Search
Friday 7 August 2020
  • :
  • :

ಸುವರ್ಣಾವತಾರ ಭಾಗ – 6

ಜಗನ್ನಾಥ ಮಿಶ್ರ ಅವರ ಮನೆಯಲ್ಲಿದ್ದ ಕಾಲದಲ್ಲಿ ದೇವೋತ್ತಮ ಪರಮಪುರುಷನು ಅನೇಕ ಅಲೌಕಿಕ ಲೀಲೆಗಳನ್ನು ಪ್ರದರ್ಶಿಸಿದ. ಒಂದು ದಿನ, ಶ್ರೀಜಗನ್ನಾಥ ಮಿಶ್ರ ತಮ್ಮ ಮಗ ವಿಶ್ವಂಭರನನ್ನು ಕರೆದು ‘ನನ್ನ ಪುಸ್ತಕವನ್ನು ತೆಗೆದುಕೊಂಡು ಬಾ’ ಎಂದರು. ತಂದೆ ಧ್ವನಿ ಕೇಳಿಸಿದಾಗ ನಿಮಾಯ್ ಮನೆಯೊಳಗೆ ಬರುತ್ತಿದ್ದ. ಅವನು ನಡೆದಾಡುತ್ತಿದ್ದಾಗ ಕಾಲಿನ ಗೆಜ್ಜೆಯ ಝಣಕ ಜೋರಾಗಿ ಕೇಳಿಸುತ್ತಿತ್ತು. ‘ ಕಾಲಿನ ಗೆಜ್ಜೆಯ ಶಬ್ದ ಎಲ್ಲಿಂದ ಬರುತ್ತಿದೆ?’ ಎಂದು ಶ್ರೀ ಜಗನ್ನಾಥ ಮಿಶ್ರ ವಿಚಾರಿಸಿದರು. ಅವರು  ಮತ್ತು ಅವರ ಪತ್ನಿ ಶಚೀದೇವಿ ಎಲ್ಲೆಡೆ ಹುಡುಕಿದರು.

‘ನಮ್ಮ ಮಗ ಕಾಲಿಗೆ ಗೆಜ್ಜೆ ಹಾಕಿಕೊಳ್ಳುವುದಿಲ್ಲ. ಆದುದರಿಂದ ಈ ಗೆಜ್ಜೆಯ ನೀನಾದ ಎಲ್ಲಿಂದ ಬರುತ್ತಿದೆ? ಇದೆಂಥ ಅಚ್ಚರಿ!’ ತಂದೆ ತಾಯಿ ಈ ಪ್ರಸಂಗವನ್ನು ಗಮನಿಸುತ್ತಾ ಮೂಕರಾದರು. ನಿಮಾಯ್ ಪುಸ್ತಕವನ್ನು ತಂದು ತಂದೆಗೆ ಕೊಟ್ಟು ಓಡಿಹೋದ. ಅನಂತರ ಮಿಶ್ರ ದಂಪತಿ ಮನೆಯಲ್ಲಿ ಮತ್ತೊಂದು ಅಚ್ಚರಿಯನ್ನು ಕಂಡರು. ಮನೆಯೊಳಗೆಲ್ಲ ಅವರು ಧ್ವಜ, ಮಿಂಚು, ಮೊನೆ ಮತ್ತು ಮಾಲೆಗಳ ಕಾಲು ಗುರುತುಗಳನ್ನು ಕಂಡರು. ಅವರು ಆನಂದಭರಿತರಾದರು. ಕಣ್ಣಲ್ಲಿ ಆನಂದಬಾಷ್ಪ ಹರಿಯಿತು. ಈ ಪಾದಕಮಲಗಳಿಗೆ ನಮಸ್ಕರಿಸುತ್ತಾ ಅವರು, ‘ನಾವು ನಿಜವಾಗಲೂ ಮುಕ್ತರಾಗುತ್ತೇವೆ. ನಮಗಿನ್ನು ಪುನರ್ಜನ್ಮ ಇಲ್ಲ.’ ‘ನನಗನಿಸುತ್ತದೆ ಗೆಜ್ಜೆ ನಾದವು ಸಾಲಿಗ್ರಾಮ ಶಿಲಾ ವಿಗ್ರಹದ ಪಾದದಿಂದ ಬಂದಿರಬಹುದೆಂದು; ಅವನು ಮನೆಯಲ್ಲೆಲ್ಲಾ ರಹಸ್ಯವಾಗಿ ಓಡಾಡುತ್ತಾನಲ್ಲಾ.’ ಜಗನ್ನಾಥ ಮಿಶ್ರ ಮತ್ತು ಶಚೀಮಾತಾ ಸಂತೋಷದಿಂದ ಸಾಲಿಗ್ರಾಮ ಶಿಲೆಗೆ ಪೂಜೆ ಸಲ್ಲಿಸಿದರು. ಶ್ರೀ ಚೈತನ್ಯ ತನ್ನಲ್ಲೆ ನಸುನಕ್ಕ.

ಬ್ರಾಹ್ಮಣನಿಂದ ನಿಮಾಯ್‌ಗೆ ಭೋಜನ

ಒಬ್ಬ ಶ್ರದ್ಧಾವಂತ ಬ್ರಾಹ್ಮಣನು  ದೇವೋತ್ತಮ ಪರಮ ಪುರುಷನನ್ನು ತೃಪ್ತಿ ಪಡಿಸಲು ಯಾತ್ರಾಸ್ಥಳಗಳಿಗೆ ಭೇಟಿ ಕೊಡುತ್ತಿದ್ದ. ಅವನು ಶ್ರೀಕೃಷ್ಣನ ಪರಮಭಕ್ತನಾಗಿದ್ದ ಮತ್ತು ಶ್ರೀಗೋಪಾಲನಿಗೆ ಆಹಾರ ನೀಡಿ ಉಳಿದಿದ್ದನ್ನು ಮಾತ್ರ ಸೇವಿಸುತ್ತಿದ್ದ. ಇದಲ್ಲದೆ ಬೇರೇನೂ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ. ಅನೇಕ ಯಾತ್ರಾಸ್ಥಳಗಳಿಗೆ ಭೇಟಿ ನೀಡಿದ ಮೇಲೆ ಈ ಬ್ರಾಹ್ಮಣನು ಶ್ರೀಚೈತನ್ಯನ ಮನೆಗೆ ಬಂದ. ಪರಿಶುದ್ಧ ವ್ಯಕ್ತಿಯಾದ ಅವನು ಆಧ್ಯಾತ್ಮಿಕತೆಯಲ್ಲೇ ಮುಳುಗಿದ್ದ. ಅವನು ತನ್ನೊಡನೆ ಬಾಲ ಗೋಪಾಲನ ವಿಗ್ರಹ ಮತ್ತು ಸಾಲಿಗ್ರಾಮ ಶಿಲೆಯನ್ನು ಕೊರಳಿಗೆ ಹಾಕಿಕೊಂಡು ಸಂಚರಿಸುತ್ತಿದ್ದ. ಇದು ಅವನ ಅದ್ಭುತ ಸೊತ್ತಾಗಿತ್ತು. ಬ್ರಾಹ್ಮಣನನ್ನು ಕಂಡು ಜಗನ್ನಾಥ ಮಿಶ್ರರಿಗೆ ತುಂಬ ಸಂತೋಷವಾಯಿತು. ಈ ಗೌರವಾನ್ವಿತ ಅತಿಥಿಯನ್ನು ಚೆನ್ನಾಗಿ ಉಪಚರಿಸಲು ನಿರ್ಧರಿಸಿದರು. ಮಿಶ್ರ ಆದರದಿಂದ ಹೇಳಿದರು, ‘ನೀವು ಎಲ್ಲೆಡೆ ಸಂಚರಿಸುವುದು ಎಂತಹ ಒಳ್ಳೆಯ ಅದೃಷ್ಟ . ಇಂದು ನಾನು ಪುನೀತನಾಗಿದ್ದೇನೆ. ನೀವು ನಮ್ಮಲ್ಲಿಗೆ ಭೇಟಿ ಕೊಟ್ಟಿರುವಿರಿ. ನಿಮ್ಮ ಅಡುಗೆಗೆ ಸಿದ್ಧಪಡಿಸಲು ದಯೆಯಿಟ್ಟು ಅನುಮತಿ ಕೊಡಿ.’ ಬ್ರಾಹ್ಮಣ ಉತ್ತರಿಸಿದ, ‘ಪ್ರಿಯ ಮಿಶ್ರ, ಹಾಗೆಯೇ ಆಗಲಿ.’ ಸಂತೋಷದಿಂದ ಶ್ರೀ ಮಿಶ್ರರು ಎಲ್ಲ ವ್ಯವಸ್ಥೆಗಳನ್ನು ಮಾಡಿದರು.

ಅಡುಗೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು. ಆಹಾರ ತಯಾರಿಕೆಗೆ ಅಗತ್ಯ ವಸ್ತುಗಳನ್ನು ತಂದಿರಿಸಲಾಯಿತು. ಬ್ರಾಹ್ಮಣನು ತನಗೆ ತೃಪ್ತಿಯಾಗುವವರೆಗೂ ಅಡುಗೆ ಮಾಡಿ ಶ್ರೀಕೃಷ್ಣನಿಗೆ ಅರ್ಪಿಸಲು ಕುಳಿತ. ಶ್ರೀ ಶಚೀನಂದನ ಚೈತನ್ಯ ಪರಮ ಆತ್ಮವಾಗಿದ್ದು ಪ್ರತಿಯೊಬ್ಬರ ಹೃದಯದಲ್ಲಿಯೂ ಇರುತ್ತಾನೆ. ಅವನು ಈ ಬ್ರಾಹ್ಮಣನಿಗೆ ತನ್ನ ದರ್ಶನ ಕೊಡಲು ನಿರ್ಧರಿಸಿದ. ಬ್ರಾಹ್ಮಣನು ಆಗಷ್ಟೇ ಧ್ಯಾನ ಶುರುಮಾಡಿದ್ದಾಗ ದೇವೋತ್ತಮ ಪರಮಪುರುಷ ಶ್ರೀಗೌರಸುಂದರ ಅವನ ಮುಂದೆ ಪ್ರತ್ಯಕ್ಷನಾದ. ನಗುತ್ತಾ, ಅವನು ಬ್ರಾಹ್ಮಣನು ಮಾಡಿದ ಆಹಾರದಲ್ಲಿ ಒಂದು ಹಿಡಿಯಷ್ಟು ತೆಗೆದುಕೊಂಡ. ಬ್ರಾಹ್ಮಣ ಜೋರಾಗಿ ಕೂಗಿದ, ‘ಅಯ್ಯೋ! ಅಯ್ಯೋ! ಈ ಹುಡುಗ ದೇವರಿಗೆ ಅರ್ಪಿಸಲೆಂದು ಇಟ್ಟಿದ್ದ ಆಹಾರವನ್ನು ಕದ್ದು ಬಿಟ್ಟ!’ ಶ್ರೀ ಜಗನ್ನಾಥ ಮಿಶ್ರ ಅಲ್ಲಿಗೆ ಬಂದಾಗ ಶ್ರೀಗೌರಸುಂದರ ನಗುತ್ತಾ ಅನ್ನವನ್ನು ತಿನ್ನುತ್ತಿದ್ದ.

ಅವನಿಗೆ ಹೊಡೆಯಬೇಕೆಂದು ಕೋಪದಿಂದ ಮಿಶ್ರರು ಅವನ ಹಿಂದೆ ಓಡಿದರು. ಆದರೆ ಬ್ರಾಹ್ಮಣ ಭಯದಿಂದ ನಿಂತು ಮಿಶ್ರ ಅವರ ಕೈಹಿಡಿದ. ಬ್ರಾಹ್ಮಣ ಹೇಳಿದ, ‘ನನ್ನ ಪ್ರೀತಿಯ ಮಿಶ್ರ, ನೀನು ಗೌರವಾನ್ವಿತ ಮತ್ತು ಜ್ಞಾನಿ. ಆದರೆ ಈ ಮಗುವಿಗೆ ಏನು ಅರಿವು ಇರುತ್ತದೆ? ಅವನಿಗೆ ಹೊಡೆದರೆ ಏನು ಪ್ರಯೋಜನ? ತಪ್ಪು ಸರಿ ಗೊತ್ತಿದ್ದವರಿಗೆ ಹೊಡೆದರೆ ಸರಿ. ಆದರೆ ಈ ಮಗುವಿಗೆ ಹೊಡೆಯಬೇಡ.’

ಶ್ರೀ ಮಿಶ್ರರು ತಲೆತಗ್ಗಿಸಿ ಕೂತುಬಿಟ್ಟರು. ಒಂದು ಮಾತೂ ಆಡಲಿಲ್ಲ. ‘ದುಃಖಿಸಬೇಡಿ, ಪ್ರೀತಿಯ ಮಿಶ್ರ,’ ಎಂದು ಬ್ರಾಹ್ಮಣ ಹೇಳಿದ.‘ ದೇವೋತ್ತಮನಿಗೆ ನಡೆಯುವುದೆಲ್ಲವೂ ಗೊತ್ತು. ಏನೇನು ಹಣ್ಣು ಅಥವಾ ತರಕಾರಿಗಳಿವೆಯೋ ಅವುಗಳನ್ನು ತೆಗೆದುಕೊಂಡು ಬನ್ನಿ. ಇಂದು ನಾನು ಅದನ್ನೇ ಸೇವಿಸುವೆ.’ ಶ್ರೀ ಮಿಶ್ರ ಹೇಳಿದರು, ‘ ನೀವು ನನ್ನನ್ನು ನಿಮ್ಮ ಸೇವಕನೆಂದು ಭಾವಿಸಿದರೆ, ನಿಮ್ಮ ಅಡುಗೆಗೆ ವ್ಯವಸ್ಥೆ ಮಾಡುವೆ. ನೀವು ಮತ್ತೆ ಅಡುಗೆ ಮಾಡಿದರೆ ನನಗೆ ತೃಪ್ತಿಯಾಗುತ್ತದೆ. ಅಡುಗೆಗೆ ಅಗತ್ಯವಾದ ಎಲ್ಲ ಸಾಮಗ್ರಿಗಳು ಮನೆಯಲ್ಲಿ ಇವೆ.’

ಮನೆಯಲ್ಲಿದ್ದ ಮಿಶ್ರ ಅವರ ಇತರ ಬಂಧುಮಿತ್ರರು ಬ್ರಾಹ್ಮಣನಿಗೆ ಮತ್ತೆ ಅಡುಗೆ ಮಾಡಲು ಒತ್ತಾಯಿಸಿದರು. ‘ನಿಮ್ಮೆಲ್ಲರ ಅಪೇಕ್ಷೆಯಂತೆ ಮತ್ತೆ ನಾನು ಅಡುಗೆ ಮಾಡುವೆ.’ ಎಲ್ಲರಿಗೂ ತೃಪ್ತಿಯಾಯಿತು. ಮತ್ತೆ ಅಡುಗೆ ಮನೆಯನ್ನು ಶುದ್ಧೀಕರಿಸಿ ಸಾಮಗ್ರಿಗಳನ್ನು ನೀಡಲಾಯಿತು. ಬ್ರಾಹ್ಮಣ ಅಡುಗೆ ಮಾಡಲು ಶುರುಮಾಡಿದ. ಕೆಲವರಿಗೆ ಚಿಂತೆಯಿತ್ತು. ಆ ಮಗು ಮತ್ತೆ ನೈವೇದ್ಯವನ್ನು ಹಾಳುಮಾಡೀತು ಎಂದು ಭಯ ವ್ಯಕ್ತಪಡಿಸಿದರು.

‘ಮಗುವನ್ನು ಬೇರೆ ಮನೆಗೆ ಕರೆದೊಯ್ದು ಅಲ್ಲೇ ಇರಿ. ಬ್ರಾಹ್ಮಣ ಅಡುಗೆ ಪೂರೈಸಿ ಊಟ ಮಾಡುವವರೆಗೂ ಮಗು ಅಲ್ಲೇ ಇರಲಿ’ ಎಂದು ಬಂಧುಗಳು ಶಚೀಮಾತಾಗೆ ಹೇಳಿದರು. ಶಚೀಮಾತಾ ಮಗುವನ್ನು ಪಕ್ಕದ ಮನೆಗೆ ಒಯ್ದಳು. ಅಲ್ಲಿದ್ದ ಮಹಿಳೆಯರು ನಿಮಾಯ್‌ನನ್ನು ಛೇಡಿಸಿದರು. ‘ಹೀಗಾ ಮಾಡುವುದು, ಬ್ರಾಹ್ಮಣನ ಆಹಾರವನ್ನು ಕದಿಯುವುದೇ?’ ಶ್ರೀ ಚೈತನ್ಯ ನಸುನಗುತ್ತಾ, ‘ನನ್ನದೇನು ತಪ್ಪು? ಬ್ರಾಹ್ಮಣ ನನ್ನನ್ನು ಕರೆದರಲ್ಲಾ.’

‘ಓ ನಿಮಾಯ್, ಈಗ ನೀನು ಜಾತಿ ಕಳೆದುಕೊಂಡಿರುವುದ- ರಿಂದ ಇನ್ನಷ್ಟು ತುಂಟತನ ಮಾಡುವೆಯಾ? ಈ ಬ್ರಾಹ್ಮಣ ಯಾರು? ಅವರು ಎಲ್ಲಿಂದ ಬಂದರು? ಅವರ ಕುಟುಂಬ ಯಾವುದು? ಅವರು ಮಾಡಿದ ಆಹಾರವನ್ನು ಸೇವಿಸಿ ನೀನು ನಿನ್ನ ಜಾತಿಯನ್ನು ಹೇಗೆ ಕಾಪಾಡಿಕೊಳ್ಳುವೆ?’ ನಸುನಗುತ್ತಾ ಶ್ರೀ ಚೈತನ್ಯ ಉತ್ತರಿಸಿದ, ‘ನಾನು ಗೋಪಾಲಕರ ಜಾತಿಯವನು! ನಾನು ಬ್ರಾಹ್ಮಣರು ತಯಾರಿಸಿದ ಆಹಾರವನ್ನು ಎಲ್ಲ ಕಾಲದಲ್ಲಿಯೂ ಸ್ವೀಕರಿಸುವೆ. ಬ್ರಾಹ್ಮಣನು ತಯಾರಿಸಿದ ಆಹಾರ ಸೇವಿಸಿ ಗೋಪಾಲಕ ತನ್ನ ಜಾತಿಯನ್ನು ಹೇಗೆ ಕಳೆದುಕೊಳ್ಳುತ್ತಾನೆ?’

ದೇವೋತ್ತಮ ಪರಮಪುರುಷ ಶ್ರೀ ಚೈತನ್ಯ ತನ್ನ ಬಗ್ಗೆ ನಿಜವನ್ನು ವಿವರಿಸಲು ಈ ತಂತ್ರ ಬಳಸಿದ. ಆದರೆ ಅವನ ಮಾಯಾಶಕ್ತಿ ಎಷ್ಟು ಪರಿಪೂರ್ಣವಾಗಿತ್ತೆಂದರೆ ಯಾರಿಗೂ ಅವನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ. ನೆರಮನೆಯವರೆಲ್ಲಾ ಮಗುವಿನ ವಾದಗಳನ್ನು ಆನಂದಿಸಿದರು. ಮಗು ಕೈಯಿಂದ ಕೈಗೆ ವರ್ಗವಾಗುತ್ತಿತ್ತು. ಯಾರು ಚೈತನ್ಯರನ್ನು ಎತ್ತಿಕೊಂಡಿರುತ್ತಿದ್ದರೋ ಅವರು ಆನಂದಸಾಗರದಲ್ಲಿ ತೇಲುತ್ತಿದ್ದರು. ಈ ಮಧ್ಯೆ, ಬ್ರಾಹ್ಮಣ ಮತ್ತೊಮ್ಮೆ ಅಡುಗೆ ಮಾಡಿ ಶ್ರೀ ಬಾಲಗೋಪಾಲನಿಗೆ ಅರ್ಪಿಸಲು ಕೂತನು. ಹಾಗೆ ಅರ್ಪಿಸುವಾಗ ಬ್ರಾಹ್ಮಣನು ಶ್ರೀ ಬಾಲಗೋಪಾಲನನ್ನು ಧ್ಯಾನಿಸಿದನು. ಆದರೆ ಪರಮಾತ್ಮನಾದ ಶ್ರೀಗೌರ ಚಂದ್ರನಿಗೆ ಎಲ್ಲವೂ ಗೊತ್ತಿತ್ತು. ಇತ್ತ ಶ್ರೀ ಚೈತನ್ಯ ಎಲ್ಲರಿಗೂ ಸಂತಸ ತೋರುತ್ತಾ ಯಾರಿಗೂ ತಿಳಿಯದಂತೆ ಆ ಜಾಗದಿಂದ ಇತ್ತ ಓಡಿಬಂದನು. ಬ್ರಾಹ್ಮಣನು ದೇವರಿಗೆ ಆಹಾರ ಅರ್ಪಿಸಿದ ಸ್ಥಳಕ್ಕೆ ಬಂದು ನಿಂತನು.

ಶ್ರೀ ಚೈತನ್ಯ  ಕಳ್ಳತನದಿಂದ ಕೈತುಂಬ ಅನ್ನ ತೆಗೆದುಕೊಂಡು ಬಾಯೊಳಗಿಟ್ಟುಕೊಂಡು ಓಡಿದ. ಬ್ರಾಹ್ಮಣ ಆಶ್ಚರ್ಯದಿಂದ ಜೋರಾಗಿ ಕೂಗಿದ. ‘ಅಯ್ಯಯ್ಯೋ! ಮಗು ಆಹಾರ ತಿಂದು ಓಡಿಹೋದ’. ಶ್ರೀ ಮಿಶ್ರರಿಗೆ ಕೋಪ ತಡೆಯದಾಯಿತು. ಕೋಲು ಹಿಡಿದು ನಿಮಾಯ್‌ನನ್ನು ಅಟ್ಟಿಸಿಕೊಂಡು ಹೋದರು. ನಿಮಾಯ್ ಓಡುತ್ತಾ ಕೋಣೆಯೊಳಗೆ ಸೇರಿಕೊಂಡ. ಅಲ್ಲಿಗೆ ಬಂದ ಮಿಶ್ರ, ‘ನೋಡುತ್ತಾ ಇರು! ಈ ರೀತಿ ತುಂಟತನ ಮಾಡುವೆಯಾ? ನಾನು ಸುಸಂಸ್ಕೃತ ಮತ್ತು ಜ್ಞಾನಿ ಇರಬಹುದು. ಆದರೆ ನೀನು ನನ್ನನ್ನು ಮೂರ್ಖನೆಂದು ಭಾವಿಸಬೇಡ.’ ಅವರ ಮನೆಯಲ್ಲಿದ್ದವರೆಲ್ಲಾ ಓಡಿಬಂದು ಮಿಶ್ರರನ್ನು ಹಿಡಿದುಕೊಂಡರು. ಮಗುವನ್ನು ಬಿಟ್ಟುಬಿಡಲು ಒತ್ತಾಯಿಸಿದರು. ಅವನಿಗೆ ಹೊಡೆಯುವುದರಿಂದ ಏನು ಸಾಸಿದಂತಾಗುತ್ತದೆ ಎಂದು ಕೇಳಿದರು.

‘ಒಳ್ಳೆಯದು ಕೆಟ್ಟದರ ವ್ಯತ್ಯಾಸವೇ ಅವನಿಗೆ ತಿಳಿಯದು. ಇಂತಹ ಸಣ್ಣ ಮಗುವನ್ನು ಹೊಡೆಯುವುದು ಮೂರ್ಖತನ. ಸ್ವಾಭಾವಿಕವಾಗಿ ಮಕ್ಕಳು ಅಶಾಂತರಾಗಿರುತ್ತಾರೆ. ಆದರೆ ಹೊಡೆದು ಅವರಿಗೆ ಬುದ್ಧಿ ಕಲಿಸಲಾಗದು.’ ಅದೇ ವೇಳೆಗೆ ಬ್ರಾಹ್ಮಣನು ಅಲ್ಲಿಗೆ ಓಡುತ್ತಾ ಬಂದು, ಶ್ರೀ ಮಿಶ್ರರ ಕೈಹಿಡಿದು ‘ದಯೆಯಿಟ್ಟು ಇಲ್ಲಿ ಕೇಳಿ. ಸಣ್ಣ ಹುಡುಗನದೇನೂ ತಪ್ಪಿಲ್ಲ. ಎಂದು ಏನಾಗಬೇಕೋ ಅದೇ ಆಗುತ್ತದೆ. ನನಗೆ ಈ ದಿನ ಶ್ರೀಕೃಷ್ಣನ ಪ್ರಸಾದ ಲಭ್ಯವಿಲ್ಲವೇನೊ. ಬಹುಶಃ ಇದು ಈ ಪ್ರಸಂಗದ ರಹಸ್ಯ ಸತ್ಯ.’

ಆ ಸಮಯದಲ್ಲಿ ಚೈತನ್ಯನ ಅಣ್ಣ ದೇವೋತ್ತಮ ಪರಮ ಪುರುಷ ವಿಶ್ವರೂಪ ಅಲ್ಲಿಗೆ ಬಂದ. ಬ್ರಾಹ್ಮಣನಿಗೆ ಗೌರವ ಸಲ್ಲಿಸಿ ಕೆಳಗೆ ಕುಳಿತ. ಮೃದುವಾದ ದನಿಯಲ್ಲಿ ಹೇಳಿದ. ‘ಈ ದಿನ ಪವಿತ್ರವಾದ ದಿನ. ನೀವು ನಮ್ಮ ಮನೆಗೆ ಅತಿಥಿಯಾಗಿ ಬಂದದ್ದು ಅದೃಷ್ಟ. ನಾವು ಪುನೀತರಾದೆವು. ಅತಿಥಿಯೊಬ್ಬ ಉಪವಾಸವಿದ್ದರೆ ಆ ಮನೆಯು ಅಶುಭಕ್ಕೆ ಗುರಿಯಾಗುತ್ತದೆ.’ ಬ್ರಾಹ್ಮಣ ಹೇಳಿದ, ‘ದಯೆಯಿಟ್ಟು ಹಾಗೆಲ್ಲಾ ಭಾವಿಸಬೇಡಿ. ನಾನು ಸ್ವಲ್ಪ ಹಣ್ಣು ಮತ್ತು ತರಕಾರಿ ಸೇವಿಸುವೆ.’

ಶ್ರೀವಿಶ್ವರೂಪ ಹೇಳಿದ, ‘ನೀವು ಉದಾತ್ತ ಮನಸ್ಸುಳ್ಳವರು. ಆದರೂ ನಾನು ಒಂದು ವಿಷಯ ಕೇಳಲು ಹಿಂಜರಿಯುವೆ. ಸಾಮಾನ್ಯವಾಗಿ ಸಂತಪುರುಷರು ಬೇರೆಯವರ ಸಂಕಷ್ಟದಿಂದ ದುಃಖಿತರಾಗುತ್ತಾರೆ. ಅನ್ಯರ ಸಂತೋಷಕ್ಕೆ ಮುಂದಾಗುತ್ತಾರೆ. ಸ್ವಲ್ಪ ಕರುಣೆತೋರಿ, ನೀವು ಶ್ರೀಕೃಷ್ಣನಿಗಾಗಿ ಮತ್ತೆ ಅಡುಗೆ ತಯಾರಿಸಬಹುದು. ಇದರಿಂದ ನಮ್ಮ ಕುಟುಂಬದ ನೋವು ಮಾಯವಾಗುತ್ತದೆ. ನನಗಂತೂ ತುಂಬಾ ಸಂತೋಷವಾಗುತ್ತದೆ.’ ಬ್ರಾಹ್ಮಣ ಹೇಳಿದ, ‘ನಾನು ಈಗಾಗಲೇ ಎರಡು ಬಾರಿ ಅಡುಗೆ ಮಾಡಿರುವೆ, ಆದರೂ  ಶ್ರೀಕೃಷ್ಣ ಆಹಾರಸೇವನೆಗೆ ಅವಕಾಶ ಕೊಡಲಿಲ್ಲ.. ಆದುದರಿಂದ ನನಗಿಂದು ಆಹಾರ ಇಲ್ಲ. ಇದು ಶ್ರೀಕೃಷ್ಣನ ಅಪೇಕ್ಷೆ. ಹೀಗಾಗಿ ನಾನ್ಯಾಕೆ ಹಾಗೆ ಮಾಡಲಿ? ನಾವೆಷ್ಟೋ ಬಾರಿ ಪ್ರಯತ್ನಿಸುತ್ತೇವೆ, ಆದರೆ ಶ್ರೀಕೃಷ್ಣ ಅದನ್ನು ಇಷ್ಟಪಡದಿದ್ದಾಗ ಅದು ಯಶಸ್ವಿಯಾಗುವುದಿಲ್ಲ.’ ಆಗ ಶ್ರೀವಿಶ್ವರೂಪ ಬ್ರಾಹ್ಮಣನ ಕಾಲು ಹಿಡಿದು ಬೇಡಿಕೊಂಡ. ಅವನ ಈ ಕ್ರಮದಿಂದ ಪ್ರಭಾವಿತನಾದ ಬ್ರಾಹ್ಮಣನು ಮತ್ತೆ ಅಡುಗೆ ಮಾಡಲು ಒಪ್ಪಿದ.

ಈ ಬಾರಿ ಶ್ರೀಮಿಶ್ರ ನಿಮಾಯ್ ಕೋಣೆಯ ಹೊರಗೆ ಕುಳಿತರು. ಕೋಣೆಯೊಳಗಿದ್ದ ಮಹಿಳೆಯರು ‘ಚಿಂತಿಸಬೇಡಿ, ನಿಮಾಯ್ ಮಲಗಿದ್ದಾನೆ, ಅವನೇನೂ ಮಾಡುವುದು ಸಾಧ್ಯವಿಲ್ಲ.’ ಎಂದರು. ಈ ರೀತಿ ಮಗುವನ್ನು ಒಳಗೆ ಇರಿಸಲಾಗಿತ್ತು. ಬ್ರಾಹ್ಮಣನು ಅಡುಗೆ ಪೂರೈಸಿದ. ಅದನ್ನು ತಟ್ಟೆಯಲ್ಲಿಟ್ಟು  ಶ್ರೀಕೃಷ್ಣನಿಗೆ ಅರ್ಪಿಸುತ್ತಾ ಧ್ಯಾನಾಸಕ್ತನಾದ. ಎಲ್ಲರ ಹೃದಯದಲ್ಲಿರುವ ಪರಮಾತ್ಮ ನಿಮಾಯ್‌ಗೆ ಎಲ್ಲವೂ ಗೊತ್ತು. ಆ ಬ್ರಾಹ್ಮಣನ ಮುಂದೆ ಪ್ರತ್ಯಕ್ಷನಾಗಬೇಕೆಂದು ಅವನು ಅಪೇಕ್ಷಿಸಿದ. ದೇವೋತ್ತಮನ ಇಚ್ಛೆಯಂತೆ ಎಲ್ಲರೂ ನಿದ್ರೆಗೆ ಜಾರಿದರು.

ಬ್ರಾಹ್ಮಣನು ಶ್ರೀಕೃಷ್ಣನಿಗೆ ಆಹಾರ ಅರ್ಪಿಸುತ್ತಿದ್ದ ಸ್ಥಳದಲ್ಲಿ  ಶ್ರೀ ಶಚೀನಂದನ ಪ್ರತ್ಯಕ್ಷನಾದ. ನಿಮಾಯ್‌ನನ್ನು ನೋಡಿದ ಕೂಡಲೇ ಬ್ರಾಹ್ಮಣ ಕೂಗಲೆತ್ನಿಸಿದ. ಆದರೆ ಎಲ್ಲರೂ ನಿದ್ರೆಯಲ್ಲಿದ್ದರು. ಯಾರಿಗೂ ಕೇಳಿಸುತ್ತಿರಲಿಲ್ಲ. ದೇವೋತ್ತಮನಾದ ನಿಮಾಯ್ ಹೇಳಿದ, ‘ಬ್ರಾಹ್ಮಣನೇ, ನೀನು ಉದಾತ್ತ ಮನಸ್ಸಿನವನು – ನೀನು ನನ್ನನ್ನು ಕರೆದೆ, ನಾನು ಬಂದೆ. ನನ್ನ ಮೇಲೇಕೆ ತಪ್ಪು ಹೊರಿಸುವುದು? ನನ್ನನ್ನು ಆಹ್ವಾನಿಸಲು ನೀನು ಮಂತ್ರ ಪಠಿಸಿದೆ. ಆದುದರಿಂದ ನಾನು ಇಲ್ಲಿಗೆ ಬಂದೆ. ಅದು ಹೇಗೆ ನಾನು ಬರಲಾಗದು? ನೀನು ಸದಾ ನನ್ನನ್ನು ಕುರಿತು ಮಂತ್ರ ಪಠಿಸುವೆ. ಆದುದರಿಂದ ನಿನ್ನ ಮುಂದೆ ಪ್ರತ್ಯಕ್ಷನಾಗಲು ನಾನು ನಿರ್ಧರಿಸಿದೆ.’

ಆ ಕ್ಷಣದಲ್ಲಿ, ಬ್ರಾಹ್ಮಣನು ಅದ್ಭುತ ದೃಶ್ಯವೊಂದನ್ನು ಕಂಡ. ದೇವೋತ್ತಮನು ತನ್ನ ಎಂಟು ಬಾಹುಗಳ ಸ್ವರೂಪದಲ್ಲಿ ಅವನ ಮುಂದೆ ನಿಂತಿದ್ದ. ಅವನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದಾ, ಕಮಲ ಇದ್ದವು; ಇನ್ನೆರಡು ಕೈಗಳಲ್ಲಿ ಅವನು ಬೆಣ್ಣೆ ಇಟ್ಟುಕೊಂಡು ಮೆಲುಕುತ್ತಿದ್ದ. ಮತ್ತೆರಡು ಕೈಗಳಲ್ಲಿ ಕೊಳಲು ನುಡಿಸುತ್ತಿದ್ದ. ವಜ್ರಾಭರಣಗಳಿಂದ ಅಲಂಕೃತನಾದ ದೇವೋತ್ತಮನ ಪೂರ್ಣ ಸ್ವರೂಪವನ್ನು ಬ್ರಾಹ್ಮಣ ಕಂಡ. ದೇವರ ಎದೆಯ ಮೇಲೆ ಲಕ್ಷ್ಮೀದೇವಿಯ ಚಿಹ್ನೆ ಶ್ರೀವತ್ಸ ಇತ್ತು. ಅಮೂಲ್ಯ ಹರಳುಗಳಿಂದ ಮಾಡಿದ್ದ ಸುಂದರ ಕಂಠಿಹಾರದಲ್ಲಿ ಅತ್ಯಮೂಲ್ಯವಾದ ಕೌಸ್ತುಭಮಣಿ ಕಂಡಿತು.

ಕೃಷ್ಣನ ಮೈತುಂಬ ಪುಷ್ಪಾಲಂಕಾರ. ಅವನ ಚಂದ್ರನಂಥ ವದನಕ್ಕೆ ಸೂರ್ಯೋದಯದಂತಹ ಕೆಂಪು ತುಟಿಗಳು. ಅವನ ಕಮಲದಂತಹ ಕಣ್ಣುಗಳು ನಗುವನ್ನೇ ಸೂಸುತ್ತಿದ್ದವು. ನೀಳಾಕಾಯದ ವೈಜಯಂತಿ ಮಾಲೆ ಶೋಭಿಸುತ್ತಿತ್ತು.  ಕಿವಿಯಲ್ಲಿ ಮಕರ ಕುಂಡಲಗಳು ತೂಗುತ್ತಿದ್ದವು. ಅವನ ಪಾದಗಳು ಅರಳುತ್ತಿರುವ ಕಮಲದ ಹೂವಿನಂತಿದ್ದವು. ಪಾದಗಳಲ್ಲಿ ಹರಳುಗಳಿದ್ದ ಗೆಜ್ಜೆಗಳು.

ಇಂಥ ಅದ್ಭುತ ವೈಭವವನ್ನು ನೋಡಿ ಪರಿಶುದ್ಧ ಬ್ರಾಹ್ಮಣ ಪ್ರಜ್ಞಾಶೂನ್ಯನಾದ. ಕರುಣೆಯ ಸಾಗರವಾದ ದೇವೋತ್ತಮ ಪರಮಪುರುಷ ಶ್ರೀ ಗೌರಸುಂದರನು ತನ್ನ ಅಲೌಕಿಕ ಹಸ್ತವನ್ನು ಬ್ರಾಹ್ಮಣನ ದೇಹದ ಮೇಲಿಟ್ಟ. ಎಚ್ಚೆತ್ತ ಬ್ರಾಹ್ಮಣ ದೇವರ ಪಾದಕಮಲದ ಮೇಲೆ ಶಿರವನ್ನಿಟ್ಟು ಆನಂದಬಾಷ್ಪ ಸುರಿಸಿದ. ಬ್ರಾಹ್ಮಣನ ಭಕ್ತಿಯನ್ನು ಸ್ವೀಕರಿಸಿದ ಪರಮಾತ್ಮನು ಮುಗುಳ್ನಗುತ್ತಾ ಕೆಲ ಮಾತುಗಳನ್ನು ಹೇಳಿದ.

‘ಜ್ಞಾನಿಯಾದ ಬ್ರಾಹ್ಮಣನೇ, ದಯೆಯಿಟ್ಟು ಕೇಳು. ಈ ಹಿಂದಿನ ಅನೇಕ ಬದುಕಿನಲ್ಲಿ ನೀನು ನನ್ನ ಸೇವಕ. ನೀನು ಯಾವಾಗಲೂ ನನ್ನನ್ನು ಧ್ಯಾನಿಸುವೆ, ಆದುದರಿಂದ ನಾನು ನಿನ್ನ ಮುಂದೆ ಪ್ರತ್ಯಕ್ಷನಾಗಿರುವೆ. ನನ್ನ ಹಿಂದಿನ ಅವತಾರದಲ್ಲಿ, ನಾನು ನಂದ ಮಹಾರಾಜನ ಮನೆಯಲ್ಲಿ ಇದೇ ಸ್ವರೂಪದಲ್ಲಿ ನಿನ್ನ ಮುಂದೆ ಪ್ರತ್ಯಕ್ಷನಾಗಿದ್ದೆ. ಆದರೆ ನೀನು ಮರೆತಿರುವೆ.

‘ನನ್ನ ಹಿಂದಿನ ಅವತಾರದಲ್ಲಿ ನಾನು ಗೋಕುಲಧಾಮದಲ್ಲಿ ಪ್ರತ್ಯಕ್ಷನಾಗಿದ್ದೆ. ಆಗಿನ ನಿನ್ನ ಜೀವಿತ ಕಾಲದಲ್ಲಿ ನೀನು ಪ್ರಾಮಾಣಿಕವಾಗಿ ಆಧ್ಯಾತ್ಮಿಕ ಯಾತ್ರೆಯನ್ನು ಮಾಡುತ್ತಿದ್ದೆ. ದೇವರ ಸಂಕಲ್ಪದಂತೆ, ನೀನು ನಂದ ಮಹಾರಾಜನ ಮನೆಗೆ ಅತಿಥಿಯಾಗಿ ಬಂದೆ. ಮತ್ತು ನಿನ್ನ ಆಹಾರಪದಾರ್ಥಗಳನ್ನು ನನಗೆ ಅರ್ಪಿಸಿದೆ. ಆ ಸಂದರ್ಭದಲ್ಲಿ ನಾವು ಈಗಿನಂತೆ ಪ್ರೀತಿ ವಾತ್ಸಲ್ಯವನ್ನು ವಿನಿಮಯ ಮಾಡಿಕೊಂಡೆವು. ಇಂದು ರಾತ್ರಿ ಮಾಡಿದಂತೆ ಆಗ ಕೂಡ ನಾನು ನೀನು ಅರ್ಪಿಸಿದ್ದನ್ನು ಸೇವಿಸಿದೆ. ನೀನು ಜನ್ಮ ಜನ್ಮಾಂತರಕ್ಕೂ ನನ್ನ ಸೇವಕ. ಆದುದರಿಂದ ನಾನು ನಿನ್ನ ಮುಂದೆ ಪ್ರತ್ಯಕ್ಷನಾಗಿರುವೆ. ನನ್ನ ಸೇವಕರಲ್ಲದೆ ಬೇರಾರೂ ನಾನಿರುವಂತೆ ನನ್ನನ್ನು ನೋಡಲಾಗದು.

‘ಶ್ರೀಕೃಷ್ಣನ ಪವಿತ್ರ ನಾಮದ ಸಂಕೀರ್ತನೆ ಈಗಾಗಲೇ ಆರಂಭವಾಗಿರುವ ಕಡೆ ನಾನು ಪ್ರತ್ಯಕ್ಷನಾಗಿರುವೆ. ಮತ್ತು ಆ ಮಂತ್ರವನ್ನು ಜಗತ್ತಿನಲ್ಲೆಲ್ಲಾ ಹರಡಲು ಪ್ರಯತ್ನಿಸುವೆ. ಪರಮಾತ್ಮನಿಗೆ ಭಕ್ತಿಸೇವೆ ಸಲ್ಲಿಸುವ ವಿಧಾನವನ್ನು ಎಲ್ಲ ಮನೆಗಳಿಗೂ ಮುಕ್ತವಾಗಿ ಹಂಚುವೆ. ಇದನ್ನು ಶ್ರೀಬ್ರಹ್ಮನಂತಹ ಗಣ್ಯರೇ ಅಪೇಕ್ಷಿಸಿದ್ದಾರೆ.’

ಬ್ರಾಹ್ಮಣನಿಗೆ ತನ್ನ ಕರುಣೆಯನ್ನು ತೋರಿ ಪರಮಾತ್ಮ ಗೌರಸುಂದರ ತನ್ನ ಕೋಣೆಗೆ ಹಿಂತಿರುಗಿದ. ಅವನು ಈ ಮೊದಲಿನಂತೆ, ಮಗುವಿನಂತೆ ಮಲಗಿದ. ದೇವೋತ್ತಮನ ಅದ್ಭುತ ಶಕ್ತಿಯಿಂದಾಗಿ ಮನೆಯಲ್ಲಿ ಯಾರಿಗೂ ಏನು ತಿಳಿಯಲಿಲ್ಲ. ದೇವರ ಅದ್ಭುತ ಸ್ವರೂಪವನ್ನು ಕಂಡು ಪರಮಾನಂದಗೊಂಡಿದ್ದ ಬ್ರಾಹ್ಮಣನು ಅಲೌಕಿಕ ಆಹಾರವನ್ನು ದೇಹಕ್ಕೆ ಸವರಿಕೊಂಡ. ಅನಂತರ ಅಳುತ್ತಲೇ ಸೇವಿಸಿದ. ಅವನು ನರ್ತಿಸಿದ, ಹಾಡಿದ, ಗಹಗಹಿಸಿ ನಕ್ಕ ಮತ್ತು ದೊಡ್ಡ ಧ್ವನಿಯಲ್ಲಿ  ‘ಎಲ್ಲವೂ ಶ್ರೀಬಾಲ ಗೋಪಾಲನ ವೈಭವ!’ ಎಂದ. ಬ್ರಾಹ್ಮಣನ ಈ ಗಟ್ಟಿ ಧ್ವನಿಯು ಮಲಗಿದ್ದವರನ್ನು ಎಬ್ಬಿಸಿತು. ಅವನು ತತ್‌ಕ್ಷಣ ತನ್ನನ್ನು ನಿಯಂತ್ರಿಸಿಕೊಂಡ. ತನ್ನ ಆಧ್ಯಾತ್ಮಿಕ ಭಾವೋದ್ರೇಕಕ್ಕೆ ಕಡಿವಾಣ ಹಾಕಿದ. ಈಗ ಯಾವ ಚಿಂತೆಯೂ ಇಲ್ಲದೆ ಬ್ರಾಹ್ಮಣ ಆಹಾರ ಸೇವಿಸಿದ. ಇದರಿಂದ ಎಲ್ಲರಿಗೂ ಸಂತೋಷವಾಯಿತು.

ತಾನು ಕಂಡ, ಅರಿತ ಎಲ್ಲವನ್ನೂ ಎಲ್ಲರಿಗೂ ಹೇಳಬೇಕೆಂದು ಬ್ರಾಹ್ಮಣ ಯೋಚಿಸಿದ. ಆದರೆ ಯಾರಿಗೂ ಏನನ್ನೂ ತಿಳಿಸಬೇಡವೆಂದು ಪರಮಾತ್ಮನು ಆದೇಶಿಸಿದ್ದ. ದೇವರ ಆದೇಶವನ್ನು ಉಲ್ಲಂಘಿಸಲು ಹೆದರಿದ ಅವನು ಏನೂ ಮಾತನಾಡಲಿಲ್ಲ. ಸಂತಸಗೊಂಡಿದ್ದ ಬ್ರಾಹ್ಮಣನು ಶ್ರೀ ಚೈತನ್ಯರ ಮನೆಯ ಪಕ್ಕದಲ್ಲೇ ಬಿಡಾರ ಹೂಡಿದ. ಅವನು ಅನೇಕ ಕಡೆ ಭಿಕ್ಷೆ ಬೇಡುತ್ತಿದ್ದ, ಆದರೆ ಪ್ರತಿದಿನವೂ ದೇವೋತ್ತಮನನ್ನು  ನೋಡಲು ಬರುತ್ತಿದ್ದ.

ದೇವೋತ್ತಮನ ಇಂತಹ ಅದ್ಭುತ ಲೀಲೆಗಳನ್ನು ವೇದ ಸಾಹಿತ್ಯಗಳಲ್ಲಿ ತಿಳಿಸಲಾಗಿದೆ. ಇದನ್ನು ಕೇಳಿದವರು ಶ್ರೀಕೃಷ್ಣನ ಸಂಪೂರ್ಣ ಆಶ್ರಯ ಪಡೆಯುವರು.

(ಮುಂದುವರಿಯುವುದು)
Leave a Reply

Your email address will not be published. Required fields are marked *