Search
Friday 29 October 2021
  • :
  • :

ಸುವರ್ಣಾವತಾರ ಭಾಗ – 23

ಭಕ್ತರೆಲ್ಲರೂ ನಿತ್ಯಾನಂದರ ಜೊತೆಯಲ್ಲಿ ಕೃಷ್ಣನ ಲೀಲೆಗಳ ಬಗೆಗೆ ಮಾತನಾಡುತ್ತ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಅಲ್ಲಿ ಸೇರಿದ್ದ ವೈಷ್ಣವರೆಲ್ಲರೂ ಉನ್ನತ ಆತ್ಮರಾಗಿದ್ದು ಭಗವಂತನ ಅಪ್ಪಟ ಭಕ್ತರಾಗಿದ್ದರು. ಅವರು ಕೃಷ್ಣ ಪ್ರಜ್ಞೆಯ ಅಮೃತದಲ್ಲಿ ಮುಳುಗಿದ್ದರು. ನಿತ್ಯಾನಂದ ಪ್ರಭು ಅತ್ಯಂತ ಆನಂದಭರಿತರಾಗಿ ವೈಷ್ಣವರತ್ತ ನೋಟ ಹರಿಸಿ ನಸುನಗುತ್ತಿದ್ದರು. ಅವರ ಭೇಟಿಯು ಯಾವಾಗಲೂ ದೈವೋನ್ಮಾದ ಉಂಟುಮಾಡುತ್ತಿತ್ತು. ಅಲೌಕಿಕ ಸಂತೋಷದ ಸಂದರ್ಭದಲ್ಲಿ ಆನಂದಭಾಷ್ಪ ಹರಿಯುತ್ತಿತ್ತು.

ವ್ಯಾಸ ಪೂಜೆ ನಿತ್ಯಾನಂದ ಲೀಲೆ

ಈ ದೈವೋನ್ಮಾದವನ್ನು ಕಂಡು ಶ್ರೀ ವಿಶ್ವಂಭರನು ಶ್ರೀ ನಿತ್ಯಾನಂದ ಪ್ರಭುಗಳಿಗೆ ಹೇಳಿದ, “ನನ್ನ ಪ್ರೀತಿಯ ನಿತ್ಯಾನಂದ ಗೋಸ್ವಾಮಿ, ನಿನ್ನ ವ್ಯಾಸ ಪೂಜೆ ಉತ್ಸವ ಎಲ್ಲಿ ಆಚರಿಸೋಣ? ನಾಳೆ ಹುಣ್ಣಿಮೆ, ಆ ದಿನ ಶ್ರೀಲ ವ್ಯಾಸ ದೇವರನ್ನು ಪೂಜಿಸಲಾಗುತ್ತದೆ. ಆದುದರಿಂದ ನೀನು ಯಾರ ಮನೆಯನ್ನಾದರೂ ಆಯ್ಕೆ ಮಾಡಿಕೋ, ಅನಂತರ ಅವರೊಂದಿಗೆ ಸಿದ್ಧತೆ ಮಾಡಿಕೋ.”

ನಿತ್ಯಾನಂದರಿಗೆ ವಿಶ್ವಂಭರನ ಮನವು ಅರ್ಥವಾಯಿತು. ಆದುದರಿಂದ ಅವರು ಶ್ರೀವಾಸ ಪಂಡಿತರ ಕೈಹಿಡಿದು ನಗುತ್ತಾ ನುಡಿದರು, “ವಿಶ್ವಂಭರ, ನನ್ನ ವ್ಯಾಸ ಪೂಜೆಯು ಈ ಬ್ರಾಹ್ಮಣನ ಮನೆಯಲ್ಲಿ ಆಗಲಿ.”

ಅನಂತರ ವಿಶ್ವಂಭರನು ಶ್ರೀವಾಸರಿಗೆ ತಿಳಿಸಿದ, ಈಗ ನೀವು ಭಾರಿ ಜವಾಬ್ದಾರಿ ಹೊರಬೇಕಾಗಿದೆ. ಅದಕ್ಕೆ ಶ್ರೀವಾಸರ ಉತ್ತರ, “ಇಲ್ಲ, ಪ್ರಭು. ಚಿಂತಿಸಬೇಕಾಗಿಲ್ಲ. ನಿಮ್ಮ ಕೃಪೆಯಿಂದ ಈ ಮನೆಯಲ್ಲಿ ಎಲ್ಲವೂ ಇದೆ. ವಸ್ತ್ರ, ಧಾನ್ಯ, ಜನಿವಾರ, ತುಪ್ಪಗಳಂತಹ ಸಾಧನಗಳು ಇಲ್ಲಿ ಲಭ್ಯ. ವ್ಯಾಸ ಪೂಜೆ ಆಚರಿಸುವ ವಿಧಾನವನ್ನು ಅರಿಯಲು ಪುಸ್ತಕವನ್ನಷ್ಟೇ ನಾನು ಪಡೆಯಬೇಕಾಗಿದೆ. ನನ್ನ ಅದೃಷ್ಟದಿಂದ, ನಾಳೆ ನಾನು ವ್ಯಾಸ ಪೂಜೆಯನ್ನು ನೋಡಬಹುದು.” ಶ್ರೀವಾಸರ ಉತ್ತರದಿಂದ ನಿಮಾಯ್‌ಗೆ ಸಂತೋಷವಾಯಿತು. ಭಕ್ತರೆಲ್ಲ ಹರ್ಷೋದ್ಗಾರಗೈದರು.

ಶ್ರೀ ವಿಶ್ವಂಭರನೆಂದ, “ನಿತ್ಯಾನಂದ ಗೋಸ್ವಾಮಿ, ಶ್ರೀವಾಸ ಪಂಡಿತರ ಮನೆಗೆ ಹೋಗಲು ನಾವೆಲ್ಲ ಸಿದ್ಧತೆ ಮಾಡಿಕೊಳ್ಳೋಣ.” ವಿಶ್ವಂಭರನ ಮಾತುಗಳಿಂದ ಸಂತೃಪ್ತನಾದ ನಿತ್ಯಾನಂದರು ತಕ್ಷಣ ಶ್ರೀವಾಸರ ಮನೆಗೆ ಹೊರಟರು. ಸಂಗಾತಿಗಳೊಂದಿಗೆ ಭಗವಂತ ಮತ್ತು ನಿತ್ಯಾನಂದ ಪ್ರಭು ಹೊರಟಾಗ, ಗೋಕುಲದಲ್ಲಿ ಶ್ರೀ ಕೃಷ್ಣ ಬಲರಾಮರು ತಮ್ಮ ಗೆಳೆಯರೊಂದಿಗೆ ಹೋಗುತ್ತಿದಂತೆಯೇ ಕಾಣುತ್ತಿತ್ತು.

ದೈವೋನ್ಮಾದದ ಪರಿ

ಅವರು ಶ್ರೀವಾಸ ಪಂಡಿತರ ಮನೆ ಪ್ರವೇಶಿಸಿದಾಗ ಭಕ್ತರಿಗೆ ತಮ್ಮ ದೇಹದಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಸ್ನೇಹಿತರು ಮತ್ತು ಬಂಧುಗಳಿಗೆ ಮಾತ್ರ ಒಳಗೆ ರಲು ಅವಕಾಶ ನೀಡಿ ಬಾಗಿಲನ್ನು ಮುಚ್ಚುವಂತೆ ವಿಶ್ವಂಭರನು ಆದೇಶಿಸಿದ. ಅನಂತರ ಅವನ ಸೂಚನೆಯಂತೆ ಅವರೆಲ್ಲ ಭಜನೆ ಮತ್ತು ಕೀರ್ತನೆಗಳನ್ನು ಹಾಡತೊಡಗಿದರು. ಕ್ರಮೇಣ ಬಾಹ್ಯ ಜಗತ್ತು ಮರೆಯಾಯಿತು.

ದೈವೋನ್ಮಾದ ಜಪವು ವ್ಯಾಸ ಪೂಜೆ ಉತ್ಸವ ಆಚರಣೆಗೆ ತಕ್ಕನಾಗಿತ್ತು. ಹಾಡುತ್ತಿದ್ದ ಭಕ್ತರಿಂದ ಸುತ್ತುವರಿದಿದ್ದ ಶ್ರೀ ನಿತ್ಯಾನಂದ ಮತ್ತು ಶ್ರೀ ವಿಶ್ವಂಭರ ದೈವೋನ್ಮಾದದಿಂದ ನರ್ತಿಸಲಾರಂಭಿಸಿದರು. ಈ ಇಬ್ಬರು ಭಗವಂತರಲ್ಲಿ ಪ್ರೇಮ ಮತ್ತು ವಾತ್ಸಲ್ಯದ ಪಾಶ ಶಾಶ್ವತವಾದುದು ಮತ್ತು ಈಗ ಅವರು ನರ್ತಿಸುತ್ತಿದ್ದಾಗ ಇಬ್ಬರೂ ಪರಸ್ಪರರ ಚಿಂತನೆಯಲ್ಲಿ ಮಗ್ನರಾಗಿದ್ದರು.

ಭಕ್ತರು ಅಸಾಧಾರಣ ಆನಂದವನ್ನು ಅನುಭವಿಸುತ್ತಿದ್ದರು. ಕೆಲವರು ಜೋರಾಗಿ ಕೂಗುತ್ತಿದ್ದರು, ಕೆಲವರು ಪ್ರಜ್ಞಾಶೂನ್ಯರಾದರು ಮತ್ತು ಉಳಿದವರಿಗೆ ಆನಂದಬಾಷ್ಪವನ್ನು ತಡೆಯಲಾಗಲಿಲ್ಲ.

ಇಬ್ಬರು ದೇವೋತ್ತಮರು ನಡುಗು, ಬಿಳಚು, ರೋಮಾಂಚನ, ಅಳು ಮತ್ತು ಸಮಾಧಿ ಸ್ಥಿತಿಯಂತಹ ದೈವೋನ್ಮಾದ ಲಕ್ಷಣಗಳನ್ನು ಅನುಭವಿಸುತ್ತಿದ್ದರು. ಅವರು ವಿಷದಪಡಿಸಿದ ಎಲ್ಲ ದೈವೋನ್ಮಾದ ಲಕ್ಷಣಗಳನ್ನು ಯಾರು ತಾನೇ ವರ್ಣಿಸಬಲ್ಲರು?

ಭಕ್ತರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು. ಶ್ರೀ ನಿತ್ಯಾನಂದರು ಶ್ರೀವಾಸರ ಮನೆಯಲ್ಲಿಯೇ ಉಳಿದರು. ಅನಂತರ, ಸರಿ ರಾತ್ರಿಯಲ್ಲಿ, ದೈವೋನ್ಮಾದದಲ್ಲಿ ಶ್ರೀ ನಿತ್ಯಾನಂದರು ಸಿಂಹದಂತೆ ಜೋರಾಗಿ ಗರ್ಜಿಸಿದರು. ಅವರು ತನ್ನ ದಂಡ, ಕಮಂಡಲ ಮುರಿದು ಹಾಕಿದರು. ದೇವೋತ್ತಮ ಪರಮ ಪುರುಷನ ಲೀಲೆಗಳ ಆಳವನ್ನು ಅರಿಯುವವರಾರು? ಶ್ರೀ ನಿತ್ಯಾನಂದ ತನ್ನ ದಂಡ ಮತ್ತು ಕಮಂಡಲವನ್ನು ಮುರಿದುಹಾಕಿದ್ದೇಕೆ ಎಂಬುವುದು ಯಾರಿಗೆ ಗೊತ್ತು?

ಮರುದಿನ ಬೆಳಿಗ್ಗೆ, ರಾಮಾಯ್ ಪಂಡಿತನು ಮುರಿದಿದ್ದ ದಂಡ ಮತ್ತು ಒಡೆದಿದ್ದ ಕಮಂಡಲವನ್ನು ನೋಡಿದ. ಅವನು ಗೊಂದಲಗೊಂಡ. ಅವನು ನೇರವಾಗಿ ಶ್ರೀವಾಸ ಪಂಡಿತರಲ್ಲಿಗೆ ಹೋಗಿ ಈ ವಿಷಯ ತಿಳಿಸಿದ. ಶ್ರೀವಾಸ ಪಂಡಿತರು, “ಹೋಗು, ಶ್ರೀ ವಿಶ್ವಂಭರನಿಗೆ ತಿಳಿಸು” ಎಂದರು.

ರಾಮಾಯ್ ಪಂಡಿತನಿಂದ ನಿತ್ಯಾನಂದರ ಲೀಲೆಗಳ ಬಗೆಗೆ ಕೇಳಿದ ಕೂಡಲೇ ಚೈತನ್ಯ ಮಹಾಪ್ರಭು ಶ್ರೀವಾಸ ಪಂಡಿತರ ಮನಗೆ ದಾವಿಸಿದ. ನಿತ್ಯಾನಂದ ಅರೆ ಪ್ರಜ್ಷಾವಸ್ಥೆ ಸ್ಥಿತಿಯಲ್ಲಿ ಸತತ ನಗುತ್ತಿದ್ದುದನ್ನು ವಿಶ್ವಂಭರ ಕಂಡ. ನಿಮಾಯ್ ಪಂಡಿತನು ದಂಡವನ್ನು ತೆಗೆದುಕೊಂಡು ನಿತ್ಯಾನಂದರನ್ನು ಗಂಗಾ ನದಿಯತ್ತ ಕರೆದೊಯ್ದ.

ಗಂಗಾ ಸ್ನಾನಕ್ಕಾಗಿ ಹೊರಟ ಇಬ್ಬರು ಭಗವಂತರೊಂದಿಗೆ ಶ್ರೀವಾಸ ಪಂಡಿತ ಮತ್ತಿತರ ವೈಷ್ಣವರೂ ಹೆಜ್ಜೆ ಹಾಕಿದರು. ಅಲ್ಲಿ ವಿಶ್ವಂಭರನು ಸ್ವತಃ ದಂಡವನ್ನು ನೀರಿಗೆಸೆದ. ಇನ್ನೂ ಸಮಾಧಿ ಸ್ಥಿತಿಯಲ್ಲಿದ್ದ ನಿತ್ಯಾನಂದರು ಅಶಾಂತನಾಗಿದ್ದರು ಮತ್ತು ಯಾರ ಬುದ್ಧಿವಾದಕ್ಕೂ ಕಿವಿಗೊಡಲಿಲ್ಲ.

ಆದರೂ ನದಿಯಲ್ಲಿ ಮೊಸಳೆಯೊಂದು ಈಜಾಡುತ್ತಿರುವುದನ್ನು ಕಂಡ ಕೂಡಲೇ ನಿತ್ಯಾನಂದರು ಅದನ್ನು ಹಿಡಿಯಲು ನೀರಿಗೆ ಧುಮುಕಿದರು. ಆಗ ಶ್ರೀವಾಸ ಪಂಡಿತ ಮತ್ತು ಗದಾಧರ ಪಂಡಿತ ಜೋರಾಗಿ ಕೂಗಿಕೊಂಡರು. ನಿರ್ಭೀತ ನಿತ್ಯಾನಂದರು ನೀರಿನ ಮಧ್ಯೆ, ಮೊಸಳೆಯತ್ತ ಈಜಲಾರಂಭಿಸಿದರು. ಚೈತನ್ಯರ ಮಾತುಗಳು ಮಾತ್ರ ಅವರನ್ನು ಹಿಂದಕ್ಕೆ ತರುವುದು ಸಾಧ್ಯವಾಯಿತು. ವಿಶ್ವಂಭರನು ಜೋರಾಗಿ ಕೂಗಿ ಹೇಳಿದ, “ತಕ್ಷಣ ಬಾ, ವ್ಯಾಸದೇವನ ಪೂಜೆಯನ್ನು ಮುಂದುವರಿಸೋಣ.” ಅವನ ಮಾತನ್ನು ಪಾಲಿಸಿ ನಿತ್ಯಾನಂದರು ನೀರಿನಿಂದ ಹೊರಬಂದು ವಿಶ್ವಂಭರನ ಜೊತೆ ಶ್ರೀವಾಸ ಪಂಡಿತರ ಮನೆಯತ್ತ ನಡೆದರು.

ಅನಂತರ, ಕೆಲವೇ ಸಮಯದಲ್ಲಿ ಎಲ್ಲ ಭಕ್ತರು ಅಲ್ಲಿ ಸೇರಿದರು ಮತ್ತು ಶ್ರೀ ಕೃಷ್ಣನ ಪವಿತ್ರ ನಾಮವನ್ನು ಜಪಿಸಲಾರಂಭಿಸಿದರು. ಶ್ರೀವಾಸ ಪಂಡಿತರನ್ನು ವ್ಯಾಸ ಪೂಜೆಗೆ ಪ್ರಧಾನ ಅರ್ಚಕರನ್ನಾಗಿ ನೇಮಕ ಮಾಡಲಾಯಿತು. ಶ್ರೀ ಚೈತನ್ಯ ಮಹಾಪ್ರಭುಗಳಿಂದ ಆದೇಶ ಪಡೆದು ಅವರು ಅದನ್ನು ಎಚ್ಚರಿಕೆಯಿಂದ ಕಾರ್ಯಗತಗೊಳಿಸಿದರು. ಸತತವಾಗಿ ನಡೆದ ಸುಮಧುರ ಕೀರ್ತನೆಯು ಶ್ರೀವಾಸ ಪಂಡಿತರ ಮನೆಯನ್ನು ವೈಕುಂಠದ ಆಧ್ಯಾತ್ಮಿಕ ಲೋಕವನ್ನಾಗಿ ಪರಿವರ್ತಿಸಿತು. ಧರ್ಮ ಶಾಸ್ತ್ರಗಳನ್ನು ಚೆನ್ನಾಗಿ ಅರಿತಿದ್ದ ಶ್ರೀವಾಸ ಪಂಡಿತರು ಧರ್ಮ ಶಾಸ್ತ್ರದ ಆದೇಶದಂತೆ ಪೂಜೆ ವಿಧಿ ವಿಧಾನ ಕೈಗೊಂಡರು. ಅವರು ನಿತ್ಯಾನಂದರಿಗೆ ಸುವಾಸಿತ ಪುಷ್ಪಹಾರವನ್ನು ನೀಡಿ, “ನಿತ್ಯಾನಂದ ಪ್ರಭು, ದಯೆಯಿಟ್ಟು ಈ ಹಾರ ತೆಗೆದುಕೊಂಡು ಸರಿಯಾದ ಮಂತ್ರಗಳನ್ನು ಜಪಿಸುತ್ತ ನಿಮ್ಮ ಪ್ರಾರ್ಥನೆ ಮತ್ತು ಗೌರವಗಳೊಂದಿಗೆ ಶ್ರೀಲ ವ್ಯಾಸ ದೇವರಿಗೆ ಅರ್ಪಿಸಿ. ವ್ಯಾಸ ದೇವರ ಪೂಜೆ ಮಾಡುವಾಗ ಸ್ವತಃ ಹಾರ ಹಾಕಬೇಕೆಂದು ಶಾಸ್ತ್ರಗಳು ಹೇಳಿವೆ. ಶ್ರೀ ವ್ಯಾಸ ದೇವರಿಗೆ ತೃಪ್ತಿಯಾದರೆ ಎಲ್ಲರ ಆಧ್ಯಾತ್ಮಿಕ ಅಪೇಕ್ಷೆಗಳು ಪೂರ್ಣಗೊಳ್ಳುತ್ತವೆ.”

ಶ್ರೀವಾಸ ಪಂಡಿತರು ಮಾತನಾಡಿದ್ದಕ್ಕೆಲ್ಲ ನಿತ್ಯಾನಂದರು `ಸರಿ’ `ಸರಿ’ ಎನ್ನುತ್ತಿದ್ದರು. ಮೇಲುನೋಟಕ್ಕೆ ಕಾಣುವಂತೆ ಅವರು ಶ್ರೀವಾಸರ ಮಾತಿಗೆ ಕಿಂಚಿತ್ತೂ ಕಿವಿಗೊಡಲಿಲ್ಲ. ಮತ್ತು ಅವರಿಗೆ ಮಂತ್ರಗಳನ್ನು ಜಪಿಸುವುದೂ ಗೊತ್ತಿದಂತೆ ಕಾಣುತ್ತಿರಲಿಲ್ಲ. ಅವರು ಹಾರವನ್ನು ಕೈಯಲ್ಲಿ ಹಿಡಿದು ತನ್ನ ಉಸಿರಿನೊಳಗೇ ಏನೋ ಮೆಲುದನಿಯಲ್ಲಿ ಹೇಳಿದರು. ಅದು ಯಾರಿಗೂ ಏನೆಂದು ತಿಳಿಯಲಿಲ್ಲ ಮತ್ತು ಅವರು ತನ್ನ ಸುತ್ತ ದೃಷ್ಟಿ ಹರಿಸಿದರು.

ಚೈತನ್ಯರಿಗೆ ಹಾರ

ಶ್ರೀವಾಸ ಪಂಡಿತರು ಈ ವಿಷಯವನ್ನು ವಿಶ್ವಂಭರನ ಗಮನಕ್ಕೆ ತಂದರು, “ನಿಮ್ಮ ಶ್ರೀಪಾದರಿಗೆ ಶ್ರೀ ವ್ಯಾಸ ದೇವರನ್ನು ಪೂಜಿಸುವುದು ಇಷ್ಟವಿಲ್ಲ.” ಭಗವಂತನು ತತ್‌ಕ್ಷಣ ನಿತ್ಯಾನಂದರ ಮುಂದೆ ನಿಂತ.. ಅನಂತರ ನುಡಿದ, “ನಿತ್ಯಾನಂದ, ದಯೆಯಿಟ್ಟು ನನ್ನ ಮಾತು ಕೇಳು. ಹಾರವನ್ನು ವ್ಯಾಸ ದೇವರಿಗೆ ಅರ್ಪಿಸಿ ಅವರ ಪೂಜೆ ಮಾಡು.” ಚೈತನ್ಯ ಅಲ್ಲಿರುವುದನ್ನು ನೋಡಿದ ನಿತ್ಯಾನಂದರು, ತತ್‌ಕ್ಷಣ ಹಾರವನ್ನು ಭಗವಂತನ ಶಿರಕ್ಕೆ ಹಾಕಿದರು. ಸುವಾಸಿತ ಹೂವಿನ ಹಾರವು ಭಗವಂತನ ಗುಂಗುರು ಕೂದಲಿನ ಮೇಲೆ ಸುಂದರವಾಗಿ ಕಾಣುತ್ತಿತ್ತು.

ಅದೇ ಕ್ಷಣದಲ್ಲಿ ಶ್ರೀ ಚೈತನ್ಯನು ನಿತ್ಯಾನಂದ ಪ್ರಭುಗೆ ತನ್ನ ಆರು-ಭುಜಗಳ ರೂಪವನ್ನು ತೋರಿದ. ಭಗವಂತನು ತನ್ನ ಆರು ಕೈಗಳಲ್ಲಿ ವಿಷ್ಣುವಿನ ಶಂಖ, ಚಕ್ರ, ಗದೆ, ಧನಸ್ಸು ಮತ್ತು ಕೊಳಲನ್ನು ಹೊಂದಿದ್ದ. ಶ್ರೀ ನಿತ್ಯಾನಂದ ಪ್ರಭು ಇದನ್ನು ನೋಡಿ ಸಮಾಧಿ ಸ್ಥಿತಿಗೆ ಹೋದರು. ಮತ್ತು ಜೀವ ಲಕ್ಷಣ ಕಾಣದಾಯಿತು. ಭಯ ಭೀತರಾದ ಭಕ್ತರು ಪ್ರಾರ್ಥಿಸಲಾರಂಭಿಸಿದರು, “ಅವರನ್ನು ರಕ್ಷಿಸು, ಕೃಷ್ಣ, ಅವರನ್ನು ರಕ್ಷಿಸು.”

ನೆಲದ ಮೇಲಿನಿಂದ ನಿತ್ಯಾನಂದರನ್ನು ಮೇಲಕ್ಕೆತ್ತಲು ಬಾಗಿದ ಚೈತನ್ಯ ನುಡಿದ, “ನಿತ್ಯಾನಂದ, ದಯೆಯಿಟ್ಟು ಮೇಲೇಳು ಮತ್ತು ಮನಸ್ಸನ್ನು ಸ್ತಿಮಿತಕ್ಕೆ ತಂದುಕೋ. ನೀನು ಆರಂಭಿಸಿದ ಪವಿತ್ರ ನಾಮದ ಜಪವನ್ನು ಕೇಳು. ಪವಿತ್ರ ನಾಮದ ಜಪವನ್ನು ಪ್ರಚುರಪಡಿಸಲು ನೀನು ಈ ಲೌಕಿಕ ಜಗತ್ತಿಗೆ ಬಂದಿಳಿದೆ. ಮತ್ತು ಈಗ ನೀನು ಪರಿಪೂರ್ಣವಾಗಿ ಈ ಕಾರ್ಯದಲ್ಲಿ ಯಶಸ್ವಿಯಾಗಿರುವೆ. ನಿನಗೆ ಇನ್ನೇನು ಬೇಕು?”

“ಸರ್ವ ಶ್ರೇಷ್ಠ ಭಕ್ತಿ ಪ್ರೇಮದ ಸಾಕಾರ ರೂಪವಾದ ಕೃಷ್ಣ ಪ್ರೇಮದ ಭಂಡಾರದ ಮಾಲೀಕ, ನೀನು. ಅಂತಹ ಅಮೃತವನ್ನು ನೀನು ಹಂಚುವವರೆಗೂ ಯಾರೂ ಕೃಷ್ಣ ಪ್ರೇಮವನ್ನು ಪಡೆಯಲಾಗದು. ಆದುದರಿಂದ, ಮೇಲೇಳು ಮತ್ತು ನಿನ್ನ ಸುತ್ತ ನೋಡು, ನಿನ್ನನ್ನು ಸುತ್ತುವರಿದಿರುವ ನಿನ್ನದೇ ಪ್ರೀತಿಯ ಸಂಗಾತಿಗಳತ್ತ ನೋಟ ಹರಿಸು. ನಿನಗೆ ಇಷ್ಟವಾದವರಿಗೆ ನೀನು ಈ ಅಮೂಲ್ಯ ಸ್ವತ್ತನ್ನು ಹಂಚಬಹುದು. ಯಾರಾದರೂ ಕಿಂಚಿತ್ತಾದರೂ ನಿನ್ನನ್ನು ಪ್ರೀತಿಸದಿರುವುದನ್ನು ಬೆಳೆಸಿಕೊಂಡರೆ, ಅವರು ನನ್ನನ್ನು ಪೂಜಿಸಿದರೂ ನಾನು ಅವರನ್ನು ಸ್ವೀಕರಿಸುವುದಿಲ್ಲ.”

ಶ್ರೀ ಚೈತನ್ಯನ ನುಡಿಗಳು ನಿತ್ಯಾನಂದರ‌ನ್ನು ಸಮಾಧಿ ಸ್ಥಿತಿಯಿಂದ ಹೊರಬರುವಂತೆ ಮಾಡಿದವು. ಆದರೆ ಭಗವಂತನ ಆರು ಹಸ್ತಗಳ ರೂಪವನ್ನು ನೋಡಿದ ಕೂಡಲೇ ಅವರು ಪುನಃ ತೀವ್ರ ಉನ್ಮಾದಕ್ಕೆ ಒಳಗಾದರು. ಯಾರ ಹೃದಯದಲ್ಲಿ ಗೌರಚಂದ್ರನು ಶಾಶ್ವತ ವಾಸಿಯಾಗಿರುವನೋ ಆ ಅನಂತಶೇಷನಿಂದ ನಿತ್ಯಾನಂದರು ಭಿನ್ನವಲ್ಲ. ನಿತ್ಯಾನಂದರು ಬಲರಾಮನಿಂದ ಭಿನ್ನವಲ್ಲ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಶ್ರೀ ಗೌರಚಂದ್ರನು ಎಲ್ಲ ಅವತಾರಗಳ ಮತ್ತು ಲೀಲೆಗಳ ಮೂಲವಾದ ದೇವೋತ್ತಮ ಪರಮ ಪುರುಷ. ಆದುದರಿಂದ ಅವನು ತನ್ನ ಆರು ಬಾಹುಗಳ ರೂಪವನ್ನು ತೋರಿದುದು ಅಚ್ಚರಿಯಲ್ಲ.

ಚೈತನ್ಯ ಮಹಾಪ್ರಭುವಿನ ಆರು ಬಾಹು ರೂಪವನ್ನು ಕಂಡು ನಿತ್ಯಾನಂದರು ಆನಂದತುಂದಲಿತರಾದರು. ನಿತ್ಯಾನಂದರ ಈ ಅದ್ಭುತ ಲೀಲೆಯನ್ನು ಯಾರು ಕೇಳುವರೋ ಅವರು ಈ ಲೌಕಿಕ ಬಂಧನದಿಂದ ಮುಕ್ತರಾಗುವರು.

ನಿತ್ಯಾನಂದರು ಸಮಾಧಿಸ್ಥಿತಿಯಿಂದ ಹೊರಬಂದ ಮೇಲೆ ಅಳಲಾರಂಭಿಸಿದರು. ಅವರ ಕಣ್ಣುಗಳಿಂದ ನೀರು ನದಿಯಾಗಿ ಹರಿಯಿತು. ಅನಂತರ ಶ್ರೀ ಚೈತನ್ಯರು ಎಲ್ಲರಿಗೂ ಹೇಳಿದರು, “ವ್ಯಾಸ ಪೂಜೆ ಪೂರ್ಣಗೊಂಡಿದೆ. ಈಗ ಕೀರ್ತನೆ ಶುರುವಾಗಲಿ!”

ಉನ್ಮಾದ ಸ್ಥಿತಿ

ಶ್ರೀ ಚೈತನ್ಯರ ಆದೇಶ ಕೇಳಿ ಆನಂದಿತರಾದ ಭಕ್ತರು ತತ್‌ಕ್ಷಣ ಶ್ರೀ ಕೃಷ್ಣನ ಅಲೌಕಿಕ ನಾಮಗಳ ಜಪ ಆರಂಭಿಸಿದರು. ಈ ಇಂದ್ರಿಯ ಗೋಚರ ಜಗತ್ತಿನ ಸಂಪರ್ಕವನ್ನು ಕಡಿದುಹಾಕಿದವರಂತೆ ಇಬ್ಬರು ಸೋದರರು, ಶ್ರೀ ಚೈತನ್ಯ ಮತ್ತು ಶ್ರೀ ನಿತ್ಯಾನಂದರು ಉನ್ಮತ್ತರಂತೆ ನರ್ತಿಸಿದರು. ಹೀಗೆ ವ್ಯಾಸ ಪೂಜೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವೈಷ್ಣವರು ಇನ್ನಷ್ಟು ಸೂರ್ತಿಗೊಂಡರು. ಕೆಲವರು ಹಾಡಿದರು, ಕೆಲವರು ನರ್ತಿಸಿದರು ಮತ್ತೂ ಕೆಲವರು ಪರಸ್ಪರ ಕಾಲು ಹಿಡಿದು ನೆಲದ ಮೇಲೆ ಹೊರಳಾಡಿದರು.

ಎಲ್ಲರಿಂದಲೂ ಪೂಜಿಸಲ್ಪಡುವ ಶ್ರೀ ಚೈತನ್ಯರ ತಾಯಿ ಶಚೀಮಾತೆಯು ಏಕಾಂಗಿಯಾಗಿ ಕುಳಿತು ಈ ಅಲೌಕಿಕ ಆನಂದ ಕ್ಷಣಗಳನ್ನು ವೀಕ್ಷಿಸಿದಳು. ನಿತ್ಯಾನಂದ ಮತ್ತು ವಿಶ್ವಂಭರರನ್ನು ಪ್ರತಿ ಬಾರಿ ನೋಡಿದಾಗಲೆಲ್ಲ ಅವಳು, “ಇಬ್ಬರೂ ನನ್ನ ಪುತ್ರರು” ಎಂದು ತನ್ನಲ್ಲೇ ಹೇಳಿಕೊಳ್ಳುತ್ತಿದ್ದಳು.

ಭಗವಂತನಿಂದಲೇ ಪ್ರಸಾದ

ಕೀರ್ತನೆಯ ಅನಂತರ ಭಗವಂತನು ತನ್ನ ಭಕ್ತರ ಜೊತೆ ಕುಳಿತ.  ತತ್‌ಕ್ಷಣ ವ್ಯಾಸ ಪೂಜೆಯ ನೈವೇದ್ಯಗಳನ್ನು ತರುವಂತೆ ಅವನು ಶ್ರೀವಾಸ ಪಂಡಿತರಿಗೆ ಹೇಳಿದ. ಶ್ರೀವಾಸ ಪಂಡಿತರು ಎಲ್ಲ ರೀತಿಯ ಪ್ರಸಾದಗಳನ್ನು ಅಲ್ಲಿಗೆ ತರುವ ವ್ಯವಸ್ಥೆ ಮಾಡಿದರು. ವಿಶ್ವಂಭರನು ಸ್ವತಃ ಭಕ್ತರಿಗೆ ಪ್ರಸಾದ ಹಂಚಿದ. ದೇವೋತ್ತಮನಾದ ಶ್ರೀ ಗೌರಚಂದ್ರನಿಂದ ಪ್ರಸಾದ ಸ್ವೀಕರಿಸಿದ ಭಕ್ತರ ಆನಂದಕ್ಕೆ ಎಣೆಯೇ ಇರಲಿಲ್ಲ.

ಭಗವಂತನು ಪ್ರತಿಯೊಬ್ಬರನ್ನೂ ಮನೆ ಒಳಗಡೆಯಿಂದ ಕರೆದು ಸ್ವಹಸ್ತದಿಂದ ಪ್ರಸಾದ ನೀಡಿದ. ಭಗವಂತನಿಂದ ನೇರವಾಗಿ ಪ್ರಸಾದ ಸ್ವೀಕರಿಸುವುದು ಅಪರೂಪ ಮತ್ತು ಅದೃಷ್ಟವಾದುದು. ಇದು ಬ್ರಹ್ಮನಂತಹವರ ವಿಷಯದಲ್ಲಿಯೂ ನಿಜ. ಆದರೆ, ಈಗ, ಆ ಮನೆಯ ಸೇವಕರೂ ಅತಿ ಶ್ರೇಷ್ಠ ಆಧ್ಯಾತ್ಮಿಕ ಸಂಪತ್ತನ್ನು ಭಗವಂತನಿಂದ ಸ್ವೀಕರಿಸಿದರು. ಅಂತಹ ಆಧ್ಯಾತ್ಮಿಕ ಚಟುವಟಿಕೆ ನಡೆದ ಮನೆಯ ಒಡೆಯ ಶ್ರೀವಾಸ ಪಂಡಿತರ ವೈಭವವನ್ನು ಯಾರಿಗೆ ತಾನೇ ವರ್ಣಿಸಲು ಸಾಧ್ಯ?

ಈ ರೀತಿ, ದೇವೋತ್ತಮನು ನವದ್ವೀಪದಲ್ಲಿ ಅದ್ಭುತ ಲೀಲೆಗಳನ್ನು ತೋರಿದ. ಆದರೆ ಅದು ಎಲ್ಲರಿಗೂ ಗೋಚರವಾಗಲಿಲ್ಲ.

(ಮುಂದುವರಿಯುವುದು)
Leave a Reply

Your email address will not be published. Required fields are marked *