ಯಾನಗಳ, ಪ್ರಸಂಗಗಳ ಮತ್ತು ಕಥೆಗಳ ರೂಪದಲ್ಲಿ ನಮಗೆ ಜ್ಞಾನಭಂಡಾರವನ್ನು ಅತ್ಯಂತ ವ್ಯವಸ್ಥಿತವಾಗಿಯೂ, ಆಕರ್ಷಕವಾಗಿಯೂ, ಸರಳವಾಗಿಯೂ ನೀಡಲಾಗಿದೆ. ಅವುಗಳ ಪೈಕಿ ಅರಣಿಯೋಪಾಖ್ಯಾನವೂ ಒಂದು. ಈ ಆಖ್ಯಾನವು `ಯಕ್ಷಪ್ರಶ್ನೆ ಪ್ರಸಂಗ’ಎಂದೇ ಪ್ರಸಿದ್ಧವಾಗಿದೆ. ಮಹಾಭಾರತದ `ವನಪರ್ವ’ದಲ್ಲಿ ಘಟಿಸುವ ಈ ಪ್ರಸಂಗದಲ್ಲಿ ಯಮಧರ್ಮನು ತನ್ನ ಮಗನಾದ ಯುಧಿಷ್ಠಿರನನ್ನು ನಾನಾ ವಿಷಯಗಳ ಬಗ್ಗೆ  ಪ್ರಶ್ನಿಸುತ್ತಾನೆ. ಅವಕ್ಕೆಲ್ಲಾ ಧರ್ಮಜನು ಸಮರ್ಪಕವಾಗಿ ಉತ್ತರಿಸುತ್ತಾನೆ. ಇದರಿಂದ  ಸಂತುಷ್ಟನಾದ ಯಮಧರ್ಮನು ಧರ್ಮರಾಜನಿಗೆ  ವರಪ್ರದಾನ ಮಾಡುತ್ತಾನೆ. ಯಮಧರ್ಮ ಹಾಗೂ ಯುಧಿಷ್ಠಿರನ ಮಧ್ಯೆ ನಡೆಯುವ ಪ್ರಶ್ನೋತ್ತರಗಳ ಈ ಪ್ರಸಂಗವು ಘಟಿಸಿದ್ದಾದರೂ ಹೇಗೆ? ಈ ಪ್ರಸಂಗದಲ್ಲಿ ಯಮಧರ್ಮ ಕೆೇಳಿದ ಪ್ರಶ್ನೆಗಳು ಯಾವುವು? ಯುಧಿಷ್ಠಿರ ಹೇಳಿದ ಉತ್ತರಗಳೇನು? ಎಂಬುದನ್ನು ತಿಳಿಯೋಣ.

ಪಾಂಡವರು ಪಗಡೆಯಾಟದಲ್ಲಿ ಸೋತು ದುರ್ಯೋಧನನೊಡನೆ ಮಾಡಿಕೊಂಡಿದ್ದ ನಿಬಂಧನೆಗೆ ಅನುಗುಣವಾಗಿ ಹನ್ನೆರಡು ವರ್ಷಗಳ ಕಾಲ ಅರಣ್ಯವಾಸವನ್ನೂ ಒಂದು ವರ್ಷ ಅಜ್ಞಾತವಾಸವನ್ನೂ ಮಾಡಬೇಕಾಯಿತು. ಹನ್ನೆರಡು ವರ್ಷಗಳಷ್ಟು ದೀರ್ಘವಾದ ಅರಣ್ಯವಾಸದ ಅವಧಿಯ ಅಂತ್ಯಭಾಗದಲ್ಲಿ  ಕಾಮ್ಯಕವನಕ್ಕೆ ಪಾಂಡವರ ಪ್ರವೇಶವಾಗುತ್ತದೆ. ಆ ವನದ ಒಂದು ಭಾಗದಲ್ಲಿ ಬ್ರಾಹ್ಮಣನೊಬ್ಬನು ಕುಟೀರವೊಂದನ್ನು ಸ್ಥಾಪಿಸಿಕೊಂಡು ಯಜ್ಞಯಾಗಾದಿಗಳಲ್ಲಿ ತೊಡಗಿರುತ್ತಾನೆ. ಹೀಗಿರುವಲ್ಲಿ ಒಂದು ದಿನ ಉದ್ದನೆಯ ಕೊಂಬುಗಳುಳ್ಳ ಜಿಂಕೆಯೊಂದು ಆ ಬ್ರಾಹ್ಮಣನ ಕುಟೀರವನ್ನು ಪ್ರವೇಶಿಸಿ ಯಜ್ಞಾರಂಭಕ್ಕಾಗಿ ಅಗ್ನಿಯನ್ನು ಪಡೆಯಲು ಒಂದು ಕಡೆ ಗೂಟಕ್ಕೆ ನೇತುಹಾಕಿದ್ದ ಎರಡು ಅರಣಿಗಳನ್ನು ತನ್ನ ಕೊಂಬಿನಲ್ಲಿ ಸಿಕ್ಕಿಸಿಕೊಂಡು ಅಲ್ಲಿಂದ ನಿರ್ಗಮಿಸುತ್ತದೆ. ಇದನ್ನು ಕಂಡ ಬ್ರಾಹ್ಮಣನು ತನ್ನ ಅರಣಿಗಳನ್ನು ಪಡೆಯುವ ಸಲುವಾಗಿ ಆ ಜಿಂಕೆಯನ್ನು ಹಿಂಬಾಲಿಸುತ್ತಾ ಪಾಂಡವರಿರುವಲ್ಲಿಗೆ  ತಲಪಿ ವಿಷಯವನ್ನು ಸೂಚ್ಯವಾಗಿ ಯುಧಿಷ್ಠಿರನಿಗೆ  ತಿಳಿಸಿ ತನ್ನ ನಿತ್ಯ ವಿಧಿಯಾದ ಯಜ್ಞವನ್ನು ಮಾಡಲು ಅವಶ್ಯವಾದ ತನ್ನ ಅರಣಿಗಳನ್ನು  ಆ ಜಿಂಕೆಯಿಂದ ತಂದುಕೊಡಲು ಬಿನ್ನವಿಸಿಕೊಂಡು ಆ ಜಿಂಕೆಯು ಓಡಿ ಕಣ್ಮರೆಯಾದ ದಿಕ್ಕನ್ನು ತೋರುತ್ತಾನೆ.

ಆ ಬ್ರಾಹ್ಮಣನ ಬಿನ್ನಪವನ್ನು ಆಲಿಸಿದ ಯುಧಿಷ್ಠಿರನು ಆ ಜಿಂಕೆಯಿಂದ ಬ್ರಾಹ್ಮಣನ ಅರಣಿಗಳನ್ನು ಪಡೆದು ತಂದೊಪ್ಪಿಸುವ ನಿರ್ಧಾರದೊಂದಿಗೆ ಜಿಂಕೆಯು ಓಡಿ ಕಣ್ಮರೆಯಾದ ದಿಕ್ಕಿಗೆ ತನ್ನ ಸಹೋದರರೊಡನೆ  ಹೋಗುತ್ತಾನೆ. ಹಿಡಿಯಲು ಹಿಂಬಾಲಿಸಿದ ಪಾಂಡವರಿಗೆ ಸಿಗದೆ ಅರಣ್ಯದಲ್ಲಿ ಓಡುತ್ತಾ ಹೋದ ಆ ಜಿಂಕೆ ಕೊನೆಗೆ ಕಣ್ಮರೆಯಾಗುತ್ತದೆ. ಅದನ್ನು ಹಿಂಬಾಲಿಸಿ ಬಂದ ಪಾಂಡವರು ದಣಿದು ಆಲದ ಮರವೊಂದರ ಕೆಳಗೆ ವಿಶ್ರಮಿಸುತ್ತಾರೆ.

ತಮ್ಮೆಲ್ಲರ ಕಣ್ಣಿಗೆ ಕಂಡರೂ ತಮ್ಮಿಂದ ತಪ್ಪಿಸಿಕೊಂಡು ಬಹಳ ಹೊತ್ತಿನವರೆಗೆ ತಮ್ಮನ್ನು ಅರಣ್ಯದಲ್ಲೆಲ್ಲಾ ಸುತ್ತಿಸಿ ಕೊನೆಗೆ ಕಣ್ಮರೆಯಾದ ಜಿಂಕೆಯ ಬಗ್ಗೆಯೇ ಯೋಚಿಸುತ್ತಾ ದಣಿವಾರಿಸಲು ಮರದ ಕೆಳಗೆ ಕುಳಿತನಂತರ ಅಸಹನೆಗೊಂಡ ನಕುಲನು ಯುಧಿಷ್ಠಿರನನ್ನು ಕುರಿತು, “ಅಣ್ಣಾ , ಎಂಥ  ಸಂದರ್ಭದಲ್ಲೂ ನಾವು ಕಳಂಕಿತರಾಗಿಲ್ಲ. ಯಾರು ಏನೇ ಕೇಳಿದರೂ ಈವರೆಗೂ ನಾವದನ್ನು ತಿರಸ್ಕರಿಸಿಯೂ ಇಲ್ಲ. ಆದರೂ ನಮಗೇಕೆ ಪ್ರಸ್ತುತದಲ್ಲಿ ಈ ಸ್ಥಿತಿ ಉಂಟಾಯಿತು?” ಎಂದು ಕೇಳುತ್ತಾನೆ. ಅದಕ್ಕೆ ಯುಧಿಷ್ಠಿರನು ನೀಡಿದ ಉತ್ತರ ನಿಜಕ್ಕೂ ಇಡೀ ಸಮಾಜವು ತಿಳಿಯಬೇಕಾದ ಅತ್ಯಂತ ಉಪಯುಕ್ತವಾದ ಉಪದೇಶವಾಗಿದ್ದು ಸಂದಿಗ್ಧ ಪರಿಸ್ಥಿತಿಗಳಲ್ಲಿ ನಾವು ಅನುಸರಿಸಬೇಕಾದ ಮಾರ್ಗವನ್ನು ಸೂಚಿಸುತ್ತದೆ.

ನ ಆಪದಾಂ ಅಸ್ತಿ ಮರ್ಯಾದಾ ನ ನಿಮಿತ್ತಂ ನ ಕಾರಣಮ್ |

ಧರ್ಮಃ ತು ವಿಭಜತಿ ಅರ್ಥಂ ಉಭಯೋಃ ಪುಣ್ಯ ಪಾಪಯೋಃ ||

ಅಂದರೆ, “ದುರದೃಷ್ಟಕ್ಕೆ ಮಿತಿಯೆಂಬುದೇ ಇಲ್ಲ ಮತ್ತು ಅದರ ಕಾರಣವನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಪುಣ್ಯ ಪಾಪಗಳ ಫಲವನ್ನು ಧರ್ಮನು ಹಂಚುತ್ತಾನೆ” ಇದು ಅಸಹನೆಗೊಂಡಿದ್ದ ನಕುಲನನ್ನು ಯುಧಿಷ್ಠಿರನು ಸಂತೈಸಿದ ರೀತಿ. ಇದಕ್ಕೆ ಪ್ರತಿಯಾಗಿ ಭೀಮನು ಹೇಳಿದನು, “ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಅವಮಾನಿಸಿದ ದುಶ್ಶಾಸನನಿಗೆ ತಕ್ಕ ಶಾಸ್ತಿಯನ್ನು ನಾನು ಮಾಡದಿದ್ದುದೇ ಪ್ರಸ್ತುತ ನಮ್ಮ ಈ ದೀನ ಸ್ಥಿತಿಗೆ ಕಾರಣ.”  ಅವನೊಂದಿಗೆ ದನಿಗೂಡಿಸಿದ ಅರ್ಜುನ, “ಆ ಸೂತಪುತ್ರನು ಆಡಿದ ಹೀನ ಮಾತುಗಳನ್ನು ಕೇಳಿಯೂ ನಾನು ಅಸಹಾಯಕನಂತಿದ್ದುದೇ ಇದಕ್ಕೆಲ್ಲ ಕಾರಣ” ಎಂದು ಸಾರುತ್ತಾನೆ. ಸಹದೇವನು ಹೇಳಿದನು, “ಓ ಧರ್ಮಜನೇ, ಪಗಡೆಯಾಟದಲ್ಲಿ  ಮೋಸದಿಂದ ನಿನ್ನನ್ನು ಸೋಲಿಸಿದಾಗಲೇ ಶಕುನಿಯನ್ನು ನಾನು ವಧಿಸದೆ ಬಿಟ್ಟಿದ್ದೇ ಇಂದಿನ ನಮ್ಮೆಲ್ಲರ ಅಸಹಾಯಕ ಸ್ಥಿತಿಗೆ ನಿಜವಾದ ಕಾರಣವು.”

ಅವರೆಲ್ಲರ ಮನದಾಳದ ಮಾತುಗಳನ್ನು ಆಲಿಸಿದ ಯುಧಿಷ್ಠಿರನು ಬಾಯಾರಿಕೆಯನ್ನು ತಣಿಸಲು ಸನಿಹದಲ್ಲೇನಾದರೂ ಸರೋವರವಿದೆಯೇ ಎಂಬುದನ್ನು ತಿಳಿಯುವಂತೆ ನಕುಲನಿಗೆ  ಹೇಳುತ್ತಾನೆ. ಮರವನ್ನು ಹತ್ತಿ ನೋಡಿದ ನಕುಲನು ಹತ್ತಿರದಲ್ಲೇ ಸರೋವರವಿರುವುದಾಗಿ ತಿಳಿಸಿ ತನ್ನಲ್ಲಿರುವ ಬತ್ತಳಿಕೆಯಲ್ಲಿ ನೀರನ್ನು ಸಂಗ್ರಹಿಸಿ ತರಲು ತೆರಳುತ್ತಾನೆ. ನೀರಿಗಾಗಿ ತೆರಳಿದ ನಕುಲನು ಎಷ್ಟು ಹೊತ್ತಾದರೂ ಬಾರದ ಕಾರಣ ಯುಧಿಷ್ಠಿರನ ಸಲಹೆಯಂತೆ ಸಹದೇವನು ನೀರಿಗಾಗಿ ನಕುಲನು ಹೋದ ಮಾರ್ಗವನ್ನು ಅನುಸರಿಸುತ್ತಾನೆ. ಅವನೂ ಬಾರದಿರಲು ನೀರನ್ನು ಜೊತೆಗೆ ಸಹೋದರರನ್ನು ತರುವಂತೆ ಅರ್ಜುನನನ್ನು ಕಳುಹಿಸುತ್ತಾನೆ ಯುಧಿಷ್ಠಿರ. ಹಿಂತಿರುಗಿ ಬಾರದ ಅರ್ಜುನನನ್ನರಸುತ್ತಾ ಅನಂತರ ಭೀಮನು ತನ್ನಣ್ಣನ ಸೂಚನೆಯಂತೆ ನೀರಿಗಾಗಿ ನಿಷ್ಕ್ರಮಿಸುತ್ತಾನೆ. ಹೀಗೆ ಒಬ್ಬರ ಅನಂತರ ಒಬ್ಬರಂತೆ ನೀರಿಗಾಗಿ ತೆರಳಿದ ನಾಲ್ಕು ಮಂದಿ ಸಹೋದರರನ್ನರಸುತ್ತಾ ಬಂದ ಯುಧಿಷ್ಠಿರನಿಗೆ ಸರೋವರವೊಂದರ ಪಕ್ಕದಲ್ಲಿ ತನ್ನ ಎಲ್ಲ ಸಹೋದರರೂ ಅಚೇತನರಾಗಿ ಬಿದ್ದಿರುವುದು ಗೋಚರವಾಗುತ್ತದೆ.

ಸುರಾಸುರರಿಂದಾಗಲೀ, ಕಿನ್ನರರಿಂದಾಗಲೀ, ಗಂಧರ್ವ- ರಿಂದಾಗಲೀ ಅಥವಾ ರಾಕ್ಷಸರಿಂದಾಗಲೀ ಜಯಿಸಲಿಕ್ಕಾಗದ ತನ್ನ ತಮ್ಮಂದಿರು ಅಚೇತನರಾಗಿ ಬಿದ್ದಿರುವುದನ್ನು ನೋಡಿದ ಯುಧಿಷ್ಠಿರನು ಅವರನ್ನು ಸೂಕ್ಷ್ಮವಾಗಿ ಅವಲೋಕಿಸಿ, “ಇಲ್ಲಿ ಯಾವುದೇ ಘರ್ಷಣೆ ನಡೆದ ಚಿಹ್ನೆಗಳಿಲ್ಲ. ಯಾರದೇ ಪಾದದ ಗುರುತುಗಳಿಲ್ಲ, ಹಾಗಿರುವಾಗ ಅಸಾಧಾರಣ ಶಕ್ತಿ ಸಂಪನ್ನರಾದ ನನ್ನ ಸಹೋದರರ ಈ ಸ್ಥಿತಿಗೆ ಕಾರಣರಾಗಿರುವವರಾದರೂ ಯಾರು” ಎಂಬುದಾಗಿ ಯೋಚಿಸಿ “ದುಷ್ಟ ಯೋಜನೆಗಳನ್ನು ಹೊಂದಿರುವ ದುರ್ಯೋಧನನೇನಾದರೂ ನಮ್ಮನೆಲ್ಲ  ಗ‌ತಪ್ರಾಣರನ್ನಾಗಿಸುವ ಉದ್ದೇಶದಿಂದ ಯಾರ ಮೂಲಕವಾದರೂ ಈ ಸರೋವರದ ನೀರನ್ನೆಲ್ಲ ವಿಷಮಯವಾಗುವಂತೇನಾದರೂ ಮಾಡಿರುವನೇ?” ಎಂದು ಸಂಶಯಿಸುತ್ತಾನೆ. ಏನಾದರಾಗಲಿ ಪರೀಕ್ಷಿಸಿಯೇ ಬಿಡೋಣ ಎಂದು ನೀರಿಗಿಳಿದ ಯುಧಿಷ್ಠಿರನನ್ನು ಅಶರೀರ ವಾಣಿಯೊಂದು `ತಾನು ಆ ಸರೋವರದಲ್ಲಿರುವ ಮೀನುಗಳನ್ನು ಆಹಾರವಾಗಿ ಸೇವಿಸುತ್ತಾ ಬದುಕನ್ನು ಸಾಗಿಸುತ್ತಿರುವ ಬಕಪಕ್ಷಿಯೆಂದೂ, ತನ್ನ ಎಚ್ಚರಿಕೆಯ ಮಾತನ್ನು ಲಕ್ಷಿಸದೇ ನೀರನ್ನು ಕುಡಿದ ಪರಿಣಾಮವಾಗಿಯೇ ಅವರೆಲ್ಲ ಗತಪ್ರಾಣರಾಗಿರುವರೆಂದೂ, ತನ್ನ ಪ್ರಶ್ನೆಗಳಿಗೆ ಉತ್ತರಿಸದೇ ನೀರನ್ನು ಕುಡಿದರೆ ಯುಧಿಷ್ಠಿರನಿಗೂ ಅದೇ ಪರಿಸ್ಥಿತಿಯು ಒದಗುವುದೆಂಬುದಾಗಿಯೂ’ ಎಚ್ಚರಿಸುತ್ತದೆ.

ಅಂತಹ ಎಚ್ಚರಿಕೆಯ ಮಾತುಗಳಿಗೆ ಯುಧಿಷ್ಠಿರನ ಪ್ರತಿಕ್ರಿಯೆಯು ಯಾವುದೇ ಪರಿಸ್ಥಿತಿಯಲ್ಲಿ ಸಮಚಿತ್ತತೆಯ ಎಲ್ಲೆಯನ್ನು ಮೀರದೆ ಪ್ರಬುದ್ಧರಾಗಿರುವುದು ಹೇಗೆ ಎಂಬುದಕ್ಕೆ  ಸೊಗಸಾದ ಒಂದು ಉದಾಹರಣೆಯಾಗುತ್ತದೆ.

“ಇಲ್ಲಿ ಅಚೇತನರಾಗಿ ಬಿದ್ದಿರುವವರು ಹಿಮವಂತ, ಪರಿಯತ್ರ, ವಿಂಧ್ಯ ಮತ್ತು ಮಲಯ ಪರ್ವತಗಳಷ್ಟು ಶಕ್ತಿಶಾಲಿಗಳಾಗಿದ್ದಾರೆ. ಅಂತಹವರನ್ನು ಪಕ್ಷಿಯೊಂದು ಅಚೇತರನ್ನಾಗಿಸಲು ಸಾಧ್ಯವಿಲ್ಲ. ನೀನು ದೈವಾಂಶವನ್ನು ಹೊಂದಿರುವ ರುದ್ರನೋ, ವಸುವೋ ಅಥವಾ ಮಾರುತನೋ ಆಗಿರಬೇಕು. ನೀನು ಯಾರೇ ಆಗಿರಲಿ ನಿನ್ನ ಸಾಹಸವನ್ನು ಮೆಚ್ಚಬೇಕಾದುದೇ. ನೀನು ಈ ಕೃತ್ಯವನ್ನು ಏಕೆ ಎಸಗಿರುವೆ? ನಿನ್ನ ಈ ಕೃತ್ಯದ ಹಿಂದಿರುವ ಉದ್ದೇಶವಾದರೂ ಏನು?” ಎನ್ನುತ್ತಾನೆ ಯುಧಿಷ್ಠಿರ.  ಆಗ ಯಕ್ಷನ ರೂಪದಲ್ಲಿ ಯುಧಿಷ್ಠಿರನ ಮುಂದೆ ಪ್ರತ್ಯಕ್ಷವಾದ ಯಮಧರ್ಮರಾಜನು ತಾನೊಬ್ಬ ಯಕ್ಷನೆಂದೂ  ತಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ನೀರನ್ನು ಪಡೆಯಬಹುದೆಂದೂ ತಿಳಿಸುತ್ತಾನೆ. ಆಗ ಆ ಯಕ್ಷನಿಗೂ ಯುಧಿಷ್ಠಿರನಿಗೂ ಮಧ್ಯೆ ನಡೆಯುವ ಪ್ರಶ್ನೋತ್ತರಗಳು ಇಡೀ ಮಾನವ ಕುಲಕ್ಕೆ ನೀತಿ ಪಾಠಗಳಾಗುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ. ಈ ಪ್ರಶ್ನೆ ಹಾಗೂ ಉತ್ತರಗಳು ಸರಳವಾಗಿ ಕಂಡರೂ ಅವುಗಳಲ್ಲಿ ಎಲ್ಲ ಜ್ಞಾನವು ಅಂತರ್ಗತವಾಗಿರುವುದನ್ನು ಅವುಗಳ ವಿಶ್ಲೇಷಣೆಯಿಂದ ಅರಿಯಬಹುದು.

ಯಕ್ಷ ಕೇಳಿದ ಪ್ರಶ್ನೆ ಹಾಗೂ ಉಪಪ್ರಶ್ನೆಗಳೂ ಅವುಗಳಿಗೆ ಯುಧಿಷ್ಠಿರನು ನೀಡಿದ ಪ್ರೌಢತೆಯಿಂದ ಕೂಡಿರುವ ಉತ್ತರಗಳೂ ಕೆಳಗಿನಂತಿವೆ.

ಪ್ರಶ್ನೆ ೧. ಸೂರ್ಯನನ್ನು ಉದಯಿಸುವಂತೆ ಮಾಡುವುದು ಯಾವುದು?

ಉತ್ತರ : ಸೃಷ್ಟಿಕರ್ತನಾದ ಬ್ರಹ್ಮನೇ  ಸೂರ್ಯನು ಉದಯಿಸುವಂತೆ ಮಾಡುತ್ತಾನೆ.

ಪ್ರಶ್ನೆ ೨. ಸೂರ್ಯನ ಜೊತೆಗಿರುವವರು ಯಾರು?

ಉತ್ತರ: ದೇವತೆಗಳು ಸೂರ್ಯನ ಜೊತೆ ಇರುತ್ತಾರೆ.

ಪ್ರಶ್ನೆ ೩. ಸೂರ್ಯನು ಅಸ್ತಮಿಸಲು ಕಾರಣರಾರು?

ಉತ್ತರ: ಧರ್ಮವೊಂದೇ ಸೂರ್ಯನು ಅಸ್ತಂಗತನಾಗಲು ಕಾರಣನು.

ಪ್ರಶ್ನೆ ೪. ಅವನು ಸ್ಥಿತನಾಗಿರುವುದು ಹೇಗೆ?

ಉತ್ತರ: ಸತ್ಯದಲ್ಲಿ ಸೂರ್ಯನು ಸ್ಥಿತನಾಗಿದ್ದಾನೆ.

ಪ್ರಶ್ನೆ ೫. ಒಬ್ಬನು ವಿದ್ವಾಂಸನಾಗಲು ಯಾವುದು ಕಾರಣವಾಗುತ್ತದೆ?

ಉತ್ತರ: ಶ್ರುತಿಗಳ (ವೇದಗಳ) ಅಧ್ಯಯನದಿಂದ ಒಬ್ಬ ಶ್ರೋತ್ರಿಯ (ವಿದ್ವಾಂಸ)ನಾಗುತ್ತಾನೆ.

ಪ್ರಶ್ನೆ ೬. ಯಾವುದರಿಂದ ವ್ಯಕ್ತಿಯು ಅತ್ಯಂತ ಉನ್ನತವಾದುದನ್ನು ಪಡೆಯುವನು?

ಉತ್ತರ: ತಪಸ್ಸಿನಿಂದ ವ್ಯಕ್ತಿಯು ಉನ್ನತವಾದುದನ್ನು ಪಡೆಯುವನು.

ಪ್ರಶ್ನೆ ೭. ಯಾವುದರಿಂದ ಒಬ್ಬನು ಸಮರ್ಥನಾಗುತ್ತಾನೆ?

ಉತ್ತರ: ಮನಸ್ಸು ಮತ್ತು ಬುದ್ಧಿಯನ್ನು ನಿಗ್ರಹಿಸುವುದರಿಂದ ಒಬ್ಬನು ಸಮರ್ಥನಾಗುತ್ತಾನೆ.

ಪ್ರಶ್ನೆ ೮. ಯಾವುದರಿಂದ ವ್ಯಕ್ತಿಯು ಬುದ್ಧಿವಂತನಾಗುತ್ತಾನೆ?

ಉತ್ತರ: ವೃದ್ಧರ ಸೇವೆ ಮಾಡುವುದರಿಂದ ವ್ಯಕ್ತಿಯು ಬುದ್ಧಿವಂತನಾಗುತ್ತಾನೆ.

ಪ್ರಶ್ನೆ ೯. ಬ್ರಾಹ್ಮಣನ ದೈವಿಕ ಗುಣ ಯಾವುದು?

ಉತ್ತರ:  ಸ್ವಾಧ್ಯಾಯ (ವೇದಾಧ್ಯಯನ) ಮಾಡುವುದು ಬ್ರಾಹ್ಮಣನ ದೇವತ್ವದ ಗುಣವಾಗಿದೆ.

ಪ್ರಶ್ನೆ ೧೦. ಪುಣ್ಯವಂತರನ್ನು ಹೋಲುವ ಅವರ ಚಟುವಟಿಕೆ ಯಾವುದು?

ಉತ್ತರ: ಅವರ ಪುಣ್ಯಕಾರ್ಯಗಳಿಗೆ ಅವರ ತಪಸ್ಸು ಅಳತೆಗೋಲಾಗಿರುತ್ತದೆ.

ಪ್ರಶ್ನೆ ೧೧.  ಅವರ ಮಾನುಷೀ ಲಕ್ಷಣಗಳು ಯಾವುವು?

ಉತ್ತರ: ಸಾವೇ ಅವರ ಮಾನುಷೀ ಲಕ್ಷಣ.

ಪ್ರಶ್ನೆ ೧೨. ಅವರ ಪಾಪಕಾರ್ಯಗಳು ಯಾವುವು?

ಉತ್ತರ: ಬೇರೊಬ್ಬರ ಬಗ್ಗೆ ಹೇಳುವ ಚಾಡಿ/ದೂರುಗಳು ಅವರ ಪಾಪ ಕಾರ್ಯಗಳಾಗಿವೆ.

ಪ್ರಶ್ನೆ ೧೩. ಕ್ಷತ್ರಿಯರ ದೈವತ್ವವೇನು?

ಉತ್ತರ: ಅವರು ಹೊಂದಿರುವ ಬಾಣ ಮತ್ತು ಆಯುಧಗಳು ಅವರ ದೈವತ್ವವನ್ನು ಸ್ಥಾಪಿಸುತ್ತವೆ.

ಪ್ರಶ್ನೆ ೧೪. ಎಂತಹ ಚಟುವಟಿಕೆಗಳಿಂದ ಅವರ ಪುಣ್ಯಕೃತ್ಯಗಳನ್ನು ಅಳೆಯಬಹುದು?

ಉತ್ತರ: ಅವರು ನಿರ್ವಹಿಸುವ ಯಜ್ಞ ಯಾಗಾದಿಗಳೇ ಅವರ ಪುಣ್ಯಕೃತ್ಯಗಳ ಪ್ರತಿಬಿಂಬಗಳು.

ಪ್ರಶ್ನೆ ೧೫. ಕ್ಷತ್ರಿಯರ ಮಾನುಷೀ ಲಕ್ಷಣ ಯಾವುದು?

ಉತ್ತರ: ಭಯಪಡುವುದು ಅವರ ಮಾನುಷೀ ಲಕ್ಷಣವಾಗಿದೆ.

ಪ್ರಶ್ನೆ ೧೬. ಅವರ ಎಂತಹ ಕ್ರಿಯೆಯನ್ನು ಪಾಪಕಾರ್ಯವೆಂದು ಹೇಳಲಾಗುವುದು?

ಉತ್ತರ:  ಜನರನ್ನು ಸಂರಕ್ಷಿಸುವುದನ್ನು ತಿರಸ್ಕರಿಸುವುದು ಅವರ ಪಾಪಕಾರ್ಯವಾಗಿರುತ್ತದೆ.

ಪ್ರಶ್ನೆ ೧೭. ಯಜ್ಞದ ಸಾಮ ಯಾವುದು?

ಉತ್ತರ: ಪುಣ್ಯವೇ ಯಜ್ಞದ ಸಾಮ.

ಪ್ರಶ್ನೆ ೧೮. ಯಜ್ಞದ ಯಜು ಯಾವುದು?

ಉತ್ತರ: ಮನಸ್ಸೇ ಯಜ್ಞದ ಯಜು.

ಪ್ರಶ್ನೆ ೧೯. ಯಜ್ಞದ ಆಶ್ರಯ ಯಾವುದು?

ಉತ್ತರ: ಋಕ್ ಯಜ್ಞದ ಆಶ್ರಯವಾಗಿದೆ.

ಪ್ರಶ್ನೆ ೨೦. ಯಾವುದಿಲ್ಲದೆ ಯಜ್ಞವು ನಡೆಯದು?

ಉತ್ತರ: ಋಕ್ ಇಲ್ಲದೆ ಯಜ್ಞವನ್ನು ನೆರವೇರಿಸಲಿಕ್ಕಾಗದು.

ಪ್ರಶ್ನೆ ೨೧. ರೈತನಿಗೆ ಶ್ರೇಷ್ಠ ವಸ್ತು ಯಾವುದು?

ಉತ್ತರ: ಮಳೆಯು ರೈತನಿಗೆ ಅತ್ಯಂತ ಬೆಲೆಯುಳ್ಳದ್ದಾಗಿದೆ.

ಪ್ರಶ್ನೆ ೨೨. ಬಿತ್ತುವವರಿಗೆ ಶ್ರೇಷ್ಠ ವಸ್ತು ಯಾವುದು?

ಉತ್ತರ : ಬೀಜಗಳು ಬಿತ್ತುವವರಿಗೆ ಶ್ರೇಷ್ಠ ವಸ್ತುಗಳು.

ಪ್ರಶ್ನೆ ೨೩. ಶ್ರೀಮಂತಿಕೆಯನ್ನು ಬಯಸುವವರಿಗೆ ಅತ್ಯಂತ ಬೆಲೆ ಬಾಳುವ ವಸ್ತು ಯಾವುದು?

ಉತ್ತರ: ಶ್ರೀಮಂತಿಕೆಯನ್ನು ಬಯಸುವವರಿಗೆ ಹಸು ಅತ್ಯಂತ ಬೆಲೆ ಬಾಳುವ ವಸ್ತುವಾಗಿದೆ.

ಪ್ರಶ್ನೆ ೨೪. ಸಂತತಿಯನ್ನು ಇಚ್ಛಿಸುವವರಿಗೆ ಯಾವುದು ಶ್ರೇಷ್ಠ?

ಉತ್ತರ: ಪುತ್ರನೇ ಸಂತತಿಯನ್ನು ಇಚ್ಛಿಸುವವರಿಗೆ ಶ್ರೇಷ್ಠ.

ಪ್ರಶ್ನೆ ೨೫. ಬುದ್ಧಿವಂತನಾಗಿದ್ದೂ, ಇಡೀ ಪ್ರಪಂಚವು ಸ್ತುತಿಸುತ್ತಿದ್ದರೂ, ಸರ್ವ ಜೀವಿಗಳಿಂದ ಮನ್ನಣೆ ಪಡೆಯುತ್ತಿದ್ದರೂ, ಎಲ್ಲ ಇಂದ್ರಿಯ ಸುಖಗಳನ್ನು ಅನುಭವಿಸುತ್ತಿದ್ದರೂ ಸಹಾ ಬದುಕಿದ್ದೂ ಸತ್ತಂತಿರುವವರು ಯಾರಾದರು ಇದ್ದಾರೆಯೇ?

ಉತ್ತರ: ಯಾರು ದೇವತೆಗಳಿಗೆ, ಅತಿಥಿಗಳಿಗೆ, ಸೇವಕರಿಗೆ, ಪಿತೃಗಳಿಗೆ ಮತ್ತು ಭಗವಂತನಿಗೆ ಏನನ್ನೂ ದಾನವಾಗಿ ಕೊಡುವುದಿಲ್ಲವೋ ಅಂತಹವನರು ಉಸಿರಾಡುತ್ತಿದ್ದರೂ ಸತ್ತಂತೆ.

ಪ್ರಶ್ನೆ ೨೬. ಭೂಮಿಗಿಂತ ತೂಕವಾದದ್ದು (ಮುಖ್ಯವಾದದ್ದು) ಯಾವುದು?

ಉತ್ತರ:  ಭೂಮಿಗಿಂತ ತೂಕವಾದವಳು (ಮುಖ್ಯವಾದವಳು) ತಾಯಿ ಮಾತ್ರ.

ಪ್ರಶ್ನೆ ೨೭. ಆಕಾಶಕ್ಕಿಂತಲೂ ಉನ್ನತವಾದದ್ದಾವುದು?

ಉತ್ತರ: ತಂದೆಯೇ ಆಕಾಶಕ್ಕಿಂತಲೂ ಉನ್ನತವಾದವನು.

ಪ್ರಶ್ನೆ ೨೮. ಗಾಳಿಗಿಂತಲೂ ವೇಗವಾಗಿ ಚಲಿಸುವುದು ಯಾವುದು?

ಉತ್ತರ: ಮನಸ್ಸು ಗಾಳಿಗಿಂತಲೂ ವೇಗವಾಗಿ ಚಲಿಸಬಲ್ಲದು.

ಪ್ರಶ್ನೆ ೨೯. ಹುಲ್ಲಿಗಿಂತಲೂ ಅಸಂಖ್ಯವಾದದ್ದು ಏನು?

ಉತ್ತರ: ಯೋಚನೆಗಳು ಹುಲ್ಲಿಗಿಂತಲೂ ಅಸಂಖ್ಯವಾಗಿರುತ್ತವೆ.

ಪ್ರಶ್ನೆ ೩೦. ನಿದ್ದೆಯಲ್ಲೂ ಕಣ್ಣುಮುಚ್ಚದೆ ಇರುವುದು ಯಾವುದು?

ಉತ್ತರ: ಜಲಚರವಾದ ಮೀನು ನಿದ್ದೆಯಲ್ಲಿಯೂ ಕಣ್ಣನ್ನು ಮುಚ್ಚುವುದಿಲ್ಲ.

ಪ್ರಶ್ನೆ ೩೧. ಹುಟ್ಟಿದ ಅನಂತರವೂ ಚಲಿಸದೆ ಇರುವ ವಸ್ತು ಯಾವುದು?

ಉತ್ತರ: ಮೊಟ್ಟೆಯು   ತನ್ನ   ಜನನದ  ಅನಂತರವೂ  ಚಲಿಸುವುದಿಲ್ಲ.

ಪ್ರಶ್ನೆ ೩೨. ಹೃದಯಹೀನವಾದದ್ದು ಯಾವುದು?

ಉತ್ತರ: ಕಲ್ಲು ಹೃದಯವನ್ನು ಹೊಂದಿರದು.

ಪ್ರಶ್ನೆ ೩೩. ಯಾವುದು ವೇಗದಿಂದ ವರ್ಧಿಸುತ್ತದೆ?

ಉತ್ತರ: ನದಿಯು ವೇಗದಿಂದ ವರ್ಧಿಸುತ್ತದೆ.

ಪ್ರಶ್ನೆ ೩೪. ಪ್ರಯಾಣಿಕನ  ಗೆಳೆಯನಾರು?

ಉತ್ತರ: ಜೊತೆಗಾರನೇ ಪ್ರಯಾಣಿಕನ ಗೆಳೆಯ.

ಪ್ರಶ್ನೆ ೩೫. ಗೃಹಸ್ಥನ ಗೆಳೆಯನಾರು?

ಉತ್ತರ: ಗೃಹಸ್ಥನಿಗೆ ಪತ್ನಿಯೇ ಗೆಳತಿ.

ಪ್ರಶ್ನೆ ೩೬. ರೋಗಿಗೆ ಮಿತ್ರರಾರು?

ಉತ್ತರ: ವೈದ್ಯನೇ ರೋಗಿಯ ಮಿತ್ರ.

ಪ್ರಶ್ನೆ ೩೭: ಸಾವಿನ ಸನಿಹದಲ್ಲಿರುವವನಿಗೆ ಗೆಳೆಯನಾರು?

ಉತ್ತರ: ದಾನವೇ ಸಾವಿಗೆ ಸಮೀಪವಿರುವವನ ನಿಜವಾದ ಮಿತ್ರ.

ಪ್ರಶ್ನೆ ೩೮.  ಸಕಲ ಜೀವಿಗಳ ಅತಿಥಿ ಯಾರು?

ಉತ್ತರ: ಅಗ್ನಿಯೊಂದೇ ಎಲ್ಲರಿಗೂ ಅತಿಥಿಯಾಗುವಂತಹುದು.

ಪ್ರಶ್ನೆ ೩೯. ಸನಾತನ ಧರ್ಮ ಯಾವುದು?

ಉತ್ತರ: ಭಗವಂತನನ್ನು ಸಂತೃಪ್ತಿಗೊಳಿಸುವುದೇ ಸನಾತನ‌ ಧರ್ಮವಾಗಿದೆ.

ಪ್ರಶ್ನೆ ೪೦. ಅಮೃತಕ್ಕೆ  ಸಮನಾದದ್ದು ಯಾವುದು?

ಉತ್ತರ: ಹಸುವಿನ ಹಾಲು ಮಾತ್ರ ಅಮೃತಕ್ಕೆ ಸಮಾನವಾದದ್ದು.

ಪ್ರಶ್ನೆ ೪೧. ಈ ಜಗತ್ತೆಲ್ಲಾ ಏನು?

ಉತ್ತರ: ಈ ಜಗತ್ತೆಲ್ಲಾ ಬರೀ ಗಾಳಿಯೇ.

ಪ್ರಶ್ನೆ ೪೨. ಒಂಟಿಯಾಗಿ ಸಂಚರಿಸುವುದು ಯಾವುದು?

ಉತ್ತರ: ಸೂರ್ಯನು ಒಂಟಿಯಾಗಿ ಸಂಚರಿಸುವವನು.

ಪ್ರಶ್ನೆ ೪೩. ಜನಿಸಿದ ಅನಂತರವೂ ಮರುಹುಟ್ಟು ಪಡೆಯುವುದು ಯಾವುದು?

ಉತ್ತರ: ಚಂದ್ರ ತನ್ನ ಜನ್ಮದ ಅನಂತರವೂ ಮರು ಹುಟ್ಟು ಪಡೆಯುವನು.

ಪ್ರಶ್ನೆ ೪೪. ಶೀತಕ್ಕೆ ಪ್ರತ್ಯೌಷಧ ಯಾವುದು?

ಉತ್ತರ: ಅಗ್ನಿ ಅಥವಾ ಶಾಖವು ಶೀತಕ್ಕೆ ಪ್ರತ್ಯೌಷಧವಾಗಿದೆ.

ಪ್ರಶ್ನೆ ೪೫. ಅತ್ಯಂತ ವಿಶಾಲವಾದ ಮೈದಾನ ಯಾವುದು?

ಉತ್ತರ: ಭೂಮಿಯೇ ಅತ್ಯಂತ ವಿಶಾಲವಾದ ಮೈದಾನವಾಗಿದೆ.

ಪ್ರಶ್ನೆ ೪೬. ಧರ್ಮವನ್ನು ವರ್ಣಿಸುವ ಏಕ ಪದ‌ ಯಾವುದು?

ಉತ್ತರ: ದಕ್ಷತೆ ಧರ್ಮವನ್ನು ವರ್ಣಿಸುವ ಏಕ ಪದ‌.

ಪ್ರಶ್ನೆ ೪೭. ಯಶಸ್ಸನ್ನು ವರ್ಣಿಸುವ ಏಕ ಪದ ಯಾವುದು?

ಉತ್ತರ: ದಾನ ಯಶಸ್ಸನ್ನು ವರ್ಣಿಸುವ ಏಕ ಪದ.

ಪ್ರಶ್ನೆ ೪೮. ಸ್ವರ್ಗವನ್ನು ವರ್ಣಿಸುವ ಏಕ ಪದ ಯಾವುದು?

ಉತ್ತರ: ಸತ್ಯವು ಸ್ವರ್ಗವನ್ನು ವರ್ಣಿಸುವ ಏಕ ಪದ.

ಪ್ರಶ್ನೆ ೪೯. ಸುಖವನ್ನು ವರ್ಣಿಸುವ ಏಕ ಪದ ಯಾವುದು?

ಉತ್ತರ: ಶೀಲ ಸುಖವನ್ನು ವರ್ಣಿಸುವ ಏಕ ಪದ.

ಪ್ರಶ್ನೆ ೫೦. ಮನುಷ್ಯನೊಬ್ಬನ ಆತ್ಮ ಯಾವುದು?

ಉತ್ತರ: ಮಗನೇ ಮನುಷ್ಯನಿಗೆ ಆತ್ಮವು.

ಪ್ರಶ್ನೆ ೫೧. ಅವನಿಗೆ ಅದೃಷ್ಟವು ನೀಡುವ‌ ಮಿತ್ರನಾರು?

ಉತ್ತರ: ಪತ್ನಿಯು ಮನುಷ್ಯನೊಬ್ಬನಿಗೆ ಅದೃಷ್ಟದಿಂದ ಲಭಿಸುವ ಮಿತ್ರ.

ಪ್ರಶ್ನೆ ೫೨. ಅವನಿಗಿರುವ ಪ್ರಮುಖ ಆಧಾರ ಯಾವುದು?

ಉತ್ತರ: ಬೆಳೆಗೆ ಬೇಕಾದ ಮಳೆ ಮನುಷ್ಯನ ಪ್ರಮುಖ ಉಪಜೀವನ.

ಪ್ರಶ್ನೆ ೫೩. ಅವನ ಆಶ್ರಯ ಯಾವುದು?

ಉತ್ತರ:  ದಾನ ಅವನ ಆಶ್ರಯವಾಗಿದೆ.

ಪ್ರಶ್ನೆ ೫೪. ಕೀರ್ತಿಸಬಹುದಾದಂತಹುದು ಯಾವುದು?

ಉತ್ತರ: ದಕ್ಷತೆಯು ಕೀರ್ತಿಸಬಹುದಾದದ್ದಾಗಿದೆ.

ಪ್ರಶ್ನೆ ೫೫. ಉತ್ಕೃಷ್ಟವಾದ ಐಶ್ವರ್ಯ ಯಾವುದು?

ಉತ್ತರ: ಒಬ್ಬನು ಹೊಂದಿರಬಹುದಾದ ವೈದಿಕ ಜ್ಞಾನವು ಉತ್ಕೃಷ್ಟವಾಗಿರುವ ಐಶ್ವರ್ಯವಾಗಿದೆ.

ಪ್ರಶ್ನೆ ೫೬. ಪಡೆಯಬಹುದಾದ ಲಾಭಗಳಲ್ಲಿ ಉತ್ತಮವಾದದ್ದು ಯಾವುದು?

ಉತ್ತರ: ಆರೋಗ್ಯವೇ ಪಡೆಯಬಹುದಾದ ಲಾಭಗಳಲ್ಲಿ ಉತ್ತಮವಾದುದು.

ಪ್ರಶ್ನೆ ೫೭. ಸರ್ವೋತ್ಕೃಷ್ಟವಾದ ಸುಖ ಯಾವುದು?

ಉತ್ತರ: ತೃಪ್ತಿ ಅಥವಾ ಸಮಾಧಾನವೇ ಸರ್ವೋತ್ಕೃಷ್ಟವಾಗಿರುವ ಸುಖ.

ಪ್ರಶ್ನೆ ೫೮. ಜಗತ್ತಿನಲ್ಲಿ ಅತ್ಯಂತ ಉತ್ತಮವಾದ ಕರ್ತವ್ಯ ಯಾವುದು?

ಉತ್ತರ: ಅಹಿಂಸೆಯನ್ನು ಪಾಲಿಸುವುದೇ ಎಲ್ಲಕ್ಕಿಂತಲೂ ಮಿಗಿಲಾದ ಕರ್ತವ್ಯ.

ಪ್ರಶ್ನೆ ೫೯. ನಿತ್ಯವೂ ಫಲ ನೀಡುವಂತಹ ಧರ್ಮ ಯಾವುದು?

ಉತ್ತರ: ತ್ರಿವೇದಗಳಲ್ಲಿ ಹೇಳಲ್ಪಟ್ಟಿರುವುದೇ ನಿತ್ಯವೂ ಫಲ ನೀಡುವಂತಹ ಧರ್ಮವು.

ಪ್ರಶ್ನೆ ೬೦. ಏನನ್ನು ನಿಗ್ರಹಿಸುವುದರಿಂದ ಮನುಷ್ಯರು ದುಃಖವನ್ನು ಅನುಭವಿಸಬೇಕಾಗುವುದಿಲ್ಲ?

ಉತ್ತರ: ಮನಸ್ಸನ್ನು ನಿಗ್ರಹಿಸಿದರೆ ಮನುಷ್ಯರು ದುಃಖವನ್ನು ಅನುಭವಿಸಬೇಕಾಗುವುದಿಲ್ಲ.

ಪ್ರಶ್ನೆ ೬೧. ಯಾರೊಂದಿಗಿನ ಮೈತ್ರಿಯು ಮುರಿದು ಹೋಗುವುದಿಲ್ಲ?

ಉತ್ತರ: ಸಜ್ಜನರೊಂದಿಗೆ ಮಾಡುವ ಮೈತ್ರಿಯು ಮುರಿದುಹೋಗುವುದಿಲ್ಲ.

ಪ್ರಶ್ನೆ ೬೨. ಯಾವುದನ್ನು ತ್ಯಜಿಸುವುದರಿಂದ ಒಬ್ಬನು ಎಲ್ಲರಿಗೂ ಪ್ರಿಯನಾಗುತ್ತಾನೆ?

ಉತ್ತರ: ದುರಭಿಮಾನವನ್ನು ತ್ಯಜಿಸುವುದರಿಂದ ಒಬ್ಬನು ಎಲ್ಲರಿಗೂ ಪ್ರಿಯನಾಗುತ್ತಾನೆ.

ಪ್ರಶ್ನೆ ೬೩. ಯಾವುದನ್ನು ತ್ಯಜಿಸುವುದರಿಂದ ದುಃಖಿತನಾಗುವುದಿಲ್ಲ?

ಉತ್ತರ: ಕೋಪವನ್ನು ತ್ಯಜಿಸುವುದರಿಂದ ದುಃಖಿತನಾಗುವುದಿಲ್ಲ.

ಪ್ರಶ್ನೆ ೬೪. ಏನನ್ನು ತ್ಯಜಿಸಿದರೆ ಒಬ್ಬನು ಶ್ರೀಮಂತನಾಗುವನು?

ಉತ್ತರ: ಕಾಮವನ್ನು ತ್ಯಜಿಸಿದರೆ ಒಬ್ಬನು ಶ್ರೀಮಂತನಾಗುವನು.

ಪ್ರಶ್ನೆ ೬೫. ಯಾವುದನ್ನು ತ್ಯಜಿಸುವುದರಿಂದ ಒಬ್ಬನು ಸುಖಿಯಾಗುತ್ತಾನೆ?

ಉತ್ತರ : ಲೋಭವನ್ನು ತ್ಯಜಿಸುವುದರಿಂದ ಒಬ್ಬನು ಸುಖಿಯಾಗುತ್ತಾನೆ.

ಪ್ರಶ್ನೆ ೬೬. ಬ್ರಾಹ್ಮಣರಿಗೆ ದಾನವನ್ನು ಏಕೆ ಕೊಡಬೇಕು?

ಉತ್ತರ: ಧಾರ್ಮಿಕ ಉದ್ದೇಶಗಳಿಗಾಗಿ ಬ್ರಾಹ್ಮಣರಿಗೆ ದಾನವನ್ನು ಕೊಡಬೇಕು.

ಪ್ರಶ್ನೆ ೬೭. ನಟ ನರ್ತಕರಿಗೆ ಏಕೆ ದಾನ ಕೊಡಬೇಕು?

ಉತ್ತರ: ಯಶಕ್ಕಾಗಿ ನಟ ನರ್ತಕರಿಗೆ ದಾನ ಕೊಡಬೇಕು.

ಪ್ರಶ್ನೆ ೬೮. ಸೇವಕರಿಗೆ ಏಕೆ ದಾನ ಕೊಡಬೇಕು?

ಉತ್ತರ: ಸೇವೆ ಮಾಡಿದ್ದಕ್ಕಾಗಿ ಸೇವಕರಿಗೆ ದಾನ ಕೊಡಬೇಕು.

ಪ್ರಶ್ನೆ ೬೯. ರಾಜರಿಗೆ ಏಕೆ ದಾನ ಕೊಡಬೇಕು?

ಉತ್ತರ: ಭಯದಿಂದ ರಕ್ಷಣೆ ಪಡೆಯಲು ರಾಜರಿಗೆ ದಾನ ಕೊಡಬೇಕು.

ಪ್ರಶ್ನೆ ೭೦. ಪ್ರಪಂಚವು ಯಾವುದರಿಂದ ಆವೃತವಾಗಿದೆ?

ಉತ್ತರ: ಪ್ರಪಂಚವು ಅಜ್ಞಾನದಿಂದ ಆವೃತವಾಗಿದೆ.

ಪ್ರಶ್ನೆ ೭೧. ಯಾವುದರಿಂದ ಪ್ರಪಂಚವು ಪ್ರಕಾಶಿಸುವುದಿಲ್ಲ?

ಉತ್ತರ: ತಮಸ್ಸಿನಿಂದ ಅಥವಾ ಅಂಧಕಾರದಿಂದ ಪ್ರಪಂಚವು ಪ್ರಕಾಶಿಸುವುದಿಲ್ಲ.

ಪ್ರಶ್ನೆ ೭೨. ಒಬ್ಬ ಯಾವುದರಿಂದಾಗಿ ತನ್ನ ಮಿತ್ರನನ್ನು ತ್ಯಜಿಸುತ್ತಾನೆ?

ಉತ್ತರ: ಲೋಭದಿಂದಾಗಿ ಒಬ್ಬನು ತನ್ನ ಮಿತ್ರನನ್ನು ತ್ಯಜಿಸುತ್ತಾನೆ.

ಪ್ರಶ್ನೆ ೭೩. ಯಾವುದರಿಂದಾಗಿ ಒಬ್ಬನು ಸ್ವರ್ಗಕ್ಕೆ ಹೋಗಲು ಸಾಧ್ಯವಾಗುವುದಿಲ್ಲ?

ಉತ್ತರ: ದುಸ್ಸಂಗದಿಂದಾಗಿ ಒಬ್ಬನು ಸ್ವರ್ಗಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.

ಪ್ರಶ್ನೆ ೭೪. ವ್ಯಕ್ತಿಯೊಬ್ಬನು ಹೇಗೆ ಬದುಕಿದ್ದರೂ ಸತ್ತಂತೆ ಪರಿಗಣಿತನಾಗುವನು?

ಉತ್ತರ: ದರಿದ್ರನು (ಬಡವನು) ಬದುಕಿದ್ದರೂ ಸತ್ತಂತೆ  ಪರಿಗಣಿತನಾಗುವನು.

ಪ್ರಶ್ನೆ ೭೫. ಒಂದು ರಾಷ್ಟ್ರವು ಹೇಗೆ ಸಾಯುವುದು?

ಉತ್ತರ: ರಾಜನಿಲ್ಲದ ರಾಷ್ಟ್ರವು ಮೃತಪಟ್ಟಂತೆ.

ಪ್ರಶ್ನೆ ೭೬. ಶ್ರಾದ್ಧವು ಯಾವಾಗ ಸತ್ತಂತೆ?

ಉತ್ತರ: ಅಶಿಕ್ಷಿತನಿಂದ ಅಥವಾ ಅಪಂಡಿತನಿಂದ ಮಾಡಿದ ಶ್ರಾದ್ಧವು ಸತ್ತಂತೆ.

ಪ್ರಶ್ನೆ ೭೭. ಯಾಗ/ಅರ್ಚನೆಯು ಯಾವುದರಿಂದ ಇಲ್ಲದಂತಾಗುವುದು?

ಉತ್ತರ: ದಕ್ಷಿಣೆಯನ್ನು ಕೊಡದೇ ಆಚರಿಸಿದ ಯಜ್ಞವು ಇಲ್ಲದಂತಾಗುತ್ತದೆ.

(ಮುಂದುವರಿಯುವುದು)
Leave a Reply

Your email address will not be published. Required fields are marked *