Search
Friday 29 October 2021
  • :
  • :

ಸುವರ್ಣಾವತಾರ ಭಾಗ – 21

ಶ್ರೀ ಚೈತನ್ಯಪ್ರಭುಗಳ ಸಮಾಧಿಸ್ಥಿತಿ ಕುರಿತಂತೆ ವೈಷ್ಣವರು ಮಾಡಿದ ಭಿನ್ನ ಟೀಕೆಗಳನ್ನು ಅದ್ವೈತ ಆಚಾರ್ಯ ಪ್ರಭು ಆಸಕ್ತಿಯಿಂದ ಕೇಳಿದರು. ಅವರಿಗೆ ಅದು ಸಂತೋಷ ಉಂಟುಮಾಡಿತು. ಅವರು ವೈಷ್ಣವರೊಂದಿಗೆ ಆನಂದದಿಂದ ಮಾತನಾಡಿದರು. ಅವರೆಂದರು, ನನ್ನ ಪ್ರೀತಿಯ ಭಕ್ತ ಸೋದರರೇ, ನಿನ್ನೆ ರಾತ್ರಿ ನಾನು ಒಂದು ಕನಸು ಕಂಡೆ ಮತ್ತು ಅದನ್ನು ನಿಮ್ಮೊಡನೆ ಹಂಚಿಕೊಳ್ಳುವ ಆಸೆ ನನ್ನದು. ನಾನು ಹತಾಶೆ ಮತ್ತು ದುಃಖದಲ್ಲಿದ್ದೆ. ಭಗವದ್ಗೀತೆಯ ಒಂದು ಭಾಗ ನನಗೆ ಅರ್ಥವಾಗಿರಲಿಲ್ಲ. ಆದುದರಿಂದ ನಾನು ಉಪವಾಸದಲ್ಲಿದ್ದೆ. ರಾತ್ರಿಯ ಯಾವುದೋ ಒಂದು ಸಮಯದಲ್ಲಿ , ನನ್ನ ಕನಸಿನಲ್ಲಿ, ವ್ಯಕ್ತಿಯೊಬ್ಬ ಬಂದು ಹೇಳಿದ, `ಎದ್ದೇಳು ಆಚಾರ್ಯ! ತತ್‌ಕ್ಷಣ ಭೋಜನ ಸ್ವೀಕರಿಸು. ಭಗವದ್ಗೀತೆ ಪಠ್ಯದ ನಿಜವಾದ ಅರ್ಥವನ್ನು ನಾನು ನಿನಗೆ ಹೇಳುವೆ. ಆದರೆ, ಮೊದಲು ನೀನು ಎದ್ದು ಊಟ ಮಾಡಬೇಕು ಮತ್ತು ನನ್ನನ್ನು ಪೂಜಿಸಬೇಕು. ನಿನ್ನ ಎಲ್ಲ ತಪಸ್ಸು ಮತ್ತು ನೇಮ ನಿಷ್ಠೆಗಳು ಅಂತಿಮವಾಗಿ ಫಲಕೊಟ್ಟಿದೆ. ನಿನ್ನ ಎಲ್ಲ ಉಪವಾಸ, ಪೂಜೆ, `ಕೃಷ್ಣ, ಕೃಷ್ಣ’ ಎಂದು ಭಗವಂತನಿಗೆ ಇಟ್ಟ ಅಸಂಖ್ಯ ಮೊರೆ ಮತ್ತು ಭಗವಂತನ ಆಗಮನಕ್ಕಾಗಿ ನೀನು ಕೈ ಜೋಡಿಸಿ ಮಾಡಿದ ಪ್ರಣಾಮಗಳು ಫಲ ನೀಡುತ್ತಿವೆ. ಶ್ರೀ ಕೃಷ್ಣನ ಪವಿತ್ರ ನಾಮದ ಜಪವು ಪ್ರತಿಯೊಂದು ದೇಶ, ಪಟ್ಟಣ, ಗ್ರಾಮಗಳಲ್ಲಿ ಸತತವಾಗಿ ಪ್ರತಿಧ್ವನಿಸುತ್ತದೆ. ಬ್ರಹ್ಮನಿಂದಲೂ

ಸಾಧಿಸಲಾಗದ ಭಕ್ತಿ ಆನಂದವನ್ನು ಇಲ್ಲಿ, ನವದ್ವೀಪದಲ್ಲಿ, ಶ್ರೀವಾಸ ಅವರ ಗೃಹದಲ್ಲಿ. ನಿನ್ನ ಕೃಪೆಯಿಂದ ಪ್ರತಿಯೊಬ್ಬರೂ ಅನುಭವಿಸುತ್ತಾರೆ. ನಾನು ಈಗ ಹೊರಡುವೆ. ನೀನು ಮೊದಲು ಭೋಜನ ಸ್ವೀಕರಿಸಬೇಕು. ಮುಂದೆಯೂ ನಾನು ನಿನ್ನ ಮುಂದೆ ಪ್ರತ್ಯಕ್ಷನಾಗುವೆ.’

`ಕಣ್ಣು ತೆರೆದಾಗ ನಾನು ನಮ್ಮ ವಿಶ್ವಂಭರನನ್ನು ಕಂಡೆ. ಆದರೆ ಅವನು ಕ್ಷಣಮಾತ್ರದಲ್ಲಿ ಕಣ್ಮರೆಯಾದ. ನನಗೆ ಶ್ರೀ ಕೃಷ್ಣನ ನಿಗೂಢ ರೀತಿಗಳು ಅರ್ಥವಾಗುವುದಿಲ್ಲ – ಅವನ ನಡೆ ಏನು ಮತ್ತು ಅವನು ಯಾರ ಬಳಿ ರಹಸ್ಯಗಳನ್ನು ಹೊರಗೆಡವುತ್ತಾನೆ ಎಂಬುದೆಲ್ಲ ತಿಳಿಯುವುದಿಲ್ಲ. ವಿಶ್ವಂಭರನ ಅಣ್ಣ ವಿಶ್ವರೂಪ ಆಗಾಗ್ಗೆ ನಮ್ಮ ಮನೆಗೆ ಬಂದು ಭಗವದ್ಗೀತೆ ಬಗೆಗೆ ಚರ್ಚಿಸುತ್ತಿದ್ದ. ಆ ಸಮಯದಲ್ಲಿ ವಿಶ್ವಂಭರನು ಅತ್ಯಂತ ತೀಕ್ಷ್ಣ ಮತ್ತು ಮನಮೋಹಕನಾಗಿದ್ದ. ತನ್ನ ಅಣ್ಣನನ್ನು ಕರೆಯಲು ಅವನು ಬರುತ್ತಿದ್ದ. ತನ್ನ ಅಸಾಧಾರಣ ಸೌಂದರ್ಯದಿಂದ ಪುಟ್ಟ ವಿಶ್ವಂಭರನು ನನ್ನನ್ನು ಸಂಪೂರ್ಣವಾಗಿ ಸೆಳೆದುಬಿಟ್ಟಿದ್ದ. `ಭಗವಂತನಲ್ಲಿ ಪರಿಶುದ್ಧ ಭಕ್ತಿ ಬೆಳೆಸಿಕೋ’ ಎಂದು ನಾನು ಅವನಿಗೆ ಸ್ವಯಂ ಪ್ರೇರಿತನಾಗಿ ಹಾರೈಸುತ್ತಿದ್ದೆ.’

ಆಗ ಯಾರೋ ನುಡಿದರು, `ನಿಮಾಯ್ ಪಂಡಿತ ಈಗ ಶ್ರೇಷ್ಠ ಭಕ್ತನಾಗಿದ್ದಾನೆ. ಅವನು ಭಗವಂತನ ಪವಿತ್ರ ನಾಮದ ಸಂಕೀರ್ತನೆಯನ್ನು ಪ್ರಚುರಪಡಿಸಿ ನಮ್ಮ ಸಂತೋಷವನ್ನು ಹೆಚ್ಚಿಸುತ್ತಾನೆ.’ ಅಲ್ಲಿದ್ದ ಭಕ್ತರು ಅದ್ವೈತ ಆಚಾರ್ಯ ಪ್ರಭುಗಳಿಗೆ ತಮ್ಮ ಗೌರವ, ಪ್ರಣಾಮಗಳನ್ನು ಸಲ್ಲಿಸಿ ಆನಂದದಿಂದ ಶ್ರೀಹರಿಯ ನಾಮ ಪಠಿಸುತ್ತ ತೆರಳಿದರು.

ವಿಶ್ವಂಭರನು ದಾರಿಯಲ್ಲಿ ಯಾರನ್ನೇ ಭೇಟಿ ಮಾಡಿದರೂ ಅವರೊಡನೆ ಪ್ರೀತಿಯಿಂದ ಮಾತನಾಡುತ್ತಿದ್ದ. ಅವನು ಮುಂಜಾನೆ ಗಂಗಾ ಸ್ನಾನಕ್ಕೆಂದು ಹೋಗುವಾಗ, ಹಾದಿಯಲ್ಲಿ ಎಲ್ಲ ವೈಷ್ಣವ ಭಕ್ತರನ್ನು ಭೇಟಿ ಮಾಡುತ್ತಿದ್ದ. ಶ್ರೀವಾಸ ಠಾಕುರರನ್ನು ಕಂಡ ಕೂಡಲೇ ಅವರಿಗೆ ಗೌರವ ಅರ್ಪಿಸುತ್ತಿದ್ದ.

ವೈಷ್ಣವ ಸೇವೆ

ಶ್ರೀ ಗೌರಸುಂದರನು ಅತ್ಯಂತ ವಿನಯದಿಂದ ವೈಷ್ಣವರ ಪಾದಗಳಿಗೆರಗುತ್ತಿದ್ದ. ಅವನು ಅವರಿಗೆ ಸಣ್ಣಪುಟ್ಟ ಸೇವೆಯನ್ನೂ ಸಲ್ಲಿಸುತ್ತಿದ್ದ. ಒಬ್ಬರ ನೆಂದ ಬಟ್ಟೆಯನ್ನು ಹಿಂಡುವುದು, ಮತ್ತೊಬ್ಬರ ಧೋತಿ ಮಡಚುವುದು, ಯಾರಿಗಾದರೂ ಗಂಗೆಯಿಂದ ಮಣ್ಣು ತರುವುದು, ಮತ್ತೊಬ್ಬರಿಗೆ ಮನೆಯಿಂದ ಬುಟ್ಟಿ ತುಂಬಾ ಹೂವು ತಂದುಕೊಡುವುದು ಹೀಗೆ ನಾನಾ ರೀತಿಯ ಸೇವೆಗಳು. ಎಲ್ಲ ವೈಷ್ಣವರು ಮೃದುವಾಗಿಯೇ ಪ್ರತಿಭಟಿಸುತ್ತಿದ್ದರು, `ಓ, ವಿಶ್ವಂಭರ, ನೀನು ಏಕೆ ಇದನ್ನೆಲ್ಲಾ ಮಾಡುತ್ತಿರುವೆ?’ ಆದರೂ ವಿಶ್ವಂಭರನು ತನ್ನ ಈ ಸೇವೆಯನ್ನು ಮುಂದುವರಿಸಿದ್ದ. ಈ ರೀತಿ ಭಗವಂತನು ತನ್ನದೇ ಭಕ್ತರು ಮತ್ತು ಸೇವಕರಿಗೆ ಸೇವೆ ಸಲ್ಲಿಸುತ್ತಿದ್ದ. ಅವನು ದೇವೋತ್ತಮ ಪರಮ ಪುರುಷ, ಸ್ವತಃ ಕೃಷ್ಣ. ಆದರೂ ತನ್ನ ಭಕ್ತರಿಗೆ ಸೇವೆ ಸಲ್ಲಿಸಲು ತನ್ನ ಸ್ಥಾನವನ್ನು ಬಿಟ್ಟುಬಿಟ್ಟಿದ್ದ.

ಶ್ರೀ ಕೃಷ್ಣನು ಎಲ್ಲರ ಪ್ರೀತಿಯ ಸ್ನೇಹಿತ ಮತ್ತು ಅವನು ಯಾರನ್ನೂ ದ್ವೇಷಿಸುವುದಿಲ್ಲ ಎಂದು ಎಲ್ಲ ಧರ್ಮ ಗ್ರಂಥಗಳೂ ಸಾರಿವೆ. ಅವನು ಎಲ್ಲ ಜೀವಿಗಳನ್ನೂ ಸಮಾನವಾಗಿ ಪರಿಗಣಿಸುವವನು. ಆದರೆ ತನ್ನ ಪರಿಶುದ್ಧ ಮತ್ತು ನಿಷ್ಠೆಯ ಭಕ್ತರಿಗಾಗಿ ಈ ಆದೇಶವನ್ನು ಬದಿಗೊತ್ತುತ್ತಾನೆ. ದುರ್ಯೋದನನ ಇಡೀ ಕುಟುಂಬವನ್ನು ನಿರ್ನಾಮ ಮಾಡಿದ್ದೇ ಇದಕ್ಕೆ ನಿದರ್ಶನ. ದೇವೋತ್ತಮ ಶ್ರೀ ಕೃಷ್ಣನ ಸೇವೆಗೈಯುವುದು ಪರಿಶುದ್ಧ ಭಕ್ತರ ಸಹಜ ಪ್ರವೃತ್ತಿಯಾಗಿದೆ. ಮತ್ತು ತನ್ನ ಭಕ್ತರಿಗೆ ಸೇವೆ ಸಲ್ಲಿಸುವುದು ಕೃಷ್ಣನ ಸ್ವಾಭಾವಿಕ ಗುಣವಾಗಿದೆ. ಶ್ರೀ ಕೃಷ್ಣನು ತನಗೆ ಶರಣಾದ ಭಕ್ತರ ಪ್ರೀತಿಯಿಂದ ಖರೀದಿಸಲ್ಪಟ್ಟವನಾಗುತ್ತಾನೆ. ಈ ರೀತಿ ಅವರು ಅವನನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ. ದ್ವಾರಕಾದಲ್ಲಿ ಸತ್ಯಭಾಮಾ ಇದಕ್ಕೆ ಒಳ್ಳೆಯ ಉದಾಹರಣೆ.

ಭಗವಂತನ ವಿನಮ್ರತೆಯಿಂದ ಭಕ್ತರು ಪ್ರಭಾವಿತರಾದರು. `ಭಗವಂತನ ಪವಿತ್ರ ನಾಮ ಪಠಣವನ್ನು ಹಾಸ್ಯ ಮಾಡುವ ಆ ಎಲ್ಲ ಮೂರ್ಖರು ನಿನ್ನ ಕೃಪೆಯಿಂದ ಕೃಷ್ಣಪ್ರೇಮದ ಜೇನಿನ ಪ್ರವಾಹದಲ್ಲಿ ಮುಳುಗಲಿ. ಧರ್ಮ ಗ್ರಂಥಗಳ ಜ್ಞಾನದಿಂದ ನೀನು ಇಡೀ ಜಗತ್ತನ್ನೇ ಪರಾಜಯಗೊಳಿಸಿರುವೆ. ಈಗ, ಅದೇ ರೀತಿಯಲ್ಲಿ , ನಿನ್ನ ಪರಿಶುದ್ಧ ಭಕ್ತಿಯಿಂದ ಪತಿತ ನಾಸ್ತಿಕರನ್ನು ನೀನು ನಾಶಪಡಿಸಬೇಕು. ಶ್ರೀ ಕೃಷ್ಣನ ನಾಮ ಪಠಣ ಮತ್ತು ಆನಂದದಿಂದ ನರ್ತಿಸುತ್ತ ನಿನ್ನ ಕೃಪೆಯಿಂದ ಆನಂದಿತರಾಗೋಣವೇ?’

ಶ್ರೀ ವಿಶ್ವಂಭರನು ಎಲ್ಲ ವೈಷ್ಣವರ ಪಾದ ಸ್ಪರ್ಶ ಮಾಡಿದನು. ಅದಕ್ಕೆ ಪ್ರತಿಯಾಗಿ ಭಕ್ತರು ಸ್ವಯಂ ಪ್ರೇರಿತರಾಗಿ ಅವನಿಗೆ ಆಶೀರ್ವದಿಸಿದರು. ಗಂಗೆಯಲ್ಲಿ ಮಿಂದ ಅನಂತರ ಅವರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು.

ಮಾತೆಗೆ ಆತಂಕ

ನಿಮಾಯ್ ಪಂಡಿತನು ಆನಂದಿತನಾಗಿದ್ದನು. ಆದರೆ ಆ ಭಕ್ತರ ಮಾತು ಮತ್ತು ಅವರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಅವಲೋಕಿಸಿದಾಗ ಅವನೊಳಗೆ ಕೋಪ ಏರುತ್ತಿತ್ತು ಮತ್ತು ನಾಸ್ತಿಕ ಸಮಾಜವನ್ನು ದಂಡಿಸಬೇಕೆಂಬ ಅಪೇಕ್ಷೆ ಮೂಡಿತು. ಅವನು ಸಿಟ್ಟಿನಿಂದ ಗರ್ಜಿಸಿದ, `ಅವರನ್ನು ನಾನು ನಾಶಪಡಿಸಬೇಕು! ಅವರನ್ನು ನಾನು ನಾಶಪಡಿಸಬೇಕು! ನಾನು ಅವನೇ! ನಾನು ಅವನೇ!’ ಭಗವಂತನಲ್ಲಿ ಭಾವನೆಗಳ ಸಂಘರ್ಷ ಕಂಡು ಬಂದಿತು. ಅವನು  ಕೆಲವೊಮ್ಮೆ ನಗುತ್ತಿದ್ದ,  ಕೆಲವೊಮ್ಮೆ ಅಳುತ್ತಿದ್ದ, ಕೆಲವೊಮ್ಮೆ ಮೂರ್ಛಿತನಾಗಿ ಬೀಳುತ್ತಿದ್ದ ಮತ್ತು ಕೆಲವೊಮ್ಮೆ ಹೊಡೆದು ನಾಶಮಾಡಬೇಕೆಂದು ಅವನಿಗೆ ಅನಿಸುತ್ತಿತ್ತು. ನೀಚರನ್ನು ನಾಶಪಡಿಸಬೇಕೆಂಬ ತನ್ನ ಭಯಂಕರ ಮನಸ್ಥಿತಿಯನ್ನು ಭಗವಂತ ಈ ರೀತಿ ಪ್ರಕಟಪಡಿಸುತ್ತಿದ್ದ. ಶಚೀದೇವಿಗೆ ಮಗನ ವರ್ತನೆ ಅರ್ಥವಾಗುತ್ತಿರಲಿಲ್ಲ. ಎಲ್ಲಾ ಗೊಂದಲ. ಅವನಿಗೆ ಯಾವುದೋ ರೋಗ ಬಡಿದಿದೆ ಎಂದು ಅವಳು ಭಾವಿಸಿದಳು. ಅವಳಿಗೆ ತನ್ನ ಮಗನ ಮೇಲೆ ಪ್ರೀತಿ, ವಾತ್ಸಲ್ಯವಲ್ಲದೇ ಬೇರೇನೂ ಇರಲಿಲ್ಲ. ಆದುದರಿಂದ ಅವನಲ್ಲಿ ಉಂಟಾದ ಈ ವಿಚಿತ್ರ ಭಾವ ಅವಳ ಮೇಲೆ ತೀವ್ರ ಪರಿಣಾಮ ಉಂಟುಮಾಡಿತು. ಅವಳು ತಾನು ಭೇಟಿ ಮಾಡಿದವರ ಬಳಿ ಇದೇ ವಿಷಯ ಮಾತನಾಡುತ್ತಿದ್ದಳು, `ಆ ಭಗವಂತನು ಈಗಾಗಲೇ ನನ್ನ ಮಗ ಮತ್ತು ಪತಿಯನ್ನು ಒಯ್ದಿದ್ದಾನೆ. ಈಗ ನನಗೆ ಉಳಿದಿರುವುದು ಈ ಹುಡುಗ ಮಾತ್ರ. ಇವನ ರೀತಿ ನನ್ನನ್ನು ಕಂಗೆಡಿಸಿದೆ. ಅವನ ಬಗ್ಗೆ ಏನು ಯೋಚಿಸುವುದೇ ತಿಳಿಯುತ್ತಿಲ್ಲ. ಅವನು ಕೆಲವು ಬಾರಿ ನಗುತ್ತಾನೆ, ಅಳುತ್ತಾನೆ, ಮೂರ್ಛೆ ಹೋಗುತ್ತಾನೆ. ತನ್ನಷ್ಟಕ್ಕೆ ತಾನು ಮಾತನಾಡುತ್ತಾನೆ ಮತ್ತು ಅನೇಕ ಬಾರಿ, `ಆ ನಾಸ್ತಿಕರ ತಲೆ ಒಡೆಯಿರಿ’ ಎಂದು ಜೋರಾಗಿ ಕಿರುಚುತ್ತಾನೆ. ಕೆಲವು ವೇಳೆ ಅವನು ಮರ ಹತ್ತಿ, ಕಣ್ಣು ಮುಚ್ಚಿಕೊಂಡು ನೆಲದ ಮೇಲೆ ಬೀಳುತ್ತಾನೆ. ಕೆಲವು ಸಂದರ್ಭಗಳಲ್ಲಿ ಅವನು ಹಲ್ಲು ಕಡಿಯುತ್ತ ಶಬ್ದ ಮಾಡುತ್ತಾನೆ. ತನ್ನ ದೇಹದ ಮೇಲೆ ಕೈ ತಟ್ಟುತ್ತಾನೆ. ಅನಂತರ ಕೆಳಗೆ ಬೀಳುತ್ತ ಹೊರಳಾಡುತ್ತಾನೆ.’

ಸಾಮಾನ್ಯ, ಮೂಢ ಜನರು ಭಗವಂತನಲ್ಲಿ ಕೃಷ್ಣ ಪ್ರೇಮದ ಲಕ್ಷಣಗಳನ್ನು ನೋಡಲಾಗಲಿಲ್ಲ. ಅವರು ಇದಾವುದೋ ರೋಗ ಅಥವಾ ಪ್ರಾಣ ವಾಯುವಿನ ಪ್ರಭಾವ ಎಂದು ಯೋಚಿಸಿದರು. ಅವನನ್ನು ಕಟ್ಟಿಹಾಕಬೇಕೆಂದು ಕೆಲವರು ಸಲಹೆ ಮಾಡಿದರು. ವಿಶ್ವಂಭರನ ಸ್ಥಿತಿ ಬಗೆಗೆ ಶಚೀದೇವಿಯ ವಿವರಣೆಯು ಅನೇಕ ಜನರ ಗಮನ ಸೆಳೆಯಿತು. ಅವರು ಅವನನ್ನು ನೋಡಲು ಬರುತ್ತಿದ್ದರು. ಭಗವಂತನು ಜನರನ್ನು ನೋಡಿದಾಗ ಅವರನ್ನು ಆಕ್ರಮಿಸಲು ಹೋಗುತ್ತಿದ್ದ. ಈ ಮೂರ್ಖ ಜನರು ಸುಮ್ಮನೆ ನಕ್ಕು ಅವನಿಗೆ ಪ್ರಾಣ ವಾಯು ಇನ್ನಾವುದೋ ರೋಗ ಬಂದಿದೆ ಎಂದುಕೊಂಡು ಅಲ್ಲಿಂದ ಓಡಿಹೋಗುತ್ತಿದ್ದರು. ಶಚೀಮಾತೆಯು ಗಾಬರಿಗೊಂಡು ಆ ಜನರನ್ನು ಸಾಂತ್ವನಗೊಳಿಸಲು ಪ್ರಯತ್ನಿಸುತಿದ್ದಳು.’

ಇಡೀ ವಿಶ್ವದ ಪ್ರೀತಿ, ವಾತ್ಸಲ್ಯ, ಉದಾರ ಮನಸ್ಸಿನ ಮಾತೆ ಶಚೀದೇವಿಗೆ ಕಳವಳ ಉಂಟಾಯಿತು. ಗಾಬರಿಗೊಂಡು ಅವಳು ಗೋವಿಂದನಲ್ಲಿ ಆಶ್ರಯ ಪಡೆದು ಪ್ರಾರ್ಥನೆ ಸಲ್ಲಿಸಿದಳು. ಅವಳು ಶ್ರೀವಾಸ ಮತ್ತಿತರ ಭಕ್ತರಿಗೆ ಕರೆ ಕಳುಹಿಸಿ ತನ್ನ ಮನೆಗೆ ಆಹ್ವಾನ ನೀಡಿದಳು.

ಕೃಷ್ಣಪ್ರೇಮದ ಲಕ್ಷಣ

ಒಂದು ದಿನ ಶ್ರೀವಾಸ ಪಂಡಿತರು ವಿಶ್ವಂಭರನನ್ನು ಭೇಟಿ ಮಾಡಲು ಬಂದರು. ಅವರನ್ನು ನೋಡಿದ ಕೂಡಲೇ ಶಚಿಮಾತಾಳ ಪುತ್ರ ನಿಮಾಯ್ ಪಂಡಿತನು ಗೌರವಾಧಾರಗಳಿಂದ ಬರಮಾಡಿಕೊಂಡನು. ಭಗವಂತನ ಪರಿಶುದ್ಧ ಭಕ್ತನನ್ನು ನೋಡಿದ ಕೂಡಲೇ ವಿಶ್ವಂಭರನು ಭಾವೋದ್ರೇಕಗೊಂಡ, ಶ್ರೀವಾಸ ಪಂಡಿತರು ತುಳಸಿದೇವಿಗೆ ಪ್ರದಕ್ಷಿಣೆ ಮಾಡುತ್ತಿದ್ದಾಗ ಗೌರಸುಂದರನು ಪರಮಾನಂದದ ಲಕ್ಷಣಗಳನ್ನು ಪ್ರಕಟಪಡಿಸಿದ. ಅವನು ಅಳುತ್ತಿದ್ದ, ನಡುಗುತ್ತಿದ್ದ, ರೋಮಾಂಚನಗೊಳ್ಳುತ್ತಿದ್ದ ಮತ್ತು ನೆಲದ ಮೇಲೆ ಕುಸಿದು ಮೂರ್ಛೆ ಹೋದ. ಸ್ವಲ್ಪ ಸಮಯದ ಅನಂತರ ಅವನು ಬಾಹ್ಯ ಪ್ರಜ್ಞೆಗೆ ಮರಳಿದಾಗ ಒಂದೇ ಸಮನೆ ಅಳತೊಡಗಿದ ಮತ್ತು ಅನಿಯಂತ್ರಿತವಾಗಿ ನಡುಗುತ್ತಿದ್ದ. ಶ್ರೀವಾಸ ಪಂಡಿತರಿಗೆ ಭಗವಂತನ ಈ ಎಲ್ಲ ರೂಪಗಳೂ ಅದ್ಭುತವಾಗಿ ಕಂಡವು. ಅವರು ತಮ್ಮಲ್ಲೇ ಹೇಳಿಕೊಂಡರು, `ಇದು ಕೃಷ್ಣಪ್ರೇಮದಲ್ಲಿ ಅತ್ಯುನ್ನತ ಆಧ್ಯಾತ್ಮಿಕ ಆನಂದದ ಲಕ್ಷಣಗಳು. ಮೂರ್ಖರು ಇದನ್ನು ತಪ್ಪಾಗಿ ಅರ್ಥಮಾಡಿಕೊಂಡು ಇದು ಪ್ರಾಣ ವಾಯು ಅಥವಾ ಗಾಳಿಯಿಂದಾಗುವ ಅನಾರೋಗ್ಯವೆಂದು ಭಾವಿಸುತ್ತಾರೆ.’

ಮಾತನಾಡಲು ಸಾಧ್ಯವಾದಾಗ, ನಿಮಾಯ್ ಪಂಡಿತನು ಶ್ರೀವಾಸ ಪಂಡಿತರಿಗೆ ಹೇಳಿದ‌, `ಓ! ಪಂಡಿತರೇ ನೀವು! ನನ್ನ ಈ ಸ್ಥಿತಿ ಬಗೆಗೆ ನೀವು ಏನು ಹೇಳುವಿರಿ? ನಾನು ಯಾವುದೋ ವಾಯು ರೋಗದಿಂದ ಬಳಲುತ್ತಿರುವೆ, ಆದುದರಿಂದ ನನ್ನನ್ನು ಕಟ್ಟಿಹಾಕಬೇಕೆಂದು ಕೆಲವರು ಹೇಳುತ್ತಿದ್ದಾರೆ. ನಿಮ್ಮ ಅಭಿಪ್ರಾಯವೇನು?’ ನಸುನಕ್ಕ ಶ್ರೀವಾಸ ಪಂಡಿತರು ನುಡಿದರು, `ಎಂತಹ ಅದ್ಭುತವಾದ ಗಾಳಿ! ನಿನ್ನ ಅನಾರೋಗ್ಯ ಕಾರಣವಾಗಿರುವ ಇಂತಹ ಗಾಳಿ ನನ್ನನ್ನೂ ಆಕ್ರಮಿಸಲಿ! ವಾಸ್ತವವಾಗಿ ನಾನು ನಿನ್ನಲ್ಲಿ ಕೃಷ್ಣಪ್ರೇಮದ ಶ್ರೇಷ್ಠ ಆಧ್ಯಾತ್ಮಿಕ ಆನಂದವನ್ನು ಕಾಣುತ್ತಿರುವೆ. ಕೃಷ್ಣನ ಕೃಪೆ ನಿನಗೆ ಲಭಿಸಿದೆ.’

ಇದನ್ನು ಕೇಳಿ ಸಂತೋಷಭರಿತನಾದ ಭಗವಂತನು ಶ್ರೀವಾಸ ಪಂಡಿತರನ್ನು ಆಲಂಗಿಸಿಕೊಂಡ. `ಎಲ್ಲರೂ ಇದನ್ನು ಗಾಳಿಯಿಂದ ಉಂಟಾದ ಸ್ಥಿತಿ ಎಂದು ಹೇಳುತ್ತಾರೆ. ಆದರೆ ನೀವು ನನ್ನಲ್ಲಿ ಆಶಯ, ಉತ್ಸಾಹ ತುಂಬಿದಿರಿ. ನಾನು ಸದಾ ನಿಮಗೆ ಚಿರಋಣಿ. ಯಾವುದೇ ಗಾಳಿಯಿಂದಾದದ್ದು ಎಂದು ನೀವೂ ಹೇಳಿಬಿಟ್ಟಿದ್ದರೆ ನಾನು ಗಂಗಾ ನದಿಗೆ ಹಾರುತ್ತಿದ್ದೆ.’

ಶ್ರೀವಾಸ ಉತ್ತರಿಸಿದರು, “ದೇವೋತ್ತಮ ಶ್ರೀಕೃಷ್ಣನ ಬಗೆಗೆ ನಿನಗಿರುವ ಪ್ರೇಮವು ಆನಂದದ ಯಾವ ಮಟ್ಟವನ್ನು ತಲಪಿದೆಯೆಂದರೆ ಬ್ರಹ್ಮ, ಶಿವ, ಮತ್ತು ಶೌನಕರಂತಹ ಮುನಿಗಳೂ ಅದನ್ನು ಅಪೇಕ್ಷಿಸಿಯಾರು. ನಾಸ್ತಿಕರ ಮತ್ತು ಪಾಪಿಗಳ ಟೀಕೆಗಳಿಗೆ ಕಿಂಚಿತ್ತೂ ಗಮನಕೊಡದೆ ನಾವು ಎಲ್ಲರೂ ಒಟ್ಟಾಗಿ ಸೇರಿ ಕೃಷ್ಣನ ಪವಿತ್ರ ನಾಮವನ್ನು ಹಾಡೋಣ.”

ಅನಂತರ ಶ್ರೀವಾಸ ಪಂಡಿತರು ಶಚೀಮಾತಾಳಿಗೆ ಹೇಳಿದರು, `ನಿನ್ನ ದುಃಖವನ್ನು ಬದಿಗಿಡು. ನಿನ್ನ ಮಗ ಯಾವ ಗಾಳಿ ರೋಗದಿಂದ ಬಳಲುತ್ತಿಲ್ಲ. ಇವೆಲ್ಲ ಕೃಷ್ಣನನ್ನು ಕುರಿತ ಶ್ರೇಷ್ಠ’ ಪ್ರೇಮದ ಲಕ್ಷಣಗಳು. ಶ್ರೀ ಕೃಷ್ಣನ ಇಂತಹ ಅದ್ಭುತ ಮತ್ತು ಆನಂದಮಯ ಲೀಲೆಗಳನ್ನು ನೀನು ವೀಕ್ಷಿಸುತ್ತಿದ್ದರೂ, ಈ ಲೀಲೆ ಮತ್ತು ವಿಷಯಗಳು ಮೂರ್ಖರು ಮತ್ತು ಲೌಕಿಕರಾದ ಭಕ್ತರಲ್ಲದವರ ಬುದ್ಧಿ ಸಾಮರ್ಥ್ಯವನ್ನು ಮೀರಿದುದು. ಆದುದರಿಂದ ಅಂತಹವರ ಮುಂದೆ ಈ ವಿಷಯಗಳನ್ನು ಚರ್ಚಿಸಬಾರದು.’ ಈ ರೀತಿ ಶಚೀಮಾತಾಳನ್ನು ಸಾಂತ್ವನಗೊಳಿಸಿ ಶ್ರೀವಾಸ ಪಂಡಿತರು ಅನಂತರ ತಮ್ಮ ಮನೆಗೆ ಹಿಂತಿರುಗಿದರು. ಇದರಿಂದ ಸಮಾಧಾನಗೊಂಡರೂ ನಿಮಾಯ್‌ನ ಮಾತೆಗೆ ಹತಾಶೆಯಿಂದ ಪೂರ್ಣವಾಗಿ ಹೊರಬರಲಾಗಲಿಲ್ಲ. ಏಕೆಂದರೆ ತನ್ನ ಮಗ ಯಾವುದೇ ಕ್ಷಣದಲ್ಲಿ ತನ್ನನ್ನು ಬಿಟ್ಟು ಹೋಗಬಹುದೆಂಬ ಭಯ ಅವಳನ್ನು ಆವರಿಸಿತ್ತು.

ಮುಂದುವರಿದ ಸಂಕೀರ್ತನೆ

ದೇವೋತ್ತಮ ಶ್ರೀ ವಿಶ್ವಂಭರನು ಇತರ ಎಲ್ಲ ವೈಷ್ಣವರೊಂದಿಗೆ ಭಗವಂತನ ಪವಿತ್ರ ನಾಮದ ಸಂಕೀರ್ತನೆಯನ್ನು ಮುಂದುವರಿಸಿದನು. ಅವರಿಗೆಲ್ಲ ವಿಶ್ವಂಭರ ತಮ್ಮೊಂದಿಗೆ ಇರುವುದು ತುಂಬಾ ಸಂತೋಷ ಉಂಟುಮಾಡಿದ್ದರೂ ಅವರ್ಯಾರಿಗೂ ಅವನನ್ನು ಪರಮ ಪುರುಷನೆಂದು ಗುರುತಿಸುವುದು ಸಾಧ್ಯವಾಗಲಿಲ್ಲ. ಭಗವಂತನು ಪ್ರತಿದಿನ ಸಮಾಧಿಸ್ಥಿತಿ ತಲಪುವುದನ್ನು ಅವರು ನೋಡುತ್ತಿದ್ದರು. ಇದು ಅವರಿಗೆ ಅಪೂರ್ವ ದೃಶ್ಯವಾಗಿತ್ತು. ಇವನು ದೇವೋತ್ತಮ ಪರಮ ಪುರುಷನೇ ಎಂದು ಇದು ಅವರನ್ನು ಯೋಚಿಸುವಂತೆ ಮಾಡಿತ್ತು.

ಭಗವಂತನು ಪರಮಾನಂದದಲ್ಲಿದ್ದಾಗ ಅವನು ವಸಂತ ಋತುವಿನ ಎಲೆಯಂತೆ ನಡುಗುತ್ತಿದ್ದ. ಅವನು ಎಷ್ಟು ನಡುಗುತ್ತಿದ್ದ ಎಂದರೆ ಸಾವಿರಾರು ಭಕ್ತರಿಗೂ ಅವನನ್ನು ಸ್ಥಿರಗೊಳಿಸಲಾಗುತ್ತಿರಲಿಲ್ಲ. ನೂರಾರು ನದಿಗಳಂತೆ ಕಣ್ಣೀರು ಹರಿಯುತ್ತಿತ್ತು. ಪೂರ್ತಿ ಹಣ್ಣಾದ ಹಲಸಿನ ಹಣ್ಣಿನಂತೆ ಅವನ ದೇಹ ಮೈನವಿರೇಳುತ್ತಿತ್ತು, ಅವನು ಆಗಾಗ್ಗೆ ಜೋರಾಗಿ ನಗುತ್ತಾ ತನ್ನಲ್ಲೇ ತಮಾಷೆಯಾಗಿರುತ್ತಿದ್ದ. ಇತರ ವೇಳೆಗಳಲ್ಲಿ ಅವನು ತನ್ನಲ್ಲಿ ಉಂಟಾಗುತ್ತಿದ್ದ ಆನಂದವನ್ನು ತಡೆದುಕೊಳ್ಳಲಾರದೆ ನೆಲದ ಮೇಲೆ ಕುಸಿಯುತ್ತಿದ್ದ, ಸಮಾಧಿ ಸ್ಥಿತಿ ತಲುಪುತ್ತಿದ್ದ. ಬಾಹ್ಯ ಪ್ರಜ್ಞೆ ಮರಳಿದಾಗ ಅವನು ಶ್ರೀ ಕೃಷ್ಣನ ನಾಮವನ್ನು ಸತತವಾಗಿ ಜಪಿಸುತ್ತಿದ್ದ.

ಅವನು ಕೆಲವು ಸಂದರ್ಭದಲ್ಲಿ ಮಾಡುತ್ತಿದ್ದ ಜೋರಾದ ಗರ್ಜನೆಯು ಭಕ್ತರಲ್ಲದವರ ಕಿವಿಗೆ ಪ್ರಹಾರವೆನಿಸುತ್ತಿತ್ತು. ಆದರೆ ಭಗವಂತನ ಭಕ್ತರು ಅದೇ ಶಬ್ದವನ್ನು ಕೇಳುತ್ತ ಲೌಕಿಕ ಅಸ್ತಿತ್ವದ ಸಾಗರವನ್ನು ದಾಟುವ ಸಮೀಪಕ್ಕೆ ಕ್ರಮೇಣ ಬರುತ್ತಿದ್ದರು. ಕೆಲ ಸಂದರ್ಭಗಳಲ್ಲಿ ಅವನ ದೇಹವು ಅಮೃತ ಶಿಲೆಯಂತೆ ಬಿಗಿ, ಗಟ್ಟಿಯಾಗಿರುತ್ತಿದ್ದರೆ, ಉಳಿದ ವೇಳೆ ಅತ್ಯಂತ ಮೃದುವಾಗಿ ಬೆಣ್ಣೆಯಂತೆ ಇರುತ್ತಿತ್ತು. ಭಗವಂತನಲ್ಲಿ ಆಗುತ್ತಿದ್ದ ಈ ಅದ್ಭುತ ಪರಿವರ್ತನೆಯನ್ನು ಭಕ್ತರು ನೋಡುತ್ತಿದ್ದರು ಮತ್ತು ಅಂತಹ ಆನಂದಮಯ ಲಕ್ಷಣಗಳನ್ನು ಪ್ರಕಟಿಸುವುದು ಮಾನವನಿಂದ ಸಾಧ್ಯವಿಲ್ಲ ಎಂದು ಅವರಿಗೆ ಮನವರಿಕೆಯಾಯಿತು.

ಇನ್ನಿತರ ಸಮಯಗಳಲ್ಲಿ ಅವನು, `ಪುಷ್ಪಗಳಲ್ಲಿ ಅತ್ಯಂತ ಸುಂದರವಾದ ನನ್ನ ದೇವರ ಸುಂದರ ವದನವನ್ನು ನಾನು ಎಲ್ಲಿ ಕಾಣಲಿ?’ ಅನಂತರ, ಕ್ರಮೇಣ ಸ್ಥಿರವಾಗಿ ಅವನು ತನ್ನ ಹೃಯದಲ್ಲಿನ ನೋವನ್ನು ಮೃದುವಾಗಿ ಹೊರಗೆಡವುತ್ತಿದ್ದ, `ದಯೆಯಿಟ್ಟು ಕೃಪೆ ತೋರು ಮತ್ತು ನನ್ನ ಶೋಚನೀಯ ಸ್ಥಿತಿಯನ್ನು ಕೇಳು. ನನ್ನ ದುಃಖಕ್ಕೆ ಕೊನೆಯೇ ಇಲ್ಲವಾಗಿದೆ. ನನ್ನ ಜೀವ, ನನ್ನ ಪ್ರೀತಿಯ ಕೃಷ್ಣನನ್ನು ನಾನು ಕಂಡಿದ್ದರೂ ಈಗ ನಾನು ಅವನನ್ನು ಕಳೆದುಕೊಂಡಿದ್ದೇನೆ.’

ಭಕ್ತರಿಗೆ ಈ ಮಾತುಗಳನ್ನು ಕೇಳಲು ಆನಂದವಾಗುತ್ತಿತ್ತು. ಇದು ಅವನ ನಿಗೂಢ ವರ್ತನೆಯನ್ನು ವಿವರಿಸಿತಲ್ಲದೆ ಅವನಲ್ಲಿ ಅವರ ನಂಬಿಕೆಯನ್ನೂ ಹೆಚ್ಚಿಸಿತ್ತು. ಭಗವಂತನ ಸುತ್ತ ಕುಳಿತು ಭಕ್ತರು ಅವನ ನುಡಿಗಳನ್ನು ಕೇಳುತ್ತಿದ್ದರು, `ಗಯಾದಿಂದ ವಾಪಸಾಗುವಾಗ, ನಾನು ಕಾನಾಯ್ ನಾಟಶಾಲಾ ಎಂಬ ಗ್ರಾಮಕ್ಕೆ ಬಂದೆ. ಅಲ್ಲಿ ನಾನು ಅಪೂರ್ವ ಸುಂದರ ಬಾಲಕನನ್ನು ಕಂಡೆ. ಅವನು ಉಜ್ವಲ ಶ್ಯಾಮಲ ವರ್ಣದಿಂದ ಥಳಥಳಿಸುತ್ತಿದ್ದ. ಅವನ ಗುಂಗುರು ಕೂದಲಿಗೆ ವನ ಪುಷ್ಪಗಳ ಅಲಂಕಾರ. ಅವನು ಸುಂದರವಾದ ಕಿರೀಟ ಧರಿಸಿದ್ದ ಮತ್ತು ಅದಕ್ಕೆ ನವಿಲುಗರಿಯನ್ನು ಸಿಕ್ಕಿಸಲಾಗಿತ್ತು. ಅವನನ್ನು ಅಲಂಕರಿಸಿದ್ದ ಎಲ್ಲ ವಜ್ರ ವೈಡೂರ್ಯಗಳು ಸೂರ್ಯ ಕಿರಣದಂತೆ ಪ್ರಜ್ವಲಿಸುತ್ತಿತ್ತು. ಎಲ್ಲರ ಹೃದಯವನ್ನು ಸೆಳೆಯುತ್ತಿದ್ದ, ಅವನು ಕೈಯಲ್ಲಿ ಹಿಡಿದಿದ್ದ , ಸೂಕ್ಷ್ಮವಾಗಿ ಅಲಂಕರಿಸಿದ್ದ ಕೊಳಲನ್ನು ವರ್ಣಿಸುವುದು ನನ್ನಿಂದ ಸಾಧ್ಯವಿಲ್ಲ. ಅವನ ಚರ್ಮವನ್ನು ಸ್ಪರ್ಶಿಸುತ್ತಿದ್ದ ಗೆಜ್ಜೆಗಳು ಅವನ ಕಮಲ ಚರಣವನ್ನು ಹೆಚ್ಚು ಸುಂದರಗೊಳಿಸಿತ್ತು. ಅವನ ಬಲವಾದ ತೋಳುಗಳು ನೀಲಿ ಕಂಬಗಳಿಗಿಂತ ಹೆಚ್ಚು ಅಗಾಧವಾಗಿತ್ತು ಮತ್ತು ಹೊಳೆಯುವ ಆಭರಣಗಳಿಂದ ಅಲಂಕೃತವಾಗಿತ್ತು. ಅವನ ಕೊರಳಿನಲ್ಲಿ ಸುಪ್ರಸಿದ್ಧ ಕೌಸ್ತುಭ ಹಾರ ವಿಜೃಂಭಿಸಿತ್ತು. ಅವನ ಎದೆಯ ಮೇಲೆ ಶ್ರೀವತ್ಸ ಚಿಹ್ನೆ. ಅವನ ಅತಿ ಸುಂದರವಾದ ಸ್ವರ್ಣ ವರ್ಣದ, ಹಳದಿ ರೇಷ್ಮೆ ದೋತಿ, ಮಕರ ಕುಂಡಲಗಳು ಮತ್ತು ಅವನ ಕಮಲ ನಯನಗಳನ್ನು ನಾನು ಹೇಗೆ ವರ್ಣಿಸಲಿ? ಸಿಹಿಯಾದ ನಗೆ ಬೀರುತ್ತ ಅವನು ನನ್ನ ಬಳಿಗೆ ಬಂದ ಮತ್ತು ಆಲಂಗಿಸಿಕೊಂಡ. ಅನಂತರ, ಅವನು ದಿಢೀರನೆ ಯಾವುದಕ್ಕೋ ಏನೋ ಹೆದರಿ ಓಡಿಹೋದ.’

ಭಕ್ತಿ ಭಾವನೆಯ ಲೇಪನದಿಂದ ಕೂಡಿದ ವಿಶ್ವಂಭರನ ನುಡಿಗಳು ಭಕ್ತರ ಹೃದಯವನ್ನು ತುಂಬಿದವು. ಅವರೆಂದರು, `ನಿನ್ನ ಸಹವಾಸ ಪಡೆದ ನಾವು ಅದೃಷ್ಟವಂತರು, ಧನ್ಯರು. ನೀನು ಇಲ್ಲಿರುವಾಗ ಸಂಪದ್ಭರಿತ ವೈಕುಂಠ ಧಾಮದ ಬಗೆಗೆ ಯಾರಿಗೆ ಆಕರ್ಷಣೆ ಇರುತ್ತದೆ? ಒಂದು ಕ್ಷಣ ನಿನ್ನೊಂದಿಗೆ ಇದ್ದರೆ ಸಾಕು ಭಕ್ತಿಯ ಅಮೃತದ ಸವಿ ಅನುಭವಿಸಿದಂತಾಗುತ್ತದೆ. ನಾವು ನಿನ್ನನ್ನು ಅನುಸರಿಸುವವರು, ನಿನ್ನ ರಕ್ಷಣೆಯಲ್ಲಿ ಇರುವವರು. ಆದುದರಿಂದ ದೇವೋತ್ತಮ ಶ್ರೀ ಕೃಷ್ಣನ ವೈಭವಗಳನ್ನು ಜಪಿಸಲು ನಮ್ಮ ನೇತೃತ್ವ ವಹಿಸಿಕೋ. ನಾಸ್ತಿಕರ ಕಠೋರ ಶಬ್ದಗಳಿಂದ ನಾವು ಬೆಂದುಹೋಗಿದ್ದೇವೆ, ನಿನ್ನ ಕೃಷ್ಣ ಪ್ರೇಮದ ಆನಂದ ಭಾಷ್ಪ ನಮ್ಮನ್ನು ಸದಾ ತಣ್ಣಗಾಗಿರಿಸಲಿ.’

ವೈಷ್ಣವರ ಮಾತುಗಳು ವಿಶ್ವಂಭರನಿಗೆ ಮುದ ನೀಡಿತ್ತು. ಅವನು ಕೃಷ್ಣ ಪ್ರೇಮದಲ್ಲಿ ಮಗ್ನನಾಗಿ ಮನೆಗೆ ವಾಪಸಾದ ಮುದಿ ಸಿಂಹದಂತೆ.

ವಿಶ್ವಂಭರನ ಆನಂದಮಯ ಭಕ್ತದಾಯಕ ಸಮಾಧಿ ಸ್ಥಿತಿಯನ್ನು ಕಂಡು ಶಚೀಮಾತಾ ಭಯ ಭಕ್ತಿಭಾವ ಹೊಂದಿದಳು. ಅವಳಿಗೆ ಈಗ ನಿಮಾಯ್ ತನ್ನ ಪುಟ್ಟ ಮಗನಂತೆ ತೋರಲಿಲ್ಲ. `ಇವನು ಸಾಮಾನ್ಯನಲ್ಲ. ಸಾಮಾನ್ಯ ಮನುಷ್ಯರಿಗೆ ಈ ರೀತಿ ಭೋರ್ಗರೆವ ಜಲಪಾತದಂತೆ ಕಣ್ಣೀರನ್ನು ಹರಿಸುವುದು ಸಾಧ್ಯವೇ? ಇಲ್ಲಿಗೆ ಯಾವ ಅಸಾಧಾರಣ ವ್ಯಕ್ತಿ ಬಂದಿದೆ ಎಂಬುವುದು ನನಗೆ ತಿಳಿಯದು.’ ಈ ರೀತಿ ಅವಳು ಯೋಚಿಸುತ್ತಿದ್ದಳು. ಆದುದರಿಂದ ಅವಳು ನಿಮಾಯ್ ಮುಂದೆ ಬರಲು ಹೆದರುತ್ತಿದ್ದಳು.

ವಿಶ್ವಂಭರನು ಹಗಲು ರಾತ್ರಿ ಭಗವಂತನ ಪವಿತ್ರ ನಾಮ ಪಠಣದಲ್ಲಿ ನಿರತನಾಗಿರುತ್ತಿದ್ದ. ಅವನು ಪವಿತ್ರ ನಾಮದ ಪ್ರಚುರ ಕಾರ್ಯದಲ್ಲಿ ತೊಡಗಿದ್ದ ಮತ್ತು ಅವನನ್ನು ನೋಡಿ ಭಕ್ತರ ಬೇಗುದಿ ದೂರವಾದವು. ಶಚೀಮಾತೆಯ ಪ್ರೀತಿಯ ಪುತ್ರ ಗೌರಸುಂದರನು ಭಗವಂತನ ನಾಮವನ್ನು ಗಟ್ಟಿಯಾಗಿ, ಸಿಂಹ ಗರ್ಜನೆಯಂತೆ ಪಠಿಸುತ್ತಿದ್ದ. ನಾಸ್ತಿಕರನ್ನು ಅವರ ಜಡತೆಯಿಂದ ಎಬ್ಬಿಸುತ್ತಿದ್ದ ಕೀರ್ತನೆಯು ಭಕ್ತರಲ್ಲದವರ ಮನ ಕದಡುತ್ತಿತ್ತು.

ನಾಸ್ತಿಕರಿಗೆ ಆತಂಕ

ಹೀಗೆ ನಾಸ್ತಿಕರು ಕೆರಳಿದರು ಮತ್ತು ಭಕ್ತರತ್ತ ಅವಾಚ್ಯ ಶಬ್ದಗಳನ್ನು ತೂರಿದರು. ಒಬ್ಬರೆಂದರು, `ರಾತ್ರಿ ವೇಳೆ ನನಗೆ ಮಲಗಲಾಗುತ್ತಿಲ್ಲ.’ ಮತ್ತೊಬ್ಬರೆಂದರು, `ಅವರ ಎಲ್ಲ ಕಿರುಚಾಟವು ಭಗವಂತನನ್ನು ಕುಪಿತಗೊಳಿಸುತ್ತದೆ ಮತ್ತು ಅದು ಅವರ ಸರ್ವನಾಶಕ್ಕೆ ಕಾರಣವಾಗುತ್ತದೆ.’ ಇನ್ನೊಬ್ಬರ ನುಡಿ, `ಅವರು ತತ್ತ್ವ ಮತ್ತು ಊಹಾತ್ಮಕ ಜ್ಞಾನವನ್ನು ಅಲಕ್ಷಿಸಿದ್ದಾರೆ. ಆದುದ‌ರಿಂದ ಅವರು ಅಹಂಕಾರದಿಂದ ವರ್ತಿಸುತ್ತಾರೆ.’ ಇನ್ನೂ ಒಬ್ಬರ ನುಡಿ, `ಅವರೇನು ಹಾಡುತ್ತಿದ್ದಾರೆ ಎಂದು ಯಾರಿಗೆ ಗೊತ್ತು? ಈ ಎಲ್ಲ ಕಿಡಿಗೇಡಿತನದ ಹಿಂದೆ ಆ ಬ್ರಾಹ್ಮಣ, ಶ್ರೀವಾಸ ಇದ್ದಾನೆ. ಅವನು ಮತ್ತು ಅವನ ಮೂವರು ಸಹೋದರರು ಜೊತೆಗೂಡಿ, ತಮ್ಮ ಹೊಟ್ಟೆ ತುಂಬಿಸಿಕೊಳ್ಳಲೆಂದು, ಹುಚ್ಚರಂತೆ `ಕೃಷ್ಣ, ಕೃಷ್ಣ’ ಎಂದು ಕಿರುಚುತ್ತಾರೆ. ಈ ಶ್ರೀವಾಸನ ಕಾರಣ ಇಡೀ ದೇಶ ನಾಶವಾಗುತ್ತದೆ. ನದಿಯಾದಲ್ಲಿ ಯಾರು ಕೀರ್ತನೆ ಹಾಡುವರೋ ಅವರನ್ನು ಬಂಧಿಸಲು ಸರಕಾರಿ ಸಿಬ್ಬಂದಿ ಇರುವ ಎರಡು ದೋಣಿಗಳನ್ನು ಕಳುಹಿಸುತ್ತಾರೆ ಎಂದು ರಾಜನ ಆಸ್ಥಾನ ವರದಿಯನ್ನು ನಾನು ಕೇಳಿದೆ. ಇದು ರಾಜನ ಆದೇಶ.’

`ಶ್ರೀವಾಸ ಪಂಡಿತ ಮತ್ತು ಅವನ ಅನುಯಾಯಿಗಳು ಓಡಿಹೋಗಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಇದೆಲ್ಲದರ ಪರಿಣಾಮವನ್ನು ನಾವು ಅನುಭವಿಸಬೇಕು. ಶ್ರೀವಾಸನ ಮನೆಯನ್ನು ನದಿಗೆ ಎಸೆಯಿರಿ ಎಂದು ನಾನು ಈ ಮೊದಲೇ ಎಚ್ಚರಿಸಿದ್ದೆ. ಆದರೆ ನೀವು ಕೇಳಲಿಲ್ಲ. ನಾನು ತಮಾಷೆಮಾಡುತ್ತಿರುವೆನೆಂದು ನೀವು ಭಾವಿಸಿದಿರಿ. ಈಗ ತಡವಾಯಿತು. ನಮ್ಮ ಮುಂದೆ ಅಪಾಯ ಬಂದಿದೆ.’

ಮತ್ತೊಬ್ಬರೆಂದರು, `ನಮಗೇನು ಚಿಂತೆ? ಸರಕಾರದ ಜನರು ಬಂದಾಗ ನಾವು ಶ್ರೀವಾಸನನ್ನು ಹಿಡಿದು ಅವರಿಗೆ ಒಪ್ಪಿಸೋಣ.’ ನವದ್ವೀಪದ ನಾಸ್ತಿಕ ಜನತೆ ಈ ರೀತಿ ವೈಷ್ಣವರ ಬಗೆಗೆ ಚರ್ಚಿಸುತ್ತಿದ್ದಾಗ ಸರಕಾರದ ಸಿಬ್ಬಂದಿ ಇದ್ದ ಎರಡು ದೋಣಿ ನವದ್ವೀಪದಲ್ಲಿ ಬಂದಿಳಿಯಿತು.

ಈ ವಾರ್ತೆ ಕೇಳಿದ ವೈಷ್ಣವರು ದೇವೋತ್ತಮನನ್ನು ಸ್ಮರಿಸುತ್ತ ಅವನ ಆಶ್ರಯ ಪಡೆದರು. ಹೀಗೆ ಅವರ ಎಲ್ಲ ಭಯ ನಿವಾರಣೆಯಾಯಿತು. ಅವರೆಂದರು, `ದೇವೋತ್ತಮ ಶ್ರೀಕೃಷ್ಣ‌ಚಂದ್ರನ ಇಚ್ಛೆಯಂತೆ ಎಲ್ಲವು ನಡೆಯುತ್ತದೆ. ಅದು ಒಳ್ಳೆಯದಕ್ಕಾಗಿಯೇ. ಅವನಿಲ್ಲಿರುವಾಗ, ನಮಗೆ ಆ ಅನಿಷ್ಟರಿಂದ ಭಯವೆಲ್ಲಿಯದು?’ ಶ್ರೀವಾಸ ಪಂಡಿತರು ಮೃದು ಹೃದಯಿಗಳು ಮತ್ತು ಅದ್ಭುತ ಆತ್ಮ. ಈ ಸುದ್ದಿ ಅವರನ್ನು ಸ್ವಲ್ಪ ವಿಚಲಿತಗೊಳಿಸಿತು. ಅವರು ವೈಷ್ಣವರ ಹಿತದ ಬಗೆಗೆ ವ್ಯಾಕುಲಗೊಂಡರು. ಮುಸ್ಲಿಮರ ಆಡಳಿತದಲ್ಲಿ ಏನು ಬೇಕಾದರೂ ಆಗಬಹುದೆಂಬ ಭಯವಿತ್ತು.

ದೇವೋತ್ತಮ, ಪರಮಾತ್ಮನಾದ ಶ್ರೀ ಗೌರಸುಂದರನು ಪ್ರತಿಯೊಬ್ಬರ ಹೃದಯದಲ್ಲಿನ ಪ್ರತಿಯೊಂದನ್ನೂ ಬಲ್ಲವನಾಗಿದ್ದ. ಆದರೆ ದೇವೋತ್ತಮನು ಬಂದು ತಮ್ಮೊಡನಿದ್ದಾನೆ ಎಂಬುದು ಭಕ್ತರಿಗೆ ಗೊತ್ತಿರಲಿಲ್ಲ. ಈಗ ಭಗವಂತನು ತಾನೇ ಪ್ರಕಟಗೊಳ್ಳಲು ನಿರ್ಧರಿಸಿದ. ಅವನನ್ನು ನೋಡಿ ಭಕ್ತರು ಆನಂದಿಸಿದರೆ ನಾಸ್ತಿಕರಿಗೆ ಭಯದ ಭಾವನೆ ಉಂಟಾಯಿತು. ಅವರೆಂದರು, `ಅವನು ಬೆದರಿಕೆಯ ಬಗೆಗೆ ಎಲ್ಲ ಕೇಳಿರಬೇಕು. ಆದರೂ ಅವನು ಕಿಂಚಿತ್ತೂ ಹೆದರಿದಂತಿಲ್ಲ. ತಾನೊಬ್ಬ ರಾಜಕುಮಾರನಂತೆ ಅಡ್ಡಾಡುತ್ತಾನೆ.’ ಮತ್ತೊಬ್ಬರೆಂದರು, `ಗೆಳೆಯರೇ, ಕೇಳಿ. ನನಗೆ ಇದೆಲ್ಲ ಅರ್ಥವಾಗುತ್ತದೆ. ಕಾದು ನೋಡಿ. ನೀವು ಈಗ ನೋಡುತ್ತಿರುವುದು ಪರಾರಿಯಾಗುವ ತಂತ್ರವಷ್ಟೆ.’

ಪ್ರಕಟಗೊಂಡ ಭಗವಂತ

ನಿರ್ಭಯದಿಂದ ನಿಮಾಯ್ ಪಂಡಿತನು ಎಲ್ಲ ದಿಕ್ಕಿನತ್ತಲೂ ದೃಷ್ಟಿ ಹರಿಸಿದ. ವೇಗವಾಗಿ ಹರಿಯುವ ಗಂಗೆ ಮತ್ತು ಅವಳ ತಟ ಪ್ರದೇಶಗಳು. ದಡದಲ್ಲಿ ಮೇಯುತ್ತಿದ್ದ ಹಸುಗಳು. ಅವುಗಳಲ್ಲಿ ಕೆಲವು ನೀರು ಕುಡಿಯಲು ಗಂಗೆಯತ್ತ ಹೋದರೆ, ಕಿರಿಯವು ಬಾಲವನ್ನು ಮೇಲಕ್ಕೆ ಕುಣಿಸುತ್ತ ಹಾರುತ್ತಿದ್ದವು. ಕೆಲವು ನೆಲದ ಮೇಲೆ ದೇಹ ಚಾಚಿ ಮೆಲುಕು ಹಾಕುತ್ತಿದ್ದವು. ಈ ದೃಶ್ಯ ವಿಶ್ವಂಭರನ್ನು ಅಶಾಂತಗೊಳಿಸಿತು. ಅವನು ತನ್ನನ್ನು ತಾನು ಮರೆತು ಜೋರಾಗಿ ಶಬ್ದ ಮಾಡತೊಡಗಿದ. ಅವನು, `ನಾನು ಅವನೇ, ನಾನು ಅವನೇ’ ಎಂದು ಪದೇ ಪದೆ ಹೇಳಲಾರಂಭಿಸಿದ. ಈ ಸ್ಥಿತಿಯಲ್ಲಿ, ತಾನೇ ಪರತ್ಪರನಾಗಿ ವಿಶ್ವಂಭರನು ಶ್ರೀವಾಸರ ಮನೆಗೆ ಓಡಿದನು ಮತ್ತು `ನೀವು ಈಗ ಏನು ಮಾಡುತ್ತಿರುವಿರಿ, ಶ್ರೀವಾಸ?’ ಎಂದು ಗಟ್ಟಿಯಾಗಿ ಕಿರುಚಿದ.

ಆಗ ಶ್ರೀವಾಸರು ಮುಚ್ಚಿದ ಬಾಗಿಲಿನ ಒಳಗೆ ಶ್ರೀ ನರಸಿಂಹನ ಪೂಜೆಯಲ್ಲಿ ನಿರತರಾಗಿದ್ದರು. ವಿಶ್ವಂಭರನು ಬಂದು ಒಂದೇ ಸಮನೆ ಬಾಗಿಲನ್ನು ಬಡಿದನು. ಅವನು ಕಿರುಚಿದ, `ನೀವು ಯಾರ ಪೂಜೆ ಮಾಡುತ್ತಿರುವಿರಿ? ಯಾರನ್ನು ಧ್ಯಾನಿಸುತ್ತಿದ್ದೀರಾ? ನೀವು ಯಾರನ್ನು ಪೂಜಿಸುತ್ತಿರುವಿರೋ ಅವನು ಇಲ್ಲಿದ್ದಾನೆ!’ ಬಾಗಿಲು ತೆರೆದ ಶ್ರೀವಾಸರು ನಡುಗುತ್ತ ಭಯ ಭಕ್ತಿಯಿಂದ ಕೆಳಗೆ ಕುಳಿತರು. ಭಗವಂತನು ಶ್ರೀವಾಸರಿಗೆ ಹೇಳಿದ, `ಓ, ಶ್ರೀವಾಸ, ನಾನು ಯಾರೆಂದು ಇಷ್ಟು ದಿನಗಳೂ ನಿಮಗೆ ತಿಳಿದಿರಲಿಲ್ಲ. ನಿಮ್ಮ ಆಜ್ಞೆ, ಸನ್ನೆಯಂತೆ ನಾನು ನನ್ನ ಆಧ್ಯಾತ್ಮಿಕ ಧಾಮ ವೈಕುಂಠವನ್ನು ಬಿಟ್ಟು ಈ ಐಹಿಕ ಜಗತ್ತಿನಲ್ಲಿ ಬಂದಿಳಿದಿರುವೆ. – ಏಕೆಂದರೆ ನೀವು ಗಟ್ಟಿ ದ್ವನಿಯಲ್ಲಿ ಮಾಡುತ್ತಿರುವ ಪವಿತ್ರ ನಾಮದ ಪಠಣ ಮತ್ತು ಅದ್ವೈತ ಆಚಾರ್ಯ ಪ್ರಭುಗಳ ಕರೆ.

ಶ್ರೀವಾಸರ ಕಣ್ಣಿನಲ್ಲಿ ಧಾರೆ. ಭಗವಂತನಿಗಾಗಿ ಅವರ ಹೃದಯದಲ್ಲಿ ಪ್ರೇಮ ತುಂಬಿತ್ತು. ಭಗವಂತನ ಆಶ್ವಾಸನೆಯ ಮಾತುಗಳು ಅವರೆಲ್ಲ ಭಯವನ್ನು ನಾಶಪಡಿಸಿತು. ಶ್ರೀವಾಸರ ದೇಹದಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಅವರು ಎದ್ದು, ಕೈಮುಗಿದು ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿದರು. ಶ್ರೀವಾಸ ಪಂಡಿತರು ಶ್ರೇಷ್ಠ ಮತ್ತು ಪರಿಶುದ್ಧ ಭಕ್ತರು ಹಾಗೂ ಅಗಾಧ ಪಂಡಿತರು. ಭಗವಂತನ ಆದೇಶ ಪಡೆದು ಪ್ರಾರ್ಥನೆ ಸಲ್ಲಿಸತೊಡಗಿದರು.

ಶ್ರೀವಾಸ ಪಂಡಿತರು ಬ್ರಹ್ಮನಂತೆ ಭಗವಂತನ ಪಾದ ಕಮಲಗಳಿಗೆ ಪ್ರಾರ್ಥನೆ ಸಲ್ಲಿಸಿದರು. ಅವರ ಬಾಯಿಂದ ಅಲೌಕಿಕ ಶ್ಲಾಘನೆಯ ಪದಗಳು ಅವ್ಯಾಹತವಾಗಿ ಹರಿಯತೊಡಗಿತು, `ನೀನು ದೇವೋತ್ತಮನಾದ ವಿಷ್ಣು. ನೀನು ಶ್ರೀ ಕೃಷ್ಣ. ನೀನು ಎಲ್ಲ ಯಜ್ಞಗಳ ಒಡೆಯ. ಅತ್ಯಂತ ಪವಿತ್ರ ನದಿ ಗಂಗೆಯು ನಿನ್ನ ಚರಣ ಕಮಲದಿಂದ ಹರಿದು ಬಂದವಳು. ನೀನು ದಶರಥ ಚಕ್ರವರ್ತಿಯ ಪ್ರೀತಿಯ ಪುತ್ರ ಶ್ರೀರಾಮಚಂದ್ರ ಮತ್ತು ನೀನು ಶ್ರೀ ನೃಸಿಂಹ ದೇವ. ಬ್ರಹ್ಮ ಮತ್ತು ಶಿವ ನಿನ್ನ ಚರಣಕಮಲದಲ್ಲಿ ಜೇನು ಶೋಧಿಸುವ ಜೇನು ಹುಳಗಳು. ನೀನು ವೇದಗಳನ್ನು ಬಲ್ಲವ ಮತ್ತು ರಚಿಸಿದವ. ಮತ್ತು ನೀನು ಪರತ್ಪರ ಶ್ರೀ ನಾರಾಯಣ.’

ಭಗವಂತನ ಅದ್ಭುತ ರೂಪವನ್ನು ಕಂಡ ಶ್ರೀವಾಸ ಪಂಡಿತರಿಗೆ ತಮ್ಮನ್ನು ನಿಯಂತ್ರಿಸಿಕೊಳ್ಳಲಾಗಲಿಲ್ಲ, ಅವರು ಪರಮಾನಂದದಿಂದ ಸಮಾಧಿ ಸ್ಥಿತಿಗೊಳಗಾದರು. ಅವರ ದೇಹದಲ್ಲಿ ಆನಂದದ ವಿದ್ಯುತ್ ಹರಿಯಿತು ಮತ್ತು ಅವರು ಆನಂದ ಸಾಗರದಲ್ಲಿ ವಿಲೀನರಾದರು. ತೋಳುಗಳನ್ನು ಮೇಲಕ್ಕೆತ್ತಿ ಅವರು ಅತ್ತರು ಮತ್ತು ದೀರ್ಘವಾಗಿ ಉಸಿರಾಡಿದರು. ಅನಂತರ ನೆಲದ ಮೇಲೆ ಹೊರಳಾಡಿದರು.

ಭಗವಂತನು ನಗುತ್ತಾ ಶ್ರೀವಾಸ‌ರ ಪೂಜೆಯನ್ನು ಸಂತೃಪ್ತಿಯಿಂದ ಸ್ವೀಕರಿಸಿದ. `ಕುಟುಂಬದ ಎಲ್ಲ ಸದಸ್ಯರನ್ನು ಕರೆದುಕೊಂಡು ಬಾ. ಅವರೆಲ್ಲ ನನ್ನ ಅಲೌಕಿಕ ರೂಪವನ್ನು ನೋಡಲಿ. ನಿನ್ನ ಪತ್ನಿಯೊಂದಿಗೆ ನನ್ನ ಪಾದ ಪೂಜೆ ಮಾಡು ಮತ್ತು ನಿನ್ನ ಹೃದಯ ಅಪೇಕ್ಷಿಸುವ ಯಾವ ವರವನ್ನಾದರೂ ಕೇಳು’, ಎಂದು ವೈಕುಂಠಾಧಿಪತಿ ಹೇಳಿದ.

ಭಗವಂತನ ಆದೇಶದಂತೆ ಶ್ರೀವಾಸರು ಮನೆ ಒಳಗೆ ಹೋಗಿ ತಮ್ಮ ಎಲ್ಲ ಬಂಧು ಬಳಗ ಮತ್ತು ಪತ್ನಿಯೊಂದಿಗೆ ಭಗವಂತನಿದ್ದ ಸ್ಥಳಕ್ಕೆ ಬಂದರು. ಆನಂದ ಭಾಷ್ಪ ಹರಿಸುತ್ತಿದ್ದ ಶ್ರೀವಾಸರು ಶ್ರೀ ವಿಷ್ಣುವಿನ ಪೂಜೆಗೆಂದು ಸಿದ್ಧವಾಗಿಟ್ಟಿದ್ದ ಎಲ್ಲ ಪುಷ್ಪಗಳನ್ನೂ ಶ್ರೀ ಚೈತನ್ಯರ ಚರಣಕಮಲಗಳಿಗೆ ಅರ್ಪಿಸಿದರು. ಸುವಾಸಿತ ಪುಷ್ಪ, ಗಂಧದ ಧೂಪ ಮತ್ತು ದೀಪಗಳೊಂದಿಗೆ ಶ್ರೀವಾಸರು ತಮ್ಮ ಪತ್ನಿ, ಸೋದರರು, ಇತರ ಬಂಧುಗಳು ಮತ್ತು ಸೇವಕರೊಂದಿಗೆ ಭಗವಂತನ ಪಾದ ಕಮಲಗಳಿಗೆ ಪೂಜೆ ಸಲ್ಲಿಸಿದರು. ಅವರೆಲ್ಲ ನೆಲದ ಮೇಲೆ ಕುಸಿದು ಪ್ರಾಮಾಣಿಕವಾಗಿ ಪ್ರಾರ್ಥಿಸಿದರು. ಅವನ ಕೃಪೆಯನ್ನು ಕೋರಿದರು.

ರಾಜನಿಗೆ ಎಚ್ಚರಿಕೆ

ಶ್ರೀವಾಸರು ಭಗವಂತನಿಗೆ ಅತ್ಯಂತ ಪ್ರಿಯರಾದವರು. ಆದುದರಿಂದ ಶ್ರೀ ಚೈತನ್ಯರು ತಮ್ಮ ಪಾದವನ್ನು ಶ್ರೀವಾಸ ಮತ್ತು ಇತರರ ಮೇಲೆ ಇರಿಸಿ ಹರಿಸಿದರು. ವಿಶ್ವಂಭರ ನಗುತ್ತ ನುಡಿದ, `ನನ್ನ ಬಗ್ಗೆ ನಿಮ್ಮ ಒಲವು ಮತ್ತು ಆಕರ್ಷಣೆ ಹೆಚ್ಚಲಿ.’ ಭಗವಂತನು ಸಿಂಹದಂತೆ ಗರ್ಜಿಸುತ್ತ ಮಾತನಾಡಿದ, `ಓ, ಶ್ರೀವಾಸ, ನೀನು ಯಾವುದರ ಬಗೆಗಾದರೂ ಹೆದರಿದ್ದೀಯಾ? ಸರಕಾರದ ಸಿಬ್ಬಂದಿ ನಿನ್ನನ್ನು ಬಂಧಿಸಲು ಎರಡು ದೋಣಿಗಳಲ್ಲಿ ಬಂದಿದ್ದಾರೆಂಬ ಸುದ್ದಿ ನನ್ನನ್ನು ತಲುಪಿದೆ. ಪ್ರತಿಯೊಬ್ಬರ ಹೃದಯದಲ್ಲಿಯೂ ನಾನು ಪರಮಾತ್ಮ. ಆದುದರಿಂದ ನಾನು ನನ್ನ ಮನದಿಚ್ಛೆಯಂತೆ ಎಲ್ಲರನ್ನೂ ನಿಯಂತ್ರಿಸುವೆ ಮತ್ತು ಚಟುವಟಿಕೆಗಳನ್ನು ನಿರ್ದೇಶಿಸುವೆ. ರಾಜನು ನಿನ್ನನ್ನು ಯಾವಾಗ ಬಂಧಿಸಬಹುದು? ಅವನ ಹೃದಯದಲ್ಲಿರುವ ನಾನು ಹಾಗೆ ಮಾಡೆಂದು ಅವನಿಗೆ ಆದೇಶಿಸಿದಾಗ.

`ಆದರೂ, ಯಾವುದೋ ಕಾರಣಕ್ಕಾಗಿ, ಅವನು ಸ್ವತಂತ್ರನಾಗಿ ಚಿಂತಿಸಿ ನಿನ್ನನ್ನು ಬಂಧಿಸಲು ಆದೇಶಿಸಿದರೆ, ನಾನು ಹೀಗೆ ಮಾಡುವೆ. ನಾನೇ ಮೊದಲು ದೋಣಿ ಏರುವೆ ಮತ್ತು ರಾಜನ ಮುಂದೆ ಪ್ರತ್ಯಕ್ಷನಾಗುವೆ. ನನ್ನನ್ನು ನೋಡಿದ ಮೇಲೆ ಕೂಡ ಅವನು ಸಿಂಹಾಸನದ ಮೇಲೆ ಕುಳಿತಿರುತ್ತಾನೆಂದು ನೀವು ಭಾವಿಸುವಿರಾ? ನಾನು ಅವನನ್ನು ಮರುಳು ಮಾಡುತ್ತೇನೆ, ನಿಯಂತ್ರಿಸುತ್ತೇನೆ ಮತ್ತು ಕೆಳಗೆ ಉರುಳಿಸುತ್ತೇನೆ.’

`ಅದಾಗದಿದ್ದರೆ, ನಾನು ರಾಜನಿಗೆ ಹೀಗೆ ಹೇಳುವೆ, `ರಾಜನೇ, ನಿಜವನ್ನು ಕೇಳು. ನಿನ್ನ ಎಲ್ಲ ಧಾರ್ಮಿಕ ಗುರುಗಳನ್ನು ಮತ್ತು ನ್ಯಾಯಾಧೀಶರನ್ನು ಆಸ್ಥಾನಕ್ಕೆ ಬರಮಾಡು. ನಿನ್ನ ಎಲ್ಲ ಆನೆ, ಕುದುರೆ, ಪ್ರಾಣಿ, ಪಕ್ಷಿಗಳನ್ನು ಒಗ್ಗೂಡಿಸಿ ಅರಮನೆಗೆ ಕರೆತರಲು ಹೇಳು. ಅನಂತರ ನಿನ್ನ ಎಲ್ಲ ಖಾಜಿ ಗುರುಗಳು ನಿಮ್ಮ ಧರ್ಮ ಗ್ರಂಥಗಳನ್ನು ಓದಲು ಆದೇಶಿಸು. ಅವರು ಹೇಗೆ ಓದಬೇಕೆಂದರೆ ಅದು ಎಲ್ಲ ಜೀವಿಗಳನ್ನು ಆಧ್ಯಾತ್ಮಿಕ ಭಾವೋದ್ರೇಕಕ್ಕೆ ಒಳಪಡಿಸಿ ಅವು ಅಳುವಂತೆ ಪ್ರೇರೇಪಿಸಬೇಕು.’ ಅವನ ಗುರುಗಳು ವಿಫಲರಾದಾಗ ನಾನು ನನ್ನ ಸಾಮರ್ಥ್ಯವನ್ನು ರಾಜನಿಗೆ ತೋರಿಸುವೆ.

`ನಾನು ಹೇಳುವೆ, `ಓ ರಾಜ, ನಾವು ಈಗಾಗಲೇ ಈ ಖಾಜಿ ಗುರುಗಳ ಆಧ್ಯಾತ್ಮಿಕ ಲೋಪವನ್ನು ಕಂಡಿದ್ದೇವೆ. ಇವರ ಆದೇಶದ ಮೇರೆಗೆ ನೀನು ಕೃಷ್ಣನ ಪವಿತ್ರ ನಾಮ ಸಂಕೀರ್ತನೆಯನ್ನು ತಡೆಯಬೇಕೆಂದು ಬಯಸುವೆಯಾ? ಈಗ ನೀನು ನಿನ್ನ ಕಣ್ಣಿಗೆ ತೃಪ್ತಿಯಾಗುವಷ್ಟು ನನ್ನ ಶಕ್ತಿಯನ್ನು ನೋಡು.’ ಅನಂತರ ನಾನು ಹುಚ್ಚೆದ್ದ ಆನೆಯನ್ನು ಉಳಿದ ಆನೆ, ಕುದುರೆ, ಜಿಂಕೆ ಮತ್ತಿತರ ಪ್ರಾಣಿಗಳೊಂದಿಗೆ ರಾಜನ ಮುಂದೆ ತರುವೆ. ಅವು ದಿಢಿರನೆ ಅಳುವಂತೆ ಮತ್ತು ಕೃಷ್ಣನ ನಾಮ ಪಠಿಸುವಂತೆ ಮಾಡುವೆ.’ ನಾನು ರಾಜ ಮತ್ತು ಅವನ ಸಿಬ್ಬಂದಿ ಅಳುವಂತೆ ಮತ್ತು ಕೃಷ್ಣ ನಾಮ ಜಪಿಸುವಂತೆ ಮಾಡುವೆ. ನೀವು ಇದನ್ನು ನಂಬುವುದಿಲ್ಲವೆಂದು ನನಗೆ ಗೊತ್ತು. ಆದರೆ ನಾನು ಈಗಲೇ ಅದನ್ನು ಮಾಡಿ ತೋರಿಸುವೆ, ನೀವೇ ನೋಡುವಿರಂತೆ.’

ಶ್ರೀ ಚೈತನ್ಯರ ದೃಷ್ಟಿ ಶ್ರೀವಾಸ ಪಂಡಿತರ ಸೋದರನ ಪುಟ್ಟ ಮಗಳು ನಾರಾಯಣಿಯತ್ತ ಹರಿಯಿತು. ಶ್ರೀ ಗೌರಚಂದ್ರನು ಆ ಬಾಲಕಿಗೆ ಆದೇಶಿಸಿದ, `ನಾರಾಯಣಿ! ಕೃಷ್ಣನ ನಾಮ ಜಪಿಸು. ಮತ್ತು ಆನಂದಭಾಷ್ಪ ಸುರಿಸು.’ ನಾಲ್ಕು ವರ್ಷದ ಬಾಲಕಿ ಆಧ್ಯಾತ್ಮಿಕ ಭಾವೋದ್ರೇಕಕ್ಕೆ ಒಳಗಾಗಿ ಗಟ್ಟಿ ದ್ವನಿಯಲ್ಲಿ ಹೇಳಿದಳು, `ಕೃಷ್ಣ!’ ಅವಳು ಬಾಹ್ಯ ಜಗತ್ತಿನ ಎಲ್ಲ ಅರಿವನ್ನೂ ಕಳೆದುಕೊಂಡು ಅಳಲಾರಂಭಿಸಿದಳು. ಅವಳ ದೇಹ ಅವಳ ಕಣ್ಣೀರಿನಿಂದ ತೋಯ್ದು ಹೋಯಿತು. ಅವಳು ನೆದ ಮೇಲೆ ಕುಸಿದಳು. ನಸುನಕ್ಕ ವಿಶ್ವಂಭರನು ಶ್ರೀವಾಸ ಅವರಿಗೆ ಹೇಳಿದ, `ಈಗ ನಿನ್ನ ಭಯ ನಿವಾರಣೆ ಆಯಿತೇ?’ ನಾರಾಯಣಿಯು ಭಗವಂತನ ಕೃಪೆಗೆ ಪಾತ್ರಳಾದ ಪ್ರಸಂಗವನ್ನು ವೈಷ್ಣವರು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ವಿದ್ವಾಂಸರಾದ ಶ್ರೀವಾಸ ಪಂಡಿತರು ತಮ್ಮ ಕೈಗಳನ್ನು ಚೆಲ್ಲಿ ಹೇಳಿದರು, `ಓ, ನನ್ನ ದೇವರೇ, ನೀನು ನಿನ್ನ‌ೆಲ್ಲ ವಿನಾಶ‌ ಕಾಲದ ಭಯಾನಕ ರೂಪವನ್ನು ತೋರುವೆಯೋ ಮತ್ತು ಈ ಇಡೀ ಐಹಿಕ ಸೃಷ್ಟಿಯನ್ನು ಧ್ವಂಸ ಮಾಡುವೆಯೋ ಆಗ ನಾನು ಕಿಂಚಿತ್ತೂ ಭಯವಿಲ್ಲದೆ ನಿನ್ನ ಪವಿತ್ರ ನಾಮವನ್ನು ಜಪಿಸುವೆ. ಈಗ ನೀನು ಇಲ್ಲಿರುವುದರಿಂದ, ನನಗೇನು ಭಯ.’

ಸೇವಕರಿಗೂ ಭಗವಂತನ ಭವ್ಯ ರೂಪ ಲಭ್ಯ

ಆಗ ಭಗವಂತನು ತನ್ನ ವೈಭವದ ವೈಕುಂಠ ರೂಪವನ್ನು ಪ್ರಕಟಿಸಿದನು. ಈ ಭವ್ಯ ರೂಪವನ್ನು ಕಂಡು ಶ್ರೀವಾಸ ಮತ್ತು ಅಲ್ಲಿದ್ದ ಅವರ ಪತ್ನಿ, ಬಂಧು ಬಳಗ, ಸೇವಕರು ಎಲ್ಲರೂ ಪರಮಾನಂದದ ಸ್ಥಿತಿ ತಲಪಿದರು. ಶ್ರೀವಾಸ ಠಾಕುರರ ಸೇವಕರಿಗೂ ಭಗವಂತನ ಆಧ್ಯಾತ್ಮಿಕ ರೂಪ ನೋಡಲು ಲಭ್ಯವಾಯಿತು. ಸಾಕಾರ ವೇದಗಳೂ ಇದನ್ನು ನೋಡಲು ಕಾತರ. ಶ್ರೀವಾಸ ಪಂಡಿತರ ವೈಭವ ಮತ್ತು ಅದ್ಭುತ ಗುಣವನ್ನು ನಾನು ಹೇಗೆ ವರ್ಣಿಸಲಿ? ಅವರ ಚರಣ ಕಮಲದ ಅಲ್ಪ ದೂಳಿನಿಂದ ಕೂಡ ಇಡೀ ಸೃಷ್ಟಿಯನ್ನು ಪರಿಶುದ್ಧಗೊಳಿಸಬಹುದು.

ಭಗವಂತನು ತನ್ನ ಬಾಹ್ಯ ಪ್ರಜ್ಞೆಗೆ ಮರಳಿದಾಗ ಅವನು ಸ್ವಲ್ಪ ನಾಚಿದಂತೆ ಕಂಡ. ಶ್ರೀವಾಸರನ್ನು ಸಾಂತ್ವನಗೊಳಿಸಿ ಅವನು ತನ್ನ ಮನೆಗೆ ಹಿಂತಿರುಗಿದ. ಶ್ರೀವಾಸ ಪಂಡಿತರ ಇಡೀ ಮನೆ ಸಂತೋಷ ಸಾಗರದಲ್ಲಿ ಮುಳುಗಿತ್ತು.

(ಮುಂದುವರಿಯುವುದು)
Leave a Reply

Your email address will not be published. Required fields are marked *