Search
Sunday 17 January 2021
  • :
  • :

ಸುವರ್ಣಾವತಾರ ಭಾಗ – 8

ಬಾಲ ಗೋಪಾಲನಂತೆ ಶ್ರೀ ಗೌರಾಂಗ ವೈವಿಧ್ಯಮಯ ಲೀಲೆಗಳನ್ನು ಪ್ರದರ್ಶಿಸುತ್ತಿದ್ದ. ಅವನ ಔಪಚಾರಿಕ ಶಿಕ್ಷಣ ಸಮಯ ಸಮೀಪಿಸಿತು. ಅತ್ಯುನ್ನತ ಬ್ರಾಹ್ಮಣರಾದ ಶ್ರೀ ಮಿಶ್ರ ಅವರು ಶುಭ ಗಳಿಗೆಯನ್ನು ನಿಶ್ಚಯಿಸಿ ತಮ್ಮ ಮಗನ ಕೈಗೆ ಔಪಚಾರಿಕವಾಗಿ ಬರೆಯುವ ಬಳಪ ನೀಡಿದರು. ಕೆಲ ದಿನಗಳ ಅನಂತರ ಚೂಡಾಕರ್ಮ – ಕಿರಿಯ ಬ್ರಾಹ್ಮಣ ಬಾಲಕರು ತಮ್ಮ ತಲೆ ಕೂದಲು ತೆಗೆದು ಶಿಖೆಯನ್ನು ಮಾತ್ರ ಉಳಿಸಿಕೊಳ್ಳುತ್ತಾರೆ – ಅದನ್ನು ನಿಮಾಯ್ ಗೆಳೆಯರ ನಡುವೆ ಮಾಡಲಾಯಿತು. ಅನಂತರ, ಕೆಲ ದಿನಗಳಾದ ಮೇಲೆ, ಕರ್ಣವೇಧ ವಿ – ಕಿವಿ ಚುಚ್ಚುವುದು, ನಿಮಾಯ್ ವೇದಗಳನ್ನು ಕೇಳುವುದಕ್ಕೆ ಇದು ನಾಂದಿ – ಕೂಡ ಆಚರಿಸಲಾಯಿತು. ನೋಡು ನೋಡುತ್ತಿದಂತೆಯೇ ನಿಮಾಯ್ ಅಕ್ಷರಗಳನ್ನು ಬರೆಯುವುದನ್ನು ಕಂಡು ಎಲ್ಲರೂ ಅಚ್ಚರಿಗೊಳ್ಳುತ್ತಿದ್ದರು.  ಎರಡು ಮೂರು ದಿನಗಳಲ್ಲಿ, ನಿಮಾಯ್ ಎಲ್ಲ ಕೂಡು ಪದಗಳನ್ನು ಬರೆಯುವುದನ್ನು ಕಲಿತುಬಿಟ್ಟ. ರಾಮ, ಕೃಷ್ಣ, ಮುರಾರಿ, ವನಮಾಲಿಯಂತಹ ದೇವೋತ್ತಮ ಪರಮ ಪುರುಷನ ವಿವಿಧ ನಾಮಗಳನ್ನು ಬರೆಯುತ್ತ ಅವನು ತನ್ನ ಸಮಯ ವಿನಿಯೋಗಿಸುತ್ತಿದ್ದ. ಅವನು ಬಹಳ ಕಾತರದಿಂದ ಅಧ್ಯಯನ ಮಾಡುತ್ತಿದ್ದ ಮತ್ತು ರಾತ್ರಿ ಹಗಲು ಬರೆಯುತ್ತಿದ್ದ. ತನ್ನ ಮಧುರ ಕಂಠದಿಂದ ಬಂಗಾಳಿ ಅಕ್ಷರಮಾಲೆಯನ್ನು ಪಠಿಸುತ್ತ ಆನಂದಪರವಶನಾಗುತ್ತಿದ್ದ ನಿಮಾಯ್‌ನ ದನಿ ಕೇಳುವುದೇ ಎಲ್ಲರ ಅದೃಷ್ಟವಾಗಿತ್ತು.

ಶ್ರೀ ಗೌರಸುಂದರ ಅದ್ಭುತ ಲೀಲೆಗಳನ್ನು ಪ್ರದರ್ಶಿಸುತ್ತಿದ್ದ. ಪಡೆಯಲು ಅಸಾಧ್ಯವಾದ ವಸ್ತುವನ್ನೇ ಅವನು ಕೇಳುತ್ತಿದ್ದ. ನಿಮಾಯ್ ಅತ್ತರೆ ಅದಕ್ಕೆ ಇದ್ದ ಒಂದೇ ಪರಿಹಾರವೆಂದರೆ ಶ್ರೀ ಹರಿ ನಾಮ ಕೀರ್ತನೆ. ಒಂದು ದಿನ, ಹರಿ ನಾಮ ಸಂಕೀರ್ತನೆಯಾಗುತ್ತಿದ್ದರೂ ನಿಮಾಯ್ ಅಳುವುದು ಮುಂದುವರಿದಿತ್ತು. ಆಗ ಯಾರೋ ಹೇಳಿದರು, ‘ಪ್ರೀತಿಯ ಮಗು, ನಿನಗೇನು ಬೇಕೆಂದು ಹೇಳು. ನಿನಗೇನು ಇಷ್ಟವೋ ಅದನ್ನೇ ನಾವು ತರುತ್ತೇವೆ. ಸುಮ್ಮನೆ, ಅಳು ನಿಲ್ಲಿಸು’. ಆಗ ನಿಮಾಯ್ ಉತ್ತರಿಸಿದ : ‘ನಿಮಗೆ ನನ್ನನ್ನು ಕಾಪಾಡಬೇಕೆಂದಿದ್ದರೆ, ತತ್‌ಕ್ಷಣ ಇಬ್ಬರು ಬ್ರಾಹ್ಮಣರಾದ ಜಗದೀಶ ಪಂಡಿತ ಮತ್ತು ಹಿರಣ್ಯ ಪಂಡಿತ ಅವರ ಮನೆಗೆ ತೆರಳಿ . ಈ ಇಬ್ಬರು ಶುದ್ಧ ಬಾಹ್ಮಣ ಭಕ್ತರ ಮನೆಗಳೆಂದರೆ ನನಗೆ ಅಚ್ಚುಮೆಚ್ಚು. ಅವರು ನೀಡುವುದನ್ನು ನಾನು ಸೇವಿಸಿದರೆ ಆರೋಗ್ಯವಂತನಾಗುತ್ತೇನೆ ಮತ್ತು ಶಾಂತನಾಗುತ್ತೇನೆ. ಆಗ ನಾನು ಸಾಮಾನ್ಯನಂತೆ ವರ್ತಿಸಬಹುದು.’

ಏಕಾದಶಿಯಂದು ಪ್ರಸಾದ ಸ್ವೀಕಾರ:

ಏಕಾದಶಿಯಂದು ಮಹಾ ವಿಷ್ಣುವಿಗೆ ಪ್ರಸಾದವನ್ನು ಅರ್ಪಿಸಲಾಗುತ್ತದೆ. ಭಕ್ತರಿಗೆ ಏಕಾದಶಿಯಂದು ಉಪವಾಸ ಮಾಡಲು ಪ್ರೇರೇಪಿಸಲಾಗು- ತ್ತದೆಯಾದರೂ ಇದನ್ನು ಮಹಾ ವಿಷ್ಣುವಿಗೆ ಶಿಫಾರಸು ಮಾಡುವುದಿಲ್ಲ. ಒಮ್ಮೆ, ಏಕಾದಶಿಯಂದು ಜಗದೀಶ ಮತ್ತು ಹಿರಣ್ಯ ಪಂಡಿತರ ಮನೆಯಲ್ಲಿ ಶ್ರೀ ವಿಷ್ಣುವಿಗೆ ಸಮರ್ಪಿಸಲು ವಿಶೇಷ ಪ್ರಸಾದವನ್ನು ಸಿದ್ಧ ಪಡಿಸಲು ತಯ್ಯಾರಿ ನಡೆದಿತ್ತು. ತನಗೆ ರೋಗ ಲಕ್ಷಣಗಳಿವೆ, ಅವರ ಮನೆಗೆ ತೆರಳಿ ವಿಷ್ಣು ಪ್ರಸಾದ ಕೇಳಿ ತರಬೇಕೆಂದು ಶ್ರೀ ಚೈತನ್ಯ ಮಹಾಪ್ರಭು ತಮ್ಮ ತಂದೆಗೆ ಹೇಳಿದರು. ಜಗದೀಶ ಮತ್ತು ಹಿರಣ್ಯ ಪಂಡಿತರ ಮನೆಯು ಶ್ರೀ ಮಿಶ್ರರ ಮನೆಯಿಂದ ಎರಡು ಮೈಲಿ ದೂರದಲ್ಲಿತ್ತು. ಆದುದರಿಂದ, ಶ್ರೀ ಚೈತನ್ಯ ಮಹಾಪ್ರಭುಗಳ ಕೋರಿಕೆಯಂತೆ ಶ್ರೀ ಮಿಶ್ರರು ಅಲ್ಲಿಗೆ ಹೋದಾಗ ಆ ಬ್ರಾಹ್ಮಣರಿಗೆ ಅಚ್ಚರಿಯಾಯಿತು. ಶ್ರೀ ವಿಷ್ಣುವಿಗೆ ವಿಶೇಷ ಪ್ರಸಾದ ಸಿದ್ಧವಾಗುತ್ತಿದೆಯೆಂದು ಬಾಲಕನಿಗೆ ಹೇಗೆ ಅರ್ಥವಾಯಿತು? ನಿಮಾಯ್‌ಗೆ ಅಸಾಧಾರಣವಾದ ಆಧ್ಯಾತ್ಮಿಕ ಶಕ್ತಿ ಇದೆಯೆಂದು ಅವರು ತತ್‌ಕ್ಷಣ ನಿಶ್ಚಯಿಸಿಕೊಂಡರು. ಇಲ್ಲವಾದರೆ, ತಾವು ವಿಶೇಷ ಪ್ರಸಾದ ಸಿದ್ಧಪಡಿಸುತ್ತಿರುವುದು ಅವನಿಗೆ ಹೇಗೆ ತಿಳಿಯುತ್ತಿತ್ತು? ಆದುದರಿಂದ ಅವರು ತತ್‌ಕ್ಷಣ ಶ್ರೀ ಮಿಶ್ರರ ಮೂಲಕ ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಆಹಾರ ಕಳುಹಿಸಿಕೊಟ್ಟರು. ವಿಷ್ಣು ಪ್ರಸಾದವನ್ನು ಸೇವಿಸಿದ ಕೂಡಲೇ ನಿಮಾಯ್ ರೋಗ ವಾಸಿಯಾಯಿತು. ಅವನು ಪ್ರಸಾದವನ್ನು ತನ್ನ ಮಿತ್ರರಿಗೂ ಹಂಚಿದ.

ಬೆಳೆಯುತ್ತ, ನಿಮಾಯ್ ನವದ್ವೀಪದ ಇತರೆ ಬ್ರಾಹ್ಮಣರ ಪುತ್ರರಂತೆ ತಾನೂ ತಾಳ್ಮೆಯಿಲ್ಲದ  ಸ್ಥಿತಿಯಲ್ಲಿ ಮುಳುಗಿ ಹೋಗುತ್ತಿದ್ದ. ಅವನನ್ನು ಯಾರೂ ನಿರ್ಬಂಸುವಂತಿರಲಿಲ್ಲ, ಅವನು ತನ್ನ ಮಿತ್ರರ ಜೊತೆ ಸ್ವತಂತ್ರವಾಗಿ ಅಡ್ಡಾಡುತ್ತಿದ್ದ. ಯಾವುದಾದರೂ ಹುಡುಗನನ್ನು ಭೇಟಿ ಮಾಡಿದಾಗ, ಅವನನ್ನು ತಮಾಷೆ ಮಾಡಿ ಕೆರಳಿಸುತ್ತಿದ್ದ. ಇಬ್ಬರಿಗೂ ಜಗಳವಾಗುತ್ತಿತ್ತು. ನಿಮಾಯ್ ಹೆಚ್ಚು ಬಲಶಾಲಿ- ಯಾಗಿದ್ದರಿಂದ ನಿಮಾಯ್ ಮತ್ತು ಅವನ ಮಿತ್ರರೇ ಯಾವಾಗಲೂ ಗೆಲ್ಲುತ್ತಿದ್ದುದು; ಪ್ರತಿರ್ಸ್ಪಗಳು ಅನಿವಾರ್ಯವಾಗಿ ಸೋತು ಸುಣ್ಣವಾಗಿ ಮರಳುತ್ತಿದ್ದರು. ಅವನ ದೇಹ ಬೂದು ಬಣ್ಣದ ಧೂಳಿನಿಂದ ಮುಚ್ಚಿ ಅದರ ಮೇಲೆ ಕಪ್ಪು ಶಾಯಿಯ ಚುಕ್ಕೆ… ನಿಮಾಯ್ ಎಷ್ಟು ಮೋಹಕವಾಗಿ ಕಾಣುತ್ತಿದ್ದ!

ಪ್ರತಿದಿನ ಪಾಠ ಮುಗಿದ ಮೇಲೆ, ಮಧ್ಯಾಹ್ನ, ನಿಮಾಯ್ ಮತ್ತು ಮಿತ್ರರು ಗಂಗೆಯಲ್ಲಿ ಸ್ನಾನ ಮಾಡಲು ತೆರಳುತ್ತಿದ್ದರು; ಆನಂದ ಸಾಗರದಲ್ಲಿ ಮುಳುಗಿಬಿಡುತ್ತಿದ್ದರು. ಅವರ ಜಲ ಕ್ರೀಡೆಗೆ ಮಿತಿ ಇರಲಿಲ್ಲ. ಗಂಗಾ ನದಿ ನೀರಿನಲ್ಲಿ ಧುಮುಕಿ ಒಬ್ಬರಿಗೊಬ್ಬರು ನೀರೆರೆಚುತ್ತ ಆಟದಲ್ಲಿ ತಲ್ಲೀನರಾಗುತ್ತಿದ್ದರು.

ಆ ದಿನಗಳ ನದಿಯಾದ ವೈಭವವನ್ನು ಯಾರು ವರ್ಣಿಸಬಲ್ಲರು? ನದಿಯ ಸ್ನಾನಘಟ್ಟಗಳಲ್ಲಿ ನೂರಾರು ಜನರು ಸೇರುತ್ತಿದ್ದರು. ಸ್ನಾನಘಟ್ಟಗಳಿಗೆ ಎಷ್ಟು ವಿಭಿನ್ನ ಜನರು ಬರುತ್ತಿದ್ದರು ಎಂಬ ಜಾಡು ಹಿಡಿಯುವುದು ಅಸಾಧ್ಯವಾಗಿತ್ತು. ಕೇಸರಿ ವಸ್ತ್ರದ ಬೈರಾಗಿಗಳು, ಗೃಹಸ್ಥರು, ಶಾಂತಿಯುತ ಮಹನೀಯರು, ಮಕ್ಕಳು ಎಲ್ಲರೂ ಅಲ್ಲಿಗೆ ಸ್ನಾನ ಮಾಡಲು ಬರುತ್ತಿದ್ದರು.

ನಿಮಾಯ್  ತನ್ನ ಮಿತ್ರರೊಂದಿಗೆ ಅದ್ಭುತವಾದ ನೀರಿನಾಟ ಆಡುತ್ತಿದ್ದ. ಕೆಲವು ವೇಳೆ ಗಂಗೆಯ ಪ್ರವಾಹದಲ್ಲಿ ತೇಲಾಡುತ್ತ, ಜಲಕ್ರೀಡೆಯ ನೆಪದಲ್ಲಿ ಅವನು ತನ್ನ ದೈವಿಕವಾದ ಪಾದಕಮಲಗಳಿಂದ ತನ್ನ ಸಮೀಪ ಇದ್ದವರಿಗೆ ನೀರು ಚುಮುಕಿಸುತ್ತಿದ್ದ, ತನ್ನ ಕೃಪೆಯನ್ನು ಈ ರೀತಿ ತೋರುತ್ತ. ಇಷ್ಟು ತುಂಟನಾಗಬೇಡ ಎಂದು ಜನರು ಎಚ್ಚರಿಸಿದರೂ ಅವನು ಯಾರಿಗೆ ಕಿವಿಗೊಡುತ್ತಾನೆ? ಅವನು ಅತಿ ವೇಗದ ಈಜುಗಾರನಾದ್ದರಿಂದ ಯಾರಿಗೂ ಅವನನ್ನು ಹಿಡಿಯಲಾಗುತ್ತಿರಲಿಲ್ಲ.

ನಿಮಾಯ್ ಮೇಲೆ ದೂರು:

ಅವನ ತುಂಟತನ ಎಷ್ಟಿತೆಂದರೆ, ಅವನು ಎಲ್ಲರೂ ಅನೇಕ ಬಾರಿ ಸ್ನಾನಕ್ಕಿಳಿಯುವಂತೆ ಮಾಡುತ್ತಿದ್ದ. ಅದೂ ಹೇಗೆ? ಅವರನ್ನು ಮುಟ್ಟಿ ಕಲುಷಿತಗೊಳಿಸಿಯೋ ಅವರ ಮೇಲೆ ಉಗಿಯುತ್ತಲೋ! ಅವನನ್ನು ಗದರಿಸಿಕೊಳ್ಳಲು ಅವರಿಗೆ ಅವನನ್ನು ಹಿಡಿಯಲೇ ಆಗುತ್ತಿರಲಿಲ್ಲ. ಕುಪಿತ, ಉದ್ರೇಕಿತ ಬ್ರಾಹ್ಮಣರು ಅವನ ತಂದೆ ಮೇಲೆ ದಾಳಿ ಇಡುತ್ತಿದ್ದರು. ‘ಪ್ರೀತಿಯ ಮಿಶ್ರ, ನಮ್ಮ ಒಳ್ಳೆಯ ಮಿತ್ರನೇ, ದಯೆಯಿಟ್ಟು ಕೇಳು. ನಿನ್ನ ಮಗನ ದುರ್ವರ್ತನೆ ಬಗೆಗೆ ದೂರು ನೀಡಲು ಬಂದಿದ್ದೇನೆ. ಗಂಗೆಯಲ್ಲಿ ನಮ್ಮ ನಿತ್ಯದ ವಿ ವಿಧಾನಗಳನ್ನು ನೆರವೇರಿಸಲು ಅವನು ಅವಕಾಶ ನೀಡುತ್ತಿಲ್ಲ’ ಎಂದು ಒಬ್ಬರು ದೂರಿದರೆ, ಮತ್ತೊಬ್ಬರು, ‘ಅವನು ನಮ್ಮ ಮೇಲೆ ನೀರು ಚುಮುಕಿಸಿ ನಮ್ಮ ಧ್ಯಾನಕ್ಕೆ ತೊಂದರೆ ಉಂಟುಮಾಡುತ್ತಿದ್ದಾನೆ.’ ಎಂದು ದೂಷಿಸಿದರು.

ನಿಮಾಯ್ ಹೇಳುತ್ತಾನೆ : ‘ನೀವು ಯಾರನ್ನು ಧ್ಯಾನಿಸುತ್ತಿದ್ದೀರಾ? ಸುಮ್ಮನೆ ನನ್ನತ್ತ ನೋಡಿ. ಈ ಕಲಿಯುಗದಲ್ಲಿ ನಾನು ನೇರವಾಗಿ , ನಾನೇ ಶ್ರೀ ನಾರಾಯಣ.’ ಅವರೆಲ್ಲ ವಿಧವಿಧವಾದ ದೂರುಗಳನ್ನು ಹೊತ್ತು ಬರುತ್ತಿದ್ದರು. ಒಬ್ಬ ಹೇಳಿದ, ‘ಅವನು ನನ್ನ ಶಿವಲಿಂಗ ಕದ್ದ’ ಮತ್ತೊಬ್ಬ, ‘ಅವನು ನನ್ನ ಉಡುಪು ತೆಗೆದುಕೊಂಡು ಓಡಿದ’ ಮತ್ತೂ ಒಬ್ಬ , ‘ಶ್ರೀ ವಿಷ್ಣುವಿನ ಪೂಜೆಗೆ ನಾನು ಸಿದ್ಧಪಡಿಸಿದ್ದೆ. ಹೂವು, ದೂರ್ವೆ ಹುಲ್ಲು, ಗಂಧ ಮತ್ತು ಶ್ರೀ ವಿಷ್ಣುವಿಗೆ ಪೀಠ ಮುಂತಾದವನ್ನು ಸಂಗ್ರಹಿಸಿ ಒಂದೆಡೆ ಇಟ್ಟಿದ್ದೆ. ನಾನು ಸ್ನಾನಕ್ಕೆ ಹೋದಾಗ ನಿಮಾಯ್ ಶ್ರೀ ವಿಷ್ಣುವಿನ ಪೀಠದ ಮೇಲೆ ಕೂತು, ನೈವೇದ್ಯವನ್ನು ಭಕ್ಷಿಸಿ ಉಳಿದ ವಸ್ತುಗಳನ್ನು ಎಸೆದುಬಿಡುತ್ತಾನೆ.’ ಆಗ ನಿಮಾಯ್ ‘ನೀವು ಯಾಕೆ ಅಷ್ಟು ಸಂತಾಪ ಪಟ್ಟುಕೊಳ್ಳುತ್ತೀರಾ? ನೀವು ಪೂಜಿಸುವ ಭಗವಂತನೇ ನೀವು ಅರ್ಪಿಸಬೇಕೆಂದಿದ್ದ ನೈವೇದ್ಯವನ್ನು ಸೇವಿಸಿದ್ದಾನೆ’ ಎನ್ನುತ್ತಿದ್ದ.

ಜನರು ಅವ್ಯಾಹತವಾಗಿ ದೂರುತ್ತಲೇ ಇದ್ದರು. ಒಬ್ಬ ಬ್ರಾಹ್ಮಣ ಹೇಳಿದ, ‘ಗಾಯತ್ರಿ ಮಂತ್ರ ಪಠಿಸಲು ನಾನು ನೀರಿಗಿಳಿದೆ. ಎಲ್ಲಿಂದಲೋ, ನೀರಿನೊಳಗಿನಿಂದ ಬಂದ ನಿಮಾಯ್ ನನ್ನ ಕಾಲು ಎಳೆದ’ ಮತ್ತೊಬ್ಬ  ಹೇಳಿದ : ‘ನನ್ನ ಬಟ್ಟೆ ಮತ್ತು ಹೂವು ಒಯ್ಯಲಾಗಿದೆ’ ಮತ್ತೊಬ್ಬರ ದೂರು : ‘ಅವನು ನನ್ನ ಭಗವದ್ಗೀತೆ ಗ್ರಂಥವನ್ನು ಕದ್ದಿದ್ದಾನೆ.’ ‘ಸ್ನಾನ ಮಾಡಿದವರ ಮೇಲೆ ಮರಳು ಹಾಕುತ್ತಾನೆ. ಅವನ ಎಲ್ಲ ತುಂಟ ಮಿತ್ರರು ಅವನೊಡಗೂಡುತ್ತಾರೆ. ಅವನ ಅತ್ಯಂತ ಕೆಟ್ಟ ತಂತ್ರವೆಂದರೆ, ಅವನು ಸ್ತ್ರೀ ಪುರುಷರ ಬಟ್ಟೆಗಳನ್ನು ಮಿಶ್ರ ಮಾಡಿ ಅವರು ಉಡುಪು ಹಾಕಿಕೊಳ್ಳಬೇಕೆಂದಾಗ ಗೊಂದಲ ಸೃಷ್ಟಿಸುತ್ತಾನೆ.’

‘ಪ್ರೀತಿಯ ಜಗನ್ನಾಥ ಮಿಶ್ರ, ನೀವು ಉದಾರಿಗಳು, ಸ್ನೇಹ ಪರರು. ಆದರೆ ನಿಮ್ಮ ಮಗ ನಿಮಾಯ್ ದಿನ ನಿತ್ಯವೂ ಈ ರೀತಿಯ ತುಂಟತನ ಮಾಡುತ್ತಾನೆ. ಅವನು ಮಧ್ಯಾಹ್ನ ಎರಡು ಗಂಟೆವರೆಗೂ ನೀರಿನಲ್ಲೇ ಇರುತ್ತಾನೆ, ಸ್ನಾನಕ್ಕೆ ಬಂದವರನ್ನೆಲ್ಲ ಚುಡಾಯಿಸುತ್ತಾನೆ. ಹೇಗೆ ಅವನು ತನ್ನ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ನೀವು ನಿರೀಕ್ಷಿಸುತ್ತೀರಿ?’

ಈ ಮಧ್ಯೆ, ನೆರೆಹೊರೆಯ ಕೋಪಗೊಂಡ ಅನೇಕ ಹುಡುಗಿಯರು ಶಚೀದೇವಿ ಬಳಿಗೆ ಬಂದರು. ಅವರು ಗಂಭೀರವಾದ ದೂರುಗಳನ್ನು ತಂದಿದ್ದರು. ‘ದಯೆಯಿಟ್ಟು, ನಿಮ್ಮ ಮಗನ ಪ್ರತಾಪವನ್ನು ಕೇಳಿ, ಗೌರವಾನ್ವಿತ ಮಾತೆ. ಅವನು ನಮ್ಮ ಉಡುಪುಗಳನ್ನು ಕದಿಯುತ್ತಾನೆ ಹಾಗೂ ನಮ್ಮೊಂದಿಗೆ ಅತ್ಯಸಹ್ಯ ಶಬ್ದಗಳನ್ನು ಬಳಸುತ್ತಾನೆ.  ಅವನ ಮಾತುಗಳನ್ನು ಸರಿಪಡಿಸಲು ಹೋದರೆ, ನಮ್ಮೊಂದಿಗೆ ಜಗಳಕ್ಕೆ ಬರುತ್ತಾನೆ ಮತ್ತು ನೀರು ಎರಚುತ್ತಾನೆ. ನಾವು ಧಾರ್ಮಿಕ ವಿಗಾಗಿ ಗಂಗೆಗೆ ಅರ್ಪಿಸಲು ಹಣ್ಣು ಹೂವು ತರುತ್ತೇವೆ. ಆದರೆ ಅವನು ಅದನ್ನು ಎಲ್ಲೆಡೆ ಹರಡಿ ಎಲ್ಲವನ್ನೂ ಹಾಳು ಮಾಡುತ್ತಾನೆ. ನಮ್ಮ ಶಾಸ್ತ್ರೋಕ್ತ ಸ್ನಾನ ಮುಗಿಯುವುದನ್ನೇ ಕಾಯುತ್ತಾನೆ. ಅನಂತರ ನಮ್ಮ ಮೇಲೆ ಮರಳು ಎಸೆಯುತ್ತಾನೆ. ನಿಮ್ಮ ಮಗ ನಿಮಾಯ್ ಕಳ್ಳನಂತೆ ಹಿಂದಿನಿಂದ ಬಂದು ನಮ್ಮ ಕಿವಿಯಲ್ಲಿ ಕೂಗಿ ಭಯಪಡಿಸುತ್ತಾನೆ.’ ಮತ್ತೊಬ್ಬರು ಹೇಳಿದರು : ‘ನಿಮಾಯ್ ಬಾಯಿತುಂಬಾ ನೀರು ತುಂಬಿಕೊಂಡು ನನ್ನ ಮುಖದ ಮೇಲೆ ಉಗುಳಿದ. ಈ ಒಕಡ ಬೀಜಗಳನ್ನು ನನ್ನ ಕೂದಲ ಮೇಲೆ ಎಸೆದ. ಅದನ್ನು ತೆಗೆಯುವುದು ಎಷ್ಟು ಕಷ್ಟ!’ ಮತ್ತೊಂದು ಧ್ವನಿ ದೂರಿತು. ‘ನಿಮಾಯ್ ನನ್ನನ್ನು ಮದುವೆಯಾಗುವುದಾಗಿ ಹೇಳುತ್ತಾನೆ’. ‘ಪ್ರತಿದಿನ ಅವನು ಹೀಗೆ ವರ್ತಿಸುತ್ತಾನೆ. ನಿಮ್ಮ ಮಗ ರಾಜಕುಮಾರನೆಂದು ನೀವು ಭಾವಿಸುವಿರಾ?’

‘ನಿಮ್ಮ ಮಗ ನಿಮಾಯ್ ಈಗ ಮಾಡುತ್ತಿರುವುದನ್ನೆಲ್ಲ ಹಲವಾರು ವರ್ಷಗಳ ಹಿಂದೆ ನಂದ ಮಹಾರಾಜನ ಮಗ ಗೋಪಾಲ ಕೃಷ್ಣ ಮಾಡಿದ್ದ. ನಾವು ಕೃಷ್ಣನ ಕತೆ ಕೇಳಿದ್ದೇವೆ. ನಾವು ಈ ಎಲ್ಲ ದೂರುಗಳನ್ನು ನಮ್ಮ ಪೋಷಕರಿಗೆ ವರದಿ ಮಾಡಿದರೆ, ಅವರು ಖಂಡಿತ ನಿಮ್ಮೊಂದಿಗೆ ಜಗಳವಾಡುತ್ತಾರೆ. ನೀವು ತತ್‌ಕ್ಷಣ ನಿಮ್ಮ ಮಗನನ್ನು ತಿದ್ದಬೇಕು. ಅವನ ಈ ವರ್ತನೆ, ನದಿಯಾದಂತಹ ಪಟ್ಟಣದಲ್ಲಿ  ಸ್ವೀಕಾರವಾಗುವುದಿಲ್ಲ!,

ಶ್ರೀ ಚೈತನ್ಯ ಮಹಾಪ್ರಭುವಿನ ತಾಯಿ ನಗೆ ಮುಖದಿಂದ ಆ ಹುಡುಗಿಯರನ್ನು ಆಲಿಂಗಿಸಿಕೊಂಡು ಸಾಂತ್ವನಗೊಳಿಸಲು ಪ್ರಯತ್ನಿಸಿದಳು: ‘ನಿಮಾಯ್ ಮನೆಗೆ ಬಂದ ಕೂಡಲೇ ನಾನು ಅವನಿಗೆ ಹೊಡೆದು ಕಟ್ಟಿಹಾಕುವೆ. ಇದರಿಂದ ಅವನು ಮತ್ತೆ ಹೊರಗೆ ಹೋಗಿ ಯಾರಿಗೂ ಹೆದರಿಸಲಾರ.’ ಎಲ್ಲ ಹುಡುಗಿಯರು ಶಚೀದೇವಿಗೆ ನಮಸ್ಕರಿಸಿ ಅವರ ಪಾದ ಧೂಳಿಯನ್ನು ಇಟ್ಟುಕೊಂಡು ಮತ್ತೆ ಸ್ನಾನ ಮಾಡಲು ಗಂಗಾ ನದಿಗೆ ತೆರಳಿದರು. ನಿಮಾಯ್‌ನ ತುಂಟತನದಿಂದ ನೋವು ಅನುಭವಿಸಿದ್ದರೂ ಪ್ರತಿಯೊಬ್ಬರಿಗೂ ಅವನ ಉಪಸ್ಥಿತಿ ಸಂತೃಪ್ತಿ ತಂದುಕೊಟ್ಟಿತ್ತು.

ಪ್ರತಿಯೊಬ್ಬರ ಮತ್ತು ಪ್ರತಿಯೊಂದರ ಪರಮ ನಿಯಂತ್ರಕ ಶ್ರೀ ಗೌರಾಂಗನಿಗೆ ಶ್ರೀ ಮಿಶ್ರ ಕೋಪದಿಂದ ತನ್ನನ್ನು ಹುಡುಕುತ್ತಿರುವುದು ತಿಳಿದಿತ್ತು. ಶ್ರೀ ಗೌರಸುಂದರ ತನ್ನ ಅದ್ಭುತವಾದ ನೀರಿನಾಟವನ್ನು ಮುಂದುವರಿಸಿದ. ಎಲ್ಲ ಹುಡುಗರ ಮಧ್ಯೆ ಅವನು ಹೆಚ್ಚು ಆಕರ್ಷಕ. ಹುಡುಗಿಯರಿಗೆ ಅವನ ಬಗ್ಗೆ ಅನುಕಂಪ. ಅವರು ಅವನನ್ನು ಎಚ್ಚರಿಸಿದರು: ‘ವಿಶ್ವಂಭರ ಕೇಳು, ಕೋಪಗೊಂಡಿರುವ ನಿನ್ನ ತಂದೆ ಈ ಕಡೆಯೇ ಬರುತ್ತಿದ್ದಾರೆ. ಈಗಲೇ ತಪ್ಪಿಸಿಕೊಂಡು ಓಡು!’ ಮಿತ್ರರೊಂದಿಗೆ ಆಡುತ್ತಿದ್ದ ಮಗನನ್ನು ಶ್ರೀ ಮಿಶ್ರ ಹುಡುಕತೊಡಗಿದರು. ಆ ಬ್ರಾಹ್ಮಣ ಬಾಲಕಿಯರು ಭಯದಿಂದ ಓಡಿಹೋದರು. ನಿಮಾಯ್ ಆಗಲೇ ತನ್ನ ಮಿತ್ರರಿಗೆ ಸಲಹೆ ನೀಡಿದ್ದ. ತಂದೆ ಬಂದು ವಿಚಾರಿಸಿದರೆ ಹೀಗೆ ಹೇಳು : ‘ನಿಮ್ಮ ಮಗ ನಮ್ಮೊಡನೆ ಸ್ನಾನಕ್ಕೆ ಬರಲಿಲ್ಲ. ಪಾಠದ ಅನಂತರ ಅವನು ಮನಗೆ ಹೋದ. ವಾಸ್ತವವಾಗಿ ನಾವೇ ಅವನಿಗಾಗಿ ಕಾಯುತ್ತಿದ್ದೇವೆ.’

ನಿಮಾಯ್ ಬೇರೆ ರಸ್ತೆಯಲ್ಲಿ ಮನೆಗೆ ಹಿಂತಿರುಗಿದ. ಇತ್ತ ಶ್ರೀ ಮಿಶ್ರ ಗಂಗಾ ನದಿ ತಟಕ್ಕೆ, ಸ್ನಾನ ಘಟ್ಟಕ್ಕೆ, ಬಂದರು. ಅವರು ಸುತ್ತಮುತ್ತ ದೃಷ್ಟಿ ಹರಿಸಿದರು. ಅವನು ಎಲ್ಲೂ ಕಾಣಲಿಲ್ಲ. ‘ವಿಶ್ವಂಭರ ಎಲ್ಲಿಗೆ ಹೋದ?’ ಎಂದು ಕೋಪದಿಂದ ಅಲ್ಲಿದ್ದ ಹುಡುಗರನ್ನು ಕೇಳಿದರು. ಬಾಲಕರು ಉತ್ತರಿಸಿದರು : ‘ಈವತ್ತು ಅವನು ಸ್ನಾನಕ್ಕೆ ಬರಲೇ ಇಲ್ಲ. ಪಾಠದನಂತರ ಅವನು ತನ್ನ ನಿತ್ಯದ ಮಾರ್ಗದಲ್ಲಿ ಮನೆಗೆ ಹೋದ.. ನಾವು ಅವನಿಗಾಗಿ ಕಾಯುತ್ತಿದ್ದೇವೆ.’ ಶ್ರೀ ಮಿಶ್ರ ತಮ್ಮ ಹುಡುಕುವ ಕಾರ್ಯ ಮುಂದುವರಿಸಿದರು. ಆದರೆ ನಿಮಾಯ್ ಸುಳಿವೇ ಇಲ್ಲ. ಅವರು ಕೋಪದಿಂದ ಅಲ್ಲೇ ನಿಂತರು.

ನಿಮಾಯ್ ವಿರುದ್ಧ ದೂರು ನೀಡಿದ್ದ ಬ್ರಾಹ್ಮಣರು ಈಗ ಶ್ರೀ ಮಿಶ್ರ ಅವರ ಬಳಿಗೆ ಬಂದು ಹೇಳಿದರು: ‘ವಿಶ್ವಂಭರ ಭಯದಿಂದ ಮನೆಗೆ ಓಡಿಹೋಗಿದ್ದಾನೆ. ನಾವು ನಿಮ್ಮೊಂದಿಗೆ ಮನೆಗೆ ಬರುತ್ತೇವೆ. ಇಲ್ಲದಿದ್ದರೆ, ಅನಂತರ ಪಶ್ಚಾತ್ತಾಪ ಪಡುವಂತೆ ಅವನಿಗೆ ಏನಾದರೂ ಮಾಡಬಹುದು. ನಿಮಾಯ್ ಈ ರೀತಿಯ ತುಂಟತನವನ್ನು ಮತ್ತೆ ಮಾಡಿದರೆ ನಾವೇ ಅವನನ್ನು ಹಿಡಿದು ನಿಮ್ಮಲ್ಲಿಗೆ ಕರೆತರುತ್ತೇವೆ. ನಿಮ್ಮ ಮನೆಯಲ್ಲಿ ನಾವು ಮಾಡಿದ ದೂರುಗಳೆಲ್ಲ ತಮಾಷೆಗಾಗಿ. ವಾಸ್ತವವಾಗಿ ನಿಮ್ಮ ಅದೃಷ್ಟವನ್ನು ಮೂರೂ ಲೋಕದಲ್ಲಿ ಸರಿಗಟ್ಟಲಾಗುವುದಿಲ್ಲ. ನಿಮಾಯ್ ಎಂತಹ ಮುದ್ದಾದ ಮಗನೆಂದರೆ, ಅವನ ಕುಟುಂಬ ಎಂದಿಗೂ ಹಸಿವು, ಬಾಯಾರಿಕೆ, ದುಃಖ ಅಥವಾ ಇತರೆ ಲೌಕಿಕ ಸಂಕಷ್ಟಗಳ ಸ್ಪರ್ಶದಿಂದ ಮುಕ್ತವಾಗಿರುತ್ತದೆ. ನಿಮ್ಮ ಮಗ ದೇವೋತ್ತಮ. ಅವನ ಪಾದ ಕಮಲಗಳಿಗೆ ಸೇವೆ ಸಲ್ಲಿಸಲು ನೀವೇ ಅದೃಷ್ಟವಂತರು. ನಾವು ಸದಾ ವಿಶ್ವಂಭರನ ನೆನಪನ್ನು ನಮ್ಮ ಹೃದಯದಲ್ಲಿ ಇಟ್ಟುಕೊಂಡಿರುತ್ತೇವೆ, ಅವನು ಅಸಂಖ್ಯ ತಪ್ಪುಗಳನ್ನು ಮಾಡಿದರೂ ಕೂಡ.’

ನದಿಯಾದ ಜನರು ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ಶಾಶ್ವತ ಭಕ್ತರು ಮತ್ತು ಸಂಗಾತಿಗಳು. ಈ ಕಾರಣದಿಂದಲೇ, ಭಗವಂತನಿಗೆ ಅಲೌಕಿಕ ಸೇವೆ ಸಲ್ಲಿಸಲು ಅಗತ್ಯವಾದ ಪರಮ ಜ್ಞಾನ ಅವರಿಗಿತ್ತು. ಈ ರೀತಿ ದೇವೋತ್ತಮನು ತನ್ನ ನಿಕಟ ಸೇವಕರ ಜೊತೆ ವೈವಿಧ್ಯಮಯವಾದ ಅಲೌಕಿಕ ಲೀಲೆಗಳನ್ನು ಪ್ರದರ್ಶಿಸಿದ. ಭಗವಂತನ ಅಂತಹ ಲೀಲೆಗಳನ್ನು ಮಾಮೂಲಿ, ಲೌಕಿಕ ಜನರು ಅರ್ಥ ಮಾಡಿಕೊಳ್ಳಲಾರರು.

ಶ್ರೀ ಮಿಶ್ರ ಹೇಳಿದರು: ‘ನಿಮಾಯ್ ನಿಮ್ಮೆಲ್ಲರ ಮಗ. ಅವನ ಅಪರಾಧಗಳಿಂದ ನಿಮಗೆಲ್ಲ ತೊಂದರೆಯಾದರೆ, ನಾನು ನಿಮಗೆ ವಚನದಲ್ಲಿ ಬದ್ಧನಾಗಿದ್ದೇನೆ. ನಾನು ನಿಮ್ಮ ಕ್ಷಮೆ ಕೇಳುವೆ.’ ಶ್ರೀ ಮಿಶ್ರ ಅವರೆಲ್ಲರನ್ನೂ ಆಲಿಂಗಿಸಿ, ವಂದಿಸಿ ತೃಪ್ತಿಯಿಂದ ಮನೆಗೆ ತೆರಳಿದರು.

ನಿಮಾಯ್ ಮಾಯೆ:

ದೇವೋತ್ತಮ ಪರಮ ಪುರುಷ ಶ್ರೀ ವಿಶ್ವಂಭರ ಬೇರೆ ರಸ್ತೆಯಲ್ಲಿ ಮನೆಗೆ ತೆರಳಿದ್ದ. ಚಂದ್ರನಂತೆ  ಹೊಳೆಯುತ್ತಿದ್ದ ಅವನ ಕೈಗಳಲ್ಲಿ ಸುಂದರವಾದ ಪುಸ್ತಕಗಳಿದ್ದವು. ನಿಮಾಯ್ ದೇಹದ ಮೇಲೆ ಬರೆಯುವ ಶಾಯಿಯ ಚುಕ್ಕೆಗಳು ಅವನ ಚಿನ್ನದಂತಹ ಹೊಳೆಯುವ ಮೈ ಬಣ್ಣಕ್ಕೆ ಅಲಂಕಾರದಂತೆ ಇತ್ತು. ಸುವಾಸಿತ ಚಂಪಕ ಹೂವು ದುಂಬಿಗಳನ್ನು ಆಕರ್ಷಿಸಿದಂತೆ ಇತ್ತು. ನಿಮಾಯ್ ತನ್ನ  ತಾಯಿಯನ್ನು ಕರೆದ.‘ಅಮ್ಮಾ, ನನಗೆ ಎಣ್ಣೆ ಕೊಡು. ನಾನು ಸ್ನಾನಕ್ಕೆ ಹೋಗಬೇಕು.’ ತಾಯಿ ಶಚೀದೇವಿಯ ಸಂತೋಷಕ್ಕೆ ಪಾರವೇ ಇಲ್ಲ.  ನಿಮಾಯ್ ಸ್ನಾನ ಮಾಡಿದ ಕುರುಹು ಎಳ್ಳಷ್ಟೂ ಕಾಣಲಿಲ್ಲ. ನಿಮಾಯ್‌ಗೆ ಎಣ್ಣೆ ಕೊಡುತ್ತ ಅವಳು ಯೋಚಿಸಿದಳು. ‘ಆ ಬ್ರಾಹ್ಮಣರು ಮತ್ತು ಹುಡುಗಿಯರು ಹೇಳಿದ್ದೇನು? ಅವನ ಇಡೀ ದೇಹ ಶಾಯಿಯ ಚುಕ್ಕೆಯಿಂದ ಕೂಡಿದೆ. ಅವನು ಶಾಲೆಗೆ ಹಾಕಿಕೊಂಡು ಹೋಗಿದ್ದ ಉಡುಪು ಈಗಲೂ ಅವನ ಮೈಮೇಲಿದೆ.’

ಅದೇ ಸಮಯದಲ್ಲಿ ಜಗನ್ನಾಥ ಮಿಶ್ರ ಅವರು ಅಲ್ಲಿಗೆ ಬಂದರು. ವಿಶ್ವಂಭರ ಅವರ ತೊಡೆಯೇರಿದ. ಶ್ರೀ ಮಿಶ್ರ ಆ ಕ್ಷಣ ಭಗವಂತನ ಪ್ರೀತಿಯ ಆಲಿಂಗನದಿಂದ ಎಲ್ಲ ಬಾಹ್ಯ, ಅಲೌಕಿಕ ಜೀವನ ರೀತಿಯನ್ನು ಮರೆತರು. ಮಗನ ನೋಟದಿಂದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ನಿಮಾಯ್ ದೇಹ ಧೂಳಿನಿಂದ ಆವೃತವಾಗಿ ಅವನು ಸ್ನಾನ ಮಾಡಿದ ಲಕ್ಷಣ ಕಾಣಲಿಲ್ಲ. ಶ್ರೀ ಮಿಶ್ರ ಚಕಿತಗೊಂಡರು. ಅವರು ಹೇಳಿದರು:  ‘ವಿಶ್ವಂಭರ, ನೀನೆಂತಹ ಜಾಣ ಮಗು, ನೀನು ಜನರಿಗೆ ಶಾಂತಿಯಿಂದ ಸ್ನಾನ ಮಾಡಲೂ ಬಿಡುವುದಿಲ್ಲ? ಶ್ರೀ ವಿಷ್ಣುವನ್ನು ಪೂಜಿಸಲು ಜನರು ಮಾಡಿಕೊಂಡಿರುವ ವ್ಯವಸ್ಥೆಯನ್ನು ನೀನು ಯಾಕೆ ಹಾಳು ಮಾಡುವೆ, ಕದಿಯುವೇ? ನಿನಗೆ, ಶ್ರೀ ವಿಷ್ಣು ಯಾರೆಂದು ತಿಳಿದಿದೆ, ಆದರೂ ಯಾವುದೇ ಭಯವಿಲ್ಲದೆ ನೀನು ಯಾಕೆ ಹೀಗೆ ಮಾಡುವೇ?’ ನಿಮಾಯ್ ಉತ್ತರಿಸಿದ : ‘ಈವತ್ತು ನಾನು ಇನ್ನೂ ಸ್ನಾನಕ್ಕೆ ಹೋಗಿಯೇ ಇಲ್ಲ. ನನ್ನ ಎಲ್ಲ ಮಿತ್ರರು ನನಗಿಂತ ಮೊದಲೇ ಹೋಗಿದ್ದಾರೆ. ಈ ಎಲ್ಲ ಜನರು ನನ್ನ ಜೊತೆ ಸರಿಯಾಗಿ ವರ್ತಿಸುತ್ತಿಲ್ಲ. ನಾನು ಅವರ ಬಳಿಗೆ ಹೋಗಿಲ್ಲವಾದರೂ ಅವರು ನನ್ನ ತಪ್ಪು ಎಂದು ಆರೋಪಿಸುತ್ತಾರೆ.. ಅವರು ಹೀಗೆ ತಪ್ಪು ಕಾಣುವುದನ್ನು ಮುಂದುವರಿಸಿದರೆ ಹಾಗೂ ಆರೋಪಿಸಿದರೆ, ನಾನು ಆಗ ನಿಜವಾಗಿಯೂ ದುರ್ವತನೆ ತೋರುವೆ, ಅವರಿಗೆ ತೊಂದರೆ ಉಂಟು ಮಾಡುವೆ.’ ನಸುನಕ್ಕ ಭಗವಂತ ಗಂಗಾ ನದಿಗೆ ತೆರಳಿ ಮಿತ್ರರನ್ನು ಕೂಡಿಕೊಂಡ. ಅವನ ತಮಾಷೆಯ ಕತೆ ಕೇಳಿ ಗೆಳೆಯರು ಜೋರಾಗಿ ನಗುತ್ತಾ ಅವನನ್ನು ಆಲಿಂಗಿಸಿಕೊಂಡರು. ‘ನೀನು ತುಂಬಾ ಜಾಣ, ನಿಮಾಯ್. ಈವತ್ತು ನೀನು ಭಾರಿ ಏಟಿನಿಂದ ತಪ್ಪಿಸಿಕೊಂಡೆ.’ ಎಂದು ಅವರೆಲ್ಲ ಅವನನ್ನು ಹೊಗಳಿದರು.

ನಿಮಾಯ್ ಮತ್ತೆ ನೀರಿನಾಟದಲ್ಲಿ ತಲ್ಲೀನನಾದ. ಮಿತ್ರರೊಂದಿಗೆ ಪುನಃ ಕ್ರೀಡೆಯಲ್ಲಿ ತೊಡಗಿಸಿಕೊಂಡ. ಇತ್ತ ಮನೆಯಲ್ಲಿ ಶಚೀಮಾತಾ ಮತ್ತು ಶ್ರೀ ಮಿಶ್ರ ಕೆಲ ವಿಷಯಗಳ ಬಗೆಗೆ ಗಂಭೀರವಾಗಿ ವಿಶ್ಲೇಷಿಸಿದರು. ನಿಮಾಯ್ ವಿರುದ್ಧ ಬಂದ ದೂರುಗಳೆಲ್ಲ ಖಂಡಿತ ಸುಳ್ಳುಗಳಲ್ಲ. ಆದರೆ ನಿಮಾಯ್ ಸ್ನಾನ ಮಾಡಿದ ಕುರುಹುಗಳಿರಲಿಲ್ಲ. ಎಲ್ಲವೂ ಹೇಗಿರಬೇಕೋ ಹಾಗೇ ಇತ್ತು. ಅವನ ದೇಹ ಧೂಳಿನಿಂದ ಕೂಡಿತ್ತು, ಅವನು ಅದೇ ಉಡುಗೆಯಲ್ಲಿದ್ದ, ಅವು ಒಣಗಿದ್ದವು. ಅವನ ಕೂದಲೂ ಒಣಗಿತ್ತು ಮತ್ತು ಅವನ ಬಳಿ ಅವನ ಪುಸ್ತಕಗಳಿದ್ದವು.

‘ನಮ್ಮ ವಿಶ್ವಂಭರ ಸಾಮಾನ್ಯ ಮನುಷ್ಯನೆಂದು ನನಗೆ ಅನಿಸುವುದಿಲ್ಲ. ಬಹುಶಃ, ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನು ತನ್ನ ಆಂತರಿಕ ಶಕ್ತಿಯಿಂದ ನಮ್ಮ ಮನೆಯಲ್ಲಿ ನಮ್ಮ ಮಗನಾಗಿ ಆವಿರ್ಭವಿಸಿರಬೇಕು. ಅಥವಾ ನಿಮಾಯ್ ಯಾವುದೋ ಶ್ರೇಷ್ಠ ಸಂತ ಪುರುಷನಾಗಿರಬೇಕು. ನನಗೆ ಏನೂ ತೋರುತ್ತಿಲ್ಲ.’ ಎಂದು ಮಾಣಿಕ್ಯದಂತಹ ಬ್ರಾಹ್ಮಣ ಶ್ರೀ ಮಿಶ್ರ ಗಂಭೀರವಾಗಿ ಚಿಂತಿಸಿದರು. ಶ್ರೀ ಮಿಶ್ರ ಮತ್ತು ಶಚೀದೇವಿಗೆ ತಮ್ಮ ಮಗನನ್ನು ನೋಡಿ ಎಷ್ಟು ಸಂತಸವಾಯಿತೆಂದರೆ ಅವರಿಗೆ ಅವರ ಎಲ್ಲ ಚಿಂತನ ಮಂಥನಗಳು ಮಾಯವಾದವು. ಅವರ ಹೃದಯದಲ್ಲಿ ನಿಮಾಯ್‌ಗಾಗಿ ಪ್ರೀತಿ ವಾತ್ಸಲ್ಯ ತುಂಬಿ ಅವರಿಗೆ ಬೇರೆಲ್ಲವೂ ಅಗಣ್ಯವಾಯಿತು. ಅವನ ಅನುಪಸ್ಥಿತಿ ಅವರಿಗೆ ಅತೀವ ನೋವು ತರುತ್ತಿತ್ತು – ನಿಮಾಯ್‌ನ ಎರಡು ತಾಸಿನ ಶಾಲೆ ಶಿಕ್ಷಣ ಈ ದಂಪತಿಗೆ ಎರಡು ಯುಗಗಳಂತೆ ಆಗುತ್ತಿತ್ತು.

ಶಚೀಮಾತಾ ಮತ್ತು ಶ್ರೀ ಮಿಶ್ರ ಅವರ ಪರಮ ಅದೃಷ್ಟವನ್ನು ವೇದಗಳು ಅಸಂಖ್ಯ ರೀತಿಯಲ್ಲಿ ಮತ್ತು ವರ್ಣಿಸಲಸಾಧ್ಯ ಮಾತಿನಲ್ಲಿ ವಿವರಿಸಬೇಕೆಂದರೆ, ಆ ಅದೃಷ್ಟವು ಊಹಿಸಲಸಾಧ್ಯವಾಗಿಯೆ ಉಳಿದುಬಿಡುತ್ತದೆ. ದೇವೋತ್ತಮ ಪರಮ ಪುರುಷ ಮತ್ತು ಬ್ರಹ್ಮಾಂಡ ಸೃಷ್ಟಿಕರ್ತನನ್ನು  ಮಗನಾಗಿ ಸ್ವೀಕರಿಸಿದ ಶಚೀಮಾತಾ  ಮತ್ತು ಶ್ರೀ ಮಿಶ್ರ ಅವರ ಪಾದ ಕಮಲಗಳಿಗೆ ನಾನು ಅಸಂಖ್ಯ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

ತಾಯಿಗೆ ಬೇಡಿದ ವರ:

ಒಂದು ದಿನ ಶ್ರೀ ಚೈತನ್ಯ ತನ್ನ ತಾಯಿಯ ಪಾದಗಳಿಗೆರಗಿ, ಒಂದು ಸಂಗತಿಯನ್ನು ದಾನವಾಗಿ ನೀಡಲು ಕೋರಿದ. ತಾಯಿ ಉತ್ತರಿಸಿದಳು: “ನನ್ನ ಪ್ರೀತಿಯ ಮಗನೇ, ನೀನು ಏನು ಕೇಳಿದರೂ ನಾನು ನಿನಗೆ ಕೊಡುವೆ.” ಆಗ ನಿಮಾಯ್ ಕೇಳಿದ: “ನನ್ನ ಪ್ರೀತಿಯ ಅಮ್ಮಾ, ಏಕಾದಶಿಯಂದು ದಯೆಯಿಟ್ಟು ಧಾನ್ಯ ಸೇವಿಸಬೇಡ.” ತಾಯಿ ಹೇಳಿದಳು : “ನೀನು ಚೆನ್ನಾಗಿ ಮಾತನಾಡಿರುವೆ. ನಾನು ಏಕಾದಶಿಯಂದು ಧಾನ್ಯ ಸೇವಿಸುವುದಿಲ್ಲ.” ಅಂದಿನಿಂದಲೇ ಅವಳು ಏಕಾದಶಿಯಂದು ಉಪವಾಸ ಆಚರಿಸಲು ಆರಂಭಿಸಿದಳು.

ಶ್ರೀ ಚೈತನ್ಯ ಮಹಾಪ್ರಭು ತಮ್ಮ ಬಾಲ್ಯದಿಂದಲೇ ಏಕಾದಶಿಯಂದು ಉಪವಾಸ ಆಚರಿಸುವ ಪದ್ಧತಿ ಜಾರಿಗೆ ತಂದರು. ಶ್ರೀ ಜೀವ ಗೋಸ್ವಾಮಿಯವರ ಭಕ್ತಿ-ಸಂದರ್ಭದಲ್ಲಿ  ಸ್ಕಾಂದ ಪುರಾಣದ ಉಲ್ಲೇಖವಿದೆ – ಏಕಾದಶಿಯಂದು ಧಾನ್ಯ ಸೇವಿಸುವವರು ತಮ್ಮ ತಾಯಿ, ತಂದೆ, ಸೋದರ, ಮತ್ತು ಆಧ್ಯಾತ್ಮಿಕ ಗುರುವಿನ ಹಂತಕರಾಗುತ್ತಾರೆ, ಅವರು ವೈಕುಂಠಕ್ಕೆ ಹೋದರೂ ಪುನಃ ಬೀಳುತ್ತಾರೆ. ಏಕಾದಶಿಯಂದು ಎಂದಿನ ಧಾನ್ಯ ಮತ್ತು ಬೇಳೆ ಸೇರಿದಂತೆ ಎಲ್ಲವನ್ನೂ ವಿಷ್ಣುವಿಗಾಗಿ ತಯಾರಿಸಲಾಗುತ್ತದೆ. ಆದರೆ ಏಕಾದಶಿಯಂದು ವೈಷ್ಣವರು ವಿಷ್ಣು ಪ್ರಸಾದವಾದರೂ ತೆಗೆದುಕೊಳ್ಳಬಾರದೆಂಬ ವಿ ಇದೆ. ಶ್ರೀ ವಿಷ್ಣುವಿಗೆ ನೈವೇದ್ಯ ಮಾಡದ ಏನನ್ನೂ ವೈಷ್ಣವರು ಸ್ವೀಕರಿಸಬಾರದೆಂದಿದ್ದರೂ ಏಕಾದಶಿಯಂದು ವೈಷ್ಣವರು ವಿಷ್ಣುವಿಗೆ ಅರ್ಪಿಸಿದ ಮಹಾ ಪ್ರಸಾದವನ್ನೂ ಸ್ಪರ್ಶಿಸಬಾರದೆಂದು ಹೇಳಲಾಗಿದೆ. ಆದರೂ ಅಂತಹ ಪ್ರಸಾದವನ್ನು ಮರುದಿನ ಸೇವಿಸಲು ಇಡಬಹುದು. ಶ್ರೀ ವಿಷ್ಣುವಿಗೆ ಅರ್ಪಿಸಿದ್ದರೂ ಯಾವುದೇ ರೀತಿಯ ಧಾನ್ಯವನ್ನು ಏಕಾದಶಿಯಂದು ಸ್ವೀಕರಿಸುವುದಕ್ಕೆ  ನಿರ್ಬಂಧವಿದೆ. ವಿಧವೆಯರು ಏಕಾದಶಿಯಂದು ಉಪವಾಸ ಮಾಡಬಹುದು, ಆದರೆ ಸ-ಧವೆ ಮಾಡಬಾರದು ಎಂಬ ಪೂರ್ವಗ್ರಹ ಪೀಡಿತ ಚಿಂತನೆ ಸ್ಮಾರ್ತ ಬ್ರಾಹ್ಮಣರಲ್ಲಿದೆ. ಸ-ಧವೆಯಾದ ಶಚೀಮಾತೆಯು ಶ್ರೀ ಚೈತನ್ಯ ಮಹಾಪ್ರಭು ಕೋರುವವರೆಗೂ ಏಕಾದಶೀ ಉಪವಾಸ ಮಾಡುತ್ತಿರಲಿಲ್ಲವೆಂದು ತೋರುತ್ತದೆ. ಮಹಿಳೆಯರು, ವಿಧವೆಯರಲ್ಲದಿದ್ದರೂ ಏಕಾದಶಿ ಆಚರಿಸಿ ಧಾನ್ಯ ಸೇವಿಸಬಾರದೆಂಬ ಪದ್ಧತಿಯನ್ನು ಶ್ರೀ ಚೈತನ್ಯ ಮಹಾಪ್ರಭು ಆರಂಭಿಸಿದರು.

ವೈಕುಂಠ ದೇವೋತ್ತಮ, ಶ್ರೀ ವಿಶ್ವಂಭರ, ಅತ್ಯಂತ ಆನಂದದಾಯಕವಾಗಿ ಅದ್ಭುತ ಲೀಲೆಗಳನ್ನು ಪ್ರದರ್ಶಿಸಿದ. ಪರಮ ಪುರುಷನ ಆಧ್ಯಾತ್ಮಿಕ ಶಕ್ತಿಯ ಪ್ರಭಾವದಿಂದ ಯಾರಿಗೂ ಈ ಅಲೌಕಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮನನ ಮಾಡಿಕೊಳ್ಳುವುದು ಸಾಧ್ಯವಿಲ್ಲ.

(ಮುಂದುವರಿಯುವುದು)
Leave a Reply

Your email address will not be published. Required fields are marked *