Search
Friday 7 August 2020
  • :
  • :

ಸುವರ್ಣಾವತಾರ ಭಾಗ – 5

ಶಚೀದೇವಿಯ  ತುಂಟ  ಮಗ  ದೇವೋತ್ತಮ  ಪರಮ  ಪುರುಷ  ಶ್ರೀ ಚೈತನ್ಯ ತನ್ನದೇ ಪುಣ್ಯನಾಮ ಪಠಿಸುವಂತೆ ಪ್ರೇರೇಪಿಸುತ್ತ ತನ್ನ ಲೀಲೆಗಳಿಂದ ಎಲ್ಲರಿಗೂ ಮುದಕೊಡುತ್ತ ಬೆಳೆಯತೊಡಗಿದ. ಅಂಬೆಗಾಲಿಡುವಾಗ ಮಗುವನ್ನು ನೋಡಲು ಎರಡು ಕಣ್ಣು ಸಾಲದೆನಿಸಿತು. ಕಾಲ್ಗೆಜ್ಜೆಯ ನಿನಾದ ಕರ್ಣಾನಂದವಾಗಿತ್ತು. ಕಿಂಚಿತ್ತೂ ಭಯವಿಲ್ಲದೆ ಮಗುವು ಎಲ್ಲೆಡೆ ನಲಿದಾಡುತ್ತಿತ್ತು. ಬೆಂಕಿ, ಹಾವು, ಏನಾದರೂ ಸರಿ, ಕಂಡದ್ದನ್ನೆಲ್ಲ ಹಿಡಿಯುವ ಹುಮ್ಮಸ್ಸು.

ಅನಂತದೇವ ಬಂದ…

ಒಂದು ದಿನ ಹಾವೊಂದು ಮನೆಯ ಅಂಗಳದಲ್ಲಿ ನುಸುಳಿ ಬಂದಿತು. ಮತ್ತೊಂದು ಲೀಲೆ ಪ್ರದರ್ಶಿಸಲು ಭಗವಾನ್ ಅದನ್ನು ಕೈಯಲ್ಲಿ ಹಿಡಿದು ಕೊಂಡ. ಅನಂತರ ಹಾವಿನ ಸುರುಳಿಯಲ್ಲಿ ಪವಡಿಸಿದ. ಮನೆಯಲ್ಲಿದ್ದವರಿಗೆ ಗಾಬರಿ..ಜೋರಾಗಿ ಕಿರುಚಿದರು. ಆದರೆ  ಶ್ರೀ ಚೈತನ್ಯರಿಗೆ ಇವರ ಭಯ ಕಂಡು ನಗು. ಹಾವು ಆರಾಮವಾಗಿದೆ, ನೋಡಿ ಎಂಬ ಸಮರ್ಥನೆ ಬೇರೆ. ‘ಗರುಡ, ಗರುಡ!’ ಎಂದು ಕೆಲವರು ಕಿರುಚಿಕೊಂಡರೆ ನಿಮಾಯ್‌ನ ತಂದೆ ತಾಯಿ ಆತಂಕದಿಂದ ನಿಂತುಬಿಟ್ಟರು. ವಾಸ್ತವವಾಗಿ ಆ ಹಾವು ಶ್ರೀ ಅನಂತಶೇಷನೇ ಆಗಿತ್ತು. ಈ ಕೂಗಾಟ, ಗೊಂದಲದ ಮಧ್ಯೆ ಹಾವು ಹೊರಗೆ ಹೋಗುವ ಯತ್ನ ಮಾಡಿತು. ಮಗು ನಿಮಾಯ್ ಅದನ್ನು ತಡೆಯಲೆತ್ನಿಸಿದಾಗ ಮಹಿಳೆಯರು ತತ್‌ಕ್ಷಣ ಮಗುವನ್ನು ಎತ್ತಿಕೊಂಡರು. ದೀರ್ಘಾಯುಷ್ಯ ಎಂದು ಹರಸಿದರು. ಯಾರೋ ಬಂಧುಗಳು ಕೇಡು ಪರಿಹಾರಕ್ಕೆಂದು ರಕ್ಷಾ ತಾಯಿತ ಕಟ್ಟಿದರು. ಕೆಲವರು ಮಂತ್ರ ಪಠಿಸಿದರೆ ಇನ್ನೂ ಕೆಲವರು ಅವನ ಮೇಲೆ ಗಂಗಾ ಜಲ ಪ್ರೋಕ್ಷಣೆ ಮಾಡಿದರು. ಮಗುವಿಗೆ ಪುನರ್ ಜನ್ಮವಾಯಿತೆಂದು ಕೆಲವರು ಭಾವಿಸಿದರೆ ಅನಂತಶೇಷನೇ ಪ್ರತ್ಯಕ್ಷನಾಗಿದ್ದು ಎಂದು ಇನ್ನೂ ಕೆಲವರು ಅರ್ಥ ಮಾಡಿಕೊಂಡರು. ಚಂದ್ರನಂತೆ ಹೊಳೆಯುತ್ತಿದ್ದ ದೇವೋತ್ತಮ ಶ್ರೀ ಚೈತನ್ಯ ಮಹಾಪ್ರಭು ಹಾವಿನತ್ತ ಮತ್ತೆ ಹೋಗಲು ಹವಣಿಸಿದರೂ ಯಾರೂ ಬಿಡಲಿಲ್ಲ. ಈ ಲೀಲೆಗಳನ್ನು ವೇದಗಳಲ್ಲಿ ಕೂಡ ಹೊರಗೆಡಹಿಲ್ಲ.  ಅದನ್ನು ಕೇಳಿದವರು ಲೌಕಿಕ ಮಾಯೆ ಎಂಬ ಸರ್ಪದ ಕಡಿತದಿಂದ ಮುಕ್ತರಾಗುತ್ತಾರೆ.

ಎಲ್ಲರ ಕಣ್ಮಣಿ

ಶ್ರೀ ಚೈತನ್ಯ ಶಚೀದೇವಿಗೆ ಮಾತ್ರವಲ್ಲ ಎಲ್ಲರ ಕಣ್ಮಣಿ. ಮನೆತುಂಬ ದಟ್ಟಗಾಲಿಟ್ಟು ಸಂಚರಿಸುತ್ತಿದ್ದ  ಮಗುವನ್ನು ನೋಡುವುದೇ ಚಂದ. ಚೈತನ್ಯರ ಅನುಪಮ ಸೌಂದರ್ಯವು ಕೋಟಿ ಮನ್ಮಥರ ಸುಂದರ ವದನವನ್ನು ಮರೆಮಾಚಿಸಿಬಿಟ್ಟಿತು. ಹೊಳೆಯುತ್ತಿದ್ದ ಚಂದ್ರ ಕೂಡ ಚೈತನ್ಯರ ಅಸಾಧಾರಣ ಸೌಂದರ್ಯವನ್ನು ಸೆರೆಹಿಡಿಯಲು ಬಯಸಿದ. ತಿದ್ದಿತೀಡಿದಂತಹ ದೇಹ ಕಂಡು ಆಕರ್ಷಿತರಾಗದವರೇ ಇಲ್ಲ. ಗುಂಗುರು ಕೂದಲು ಹಣೆಯ ಮೇಲೆ ನಲಿಯುತ್ತಿತ್ತು. ಕಮಲದಂತಹ ಕಣ್ಣುಗಳು. ಅವನು ಗೋಪಾಲಕೃಷ್ಣನಂತೆ ಕಂಡ. ತೋಳುಗಳು ಮಂಡಿವರೆಗೆ ಚಾಚಿದ್ದವು. ವಿಶಾಲವಾದ ಎದೆ, ಕೆಂಪು ಮಿಶ್ರಿತ ಕಂದು ಬಣ್ಣದ ತುಟಿ. ಅವನ ಕೆಂಪು ವರ್ಣ ಸದಾ ಆಕರ್ಷಕ. ಅವನ ಬೆರಳು, ಕೈ, ಕಾಲು ಎಲ್ಲವೂ ಅರಳಿದ ಕಮಲದಂತಿದ್ದವು. ಆದರೆ ಅವನ ಹಸ್ತ, ಅಂಗಾಲಿನ ಮೇಲಿನ ಕೆಂಪು ಬಣ್ಣವು ಕೆಲವು ಬಾರಿ ಶಚೀದೇವಿಯ ಆತಂಕಕ್ಕೆ ಕಾರಣವಾಗುತಿತ್ತು. ಮಗು ಓಡುತ್ತಿದ್ದಾಗ ಕೆಂಪು ಗಾಯವೆನೋ ಎಂಬ ಭಯ ಅವಳಲ್ಲಿ ಮೂಡುತ್ತಿತ್ತು.

ಶಚೀದೇವಿ ಮತ್ತು ಜಗನ್ನಾಥ ಮಿಶ್ರ ಅವರು ಚೈತನ್ಯರ ಸೌಂದರ್ಯ ಕಂಡು ಅಚ್ಚರಿಗೊಳ್ಳುತ್ತಿದ್ದರು. ಅಸೀಮ ಸಂತೋಷಕ್ಕೆ ಅವರ ಮಗನೇ ಮೂಲವಾಗಿದ್ದ. ಇಬ್ಬರೇ ಇದ್ದಾಗ ಅವರು ಪಿಸು ಧ್ವನಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ‘ಇಂಥ ಶ್ರೇಷ್ಠ ವ್ಯಕ್ತಿ ನಮ್ಮ ಮಗನಾಗಿ ಬಂದಿರುವುದು ಅಚ್ಚರಿಯೇ. ಅತಿ ಮಹೋನ್ನತ ವ್ಯಕ್ತಿ ನಮ್ಮ ಮನೆಯಲ್ಲಿ ಅವತರಿಸಿದ್ದಾನೆ. ಬಹುಶಃ ಇದರಿಂದ ನಮ್ಮ ಎಲ್ಲ ಲೌಕಿಕ ಸಂಕಟ ದೂರವಾಗಬಹುದು. ನಮ್ಮ ಮಗುವಿನಂತಹ ಸ್ವಭಾವವನ್ನು ಬೇರಾವ ಮಗುವಿಗೂ ಇರುವುದನ್ನು ನಾನು ಕಂಡಿಲ್ಲ, ಕೇಳಿಲ್ಲ. ಶ್ರೀಹರಿಯ ನಾಮ ಕೇಳಿದ ಕೂಡಲೇ ಅವನು ಮುಗುಳ್ನಗುತ್ತಾನೆ, ಕುಣಿದಾಡುತ್ತಾನೆ. ಅಳುವಾಗ ಎಷ್ಟೇ ಸಮಾಧಾನ ಮಾಡಿದರೂ ಹಠ ನಿಲ್ಲದು. ಆದರೆ ಗಟ್ಟಿ ದನಿಯಲ್ಲಿ ಹರಿನಾಮ ಕೇಳಿದರೆ ಅವನ ಅಳು ಮಾಯ! ತದೇಕಚಿತ್ತದಿಂದ ಕೇಳುತ್ತಾನೆ.’ ಮಹಿಳೆಯರು ಬೆಳಗಿನಿಂದಲೇ ನಿಮಾಯ್‌ನನ್ನು ಸುತ್ತುವರಿದು ಜೋರಾಗಿ ಹರಿ ನಾಮ ಪಠಿಸಿದರೆ ಮಗು ಆನಂದದಿಂದ ನರ್ತಿಸುತ್ತದೆ. ಸಂಕೀರ್ತನೆ ಮಾಡುವವರ ಚಪ್ಪಾಳೆ ಮಾಧುರ್ಯ ಮತ್ತು ಮಗುವಿನ ನೃತ್ಯ ಇಡೀ ವಾತಾವರಣವನ್ನು ಆಕರ್ಷಕಗೊಳಿಸುತ್ತದೆ. ಹಾಗೆಯೇ ಮಗು ದೂಳಿನಲ್ಲಿ ಹೊರಳಾಡಿ ನಗುತ್ತಾ ತನ್ನ ತಾಯಿಯ ಮಡಿಲಿಗೆ ಹಾರುತ್ತದೆ.

ಶ್ರೀ ಚೈತನ್ಯರ ಬಾಲ ಲೀಲೆ ವರ್ಣಿಸಲಸಾಧ್ಯ. ಅವನು ತನ್ನ ಲೀಲೆಗಳ ಮೂಲಕ ಪವಿತ್ರ ನಾಮ ಪಠಿಸುವಂತೆ ಮಾಡಿದ್ದು ಬಹುಶಃ ಅವರಿಗೆಲ್ಲ ಅರ್ಥವಾಗಿಲ್ಲದಿರಬಹುದು. ಅವನು ಎಷ್ಟು ಚುರುಕು ಹಾಗೂ ತುಂಟನೆಂದರೆ ಮನೆಯಿಂದ ಹೊರಗೆ, ಒಳಗೆ ಓಡುತ್ತ ಯಾರ ಕೈಗೂ ಸಿಗದಂತೆ ಜಿಂಕೆ ಮರಿಯಾಗಿಬಿಡುತ್ತಿದ್ದ. ಯಾರಿಗೂ ತಿಳಿಯದಂತೆ ಸಾಹಸಗೈಯಲು  ಮನೆ ಹೊರಗೆ ಓಡುತ್ತಿದ್ದ. ನಿಮಾಯ್ ಗೆ ನೋಡಿದೆಲ್ಲದರ ರುಚಿ ಮಾಡುವಾಸೆ – ಹುರಿದ ಅಕ್ಕಿ, ಬಾಳೆಹಣ್ಣು, ಅಥವಾ ಸಂದೇಶ. ಚೈತನ್ಯ ಎಷ್ಟು ಆಕರ್ಷಕನಾಗಿದ್ದನೆಂದರೆ ಅಪರಿಚಿತರೂ ಅವನು ಕೇಳಿದ್ದೆಲ್ಲ ಕೊಡುತ್ತಿದ್ದರು. ಸಂದೇಶ್, ಬಾಳೆಹಣ್ಣು ಸಿಕ್ಕಿದ ಕೂಡಲೇ ನಿಮಾಯ್ ಮನೆಗೆ ಓಡುತ್ತಿದ್ದ. ತನಗಾಗಿ ಹರಿನಾಮ ಪಠಿಸುತ್ತಿದ್ದ ಮಹಿಳೆಯರ ಜೊತೆ ಅದನ್ನೆಲ್ಲ ಹಂಚಿಕೊಳ್ಳುತ್ತಿದ್ದ. ಮಗುವಿನ ಈ ಜಾಣ್ಮೆ ಕಂಡು ಹರ್ಷೋದ್ಗಾರ ಮಾಡಿ ಮತ್ತೆ ಹರಿನಾಮ ಸಂಕೀರ್ತನೆಯಲ್ಲಿ ತೊಡಗುತ್ತಿದ್ದರು, ಆ ವನಿತೆಯರು. ಯಾವುದನ್ನೂ ಲೆಕ್ಕಿಸದೆ ರಾತ್ರಿ ಹಗಲೆನ್ನದೆ ಚೈತನ್ಯ ಮನೆ ಒಳಗೆ ಹೊರಗೆ ಓಡುತ್ತಲೇ ಇರುತ್ತಿದ್ದ. ಪ್ರತಿ ದಿನ ಸ್ನೇಹ ಪರ ನೆರೆಯ ಮನೆಗಳಿಗೆ ತೆರಳಿ ಆಡುತ್ತಲೇ ಅದೂ ಇದೂ ಗಿಟ್ಟಿಸುತ್ತಿದ್ದ. ಕೆಲ ಮನೆಗಳಲ್ಲಿ ಅಲ್ಲಿದ್ದ ಹಾಲನ್ನೆಲ್ಲ ಕುಡಿದುಬಿಡುತ್ತಿದ್ದ. ಮತ್ತೂ ಕೆಲವೆಡೆ ಅನ್ನ ತಿನ್ನುತ್ತಿದ್ದ. ತಿನ್ನಲು ಏನೂ ಸಿಗದಾಗ, ಮಣ್ಣಿನ ಮಡಕೆ ಒಡೆದು ತೃಪ್ತಿ ಪಟ್ಟುಕೊಳ್ಳುತ್ತಿದ್ದ.

ಯಾವುದಾದರೂ ಮನೆಯಲ್ಲಿ ಸಣ್ಣ ಮಗುವನ್ನು ಕಂಡರೆ ಅದಕ್ಕೆ ಕಣ್ಣೀರು ಬರುವಷ್ಟು ಚೇಡಿಸುತ್ತಿದ್ದ. ಯಾರಾದರೂ ನೋಡಿದರೆ ಅಲ್ಲಿಂದ ಓಡುತ್ತಿದ್ದ. ಹಾಗೂ ಯಾರಾದರೂ ಹಿಡಿದು ಬಿಟ್ಟರೆ ಅವರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿದ್ದ. ‘ಇದೊಂದು ಕೊನೆ ಬಾರಿ ನನ್ನನ್ನು ಹೋಗಲು ಬಿಡಿ. ನಾನು ಮತ್ತೆ ಬರುವುದಿಲ್ಲ. ನಾನು ಖಂಡಿತ ಕದಿಯುವುದಿಲ್ಲ. ದಯೆಯಿಟ್ಟು ಮರುಕವಿರಲಿ!’ ಮಗುವಿನ ತೀಕ್ಷ್ಣ ಬುದ್ಧಿ ಕಂಡು ಯಾರಿಗೆ ತಾನೆ ಕೋಪ ಉಳಿಯುತ್ತಿತ್ತು? ಕೊನೆಗೆ ಎಲ್ಲರೂ ಪ್ರೀತಿ ಮಳೆಗರೆದರು. ತಮ್ಮ ಮಕ್ಕಳಿಗಿಂತ ಅವನನ್ನು ಹೆಚ್ಚು ಪ್ರೀತಿಸಿದರು. ಈ ರೀತಿ, ತುಂಟತನದಿಂದ, ವೈಕುಂಠದ ದೇವೋತ್ತಮ, ಶ್ರೀ ಚೈತನ್ಯ ತನ್ನ ಬಾಲ್ಯವನ್ನು ಕಳೆದ.

ಪುಟ್ಟ ವಿದ್ವಾಂಸ

ಒಂದು ದಿನ ಶ್ರೀ ಚೈತನ್ಯರು ಇತರ ಮಕ್ಕಳೊಂದಿಗೆ ಆಟದಲ್ಲಿ ಮಗ್ನರಾಗಿದ್ದರು. ಆಗ ತಾಯಿ ಶಚೀದೇವಿ ಅನ್ನ ಮತ್ತು ಸಿಹಿ ತಿಂಡಿ ಇದ್ದ ಬಟ್ಟಲನ್ನು ತಂದು, ಕೆಳಗೆ ಕೂತು ತಿನ್ನುವಂತೆ ಆದೇಶಿಸಿ ಹೋದರು. ಅವರು ತಮ್ಮ ಗೃಹಕೃತ್ಯದಲ್ಲಿ ತೊಡಗಿದಾಗ ಚೈತನ್ಯರು ತಾಯಿಯಿಂದ ಮರೆಮಾಚಿ  ಮಣ್ಣು  ತಿನ್ನತೊಡಗಿದರು. ಇದನ್ನು ನೋಡಿದ ಶಚೀದೇವಿ ಓಡುತ್ತ ಬಂದು ‘ಏನಿದು ಏನಿದು!’ ಎಂದು ಕೂಗಿದರು. ಮಗುವಿನ ಕೈಯಿಂದ ಮಣ್ಣು ತೆಗೆದು ಹಾಕಿ, ಯಾಕೆ ಇದನ್ನು ತಿನ್ನುತ್ತಿರುವೆ ಎಂದು ಕೇಳಿದರು. ಅಳುತ್ತಾ ಮಗು ತಾಯಿಗೆ ಕೇಳಿತು : ‘ಯಾಕೆ ಕೋಪಿಸಿಕೊಳ್ಳುವೆ? ನೀನು ಈಗಾಗಲೇ ನನಗೆ ತಿನ್ನಲು ಮಣ್ಣನ್ನು ನೀಡಿರುವೆ. ನನ್ನ ತಪ್ಪೇನಿದೇ? ಮಿಶ್ರಿತ ಅನ್ನ, ಸಿಹಿ ಮತ್ತಿತರ ತಿನಿಸೆಲ್ಲ ಮಣ್ಣಿನ  ರೂಪಾಂತರವೇ. ಇದೂ ಮಣ್ಣು ಅದೂ ಮಣ್ಣು. ದಯೆಯಿಟ್ಟು ವಿಚಾರಿಸಿ ನೋಡು ಅದರಲ್ಲಿನ ವ್ಯತ್ಯಾಸವಾದರೂ ಏನು? ಈ ದೇಹವು ಮಣ್ಣಿನ ರೂಪಾಂತರ. ಮತ್ತು ತಿನಿಸುಗಳೆಲ್ಲ ಹಾಗೇ ಮಣ್ಣಿನ ರೂಪಾಂತರ. ಈ ಬಗೆಗೆ ವಿಚಾರಿಸು. ಪರಿಶೀಲಿಸದೆ ನೀನು ನನ್ನನ್ನು ದೂಷಿಸುತ್ತಿರುವೆ. ನಾನು ಏನು ಹೇಳಲಿ?’ ಮಗುವು ಮಾಯಾವಾದ ತತ್ತ್ವವನ್ನು ಮಾತನಾಡುತ್ತಿರುವುದನ್ನು ಕಂಡು ಅಚ್ಚರಿಗೊಂಡ ಶಚೀದೇವಿ ‘ಮಣ್ಣು ತಿನ್ನಲು ಸಮರ್ಥಿಸುವ ತತ್ತ್ವಶಾಸ್ತ್ರವನ್ನು  ನಿನಗೆ ಬೋಸಿದವರಾರು?’ ಎಂದು ಕೇಳುತ್ತಾರೆ. ಅನಂತರ ಅವರು ಉತ್ತರಿಸುತ್ತಾರೆ : ‘ಮಗು, ಧಾನ್ಯವಾಗಿ ಪರಿವರ್ತಿತವಾದ ಮಣ್ಣನ್ನು ತಿಂದರೆ ನಮಗೆ ಪೌಷ್ಟಿಕಾಂಶ ದೊರೆಯುತ್ತದೆ. ಆಗ ನಮ್ಮ ದೇಹ ಶಕ್ತಿಯುತವಾಗುತ್ತದೆ. ಆದರೆ ಕಚ್ಚಾ ರೀತಿಯಲ್ಲೇ ಮಣ್ಣು ತಿಂದರೆ ದೇಹಕ್ಕೆ ಪೌಷ್ಟಿಕಾಂಶದ ಬದಲು ಕಾಯಿಲೆ ಬರುತ್ತದೆ. ನೀರಿನ ಮಡಕೆಯಿಂದ, ಅದೂ ಮಣ್ಣಿನ ರೂಪಾಂತರವೇ, ನಾನು ಸುಲಭವಾಗಿ ನೀರು ತರುವೆ. ಆದರೆ ನಾನು ನೀರನ್ನು ಮಣ್ಣಿನ ರಾಶಿ ಮೇಲೆ ಹಾಕಿದರೆ ಅದು ನೀರನ್ನು ಹೀರಿಕೊಳ್ಳುತ್ತದೆ. ನನ್ನ ಶ್ರಮ ವ್ಯರ್ಥವಾಗುತ್ತದೆ’. ಚೈತನ್ಯರು ತಾಯಿಗೆ ಉತ್ತರಿಸಿದರು : ‘ಮೊದಲೇ ಈ ಪ್ರಾಯೋಗಿಕ ತತ್ತ್ವಶಾಸ್ತ್ರವನ್ನು ನನಗೆ ಬೋಸದೆ ನೀನ್ಯಾಕೆ ಆತ್ಮ ಸಾಕ್ಷಾತ್ಕಾರವನ್ನು ಮುಚ್ಚಿಟ್ಟಿದ್ದೆ? ನನಗೆ ಈಗ ಈ ತರ್ಕ ಅರ್ಥವಾಗಿರುವುದರಿಂದ, ನಾನು ಮಣ್ಣು ತಿನ್ನುವುದಿಲ್ಲ. ಹಸಿವಾದಾಗಲೆಲ್ಲ ಮೊಲೆ ಹಾಲು ಕುಡಿಯುವೆ’ ಹೀಗೆ ಹೇಳಿ ಚೈತನ್ಯ ನಸುನಗುತ್ತ ತಾಯಿ ತೊಡೆ ಏರಿ ಮೊಲೆಗೆ ಬಾಯಿಟ್ಟ. ಈ ರೀತಿ ಚೈತನ್ಯರು ತಮ್ಮ ವೈಭವವನ್ನು ಬಾಲ್ಯದಲ್ಲಿ, ನಾನಾ ಸಂದರ್ಭಗಳಲ್ಲಿ ಪ್ರದರ್ಶಿಸಿದ್ದಾರೆ.

ಅಪಹರಣಕಾರರಿಗೆ ದಿಗ್ಭ್ರಾಂತಿ

ಒಂದು ದಿನ ಶ್ರೀಚೈತನ್ಯರು ದಾರಿಯಲ್ಲಿ ಅಡ್ಡಾಡುತ್ತಿದ್ದುದನ್ನು ಇಬ್ಬರು ಕಳ್ಳರು ನೋಡಿದರು. ಮಗುವಿನ ಮೇಲಿದ್ದ ಆಭರಣಗಳು ಕಳ್ಳರ ಕಣ್ ಸೆಳೆದು, ಹೇಗಾದರೂ ಅದನ್ನು ದಕ್ಕಿಸಿಕೊಳ್ಳಲು ಸಂಚು ಹೂಡಿದರು. ಒಬ್ಬ ಕಳ್ಳ  ‘ಪ್ರೀತಿಯ ಮಗುವೇ’ ಎನ್ನುತ್ತ ನಿಮಾಯ್‌ನನ್ನು ಎತ್ತಿಕೊಂಡ. ಮತ್ತೊಬ್ಬ ಕಳ್ಳ ‘ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೆ? ಮನೆಗೆ ಹೋಗೋಣ ಬಾ ಮಗು’ ಎಂದು ಪ್ರೀತಿಯ ಮಳೆಗರೆದ. ಕಳ್ಳರ ಮಾತು ಕೇಳಿ ನಕ್ಕ ಶ್ರೀ ಚೈತನ್ಯರು, ‘ಹಾ..ಮನೆಗೆ ಹೋಗೋಣ’ ಎಂದರು.

ಕಳ್ಳರು ಮಗುವನ್ನು ಜನನಿಬಿಡ ರಸ್ತೆಯಿಂದ ಬೇರೆಡೆಗೆ ಒಯ್ಯಲು ಸರಸರನೆ ಓಡಿದರು. ಮಗುವನ್ನು ಸರಿಯಾದ ಪೋಷಕರೇ ಕರೆದುಕೊಂಡು ಹೋಗುತ್ತಿದ್ದಾರೆಂದು ರಸ್ತೆಯಲ್ಲಿದ್ದ ಜನರು ಭಾವಿಸಿದರು. ಸಾವಿರಾರು ಜನರು ಓಡಾಡುವ ರಸ್ತೆ, ಎಲ್ಲರಿಗೂ ಎಲ್ಲರೂ ಹೇಗೆ ಗೊತ್ತಿರುವುದು ಸಾಧ್ಯ?  ಈ ಮಧ್ಯೆ ಮಗುವಿನ ಮೈಮೇಲಿದ್ದ ಆಭರಣ ಕಂಡು ಕಳ್ಳರು ಹಿರಿಹಿರಿ ಹಿಗ್ಗಿದರು. ಅವೆಲ್ಲ ತಮಗೆ ದಕ್ಕುವುದೆಂದು ನಂಬಿ, ತಾವು ಶ್ರೀಮಂತರಾಗಿಬಿಡುತ್ತೇವೆಂದು ಕಲ್ಪಿಸಿಕೊಳ್ಳತೊಡಗಿದರು.

ಕಳ್ಳರು ಭುಜದ ಮೇಲೆ ಮಗುವನ್ನು ಕೂರಿಸಿಕೊಂಡು ತಮ್ಮ ರಹಸ್ಯ ತಾಣದತ್ತ ನಡೆದರು. ಮಗು ಮುಸಿ ನಗುತ್ತಿತ್ತು. ಮಗುವಿನ ಕೈಗೆ ಸಂದೇಶ್ ನೀಡಿದ ಕಳ್ಳರು ‘ನಾವು ಇನ್ನೇನು ಮನೆ ತಲಪಿಬಿಟ್ಟೆವು’ ಎಂದು ಉದ್ಗರಿಸಿದರು. ಮಗುವಿನ ಅಪಹರಣಕಾರರು ಸಾಕಷ್ಟು ದೂರ ಸಾಗಿದ ಮೇಲೆಯೇ ನಿಮಾಯ್ ಬಂಧುಗಳಿಗೆ ಅವನು ಕಾಣೆಯಾಗಿರುವುದು ಅರಿವಾಯಿತು. ತತ್‌ಕ್ಷಣ ಗಾಬರಿಯಿಂದ ಹುಡುಕಲು ಆರಂಭಿಸಿದರು.

‘ವಿಶ್ವಂಭರ! ಮನೆಗೆ ಬಾ! ನಿಮಾಯ್ ಎಲ್ಲಿರುವೆ?’  ಎಂದು ಅವರು ಕೂಗಿದರು. ಎಲ್ಲರೂ ಹುಚ್ಚರಂತಾದರು. ನೀರಿನಿಂದ ಹೊರಬಂದ ಮೀನಿನಂತೆ ವಿಲಿವಿಲಿ ಒದ್ದಾಡತೊಡಗಿದರು. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಅವರು ಶ್ರೀ ಗೋವಿಂದನನ್ನು ಪ್ರಾರ್ಥಿಸಿದರು. ಅದೇ ವೇಳೆ ಕಳ್ಳರು ನಿಮಾಯ್‌ನನ್ನು ತಮ್ಮ ತಾಣಕ್ಕೆ ಕರೆದೊಯ್ಯಲು ದಾಪುಗಾಲು ಹಾಕಿದರು. ದೇವ ಸರ್ವೋತ್ತಮನ ಮಾಯಾ ಶಕ್ತಿಯಿಂದ ಭ್ರಾಂತಿಗೊಂಡ  ಕಳ್ಳರು ತಮ್ಮ ತಾಣದ ಹಾದಿ ತಪ್ಪಿದರು. ಬದಲಿಗೆ, ಅವರಿಗೇ ಅರಿವಿಲ್ಲದಂತೆ ಶ್ರೀ ಜಗನ್ನಾಥ ಮಿಶ್ರರ ಮನೆ ತಲಪಿದರು. ದಾರಿ ತಪ್ಪಿದ ಕಳ್ಳರು ತಾವು ತಮ್ಮ ಮನೆಗೇ ಬಂದಿದ್ದೇವೆಂದು ಭಾವಿಸಿದರು. ಹೀಗಾಗಿ ಅವರು ಮಗುವಿನ ಆಭರಣ ಕಳಚಲು ಮುಂದಾದರು. ‘ಕೆಳಗೆ ಇಳಿ, ಮನೆಗೆ ಬಂದಿದ್ದೇವೆ’ ಎಂದರು. ‘ಶ್ರೀ ಚೈತನ್ಯರೂ ಕೂಡ, ಹೌದು, ‘ನನ್ನನ್ನು ಕೆಳಗಿಳಿಸಿ’ ಎಂದರು!

ಮನೆ ಒಳಗೆ ಮಿಶ್ರ ಮತ್ತಿತರು ತಲೆ ಮೇಲೆ ಕೈಹೊತ್ತು ಚಿಂತಾಮಗ್ನರಾಗಿ ಕೂತಿದ್ದರು. ಇತ್ತ ಕಳ್ಳರು ತಮ್ಮ ಮನೆಗೇ ಬಂದಿದ್ದೇವೆಂದು ಭಾವಿಸಿ ಮಗುವನ್ನು ಕೆಳಗಿಳಿಸಿದರು. ಇದಕ್ಕೇ ಕಾದಿದ್ದ ನಿಮಾಯ್ ತತ್‌ಕ್ಷಣ ಒಳಗೋಡಿ ತಂದೆಯತ್ತ ಧಾವಿಸಿದ. ಎಲ್ಲರೂ ಹರ್ಷೋದ್ಗಾರ ಮಾಡಿದರು. ‘ಹರಿ, ಹರಿ’ ಎನ್ನುತ್ತ, ಜೀವ ಮರುಕಳಿಸಿದಂತೆ ಉಸಿರಾಡಿದರು.

ಕಳ್ಳರಿಗೆ ಅದು ತಮ್ಮ ಮನೆಯಲ್ಲವೆಂದು ವೇದ್ಯವಾಯಿತು, ತಾವು ಎಲ್ಲಿದ್ದೇವೆ ಎಂಬುದು ತಿಳಿಯಲ್ಲಿಲ್ಲ. ಗೊಂದಲದ ಮಧ್ಯೆ ಅಲ್ಲಿಂದ ಓಡಿಹೋಗಲು ನಿರ್ಧರಿಸಿದರು. ಭಯಭೀತರಾದ ಕಳ್ಳರು ‘ತಮ್ಮೊಂದಿಗೆ ಆಟ ಆಡುತ್ತಿರುವವರು ಯಾರು’ ಎಂದು ಚಿಂತಿತರಾದರು. ‘ಚಂಡೀದೇವಿ, ದುರ್ಗಾ ದೇವತೆ ಖಂಡಿತ ನಮ್ಮನ್ನು ಕಾಪಾಡಿದಳು’ ಎಂದುಕೊಂಡರು. ಹೊರಗೆ ಬಂದಮೇಲೆ ಪರಸ್ಪರ ಆಲಿಂಗಿಸಿಕೊಂಡರು. ದೇವೋತ್ತಮ ಪರಮ ಪುರುಷನನ್ನು ಭುಜದ ಮೇಲೆ ಕೂರಿಸಿಕೊಂಡು ಅವರು ವಾಸ್ತವವಾಗಿ ಅದೃಷ್ಟವಂತರಾದರು.

ಮಿಶ್ರ ಅವರ ಮನೆಯಲ್ಲಿ ಸಂತಸ. ‘ಮಗುವನ್ನು ಯಾರು ಕರೆ ತಂದರು? ಅವರಿಗೆ ಉಡುಗೊರೆ ನೀಡಬೇಕು’ ಎಂದು ಬಂಧುಗಳು ತವಕಪಟ್ಟರು. ಮಗುವನ್ನು ಕೆಳಗೆ ಬಿಟ್ಟದ್ದನ್ನು ನೋಡಿದರೂ ಅವರು ಎಲ್ಲಿಗೆ ಹೋದರೆಂಬುದು ಯಾರಿಗೂ ತಿಳಿಯಲಿಲ್ಲ. ವಂದನೆ ಸ್ವೀಕರಿಸಲೂ ಇರಲಿಲ್ಲ! ಎಂದು ಒಬ್ಬರು ಹೇಳಿದರು.

‘ಮಗು ನಿಮಾಯ್! ಹೇಳು, ಎಲ್ಲಿ ಹೋಗಿದ್ದೆ?’ ಎಂದು ಮಗುವನ್ನು ಅವರು ಕೇಳಿದರು. ‘ನಾನು ಗಂಗಾ ದಡಕ್ಕೆ ಹೋದೆ. ಮನೆ ದಾರಿ ತಿಳಿಯದಾಯಿತು. ಹೀಗಾಗಿ ಅಡ್ಡಾಡುತ್ತಿದ್ದೆ. ಇಬ್ಬರು ನನ್ನನ್ನು ಎತ್ತಿಕೊಂಡು ಮನೆಗೆ ಬಂದರು’ ಎಂದು ನಿಮಾಯ್ ಉತ್ತರಿಸಿದ. ಈ ಕತೆ ಕೇಳಿದ ಅವರೆಲ್ಲ ‘ಧರ್ಮ ಶಾಸ್ತ್ರ  ಸುಳ್ಳಾಗದು. ಕಾಣದ ಕೃಷ್ಣನ ಕೈ ಸದಾ ಮಕ್ಕಳು, ವೃದ್ಧರು, ಅಸಹಾಯಕರ ನೆರವಿಗೆ ಬರುತ್ತದೆ’ ಎಂದರು.

ಶ್ರೀ ಚೈತನ್ಯರ  ಮಾಯಾಶಕ್ತಿಯು  ಅವನ ಬಂಧುಗಳನ್ನು ಭಿನ್ನವಾಗಿ ಚಿಂತಿಸುವಂತೆ ಮಾಡಿತು. ಈ ರೀತಿ ದೇವ ಸರ್ವೋತ್ತಮನು ತನ್ನ ಲೀಲೆಗಳನ್ನು ತೋರಿಸಿದ್ದಾನೆ. ಮತ್ತು ಅವನ ಕೃಪೆ ಇಲ್ಲದಿದ್ದರೆ ಯಾರಿಗೂ ಅದು ಅರ್ಥವಾಗದು. ಇದನ್ನೆಲ್ಲ ಕೇಳಿದವರು ಖಂಡಿತ ಶ್ರೀ ಚೈತನ್ಯರ ಪಾದಕಮಲಗಳಿಗೆ ಶರಣಾಗುವರು.

(ಮುಂದುವರಿಯುವುದು)
Leave a Reply

Your email address will not be published. Required fields are marked *