Search
Friday 29 October 2021
  • :
  • :

ವಾಮನ ಅವತಾರ

ಪ್ರಹ್ಲಾದನ ಮೊಮ್ಮಗನೇ ಬಲಿ ಚಕ್ರವರ್ತಿ. ಬಲಿ ಎಷ್ಟು ಪ್ರಬಲನಾಗಿದ್ದನೆಂದರೆ ಎಲ್ಲ ಗ್ರಹಗಳನ್ನೂ ಜಯಿಸಿಬಿಟ್ಟಿದ್ದ. ಆದರೂ ಅವನು ಕೊಡುಗೈ ದೊರೆ. ದಾನ ನೀಡುವುದರಲ್ಲಿ ಪ್ರಸಿದ್ಧನಾಗಿದ್ದ. ಆದರೆ ಅವನ ಪ್ರಾಬಲ್ಯ ಕಂಡು ದೇವತೆಗಳು ಭಯಗೊಂಡರು. ಭಗವಂತನ ಬಳಿ ತಮ್ಮ ದುಃಖ ಹೇಳಿಕೊಂಡರು. ಆಗ‌ ವಿಷ್ಣುವು ಕಶ್ಯಪ ಋಷಿ ಮತ್ತು ಅದಿತಿ ದಂಪತಿಯ ಪುತ್ರ ವಾಮನದೇವನಾಗಿ ಅವತಾರ ತಾಳಿದ. ಅವನು ಬಂದಾಗ ದೇವತೆಗಳು ಅದಿತಿಯ ಮನೆ ಮೇಲೆ ಹೂಮಳೆಗರೆದರು. `ಭಗವಂತನ ಅವತಾರವಾಯಿತು’ ಎಂದು ಮಹರ್ಷಿಗಳೆಲ್ಲ ಸೇರಿ ಉತ್ಸವ ನೆರವೇರಿಸಿದರು.

ಒಮ್ಮೆ ಬಲಿ ಚಕ್ರವರ್ತಿಯು ಯಾಗವನ್ನು ಆಚರಿಸುತ್ತಿದ್ದ. ಆಗ ವಾಮನದೇವನು ಯಾಗ ಸ್ಥಳಕ್ಕೆ ಬಂದ.  ಅವನು ಕೃಷ್ಣಾಜಿನ ತೊಟ್ಟು, ಕೈಗಳಲ್ಲಿ ದಂಡ, ಛತ್ರಿ ಮತ್ತು ಜಲವಿದ್ದ ಕಮಂಡಲುಗಳನ್ನು ಹಿಡಿದಿದ್ದ.. `ಅಬ್ಬಾ! ಎಂತಹ ದಿವ್ಯವಾದ ತೇಜಸ್ಸು’  ಎಂದು ಬಲಿ ಮಹಾರಾಜ ಉದ್ಗರಿಸಿದ. ಅನಂತರ ವಾಮನನನ್ನು ಸ್ವಾಗತಿಸಿ ಆಸನ ನೀಡಿದ. ದಾನಿಯಾದ ದೊರೆ ಬಲಿಯು ಬ್ರಹ್ಮಚಾರಿ ವಾಮನನಿಗೆ `ಏನು ಬೇಕಾದರೂ ಕೇಳು. ಖಂಡಿತ ನೀಡುವೆ’ ಎಂದ. ಆಗ ವಾಮನದೇವನು `ನನಗೆ ಹೆಚ್ಚು ಏನೂ ಬೇಡ. ಮೂರು ಹೆಜ್ಜೆಯಷ್ಟು ಭೂಮಿ ಮಾತ್ರ ಕೊಡು’ ಎಂದು ಕೇಳಿದ. `ಇದು ಕ್ಷುಲ್ಲಕ. ಇಷ್ಟೇ ಸಾಕೇ? ನಿನ್ನ ಪೋಷಣೆಗೆ ಅಗತ್ಯವಾದಷ್ಟನ್ನು ಕೇಳು’ ಎಂದು ಬಲಿ ಹೇಳಿದ. `ನನಗೆ ಅದು ಸಾಕು. ನೀನು ಕೊಡುವೆ ಎಂದು ಅತಿಯಾದ ಆಸೆ ನನಗೆ ಇಲ್ಲ. ಈ ಮೂರು ಪಾದದ ಅಳತೆ ಭೂಮಿಯಿಂದ ನನಗೆ ತೃಪ್ತಿಯಾಗದಿದ್ದರೆ ಸಪ್ತ ದ್ವೀಪ ಕೊಟ್ಟರೂ ಸಮಾಧಾನವಾಗುವುದಿಲ್ಲ. ಆದುದರಿಂದ ಶ್ರೇಷ್ಠ ದಾನಿಯಾದ ನಿನ್ನಿಂದ ಈ ಭೂಮಿ ಸ್ವೀಕರಿಸಿ ಸಂತುಷ್ಟನಾಗುತ್ತೇನೆ.’  ಅದಕ್ಕೆ ನಕ್ಕ ಬಲಿಯು, `ನಿನ್ನ ಇಷ್ಟ’ ಎಂದ.

ಆದರೆ ಬಲಿ ಮಹಾರಾಜನ ಗುರುಗಳಾದ ಶುಕ್ರಾಚಾರ್ಯರು ಇದನ್ನು ತಡೆದರು. ವಾಮನನ ಉದ್ದೇಶ ಅವರಿಗೆ ಅರ್ಥವಾಗಿತ್ತು. “ವಾಮನ ರೂಪದಲ್ಲಿರುವ ಈ ಬ್ರಹ್ಮಚಾರಿಯು ವಿಷ್ಣು. ಇವನು ದೇವತೆಗಳ ಹಿತ ಕಾಪಾಡಲು ಬಂದಿದ್ದಾನೆ. ಅವನಿಗೆ ಭೂಮಿಯನ್ನು ಕೊಡುವ ವಚನವಿತ್ತು ನೀನು ಎಂತಹ ಅಪಾಯಕರ ಸ್ಥಿತಿ ತಂದುಕೊಂಡಿರುವೆ! ನಿನಗೆ ಇದು ತಿಳಿದಿಲ್ಲ. ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೊಡಲು ನೀನು ಮಾತು ಕೊಟ್ಟಿರುವೆ. ಆದರೆ ಅವನು ಮೂರು ಲೋಕವನ್ನು ಆಕ್ರಮಿಸುತ್ತಾನೆ. ನೀನು ಮೂರ್ಖ! ಸಕಲವನ್ನೂ ವಿಷ್ಣುವಿಗೆ ಕೊಟ್ಟ ಮೇಲೆ ನಿನಗೆ ಜೀವನಕ್ಕೆ ಕಷ್ಟವಾಗುತ್ತದೆ. ನೀನು ವಚನ ಹಿಂತೆಗೆದುಕೋ. ಕೆಲ ಸಂದರ್ಭಗಳಲ್ಲಿ ಕೊಟ್ಟ ಮಾತನ್ನು ಹಿಂದಕ್ಕೆ ಪಡೆಯಬಹುದು” ಎಂದರು.

ಅದಕ್ಕೆ ಬಲಿ ಹೇಳಿದ, `ನಾನು ಪ್ರಹ್ಲಾದರ ಮೊಮ್ಮಗ. ಮೊದಲೇ ಭೂಮಿಯನ್ನು ಕೊಡುವೆನೆಂದು ಹೇಳಿರುವೆ. ಬೇರೆ ಆಸೆಯಿಂದ ನನ್ನ ವಾಗ್ದಾನವನ್ನು ಹೇಗೆ ಹಿಂತೆಗೆದುಕೊಳ್ಳಬಲ್ಲೆ? ನನಗೆ ಬಡತನ, ಸ್ಥಾನ ಮಾನದ ಬಗೆಗೆ ಹೆದರಿಕೆ ಇಲ್ಲ. ಇಲ್ಲಿ, ವಿಷ್ಣುವು ನನಗೆ ವರಗಳನ್ನು ನೀಡಲು ಬಂದಿರಲಿ ಅಥವಾ ನನ್ನನ್ನು ಶಿಕ್ಷಿಸಲು ಬಂದಿರಲಿ ನಾನು ಅವನ ಆದೇಶವನ್ನು ಪಾಲಿಸುವೆ.’

ಬಲಿಯು  ಮೊದಲು ವಾಮನದೇವನ ಪಾದಗಳನ್ನು ತೊಳೆದು ಆ ಜಲವನ್ನು ತನ್ನ ತಲೆಗೆ ಪ್ರೋಕ್ಷಿಸಿಕೊಂಡ. ವಾಮನನು ತನ್ನ ಒಂದು ಹೆಜ್ಜೆಯಿಂದ ಇಡೀ ಭೂ ಮಂಡಲವನ್ನು ಆವರಿಸಿಕೊಂಡ. ಇನ್ನೊಂದು ಹೆಜ್ಜೆಯಿಂದ ಸ್ವರ್ಗಲೋಕವನ್ನು ಆವರಿಸಿಕೊಂಡ.  ಆಗ ವಾಮನನು ಬಲಿಯನ್ನು  ಕೇಳಿದ, “ನಾನು ನನ್ನ ಎರಡು ಪಾದಗಳನ್ನು ಊರಿ ಬ್ರಹ್ಮಾಂಡವನ್ನು ಆಕ್ರಮಿಸಿರುವೆ. ಮೂರನೆಯ ಪಾದವನ್ನು ಎಲ್ಲಿ ಊರಲಿ?” ಆಗ ಬಲಿ ಹೇಳಿದ, “ನನ್ನ ವಚನ ಸುಳ್ಳಾಗಲು ಬಿಡಲಾರೆ.  ನಿನ್ನ ಮೂರನೆಯ ಪಾದಕಮಲವನ್ನು ನನ್ನ ತಲೆಯ ಮೇಲಿಡು.” ವಾಮನ ಹಾಗೆಯೇ ಮಾಡಿದ.

ಬಲಿ ಮಹಾರಾಜನ ಭಕ್ತಿ ಸೇವೆಯನ್ನು ಕಂಡು ಭಗವಂತನೆಂದ, “ನೀನು ದೊಡ್ಡ ದಾನಿ ಮತ್ತು ಭಕ್ತ. ನಿನಗೆ ದೇವತೆಗಳೂ ಪಡೆಯಲಾರದಂತಹ ಉನ್ನತ ಸ್ಥಾನಮಾನಗಳನ್ನು ನೀಡುವೆ.” ಈ ರೀತಿ ಬಲಿಯು ಭಗವಂತನ ಪ್ರೀತಿಗೆ ಪಾತ್ರನಾದನು.
Leave a Reply

Your email address will not be published. Required fields are marked *