Search
Friday 7 August 2020
  • :
  • :

ಸುವರ್ಣಾವತಾರ ಭಾಗ – 7

ಮುಂದುವರಿದ ಬಾಲಲೀಲೆ

ಶ್ರೀ ಚೈತನ್ಯ ಮಹಾಪ್ರಭುವಿನ ಬಾಲ ಲೀಲೆ ಮುಂದುವರಿದಿತ್ತು. ಎಲ್ಲ ಮಕ್ಕಳಂತೆ ಅವನು ಆಟವಾಡುವುದನ್ನು ಕಲಿತ ಹಾಗೂ ತನ್ನ ಸಂಗಾತಿಗಳ ಜೊತೆ ನೆರೆಯ ಮಿತ್ರರ ಮನೆಗಳಿಗೆ ಹೋಗಿ ಅಲ್ಲಿದ್ದ ತಿನಿಸುಗಳನ್ನು ಕದ್ದು ಸ್ವಾಹಾ ಮಾಡುತ್ತಿದ್ದ. ಕೆಲ ಸಂದರ್ಭಗಳಲ್ಲಿ ಮಕ್ಕಳು ಪರಸ್ಪರ ಜಗಳವಾಡುತ್ತಿದ್ದರು. ಅವನು ತಮ್ಮೊಂದಿಗೆ ಜಗಳವಾಡುತ್ತಾನೆ ಕದಿಯುತ್ತಾನೆ ಎಂದು ಈ ಮಕ್ಕಳು ಶಚೀಮಾತಾಗೆ ದೂರು ನೀಡುತ್ತಿದ್ದರು. ಆದುದರಿಂದ ಅವಳು ಕೆಲ ಬಾರಿ ಅವನನ್ನು ಗದರಿಸಿಕೊಳ್ಳುತ್ತಿದ್ದಳು. ಶಚೀಮಾತಾ ಮಗನಿಗೆ ಹೇಳುತ್ತಿದ್ದಳು : ‘ಬೇರೆಯವರದನ್ನು ಯಾಕೆ ಕದಿಯುವೇ? ಬೇರೆ ಮಕ್ಕಳನ್ನು ಯಾಕೆ ಹೊಡೆಯುವೆ? ನೀನು ಯಾಕೆ ನೆರೆ ಮನೆಯವರ ಮನೆ ಒಳಗೆ ಹೋಗುವುದು? ನಮ್ಮ ಮನೆಯಲ್ಲಿ ಏನಿಲ್ಲ ಹೇಳು?’

ವೇದಾಂತ ಸೂತ್ರದ ಪ್ರಕಾರ, ಸೃಷ್ಟಿ, ಸ್ಥಿತಿ, ಲಯಗಳು ಪರಮಸತ್ಯನಲ್ಲಿರುವುದರಿಂದ ನಾವು ಈ ಭೌತಿಕ ಪ್ರಪಂಚದಲ್ಲಿ ಏನೇನನ್ನೂ ಕಾಣುತ್ತೇವೋ ಅದೆಲ್ಲವೂ ಆಧ್ಯಾತ್ಮಿಕ ಲೋಕದಲ್ಲಿ ಇರುತ್ತದೆ.  ಶ್ರೀ ಚೈತನ್ಯ ಮಹಾಪ್ರಭು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನೇ ಆಗಿದ್ದಾನೆ .ಅವನು ಅದು ಹೇಗೆ ಕದಿಯುತ್ತಾನೆ? ಜಗಳವಾಡುತ್ತಾರೆ?  ಅದು ಕಳ್ಳತನ ಅಥವಾ ವೈರತ್ವದಿಂದ ಅಲ್ಲ. ಅತಿಯಾದ ಪ್ರೀತಿಯಾದ ಸನ್ನಿವೇಶದಲ್ಲಿ ಸ್ನೇಹಪರವಾಗಿ ಮಾಡುವುದಷ್ಟೆ. ಮಗುವಾಗಿ ಅವನು ಕದಿಯುವುದು ಅದು ತಮಗೆ ಬೇಕೆಂದಲ್ಲ, ಬದಲಿಗೆ ಸ್ವಾಭಾವಿಕ, ಸಹಜ ಗುಣದಿಂದ. ಈ ಲೌಕಿಕ ಜಗತ್ತಿನಲ್ಲಿ ಕೂಡ, ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಹೋಗಿ ಏನಾದರೂ ಕದಿಯುತ್ತಾರೆ. ಪರಸ್ಪರ ಜಗಳವಾಡುತ್ತಾರೆ. ಇದೇ ರೀತಿ ಕೃಷ್ಣ ಕೂಡ, ಇತರೆ ಮಕ್ಕಳಂತೆ ತನ್ನ ಬಾಲ್ಯದಲ್ಲಿ ಅಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಆಧ್ಯಾತ್ಮಿಕ , ಅಲೌಕಿಕ ಲೋಕದಲ್ಲಿ ಈ ಕದಿಯುವ ಮತ್ತು ಜಗಳವಾಡುವ ಪ್ರವೃತ್ತಿ ಕಾಣದಿದ್ದರೆ ಅದು ಲೌಕಿಕ ಜಗತ್ತಿನಲ್ಲಿಯೂ ಇರುವುದು ಸಾಧ್ಯವಿಲ್ಲ. ಲೌಕಿಕ ಮತ್ತು ಅಲೌಕಿಕ ಜಗತ್ತಿನ ವ್ಯತ್ಯಾಸವೆಂದರೆ ಅಲೌಕಿಕ ಲೋಕದಲ್ಲಿ ಅದನ್ನು ಸ್ನೇಹ ಮತ್ತು ಪ್ರೀತಿಯಿಂದ ಮಾಡಲಾಗುತ್ತದೆ. ಆದರೆ ಲೌಕಿಕ ಜಗತ್ತಿನಲ್ಲಿ ಜಗಳ ಮತ್ತು ಕದಿಯುವುದನ್ನು ವೈರತ್ವ ಮತ್ತು ಅಸೂಯೆಯಿಂದ ಮಾಡಲಾಗುತ್ತದೆ. ಅಲೌಕಿಕ ವಿಶ್ವದಲ್ಲಿ ಈ ಎಲ್ಲ ಚಟುವಟಿಕೆಗಳು ಇರುತ್ತವೆ, ಆದರೆ ಅಲ್ಲಿ ಅನೌಚಿತ್ಯ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಆದರೆ ಲೌಕಿಕ ಜಗತ್ತಿನಲ್ಲಿ ಎಲ್ಲ ಚಟುವಟಿಕೆಗಳೂ ದೀನ, ಸಂಕಟ ಸ್ಥಿತಿಯಲ್ಲಿರುತ್ತವೆ.

ಈ ರೀತಿ ತಾಯಿ ಗದರಿಸಿಕೊಂಡಾಗ, ಬಾಲಕ ಚೈತನ್ಯ ಸಿಟ್ಟಿನಿಂದ ಕೋಣೆಯೊಳಗೆ ಹೋಗಿ ಅಲ್ಲಿರುವ ಮಡಕೆಗಳನ್ನೆಲ್ಲಾ ಒಡೆದುಹಾಕುತ್ತಿದ್ದ. ಆಗ ಶಚಿಮಾತಾ ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಮಾಡುತ್ತಿದ್ದರು, ಆಗ ಮಗುವಿಗೆ ಒಂದು ರೀತಿ ನಾಚಿಕೆಯಾಗಿ ತಪ್ಪನ್ನು ಒಪ್ಪಿಕೊಳ್ಳುತ್ತಿತ್ತು. ಚೈತನ್ಯ ಭಾಗವತದ ಆದಿಖಂಡ ೩ನೇ ಅಧ್ಯಾಯದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಈ ಲೀಲೆಗಳನ್ನು ಅದ್ಭುತವಾಗಿ ವಿವರಿಸಲಾಗಿದೆ. ಮಗುವಾಗಿದ್ದ ಚೈತನ್ಯ ಮಹಾಪ್ರಭು ನೆರೆಮನೆಯ ಸ್ನೇಹಿತರ ಜೊತೆ ಮನೆಮನೆಗಳಿಗೂ ಹೋಗಿ ಕದ್ದು ತಿನ್ನುತ್ತಿದ್ದ ಎಂಬುದರ ವರ್ಣನೆ ಮನಮೋಹಕವಾಗಿದೆ. ಕೆಲವು ಮನೆಗಳಲ್ಲಿ ಅವನು ಹಾಲು ಕದ್ದು ಕುಡಿಯುತ್ತಿದ್ದರೆ ಇನ್ನು ಕೆಲವು ಕಡೆ ಸಿದ್ಧವಾದ ಅನ್ನವನ್ನು ತಿನ್ನುತ್ತಿದ್ದನು. ಕೆಲವು ಸಂದರ್ಭಗಳಲ್ಲಿ ಅವನು ಅಡುಗೆ ಮಾಡುವ ಮಡಕೆಗಳನ್ನು ಒಡೆದು ಹಾಕುತ್ತಿದ್ದನು. ಹಾಗೆ ಏನೂ ತಿನ್ನಲು ಸಿಗದಿದ್ದರೆ ಅವನು ಸಣ್ಣ ಮಕ್ಕಳನ್ನು ಅಳಿಸುತ್ತಿದ್ದನು. ಅನೇಕ ಬಾರಿ ನೆರೆಮನೆಯವರು ಶಚಿಮಾತಾಗೆ ದೂರುತ್ತಿದ್ದರು, ‘ನನ್ನ ಮಗು ತುಂಬ ಚಿಕ್ಕದು, ಆದರೆ ನಿಮ್ಮ ಮಗ ಅದರ ಕಿವಿಯೊಳಗೆ ನೀರು ಹಾಕಿ ಅಳುವಂತೆ ಮಾಡುತ್ತಾನೆ’.

ಒಮ್ಮೆ, ಪುಟ್ಟ ಚೈತನ್ಯ, ತನ್ನ ಮೃದುವಾದ ಕೈಗಳಿಂದ ತಾಯಿಗೊಂದು ಪೆಟ್ಟು ಕೊಟ್ಟ. ಆಗ ತಾಯಿ ಮೂರ್ಛೆ ಹೋದಂತೆ ನಟಿಸಿದಳು. ಇದನ್ನು ನೋಡಿ ಶ್ರೀಚೈತನ್ಯ ಅಳಲಾರಂಭಿಸಿದನು. ಆಗ ನೆರಮನೆಯ ಮಹಿಳೆಯರು ಅವನಿಗೆ ಹೇಳಿದರು, ‘ಪ್ರೀತಿಯ ಮಗು, ದಯೆಯಿಟ್ಟು ಎಲ್ಲಿಂದಲಾದರು ಎಳನೀರು ತೆಗೆದುಕೊಂಡು ಬಾ, ಆಗ ನಿನ್ನ ಅಮ್ಮನಿಗೆ ವಾಸಿಯಾಗುತ್ತದೆ.’ ಆಗ ಚೈತನ್ಯನು ಮನೆ ಹೊರಗೆ ಹೋಗಿ ತತ್‌ಕ್ಷಣ ಎರಡು ಕಾಯಿ ತಂದನು. ಮಹಿಳೆಯರಿಗೆ ಈ ಅದ್ಭುತವಾದ ಚಟುವಟಿಕೆಗಳನ್ನು ನೋಡಿ ಆಶ್ಚರ್ಯವಾಗುತ್ತಿತ್ತು.

ತಾಯಿಗೆ ಪಾಠ

ಒಂದು ದಿನ ತಾಯಿ ಶಚೀ ಮಗನನ್ನು ಹಿಡಿದು ಶಿಕ್ಷಿಸಲು ಅಟ್ಟಿಸಿಕೊಂಡು ಹೋದರೆ, ಅವನು ಅಲ್ಲಿಂದ ಓಡಿಹೋದ. ಇಡೀ ವಿಶ್ವದ ಪಾಲಕನಾದರೂ ದೇವೋತ್ತಮ ಪರಮಪುರುಷನು  ಒಮ್ಮೆ ಎಂಜಲನ್ನು ಎಸೆಯುವ ಗುಂಡಿಯಲ್ಲಿ ಹಾಕಿದ್ದ ಮಡಕೆಗಳ ಮೇಲೆ ಕುಳಿತಿದ್ದ. ಆಗೆಲ್ಲಾ ಬ್ರಾಹ್ಮಣರು ಪ್ರತಿದಿನವೂ ಶ್ರೀ ಮಹಾವಿಷ್ಣುವನ್ನು ಮನೆಯಲ್ಲಿ ಪೂಜಿಸಿ ಅವನಿಗಾಗಿ ಹೊಸ ಮಡಕೆಗಳಲ್ಲಿ ಆಹಾರ ತಯಾರಿಸುತ್ತಿದ್ದರು. ಈ ಪದ್ಧತಿ ಈಗಲೂ ಜಗನ್ನಾಥ ಪುರಿಯಲ್ಲಿ ಚಾಲ್ತಿಯಲ್ಲಿದೆ. ಹೊಸದಾದ ಮಣ್ಣಿನ ಮಡಕೆಯಲ್ಲಿ ಆಹಾರವನ್ನು ತಯಾರಿಸಿ ಅಡುಗೆ ಆದ ಮೇಲೆ ಮಡಕೆಗಳನ್ನು ಎಸೆಯಲಾಗುತ್ತಿತ್ತು. ಸಾಮಾನ್ಯವಾಗಿ ಮನೆಯ ಪಕ್ಕದಲ್ಲಿ ಗುಂಡಿಯೊಂದನ್ನು ತೋಡಿ ಅದರಲ್ಲಿ ಅಂತಹ ಮಡಕೆಗಳನ್ನು ಎಸೆಯಲಾಗುತ್ತಿತ್ತು. ಶ್ರೀ ಚೈತನ್ಯ ಮಹಾಪ್ರಭುಗಳು ಅಂತಹ ಮಡಕೆಗಳ ಮೇಲೆ ಖುಷಿಯಿಂದ ಕುಳಿತು ತಾಯಿಗೆ ಪಾಠ ಕಲಿಸಲು ಮುಂದಾದರು. ಬಿಸಾಡಿದ ಮಡಕೆಯ ಮೇಲೆ ಮಗ ಕುಳಿತಿರುವುದನ್ನು ನೋಡಿದ ತಾಯಿ ಶಚಿದೇವಿ, ಅದನ್ನು ವಿರೋಸಿದಳು, ‘ಈ ಅಸ್ಪೃಶ್ಯ ಮಡಕೆಗಳನ್ನೇಕೆ ಮುಟ್ಟಿದೆ? ನೀನೀಗ ಅಶುದ್ಧನಾಗಿರುವೆ. ಹೋಗು, ಗಂಗೆಯಲ್ಲಿ ಸ್ನಾನ ಮಾಡಿಬಾ.’ ಇದನ್ನು ಕೇಳಿದ ಶ್ರೀ ಚೈತನ್ಯ ಮಹಾಪ್ರಭು ತಾಯಿಗೆ ಪರಮ ಜ್ಞಾನವನ್ನು ಬೋಸಿದ. ಇದರಿಂದ ಸೋಜಿಗಗೊಂಡರೂ, ತಾಯಿಯು ಅವನಿಗೆ ಸ್ನಾನ ಮಾಡಲೇಬೇಕೆಂದು ಒತ್ತಾಯಿಸಿದಳು. ಶ್ರೀಲ ಭಕ್ತಿವಿನೋದ ಠಾಕುರರು ತಮ್ಮ ಅಮೃತ – ಪ್ರವಾಹ – ಭಾಷ್ಯದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ತಾಯಿಗೆ ವಿವರಿಸಿದ ಈ ಪರಮ ಜ್ಞಾನವನ್ನು ಈ ರೀತಿ ವರ್ಣಿಸಿದ್ದಾರೆ : “ಪರಮಾತ್ಮ ಹೇಳಿದ, ‘ಅಮ್ಮ, ಇದು ಶುದ್ಧ ಮತ್ತು ಅದು ಅಶುದ್ಧ ಎಂಬುದೆಲ್ಲ ಲೌಕಿಕದ ಭಾವನೆಗಳು. ಅವುಗಳಿಗೆಲ್ಲಾ ವಾಸ್ತವಾಂಶದ ಆಧಾರಗಳಿಲ್ಲ. ಈ ಮಡಕೆಗಳಲ್ಲಿ  ನೀನು ಮಹಾವಿಷ್ಣುವಿಗೆ ಆಹಾರ ತಯಾರಿಸಿರುವೆ ಮತ್ತು ಅದನ್ನು ಅವನಿಗೆ ಅರ್ಪಿಸಿರುವೆ. ಹಾಗಾದರೆ ಈ ಮಡಕೆಗಳು ಅದು ಹೇಗೆ ಅಸ್ಪೃಶ್ಯವಾಗುತ್ತವೆ? ವಿಷ್ಣುವಿಗೆ ಸಂಬಂಸಿದ ಪ್ರತಿಯೊಂದನ್ನೂ ವಿಷ್ಣುವಿನ ಶಕ್ತಿಯ ವಿಸ್ತರಣೆ ಎಂದೇ ಭಾವಿಸಬೇಕು. ಪರಮಾತ್ಮನಾದ ವಿಷ್ಣುವು ಅಮರ ಮತ್ತು ಪರಿಶುದ್ಧ. ಹಾಗಾದರೆ ಈ ಮಡಕೆಗಳನ್ನು ಶುದ್ಧ ಅಥವಾ ಅಶುದ್ಧವೆಂದು ಹೇಗೆ ಪರಿಗಣಿಸುವುದು?” ಈ ಪರಮ ಜ್ಞಾನವನ್ನು ಕುರಿತ ಬೋಧನೆಯನ್ನು ಕೇಳಿ ತಾಯಿ ಅಚ್ಚರಿಗೊಳ್ಳುತ್ತಾಳೆ. ಆದರೂ ಅವನಿಗೆ ಪರಿಶುದ್ಧವಾಗಲು ಸ್ನಾನ ಮಾಡೆಂದು ಹೇಳುತ್ತಾಳೆ.

ತುಂಟ ಚೈತನ್ಯನಿಂದ ಶಿವಪೂಜೆಗೆ ಭಂಗ

ಕೆಲವು ಬಾರಿ ಶ್ರೀ ಚೈತನ್ಯ ಮಹಾಪ್ರಭು ತನ್ನ ಸ್ನೇಹಿತರೊಂದಿಗೆ ಗಂಗಾ ನದಿಯಲ್ಲಿ ಸ್ನಾನ ಮಾಡಲು ಹೋಗುತ್ತಿದ್ದನು. ಆಗ ನೆರೆಯ ಹುಡುಗಿಯರೂ ಕೂಡ ಅಲ್ಲಿಗೆ ದೇವತೆಗಳನ್ನು ಪೂಜಿಸಲು ಬರುತ್ತಿದ್ದರು. ವೇದ ಪದ್ಧತಿಯಂತೆ, ಹತ್ತು ಹನ್ನೆರಡು ವರ್ಷದ ಸಣ್ಣ ಹುಡುಗಿಯರು ಸ್ನಾನ ಮಾಡಲೆಂದು ಗಂಗೆಗೆ ಹೋಗಿ, ವಿಶೇಷವಾಗಿ ಶಿವನನ್ನು ಪೂಜಿಸಿ ತಮಗೆ ಒಳ್ಳೆಯ ಗಂಡನನ್ನು ದಯಪಾಲಿಸೆಂದು ಪ್ರಾರ್ಥಿಸುತ್ತಿದ್ದರು. ವಿಶೇಷವಾಗಿ ಅವರಿಗೆ ಶಿವನಂತಹ ಗಂಡ ಸಿಗಬೇಕೆಂಬ ಅಪೇಕ್ಷೆ ಇತ್ತು. ಏಕೆಂದರೆ ಶಿವನು ಪರಮ ಶಾಂತ. ಆದರೆ ಅದೇ ಸಮಯದಲ್ಲಿ ಶಕ್ತಿವಂತ. ಹೀಗಾಗಿ, ಅಂದಿನ ದಿನಗಳಲ್ಲಿ, ಹಿಂದೂ ಕುಟುಂಬದ ಬಾಲಕಿಯರು, ಮುಖ್ಯವಾಗಿ ವೈಶಾಖ ಮಾಸದಲ್ಲಿ (ಏಪ್ರಿಲ್-ಮೇ) ಶಿವನನ್ನು ಪೂಜಿಸುತ್ತಿದ್ದರು. ಗಂಗೆಯಲ್ಲಿ ಸ್ನಾನ ಮಾಡುವುದೆಂದರೆ ಹಿರಿಯರಿಗಷ್ಟೇ ಅಲ್ಲ, ಮಕ್ಕಳಿಗೂ ಬಹಳ ಸಂತೋಷ. ಗಂಗೆಯಲ್ಲಿ ಸ್ನಾನ ಮಾಡಿ ಆ ಬಾಲಕಿಯರು ವಿವಿಧ ದೇವತೆಗಳನ್ನು ಪೂಜಿಸುತ್ತಿದ್ದಾಗ ಶ್ರೀ ಚೈತನ್ಯ ಮಹಾಪ್ರಭು ಅವರೊಂದಿಗೆ ಕುಳಿತುಕೊಳ್ಳುತ್ತಿದ್ದನು. ಅವರಿಗೆ ಈ ರೀತಿ ಹೇಳುತ್ತಿದ್ದನು, ‘ನನ್ನನ್ನು ಪೂಜಿಸಿ, ನಾನು ನಿಮಗೆ ಒಳ್ಳೆಯ ಗಂಡಂದಿರನ್ನು ಕೊಡುವೆ ಅಥವಾ ಒಳ್ಳೆಯ ಅನುಗ್ರಹ ನೀಡುವೆ. ಗಂಗೆ ಮತ್ತು ದುರ್ಗಾದೇವಿ ನನ್ನ ಸೇವಕಿಯರು. ಈ ದೇವತೆಗಳ ವಿಚಾರವಿರಲಿ, ಶಿವನೇ ನನ್ನ ಸೇವಕ.’ ಆ ಬಾಲಕಿಯರ ಅನುಮತಿ ಇಲ್ಲದೆಯೇ ಚೈತನ್ಯ ಮಹಾಪ್ರಭು ಗಂಧವನ್ನು ತನ್ನ ದೇಹದ ಮೇಲೆಲ್ಲಾ ಸವರಿಕೊಂಡು ಹೂವಿನ ಹಾರವನ್ನು ಕೊರಳಿಗೆ ಹಾಕಿಕೊಂಡು ನೈವೇದ್ಯಕ್ಕೆ ಇಟ್ಟಿದ್ದ ಎಲ್ಲ ಸಿಹಿ ತಿಂಡಿ, ಅನ್ನ ಮತ್ತು ಬಾಳೆಹಣ್ಣನ್ನು ಕಿತ್ತುಕೊಂಡು ತಿನ್ನುತ್ತಿದ್ದನು.

ಪೂಜಾಕರ್ಮದ ಪದ್ಧತಿ ಪ್ರಕಾರ, ಮನೆಯ ಹೊರಗಡೆ ದೇವತೆಗಳಿಗೆ ಏನಾದರೂ ನೈವೇದ್ಯಕ್ಕೆ ನೀಡಿದರೆ, ಸಾಮಾನ್ಯವಾಗಿ ಅದನ್ನು ಬೇಯಿಸಿರುವುದಿಲ್ಲ. ಆದರೆ ಅದು ಕಚ್ಚಾ ಅಕ್ಕಿ, ಬಾಳೆಹಣ್ಣು ಮತ್ತು ಸಿಹಿ ತಿನಿಸಾಗಿರುತ್ತದೆ. ಪರಮಾತ್ಮನು ಕೃಪಾಪೂರ್ಣನಾಗಿ ಬಾಲಕಿಯರು ಇಟ್ಟಿದ್ದ ನೈವೇದ್ಯವನ್ನು ಕಿತ್ತುಕೊಂಡು ತಿನ್ನುತ್ತಿದ್ದ. ದೇವತೆಗಳನ್ನು ಪೂಜಿಸಬೇಡಿ ಎಂದು ಬಾಲಕಿಯರಿಗೆ ಸೂಚನೆ ನೀಡಿ ತನ್ನನ್ನೇ ಪೂಜಿಸುವಂತೆ ನಿರ್ದೇಶಿಸುತ್ತಿದ್ದ. ಶ್ರೀಮದ್ಭಾಗವತದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳನ್ನು ಪೂಜಿಸುವುದನ್ನು ಸೂಚಿಸಲಾಗಿದೆ:

ಕೃಷ್ಣವರ್ಣಂ ತ್ವಿಷಾಕೃಷ್ಣಂ ಸಾಙ್ಗೋಪಾಙ್ಗಾಸ್ತ್ರ ಪಾರ್ಷದಮ್ |

ಯeಃ ಸಙ್ಕೀರ್ತನಪ್ರಾಯೈರ್ಯಜನ್ತಿ ಹಿ ಸುಮೇಧಸಃ ||

“ಈ ಕಲಿಯುಗದಲ್ಲಿ, ಸಾಕಷ್ಟು ಬುದ್ಧಿಯುಳ್ಳವರು, ತನ್ನ ಸಂಗಾತಿಗಳೊಂದಿಗೆ ಪಂಚತತ್ತ್ವರಾಗಿ ಕೂಡಿರುವ ಭಗವಂತನನ್ನು ಸಂಕೀರ್ತನ ಯಜ್ಞವನ್ನು ಮಾಡಿ ಪೂಜಿಸುತ್ತಾರೆ: ದೇವೋತ್ತಮ ಪರಮಪುರುಷನಲ್ಲದೆ ಅವನ ಸಂಗಾತಿಗಳೆಂದರೆ, ನಿತ್ಯಾನಂದಪ್ರಭು, ಶ್ರೀ ಅದ್ವೈತಪ್ರಭು, ಶ್ರೀ ಗದಾಧರಪ್ರಭು ಮತ್ತು ಶ್ರೀನಿವಾಸ ಠಾಕುರ. ಇಂದಿನ ಯುಗದಲ್ಲಿ ಭಕ್ತರು ಹರೇಕೃಷ್ಣ ಮಹಾಮಂತ್ರವನ್ನು ಪಠಿಸುವ ಮೂಲಕ ಹಾಗೂ ಸಾಧ್ಯವಾದರೆ ಪ್ರಸಾದವನ್ನು ಹಂಚುವ ಮೂಲಕ ಪಂಚತತ್ತ್ವವನ್ನು ಪೂಜಿಸುತ್ತಾರೆ.”

ಶ್ರೀ ಚೈತನ್ಯ ಮಹಾಪ್ರಭುಗಳ ಈ ನಡತೆಯಿಂದ ಬಾಲಕಿಯರಿಗೆ ತುಂಬ ಕೋಪ ಬಂತು. ‘ಪ್ರೀತಿಯ ನಿಮಾಯ್,’ ಅವರು ಅವನಿಗೆ ಹೇಳಿದರು, ‘ನಮ್ಮ ಗ್ರಾಮದ ಸಂಬಂಧದಲ್ಲಿ ನೀನು ನಮಗೆ ಸೋದರನಿದ್ದಂತೆ. ಆದುದರಿಂದ ನೀನು ಹೀಗೆ ವರ್ತಿಸುವುದು ಸರಿಯಲ್ಲ. ದೇವತೆಗಳನ್ನು ಪೂಜಿಸಲು ನಾವು ಇಟ್ಟಿರುವ ಪೂಜಾಸಾಮಗ್ರಿಗಳನ್ನು ತೆಗೆದುಕೊಳ್ಳಬೇಡ. ಸುಮ್ಮನೆ ಈ ರೀತಿ ಗೊಂದಲ ಸೃಷ್ಟಿಸಬೇಡ.’

ಶ್ರೀ ಚೈತನ್ಯ ಮಹಾಪ್ರಭು ಉತ್ತರಿಸಿದರು: ‘ನನ್ನ ಪ್ರೀತಿಯ ಸೋದರಿಯರೇ, ನಿಮಗೆ ಸುಂದರವಾದ ಗಂಡಂದಿರು ಲಭ್ಯವಾಗುವಂತೆ ಅನುಗ್ರಹಿಸುವೆ. ಅವರು ಬುದ್ಧಿವಂತರು, ಜಾಣರು ಮತ್ತು ಯುವಕರು ಹಾಗೂ ಅಪಾರವಾಗಿ ಸೊತ್ತುಳ್ಳವರು ಆಗಿರುತ್ತಾರೆ. ಅಷ್ಟೇ ಅಲ್ಲ , ನಿಮ್ಮ ಪ್ರತಿಯೊಬ್ಬರಿಗೂ ಏಳು ಗಂಡು ಮಕ್ಕಳಾಗುತ್ತವೆ. ಈ ಮಕ್ಕಳು ದೀರ್ಘಾಯುಷಿಗಳಾಗಿ ಬುದ್ಧಿವಂತರಾಗಿರುತ್ತಾರೆ.’

ಸಾಮಾನ್ಯವಾಗಿ ಪ್ರತಿಯೊಬ್ಬ ಯುವತಿಗೂ ತನ್ನ ಗಂಡ ಸುಂದರ, ಬುದ್ಧಿವಂತ, ಜಾಣ, ಯುವಕ ಮತ್ತು ಶ್ರೀಮಂತನಾಗಿರಬೇಕೆಂಬ ಆಸೆ ಇರುತ್ತದೆ. ವೇದ ಸಂಸ್ಕೃತಿಯ ಪ್ರಕಾರ ಯಾರ ಬಳಿ ಆಹಾರ ಧಾನ್ಯದ ಅಪಾರ ದಾಸ್ತಾನು ಇದ್ದು, ಪ್ರಾಣಿ ಸಂಕುಲವನ್ನು ಹೆಚ್ಚಾಗಿ ಹೊಂದಿರುತ್ತಾರೋ ಅವರು ಶ್ರೀಮಂತರು. ಧಾನ್ಯೇನ ಧನವಾನ್ ಗವಯಾ ಧನವಾನ್ : ಆಹಾರ ಧಾನ್ಯ, ಹಸು ಮತ್ತು ಎತ್ತುಗಳನ್ನು ಹೊಂದಿರುವವನು ಶ್ರೀಮಂತನು. ಹೆಣ್ಣು ಮಕ್ಕಳು ಹೆಚ್ಚು ಮಕ್ಕಳನ್ನು ಹೊಂದಿರಬೇಕೆಂದು ಅಪೇಕ್ಷಿಸುತ್ತಾರೆ. ವಿಶೇಷವಾಗಿ ತುಂಬ ಬುದ್ಧಿವಂತರಾದ ಮತ್ತು ದೀರ್ಘಾಯುಷಿಗಳಾದ ಪುತ್ರರನ್ನು ಹೊಂದಲು ಆಸೆ ಪಡುತ್ತಾರೆ. ಈಗ ಸಮಾಜವು ಹಾಳಾಗಿರುವುದರಿಂದ, ಒಂದು ಅಥವಾ ಎರಡು ಮಕ್ಕಳಿರಬೇಕೆಂಬ ಪ್ರಚಾರ ಮಾಡಲಾಗುತ್ತದೆ ಮತ್ತು ಉಳಿದವನ್ನು ಬೇರೆ ಮಾರ್ಗಗಳಿಂದ ಹತ್ಯೆ ಮಾಡಲಾಗುತ್ತದೆ. ಆದರೆ ಸಾಮಾನ್ಯವಾಗಿ ಹುಡುಗಿಯೊಬ್ಬಳಿಗೆ ಕೇವಲ ಒಂದೇ ಅಲ್ಲದೆ ಕನಿಷ್ಠ  ಅರ್ಧ ಡಜನ್ ಮಕ್ಕಳಾದರೂ ಬೇಕೆಂದು ಆಸೆ ಇರುತ್ತದೆ.

ಚೈತನ್ಯ ಮಹಾಪ್ರಭುಗಳಿಗೆ ಪೂಜಾ ವಸ್ತುಗಳಿಗೆ ಬದಲಾಗಿ  ಬಾಲಕಿಯರಿಗೆ ಅವರೆಲ್ಲ ಆಸೆ ಆಕಾಂಕ್ಷೆಗಳು ನೆರವೇರಲೆಂದು ಆಶೀರ್ವದಿಸುವ ಅಪೇಕ್ಷೆ ಇತ್ತು. ಶ್ರೀ ಚೈತನ್ಯ ಮಹಾಪ್ರಭುಗಳನ್ನು ಪೂಜಿಸುತ್ತಲೇ ಎಲ್ಲರು ಸಂತೋಷದಿಂದ ಇರಬಹುದು. ಒಳ್ಳೆಯ ಗಂಡ, ಸೊತ್ತು, ಆಹಾರಧಾನ್ಯ ಮತ್ತು ಒಳ್ಳೆಯ ಮಕ್ಕಳನ್ನು ಪಡೆಯಬಹುದು. ಶ್ರೀ ಚೈತನ್ಯ ಮಹಾಪ್ರಭು ಕಿರಿಯ ವಯಸ್ಸಿನಲ್ಲೇ ಸಂನ್ಯಾಸಾಶ್ರಮ ಸ್ವೀಕರಿಸಿದರೂ ಅವರ ಭಕ್ತರು ಅವರನ್ನೇ ಅನುಸರಿಸಿ ಸಂನ್ಯಾಸಿಯಾಗಬೇಕೆಂದೇನೂ ಇಲ್ಲ. ಗೃಹಸ್ಥರಾಗಿರಬಹುದು. ಆದರೆ ಶ್ರೀ ಚೈತನ್ಯ ಮಹಾಪ್ರಭುಗಳ ಭಕ್ತರಾಗಿರಬೇಕಷ್ಟೆ . ಆಗ, ಒಳ್ಳೆಯ ಮನೆ, ಮಕ್ಕಳು, ಸಂಗಾತಿ, ಸೊತ್ತು, ಮತ್ತು ಅಪೇಕ್ಷಿಸುವ ಎಲ್ಲ ವೈಭವವೂ ದೊರೆತು ಸಂತೋಷದಿಂದ ಇರಬಹುದು. ಆದುದರಿಂದ ಯeಃ ಸಙ್ಕೀರ್ತನಪ್ರಾಯೈರ್ಯಜನ್ತಿ ಹಿ ಸುಮೇಧಸಃ ಬುದ್ಧಿವಂತರಾದ ಪ್ರತಿಯೊಬ್ಬರೂ ಸಂಕೀರ್ತನಾ ಆಂದೋಲನವನ್ನು ಮನೆ ಮನೆಗೂ ಹರಡಿ ಈ ಜೀವನವನ್ನು ಶಾಂತಿಯುತವಾಗಿ ಕಳೆದು ಮುಂದಿನ ಬದುಕಿಗೆ ಭಗವದ್ಧಾಮಕ್ಕೆ ಮರಳಬಹುದು ಎಂದು ಶಾಸ್ತ್ರಗಳು ಹೇಳುತ್ತವೆ.

ಶ್ರೀ ಚೈತನ್ಯ ಮಹಾಪ್ರಭುಗಳ ಈ ಅನುಗ್ರಹವನ್ನು ಕೇಳಿ ಬಾಲಕಿಯರಿಗೆ ಒಳಗೊಳಗೆ ಸಂತೋಷವಾದರೂ ಹೊರಗೆ ಅವರು ಅವನನ್ನು ಹುಸಿಕೋಪದಿಂದ ಗದರಿಸಿಕೊಂಡರು. ಇದು ಬಾಲಕಿಯರ ಸಾಮಾನ್ಯ ಲಕ್ಷಣ. ಕೆಲವು ಬಾಲಕಿಯರು ಓಡತೊಡಗಿದಾಗ, ಶ್ರೀ ಚೈತನ್ಯ ಮಹಾಪ್ರಭು ಕೋಪದಿಂದ ಕರೆದು, ಉಪದೇಶಿಸಿದನು: ‘ನೀವು ಜಿಪುಣರಾಗಿ ನನಗೆ ಏನೂ ಕೊಡದಿದ್ದರೆ, ನಿಮಗೆಲ್ಲಾ ಕನಿಷ್ಠ ನಾಲ್ಕು ಪತ್ನಿಯಿರುವ ವೃದ್ಧ ಪತಿ ಲಭಿಸಲಿ.’

ಭಾರತದಲ್ಲಿ, ಆ ದಿನಗಳಲ್ಲಿ ಮತ್ತು ಈಗ್ಗೆ ಐವತ್ತು ವರ್ಷಗಳ ಹಿಂದೆ ಕೂಡ, ಬಹುಪತ್ನಿತ್ವ ಜಾರಿಯಲ್ಲಿತ್ತು. ಯಾವುದೇ ಪುರುಷ, ವಿಶೇಷವಾಗಿ ಬ್ರಾಹ್ಮಣರು, ವೈಶ್ಯರು ಮತ್ತು ಕ್ಷತ್ರಿಯರಂತಹ ಮೇಲ್ಜಾತಿಯವರು ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗಬಹುದಿತ್ತು. ಮಹಾಭಾರತದಲ್ಲಿ, ಅಥವಾ ಭಾರತದ ಪುರಾತನ ಇತಿಹಾಸದಲ್ಲಿ, ವಿಶೇಷವಾಗಿ ಕ್ಷತ್ರಿಯ ರಾಜರು  ಅನೇಕ ಪತ್ನಿಯರನ್ನು ಹೊಂದಿರುತ್ತಿದ್ದರು. ವೇದ ನಾಗರಿಕತೆಯ ಪ್ರಕಾರ, ಇದಕ್ಕೆ ಯಾವುದೇ ನಿರ್ಬಂಧಗಳಿರಲಿಲ್ಲ ಮತ್ತು ಐವತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಮದುವೆಯಾಗಬಹುದಿತ್ತು. ಆದರೆ ಹೆಚ್ಚು ಪತ್ನಿಯರಿರುವ ಪುರುಷನನ್ನು ಮದುವೆಯಾಗುವುದು ಹಿತಕರವಾದ ಪರಿಸ್ಥಿತಿ ಏನಲ್ಲ. ಏಕೆಂದರೆ ಗಂಡನ ಪ್ರೀತಿಯು ಅವನ ಬಹುಪತ್ನಿಯರಿಗೆ ಹಂಚಿಹೋಗುತ್ತಿತ್ತು. ನೈವೇದ್ಯವನ್ನು ತನಗೆ ಕೊಡಲು ಇಷ್ಟಪಡದ ಬಾಲಕಿಯರಿಗೆ ಶಿಕ್ಷೆ ವಿಸಲು ಶ್ರೀ ಚೈತನ್ಯ ಮಹಾಪ್ರಭುಗಳು ಅವರಿಗೆ ಕನಿಷ್ಠ ನಾಲ್ಕು ಪತ್ನಿಯರಿರುವ ಪುರುಷರೊಂದಿಗೆ ಮದುವೆಯಾಗಲೆಂದು ಶಾಪ ನೀಡುವುದಾಗಿ ಹೆದರಿಸಿದನು. ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದುವ ಅವಕಾಶವಿರುವ ಸಾಮಾಜಿಕ ಸ್ವರೂಪವನ್ನು ಈ ರೀತಿ ಬೆಂಬಲಿಸಬಹುದು. ಸಾಮಾನ್ಯವಾಗಿ ಎಲ್ಲ ಸಮಾಜದಲ್ಲಿಯೂ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿರುತ್ತದೆ. ಆದುದರಿಂದ, ಹೆಣ್ಣು ಮಕ್ಕಳೆಲ್ಲಾ ಮದುವೆಯಾಗಲೇಬೇಕೆಂಬ ಸಾಮಾಜಿಕ ನಿಯಮವಿದ್ದರೆ, ಬಹುಪತ್ನಿತ್ವಕ್ಕೆ ಅವಕಾಶ ನೀಡದಿದ್ದರೆ ಅದು ಸಾಧ್ಯವಾಗುವುದಿಲ್ಲ. ಎಲ್ಲ ಹುಡುಗಿಯರು ಮದುವೆಯಾಗದಿದ್ದರೆ ಅನೈತಿಕ ಲೈಂಗಿಕತೆಗೆ ಅವಕಾಶ ದೊರಕುತ್ತದೆ. ಮತ್ತು ಅನೈತಿಕ ಲೈಂಗಿಕ ಕ್ರಿಯೆಗೆ ಅವಕಾಶ ನೀಡುವ ಸಮಾಜವು ಶಾಂತಿಯುತವಾಗಿ ಅಥವಾ ಶುದ್ಧವಾಗಿ ಇರುವುದು ಸಾಧ್ಯವಿಲ್ಲ. ನಮ್ಮ ಕೃಷ್ಣಪ್ರಜ್ಞೆಯ ಸಂಸ್ಥೆಯಲ್ಲಿ ನಾವು ಅನೈತಿಕ ಲೈಂಗಿಕ ಕ್ರಿಯೆಯನ್ನು ನಿರ್ಬಂಸಿದ್ದೇವೆ. ವಾಸ್ತವದ ಸಮಸ್ಯೆ ಎಂದರೆ ಪ್ರತಿಯೊಂದು ಹುಡುಗಿಗೂ ಗಂಡನನ್ನು ಹುಡುಕುವುದೇ ಆಗಿದೆ. ಆದುದರಿಂದ ನಾವು ಬಹುಪತ್ನಿತ್ವಕ್ಕೆ ಪರವಾಗಿದ್ದೇವೆ. ಅದು ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಕಾಪಾಡುವ ಸಾಮರ್ಥ್ಯ ಗಂಡನಿಗಿದ್ದರೆ ಮಾತ್ರ.

ಶ್ರೀ ಚೈತನ್ಯ ಮಹಾಪ್ರಭು ನೀಡಬಹುದಾದ ಈ ಶಾಪವನ್ನು ಬಾಲಕಿಯರು ಕೇಳಿಸಿಕೊಂಡರು. ಅವನಿಗೆ ಏನೋ ಅಸಾಮಾನ್ಯವಾದುದು ಗೊತ್ತಿರಬಹುದೆಂದೂ ಅಥವಾ ದೇವತೆಗಳಿಂದ ಶಕ್ತಿ ದೊರೆತಿರಬಹುದೆಂದೂ ಭಾವಿಸಿ ಭಯಭೀತರಾದರು. ಅವನ ಶಾಪ ಕಾರ್ಯಗತವಾಗಬಹುದೆಂದೂ ಹೆದರಿದರು. ಆದುದರಿಂದ ಬಾಲಕಿಯರು ನೈವೇದ್ಯಗಳನ್ನೆಲ್ಲಾ ಶ್ರೀ ಚೈತನ್ಯ ಮಹಾಪ್ರಭುಗಳ ಮುಂದಿಟ್ಟರು. ಅವನು ಅದನ್ನೆಲ್ಲಾ ಸ್ವಾಹ ಮಾಡಿ ಬಾಲಕಿಯರಿಗೆ ತೃಪ್ತಿಯಾಗುವಷ್ಟು ಆಶೀರ್ವಾದ ಮಾಡಿದ. ಬಾಲಕಿಯರೊಂದಿಗೆ ಪರಮಾತ್ಮನ ಈ  ವರ್ತನೆ ಎಲ್ಲರಿಗೂ ತಿಳಿದಾಗ, ಅದೇನೂ ತಪ್ಪು ಕಲ್ಪನೆಗೆ ಅವಕಾಶ ಕೊಡಲಿಲ್ಲ. ಬದಲಾಗಿ ಅವರೆಲ್ಲಾ ಈ ವ್ಯವಹಾರದಲ್ಲಿ ಸಂತೋಷ ಮತ್ತು ತೃಪ್ತಿಪಟ್ಟುಕೊಂಡರು.

ಲಕ್ಷ್ಮೀ – ಚೈತನ್ಯರ ಭೇಟಿ

ಒಂದು ದಿನ, ವಲ್ಲಭಾಚಾರ್ಯರ ಮಗಳು ಲಕ್ಷ್ಮೀ ಗಂಗಾನದಿಯಲ್ಲಿ ಸ್ನಾನ ಮಾಡಿ ದೇವತೆಗಳನ್ನು ಪೂಜಿಸಲು ಬಂದಳು. ಈ ಲಕ್ಷ್ಮಿಯು ಈ ಮೊದಲು ಶ್ರೀರಾಮಚಂದ್ರನ ಪತ್ನಿ ಜಾನಕಿ ಹಾಗೂ ಶ್ರೀಕೃಷ್ಣನ ಸತಿ ರುಕ್ಮಿಣಿಯಾಗಿದ್ದಳು. ಅದೇ ಅದೃಷ್ಟ ದೇವತೆಯು ಶ್ರೀ ಚೈತನ್ಯ ಮಹಾಪ್ರಭುಗಳ ಪತ್ನಿಯಾಗಲು ಲಕ್ಷ್ಮಿಯಾಗಿ ಆವಿರ್ಭವಿಸಿದಳು. ಲಕ್ಷ್ಮೀದೇವಿಯನ್ನು ನೋಡಿದ ಕೂಡಲೇ ಪರಮಾತ್ಮ ಅವಳಿಂದ ಆಕರ್ಷಿತಗೊಂಡ. ಅದೇ ರೀತಿ ಪರಮಾತ್ಮನನ್ನು ನೋಡಿ ಲಕ್ಷ್ಮೀದೇವಿಗೂ ಮನಃತೃಪ್ತಿಯಾಯಿತು. ಅವರಿಬ್ಬರ ನಡುವಣ ಪರಸ್ಪರ ಸ್ವಾಭಾವಿಕ ಪ್ರೀತಿ ಎಚ್ಚರಗೊಂಡಿತು. ಇದನ್ನು ಬಾಲ್ಯದ ಭಾವನೆಗಳೆಂದು ಹೇಳಬಹುದಾದರೂ ಅವರಿಬ್ಬರು ಪರಸ್ಪರ ಆಕರ್ಷಿತರಾದರೆಂಬುದು ವಾಸ್ತವ.

ಶ್ರೀ ಚೈತನ್ಯ ಮಹಾಪ್ರಭು ಮತ್ತು ಲಕ್ಷ್ಮೀದೇವಿ ಚಿರಂತನವಾದ ಪತಿ ಪತ್ನಿಯರು. ಆದುದರಿಂದ ಅವರು ಪರಸ್ಪರ ನೋಡಿದಾಗ ಅವರಲ್ಲಿನ ಶಾಶ್ವತ ಪ್ರೀತಿ ಪುಟಿದೆದ್ದದು ಸ್ವಾಭಾವಿಕ. ಅವರ ಸ್ವಾಭಾವಿಕ ಭಾವನೆಗಳು ಅವರ ಭೇಟಿಯಲ್ಲಿ ತತ್‌ಕ್ಷಣ ಎಚ್ಚೆತ್ತುಕೊಂಡಿತು. ಅವರಿಬ್ಬರು ಪರಸ್ಪರ ನೋಡುತ್ತಲೇ ಸಹಜ ಪ್ರೀತಿಯನ್ನು ಅನುಭವಿಸಿದರು ಮತ್ತು ದೇವತೆಗಳನ್ನು ಪೂಜಿಸುವ ನೆಪದಲ್ಲಿ ತಮ್ಮ ಭಾವನೆಗಳನ್ನು ಪ್ರಕಟಿಸಿದರು. ಶ್ರೀ ಚೈತನ್ಯ ಮಹಾಪ್ರಭು ಲಕ್ಷ್ಮಿಗೆ ಹೇಳಿದರು, ‘ಸುಮ್ಮನೆ ನನ್ನನ್ನು ಪೂಜಿಸು, ಏಕೆಂದರೆ ನಾನು ದೇವೋತ್ತಮ ಪರಮಪುರುಷ. ನೀನು ನನ್ನನ್ನು ಪೂಜಿಸಿದರೆ, ನೀನು ಅಪೇಕ್ಷಿಸುವುದು ನಿನಗೆ ಅನುಗ್ರಹವಾಗುತ್ತದೆ.’ ಪರಮಾತ್ಮನ ಆದೇಶವನ್ನು ಕೇಳಿದ ಕೂಡಲೇ, ಲಕ್ಷ್ಮಿಯು ತತ್‌ಕ್ಷಣ ಅವನಿಗೆ ಗಂಧ ಮತ್ತು ಪುಷ್ಪವನ್ನು ನೀಡಿ, ಅವನ ಕೊರಳಿಗೆ ಮಲ್ಲಿಗೆಹಾರ ಹಾಕಿ ಪೂಜೆ ಸಲ್ಲಿಸಿದಳು. ಲಕ್ಷ್ಮಿಯಿಂದ ಪೂಜಿಸಲ್ಪಟ್ಟ ಪರಮಾತ್ಮನು ನಸುನಕ್ಕ. ಅವನು ಶ್ರೀಮದ್ಭಾಗತದ ಶ್ಲೋಕವೊಂದನ್ನು ಹೇಳುತ್ತ ಅವಳ ಭಾವನೆಗಳನ್ನು ಸ್ವೀಕರಿಸಿದ. ಸಂಕಲ್ಪೋ ವಿದಿತಃ ಸಾಧ್ವ್ಯೋ ಭವತೀನಾಂ ಮದರ್ಚನಮ್ | ಮಯಾನುಮೋದಿತಃ ಸೋಽಸೌ ಸತ್ಯೋ ಭವಿತುಮರ್ಹತಿ  – ನನ್ನ ಪ್ರೀತಿಯ ಗೋಪಿಯರೇ, ಈ ವ್ರತದ ನಿಜವಾದ ಉದ್ದೇಶವು ನನ್ನನ್ನು ಆರಾಸಿ, ನನ್ನನ್ನು ನಿಮ್ಮ ಪತಿಯನ್ನಾಗಿ ಪಡೆಯುವುದೇ ಆಗಿದೆ ಎಂಬುದು ನನಗೆ ತಿಳಿದಿದೆ. ಆ ನಿಮ್ಮ ಉದ್ದೇಶಕ್ಕೆ ನನ್ನ ಸಮ್ಮತಿ ಇದೆ.  ನಿಜವಾಗಿಯೂ ನಿಮ್ಮ ಉದ್ದೇಶವು ಸಫಲವಾಗಲೇಬೇಕು. ಈ ರೀತಿ ಅವರು ಪರಸ್ಪರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ಮೇಲೆ ಚೈತನ್ಯ ಮಹಾಪ್ರಭು ಮತ್ತು ಲಕ್ಷ್ಮಿ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು. ಶ್ರೀ ಚೈತನ್ಯ ಮಹಾಪ್ರಭುಗಳ ಲೀಲೆಗಳನ್ನು ಅರಿಯುವವರಾರು?

ಮಿಶ್ರರಿಗೆ ಸ್ವಪ್ನ

ಮತ್ತೊಂದು ಸಂದರ್ಭದಲ್ಲಿ ಮಗನ ತುಂಟತನವನ್ನು ನೋಡಿದ ಜಗನ್ನಾಥ ಮಿಶ್ರ, ಅವನನ್ನು ಗದರಿಸಿಕೊಂಡು ಅವನಿಗೆ ನೈತಿಕತೆಯ ಬೋಧನೆ ಮಾಡಿದರು. ಅದೇ ದಿನ ರಾತ್ರಿ ಜಗನ್ನಾಥ ಮಿಶ್ರ ಅವರ ಕನಸಿನಲ್ಲಿ ಬ್ರಾಹ್ಮಣನೊಬ್ಬ ಬಂದು ಕೋಪದಿಂದ ಈ ರೀತಿ ಮಾತನಾಡಿದ:‘ನನ್ನ ಪ್ರೀತಿಯ ಮಿಶ್ರ, ನಿನಗೆ ನಿನ್ನ ಮಗನ ಬಗೆಗೆ ಏನೂ ತಿಳಿಯದು. ನೀನು ಅವನನ್ನು ನಿನ್ನ ಮಗನೆಂದು ತಿಳಿದು ಅವನನ್ನು ಗದರಿಸುವೆ.’ ಜಗನ್ನಾಥ ಮಿಶ್ರ ಉತ್ತರಿಸಿದರು, ‘ಈ ಮಗುವು ದೇವತೆ ಇರಬಹುದು, ಯೋಗಿ ಇರಬಹುದು ಅಥವಾ ದೊಡ್ಡ ಸಂತನಾಗಿರಬಹುದು. ಅವನು ಏನೆಂಬುದು ನನಗೆ ಮುಖ್ಯವಲ್ಲ, ನಾನು ಅವನನ್ನು ನನ್ನ ಮಗನೆಂದೇ ಭಾವಿಸುವೆ. ಮಗನಿಗೆ ಧರ್ಮ ಮತ್ತು ನೈತಿಕತೆ ಕುರಿತಂತೆ ಶಿಕ್ಷಣ ನೀಡುವುದು ತಂದೆಯ ಕರ್ತವ್ಯ. ನಾನು ಅವನಿಗೆ ಈ ಶಿಕ್ಷಣ ನೀಡದಿದ್ದರೆ ಹೇಗೆ ಅರಿವಾಗುತ್ತದೆ?’ ಬ್ರಾಹ್ಮಣ ಉತ್ತರಿಸಿದ, ‘ನಿನ್ನ ಮಗ ಅಲೌಕಿಕ  ಬಾಲಕನಾಗಿ ಪರಿಪೂರ್ಣ ಜ್ಞಾನ ಹೊಂದಿದವನಾಗಿದ್ದರೆ, ನಿನ್ನ ಶಿಕ್ಷಣದಿಂದ ಏನು ಪ್ರಯೋಜನ?’ ಜಗನ್ನಾಥ ಮಿಶ್ರ ಉತ್ತರಿಸಿದರು, ‘ನನ್ನ ಮಗ ಸಾಮಾನ್ಯನಲ್ಲದೆ ಸಾಕ್ಷಾತ್ ನಾರಾಯಣನೇ ಆಗಿದ್ದರೂ, ಮಗನಿಗೆ ಬೋಸುವುದು ತಂದೆಯ ಕರ್ತವ್ಯ.’ ಈ ರೀತಿಯಾಗಿ ಜಗನ್ನಾಥ ಮಿಶ್ರ ಮತ್ತು ಬ್ರಾಹ್ಮಣ ಧಾರ್ಮಿಕ ತತ್ತ್ವವನ್ನು ಕುರಿತಂತೆ ಕನಸಿನಲ್ಲಿಯೇ ಚರ್ಚಿಸಿದರು. ಆದರೂ ಜಗನ್ನಾಥ ಮಿಶ್ರ ಅವರದು ಪರಿಶುದ್ಧ ಪಿತೃಪ್ರೇಮವಾಗಿತ್ತು ಮತ್ತು ಅವರಿಗೆ ಮತ್ತೇನನ್ನೂ ಅರಿಯುವ ಆಸಕ್ತಿ ಇರಲಿಲ್ಲ. ಇದರಿಂದ ಸಂತೃಪ್ತರಾದ ಬ್ರಾಹ್ಮಣ ಅಲ್ಲಿಂದ ತೆರಳಿದ. ಎಚ್ಚೆತ್ತ ಜಗನ್ನಾಥ ಮಿಶ್ರ ಅವರು ಅಚ್ಚರಿಗೊಂಡರು. ಅವರು ತಮ್ಮ ಕನಸನ್ನು ಬಂಧುಮಿತ್ರರಲ್ಲಿ ಹೇಳಿಕೊಂಡರು, ಪ್ರತಿಯೊಬ್ಬರೂ ಇದನ್ನು ಕೇಳಿ ಸೋಜಿಗಗೊಂಡರು. ಈ ರೀತಿ ಗೌರಹರಿ ತನ್ನ ಬಾಲ್ಯ ಲೀಲೆಗಳನ್ನು ತೋರುತ್ತಾ ತನ್ನ ಪೋಷಕರ ಆನಂದವನ್ನು ಹೆಚ್ಚಿಸುತ್ತಿದ್ದ.

(ಮುಂದುವರಿಯುವುದು)
Leave a Reply

Your email address will not be published. Required fields are marked *