Search
Friday 29 October 2021
  • :
  • :

ಸುವರ್ಣಾವತಾರ ಭಾಗ – 22

ಒಂದು ದಿನ ಶ್ರೀ ಗೌರಾಂಗನು ಕೃಷ್ಣನ ವರಾಹ ರೂಪದ ಲೀಲೆಗಳನ್ನು ಕೇಳಿದ. ಘೀಳಿಡುತ್ತ ಅವನು ಮುರಾರಿ ಗುಪ್ತರ ಮನೆಗೆ ಧಾವಿಸಿದ. ಶ್ರೀರಾಮಚಂದ್ರನಿಗೆ ಹನುಮಂತನ ಬಗೆಗೆ ವಿಶೇಷ ಪ್ರೀತಿ ಇದ್ದಂತೆ ಶ್ರೀ ಚೈತನ್ಯರಿಗೆ ಮುರಾರಿ ಗುಪ್ತರ ಬಗೆಗೆ ವಿಶೇಷ ಪ್ರೇಮವಿತ್ತು. ತನ್ನ ಮನೆಗೆ ಆಗಮಿಸಿದ ಶ್ರೀ ಗೌರಚಂದ್ರನನ್ನು ಮುರಾರಿ ಗುಪ್ತರು ಪ್ರೀತಿ, ಆದರ ಮತ್ತು ಗೌರವದಿಂದ ಬರಮಾಡಿಕೊಂಡು ಅವನ ಚರಣಕಮಲಗಳಿಗೆರಗಿದರು. ಭಗವಂತನು ಅವಸರದಿಂದ ಅವರನ್ನು ದಾಟಿ ಹೋಗಿ ಜೋರಾಗಿ “ವರಾಹ, ವರಾಹ” ಎಂದು ಗರ್ಜಿಸಿದ.

ದಿಕ್ಕು ತೋಚದಂತಾದ ಮುರಾರಿ ಗುಪ್ತ ಮೂಕರಾಗಿ ನಿಂತುಬಿಟ್ಟರು. ಶ್ರೀ ಚೈತನ್ಯರು ಶ್ರೀ ವಿಷ್ಣುವಿನ ಮಂದಿರ ಕೊಠಡಿಯನ್ನು ಪ್ರವೇಶಿಸಿ ಮೂಲೆಯಲ್ಲಿದ್ದ ಸುಂದರ ನೀರಿನ ಕೊಡವನ್ನು ನೋಡಿದರು. ಆ ಕ್ಷಣದಲ್ಲಿಯೇ ಭಗವಂತನು ವರಾಹ ರೂಪ ತಾಳಿದ. ಈ ಮನಸ್ಥಿತಿಯಲ್ಲಿ ಮಗ್ನನಾಗಿದ್ದ ಅವನು ತನ್ನ ಕೋರೆ ಹಲ್ಲಿನಿಂದ ನೀರಿನ ಕೊಡ ಮೇಲಕ್ಕೆತ್ತಿ ಜೋರಾಗಿ ಗರ್ಜಿಸುತ್ತ ತನ್ನ ನಾಲ್ಕು  ಪಾದಗಳ ಮೇಲೆ ಅಲ್ಲಿ ನಿಂತ.

“ಮುರಾರಿ, ನನಗೆ ಪ್ರಾರ್ಥನೆ ಸಲ್ಲಿಸು!,” ಎಂದು ಭಗವಂತ ಆದೇಶಿಸಿದ. ಈ ಅಸದೃಶ ದೃಶ್ಯವನ್ನು ಕಂಡು ಅವರಿಗೆ ಮಾತೇ ಹೊರಡದಾಯಿತು. ಆಗ ಭಗವಂತನೆಂದ, “ಮಾತಾಡು, ಮುರಾರಿ, ಮಾತಾಡು. ನೀನು ಭಯ ಪಡಬೇಕಾಗಿಲ್ಲ. ನಿನಗೆ ನನ್ನ ಪರಾತ್ಪರದ ಪರಿಚಯ ಗೊತ್ತಿಲ್ಲವೇ?”

ಭಯದಿಂದ ನಡುಗುತ್ತಿದ್ದ ಮುರಾರಿಯು ಭಗವಂತನಲ್ಲಿ ಮನವಿ ಮಾಡಿಕೊಂಡರು. “ಓ ದೇವರೇ! ನಿನ್ನನ್ನು ವೈಭವೀಕರಿಸುವುದು ಮತ್ತು ನಿನ್ನನ್ನು ಪ್ರಾರ್ಥಿಸುವುದು ಹೇಗೆಂದು ನಿನಗೇ ಗೊತ್ತು. ತನ್ನ ಒಂದು ಹೆಡೆಯ ಮೇಲೆ ಇಡೀ ವಿಶ್ವವನ್ನು ಹಿಡಿದುಕೊಂಡಿರುವ ಶ್ರೀ ಅನಂತಶೇಷನು ನಿನ್ನನ್ನು ವೈಭವೀಕರಿಸಲು ಸಾವಿರಾರು ಬಾಯಿಗಳ ರೂಪ ತಾಳಿದ. ಆದರೂ ನಿನ್ನ ವೈಭವಗಳ ಸೀಮೆಯನ್ನು ಕಾಣುವುದು ಸಾಧ್ಯವಿಲ್ಲ ಎಂದು ಅವನು ಶೋಕಿಸುತ್ತಾನೆ. ನಿನ್ನ ವೈಭವವನ್ನು ವರ್ಣಿಸಲು ಅವನಿಗಿಂತ ಇನ್ಯಾರು ಸಮರ್ಥರು? ಇಡೀ ಲೌಕಿಕ ಜಗತ್ತು ವೇದಗಳ ಆದೇಶವನ್ನು ಅನುಸರಿಸುತ್ತದೆ. ಆದರೂ ನಿನ್ನ ಅಲೌಕಿಕ, ಪರಮ ಲಕ್ಷಣವನ್ನು ಸಂಪೂರ್ಣವಾಗಿ ಹೊರಗೆಡಹಲು ವಿಫಲವಾಗಿವೆ. ಈ ಲೌಕಿಕ ಸೃಷ್ಟಿಯಲ್ಲಿ ಅಸಂಖ್ಯ ವಿಶ್ವಗಳಿದ್ದು ಅವೆಲ್ಲ ನಿನ್ನ ದೇಹದಿಂದ ಹೊರಹೊಮ್ಮಿದವೆಂದು ನಾವು ಕೇಳಿದ್ದೇವೆ.”

“ಎಲ್ಲ ಯಜ್ಞ ಯಾಗಾದಿಗಳ ಭೋಕ್ತನಾದ ನಾನು ಪರಾತ್ಪರ ಶ್ರೀ ವಿಷ್ಣು. ನನ್ನ ಅಲೌಕಿಕ ರೂಪದಲ್ಲಿ ಅಪರಿಪೂರ್ಣತೆ ಎಂಬುದಿಲ್ಲ. ಬ್ರಹ್ಮ ಮತ್ತು ಶಿವ ನನ್ನ ಪರಮ ಅಲೌಕಿಕ ಸ್ಥಾನ ಮತ್ತು ಲಕ್ಷಣಗಳನ್ನು ವೈಭವೀಕರಿಸುವಲ್ಲಿ ಸದಾ ತೊಡಗಿದ್ದಾರೆ. ನನ್ನ ದೇಹದ ಸ್ಪರ್ಶದಿಂದ ಮಾತ್ರ ಎಲ್ಲವನ್ನೂ ಅಧ್ಯಾತ್ಮ ಮತ್ತು ಶುದ್ಧೀಕರಿಸಬಹುದು. ಮುರಾರಿ ಗುಪ್ತ, ನನ್ನ ಅಭಿಪ್ರಾಯವನ್ನು ಎಚ್ಚರದಿಂದ ಕೇಳು. ವೇದಗಳೂ ಹೊರಗೆಡಹದ್ದನ್ನು ನಾನು ನಿನಗೆ ತಿಳಿಸುವೆ.”

“ಗಮನವಿಟ್ಟು ಕೇಳು. ನನ್ನ ವರಾಹ ಅವತಾರದಲ್ಲಿ ನಾನು ಭೂಮಿಯನ್ನು ಎತ್ತಿದಾಗ, ನನ್ನ ಸ್ಪರ್ಶದಿಂದ ಭೂಮಿಯು ಗರ್ಭ ಧರಿಸಿದಳು. ಅವಳು ನನ್ನ ಪುತ್ರ ನರಕನಿಗೆ ಜನ್ಮವಿತ್ತಳು. ಅವನು ಪ್ರಬಲನಾದ. ನಾನು ನನ್ನ ಪುತ್ರನಿಗೆ ಎಲ್ಲ ಧಾರ್ಮಿಕ ಬೋಧನೆ ನೀಡಿದೆ. ಅವನು ತುಂಬ ಶಕ್ತಿಶಾಲಿಯಾದ ಮತ್ತು ದೇವತೆ, ಬ್ರಾಹ್ಮಣ ಆಧ್ಯಾತ್ಮಿಕ ಗುರು ಮತ್ತು ಭಕ್ತರನ್ನು ಕರ್ತವ್ಯಶೀಲನಾಗಿ  ರಕ್ಷಿಸಿದ. ಆದರೆ, ವಿಧಿ ಎಲ್ಲವನ್ನೂ ಬದಲಿಸಿಬಿಟ್ಟಿತು. ರಾಜ ಬಾಣನ ಸಂಗ ಮತ್ತು ಪ್ರಭಾವದಿಂದ ಅವನು ಭಕ್ತರ ಬಗೆಗೆ ಕ್ರೂರಿಯಾದ. ನನ್ನ ಭಕ್ತರ ಮೇಲೆ ಆಕ್ರಮಣ ಅಥವಾ ಯಾವುದೇ ಹಿಂಸೆಯನ್ನು ನಾನು ಸಹಿಸಲಾರೆ. ಆದುದರಿಂದ ನಾನು ನನ್ನ ಭಕ್ತರನ್ನು ರಕ್ಷಿಸಲು ನನ್ನ ಮಗನನ್ನೇ ಸಂಹರಿಸಿದೆ. ನಾನು ಈ ಎಲ್ಲ ರಹಸ್ಯ ವಿಷಯಗಳನ್ನು ನಿನ್ನ ಬಳಿ ಏಕೆ ಹೊರಗೆಡಹುತ್ತಿರುವೆನೆಂದರೆ ನನ್ನ ಅನೇಕ ಜನ್ಮಗಳಿಂದ ನೀನು ನನ್ನ ಸೇವೆಗೈಯುತ್ತಿರುವೆ.”

ಭಗವಂತನ ಸಾನ್ನಿಧ್ಯ ಮತ್ತು ನಿರೂಪಣೆಯಿಂದ ಆನಂದತುಂದಿಲಿತನಾದ ಮುರಾರಿ ಗುಪ್ತ ಆನಂದಬಾಷ್ಪ ಸುರಿಸಿದರು. ಶ್ರೀ ಗೌರಚಂದ್ರ ಮತ್ತು ಶ್ರೀ ಮುರಾರಿ ಗುಪ್ತರಿಗೆ ಜಯ! ಜಯ! ಭಕ್ತರ ಸಂರಕ್ಷಕ ಶ್ರೀ ವರಾಹದೇವನಿಗೆ ಜಯ! ಜಯ!

ಈ ರೀತಿ ಶ್ರೀ ಚೈತನ್ಯನು ತನ್ನ ಭಕ್ತರ ಮನೆಗಳಿಗೆ ಭೇಟಿ ನೀಡಿ ತನ್ನ ಎಣೆ ಇಲ್ಲದ ಕರುಣೆಯಿಂದ ತನ್ನ ನೈಜ ಪರಮ ಪರಿಚಯವನ್ನು ಅವರಿಗೆ ಮಾಡಿಕೊಟ್ಟನು. ತಮ್ಮ ಭಗವಂತನನ್ನು ಗುರುತಿಸಿಕೊಂಡ ಭಕ್ತರು ಮತ್ತು ಸೇವಕರ ಹೃದಯಗಳು ಪರಮಾನಂದದಿಂದ ತುಂಬಿದವು. ಅವರು ನಿರ್ಭೀತರಾದರು ಮತ್ತು ನಾಸ್ತಿಕರನ್ನು ಲಕ್ಷಿಸಲಿಲ್ಲ. ಅವರು ಸಾರ್ವಜನಿಕ ಸ್ಥಳ ಸೇರಿದಂತೆ ಎಲ್ಲ ಕಡೆ ಸಂಚರಿಸಿ ಕೃಷ್ಣನಾಮವನ್ನು ಗಟ್ಟಿ ಧ್ವನಿಯಲ್ಲಿ ಹಾಡಿದರು. ಭಕ್ತರು ಹಗಲೂ ರಾತ್ರಿ ಶ್ರೀ ಕೃಷ್ಣನ ಪವಿತ್ರನಾಮವನ್ನು ಜಪಿಸುತ್ತ ಹಾಡುತ್ತ ತಮ್ಮ ಭಗವಂತನೊಂದಿಗೆ ಕಾಲ ಕಳೆದರು.

ಅಲ್ಲಿ ನಿತ್ಯಾನಂದ ಪ್ರಭು ಮಾತ್ರ ಇರಲಿಲ್ಲ. ಇದು ಶ್ರೀ ಚೈತನ್ಯರನ್ನು ದುಃಖಿತರನ್ನಾಗಿ ಮಾಡಿತ್ತು. ಶ್ರೀ ವಿಶ್ವಂಭರನು ಶ್ರೀ ನಿತ್ಯಾನಂದರ ಬಗೆಗೆ ಸದಾ ಯೋಚಿಸುತ್ತಿದ್ದ. ಅವರ ಅಗಲಿಕೆಯನ್ನು ಸಹಿಸಿಕೊಳ್ಳುವುದು ಅವನಿಗೆ ಸಾಧ್ಯವಿರಲಿಲ್ಲ. ಶ್ರೀ ನಿತ್ಯಾನಂದರು ದೇವೋತ್ತಮ ಅನಂತ ವಾಸುದೇವ ಎಂಬುವುದು ಶ್ರೀ ವಿಶ್ವಂಭರನಿಗೆ ತಿಳಿದಿತ್ತು.

ನಿತ್ಯಾನಂದ ಪ್ರಭುಗಳ ಕತೆ

ಶ್ರೀ ನಿತ್ಯಾನಂದ ಪ್ರಭುಗಳು ರಾಢ ದೇಶದ ಏಕಚಕ್ರ ಎಂಬ ಗ್ರಾಮದಲ್ಲಿ ಜನಿಸಿದರು. ಶ್ರೀ ಹಲಾಧರ, ಬಲರಾಮನಾದ ಶ್ರೀ ನಿತ್ಯಾನಂದರು ಮುರುಡೇಶ್ವರ, ಶಿವನನ್ನು ಅವನ ಲಿಂಗದ ರೂಪದಲ್ಲಿ ಪೂಜಿಸಿದರು. ಅವರ ಜನ್ಮ ಸ್ಥಳದ ಸಮೀಪದಲ್ಲಿಯೇ ಈ ಮಂದಿರವಿದೆ.

ಶ್ರೀ ನಿತ್ಯಾನಂದರ ಪೋಷಕರು ತುಂಬ ಧರ್ಮಿಷ್ಠರು. ಅವರ ತಂದೆ ಹಾಡಾಯಿ ಪಂಡಿತರು, ಜ್ಞಾನಿಯಾದ ಬ್ರಾಹ್ಮಣ. ಕಾರುಣ್ಯ ಮೂರ್ತಿಯಾಗಿದ್ದ ಅವರು ಲೌಕಿಕ ಜಗತ್ತಿನಿಂದ ದೂರವಿದ್ದರು. ಅವರ ತಾಯಿ ಶ್ರೀಮತಿ ಪದ್ಮಾವತಿ ಧರ್ಮನಿಷ್ಠೆ ಹಾಗೂ ಗುಣವಂತೆಯಾಗಿದ್ದಳು. ಅವಳು ಶ್ರೇಷ್ಠ ಭಕ್ತೆ ಮತ್ತು ಲೋಕ ಮಾತೆಯಾಗಿದ್ದಳು. ಶ್ರೀ ನಿತ್ಯಾನಂದ ರಾಯ ಈ ಕುಟುಂಬದ ಜ್ಯೇಷ್ಠ ಪುತ್ರ. ಅವನ ಸೌಂದರ್ಯದಿಂದ ಎಲ್ಲರೂ ಆಕರ್ಷಿತರಾಗಿದ್ದರು.

ಶ್ರೀ ನಿತ್ಯಾನಂದ ತನ್ನ ಬಾಲ್ಯದ ಲೀಲೆಗಳನ್ನು ಪ್ರದರ್ಶಿಸುತ್ತ ಕೆಲ ಸಮಯ ಹಾಡಾಯಿ ಅವರ ಗೃಹದಲ್ಲಿ ಇದ್ದರು.  ಅವರು ಮನೆ ತೊರೆಯಲು ನಿರ್ಧರಿಸಿದರು. ಆದರೆ, ತಾಯಿಯ ಪ್ರೇಮದ ಬಂಧನವನ್ನು ತೊರೆಯುವುದು ಮತ್ತು ಅವರು ನೋವು ಅನುಭವಿಸುವುದನ್ನು ನೋಡುವುದು ಅವರಿಗೆ ಸಾಧ್ಯವಿರಲಿಲ್ಲ. ಶ್ರೀ ನಿತ್ಯಾನಂದನನ್ನು ನೋಡದೇ ಅವನ ಮಾತಾ ಪಿತೃಗಳಿಗೆ ಒಂದು ಕ್ಷಣ ಕೂಡ ಇರಲಾಗುತ್ತಿರಲಿಲ್ಲ. ನಿತಾಯ್ ಒಂದು ಕ್ಷಣ ಅವರಿಗೆ ಅಗೋಚರವಾದರೆ ಅದು ಅವರಿಗೆ ಯುಗವೆನಿಸುತ್ತಿತ್ತು.

ಹಾಡಾಯಿ ಪಂಡಿತರು ಮಗನನ್ನು ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ. ಹೊಲದಲ್ಲಿ ಕೆಲಸ, ಪುಣ್ಯ ಕ್ಷೇತ್ರಗಳ ಯಾತ್ರೆ, ಅಥವಾ ಖರೀದಿಗೆಂದು ಮಾರುಕಟ್ಟೆಗೆ ಹೋದರೆ ನಿತ್ಯಾನಂದ ಅವರ ಜೊತೆಗಿರಲೇ ಬೇಕು. ಯಾವಾಗಲಾದರೊಮ್ಮೆ, ಅವನು ವೇಗವಾಗಿ ನಡೆಯದೆ ಹಿಂದುಳಿದರೆ, ಆತಂಕದಿಂದ ಅವನ ತಂದೆಯು ಹಿಂದೆ ತಿರುಗಿ ನೋಡಿ ಅವನು ತಮ್ಮನ್ನು ಹಿಂಬಾಲಿಸುತ್ತಿದ್ದಾನೆ ಎಂಬುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು.

ನಿತ್ಯಾನಂದನ ಪೋಷಕರು ಅವನನ್ನು ಆಲಿಂಗಿಸಿಕೊಂಡು ಲಾಲಿಸುತ್ತಿದ್ದರು. ಬೆಣ್ಣೆಯಂತೆ ಮೃದುವಾಗಿದ್ದ ಅವನ ದೇಹವು ಅವನ ಪೋಷಕರ ದೇಹದೊಂದಿಗೆ ಕರಗಿಹೋಗುತ್ತಿತ್ತು. ಹಾಡಾಯಿ ಪಂಡಿತರಿಗೆ ನಿತ್ಯಾನಂದನು ಅವರ ಜೀವಕ್ಕಿಂತಲೂ ಹೆಚ್ಚು ಪ್ರಿಯನಾಗಿದ್ದ. ದೇವೋತ್ತಮನು ಪರಮಾತ್ಮ. ಆದುದರಿಂದ ಅವನಿಗೆ ತನ್ನ ತಂದೆಯ ಎಲ್ಲ ಅಪೇಕ್ಷೆಗಳೂ ತಿಳಿದಿದ್ದವು, ಆದುದರಿಂದ ಅವನು ಅವರ ಸಂತೋಷಕ್ಕಾಗಿ ಆ ಮನೆಯಲ್ಲಿಯೇ ಇದ್ದ.

ಒಂದು ದಿನ, ದೈವ ನಿಂಮದಂತೆ, ದೈವೀ ಲಕ್ಷಣಗಳುಳ್ಳ ಸಂನ್ಯಾಸಿಯು ಶ್ರೀ ನಿತ್ಯಾನಂದರ ಮನೆಗೆ ಭೇಟಿ ನೀಡಿದ. ಅವರನ್ನು ನೋಡಿ ಆನಂದಿತರಾದ ಹಾಡಾಯಿ ಪಂಡಿತರು ಆದರಿಸಿದರು. ನಿತ್ಯಾನಂದರ ತಂದೆಯು ಕೃಷ್ಣನ ಲೀಲೆಗಳ ಬಗೆಗೆ ಮಾತನಾಡುತ್ತ ಆ ಸಂನ್ಯಾಸಿಯೊಂದಿಗೆ ಇಡೀ ರಾತ್ರಿ ಕಳೆದರು. ಮರು ದಿನ ಬೆಳಗ್ಗೆ ಹೊರಡುವ ಮುನ್ನ ಆ ಸಂನ್ಯಾಸಿ ನಿತ್ಯಾನಂದರ ತಂದೆಗೆ ಹೇಳಿದ, “ನನ್ನದೊಂದು ಕೋರಿಕೆ ಇದೆ.” ಪಂಡಿತರು ಉತ್ತರಿಸಿದರು, “ನಿಮ್ಮ ಅಪೇಕ್ಷೆ ಏನಿದ್ದರೂ ಅದು ನೆರವೇರುತ್ತದೆ.” ಸಂನ್ಯಾಸಿ ನುಡಿದ, “ನಾನು ತೀರ್ಥ ಯಾತ್ರೆಯಲ್ಲಿದ್ದೇನೆ. ಆದರೆ ನನಗೆ ಜೊತೆಯಾಗಿ ಒಳ್ಳೆಯ ಬ್ರಾಹ್ಮಣನಿಲ್ಲ. ನಿನ್ನ ಹಿರಿಯ ಮಗನನ್ನು ಸ್ವಲ್ಪ ದಿನ ನನ್ನ ಜೊತೆಯಾಗಿರಲು ಕೊಡು. ಅವನನ್ನು ನಾನು ಚೆನ್ನಾಗಿ ನೋಡಿಕೊಳ್ಳುವೆ. ಮತ್ತು ನಿನ್ನ ಮಗನೂ ಕೂಡ ನಾವು ಭೇಟಿ ನೀಡುವ ತೀರ್ಥ ಕ್ಷೇತ್ರಗಳ ಬಗೆಗೆ ಅರಿತುಕೊಳ್ಳುತ್ತಾನೆ.”

ಸಂನ್ಯಾಸಿಯ ಮಾತು ಹಾಡಾಯಿ ಪಂಡಿತರನ್ನು ವಿಚಲಿತಗೊಳಿಸಿತು. ಅವರೊಬ್ಬ ಪರಿಶುದ್ಧ ಮತ್ತು ಧರ್ಮನಿಷ್ಠ ಬ್ರಾಹ್ಮಣರಾಗಿದ್ದರು. ಚಿಂತೆಯಿಂದ ಬಳಲಿದ ಅವರು ಯೋಚಿಸಿದರು, “ಸಂನ್ಯಾಸಿಯು ನನ್ನ ಜೀವವನ್ನೇ ಕೇಳಿದ್ದಾರೆ. ನಾನು ಒಪ್ಪದಿದ್ದರೆ ನಾನು ನಾಶವಾದಂತೆ. ಈ ಹಿಂದೆ ಶ್ರೇಷ್ಠ ವ್ಯಕ್ತಿಗಳು ಋಷಿಯ ಅಪೇಕ್ಷೆ ಪೂರೈಸಲು ತಮ್ಮ ಜೀವವನ್ನೇ ಅರ್ಪಿಸಲು ಮುಂದಾಗಿದ್ದರು. ಶ್ರೀರಾಮಚಂದ್ರನು ತನ್ನ ತಂದೆ ದಶರಥನಿಗೆ ಅತ್ಯಂತ ಪ್ರಿಯನಾಗಿದ್ದನೆಂದು ಪುರಾಣಗಳಲ್ಲಿ ನಾವು ಓದಿದ್ದೇವೆ. ಒಮ್ಮೆ ಋಷಿ ವಿಶ್ವಾಮಿತ್ರನು ದಶರಥನಲ್ಲಿಗೆ ಬಂದು ಅವನ ಪುತ್ರ ರಾಮನನ್ನು ತನ್ನೊಂದಿಗೆ ಕಳುಹಿಸಲು ಕೋರಿದ. ಪುತ್ರನ ಅಗಲಿಕೆ ದಶರಥನಿಗೆ ನೋವಿನ ಸಂಗತಿಯಾಗಿತ್ತು. ಆದರೂ ಅವನು ನಿರಾಕರಿಸಲಿಲ್ಲ. ನಾನು ಈಗ ಅದೇ ಸ್ಥಿತಿಯಲ್ಲಿ ಇದ್ದೇನೆ. ಓ, ಶ್ರೀ ಕೃಷ್ಣ, ನನಗೆ ಮಾರ್ಗದರ್ಶನ ಮಾಡು ಮತ್ತು ಈ ಗೊಂದಲದಿಂದ ಪಾರು ಮಾಡು. ದೈವ ನಿಯಮದಂತೆ ನಾನು ದಶರಥನ ಮತ್ತು ನನ್ನ ಪುತ್ರ ಶ್ರೀರಾಮಚಂದ್ರನ ಸ್ಥಾನವನ್ನು ಸ್ವೀಕರಿಸಬೇಕಾಗುತ್ತದೆ. ಇಲ್ಲವಾದರೆ, ನನ್ನ ಮಗನ ಸುತ್ತ ಇವೆಲ್ಲ ಯಾಕೆ ನಡೆಯುತ್ತದೆ? ಅಲ್ಲದೆ, ನಿತಾಯ್ ಲೌಕಿಕ ವಿಮುಕ್ತ.”

ಹಾಡಾಯಿ ಪಂಡಿತರು ತಮ್ಮ ಪತ್ನಿ ಬಳಿ ಸಮಾಲೋಚಿಸಲು ಒಳಗೆ ಹೋದರು. ಹಾಡಾಯಿ  ಪಂಡಿತರಿಂದ ಎಲ್ಲವನ್ನೂ ಕೇಳಿದ ಸದ್ಗುಣೆ ಪದ್ಮಾವತಿಯು ನುಡಿದಳು, “ನನ್ನ ದೇವರೇ, ನೀವು ಏನು ನಿರ್ಧರಿಸುತ್ತೀರೋ ಅದು ನನ್ನದೂ ಕೂಡ.” ಪಂಡಿತರು ಹೊರಗೆ ಬಂದು ತನ್ನ ಮಗನನ್ನು ಸಂನ್ಯಾಸಿಗೆ ಒಪ್ಪಿಸಿದರು. ಅವರು ಆಕಾಶವೇ ಬಿದ್ದಂತೆ ತನ್ನ ತಲೆ ತಗ್ಗಿಸಿ ನಿಂತರು ಮತ್ತು ನಿತ್ಯಾನಂದನು ಸಂನ್ಯಾಸಿ ಜೊತೆ ನಡೆದ. ಈ ರೀತಿ ನಿತ್ಯಾನಂದನಿಗೆ ತನ್ನ ಮನೆ ತ್ಯಜಿಸುವುದು ಸಾಧ್ಯವಾಯಿತು.

ಮನೆಯಿಂದ ಹೊರ ನಡೆದ ಮೇಲೆ ನಿತ್ಯಾನಂದನು ಪ್ರಯಾಣಿಸಿದ. ಸ್ವತಂತ್ರನಾಗಿದ್ದ ಮತ್ತು ಅನೇಕ ತೀರ್ಥಯಾತ್ರೆ  ಸ್ಥಳಗಳಿಗೆ ಭೇಟಿ ನೀಡಿ ಆನಂದದಿಂದಿದ್ದ. ಅವನು ಗಯಾ, ಕಾಶಿ, ಪ್ರಯಾಗ, ಮಥುರಾ, ದ್ವಾರಕಾ, ಬದರೀಕಾಶ್ರಮ ಮತ್ತು ಅನೇಕ ಸ್ಥಳಗಳಿಗೆ ಭೇಟಿ ನೀಡಿದ. ಬುದ್ಧನ ಜನ್ಮ ಸ್ಥಳಕ್ಕೆ ಭೇಟಿ ನೀಡಿದ್ದ ಅವನು ವ್ಯಾಸದೇವರ ಗುಹೆಯನ್ನು ಸಂದರ್ಶಿಸಿದ. ದಕ್ಷಿಣಲ್ಲಿ ಅವನು ಶ್ರೀರಂಗನಾಥ ಮಂದಿರಕ್ಕೆ ಭೇಟಿ ನೀಡಿದ್ದ. ಇಲ್ಲಿ ಲಂಕೆಗೆ ಹೋಗಲು ಶ್ರೀರಾಮಚಂದ್ರನು ಸೇತುವೆ ನಿರ್ಮಿಸಿದ್ದ. ಅಲ್ಲಿಂದ ಅವನು ಮಲಯ ಪರ್ವತಕ್ಕೆ ಹೋದ. ಅವನು ಅರಣ್ಯದಲ್ಲಿ ನಿರ್ಭೀತನಾಗಿ, ಸ್ವತಂತ್ರವಾಗಿ ಸಂಚರಿಸಿದ. ಅವನು ಗೋಮತಿ, ಗಂಡಕಿ, ಸರಯೂ ಮತ್ತು ಕಾವೇರಿ, ಅಯೋಧ್ಯ, ದಂಡಕಾರಣ್ಯ, ತಿರುಮಲ, ಸಪ್ತ-ಗೋದಾವರಿ, ಶಿವನ ಧಾಮಗಳಿಗೂ ಯಾತ್ರೆ ಕೈಗೊಂಡಿದ್ದ. ಕನ್ಯಾಕುಮಾರಿಯಲ್ಲಿ ಅವನು ಮಂದಿರಕ್ಕೆ ಭೇಟಿ ನೀಡಿದ್ದ. ಅವನು ರೇವಾ ನದಿ, ಮಾಹಿಷ್ಮತಿ, ಮಲ್ಲತೀರ್ಥ ಮತ್ತು ಹರಿದ್ವಾರಗಳಿಗೂ ಭೇಟಿ ನೀಡಿದ್ದ.

ಅಂತಿಮವಾಗಿ ಅವನ ಯಾತ್ರೆಯು ಅವನನ್ನು ಮಥುರಾಕ್ಕೆ ಕರೆತಂದಿತು. ತನ್ನ ಹಿಂದಿನ ಆವಿರ್ಭವದಲ್ಲಿ  ಬಲರಾಮನಾಗಿ ಅವತರಿಸಿದ್ದ ಗೋಕುಲಕ್ಕೆ ಭೇಟಿ ನೀಡಿದ. ಅವನು ಪರಮಾನಂದದಿಂದ ಗರ್ಜಿಸಿದ. ಆದರೆ ಯಾರೂ ಅವನನ್ನು ಮೂಲ ಅನಂತ ಶೇಷನೆಂದು ಗುರುತಿಸಲಿಲ್ಲ. ವೃಂದಾವನದಲ್ಲಿ ಅವನು ಮಣ್ಣಿನಲ್ಲಿ ಹೊರಳಾಡಿ ಆಡುತ್ತಿರುವ ಬಾಲಕನಂತೆ ಭಾವಿಸಿಕೊಂಡ. ಆ ಭಾವನೆ ಸದಾ ಅವನಲ್ಲಿತ್ತು. ಅವನಿಗೆ ಊಟದಲ್ಲಿ ಆಸಕ್ತಿ ಇರಲಿಲ್ಲ, ವೃಂದಾವನದ ಧೂಳಿನಲ್ಲಿ ಹೊರಳಾಡುವುದು ಅವನಿಗೆ ಬೇಕಾಗಿತ್ತು. ಶ್ರೀ ನಿತ್ಯಾನಂದನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಯಾರಿಗೂ ಸಾಧ್ಯವಿರಲಿಲ್ಲ. ಅವನು ಯಾರಾದರೂ ನೀಡಿದರೆ ಸ್ವಲ್ಪ ಹಾಲು ಕುಡಿಯುತ್ತಿದ್ದ.

ಶ್ರೀ ನಿತ್ಯಾನಂದನು ಈ ರೀತಿ ವೃಂದಾವನದಲ್ಲಿ ಬದುಕಿದ್ದರೆ,  ಶ್ರೀ ಗೌರಸುಂದರನು ಅಲ್ಲಿ, ನವದ್ವೀಪದಲ್ಲಿ, ತನ್ನ ಭಕ್ತರಿಗೆ ತನ್ನ ಪರಮ ಪರಿಚಯವನ್ನು ಹೊರಗೆಡಹಿ ಪರಮಾನಂದದಿಂದ ಪವಿತ್ರ ನಾಮದ ಸಂಕೀರ್ತನೆಯಲ್ಲಿ ತೊಡಗಿದ್ದ. ಆದರೆ ನಿತ್ಯಾನಂದ ಪ್ರಭುಗಳ ಅನುಪಸ್ಥಿತಿಯಲ್ಲಿ ಅವನು ಭಾರಿ ಕೊರತೆಯನ್ನು ಅನುಭವಿಸುತ್ತಿದ್ದ. ಶ್ರೀ ನಿತ್ಯಾನಂದನು ವೃಂದಾವನದಲ್ಲಿ ಕೂತು ಶ್ರೀ ಚೈತನ್ಯರು ತಮ್ಮ ಸಂಕೀರ್ತನೆ ಲೀಲೆಯನ್ನು ಹೊರಗೆಡಹುವುದನ್ನೇ ಕಾಯುತ್ತಿದ್ದ. ಆದುದರಿಂದ ಶ್ರೀ ಚೈತನ್ಯರು ತಮ್ಮ ಸಂಕೀರ್ತನ ಆಂದೋಲನ ಆರಂಭಿಸಿದ್ದನ್ನು ಅರಿತ ಕೂಡಲೇ ನವದ್ವೀಪಕ್ಕೆ ಬಂದು ಶ್ರೀ ನಂದನ ಆಚಾರ್ಯರ ಮನೆಯಲ್ಲಿ ತಂಗಿದ.

ಚೈತನ್ಯ-ನಿತ್ಯಾನಂದರ ಭೇಟಿ

ಶ್ರೇಷ್ಠ ಭಕ್ತರಾಗಿದ್ದ ನಂದನ ಆಚಾರ್ಯರಿಗೆ ಶ್ರೀ ನಿತ್ಯಾನಂದ ಪ್ರಭು ತನ್ನ ಮನೆಯಲ್ಲಿ ತಂಗುವುದು ತುಂಬ ಸಂತೋಷ ಉಂಟುಮಾಡಿತ್ತು. ಭಗವಂತನಿಗೆ ಬೃಹತ್ತಾದ ದೇಹವಿತ್ತು ಮತ್ತು ಅದು ಸೂರ್ಯನಂತೆ ಕಾಂತಿಯುಕ್ತವಾಗಿತ್ತು ಮತ್ತು ಅವನು ಯಾತ್ರೆಯಲ್ಲಿರುವ ಸಂನ್ಯಾಸಿಯಂತೆ ಉಡುಪು ಧರಿಸಿದ್ದ.  ಅವನು ಹಗಲೂ ರಾತ್ರಿ ಶ್ರೀ ಕೃಷ್ಣನ ಪವಿತ್ರ ನಾಮವನ್ನು ಪಠಿಸುತ್ತಿದ್ದ ಮತ್ತು ಸದಾ ಸಮಸ್ಥಿತಿಯಲ್ಲಿರುತ್ತಿದ್ದ. ಶ್ರೀ ನಿತ್ಯಾನಂದನು ಯಾರಿಗೂ ಸಮಾನನಲ್ಲದ ಪರಮ ವ್ಯಕ್ತಿಯಾಗಿದ್ದನು ಮತ್ತು ಶ್ರೀ ಚೈತನ್ಯರಿಗಿಂತ ಭಿನ್ನನಲ್ಲ. ತನ್ನಲ್ಲೇ ಮಗ್ನನಾಗಿದ್ದ ಅವನು ಅನೇಕ ಬಾರಿ ಸಿಂಹದಂತೆ ಗರ್ಜಿಸುತ್ತಿದ್ದ. ಏಕೆಂದರೆ ಅವನು ಶ್ರೀ ಬಲರಾಮನ ರೂಪ. ಅವನ ಸುಂದರ, ಕಾಂತಿಯುಕ್ತ ಮುಖವು ಸಾವಿರಾರು ಹೊಳೆಯುವ ಚಂದ್ರಗಳನ್ನೆ ಸೋಲಿಸುವಂತಿತ್ತು. ಸೆರೆಹಿಡಿಯುವಂತಹ ಅವನ ನಗೆ ತುಟಿಯ ಮೇಲೆ ಆಡುತ್ತಿತ್ತು. ಅವನ ದಂತಗಳು ಎಷ್ಟು ಶ್ವೇತ ಮತ್ತು ಹೊಳೆಯುತ್ತಿದ್ದುವೆಂದರೆ ಮುತ್ತುಗಳೂ ಅದರ ಮುಂದೆ ನಾಚುತ್ತಿದ್ದವು. ಅವನ  ಕಣ್ಣುಗಳು ಉದಯಿಸುತ್ತಿದ್ದ ಸೂರ್ಯನ ನಸುಗೆಂಪನ್ನು ಅಪಹರಿಸಿದಂತಿತ್ತು. ಅವನ ನೀಳವಾದ ಬಾಹುಗಳು ಮಂಡಿಯನ್ನು ಮುಟ್ಟುತ್ತಿದ್ದವು. ಅವನದು ದಷ್ಟಪುಷ್ಟ ಎದೆ ಮತ್ತು ವಿಶಾಲವಾದ ಭುಜಗಳು. ಅವನ ಪಾದಕಮಲಗಳು ಮೃದು ಮತ್ತು ನಡಗೆ ಅತ್ಯಾಕರ್ಷಕ. ಅವನು ಎಲ್ಲರೊಂದಿಗೂ ಪ್ರೀತಿಯಿಂದ ಮಾತನಾಡುತ್ತಿದ್ದ. ಮತ್ತು ಅದು ಅವರ ಹೃದಯಗಳಲ್ಲಿನ ಭೌತಿಕ ಮೋಹದ ಸಂಕೋಲೆಗಳನ್ನು ಕತ್ತರಿಸುತ್ತಿತ್ತು.

ನಿತ್ಯಾನಂದರ ನವದ್ವೀಪ ಆಗಮನದ ಲೀಲೆಗಳನ್ನು ಕೇಳಿದವರಿಗೆ ಕೃಷ್ಣ ಪ್ರೇಮದ ಕೃಪೆ ಲಭ್ಯ. ನಿತ್ಯಾನಂದರ ನವದ್ವೀಪ ಆಗಮನವನ್ನು ಕೇಳಿ ಶ್ರೀ ಚೈತನ್ಯರು ತಮ್ಮೊಳಗೇ ಆನಂದಿಸಿದರು. ಈ ಮೊದಲು ಶ್ರೀ ನಿತ್ಯಾನಂದರ ಆಗಮನದ ಸೂಚನೆಯನ್ನು ಶ್ರೀ ವಿಶ್ವಂಭರರು ವೈಷ್ಣವರಿಗೆ ನೀಡಿದ್ದರು. ಆದರೆ ಅವರಿಗೆ ಅದನ್ನು ಗ್ರಹಿಸಲಾಗಿರಲಿಲ್ಲ. ಭಗವಂತನ ಉವಾಚ, “ಕೆಲವು ದಿನಗಳಲ್ಲಿ ನವದ್ವೀಪಕ್ಕೆ ಶ್ರೇಷ್ಠ ವ್ಯಕ್ತಿಯ ಆಗಮನವಾಗುತ್ತದೆ.”

ಶ್ರೀ ಗೌರಚಂದ್ರನು ತನ್ನ ಮಂದಿರದಲ್ಲಿ ವಿಷ್ಣುವನ್ನು ಪೂಜಿಸಿದ ಮೇಲೆ ತನ್ನ ಭಕ್ತರನ್ನು ಕಾಣಲು ಅವಸರದಿಂದ ಬಂದನು. ಅವನು ಅವರಿಗೆಂದ, “ನಿನ್ನೆ ರಾತ್ರಿ ನನಗೆ ಅದ್ಭುತವಾದ ಕನಸಾಯಿತು. ರಥವೊಂದು ಬಂದು ನನ್ನ ಬಾಗಿಲಿನ ಮುಂದೆ ನಿಂತಿತು. ರಥದ ಧ್ವಜದ ಮೇಲೆ ತಾಳೆ ಎಲೆಯನ್ನು ಚಿತ್ರಿಸಲಾಗಿತ್ತು. ಈ ತಾತ್ಕಾಲಿಕ ಲೌಕಿಕ ಅಸ್ತಿತ್ವದಿಂದ ಪರಮ ಸತ್ಯಕ್ಕೆ ಒಯ್ಯುವುದು ಈ ರಥದ ಉದ್ದೇಶ. ರಥದೊಳಗೆ ಬೃಹತ್ ವ್ಯಕ್ತಿಯನ್ನು ಕಂಡೆ. ಅವನು ತನ್ನ ಹೆಗಲಿನ ಮೇಲೆ ಹಲಾಯುಧವನ್ನು ಹೊತ್ತಿದ್ದ. ಅವನು ಅಶಾಂತನಾಗಿರುವಂತೆ ಅಡ್ಡಾಡುತ್ತಿದ್ದ. ಅವನು ತನ್ನ ಎಡಗೈಯಲ್ಲಿ ಕಮಂಡಲವನ್ನು ಇಟ್ಟುಕೊಂಡಿದ್ದ. ಅದನ್ನು ಕಬ್ಬಿನ ಜೊಂಡಿನಿಂದ ಸುತ್ತಲಾಗಿತ್ತು. ಅವನ ಮೇಲಿನ ಮತ್ತು ಕೆಳಗಿನ ವಸ್ತ್ರ ನೀಲಿ ಬಣ್ಣದಾಗಿತ್ತು. ಅವನ ಎಡಗಿವಿಯನ್ನು ಕಿವಿಯೋಲೆ ಅಲಂಕರಿಸಿತ್ತು. ಅವನ ಆವಿರ್ಭಾವ ಮತ್ತು ಲಕ್ಷಣವು ಅವನು ಬಲರಾಮನೆಂಬುದನ್ನು ಸೂಚಿಸುತ್ತಿತ್ತು. ಮಾತನಾಡುತ್ತ ಅವನು ಒಂದೇ ಪ್ರಶ್ನೆಯನ್ನು ಹಲವು ಬಾರಿ ಪುನರುಚ್ಚರಿಸುತ್ತಿದ್ದ. ಈ ಮನೆ ನಿಮಾಯ್ ಪಂಡಿತನಿಗೆ ಸೇರಿದ್ದಲ್ಲವೇ?”

ಮೃದುವಾಗಿ, ನಸು ನಗುತ್ತ ಶ್ರೀ ಚೈತನ್ಯನೆಂದ, “ನನ್ನೊಡನೆ ಬನ್ನಿ. ನಾವು ಅವನನ್ನು ಪತ್ತೆ ಹಚ್ಚೋಣ.” ಭಕ್ತರಿಗೆಲ್ಲ ಪರಮಾನಂದ. ಅವರೆಲ್ಲ “ಜಯ ಶ್ರೀ ಕೃಷ್ಣ” ಎಂದು ಹರ್ಷೋದ್ಗಾರ ಮಾಡುತ್ತ ನಿಮಾಯ್ ಪಂಡಿತನೊಂದಿಗೆ ಹೊರಟರು.

ಭಗವಂತನು ಎಲ್ಲ ಭಕ್ತರನ್ನು ನೇರವಾಗಿ ನಂದನ ಆಚಾರ್ಯರ ಮನೆಗೆ ಕರೆದೊಯ್ದ. ಮನೆಯೊಳಗೆ ಅವರು ಶ್ರೇಷ್ಠ ವ್ಯಕ್ತಿಯನ್ನು ಕಂಡರು – ಲಕ್ಷಾಂತರ ಸೂರ್ಯನಂತೆ ಕಾಂತಿಯುಕ್ತ. ಸರಿಯಾದ ಆಧ್ಯಾತ್ಮಿಕ ದೃಷ್ಟಿ ಇಲ್ಲದೆ ಶ್ರೀ ನಿತ್ಯಾನಂದನನ್ನು ನೋಡಲಾಗದು. ಅವನ ತುಟಿಯ ಮೇಲೆ ಮಂದಹಾಸ. ಅವನು ಶ್ರೀ ಚೈತನ್ಯ ಮಹಾಪ್ರಭುಗಳ ಧ್ಯಾನದಲ್ಲಿ ಆನಂದದಿಂದ ಮಗ್ನನಾಗಿದ್ದ. ಬೃಹತ್ತಾದ ಆಧ್ಯಾತ್ಮಿಕ ಶ್ರೇಷ್ಠನನ್ನು ನೋಡಿದ ವಿಶ್ವಂಭರನು ಭಕ್ತರೊಂದಿಗೆ ಗೌರವ ಸಲ್ಲಿಸಿದ. ಅವರು ಒಂದು ಮಾತೂ ಆಡದೆ ಶ್ರೀ ನಿತ್ಯಾನಂದನನ್ನು ನೋಡುತ್ತ ನಿಂತರು. ಶ್ರೀ ವಿಶ್ವಂಭರನು ಎಲ್ಲ ವೈಷ್ಣವರ ಮುಖ್ಯಸ್ಥನಾಗಿ, ನಿತ್ಯಾನಂದನ ಮುಂದೆಯೇ ನಿಂತ. ನಿತ್ಯಾನಂದನು ತತ್‌ಕ್ಷಣ ತನ್ನ ಪ್ರೀತಿಯ ಭಗವಂತನನ್ನು ಗುರುತಿಸಿದ.

(ಮುಂದುವರಿಯುವುದು)
Leave a Reply

Your email address will not be published. Required fields are marked *