Search
Sunday 17 January 2021
  • :
  • :

ಸುವರ್ಣಾವತಾರ ಭಾಗ – 9

ಚಂಚಲ ನಿಮಾಯ್ ದಣಿವಿಲ್ಲದಂತೆ ಎಲ್ಲರೊಂದಿಗೂ ತುಂಟಾಟವಾಡುತ್ತಿದ್ದ. ಅವನ ತಾಯಿ ಅವನಿಗೆ ಬುದ್ಧಿಹೇಳಿ ಸರಿಪಡಿಸಲೆತ್ನಿಸಿದರೂ ಅವನು ಅದಕ್ಕೆ ಕಿಂಚಿತ್ತೂ ಗಮನ ಕೊಡುತ್ತಿರಲಿಲ್ಲ. ಬುದ್ಧಿ ಮಾತು ಹೇಳಿದಾಗಲೆಲ್ಲಾ ಅವನ ತುಂಟತನ ಇಮ್ಮಡಿಗೊಳ್ಳುತ್ತಿತ್ತು! ಮನೆಯಲ್ಲಿ ಕೈಗೆ ಸಿಗುವಂತಹುದನ್ನೆಲ್ಲ ಬಹಳ ಖುಷಿಯಿಂದ ಕೆಳಗೆ ಹಾಕಿ ಚೂರು ಮಾಡುತ್ತಿದ್ದ. ಭಯದಿಂದಲೋ ಏನೋ ಪೋಷಕರು ಬುದ್ಧಿವಾದ ಹೇಳುವುದನ್ನು ನಿಲ್ಲಿಸಿದರು. ಅನಿಬಂತ ನಿಮಾಯ್ ತನ್ನ ಮನಸೋ ಇಚ್ಛೆ ಆಡುತ್ತಿದ್ದ, ತನ್ನ ಲೀಲೆಗಳನ್ನು ತೋರುತ್ತಿದ್ದ. ಅವನಿಗೆ ಯಾರ ಭಯವೂ ಇರಲಿಲ್ಲ-ತಂದೆ ಅಥವಾ ತಾಯಿ. ಆದರೆ ತನ್ನ ಅಣ್ಣ ವಿಶ್ವರೂಪನ ಮಂದೆ ಮಾತ್ರ ನಿಮಾಯ್ ಮೃದು  ಮತ್ತು  ವಿನಯಶೀಲ.

ಮನೆ ತೊರೆದ ವಿಶ್ವರೂಪ

ದೇವೋತ್ತಮ ಪರಮ ಪುರುಷನಾದ ಶ್ರೀ ವಿಶ್ವರೂಪನು ಹುಟ್ಟಿನಿಂದಲೇ ಎಲ್ಲ ದೈವಿಕ ಗುಣ ಮತ್ತು ತ್ಯಾಗದ ಅಮೂಲ್ಯ ಭಂಡಾರವಾಗಿದ್ದ. ಶ್ರೀ ವಿಶ್ವರೂಪನಿಗೆ ಲೌಕಿಕ ಜಗತ್ತಿನ ಸುಖ ಸಂತೋಷಗಳ ಬಗೆಗೆ ಏನೇನೂ ಆಸಕ್ತಿ ಇರಲಿಲ್ಲ. ಶ್ರೀ ಕೃಷ್ಣನ ವೈಭವಗಳನ್ನು ಹಾಡುವುದರಲ್ಲಿಯೇ ಅವನಿಗೆ ಪರಮಾನಂದವಿತ್ತು. ತನ್ನ ಮನೆಯಲ್ಲಿಯೇ, ಶ್ರೀ ವಿಶ್ವರೂಪನು ಸಾಲಿಗ್ರಾಮವನ್ನು ಇಟ್ಟಿದ್ದ ಪೂಜಾ ಮಂದಿರದಲ್ಲಿ ತನ್ನೆಲ್ಲ ಸಮಯವನ್ನೂ ಕಳೆಯುತ್ತಿದ್ದ. ಸಾಮಾನ್ಯ ವ್ಯವಹಾರಗಳು ಯಾವುದೂ ಅವನಿಗೆ ಗೊತ್ತಿರಲಿಲ್ಲ. ವಿಶ್ವರೂಪ ಯೌವನಾವಸ್ಥೆಗೆ ಬರುತ್ತಿದ್ದಂತೆ ಅವನಿಗೆ ಸೂಕ್ತ ಯುವತಿಯನ್ನು  ತಂದು ಮದುವೆ ಮಾಡಲು ಜಗನ್ನಾಥ ಮಿಶ್ರ ಇಚ್ಛಿಸಿದರು. ಅವನ ವಿವಾಹದ ಬಗೆಗೆ ಅವನ ತಂದೆ ತಾಯಿಗೆ ಕಾತರವಿತ್ತು. ಆದರೆ ಅವರ ಯೋಜನೆ ಅರಿತಾಗ ಅವನು ಅಪ್ರಸನ್ನನಾದ. ತತ್‌ಕ್ಷಣ ಮನೆ ಬಿಟ್ಟು ಹೋಗಿ ಸಂನ್ಯಾಸ ಸ್ವೀಕರಿಸಿ, ತೀರ್ಥಯಾತ್ರೆ ಕೈಗೊಂಡ. ಮುಂದೆ ಜಗತ್ತಿನಾದ್ಯಂತ ಪ್ರಸಿದ್ಧಿ  ಪಡೆದ, ಶ್ರೀ ಶಂಕರಾರಣ್ಯನೆಂದು ಹೆಸರು ಪಡೆದ. ವೈಷ್ಣವರಲ್ಲಿ ಪ್ರಮುಖನಾದ ಇವನು ಶಾಶ್ವತ ಪಥದತ್ತ ಸಾಗಿದ.

ಶ್ರೀ ವಿಶ್ವರೂಪನ ನಿರ್ಗಮನದಿಂದ ಶಚೀಮಾತಾ ಮತ್ತು ಶ್ರೀ ಜಗನ್ನಾಥ ಮಿಶ್ರ ಅತ್ಯಂತ ದುಃಖಿತರಾದರು. ಕುಟುಂಬ ಸದಸ್ಯರು ಮತ್ತು ಮಿತ್ರರೊಂದಿಗೆ ಈ ಪೋಷಕರು ಪ್ರಲಾಪಿಸುತ್ತಿದ್ದರು. ಅಣ್ಣನ ಅಗಲಿಕೆಯನ್ನು ತಾಳಲಾರದೆ ಶ್ರೀ ವಿಶ್ವಂಭರ ಪ್ರಜ್ಞಾಶೂನ್ಯನಾದ. ಶ್ರೀ ವಿಶ್ವರೂಪನ ಅಗಲಿಕೆಯಿಂದ ದುಃಖಿತರಾದ ಶ್ರೀ ಅದ್ವೈತ ಆಚಾರ್ಯ ಮತ್ತು ಇತರ ಎಲ್ಲ ಭಕ್ತರೂ ಕಣ್ಣೀರಿಟ್ಟರು. ಈ ತರುಣನ ಸಂನ್ಯಾಸ ವಿಷಯ ತಿಳಿಯುತ್ತಿದಂತೆ ನದಿಯಾ ಜಿಲ್ಲೆಯ ಎಲ್ಲ

ವರ್ಗದ ಜನರೂ ದುಃಖಿತರಾದರು. ಅವರಿಗೆ ಹೃದಯ ಒಡೆಯುವಂತಾಯಿತು. ಶಚೀಮಾತಾ ಮತ್ತು ಶ್ರೀ ಮಿಶ್ರ ಸತತವಾಗಿ ‘ವಿಶ್ವರೂಪ’ ‘ವಿಶ್ವರೂಪ’ ಎಂದು ಪ್ರಲಾಪಿಸಿದರು. ಮಗನಿಂದ ದೂರವಾಗಿದ್ದನ್ನು ತಾಳಲಾರದ ಶ್ರೀ ಮಿಶ್ರ ನೋವಿನಿಂದ ಒದ್ದಾಡಿದರು. ಬಂಧು ಬಳಗ ಅವರನ್ನು ಸಾಂತ್ವನಗೊಳಿಸಲು ಯತ್ನಿಸಿತು. ‘ಪ್ರಿಯ ಮಿಶ್ರ, ದಯೆಯಿಟ್ಟು ಸಂಬಾಳಿಸಿಕೊಳ್ಳಿ. ದುಃಖತರಾಗಬೇಡಿ. ಈ ಅದ್ಭುತ ವ್ಯಕ್ತಿ ನಿಮ್ಮ ಮನೆಯಲ್ಲಿ ಜನ್ಮ ತಾಳಿದ್ದಾನೆ. ಕುಟುಂಬದ ಯಾವುದೇ ಸದಸ್ಯನು ಸಂನ್ಯಾಸ ಸ್ವೀಕರಿಸಿದರೆ, ಅನೇಕ ಪೀಳಿಗೆಗಳು ವೈಕುಂಠದ ಅಲೌಕಿಕ ನಿವಾಸದಲ್ಲಿ ವಾಸಿಸುವ ಅರ್ಹತೆ ಪಡೆಯುತ್ತಾರೆ. ನಿಮ್ಮ ಮಗ ಅಳವಡಿಸಿಕೊಂಡಿರುವ ಬದುಕು ಖಂಡಿತವಾಗಿಯೂ ಎಲ್ಲ ರೀತಿಯ ಶಿಕ್ಷಣದ ಪರಿಪೂರ್ಣತೆ. ನಮ್ಮ ಅತೀವ ಸಂತೋಷವನ್ನು ನಿಮಗೆ ಸಲ್ಲಿಸುತ್ತೇವೆ’ ಎಂದು ಅವರು ಶ್ರೀ ಮಿಶ್ರರ ಕೈಕಾಲು ಹಿಡಿದು ನುಡಿದರು – ‘ಈಗ ವಿಶ್ವಂಭರನ ಬಗೆಗೆ ಯೋಚಿಸಿ. ಅವನು ನಿಮ್ಮ ಮನೆಯ ವೈಭವ. ನಿಮ್ಮ ಮಗ ಇಡೀ ವಂಶಾವಳಿಯಲ್ಲಿ ಶ್ರೇಷ್ಠ. ಅವನು ನಿಮ್ಮ ಎಲ್ಲ ದುಃಖವನ್ನು ನಿವಾರಿಸುತ್ತಾನೆ. ನಿಮಗೆ ಇಂತಹ ಮಗನೊಬ್ಬನಿರುವಾಗ ನೂರಾರು ಪುತ್ರರ ಅಗತ್ಯವಾದರೂ ಎಲ್ಲಿದೆ?’ ಶ್ರೀ ಮಿಶ್ರ ಅವರ ಅದೃಷ್ಟವನ್ನು ಸ್ಪಷ್ಟಪಡಿಸಲು ಬಂಧು ಬಳಗ ಪ್ರಯತ್ನಿಸಿತು. ಅವರು ಆಪ್ತವಾಗಿ ಮಾತನಾಡಿದರಾದರೂ ಅವರ ಸಂಕಟವನ್ನು ಕಡಮೆಮಾಡಲಾಗಲಿಲ್ಲ. ಮಿಶ್ರ ಮಹಾಶಯರು ತಮ್ಮ ಭಾವನೆ ತಡೆದುಕೊಳ್ಳಲು ಯತ್ನಿಸಿದರೂ ಶ್ರೀ ವಿಶ್ವರೂಪನ ಅಭೂತಪೂರ್ವ ಗುಣಗಳು ನೆನಪಾಗುತ್ತಲೇ ಅಗಲಿಕೆಯಿಂದ ಮತ್ತೆ ದುಃಖಿತರಾಗುತ್ತಿದ್ದರು.

ಈ ರೀತಿ ಶ್ರೀ ವಿಶ್ವರೂಪ ತನ್ನ ಮನೆಯನ್ನು ತೊರೆದು ಸಂನ್ಯಾಸ ಸ್ವೀಕರಿಸುವ ಲೀಲೆಯನ್ನು ಪ್ರದರ್ಶಿಸಿದನು. ಅವನು ಭಿನ್ನವಲ್ಲದ, ಮೂಲ ಸಂಕರ್ಷಣರಾದ ಶ್ರೀ ನಿತ್ಯಾನಂದರ ನೇರ ವಿಸ್ತಾರ ರೂಪ. ಶ್ರೀ ವಿಶ್ವರೂಪ  ಸಂನ್ಯಾಸ ಸ್ವೀಕರಿಸಿದ ಲೀಲೆಯನ್ನು ಯಾರು ಕೇಳುವರೋ ಅವರು ಕರ್ಮದ ಕುಣಿಕೆಯಿಂದ ಮುಕ್ತರಾಗಿ ಶ್ರೀ ಕೃಷ್ಣನ ಭಕ್ತಿ ಸೇವೆಯನ್ನು ಹೊಂದುವರು.

ಪೋಷಕರಿಗೆ ನಿಮಾಯ್ ಸಾಂತ್ವನ

ಸಂನ್ಯಾಸಿಯಾಗಲು ಶ್ರೀ ವಿಶ್ವರೂಪನು ಮನೆಯನ್ನು  ತ್ಯಜಿಸಿದಾಗಿನಿಂದಲೂ ವಿಶ್ವಂಭರನು ತನ್ನ ಅಶಾಂತಿ ಮತ್ತು ತುಂಟತನವನ್ನು ತೀರ ಕಡಮೆ ಮಾಡಿಬಿಟ್ಟ. ವಿಶ್ವರೂಪನಿಂದ ಬೇರ್ಪಟ್ಟು ದುಃಖಿತರಾದ ತಂದೆತಾಯಿಯ ಪಕ್ಕದಲ್ಲೇ ಇದ್ದು ಸಮಾಧಾನಪಡಿಸಲೆತ್ನಿಸಿದ. ‘ನನ್ನ ಪ್ರೀತಿಯ ಅಮ್ಮ ಅಪ್ಪ, ವಿಶ್ವರೂಪ ಸಂನ್ಯಾಸ ಸ್ವೀಕರಿಸಿದ್ದು ಒಳ್ಳೆಯ ಹೆಜ್ಜೆ. ಇದರಿಂದ ಅವನು ತನ್ನ  ತಂದೆತಾಯಿ ಇಬ್ಬರ ಕುಟುಂಬವೂ ಹೆಮ್ಮೆ ಪಡುವಂತೆ ಮಾಡಿದ್ದಾನೆ.’ ಎಂದು ಸಾಂತ್ವನಗೊಳಿಸಿದ. ತಾನು ಅವರಿಬ್ಬರ ಸೇವೆ ಮಾಡುವುದಾಗಿ ತನ್ನ ತಂದೆತಾಯಿಗೆ ಆಶ್ವಾಸನೆ ನೀಡಿದ. ಇದರಿಂದ ಅವನ ಮಾತಾ ಪಿತೃಗಳಿಗೆ ತೃಪ್ತಿಯಾಯಿತು.

ಒಂದು ದಿನ ಶ್ರೀ ಚೈತನ್ಯ ಮಹಾಪ್ರಭು ದೇವರಿಗೆ ಅರ್ಪಿಸಿದ್ದ ಅಡಕೆ ಸೇವಿಸಿದ, ಆದರೆ ಅದು ಅಮಲು ಬರಿಸಿತಲ್ಲದೆ ಅವನು ಪ್ರಜ್ಞಾಶೂನ್ಯನಾಗಿ ಕೆಳಗೆ ಬಿದ್ದ. ಅವನ ತಂದೆತಾಯಿ ತತ್‌ಕ್ಷಣವೆ ನೀರು ಚಿಮುಕಿಸಿದರು. ಆಗ ಮೇಲೆದ್ದ ಶ್ರೀ ಚೈತನ್ಯ ಮಹಾಪ್ರಭು, ಮಿಶ್ರ ದಂಪತಿ ಎಂದೂ ಕೇಳದಿದ್ದ ಅದ್ಭುತ ಸಂಗತಿಯನ್ನು ಹೇಳಿದ. ‘ವಿಶ್ವರೂಪ ನನ್ನನ್ನು ಇಲ್ಲಿಂದ ಕರೆದೊಯ್ದ. ನನ್ನನ್ನು  ಸಂನ್ಯಾಸಿಯಾಗಲು ಕೋರಿದ. ನಾನು ಅವನಿಗೆ ಉತ್ತರಿಸಿದೆ. ನನಗೆ ಅಸಹಾಯಕ ತಂದೆತಾಯಿ ಇದ್ದಾರೆ. ಅಲ್ಲದೆ ನಾನಿನ್ನೂ ಮಗು. ಸಂನ್ಯಾಸಿ ಬದುಕಿನ ಬಗ್ಗೆ ನನಗೇನು ಗೊತ್ತು? ಅನಂತರ ನಾನು ಗೃಹಸ್ಥನಾಗಿ ತಂದೆತಾಯಿ ಸೇವೆಗೈಯುವೆ. ಏಕೆಂದರೆ ನನ್ನ ಈ ಕ್ರಮವು ಶ್ರೀ ನಾರಾಯಣ ಮತ್ತು ಅವನ ಪತ್ನಿ ಅದೃಷ್ಟ ದೇವತೆಗೆ ಪ್ರಿಯವಾಗುತ್ತದೆ. ಅನಂತರ ವಿಶ್ವರೂಪನು ನನ್ನನ್ನು ಮನೆಗೆ ವಾಪಸು ಕರೆದುಕೊಂಡು ಬಂದು ತಾಯಿ ಶಚೀದೇವಿಗೆ ಸಹಸ್ರ ಸಹಸ್ರ ನಮಸ್ಕಾರಗಳನ್ನು ತಿಳಿಸು ಎಂದ.’ ಈ ರೀತಿ  ಶ್ರೀ ಚೈತನ್ಯ ಮಹಾಪ್ರಭು ಅನೇಕ ಲೀಲೆಗಳನ್ನು ತೋರಿದರು.

ನಿಮಾಯ್ ಅಧ್ಯಯನ ಸ್ಥಗಿತ

ಯಾವುದೇ ಸೂಕ್ತಿಯನ್ನು ಒಂದು ಬಾರಿ ಓದಿದ ಮೇಲೆ ನಿಮಾಯ್ ಅದರಲ್ಲಿ ಎಷ್ಟು ಪರಿಣತನಾಗುತ್ತಿದ್ದ ನೆಂದರೆ, ಅದರ ಬಗೆಗೆ ಪ್ರಶ್ನಿಸಿದಾಗ ಎಲ್ಲರಿಗಿಂತ ಅತ್ಯುತ್ತಮ ಉತ್ತರ ನೀಡುತ್ತಿದ್ದ. ನಿಮಾಯ್‌ನ ಅಸಾಧಾರಣ ಬುದ್ಧಿವಂತಿಕೆಯನ್ನು ಜನರು ಹಾಡಿಹೊಗಳುತ್ತಿದ್ದರು. ‘ಶ್ರೀ ಮಿಶ್ರ ಮತ್ತು ಶಚೀಮಾತಾ ಅದೃಷ್ಟಶಾಲಿಗಳು. ಪ್ರಿಯ ಮಿಶ್ರ, ಇಂತಹ ಅದ್ಭುತ ಮಗನನ್ನು ಪಡೆಯುವಲ್ಲಿ ನೀನು ಯಶಸ್ವಿಯಾಗಿರುವೆ. ನಿಮಾಯ್‌ನ ಈ ಪರಮ ಜ್ಞಾನವನ್ನು ಹೋಲಿಸಲು ಮೂರೂ ಜಗತ್ತಿನಲ್ಲಿ ಮತ್ತೊಬ್ಬರಿಲ್ಲ. ಅವನು ಪಾಂಡಿತ್ಯದಲ್ಲಿ   ಶ್ರೀ ಬೃಹಸ್ಪತಿಯನ್ನೇ ಮೀರಿಸಿಬಿಡುತ್ತಾನೆ. ಅವನು ಆ ಕ್ಷಣದಲ್ಲಿ ತನ್ನ ವಿವರಣೆಗಳನ್ನು ಕೊಡಬಲ್ಲ ಮತ್ತು ಅವನ ವಾದ ತತ್ಪರತೆಯನ್ನು ಯಾರಿಗೂ ಸೋಲಿಸಲಾಗದು.’

ಮಗನ ವಿಶಿಷ್ಟ ಗುಣಗಳನ್ನು ಕೇಳಿ ಶಚೀಮಾತಾಗೆ ಆನಂದವೋ ಆನಂದ. ಆದರೆ ಶ್ರೀ ಮಿಶ್ರ ಮತ್ತೊಮ್ಮೆ ದುಃಖಿತರಾದರು. ಶಚೀದೇವಿಗೆ ಅವರು ಹೇಳಿದರು, ‘ನಮ್ಮ ಈ ಪುತ್ರನು ಗೃಹ ಜೀವನದಲ್ಲಿ ಎಂದೂ ಉಳಿಯುವುದಿಲ್ಲ. ಈಗ ನಿಮಾಯ್ ಮಾಡುತ್ತಿರುವಂತೆ ವಿಶ್ವರೂಪನೂ ಆಗ ಧರ್ಮಗ್ರಂಥಗಳ ಅಧ್ಯಯನ ಮಾಡಿದ್ದ. ಲೌಕಿಕ ಅಸ್ತಿತ್ವದಲ್ಲಿ ಎಳ್ಳಷ್ಟೂ ವಾಸ್ತವಾಂಶ ಇಲ್ಲ ಎಂದು ಅವನು ಅರಿತಿದ್ದ. ಎಲ್ಲ ಧರ್ಮಗ್ರಂಥಗಳ ಮೂಲ ತತ್ತ್ವವನ್ನು ತಿಳಿದುಕೊಂಡಿದ್ದ ನಮ್ಮ ವಿಶ್ವರೂಪ, ಲೌಕಿಕ ಬದುಕನ್ನು ತಿರಸ್ಕರಿಸಿ ಅರಣ್ಯಕ್ಕೆ ತೆರಳಿದ. ನಿಮಾಯ್ ಕೂಡ ಧರ್ಮಗ್ರಂಥಗಳನ್ನು ಓದಿದರೆ, ಅವನೂ ಸಹ ಅದೇ ಮಾರ್ಗ ಹಿಡಿಯುತ್ತಾನೆ. ನಮಗೆ ಉಳಿದಿರುವುದು ನಿಮಾಯ್ ಮಾತ್ರ. ಅವನು ನಮ್ಮ ಜೀವ. ನಾವು ಅವನನ್ನು ಕಳೆದುಕೊಂಡರೆ, ನಾವು ಖಂಡಿತ ನಮ್ಮ ದೇಹ ತ್ಯಜಿಸುತ್ತೇವೆ. ಆದುದರಿಂದ ಅವನು ಇನ್ನು ಓದುವುದು ಬೇಡ. ಅವನು ಅನಕ್ಷರಸ್ಥನಾದರೂ ಪರವಾಗಿಲ್ಲ, ಮನೆಯಲ್ಲಿಯೇ ಉಳಿಯಲಿ.’

ಶಚೀಮಾತಾ ವಾದಿಸಿದಳು. ‘ಅವನು ಅನಕ್ಷರಸ್ಥನಾದರೆ ಹೇಗೆ ಬದುಕುತ್ತಾನೆ? ಅಲ್ಲದೆ, ಓದಿಲ್ಲದವನಿಗೆ ಯಾರು ಹೆಣ್ಣು ಕೊಡುತ್ತಾರೆ?’ ಆದಾಗ್ಯೂ, ಶ್ರೀ ಮಿಶ್ರ ಉತ್ತರಿಸಿದರು. ‘ನೀನು ಬ್ರಾಹ್ಮಣನ ಮುಗ್ಧ ಮಗಳು. ಎಲ್ಲರ ರಕ್ಷಕ ಶ್ರೀ ಕೃಷ್ಣನು ಎಲ್ಲವನ್ನೂ ಸೃಷ್ಟಸಿದ ಎಂಬುದು ನಿನಗೆ ತಿಳಿದಿರಬೇಕು. ಏನು ಅಗತ್ಯವೋ ಅದನ್ನು ಅವನು ನೀಡುತ್ತಾನೆ, ಪಡೆಯುತ್ತಾನೆ. ಜಗತ್ ನಿಯಾಮಕ ಕೃಷ್ಣನು ಇಡೀ ಲೌಕಿಕ ಸೃಷ್ಟಿಯನ್ನು ನಿರ್ವಹಿಸುತ್ತಿದ್ದಾನೆ. ಯಾವುದನ್ನಾದರೂ ನಿರ್ವಹಿಸಲು ಲೌಕಿಕ ಜ್ಞಾನ ಮಾತ್ರ ನೆರವಾಗುತ್ತದೆಂದು ಯಾರೋ ನಿನಗೆ ತಪ್ಪು ಮಾಹಿತಿ ನೀಡಿದ್ದಾರೆ. ಎಲ್ಲವೂ ಕೃಷ್ಣನ ಸಂಪೂರ್ಣ ನಿಯಂತ್ರಣದಲ್ಲಿದೆ. ಅವನು ವಧೂವರರನ್ನು ಕೂಡ ಕೂಡಿಸುತ್ತಾನೆ. ಕಲಿತವರು ಮತ್ತು ಅಧ್ಯಯನ ರಹಿತರಿಬ್ಬರಿಗೂ ಅವನು ವಧುಗಳನ್ನು ನೀಡುತ್ತಾನೆ. ಶ್ರೀ ಕೃಷ್ಣನು ಸರ್ವ ಶಕ್ತನು, ಅವನು ಎಲ್ಲರನ್ನೂ ನಿರ್ವಹಿಸುತ್ತಾನೆ. ನೀನು ನನ್ನನ್ನೇ ಉದಾಹರಣೆಯಾಗಿ ಯಾಕೆ  ತೆಗೆದುಕೊಳ್ಳಬಾರದು? ನಾನು ಸಾಕಷ್ಟು ಶಿಕ್ಷಣ ಹೊಂದಿರುವೆ, ಆದರೂ ನನ್ನ ಮನೆಯಲ್ಲಿ ಸಾಕಷ್ಟು ಆಹಾರವಿಲ್ಲ? ಅಆಇಈ ಗೊತ್ತಿಲ್ಲದ ಅನೇಕ ಮಂದಿ ಇದ್ದಾರೆ. ಆದರೂ ಅವರ ಮನೆ ಬಾಗಿಲಿನಲ್ಲಿ ಸಾವಿರಾರು ವಿದ್ವಾಂಸರು ನೆರೆಯುತ್ತಾರೆ.’

‘ಆದುದರಿಂದ ಔಪಚಾರಿಕ ಶಿಕ್ಷಣ ಅಥವಾ ಇತರೆ ಲೌಕಿಕ ಅರ್ಹತೆಗಳು ನಮ್ಮನ್ನು ಕಾಪಾಡುವುದಿಲ್ಲ, ಕೃಷ್ಣನೇ ಎಲ್ಲವನ್ನೂ ಎಲ್ಲರನ್ನೂ ಕಾಪಾಡುವುದು. ಶ್ರೀ ಗೋವಿಂದನ ಪಾದಕಮಲವನ್ನು ಎಂದೂ ಪೂಜಿಸದವನು ಅದು ಹೇಗೆ ಸೌಲಭ್ಯ ಉಳ್ಳ, ವೈಭವದ ಬದುಕನ್ನು ಬಾಳುವುದು ಸಾಧ್ಯ? iತ್ತು ಆನಂದದಾಯಕವಾಗಿ ಸಾವನ್ನು ಸ್ವೀಕರಿಸುವುದು ಸಾಧ್ಯ? ಶ್ರೀ ಕೃಷ್ಣನಿಗೆ ಭಕ್ತಿ ಸೇವೆ ಸಲ್ಲಿಸುವ ಮೂಲಕ ನಾವು ಬಡತನದ ನೋವನ್ನು ಸಹಿಸುತ್ತೇವೆ, ಆದರೆ ನಾವು ಸಾವನ್ನು ಸಂತೋಷದ ಸ್ಥಿತಿಯಲ್ಲಿ ಆಲಿಂಗಿಸುತ್ತೇವೆ. ತನ್ನ ಲೌಕಿಕ ಜ್ಞಾನ ಮತ್ತು ಸೊತ್ತಿನ ಮೆಲೆ ಅವಲಂಬಿಸಿರುವವರಿಗೆ ಇದು ಅನ್ವಯಿಸದು. ಒಬ್ಬ ಮನುಷ್ಯ ಸಾಕಷ್ಟು ಅರಿತವನಾಗಿರಬಹುದು, ಉನ್ನತ ಜನ್ಮವಿರಬಹುದು, ಮತ್ತು ಅಪಾರ ಆಸ್ತಿ ಇರಬಹುದು, ಆದರೆ ಶ್ರೀ ಕೃಷ್ಣನ ಕೃಪೆ ಇಲ್ಲದಿದ್ದರೆ, ಅವನು ಲೌಕಿಕ ಬದುಕಿನ ಕಷ್ಟ ಕಾರ್ಪಣ್ಯಗಳಿಂದ ಮುಕ್ತನಾಗುವುದು ಸಾಧ್ಯವಿಲ್ಲ.’

‘ಒಬ್ಬ ವ್ಯಕ್ತಿ ಇಂದ್ರಿಯ ಸಂತೋಷ ಮತ್ತು ಶ್ರೀಮಂತಿಕೆಯ ಮಧ್ಯೆ ಬದುಕಿರಬಹುದು, ಆದರೆ ಕೃಷ್ಣನು ಅವನಿಗೆ ವಾಸಿಯಾಗದ ಕಾಯಿಲೆಯನ್ನೂ ನೀಡಬಹುದು. ಇದರಿಂದ ಸಂಕಷ್ಟ ಹೆಚ್ಚಾಗುತ್ತದೆ. ಅಂತಹ ಮನುಷ್ಯ ಇಂದ್ರಿಯ ಆನಂದದಿಂದಲೇ ಖುಷಿ ಪಡುವುದು ಸಾಧ್ಯವಿಲ್ಲ. ಅವನು ಹತಾಶೆಯಿಂದ ಒದ್ದಾಡುತ್ತಾನೆ. ಅವನು ಬರಿಗೈನ ಪರಿತ್ಯಕ್ತನಿಗಿಂತ ಹೆಚ್ಚು ಸಂಕಷ್ಟ ಪಡುತ್ತಾನೆ. ಇದನ್ನು ಅರಿತುಕೋ-ಎಲ್ಲ ವೈಭವವೂ ಶೂನ್ಯ. ಅಪಾರವಾದ ಲೌಕಿಕ ಸೊತ್ತು ಇದ್ದರೂ ವ್ಯಕ್ತಿಯ ಭವಿಷ್ಯ ಶ್ರೀಕೃಷ್ಣನ ಅಪೇಕ್ಷೆಯಂತೆಯೇ ನಿರ್ಧಾರಿತವಾಗುವುದು. ನಿನ್ನ ಮಗನ  ನಿರ್ವಹಣೆ ಬಗೆಗೆ ಚಿಂತಿಸಬೇಡ. ಶ್ರೀ ಕೃಷ್ಣನು ಕಾಪಾಡುತ್ತಾನೆಂದು ನಾನು ನಿನಗೆ ಭರವಸೆ ನೀಡುತ್ತೇನೆ.’

‘ನನ್ನ ದೇಹದಲ್ಲಿ ಜೀವವಿರುವವರೆಗೂ ನಿಮಾಯ್ ಕಿಂಚಿತ್ತೂ ಸಂಕಷ್ಟ ಪಡುವುದಿಲ್ಲ. ನಮಗೆಲ್ಲ ಆಶ್ರಯ ಶ್ರೀ ಕೃಷ್ಣನೇ. ಅಲ್ಲದೆ, ನೀನು ಒಳ್ಳೆಯ ತಾಯಿ, ಅರ್ಪಣಾಭಾವದ ಪತ್ನಿಯಾಗಿರುವಾಗ ನಿನಗೇಕೆ ಚಿಂತೆ? ನಿಮಾಯ್‌ಗೆ ಶಿಕ್ಷಣದ ಅಗತ್ಯ ಇಲ್ಲ ಎಂದು ನಾನು ನಿನಗೆ ಮನಗಾಣಿಸುತ್ತೇನೆ. ನನ್ನ ಮಗ ನಿರಕ್ಷರಸ್ಥನಾಗಿಯೇ ಮನೆಯಲ್ಲಿ ಉಳಿಯಲಿ. ’

ಈ ರೀತಿ ತನ್ನ  ನಿರ್ಧಾರ ಮಾಡಿ ಶ್ರೀ ಮಿಶ್ರ ತಮ್ಮ ಮಗನನ್ನು ಕರೆದು ಹೇಳಿದರು. ‘ನಿಮಾಯ್, ಇಂದಿನಿಂದ ಎಲ್ಲ ಅಧ್ಯಯನಗಳಿಂದ ನಿನಗೆ ಮುಕ್ತಿ. ನಿನಗೆ ಹೇಗೆ ಬೇಕೋ ಹಾಗೆ ನೀನು ಇರಬಹುದು. ನೀನು ಅಪೇಕ್ಷಿಸಿದ್ದನ್ನು ನಾನು ನಿನಗೆ ಒದಗಿಸುತ್ತೇನೆ. ಇಷ್ಟೇ ಮಾಡು- ಮನೆಯಲ್ಲಿ ಇರು, ತೃಪ್ತಿಯಿಂದ ಇರು.’  ಅನಂತರ ಮಿಶ್ರ ಕಾರ್ಯೋನ್ಮುಖರಾಗಿ ಹೊರಟು ಹೋದರು. ತನ್ನ ಅಧ್ಯಯನ ಸ್ಥಗಿತಗೊಂಡಿದೆ ಎಂದು ದೇವೋತ್ತಮ ಪರಮ ಪುರುಷನಿಗೆ ಅರ್ಥವಾಯಿತು.

ಅಧ್ಯಯನ  ಪುನರಾರಂಭ

ಧಾರ್ಮಿಕ ತತ್ತ್ವಗಳ ಆಶಯಗಳಿಗೆ ಅನುಗುಣವಾಗಿ ಶ್ರೀ ಗೌರಾಂಗನು ತನ್ನ ಪಿತೃ ವಾಕ್ಯ ಪರಿಪಾಲನೆ ಮಾಡಿ, ಶಾಲೆಗೆ ಹೋಗಲಿಲ್ಲ. ಆದರೆ ನಿಮಾಯ್‌ಗೆ  ನಿರಾಶೆಯಾಗಿತ್ತು. ಅವನು ಪುನಃ ಅಶಾಂತನಾಗತೊಡಗಿದ ಮತ್ತು ತನ್ನ ವಯೋಮಾನದ ಹುಡುಗರೊಂದಿಗೆ ರಭಸವಾಗಿರುತ್ತಿದ್ದ. ತನ್ನ ಮನೆ ಮತ್ತು ನೆರೆಯ ಮನೆಗಳಲ್ಲಿ ನಿಮಾಯ್ ಕೈಗೆ ಸಿಕ್ಕಿದ್ದನ್ನೆಲ್ಲಾ ಕೆಳಗೆ ಎಸೆದು ಹಾಳು ಮಾಡುತ್ತಿದ್ದ.  ಕತ್ತಲಾದ ಮೇಲೆ ಕೂಡ ಮನೆಯಾಚೆ ಇರುತ್ತಿದ್ದ. ಇಡೀ ಸಂಜೆ ಇತರ ಹುಡುಗರೊಂದಿಗೆ ಅವನು ಅನೇಕ ಲೀಲೆಗಳನ್ನು ಪ್ರದರ್ಶಿಸುತ್ತಿದ್ದ. ರಾತ್ರಿ ಹಗಲೂ ವೈಕುಂಠದ ದೇವ ಮತ್ತು ಅವನ ಮಿತ್ರರು ಅನೇಕ ರೀತಿಯ ಚೇಷ್ಟೆಗಳನ್ನು ಮಾಡುತ್ತಿದ್ದರು. ಶ್ರೀ ವಿಶ್ವಂಭರನ ತುಂಟತನಕ್ಕೆ ಎಲ್ಲೆಯೇ ಇರಲಿಲ್ಲ. ಆದರೂ ಶ್ರೀ ಮಿಶ್ರ ಅವನನ್ನು ತಿದ್ದುವ ಗೋಜಿಗೇ ಹೋಗಲಿಲ್ಲ.

ಒಂದು ದಿನ ಶ್ರೀ ಮಿಶ್ರ ಕಾರ್ಯ ನಿಮಿತ್ತ ಹೋಗಿದ್ದರು. ಓದಲು ಅವಕಾಶ ನೀಡಲಿಲ್ಲ ಎಂದು ನಿಮಾಯ್ ಕೋಪಗೊಂಡಿದ್ದ. ಅನಂತರ ಶಚೀಮಾತಾ ಶ್ರೀ ಮಿಶ್ರ ಅವರಿಗೆ ಹೇಳಿದರು, ‘ಓದಲು ಅವಕಾಶ ಕೊಡಲಿಲ್ಲ ಎಂದು ನಮ್ಮ ಮಗ ಸಿಟ್ಟಾಗಿದ್ದಾನೆ’; ಇದೇ ಸಂದರ್ಭದಲ್ಲಿ ನೆರೆ ಮನೆಯ ಕೆಲವರು ಶ್ರೀ ಮಿಶ್ರ ಅವರಲ್ಲಿ ನಿಮಾಯ್ ಅಧ್ಯಯನದ ಬಗೆಗೆ ಮಾತನಾಡಿದರು – ‘ಪ್ರೀತಿಯ ಮಿಶ್ರ, ನಿಮ್ಮದು ಉನ್ನತ ಮನದ ಆತ್ಮ ಎಂದು ನಮಗೆ ತಿಳಿದಿದೆ. ನೀವು ಯಾರ ಸಲಹೆ ಮೇರೆಗೆ ನಿಮ್ಮ ಮಗನ ವಿದ್ಯಾಭ್ಯಾಸವನ್ನು ನಿಲ್ಲಿಸಿದ್ದೀರಿ? ಶ್ರೀ ಕೃಷ್ಣನ ಅಪೇಕ್ಷೆಯಂತೆ ಎಲ್ಲವೂ ನಡೆಯುವುದು. ಆದುದರಿಂದ ನಿಮ್ಮ ಎಲ್ಲ ಚಿಂತೆಗಳನ್ನು ಹೊರ ಹಾಕಿ ಮತ್ತು ಯಾವ ಆತಂಕವೂ ಇಲ್ಲದಂತೆ ನಿಮ್ಮ ಮಗನಿಗೆ ಓದಲು ಅವಕಾಶ ನೀಡಿ. ತನ್ನದೇ ಇಚ್ಛೆಯಿಂದ ಕಲಿಯಬೇಕೆಂಬ ಆಸೆ ಉಳ್ಳ ಮಗ ಇರುವುದು ನಿಮ್ಮ ಅದೃಷ್ಟ. ಆದುದರಿಂದ ಶುಭ ದಿನವನ್ನು ನೋಡಿ ನಿಮ್ಮ ಮಗನ ಉಪನಯನಕ್ಕೆ ಸಿದ್ಧತೆ ನಡೆಸಿ. ಅನಂತರ ಸರಿಯಾದ ರೀತಿಯಲ್ಲಿ ಅವನ ವಿದ್ಯಾಭ್ಯಾಸ ಶುರು ಮಾಡಿ.’

ಶ್ರೀ ಮಿಶ್ರ ಉತ್ತರಿಸಿದರು. ‘ನೀವೆಲ್ಲಾ ನನ್ನ  ಪ್ರೀತಿಯ ಮಿತ್ರರು. ನೀವು ನಿರ್ಧರಿಸಿದ್ದಕ್ಕೆ ನಾನು ಒಪ್ಪಬೇಕು.’  ನಿಮಾಯ್‌ನ ಚಟುವಟಿಕೆಗಳೆಲ್ಲ ಅತಿಮಾನುಷವಾಗಿದ್ದವು. ಎಲ್ಲರೂ ಅದನ್ನು ಅದ್ಭುತವೆಂಬಂತೆ ಅಚ್ಚರಿಯಿಂದ ನೋಡಿದರೂ ಅದರೊಳಗಿನ ಆಳವಾದ ರಹಸ್ಯವನ್ನು ಅವರಿಂದ ಅರಿಯಲಾಗಲಿಲ್ಲ. ಧರ್ಮನಿಷ್ಠ ಮತ್ತು ಅದೃಷ್ಟವಂತ ಜನರು ಆಗಾಗ್ಗೆ ಮಿಶ್ರ ಅವರನ್ನು ಭೇಟಿ ಮಾಡಿ ಮಗುವಿನ ಅತಿಮಾನವ ಗುಣಗಳ ಬಗೆಗೆ ಹೇಳುತ್ತಿದ್ದರು. ಅವರು ಸಲಹೆ ನೀಡುತ್ತಿದ್ದರು. ‘ಈ ಮಗುವನ್ನು ಸಾಮಾನ್ಯನೆಂದು ಭಾವಿಸಬೇಡಿ. ಅತಿಯಾದ ಎಚ್ಚರಿಕೆಯಿಂದ ಅವನನ್ನು ನಿಮ್ಮ  ಹೃದಯಕ್ಕೆ ಸಮೀಪ ಇಟ್ಟುಕೊಳ್ಳಿ.’ ವೈಕುಂಠದ ಪರಮ ನಟಶಿರೋಮಣಿ, ನಿಮಾಯ್,  ತನ್ನದೇ ಮನೆ ಅಂಗಳದಲ್ಲಿ ತುಂಟತನದಿಂದ ಚೇಷ್ಟೆ ಮಾಡುತ್ತಿದ್ದ. ಅನಂತರ ತನ್ನ ತಂದೆಯ ಅನುಮತಿ ಪಡೆದು ಅವನು ಖುಷಿಯಿಂದ ವಿದ್ಯಾಭ್ಯಾಸ ಮುಂದುವರಿಸಿದ.

ಉಪನಯನ ಸಂಸ್ಕಾರ

ತಮ್ಮ ಮಗನಿಗೆ ಉಪನಯನ ಮಾಡಬೇಕೆಂದು ಶ್ರೀ ಮಿಶ್ರ ನಿರ್ಧರಿಸಿದ ಮೇಲೆ ಈ ವಿವಿಧಾನಕ್ಕಾಗಿ ತಮ್ಮ ಮಿತ್ರರನ್ನು ಮನೆಗೆ ಕರೆಯಿಸಿಕೊಂಡರು. ಉಪನಯನ ಸಾಂಗವಾಗಿ ನೆರವೇರಲು ಅವರೆಲ್ಲ  ತುಂಬ ಉತ್ಸಾಹದಿಂದ ಕೆಲಸ ಕಾರ್ಯಗಳನ್ನು ಹಂಚಿಕೊಂಡರು. ಮಹಿಳೆಯರು ಶ್ರೀ ಕೃಷ್ಣನ ವೈಭವವನ್ನು ಕೊಂಡಾಡುತ್ತ ಹಾಡಿದರು. ಸಂಗೀತ ವಿದ್ವಾಂಸರು ವಿವಿಧ ವಾದನಗಳನ್ನು – ಮೃದಂಗ, ಶೆಹನಾಯ್ ಮತ್ತು ಕೊಳಲು- ನುಡಿಸಿದರು. ಬ್ರಾಹ್ಮಣರು ವೇದಘೋಷ ಮಾಡಿದರೆ, ಉಪನ್ಯಾಸಕಾರರು ಶ್ಲೋಕಗಳನ್ನು ಪಠಿಸಿದರು. ಶಚೀದೇವಿಯ ಮನೆಯಲ್ಲಿ ಹರ್ಷಾತಿರೇಕ ತುಂಬಿತ್ತು-ಆನಂದವು ಅಲ್ಲಿ ಆವಿರ್ಭವಿಸಿದ್ದಂತೆ ಕಂಡುಬರುತ್ತಿತ್ತು.

ಶ್ರೀ ಗೌರಸುಂದರನು ಪವಿತ್ರ ಜನಿವಾರವನ್ನು ಧರಿಸುವ ಸಮಯದಲ್ಲಿ ಎಲ್ಲ ಗ್ರಹಗಳೂ ಶುಭ ಸ್ಥಾನದಲ್ಲಿ ಇದ್ದವು. ಶ್ರೀ ಹರಿಯೇ ಆದ ಶ್ರೀ ಗೌರಾಂಗನು ಪವಿತ್ರ ಜನಿವಾರವನ್ನು ಸ್ವೀಕರಿಸಿದಾಗ ಮಾಸ, ದಿನ ಮತ್ತು ಗಳಿಗೆ ಎಲ್ಲವೂ ಶುಭ ಮುಹೂರ್ತವಾಗಿತ್ತು. ಅತಿ ಸುಂದರನಾದ ಪರಮಾತ್ಮನ ಕೊರಳಿನಲ್ಲಿ ಪವಿತ್ರ ಜನಿವಾರವು ಕಂಗೊಳಿಸುತ್ತಿದ್ದ ದೃಶ್ಯ ವರ್ಣನಾತೀತ. ನಿಶ್ಚಿತವಾಗಿ, ಅನಂತಶೇಷನು ತನ್ನ ಪ್ರೀತಿಯ ಪರಮಾತ್ಮನ ಕೊರಳನ್ನು ಅಲಂಕರಿಸಲು ಜನಿವಾರದ ರೂಪ ತಾಳಿರಬೇಕು. ಅನಂತರ ದೇವೋತ್ತಮ ಪರಮ ಪುರುಷನಾದ ಗೌರಚಂದ್ರನು ವಾಮನ ರೂಪ ತಳೆದನು. ಈ ಅದ್ಭುತ ಲೀಲೆಯನ್ನು ಕಂಡವರ ಆನಂದ ಅಪರಿಮಿತ.

ಪರಮಾತ್ಮನ ಅದ್ಭುತವಾದ ಆಧ್ಯಾತ್ಮಿಕ ದಿವ್ಯ ತೇಜಸ್ಸನ್ನು ಜನರು ವೀಕ್ಷಿಸಿದರು. ಆ ಕ್ಷಣ ಅವರು ಅವನು ಸಾಮಾನ್ಯ ಮಗು ಎಂಬ ಭಾವನೆಯನ್ನು ತೊಡೆದುಹಾಕಿದರು. ಕೈಯಲ್ಲಿ ದಂಡ ಹಿಡಿದು ತೋಳಿನಲ್ಲಿ ಜೋಳಿಗೆ ಹಾಕಿಕೊಂಡು ಶ್ರೀ ಗೌರಸುಂದರ ತನ್ನ ಭಕ್ತರ ಮನೆಗಳಿಗೆ ಭಿಕ್ಷೆಗಾಗಿ ತೆರಳಿದ. ಪ್ರತಿಯೊಬ್ಬರೂ ತಮ್ಮ ತಮ್ಮ ಯೋಗ್ಯಾನುಸಾರ ನಿಮಾಯ್ ಜೋಳಿಗೆಯಲ್ಲಿ ದಾನ ಹಾಕಿ ತೃಪ್ತಿಪಟ್ಟುಕೊಂಡರು. ಮಹಿಳೆಯರು ಕೂಡ ನಗೆ ಸೂಸಿ ಸಂತೋಷದಿಂದ ಅವನ ಚೀಲದಲ್ಲಿ ದಾನ ಹಾಕಿದರು. ಶ್ರೀ ಸರಸ್ವತೀ ದೇವಿ, ಶ್ರೀ ಪಾರ್ವತೀ ದೇವಿ ಮತ್ತು ಶ್ರೇಷ್ಠ ಮುನಿಗಳ ಪತ್ನಿಯರು ಆ ಸ್ಥಳದಲ್ಲಿ ಪ್ರತ್ಯಕ್ಷರಾದರು. ಬ್ರಾಹ್ಮಣರ ಪತ್ನಿಯರ ಸ್ಥಾನದಲ್ಲಿ ನಿಂತು ಅವರೂ ಕೂಡ ಸುಂದರ ನಿಮಾಯ್ ಗೆ ದಾನ ನೀಡಿದರು. ಶ್ರೀ ವಿಶ್ವಂಭರನು ಪವಿತ್ರ ಜನಿವಾರವನ್ನು ಸ್ವೀಕರಿಸಿದ ಸಂದರ್ಭದ ವರ್ಣನೆಯನ್ನು ಕೇಳಿದವರು ಶ್ರೀ ಚೈತನ್ಯ-ಚಂದ್ರನ ಚರಣ ಕಮಲದ ಪರಮ ಆಶ್ರಯ ಪಡೆಯುವರು.

ವಿದ್ಯಾರ್ಥಿ ವಿದ್ವಾಂಸ ನಿಮಾಯ್

ಮನೆಯಲ್ಲಿ ಅಧ್ಯಯನ ನಡೆಸುವಾಗಲೇ ನಿಮಾಯ್ ಎಲ್ಲ ಧರ್ಮಗ್ರಂಥಗಳ ಅಂಶಗಳನ್ನು ಅರ್ಥ ಮಾಡಿಕೊಂಡುಬಿಟ್ಟಿದ್ದ. ಆದರೂ ಇತರರ ಜೊತೆ ಕಲಿಯಬೇಕೆಂಬ ಇಚ್ಛೆ ಅವನಿಗಿತ್ತು. ನವದ್ವೀಪದ ಶ್ರೀ ಗಂಗಾದಾಸ ಪಂಡಿತರು ಗುರುಗಳಲ್ಲಿಯೇ ಮುಕುಟಪ್ರಾಯರು. ಅವರು ಸ್ವತಃ  ಸಾಂದೀಪನಿ ಮುನಿಗಳು (ಶ್ರೀ ಕೃಷ್ಣ ಮತ್ತು ಶ್ರೀ ಬಲರಾಮರ ಗುರು). ಅವರು ವ್ಯಾಕರಣದಲ್ಲಿ ಅಸೀಮ ಪಂಡಿತರಾಗಿದ್ದರು. ಅವರ ಬಳಿ ಕಲಿಯಲು ನಿಮಾಯ್ ಆಶಿಸಿದ. ಮಗನ ಸೂಚನೆಗಳನ್ನು ಅರಿತ ಶ್ರೀ ಮಿಶ್ರ ಅವನೊಂದಿಗೆ ಜ್ಞಾನಿಯಾದ ಬ್ರಾಹ್ಮಣ ಶ್ರೀ ಗಂಗಾದಾಸರ ಮನೆಗೆ ತೆರಳಿದರು. ಶ್ರೀ ಗಂಗಾದಾಸ ಪಂಡಿತರು ಗೌರವದಿಂದ ಎದ್ದು ನಿಂತು ಶ್ರೀ ಮಿಶ್ರ ಅವರನ್ನು ಬರಮಾಡಿಕೊಂಡರು. ಅವರನ್ನು ಆಲಿಂಗಿಸಿದ ಮೇಲೆ ಕೂರಲು ಕೋರಿದರು.

ಶ್ರೀ ಮಿಶ್ರ ನುಡಿದರು, ‘ನಾನು ನನ್ನ  ಮಗನನ್ನು ನಿಮಗೆ ಒಪ್ಪಿಸುವೆ. ಅವನು ನಿಮ್ಮಿಂದ ಕೇಳಿ ಕಲಿಯಲಿ. ದಯೆಯಿಟ್ಟು ಅವನಿಗೆ ವೈಯಕ್ತಿಕವಾಗಿ ನೀವು ಎಲ್ಲವನ್ನೂ ಬೋಸಬೇಕು.’ ಶ್ರೀ ಗಂಗಾದಾಸ ಪಂಡಿತರು ಸಂತೋಷದಿಂದ ಉತ್ತರಿಸಿದರು, ‘ಈ ಕೋರಿಕೆಯಿಂದ ನಾನು ಅದೃಷ್ಟವಂತನೆಂದು ಭಾವಿಸುವೆ. ನನ್ನ ಸಾಮರ್ಥ್ಯ ಮೀರಿ ಅವನಿಗೆ ಕಲಿಸುವೆ.’  ತುಂಬು ಸಂತೋಷದಿಂದ ನಿಮಾಯ್‌ನನ್ನು ಶಿಷ್ಯನಾಗಿ ಪಡೆದ  ಶ್ರೀ ಗಂಗಾದಾಸರು ಅವನನ್ನು ತಮ್ಮ ಮಗನಂತೆ ಸದಾ ತಮ್ಮ ಪಕ್ಕದಲ್ಲೇ ಕೂರಿಸಿಕೊಳ್ಳುತ್ತಿದ್ದರು.

ಶ್ರೀ ಗಂಗಾದಾಸರ ವಿವರಣೆಯನ್ನು ಒಂದು ಬಾರಿ ಕೇಳಿದರೆ ಸಾಕು, ನಿಮಾಯ್ ಅದರ ಅರ್ಥವನ್ನು ತತ್‌ಕ್ಷಣ ಅರಿಯುತ್ತಿದ್ದ. ಅವನು ತನ್ನ ಗುರುಗಳ ವಿವರಣೆಯನ್ನು ಖಂಡಿಸಿ ವಾದ ಮಾಡಬಲ್ಲವನಾಗಿದ್ದ ಮತ್ತು ಅನಂತರ ಅದೇ ವಾದ, ಅಂಶಗಳನ್ನು ಪುನರ್ ಸ್ಥಾಪಿಸುತ್ತಿದ್ದ. ಗಂಗಾದಾಸರ ಬಳಿ ನೂರಾರು ಶಿಷ್ಯರಿದ್ದರು, ಆದರೆ ಯಾರಿಗೂ ಕೂಡ ಈ ರೀತಿ ನಿಮಾಯ್ ಜೊತೆ ವಾದದಲ್ಲಿ ತೊಡಗಲು ಸಾಧ್ಯವಿರಲಿಲ್ಲ. ನಿಮಾಯ್‌ನ ಅಪಾರವಾದ ಜ್ಞಾನದಿಂದ ಸಂಪ್ರೀತರಾದ ಗುರು, ಅವನನ್ನು ಅತ್ಯುತ್ತಮ ಶಿಷ್ಯನೆಂದು ಘೋಷಿಸಿದರು. ನಿಮಾಯ್‌ನ ವಾದಗಳಿಂದಾಗಿ ಉಳಿದ ವಿದ್ಯಾರ್ಥಿಗಳು ಸೂತ್ರದ ಗೊಂಬೆಯಂತೆ ನರ್ತಿಸುತ್ತಿದ್ದರು. ಅಧ್ಯಯನ ಮುಗಿದ ಕೂಡಲೇ, ಪ್ರತಿದಿನ, ನಿಮಾಯ್ ತನ್ನ ಮಿತ್ರರೊಂದಿಗೆ ಗಂಗಾ ನದಿಗೆ ಸ್ನಾನ ಮಾಡಲು ತೆರಳುತ್ತಿದ್ದ.

ಶ್ರೀ ಚೈತನ್ಯ ಮಹಾಪ್ರಭು ತಮ್ಮ ೧೧ನೇ ಪ್ರಾಯದಲ್ಲಿಯೇ ಇತರ ವಿದ್ಯಾರ್ಥಿಗಳಿಗೆ ಬೋಸಲು ಆರಂಭಿಸಿದರು. ಇದು ಅವರ ಕೈಶೋರ ಕಾಲಕ್ಕೆ ನಾಂದಿ. ಶ್ರೀ ಚೈತನ್ಯನು ಗುರುವಾದ ಕೂಡಲೇ ಅಸಂಖ್ಯ ವಿದ್ಯಾರ್ಥಿಗಳು ಅವನ ಬಳಿ ಕಲಿಯಲು ಬರತೊಡಗಿದರು. ನಿಮಾಯ್‌ನ ಬೋಧನೆ, ವಿವರಣೆ ರೀತಿ ಕೇಳಿ ಅವರು ಅಚ್ಚರಿಗೊಂಡರು. ಎಲ್ಲ ಧರ್ಮಗ್ರಂಥಗಳನ್ನು ಕುರಿತ ಉಪನ್ಯಾಸಗಳಲ್ಲಿ ನಿಮಾಯ್ ಎಲ್ಲ ರೀತಿಯ ವಿದ್ವಾಂಸರನ್ನು ಪರಾಜಿತಗೊಳಿಸುತ್ತಿದ್ದ. ಆದರೂ ಅವನ ನಮ್ರತೆಯಿಂದಾಗಿ ಆ ವಿದ್ವಾಂಸರಾರೂ ಅಸಮಾಧಾನಗೊಳ್ಳುತ್ತಿರಲಿಲ್ಲ. ಶ್ರೀ ಚೈತನ್ಯ ಮಹಾಪ್ರಭು, ಗಂಗಾ ನದಿಯಲ್ಲಿ ಜಲಕ್ರೀಡೆಯಾಡುವಾಗ, ಶಿಕ್ಷಕನಾಗಿ ಅನೇಕ ರೀತಿಯ ಚೇಷ್ಟೆ ಮಾಡುತ್ತಿದ್ದ.

ವೈಕುಂಠಕ್ಕೆ ತೆರಳಿದ ಶ್ರೀ ಮಿಶ್ರ

ಆಟ ಮತ್ತು ಮೋಜಿನ ಅನಂತರ ಮನೆಗೆ ಮರಳುವ ಶ್ರೀ ಗೌರಸುಂದರ ಸೂಕ್ತ ರೀತಿಯಲ್ಲಿ ಶ್ರೀ ವಿಷ್ಣುವನ್ನು ಪೂಜಿಸಿ ತುಳಸಿ ಗಿಡಕ್ಕೆ ನೀರು ನೀಡಿ ಊಟಕ್ಕೆ ಕೂರುತ್ತಿದ್ದ. ಭೋಜನದ ಅನಂತರ ನಿಮಾಯ್ ತನ್ನ ಪುಸ್ತಕ ತೆರೆದು ನಿಃಶಬ್ದವಾದ ಸ್ಥಳದಲ್ಲಿ ಓದಲು ಕೂರುತ್ತಿದ್ದ. ಆ ಏಕಾಂತ ಸ್ಥಳದಲ್ಲಿ , ಎಲ್ಲ ದೇವರ ರತ್ನನಾದ ದೇವೋತ್ತಮ ಪರಮ ಪುರುಷನು ಅಧ್ಯಯನದಲ್ಲಿ ಮುಳುಗಿರುತ್ತಿದ್ದ. ಅವನು ವಿವಿಧ ಸೂಕ್ತಿಗಳ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ.

ಮಗನ ಅಧ್ಯಯನಶೀಲತೆ ಕಂಡು ಶ್ರೀ ಮಿಶ್ರ ಅಪಾರವಾಗಿ ಆನಂದ ಪರವಶರಾದರು. ಆದರೆ ತಮ್ಮ ಸಂತೋಷವನ್ನು ಯಾರಿಗೂ ಹೇಳುತ್ತಿರಲಿಲ್ಲ. ತಮ್ಮ ಅತೀವವಾದ ಪಿತೃ ಭಕ್ತಿಯಿಂದ, ಅವರು ತಮ್ಮ ಮಗನ ಅಪೂರ್ವ ಸೌಂದರ್ಯದಲ್ಲಿ ಮಿಂದರು ಮತ್ತು ಆ ಮನಸ್ಥಿತಿಯಲ್ಲಿ ಅವರು ಮುಕ್ತಿ ಪಡೆದರು. ಆದರೆ, ಶ್ರೀ ಮಿಶ್ರ ಅವರು ಮುಕ್ತಿಯನ್ನು ವಿಶೇಷವೆಂದು ಪರಿಗಣಿಸಲಿಲ್ಲ. ಪರಿಶುದ್ಧರಾದ ಭಕ್ತರಿಗೆ ಮುಕ್ತಿಯಿಂದ ಸಂತೋಷವೇನೂ ಆಗುವುದಿಲ್ಲ, ಮತ್ತು ಇಂದ್ರಿಯ ತೃಪ್ತಿಯಿಂದಲೂ ಸಂತೋಷ ಇಲ್ಲ.  ಶ್ರೀ ಮಿಶ್ರ  ತಮ್ಮ  ತೇಜಸ್ವಿ ಮಗನನ್ನು ನೋಡುತ್ತಾ ಆನಂದ ಸಾಗರದಲ್ಲಿ  ತೇಲಾಡುತ್ತಿದ್ದರು.

ಪರಮಾತ್ಮನ ವಿಕಸನಗೊಳ್ಳುತ್ತಿದ್ದ ಹೊಸ ಹೊಸತನದ ಮುಂದೆ ಮನ್ಮಥನ ಸೌಂದರ್ಯವೇ ತಲೆಬಾಗಿ ಸೋಲೊಪ್ಪಿಕೊಂಡಿತು. ಅವನ ಪ್ರತಿ ಅಂಗದಲ್ಲಿ  ಹೋಲಿಸಲಸಾಧ್ಯ ಕಾಂತಿ ಇತ್ತು. ಪೋಷಕರಿಗಿರುವ ಸಾಮಾನ್ಯ ಆತಂಕದಂತೆ, ಶ್ರೀ ಮಿಶ್ರ ಒಮ್ಮೆ ಈ ರೀತಿ ಯೋಚಿಸಿದರು. ‘ಯಾವುದೇ ಭೂತ ಅಥವಾ ಕೆಟ್ಟ ಪ್ರೇತ ನಿಮಾಯ್ ಮೇಲೆ ಕಣ್ಣು ಹಾಕದೆಂದು ಆಶಿಸುವೆ.’ ಅವರು ತತ್‌ಕ್ಷಣ ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿ  ತನ್ನ ಮಗನಿಗೆ ಆಶ್ರಯ ನೀಡುವಂತೆ ಕೋರಿದರು. ತನ್ನ ತಂದೆಯ ಪ್ರಾರ್ಥನೆ ಕೇಳಿದ ನಿಮಾಯ್ ತನ್ನಷ್ಟಕ್ಕೆ ತಾನು ನಸುನಕ್ಕ.

ಒಂದು ದಿನ, ದೈವಿಕ ವ್ಯವಸ್ಥೆಯಂತೆ, ಶ್ರೀ ಮಿಶ್ರ ಅವರು ಕನಸೊಂದನ್ನು ಕಂಡರು. ಇದು ಅವರಿಗೆ ಸಂತೋಷ ಮತ್ತು ದುಃಖವನ್ನು ಏಕ ಕಾಲಕ್ಕೆ ನೀಡಿತು. ಅವರು ನೆಲದ ಮೇಲೆ ನಮಸ್ಕರಿಸಿ ಪ್ರಾರ್ಥಿಸಿದರು. ‘ಓ! ಶ್ರೀ ಗೋವಿಂದಾ, ನಿಮಾಯ್ ನಮ್ಮ ಮನೆಯಲ್ಲಿಯೇ ಇರುವಂತೆ ಅವಕಾಶ ನೀಡು. ಓ! ಶ್ರೀ ಕೃಷ್ಣ, ನಾನು ನಿನ್ನ ಬಳಿ ಬೇಡುವುದು ಇದೊಂದೇ ನಿಮಾಯ್ ಗೃಹಸ್ಥನಾಗಲಿ ಮತ್ತು ಮನೆಯಲ್ಲಿಯೇ ಇರಲಿ.’ ಅಚ್ಚರಿ ಎಂಬಂತೆ, ಶಚಿಮಾತಾ ವಿಚಾರಿಸಿದರು, ‘ನೀವು ಇದ್ದಕ್ಕಿದಂತೆ ಪರಮಾತ್ಮನಲ್ಲಿ ಏಕೆ ಉಪಕಾರ ಕೇಳಿದಿರಿ?’ ‘ಇಂದು ನನಗೆ ಒಂದು ಕನಸಾಯಿತು’ ಶ್ರೀ ಮಿಶ್ರ ಉತ್ತರಿಸಿದರು. ‘ಆ ಕನಸಿನಲ್ಲಿ ನಿಮಾಯ್ ತನ್ನ ಶಿಖೆಯನ್ನು ತೆಗೆದುದನ್ನು ಕಂಡೆ. ಅವನು ಸುಂದರವಾದ ಸನ್ಯಾಸಿ ಉಡುಪಿನಲ್ಲಿ, ಏಕ ಕಾಲದಲ್ಲಿ , ನಗುತ್ತ, ನರ್ತಿಸುತ್ತ, ಅಳುತ್ತ ಕೃಷ್ಣ ನಾಮ ಪಠಿಸುತ್ತಿದ್ದ.’

‘ಅದ್ವೈತ ಆಚಾರ್ಯ ಪ್ರಭು ಮತ್ತು ಇತರ ಎಲ್ಲ ಭಕ್ತರು ನಿಮಾಯ್‌ನನ್ನು ಸುತ್ತುವರಿದಿದ್ದರು ಮತ್ತು ಅವನೊಂದಿಗೆ ತಾವೂ ಪಠಿಸುತ್ತಿದ್ದರು. ನಿಮಾಯ್ ಅನಂತಶೇಷನ ಮೇಲೆ ಕುಳಿತು ತನ್ನ ಪಾದವನ್ನು ಎಲ್ಲರ ಶಿರದ ಮೇಲೆ ಇಟ್ಟಿದ್ದನ್ನು ಕಂಡೆ. ಬ್ರಹ್ಮ, ಶಿವ ಮತ್ತು ಅನಂತಶೇಷ  ‘ಜೈ ಶಚೀನಂದನ ! ಜೈ ಶಚೀನಂದನ!’ ಎಂದು ಪಠಿಸುತ್ತಿದ್ದರು. ಅಲ್ಲಿ ಎಲ್ಲರೂ ಆನಂದಭರಿತರಾಗಿ ಪಠಿಸುತ್ತಿದ್ದರೂ ನಾನು ಭಯದಿಂದ ಒಂಟಿಯಾಗಿ ನಿಂತಿದ್ದೆ. ಒಂದು ಕ್ಷಣದಲ್ಲಿ ನಾನು ಕಂಡೆ- ನಿಮಾಯ್ ನರ್ತಿಸುತ್ತ ಊರೂರಿಗೆ ಸಾಗುತ್ತಿದ್ದನು. ಅವನ ಹಿಂದೆ ನೂರಾರು ಸಹಸ್ರಾರು ಅನುಯಾಯಿಗಳು. ಲಕ್ಷಾಂತರ ಜನರು ಏಕ ಕಂಠದಿಂದ ಶ್ರೀಹರಿಯ ನಾಮ ಪಠಿಸುತ್ತ ನಿಮಾಯ್ ಹಿಂದೆ ತೆರಳುತ್ತಿದ್ದರು. ಆ ಮಂತ್ರ ದನಿಯು ಲೌಕಿಕ ಲೋಕವನ್ನೇ ಮುಚ್ಚಿತು. ಎಲ್ಲ ದಿಕ್ಕಿನಿಂದಲೂ ಅವ್ಯಾಹತವಾಗಿ ಬರುತ್ತಿದ್ದ ನಿಮಾಯ್‌ನ ವೈಭವವನ್ನು  ಕೊಂಡಾಡುವ ದನಿಗಳನ್ನು ನಾನು ಕೇಳುತ್ತಿದ್ದಂತೆಯೇ ಅವನು ನೀಲಾಚಲ ಪುರಿಗೆ ತೆರಳಿದ್ದುದನ್ನು  ನೋಡಿದೆ. ಈ ಕನಸು ನನಗೆ ಆತಂಕ ಉಂಟು ಮಾಡಿತು. ನಮ್ಮ ಮಗ ಗೃಹ ವ್ಯವಹಾರಗಳಿಂದ ಹತಾಶನಾಗಿ ಮನೆ ಬಿಟ್ಟು ಸಂನ್ಯಾಸಿ ಆಗಿಬಿಡುತ್ತಾನೇನೋ ಎಂಬ ಭಯ ಮೂಡಿದೆ.’

‘ನೀವು ನೋಡಿದ್ದು  ಕನಸು’ ಶಚೀಮಾತಾ ಸಮಾಧಾನ ಪಡಿಸಲೆತ್ನಿಸಿದಳು. ‘ವಿದ್ವಾಂಸನಾದ ಪತಿಯೇ, ಚಿಂತಿಸಬೇಡಿ. ನಿಮಾಯ್ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ನಿಮಾಯ್‌ಗೆ ತನ್ನ ಪುಸ್ತಕಗಳನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಕಲಿಯುವುದೇ ಎಲ್ಲ ಎಂದು ಅವನು ಭಾವಿಸಿದ್ದಾನೆ.’

ತಂದೆತಾಯಿಯ ಪ್ರೀತಿ ವಾತ್ಸಲ್ಯದ ಹಿನ್ನೆಲೆಯಲ್ಲಿ ಈ  ಆತ್ಮಗಳು ತಮ್ಮ ಮಗನ ಭವಿಷ್ಯದ ಬಗೆಗೆ ಚರ್ಚಿಸುತ್ತಿದ್ದರು. ಆದರೆ, ಕೆಲ ದಿನಗಳ ಅನಂತರ ಶ್ರೀ ಜಗನ್ನಾಥ ಮಿಶ್ರ ಅವರು ತಮ್ಮ ಪರಿಶುದ್ಧ ಆಧ್ಯಾತ್ಮಿಕ ರೂಪದಲ್ಲಿ ಈ ಲೌಕಿಕ ಜಗತ್ತಿನಿಂದ ನಿರ್ಗಮಿಸಿದರು.

ನಿಮಾಯ್‌ಗೆ ದುಃಖ ತಡೆಯದಾಯಿತು. ದಶರಥ ಮಹಾರಾಜನು ದೇಹ ತ್ಯಾಗ ಮಾಡಿದಾಗ ಶ್ರೀ ರಾಮಚಂದ್ರನು ದುಃಖಿತನಾದಂತೆ ಶ್ರೀ ಚೈತನ್ಯ ಮಹಾಪ್ರಭು ತನ್ನ ತಂದೆಯ ನಿರ್ಗಮನದಿಂದ ದುಃಖಿತನಾದ. ನಿಮಾಯ್‌ನ ಆಕರ್ಷಣೆ ಒಂದರಿಂದಲೇ ಶಚೀಮಾತಾ ಬದುಕುಳಿದರು. ನಿಮಾಯ್ ತನ್ನ ತಾಯಿಯ ಬಳಿಯೇ ಇದ್ದು  ತನ್ನ ದುಃಖವನ್ನು ಹುದುಗಿಸಿಟ್ಟನು.

ಶಚೀಮಾತಾ ಬೇರೆಲ್ಲ ಕೆಲಸಗಳ ಬಗೆಗೆ ಚಿಂತಿಸದೆ ತಂದೆ ಇಲ್ಲದ ಮಗನ ಯೋಗಕ್ಷೇಮದತ್ತ ಗಮನ ಹರಿಸಿದರು. ಒಂದು ಕ್ಷಣ ನಿಮಾಯ್ ಕಾಣದಿದ್ದರೆ ಅವರು  ಮೂರ್ಛೆ ಹೋಗುತ್ತಿದ್ದರು. ನಿಮಾಯ್ ಕೂಡ ಅದಕ್ಕೆ ಸ್ಪಂದಿಸುತ್ತಿದ್ದ. ತನ್ನ ಪ್ರೀತಿ ವಾತ್ಸಲ್ಯದ ಧಾರೆ ಸತತವಾಗಿ ತಾಯಿಯತ್ತಲೇ ಹರಿಯುವಂತೆ ಮಾಡಿದ ನಿಮಾಯ್ ಅವಳಿಗೆ ಸಾಂತ್ವನ ಹೇಳುತ್ತಿದ್ದ. ‘ಅಮ್ಮಾ, ದಯೆಯಿಟ್ಟು ನಿರಾಶಳಾಗಬೇಡ. ನಾನು ನಿನ್ನ ಜೊತೆಗಿರುವವರೆಗೂ ನಿನಗೇನೂ ತೊಂದರೆ ಆಗದು’ ಎಂದು ಅವನು ಅವರಿಗೆ ಆಶ್ವಾಸನೆ ನೀಡಿದ.

ನಿಮಾಯ್‌ನ ಸುಂದರ ವದನ ಮತ್ತು ಮೃದು ವ್ಯಕ್ತಿತ್ವವನ್ನೇ  ಸದಾ ಮನದಲ್ಲಿ ಹಿಡಿದುಕೊಂಡು ಶಚೀಮಾತಾ ತನ್ನ ಎಲ್ಲ ಸಂಕಟ ಮರೆತರು. ಅವನು ಮುಂದಿರುವಾಗ ಅವರು ಹೇಗೆ ತಾನೆ ನಿರುತ್ಸಾಹದಿಂದ ಇರುವುದು ಸಾಧ್ಯ? ದೇವೋತ್ತಮ ಪರಮ ಪುರುಷನು ಶಚೀಮಾತಾಳ ಮಗನಾಗಿ ಜೊತೆಯಲ್ಲಿದ್ದ. ಅವನನ್ನು ನೆನಪು ಮಾಡಿಕೊಳ್ಳುವುದರಿಂದ ಮಾತ್ರವೇ ಅಪೇಕ್ಷೆ ಫಲದಾಯಕವಾಗಿಬಿಡುತ್ತದೆ. ತಾಯಿ ಶಚಿಯನ್ನು ಹತಾಶೆ ಹೇಗೆ ಸ್ಪರ್ಶಿಸುತ್ತದೆ? ಅವರು ತಮ್ಮ ಉತ್ಸಾಹವನ್ನು ಮತ್ತೆ ಮೇಲೇಳುವಂತೆ ಮಾಡಿದರು ಮತ್ತು ತಮ್ಮ ಆನಂದದ ಸ್ವಭಾವವನ್ನು ಪುನಃ ಪಡೆದುಕೊಂಡರು. ವೈಕುಂಠದ ಪರಮಾತ್ಮನು ಯುವ ಬ್ರಾಹ್ಮಣನಾಗಿ ನವದ್ವೀಪದಲ್ಲಿ  ಪ್ರತ್ಯಕ್ಷನಾಗಿದ್ದನು, ತನ್ನದೇ ಪರಮ ವೈಭವದಿಂದ ಬಂದ ಪರಮಾನಂದವನ್ನು ಅನುಭವಿಸುತ್ತ.

(ಮುಂದುವರಿಯುವುದು)
Leave a Reply

Your email address will not be published. Required fields are marked *