Search
Sunday 17 January 2021
  • :
  • :

ಸುವರ್ಣಾವತಾರ ಭಾಗ – 20

ಪ್ರತಿದಿನ ಬೆಳಗ್ಗೆಯೇ ಚೈತನ್ಯನ ಶಿಷ್ಯರು ಅಧ್ಯಯನಕ್ಕಾಗಿ ಸೇರುತ್ತಿದ್ದರು. ಆದರೆ, ತ್ರಿಲೋಕ ಪ್ರಭುವಾದ ಅವನು ಆಸೀನನಾಗಿ ಬೋಧಿಸಲು ಆರಂಭಿಸಿದರೆ ಕೃಷ್ಣನನ್ನು ಬಿಟ್ಟರೆ ಬೇರೇನೂ ಅವನ ನಾಲಗೆಯಿಂದ ಹೊರಳುತ್ತಿರಲಿಲ್ಲ.

ವಿದ್ಯಾರ್ಥಿಗಳು ಕೇಳಿದರು, `ವರ್ಣಮಾಲೆಯನ್ನು ಸರಿಯಾಗಿ ಮತ್ತು ಪರಿಪಕ್ವವಾಗಿ ಅರ್ಥಮಾಡಿಕೊಳ್ಳುವುದು ಹೇಗೆ?’  ಭಗವಂತ ಉತ್ತರಿಸಿದ, `ಪ್ರತಿಯೊಂದು ಅಕ್ಷರದಲ್ಲಿಯೂ ಶ್ರೀಮನ್ ನಾರಾಯಣನಿದ್ದಾನೆ.’

ಶಿಷ್ಯರು ಕೇಳಿದರು, `ವರ್ಣಮಾಲೆಯ ಅಕ್ಷರಗಳ ಶುದ್ಧತೆ ಹೇಗೆ?’ ಭಗವಂತ ಉತ್ತರಿಸಿದ, `ಶ್ರೀ ಕೃಷ್ಣನ ಕೃಪಾದೃಷ್ಟಿಯು ವರ್ಣಮಾಲೆಯನ್ನು ಸೃಷ್ಟಿಸಿತು.’ ಶಿಷ್ಯರು ಪ್ರತಿಕ್ರಿಯಿಸಿದರು, `ಓ, ಪಂಡಿತ, ಸರಿಯಾದ ಅರ್ಥ ನೀಡು.’ ಭಗವಂತನೆಂದ, `ಪ್ರತಿಯೊಂದು ಕ್ಷಣವೂ ಕೃಷ್ಣನ ಸ್ಮರಣೆ ಮಾಡಬೇಕು. ಎಲ್ಲ ಧರ್ಮ ಗ್ರಂಥಗಳ ಉದ್ದೇಶವೂ ಆಗಿರುವ ಶ್ರೀ ಕೃಷ್ಣನನ್ನು ಪೂಜಿಸುವ ವಿಷಯವನ್ನು ನಾನು ವಿವರಿಸುತ್ತಿರುವೆ. ಧರ್ಮ ಗ್ರಂಥಗಳು ತಮ್ಮ ಆರಂಭ, ಮಧ್ಯ ಮತ್ತು ಅಂತ್ಯದಲ್ಲಿ ಶ್ರೀ ಕೃಷ್ಣನನ್ನು ಪೂಜಿಸುವ ಬಗೆಗೆ ಹೇಳುತ್ತವೆ.’

ಭಗವಂತನ ಈ ವಿವರಣೆ ಕೇಳಿ ಶಿಷ್ಯರು ಜೋರಾಗಿ ನಗತೊಡಗಿದರು. `ಈ ವಿಚಿತ್ರ ವಿವರಣೆಗೆ ಪ್ರಾಣವಾಯುವಿನ ಅಸಮತೋಲನ ಕಾರಣ’ ಎಂದು ಗೊಣಗುಟ್ಟಿದರು. ಶಿಷ್ಯರು ಪುನಃ ಕೇಳಿದರು, `ನಿನಗೆ ಈ ವಿಷಯ ಎಲ್ಲಿಂದ ತಿಳಿದು ಬಂದಿತು?’ ಭಗವಂತ ಉತ್ತರಿಸಿದ‌, `ಇದು ಧರ್ಮ ಗ್ರಂಥಗಳ ಅಂತಿಮ ತೀರ್ಮಾನವಾಗಿದೆ.’

ಭಗವಂತನೆಂದ, `ನಿಮಗೆ ಈಗ ಅರ್ಥವಾಗದಿದ್ದರೆ, ಈ ವಿಷಯದ ಬಗೆಗೆ ಯೋಚಿಸಿ. ಇಂದು ಮಧ್ಯಾಹ್ನ ನಾನು ಹೆಚ್ಚಿನ ವಿವರ ನೀಡುವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಏಕಾಂತ ಸ್ಥಳಕ್ಕೆ ಹೋಗಿ ಪುಸ್ತಕಗಳನ್ನು ಓದಬೇಕು. ಮಧ್ಯಾಹ್ನ ನಾವು ಮತ್ತೆ ಭೇಟಿಯಾಗೋಣ.’ ದೇವೋತ್ತಮನ ನುಡಿಗಳನ್ನು ಕೇಳಿ ಅಚ್ಚರಿಗೊಂಡ ಶಿಷ್ಯರು ತಮ್ಮ ಪುಸ್ತಕಗಳನ್ನು ಕಟ್ಟಿಕೊಂಡು ಹೊರಟರು.

ಅನಂತರ ಎಲ್ಲ ವಿದ್ಯಾರ್ಥಿಗಳೂ ಗಂಗಾದಾಸ ಪಂಡಿತರಲ್ಲಿಗೆ ಹೋಗಿ ಭಗವಂತನ ಮಾತು ಮತ್ತು ವಿವರಗಳನ್ನು ಪುನರುಚ್ಚರಿಸಿದರು. ಅವರೆಂದರು. `ಧರ್ಮ ಗ್ರಂಥಗಳ ಪ್ರತಿಯೊಂದು ಪದವೂ ಶ್ರೀ ಕೃಷ್ಣನಿಗೆ ಮಾತ್ರ ಸಂಬಂಧಿಸಿದುದು ಎಂದು ನಿಮಾಯ್ ಪಂಡಿತ ಈಗ ಘೋಷಿಸುತ್ತಾರೆ, ಗಯಾದಿಂದ ಬಂದ ಮೇಲೆ ಅವರು ಕೃಷ್ಣನ ಬಗೆಗೆ ಮಾತ್ರ ಮಾತನಾಡುತ್ತಾರೆ ಮತ್ತು ವಿವರಕ್ಕೆ ಬೇರೆ ಏನೂ ನೀಡುವುದಿಲ್ಲ. ಅವರು ನಿರಂತರವಾಗಿ ಕೃಷ್ಣ ನಾಮ ಜಪಿಸುತ್ತಾರೆ ಮತ್ತು ಆನಂದಿಸುತ್ತಾರೆ. ಕೆಲವು ಬಾರಿ ಅವರು ಜೋರಾಗಿ ನಗುತ್ತಾರೆೆ. ಕೆಲವು ಬಾರಿ ಕೂಗಿಕೊಳ್ಳುತ್ತಾರೆ. ಕೆಲವು ಬಾರಿ ಅವರ‌ ಇಡೀ ದೇಹ ರೋಮಾಂಚನದಿಂದ ನಡುಗುತ್ತದೆ. ಈ ರೀತಿ ಅವರಲ್ಲಿ ವಿವಿಧ ಲಕ್ಷಣಗಳು ರೂಪುಗೊಳ್ಳುತ್ತವೆ, ಬೋಧಿಸಲು ಕುಳಿತಾಗ, ಅವರು ಪ್ರತಿಯೊಂದು ಶಬ್ದದ ಮೂಲವನ್ನೂ ಕೃಷ್ಣನಿಗೇ ಸಂಪರ್ಕಿಸುತ್ತಾರೆ. ಅವರ‌ ಎಲ್ಲ ಭಾಷಾರ್ಥ ಮತ್ತು ವ್ಯಾಖ್ಯಾನಗಳು ಕೃಷ್ಣನನ್ನು ವಿವರಿಸುತ್ತವೆ. ಅವರಲ್ಲಿನ ಈ ಹೊಸ ಪರಿವರ್ತನೆ ನಮಗೆ ಅಪರಿಚಿತವಾಗಿರುವಂತೆ ಕಾಣುತ್ತದೆ. ಓ, ಗುರುವೇ, ದಯೆಯಿಟ್ಟು ನಾವು ಏನು ಮಾಡಬೇಕೆಂದು ತಿಳಿಸಿ.’

ಗುರುಗಳ ಉಪದೇಶ

ನವದ್ವೀಪದ ಗುರುಗಳ ಮುಕುಟ ಮಣಿಯಂತಿದ್ದ ಗಂಗಾದಾಸ ಪಂಡಿತರು, ಈ ಶಿಷ್ಯರ ದೂರುಗಳನ್ನು ಕೇಳಿ ಮುಗುಳ್ನಕ್ಕು ನುಡಿದರು, `ಈಗ ಮನೆಗೆ ಹೋಗಿ, ಮಧ್ಯಾಹ್ನ ಬನ್ನಿ, ನಾನು ನಿಮಾಯ್ ಗೆ ತಿಳಿಸುವೆ. ಅವನು ಇನ್ನು ಮುಂದೆ ನಿಮಗೆಲ್ಲ ಸರಿಯಾಗಿ ಶಿಕ್ಷಣ ನೀಡುವಂತೆ ಅವನಿಗೆ ಹೇಳುವೆ. ನೀವೂ ನಿಮಾಯ್ ಜೊತೆಗ‌ೆ ಬರಬಹುದು. ಇಂದು ಮಧ್ಯಾಹ್ನ ನಿಮ್ಮ ಪುಸ್ತಕಗಳೊಂದಿಗೆ ಇಲ್ಲಿರಿ.’

ಅನಂತರ ಮಧ್ಯಾಹ್ನ ನಿಮಾಯ್ ಪಂಡಿತನು ಗಂಗಾದಾಸ ಪಂಡಿತರನ್ನು ಭೇಟಿ ಮಾಡಿದನು. ಅವನು ತನ್ನ ಗುರುವಿನ ಪಾದ ಸ್ಪರ್ಶ ಮಾಡಿ ಗೌರವ ಸಲ್ಲಿಸಿದನು. `ನೀನು ದೊಡ್ಡ ಪಂಡಿತನಾಗು’ ಎಂದು ಅವರು ನಿಮಾಯ್‌ಗೆ ಆಶೀರ್ವದಿಸಿದರು. ಅವರು ಮುಂದುವರಿಸಿದರು, `ನನ್ನ ಪ್ರೀತಿಯ ವಿಶ್ವಂಭರ, ನಾನು ನಿನಗೆ ಏನೋ ಹೇಳಬೇಕು. ಬ್ರಾಹ್ಮಣನಿಗೆ ಬೋಧಿಸುವ ಸಾಮರ್ಥ್ಯ ಸಣ್ಣ ವಿಷಯವಲ್ಲ. ಅದು ಒಂದು ಒಳ್ಳೆಯ ಅದೃಷ್ಟ.’

`ನಿನ್ನ ಅಜ್ಜ ಶ್ರೀ ನೀಲಾಂಬರ ಚಕ್ರವರ್ತಿ ಮತ್ತು ತಂದೆ ಶ್ರೀ ಜಗನ್ನಾಥ ಮಿಶ್ರ ಶ್ರೇಷ್ಠ ವಿದ್ವಾಂಸರು. ನಿನ್ನ ಪೋಷಕರಿಬ್ಬರ ಕುಟುಂಬವೂ ಅನಕ್ಷರಸ್ಥರದಲ್ಲ. ನೀನು ಒಬ್ಬ ಸಮರ್ಥ ವಿದ್ವಾಂಸ ಮತ್ತು ವ್ಯಾಖ್ಯಾನ ನೀಡುವ ವಿಶೇಷ ಅರ್ಹತೆ ಉಳ್ಳವನು. ತನ್ನ ಶಿಕ್ಷಣ ಮತ್ತು ಪಾಂಡಿತ್ಯವನ್ನು ಬಿಟ್ಟು ಯಾರಾದರೂ ಭಗವಂತನ ಭಕ್ತಿ ಪಥದಲ್ಲಿ ಯಶಸ್ವಿಯಾಗಬಹುದೆಂದು ನೀನು ಭಾವಿಸುವೆಯಾ? ಆ ರೀತಿಯಾಗಿ ನೋಡಿದರೆ, ನಿನ್ನ ಪೋಷಕರು ಭಗವಂತನ ಭಕ್ತರಲ್ಲವೇ? ನೀನು ಸರಿಯಾಗಿ ಕಲಿಯಬೇಕು ಮತ್ತು ಅಧ್ಯಯನ ನಡೆಸಬೇಕು.

ಏಕೆಂದರೆ, ಸರಿಯಾದ ಶಿಕ್ಷಣ ಮತ್ತು ಕಲಿಕೆಯಿಂದ ಮಾತ್ರ ವೈಷ್ಣವಬ್ರಾಹ್ಮಣರಾಗುವುದು ಸಾಧ್ಯ.

`ಒಳ್ಳೆಯದು ಮತ್ತು ಕೆಟ್ಟದ್ದು, ಸರಿಯಾದುದು ಮತ್ತು ಸರಿಯಲ್ಲದ್ದರ ನಡುವಣ ವ್ಯತ್ಯಾಸವನ್ನು ಅನಕ್ಷರಸ್ಥ ಬ್ರಾಹ್ಮಣನೊಬ್ಬ ಹೇಗೆ ಅರಿಯುತ್ತಾನೆ? ಇದನ್ನು ಅರಿತುಕೊಂಡು ನೀನು ಕೃಷ್ಣ ನಾಮ ಜಪಿಸಬೇಕು ಮತ್ತು ನಿನ್ನ ಶಿಕ್ಷಣವನ್ನು ಮುಂದುವರಿಸಬೇಕು. ಹೋಗು, ಧರ್ಮ ಗ್ರಂಥಗಳನ್ನು ಸರಿಯಾದ ರೀತಿಯಲ್ಲಿ ಬೋಧಿಸು, ಸರಿಯಾದ ವಿವರಗಳನ್ನು ನೀಡು. ಮತ್ತು ತಪ್ಪಾಗಿ ಅರ್ಥೈಸಬೇಡ. ಇದು ನನಗೆ ತೀವ್ರ ಆತಂಕ ಉಂಟುಮಾಡಿದೆ.’

ಭಗವಂತ ಉತ್ತರಿಸಿದ, `ನಿಮ್ಮ ಆಶೀರ್ವಾದ ಮತ್ತು ಚರಣ ಕಮಲದ ಕೃಪೆಯಿಂದ ಇಡೀ ನವದ್ವೀಪದಲ್ಲಿ ಯಾವುದೇ ವಾದದಲ್ಲಿ ನನ್ನನ್ನು ಸೋಲಿಸುವವರು ಯಾರಿದ್ದಾರೆ? ನನ್ನ ವಾದಗಳನ್ನು ತಳ್ಳಿಹಾಕಿ ಯಾರು ಹೊಸ ಮತ್ತು ಮೂಲ ಅಂಶ ಸ್ಥಾಪಿಸಬಲ್ಲರು? ನಾನು ಪಟ್ಟಣದ ಮಧ್ಯ ಭಾಗಕ್ಕೆ ಹೋಗಿ ಬಹಿರಂಗವಾಗಿ ಬೋಧಿಸುವೆ. ನನ್ನ ವ್ಯಾಖ್ಯಾನಗಳಲ್ಲಿ ತಪ್ಪು ಮತ್ತು ದೋಷಗಳನ್ನು ಕಂಡು ಹಿಡಿಯುವ ಧೈರ್ಯ ಯಾರಿಗಿದೆಯೋ ಅವರನ್ನು ನೋಡಲು ನಾನು ಇಚ್ಛಿಸುವೆ.’

ವಿಶ್ವಂಭರನು ತನ್ನ ಗುರುವಿಗೆ ಗೌರವ ಸಲ್ಲಿಸಿ ಹೊರಟಾಗ ಗಂಗಾದಾಸರು ಆನಂದಿತರಾದರು. ಗಂಗಾದಾಸ ಪಂಡಿತ ಎಷ್ಟು ಅದೃಷ್ಟವಂತರಲ್ಲವೇ? ಅವರ‌ ಚರಣ ಕಮಲಗಳಿಗೆ ಗೌರವ ಸಲ್ಲಿಸುತ್ತಿರುವ ಶಿಷ್ಯ ಬೇರಾರೂ ಅಲ್ಲ, ಜ್ಞಾನ ದೇವತೆಯಾದ ಸರಸ್ವತಿಯ ಪ್ರಭು ಅಲ್ಲವೇ? ಗಂಗಾದಾಸರು ಇದಕ್ಕಿಂತ ಇನ್ನೇನು ಅಪೇಕ್ಷಿಸಬೇಕು? ಅವರ‌ ಶಿಷ್ಯ ಇಡೀ ಜಗತ್ತಿನ ಅತ್ಯಂತ ಪೂಜಾರ್ಹ ದೇವರು.

ಶ್ರೀ ವಿಶ್ವಂಭರನು ನವದ್ವೀಪದ ರಸ್ತೆಗಳಲ್ಲಿ ನಡೆದಾಡಿದ. ಚಂದ್ರನ ಸುತ್ತ ತಾರೆಗಳು ಮಿನುಗುವಂತೆ ನಿಮಾಯ್ ಸುತ್ತ ಅವನ ಶಿಷ್ಯರು ಸುತ್ತುವರಿದಿದ್ದರು.

ವ್ಯಾಕರಣ ತಿಳಿಯದು

ಲಕ್ಷ್ಮೀದೇವಿಯು ಯಾರ ಚರಣ ಕಮಲವನ್ನು ತನ್ನ ಹೃದಯದಲ್ಲಿ ಶಾಶ್ವತವಾಗಿ ಪೂಜಿಸುವಳೋ ಆ ಶ್ರೀ ವಿಶ್ವಂಭರನು ಗಂಗಾ ನದಿಯ ತಟದಲ್ಲಿ ಆಸೀನನಾದ. ಅಲ್ಲಿ ಅವನು ವಿವಿಧ ಅಂಶಗಳ ಬಗೆಗೆ ತನ್ನ ವಿವರಣೆ, ವ್ಯಾಖ್ಯಾನ ಮತ್ತು ಸಮರ್ಥನೆ, ನಿರಾಕರಣೆ ಮರು ಸಮರ್ಥನೆ ನೀಡುತ್ತಿದ್ದ.

ಶ್ರೀ ಗೌರಾಂಗನೆಂದ, `ಕಲಿಯುಗದಲ್ಲಿ ವಿದ್ವಾಂಸನೆನ್ನಿಸಿ- ಕೊಳ್ಳುವವರಿಗೆ ಧಾತುಗಳ ವರ್ಗೀಕರಣದ ಬಗೆಗೆ ಏನೂ ತಿಳಿದಿರುವುದಿಲ್ಲ. ಆದರೆ `ಭಟ್ಟಾಚಾರ್ಯ’ ಎಂಬ ಬಿರುದು ಪಡೆಯುತ್ತಾರೆ. ತತ್ತ್ವಶಾಸ್ತ್ರದ ಬಗೆಗೆ ಏನೂ ಜ್ಞಾನವಿಲ್ಲದವರು ಚರ್ಚೆಗೆ ಹುಚ್ಚು ಧೈರ್ಯ ತೋರುವರು. ಆದರೆ ಈ ವಿದ್ವಾಂಸರಾರೂ ನನ್ನನ್ನು ಎದುರಿಸುವುದು ಸಾಧ್ಯವಿಲ್ಲ. ನಾನು ಏನು ಸ್ಥಾಪಿಸುವೆನೋ ನಾನು ಏನು ನಿರಾಕರಿಸುವೆನೋ ಅದನ್ನು ಯಾರಾದರೂ ಅಲ್ಲಗೆಳೆಯಲಿ, ನೋಡೋಣ!’ ಈ ರೀತಿ ವಿಶ್ವಾಧಿಪತಿಯಾದ ವಿಶ್ವಂಭರನು ಎಲ್ಲರಿಗೂ ಸವಾಲು ಹಾಕುತ್ತಿದ್ದ. ಆ ಸವಾಲು ಸ್ವೀಕರಿಸುವವರು ಯಾರು?

ಗಂಗಾ ಮಾತೆಗೆ ತಮ್ಮ ಗೌರವ ಸಲ್ಲಿಸಲು ಬಂದ ವಿದ್ವಾಂಸರು ಭಯ ಮಿಶ್ರಿತ ಮೌನದಿಂದ ಶ್ರೀ ವಿಶ್ವಂಭರನ ನೇರ ನುಡಿಗಳನ್ನು ಕೇಳಿಸಿಕೊಂಡರು. ಅವರ ಪಾಂಡಿತ್ಯದ ಹೆಮ್ಮೆ ಚೂರು ಚೂರಾಯಿತು. ಚರ್ಚೆಯಲ್ಲಿ ವಿಶ್ವಂಭರನನ್ನು ಎದುರಿಸುವವರು ಯಾರಾದರೂ ನವದ್ವೀಪದಲ್ಲಿ ಇದ್ದಾರೆಯೇ? ಭಗವಂತನು ಅರೆ ಪ್ರಜ್ಞಾವಸ್ಥೆಯಲ್ಲಿರುವಂತೆ ನಾಲ್ಕು ತಾಸುಗಳ ಕಾಲ ವಿವರಿಸುತ್ತಿದ್ದ ಮತ್ತು  ವ್ಯಾಖ್ಯಾನ ನೀಡುತ್ತಿದ್ದ. ಸಂಜೆ ಸಮೀಪಿಸುತ್ತಿದ್ದರೂ ಅವನ ಉಪನ್ಯಾಸ ಮುಂದುವರಿಯಿತು.

ಭಾಗವತ ಪಾರಾಯಣ

ಅನಂತರ ವಿಶ್ವಂಭರನು ಮತ್ತೊಬ್ಬ ಸತ್ಪುರುಷನ ಮನೆಗೆ ತೆರಳಿದ. ರತ್ನಗರ್ಭ ಆಚಾರ್ಯ ಎಂಬ ಈ ಧರ್ಮ ಶ್ರದ್ಧೆಯ ಬ್ರಾಹ್ಮಣ ವಿಶ್ವಂಭರನ ತಂದೆಯ ನಿಕಟವರ್ತಿ, ಅವರಿಬ್ಬರೂ ಒಂದೇ ಗ್ರಾಮದಲ್ಲಿ ಹುಟ್ಟಿದವರು. ಅವರಿಗೆ ಮೂರು ಗಂಡು ಮಕ್ಕಳು. ಮೂವರೂ ಭಗವಂತನ ಉನ್ನತ ಭಕ್ತರಾಗಿದ್ದು ಆಧ್ಯಾತ್ಮಿಕವಾಗಿ ಪರಿಪೂರ್ಣರಾಗಿದ್ದರು. ಅವರು ಶ್ರೀ ಕೃಷ್ಣನ ಚರಣ ಕಮಲದಿಂದ ಹರಿಯುವ ಜೇನನ್ನು ಸಂಗ್ರಹಿಸುವ ದುಂಬಿಯಂತೆ. ಕೃಷ್ಣಾನಂದ, ಜೀವ ಮತ್ತು ಯದುನಾಥ ಕವಿಚಂದ್ರ ಎಂಬುದು ಅವರ ಹೆಸರುಗಳು. ರತ್ನಗರ್ಭ ಆಚಾರ್ಯರು ಭಗವಂತನ ಪರಮ ಭಕ್ತರಾಗಿದ್ದು ಶ್ರೀಮದ್ ಭಾಗವತ ಎಂದರೆ ಅವರಿಗೆ ಬಲು ಪ್ರೀತಿ. ಅವರು ಆ ಸಂದರ್ಭದಲ್ಲಿ ಅತ್ಯಂತ ಗೌರವ ಮತ್ತು ಪ್ರೇಮದಿಂದ ಭಾಗವತ ಓದುತ್ತಿದ್ದರು.

ಅವರು ಓದಿದರು, `ಯಜ್ಞ ಮಾಡುತ್ತಿದ್ದ ಬ್ರಾಹ್ಮಣರ ಪತ್ನಿಯರು ಸುಂದರ ಬಾಲಕನನ್ನು ಕಂಡರು. ಅವನದು ನಸುಗಪ್ಪು ಬಣ್ಣ. ಅವನು ಚಿನ್ನದ ಬಣ್ಣದ ವಸ್ತ್ರ ತೊಟ್ಟಿದ್ದ. ಅವನ ಕತ್ತಿನಲ್ಲಿ ಸುಂದರ ಹೂವಿನ ಹಾರದ ಅಲಂಕಾರ ಮತ್ತು ಅವನ ಕಿರೀಟದ ಒಂದು ಭಾಗದಲ್ಲಿ ನವಿಲಿನ ಗರಿ. ಅವನ ಕಿರೀಟವು ಅಮೂಲ್ಯ ರತ್ನಗಳಿಂದ ಹೊಳೆಯುತ್ತಿತ್ತು. ಅವನು ತನ್ನ ಮಿತ್ರರೊಂದಿಗಿದ್ದ. ಅವನು ತನ್ನ ಎಡಗೈನೊಂದಿಗೆ ತನ್ನ ಮಿತ್ರನ ತೋಳಿಗೆ ಒರಗಿಕೊಂಡು ನಿಂತಿದ್ದ. ಬಲಗೈಯಲ್ಲಿ ಅವನು ಕಮಲ ಪುಷ್ಪವನ್ನು ಅಲ್ಲಾಡಿಸುತ್ತಿದ್ದ. ಕಮಲ ಹೂವಿನ ಆಕಾರದ ಆಭರಣ ಅವನ ಕಿವಿಗಳನ್ನು ಅಲಂಕರಿಸಿದ್ದವು. ಅವನ ಕೆನ್ನೆಗಳ ಮೇಲೆ ಗಂಧದಿಂದ ಮಾಡಿದ ವಿನ್ಯಾಸಗಳು. ಮತ್ತು ಅವನ ಕಮಲದಂತಹ ಬಾಯಿಯ ಮೇಲೆ ಸಿಹಿ ನಗೆಯಾಡುತ್ತಿತ್ತು.’ ಅತ್ಯಂತ ಭಕ್ತಿಯಿಂದ ನುಡಿದ ಶ್ರೀಮದ್ ಭಾಗವತದಲ್ಲಿನ ಈ ವರ್ಣನೆಯು ಶ್ರೀ ವಿಶ್ವಂಭರನ ಕಿವಿಯನ್ನು ಪ್ರವೇಶಿಸಿದವು. ಉಪನ್ಯಾಸಕಾರರ ಭಕ್ತಿ ಭಾವವು ನಿಮಾಯ್ ಪಂಡಿತನ ಮೇಲೆ ತೀವ್ರ ಪ್ರಭಾವ ಬೀರಿದವು. ಅವನು ಆಧ್ಯಾತ್ಮಿಕ ಪರಮಾನಂದದಿಂದ ಪ್ರಜ್ಞಾಶೂನ್ಯನಾಗಿ ಕೆಳಗೆ ಕುಸಿದ.

ಅವನ ಶಿಷ್ಯರು ಈ ದೃಶ್ಯ ಕಂಡು ಚಕಿತರಾದರು. ಸ್ವಲ್ಪ ಸಮಯ ಅದೇ ಸ್ಥಿತಿಯಲ್ಲಿದ್ದ ಭಗವಂತನು ತನ್ನ ಬಾಹ್ಯ ಪ್ರಜ್ಞೆಗೆ ಮರಳಿದ. ಮಾತನಾಡಲು ಸಾಧ್ಯವಾದ ಕೂಡಲೇ ಭಗವಂತನು, `ಮುಂದುವರಿಸಿ, ಮುಂದುವರಿಸಿ’ ಎಂದು ಆಚಾರ್ಯರಿಗೆ ಹೇಳಿದ. ಅವನು ಪರಮಾನಂದದಿಂದ ನೆಲದ ಮೇಲೆ ಹೊರಳಾಡಿದ. ಭಗವಂತನು ಆಚಾರ್ಯರಿಗೆ ಮುಂದುವರಿಸುವಂತೆ ಪುನಃ ಹೇಳಿದ. ಅವರು ತಮ್ಮ ಪಠಣವನ್ನು ಮುಂದುವರಿಸಿದರು. ಆಗ ಎಲ್ಲರೂ ಕೃಷ್ಣ ಪ್ರೇಮದ ಅಮೃತ ಸಾಗರದಲ್ಲಿ ತೇಲಲಾರಂಭಿಸಿದರು. ನಡುಗುವುದು, ಅಳುವುದು ಹೀಗೆ ಪರಮಾನಂದದ ಎಲ್ಲ ಲಕ್ಷಣಗಳೂ ಭಗವಂತನಲ್ಲಿ ಕಾಣಿಸಿದವು.

ಬ್ರಾಹ್ಮಣನು ಸಂತೋಷದಿಂದ ಇನ್ನಷ್ಟು ಸೂರ್ತಿ ಪಡೆದು ಓದಲಾರಂಭಿಸಿದನು. ಬ್ರಾಹ್ಮಣನ ಭಕ್ತಿ ಭಾವದಿಂದ ತೃಪ್ತನಾದ ಭಗವಂತನು ಅವರನ್ನು ಆಲಿಂಗಿಸಿಕೊಂಡ. ಭಗವಂತನ ಈ ಸ್ಪರ್ಶದಿಂದ ಆಚಾರ್ಯರು ಪರಮಾನಂದವನ್ನು ಅನುಭವಿಸಿದರು. ಅವರು ಕೆಳಗೆ ಕುಸಿದರು ಮತ್ತು ಆನಂದಬಾಷ್ಪ ಸುರಿಸುತ್ತ ಭಗವಂತನ ಚರಣಗಳನ್ನು ಹಿಡಿದರು. ಆ ಕ್ಷಣದಿಂದ ಅವರು ಶ್ರೀ ಚೈತನ್ಯರ ಪ್ರೇಮ-ಪಾಶದಲ್ಲಿ ಬಂದಿಯಾದರು.

ಲೀಲೆಗಳ ಪ್ರದರ್ಶನ

ಅವರು ಭಾಗವತದ ಶ್ಲೋಕಗಳನ್ನು ಓದುತ್ತಲೇ ಹೋದರು ಮತ್ತು ಭಗವಂತನು, `ಮುಂದುವರಿಸಿ, ಮುಂದುವರಿಸಿ’ ಎಂದು ಹೇಳುತ್ತಲೇ ಇದ್ದ. ಈ ದೃಶ್ಯದಿಂದ ಚಕಿತಗೊಂಡಿದ್ದ ಜನರು ಏನೋ ಅಸಾಮಾನ್ಯವಾದುದು ನಡೆಯುತ್ತಿದೆ ಎಂದು ಗ್ರಹಿಸಿಕೊಂಡರು. ಆಗ, ಗದಾಧರ ಪಂಡಿತರು ಮಧ್ಯಪ್ರವೇಶಿಸಿ  ಆಚಾರ್ಯರಿಗೆ ಹೇಳಿದರು, `ಇನ್ನು ಮುಂದಕ್ಕೆ ಓದಬೇಡಿ,’  ರತ್ನಗರ್ಭ ಓದುವುದನ್ನು ನಿಲ್ಲಿಸಿದರು ಮತ್ತು ಅವರೆಲ್ಲ ಭಗವಂತನ ಸುತ್ತ ಕುಳಿತರು. ಬಾಹ್ಯ ಪ್ರಜ್ಞೆ ಮರಳಿದಾಗ ಭಗವಂತ ಕೇಳಿದ, `ಏನಾಯಿತೆಂದು ಹೇಳಿ. ನಾನು ಅಶಾಂತವಾಗಿ ನಡೆದುಕೊಂಡೆನೇ?’

ಶಿಷ್ಯರು ಉತ್ತರಿಸಿದರು, `ನಿಮ್ಮ ಲೀಲೆಗಳನ್ನು ವಿವರಿಸುವ ಸಾಮರ್ಥ್ಯ ನಮಗೆಲ್ಲಿದೆ? ನೀವು ತುಂಬ ಅದೃಷ್ಟವಂತರೆಂಬುದಷ್ಟೇ ನಮಗೆ ತಿಳಿದಿರುವುದು.’ ಭಗವಂತನ ಮಿತ್ರರು ಮತ್ತು ಬಂಧುಗಳು ಅವರನ್ನು ತಡೆದು ಹೇಳಿದರು. `ಈ ರೀತಿ ಅವನನ್ನು ಹೊಗಳಬೇಡಿ’ ಆ ವೇಳೆಗೆ ಭಗವಂತನು ತನ್ನ ಉದ್ರೇಕವನ್ನು ತನ್ನಲ್ಲೇ ಹುದುಗಿಸಿಕೊಂಡು ತನ್ನ ಎಲ್ಲ ಶಿಷ್ಯರೊಂದಿಗೆ ಗಂಗಾ ತಟಕ್ಕೆ ಹೋದ. ತನ್ನ ಶಿರಕ್ಕೆ ಗಂಗಾ ಜಲವನ್ನು ಪ್ರೋಕ್ಷಿಸಿಕೊಂಡ ಭಗವ‌ಂತನು ಗಂಗೆಗೆ ತನ್ನ ಗೌರವ ಅರ್ಪಿಸಿ ಅಲ್ಲೇ ಆಸೀನನಾದ. ಯಮುನಾ ನದಿಯ ದಡದಲ್ಲಿ ಶ್ರೀ ಕೃಷ್ಣನು  ವೃಂದಾವನದ ಅಪ್ಸರೆಯರ (ಗೋಪಿಯರು) ಜೊತೆ ಕುಳಿತಂತೆ ಶಚೀಮಾತೆಯ ಪುತ್ರ ನಿಮಾಯ್ ಪಂಡಿತನು ತನ್ನ ಶಿಷ್ಯರ ಜೊತೆ ಕುಳಿತು ಕೃಷ್ಣನನ್ನು ಕುರಿತ ವಿಷಯಗಳ ಬಗೆಗೆ ಚರ್ಚಿಸಲಾರಂಭಿಸಿದ. ಸ್ವಲ್ಪ ಸಮಯ ಅವನು ತನ್ನ ಶಿಷ್ಯರೊಂದಿಗೆ ಕಾಲ ಕಳೆದು ಅನಂತರ ಮನೆಗೆ ಹಿಂತಿರುಗಿದ. ಶಿಷ್ಯರೂ ತಮ್ಮ ತಮ್ಮ ಮನೆಗಳಿಗೆ ವಾಪಸಾದರು. ಭಗವಂತನು ಭೋಜನ ಸ್ವೀಕರಿಸಿದ ಮೇಲೆ ಮಹಾ ವಿಷ್ಣು ಯೋಗನಿದ್ರೆಗೆ ಪವಡಿಸುವಂತೆ ಶ್ರೀ ಚೈತನ್ಯನೂ ನಿದ್ರೆಗೆ ಜಾರಿದ. ರಾತ್ರಿಯ ತೃಪ್ತಿದಾಯಕ ನಿದ್ರೆ ಅನಂತರ ಶಿಷ್ಯರು ಮರುದಿನ ತಮ್ಮ ಪುಸ್ತಕಗಳೊಂದಿಗೆ ಭಗವಂತನಲ್ಲಿಗೆ ಬಂದರು.

ಸರ್ವಂ ಕೃಷ್ಣ ಮಯಂ

ಭಗವಂತನು ತನ್ನ ನಿತ್ಯ ವಿಧಿಗಳಿಗಾಗಿ ಗಂಗೆಗೆ ಹೋದನು. ಅಲ್ಲಿಂದ ಮರಳಿದ ಮೇಲೆ ಅವನು ತನ್ನ ಶಿಷ್ಯರೊಂದಿಗೆ ಕುಳಿತು ವ್ಯಾಕರಣದ ಬಗೆಗೆ ವಿವರಿಸುತ್ತ ವ್ಯಾಖ್ಯಾನ ಮಾಡಲಾರಂಭಿಸಿದ. ಆದರೆ ಅವನೆಲ್ಲ ವಿವರಣೆ ಮತ್ತು ವ್ಯಾಖ್ಯಾನಗಳು ಒಂದೇ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದವು – ಕೃಷ್ಣ ಮತ್ತು ಭಗವಂತನಿಗೆ ಭಕ್ತಿ ಸೇವೆ. ವಿದ್ಯಾರ್ಥಿಗಳು ಕೇಳಿದರು, `ಕ್ರಿಯಾ ಪದದ ಮೂಲ ಧಾತುವಿನ  ಅರ್ಥ ನಿರೂಪಿಸಿ.’

ಭಗವಂತ ಉತ್ತರಿಸಿದ, `ಅವು ಶ್ರೀ ಕೃಷ್ಣನ ಶಕ್ತಿ. ನನ್ನ ಪ್ರೀತಿಯ ವಿದ್ಯಾರ್ಥಿಗಳೇ, ನಾನು ಈಗ ಕ್ರಿಯಾ ಪದದ ಮೂಲದ ಬಗೆಗೆ ಸಂಕ್ಷಿಪ್ತವಾಗಿ ಹೇಳುವೆ. ನನ್ನ ವಿವರಣೆಗಳನ್ನು ಯಾರು ತಿರಸ್ಕರಿಸುವರೋ ನೋಡೋಣ! ಚಿನ್ನದ ಆಭರಣ, ಹೂವಿನ ಹಾರ ಮತ್ತು ಗಂಧ ತೀಡಿದ ಸುಂದರ ದೇಹದ ಅನೇಕ ರಾಜಮಹಾರಾಜರಿದ್ದರು. ಅವರು ಅದೃಷ್ಟ ದೇವತೆ ಲಕ್ಷ್ಮಿಯ ಪ್ರತಿನಿಧಿ ಎಂದೂ ಅವರ ಮಾತುಗಳು ಧಾರ್ಮಿಕ ತತ್ತ್ವಗಳ ದೇವತೆ ಯಮರಾಜನ ಮಾತುಗಳೆಂದೂ ಜನರು ಹೇಳುತ್ತಾರೆ. ಧಾತು, ಜೀವವು ಅವರ ದೇಹವನ್ನು ಬಿಟ್ಟು ಹೋದಾಗ ಏನಾಗುವುದೆಂದು ನಿಮಗೆ ವಿವರಿಸುವೆ.

`ಈ ರಾಜರ ದೈಹಿಕ ಸೌಂದರ್ಯ, ಅಲಂಕಾರ ಮತ್ತು ಶಕ್ತಿ ಎಲ್ಲಿಗೆ ಹೋಗುತ್ತದೆ? ಕೆಲವು ರಾಜರ ದೇಹಗಳನ್ನು ದಹಿಸಿ ಬೂದಿ ಮಾಡಲಾಗುತ್ತದೆ. ಕೆಲವರ ದೇಹಗಳನ್ನು ಭೂಮಿಯಲ್ಲಿ ಹೂಳಲಾಗುತ್ತದೆ. ಶ್ರೀ ಕೃಷ್ಣನು ತನ್ನ ಶಕ್ತಿ, ಧಾತುವಿನ ರೂಪದಲ್ಲಿ, ಪ್ರತಿಯೊಬ್ಬರಲ್ಲಿಯೂ ಇರುತ್ತಾನೆ. ಜೀವಿಗಳು ಈ ಜೀವ ಶಕ್ತಿಯಿಂದ ಆಕರ್ಷಿತರಾಗುತ್ತಾರೆ ಮತ್ತು ಪ್ರೀತಿಸುತ್ತಾರೆ. ಈ ರೀತಿ ಅವರು ತಮ್ಮ ಭಕ್ತಿಯನ್ನು ಅವನಿಗೆ ಅರ್ಪಿಸುತ್ತಾರೆ. ವಿದ್ವಾಂಸರು ಮತ್ತು ಶಿಕ್ಷಕರೆನಿಸಿಕೊಳ್ಳುವವರು ಗೊಂದಲದಲ್ಲಿದ್ದಾರೆ. ಅವರು ಕ್ರಿಯಾ ಪದದ ಮೂಲ, ಧಾತುವಿನ ನಿಜವಾದ ಅರ್ಥವನ್ನು ಗ್ರಹಿಸುವುದಿಲ್ಲ. ಈಗ, ನೀವೆಲ್ಲ ತದೇಕಚಿತ್ತದಿಂದ ಕೇಳಿಸಿಕೊಳ್ಳಿ.’

`ಈವರೆಗೆ ಪೂಜಿಸಲ್ಪಡುತ್ತಿದ್ದ, ಗೌರವಿಸಲ್ಪಡುತ್ತಿದ್ದ ರಾಜರ ದೇಹದಿಂದ ಜೀವ ಹೊರಬಂದಕೂಡಲೇ ಅವರು ಕಲುಷಿತ, ಅಶುದ್ಧರಾಗುತ್ತಾರೆ. ಅವರ ದೇಹವನ್ನು ಸ್ಪರ್ಶಿಸಿದರೆ ಸ್ನಾನ ಮಾಡಬೇಕಾಗುತ್ತದೆ. ತಂದೆಯ ತೊಡೆಯ ಮೇಲೆ ಸಂತಸ ಸಮಯ ಕಳೆದಿದ್ದ ಮಗನು ಅವನಿಗೆ ಅಗ್ನಿ ಸ್ಪರ್ಶ ಮಾಡಿ ಅವನ ದೇಹವನ್ನು ಬೂದಿ ಮಾಡಬೇಕು. ಆದುದರಿಂದ, ಅಗತ್ಯ ವಸ್ತುವಾದ ಧಾತುವಿನ ವಿವರಣೆ ಎಂದರೆ, ಅದು ಎಲ್ಲರೂ ಪ್ರೀತಿಸುವ ಶ್ರೀ ಕೃಷ್ಣನ ಶಕ್ತಿ.’

ಈ ವಿವರಣೆಯನ್ನು ನಿರಾಕರಿಸುವ ಸಾಮರ್ಥ್ಯ ಯಾರಿಗಿದೆ ಎಂದು ನಾನು ಈಗ ನೋಡ ಬಯಸುತ್ತೇನೆ. ಕೃಷ್ಣನ ಅಗತ್ಯ ಶಕ್ತಿಯು ಶುದ್ಧ, ಅಲೌಕಿಕ ಮತ್ತು ಪೂಜಿಸಲ್ಪಡುವಂತಹುದು. ಆದುದರಿಂದ ಶ್ರೀ ಕೃಷ್ಣನ ಕುರಿತು ಅಳುಕದ, ಹಿಂಜರಿಯದ ನಂಬಿಕೆ ಮತ್ತು ಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಸುಮ್ಮನೆ ಕೃಷ್ಣನ ನಾಮಗಳನ್ನು ಜಪಿಸಿ, ಅವನ ಚರಣ ಕಮಲವನ್ನು ಪೂಜಿಸಿ ಮತ್ತು ಅವನ ನಾಮಗಳನ್ನು ಮಾತ್ರ ಕೇಳಿ.

ಚರಣ ಪೂಜೆ

`ಭಗವಂತನ ಚರಣ ಕಮಲವನ್ನು ಧ್ಯಾನಿಸಲು ನಿಮ್ಮ ಸಮಯವನ್ನು ವಿನಿಯೋಗಿಸಿ. ನಂದ ಮಹಾರಾಜನ ಪುತ್ರನ ಚರಣ ಕಮಲದ ಆಶ್ರಯ ಪಡೆಯಿರಿ. ಏಕೆಂದರೆ, ಸ್ವಲ್ಪ ನೀರು, ಹುಲ್ಲು ಅಥವಾ ಎಲೆಗಳಿಂದ ಅವನ ಚರಣ ಕಮಲವನ್ನು ಪೂಜಿಸಿದರೆ, ಕಾಲ, ಸಾವು ನಿಮ್ಮ ಬಳಿ ಸುಳಿಯುವುದಿಲ್ಲ. ಅಘಾಸುರ, ಬಕಾಸುರ ಮತ್ತು ಪೂತನಿಯಂತಹವರನ್ನು ಸಂಹರಿಸುವ ಮೂಲಕ ಅವರಿಗೆ ಮುಕ್ತಿ ನೀಡಿದ ಕೃಷ್ಣನನ್ನು ಪೂಜಿಸಿ. ಅಜಾಮಿಳನು ಸಾವಿನ ಸಮಯದಲ್ಲಿ ತನ್ನ ಮಗ ನಾರಾಯಣನನ್ನು ಕರೆದ. ಪಾಪದ ಬದುಕಿದ್ದರೂ ಕೂಡ, ಭಗವಂತನ ಚರಣ ಕಮಲವನ್ನು ಪೂಜಿಸಿ ಸ್ಮರಿಸಿಕೊಂಡದ್ದರಿಂದ ಅವನು ತನ್ನ ಮಗನ ಮೇಲಿನ ಮಮತೆಯನ್ನು ಬಿಟ್ಟು ಆಧ್ಯಾತ್ಮಿಕ ಆಗಸ ವೈಕುಂಠ ಲೋಕಕ್ಕೆ ತೆರಳಿದ.

`ಶ್ರೀ ಕೃಷ್ಣನ ಪರಮ ಚರಣ ಕಮಲದ ಆಶ್ರಯ ಪಡೆಯಿರಿ. ಶಿವ ಮತ್ತು ಲಕ್ಷ್ಮೀದೇವಿ ಸದಾ ಆ ಚರಣಗಳನ್ನು ಪೂಜಿಸಲು ಅಪೇಕ್ಷಿಸುತ್ತಾರೆ. ದೈನ್ಯ ಸ್ಥಿತಿಯಲ್ಲಿ ಅನಂತಶೇಷನು ಶ್ರೀ ಕೃಷ್ಣನ ಚರಣ ಕಮಲದ ಅದ್ಭುತ ಕೃಪೆಯನ್ನು ನಿರಂತರವಾಗಿ ಕೊಂಡಾಡುತ್ತಾನೆ. ನಿಮ್ಮ ದೇಹದೊಳಗೆ ಜೀವ ಇರುವವರೆಗೂ ಮತ್ತು ನಿಮ್ಮ ಕೈಕಾಲು ಹಾಗೂ ಮನಸ್ಸಿನಲ್ಲಿ ಶಕ್ತಿ ಇರುವವರೆಗೂ ಶ್ರೀ ಕೃಷ್ಣನ ಚರಣದ ಭಕ್ತಿ ಸೇವೆಯ ಆಶ್ರಯ ಪಡೆಯಿರಿ. ಕೃಷ್ಣ ನಿಮ್ಮ ತಂದೆ, ತಾಯಿ ಮತ್ತು ಅವನು ನಿಮ್ಮ ಜೀವ ಮತ್ತು ಆತ್ಮ. ಸುಮ್ಮನೆ ಅವನ ಚರಣವನ್ನು ಆಲಿಂಗಿಸಿ ನಿಮ್ಮ ಮನ, ಮಾತು ಮತ್ತು ದೇಹವನ್ನು ಅವನಿಗೆ ಸಂಪೂರ್ಣವಾಗಿ ಒಪ್ಪಿಸಿ.’

ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನೇ ಆದ ಶ್ರೀ ವಿಶ್ವಂಭರನು ತನ್ನ ಸೇವೆಯ ಭಕ್ತಿಮನಸ್ಥಿತಿಯನ್ನು ವಿವರಿಸಿದ. ಮಧ್ಯಾಹ್ನ ಮೀರಿದುದರ ಅರಿವೇ ಇಲ್ಲದಂತೆ ಅವನು ಗಂಟೆಗಟ್ಟಲೆ ಮುಂದುವರಿಸಿದ. ತೀವ್ರ ಆಸಕ್ತಿ ಮತ್ತು ವಶೀಕರಣವಾದವರಂತೆ ಶಿಷ್ಯರು ಕೇಳಿಸಿಕೊಂಡರು. ಯಾರಿಗೂ ಅಡ್ಡಿ ಅಥವಾ ಟೀಕೆ ಮಾಡಲು ಇಷ್ಟವಿರಲಿಲ್ಲ. ಈ ವಿದ್ಯಾರ್ಥಿಗಳು ಸಾಮಾನ್ಯರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರೆಲ್ಲ ಶ್ರೀಕೃಷ್ಣನ ಸೇವಕರು. ಇಲ್ಲವಾದರೆ, ಅವರು ಶ್ರೀಕೃಷ್ಣನಿಂದ ವೈಯಕ್ತಿಕವಾಗಿ ಬೋಧಿಸಲ್ಪಡುವುದು ಹೇಗೆ ಸಾಧ್ಯ? ಸ್ವಲ್ಪ ಸಮಯದ ಅನಂತರ ವಿಶ್ವಂಭರನು ಸಮಾಧಿ ಸ್ಥಿತಿಯಿಂದ ಹೊರ ಬಂದ. ಎಲ್ಲರ ಮುಖವನ್ನು ನೋಡುತ್ತ ಅವನು ಲಜ್ಜಿತನಾದ ಮತ್ತು ನಾಚಿದ.  `ಕ್ರಿಯಾಪದ ಮೂಲ ಕುರಿತ ನನ್ನ ವಿವರಣೆ ಹೇಗಿತ್ತು?’ ಎಂದು ಅವನು ಕೇಳಿದ. ವಿದ್ಯಾರ್ಥಿಗಳು ಉತ್ತರಿಸಿದರು, `ನೀವು ನಮಗೆ ನಿಜವನ್ನು  ಹೊರಗೆಡಹಿದ್ದೀರಿ. ಪದ ಅರ್ಥಗಳನ್ನು ಕುರಿತ ನಿಮ್ಮ ವಿವರಣೆಯನ್ನು ಯಾರಿಂದಲೂ ಅಲ್ಲಗಳೆಯುವುದು ಅಥವಾ ವಿರೋಧಿಸುವುದು ಅಸಾಧ್ಯ. ನೀವು ನೀಡಿರುವ ಎಲ್ಲ ವಿವರಗಳು ಶಾಶ್ವತ ನಿಜ. ನಮ್ಮ ಸಾಮಾನ್ಯ ಗ್ರಹಿಕೆಗೆ ನಾವು ಬಳಸುವ ಆಕರವು ವಿದ್ವಾಂಸರೆನಿಸಿಕೊಳ್ಳುವವರ ಪ್ರಸ್ತುತ ವ್ಯಾಕರಣ ಅಂಶಗಳಿಗೆ ಪೂರಕ. ಆದರೆ ಈಗ ನಮಗೆ ಇವು ಸರಿಯಾದ ಅರ್ಥವಲ್ಲ ಎಂಬುದು ಅರಿವಾಗಿದೆ.’

ಪರಿವರ್ತನೆ

ಭಗವಂತನೆಂದ, `ಪ್ರಾಣ ವಾಯುಗಳ ಕುರಿತ ನನ್ನ ಅವ್ಯವಸ್ಥೆಯು ನನ್ನ ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎಂಬುದನ್ನು ನೀವು ಯಾರಾದರೂ ವಿವರಿಸಬಲ್ಲಿರಾ?’

ವಿದ್ಯಾರ್ಥಿಗಳು ಉತ್ತರಿಸಿದರು, `ನೀವು ಕೃಷ್ಣನ ಪವಿತ್ರ ನಾಮದ ವೈಭವವನ್ನು ಸದಾ ವಿವರಿಸಿರುವಿರಿ. ನಿಮ್ಮ ವ್ಯಾಖ್ಯಾನ, ನಿರೂಪಣೆ ಮತ್ತು ಭಾವಾರ್ಥಗಳೆಲ್ಲ ಶ್ರೀ ಕೃಷ್ಣ ಮತ್ತು ಅವನ ಅಲೌಕಿಕ ಶಕ್ತಿಗಳನ್ನು ವಿವರಿಸಿವೆ. ಅಂತಹ ಸಿದ್ಧಾಂತ ವಿಷಯಗಳನ್ನು ಯಾರು ಅರ್ಥಮಾಡಿಕೊಳ್ಳಬಲ್ಲರು? ಕೃಷ್ಣ ಲೀಲ ಮತ್ತು ಕೃಷ್ಣನ ಪವಿತ್ರ ನಾಮದಂತಹ ಅಲೌಕಿಕ ವಿಷಯಗಳನ್ನು ಕೇಳುತ್ತಿದ್ದ‌ಂತೆ ನಿಮ್ಮಲ್ಲಿ ನಾವು ಕಾಣುವ ಪರಿವರ್ತನೆಯು ಎಷ್ಟು ಅದ್ಭುತವೆಂದರೆ ನೀವು ಸಾಮಾನ್ಯ ವ್ಯಕ್ತಿ ಎಂದು ಪರಿಗಣಿಸುವುದು ಸಾಧ್ಯವಿಲ್ಲ.’

ಗುರು-ಶಿಷ್ಯ ಬಾಂಧವ್ಯ

ಈ ಮಾತುಗಳು ಭಗವಂತನಿಗೆ ತೃಪ್ತಿ ನೀಡಿದವು. ಅವನು ಅವರಿಗೆೆ ಶುಭ ಹಾರೈಸುತ್ತ ನುಡಿದ, `ನನ್ನ ಪ್ರೀತಿಯ ಶಿಷ್ಯರೇ, ನೀವು ನಿಜವಾಗಿಯೂ ಸತ್ಯ ನುಡಿದಿದ್ದೀರಿ.  ನನ್ನ ಮಾತುಗಳು ಇತರರಿಗೆ ಅಲ್ಲ. ನಾನು ಯಾವಾಗಲೂ ಈ ರೀತಿ ಮಾತನಾಡುವೆ, ಏಕೆಂದರೆ ನಾನು ಕರಿ-ನೀಲಿ ಬಣ್ಣದಲ್ಲಿ ಹೊಳೆಯುತ್ತಿರುವ ಬಾಲಕ ಕೊಳಲು ನುಡಿಸುತ್ತಿರುವುದನ್ನು ಸತತವಾಗಿ ನೋಡುವೆ. ನಾನು ಕೇಳುವುದೆಲ್ಲ ಕೃಷ್ಣ ನಾಮ ಮತ್ತು ಎಲ್ಲೆಲ್ಲೂ ಗೋಲೋಕ ವೃಂದಾವನದ ಆಧ್ಯಾತ್ಮಿಕ ಜಗತ್ತನ್ನು ವೀಕ್ಷಿಸುತ್ತೇನೆ. ಆದುದರಿಂದ, ಇನ್ನು ಮುಂದೆ ನಿಮಗೆ ಬೋಧಿಸಲಾಗದೆಂದು ವಿನಯದಿಂದ ನಿಮ್ಮಲ್ಲಿ ಕ್ಷಮೆ ಕೋರುವೆ. ನೀವು ಯಾರ ಬಳಿಯಾದರೂ ಅಧ್ಯಯನ ನಡೆಸಲು ಸ್ವತಂತ್ರರು. ನಿಜ ಹೇಳಬೇಕೆಂದರೆ, ನನಗೆ ಶ್ರೀ ಕೃಷ್ಣ, ಅವನ ನಾಮ ಮತ್ತು ಅವನ ಲೀಲೆಗಳ ಹೊರತಾಗಿ ಬೇರೆ ಏನೂ ಮಾತನಾಡಲಾಗದು. ಹೀಗಾಗಿ, ಇಂತಹ ಸನ್ನಿವೇಶದಲ್ಲಿ, ನಿಮಗೆ ಬೋಧಿಸಲು ನನಗೆ ಸಾಧ್ಯವಿಲ್ಲ.’

ಅನಂತರ ಶ್ರೀ ವಿಶ್ವಂಭರನು ತನ್ನ ಪುಸ್ತಕಗಳನ್ನು ಕಟ್ಟಿ ತನ್ನ ಶಿಷ್ಯರಿಗೆ ನೀಡಿದನು. ಅವನ ಕಣ್ಣಲ್ಲಿ ಜಲಧಾರೆ ಹರಿಯುತ್ತಿತ್ತು. ಆಮೇಲೆ ವಿದ್ಯಾರ್ಥಿಗಳೂ ತಮ್ಮ ನಿರ್ಧಾರ ಪ್ರಕಟಿಸಿದರು, `ನಿಮ್ಮ ಅಪೇಕ್ಷೆಯನ್ನೇ ಅನುಸರಿಸಲು ನಾವೂ ನಿರ್ಧರಿಸಿದ್ದೇವೆ. ಅಂದರೆ ಅಧ್ಯಯನ ಮುಂದುವರಿಕೆಯನ್ನು ನಿಲ್ಲಿಸಲು ತೀರ್ಮಾನಿಸಿದ್ದೇವೆ. ನಿಮ್ಮ ಬಳಿ ಕಲಿತ ಮೇಲೆ ನಿಮ್ಮಂತೆಯೇ ವಿವರಿಸುವ  ಮತ್ತು ಬೋಧಿಸುವವರನ್ನು ನಾವು ಹೇಗೆ ಕಾಣುವುದು?’ ಗುರುವಿನೊಂದಿಗಿನ ಅಗಲಿಕೆಯನ್ನು ಸಹಿಸಲಾರದ ಶಿಷ್ಯರು ದುಃಖಿಸಿದರು. ಅವರೆಂದರು. `ನಿಮ್ಮಿಂದ ಕೇಳಿದ ಅಮೂಲ್ಯ ವಿವರಣೆಗಳನ್ನು ಜನ್ಮ ಜನ್ಮಾಂತರಕ್ಕೆ, ಧ್ಯಾನಕ್ಕಾಗಿ, ನಮ್ಮ ಹೃದಯದಲ್ಲಿ ಭದ್ರವಾಗಿರಿಸಿಕೊಳ್ಳ ಬಯಸುತ್ತೇವೆ. ಮುಂದಕ್ಕೆ ಓದುವುದರಿಂದ ಆಗುವ ಪ್ರಯೋಜನವೇನು? ಮತ್ತು ಯಾರ ಬಳಿ ಹೋಗೋಣ? ನಿಮ್ಮ ಬಳಿ ಕಲಿತಿರುವುದು ನಮಗೆ ಸಾಕು.’

ಭಾವೋದ್ರೇಕಗೊಂಡ ಅವರು ಕೈಜೋಡಿಸಿ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿ ತಮ್ಮ ಪುಸ್ತಕಗಳನ್ನು ಕಟ್ಟಿದರು. ಶಿಷ್ಯರು ಅಮಿತ ಆನಂದದಿಂದ ಶ್ರೀ ಹರಿ ನಾಮ ಕೂಗಿದರು. ಶ್ರೀ ವಿಶ್ವಂಭರನು ತನ್ನ ಶಿಷ್ಯರನ್ನು ಆಲಿಂಗಿಸಿಕೊಂಡು ಅಳಲಾರಂಭಿಸಿದ.

ಎಲ್ಲರೂ ಆನಂದದ ಅಲೆಯಲ್ಲಿ ಮುಳುಗಿದರು. ಪರಮಾನಂದದಿಂದ ಅವರು ಗದ್ಗದಿತರಾದರು. ಅನಂತರ ಶಚೀದೇವಿಯ ಪುತ್ರ ಶ್ರೀ ಚೈತನ್ಯನು ಅವರನ್ನು ಆಶೀರ್ವದಿಸಿ ನುಡಿದ, `ನಾನು ಎಂದಾದರೂ ಶ್ರೀ ಕೃಷ್ಣನ ನಿಜವಾದ ಸೇವಕನಾದರೆ, ಆಗ ನಿಮ್ಮ ಎಲ್ಲ ಅಪೇಕ್ಷೆಗಳು ಫಲಿಸಲಿ ಎಂದು ಹಾರೈಸುವೆ. ನೀವೆಲ್ಲರೂ ಶ್ರೀ ಕೃಷ್ಣನ ಆಶ್ರಯ ಪಡೆಯಿರಿ ಮತ್ತು ಶ್ರೀ ಕೃಷ್ಣನ ಪವಿತ್ರ ನಾಮವನ್ನು ಜಪಿಸಿ. ಸದಾ ಕೃಷ್ಣನ ಹೆಸರನ್ನು ಕೇಳಿರಿ ಮತ್ತು ಕೃಷ್ಣನು ನಿಮ್ಮ ಅಮೂಲ್ಯ ವಸ್ತು, ನಿಮ್ಮ ಜೀವ ಹಾಗೂ ಆತ್ಮವಾಗಲಿ. ಈವರೆಗೆ ನೀವು ಓದಿರುವುದು ಸಾಕು. ಇನ್ನು ಅಧ್ಯಯನದ ಅಗತ್ಯವಿಲ್ಲ. ಈಗ, ನೀವೆಲ್ಲ ಒಂದೆಡೆ ಸೇರಿ ಶ್ರೀ ಕೃಷ್ಣನ ನಾಮವನ್ನು ಜಪಿಸಿ. ಕೃಷ್ಣನ ಕೃಪೆಯಿಂದ, ಎಲ್ಲ ಧರ್ಮ ಗ್ರಂಥಗಳ ಅರ್ಥ, ಉದ್ದೇಶವು ನಿಮ್ಮಲ್ಲಿ ಸ್ಪಷ್ಟಗೊಳ್ಳಲಿ. ಜನ್ಮ ಜನ್ಮಾಂತರಕ್ಕೂ ನೀವೆಲ್ಲಾ ನನ್ನ ಪ್ರೀತಿಯ ಮಿತ್ರರು.’

ಭಗವಂತನ ಮಾತು ಶಿಷ್ಯರ ಕಿವಿಗಳಿಗೆ ಅಮೃತ ಸಿಂಚನ ನೀಡಿತು, ಅವರಿಗೆ ಇದು ಸಂತೋಷ ಉಂಟುಮಾಡಿತು. ಅವರೆಲ್ಲ ಶ್ರೀ ಕೃಷ್ಣನ ಶಾಶ್ವತ ಸೇವಕರು.

ಸಂಕೀರ್ತನೆಗೆ ಸಲಹೆ

ಅಗಲಿಕೆಯ ಭಯದಿಂದ ಭಗವಂತನ ಶಿಷ್ಯರು ಭಾವೋದ್ರೇಕಗೊಂಡರು ಮತ್ತು ದುಃಖಿತರಾದರು. ಇದರಿಂದ ಮನ ಕರಗಿದ ಭಗವಂತನು ಸಾಂತ್ವನ ನುಡಿಗಳನ್ನಾಡಿದ, `ಈಗ ನೀವು ಕೃಷ್ಣನ ಪವಿತ್ರ ನಾಮವನ್ನು ಜಪಿಸುತ್ತ ಹಾಡುತ್ತ ನೀವು ನಿಮ್ಮ ಅಧ್ಯಯನದ ಉದ್ದೇಶವನ್ನು ಸಾಫಲ್ಯಗೊಳಿಸಬಹುದು.’

ಆಗ ಶಿಷ್ಯರು ಕೇಳಿದರು, `ಪ್ರಭುವೇ, ಈ ಸಂಕೀರ್ತನ ಹೇಗೆ ಮಾಡುವುದೆಂದೇ ನಮಗೆ ತಿಳಿಯದು. ನಮಗೆ ಹೇಳಿಕೊಡಿ.’

ಭಗವಂತ ಹಾಡಲಾರಂಭಿಸಿದ, `ಹರಯೇ ನಮಃ, ಕೃಷ್ಣ ಯಾದವಾಯ ನಮಃ, ಗೋಪಾಲ ಗೋವಿಂದ ರಾಮ ಶ್ರೀ ಮಧುಸೂದನ’ ಅನಂತರ  ಶ್ರೀ ವಿಶ್ವಂಭರನು ಸುಂದರ ಕೀರ್ತನೆಯಲ್ಲಿ ಚಪ್ಪಾಳೆ ತಟ್ಟುತ್ತ ತನ್ನ ವಿದ್ಯಾರ್ಥಿಗಳ ನೇತೃತ್ವವಹಿಸಿದ. ಶ್ರೀ ವಿಶ್ವಂಭರನು ದೇವರು ಮತ್ತು ಶ್ರೀ ಕೃಷ್ಣ ಪವಿತ್ರ ನಾಮದ ಕೀರ್ತನೆಯ ಪ್ರಚಾರಕ. ಅವನು ಈಗ ತನ್ನ ಶಿಷ್ಯರಿಂದ ಸುತ್ತುವರಿಯಲ್ಪಟ್ಟಿದ್ದ ಮತ್ತು ಪವಿತ್ರ ನಾಮವನ್ನು ಜಪಿಸಿದ. ಅವನು ಆನಂದಪರವಶತೆಯಲ್ಲಿದ್ದ ಮತ್ತು ತನ್ನದೇ ಹೆಸರಿನ ಅಮೃತದ ಸವಿ ಅನುಭವಿಸುತ್ತಿದ್ದ. ತನ್ನ ಸುತ್ತಲಿನ ಅರಿವೇ ಇಲ್ಲದಂತೆ ನೆಲದ ಮೇಲೆ ಹೊರಳಾಡುತ್ತಿದ್ದ. ಅವನು ಹೇಳುತ್ತಲೇ ಇದ್ದ, `ಹಾಡಿರಿ!’ `ಹಾಡಿರಿ’. ಅವನು ನೆಲದ ಮೇಲೆ ಬಿದ್ದಾಗಲೆಲ್ಲ ಭೂಮಿ ಬಿರಿಯುವಂತೆ ಕಾಣುತ್ತಿತ್ತು.

ಶ್ರೀ ನಿಮಾಯ್ ಪಂಡಿತನ ಮನೆಯಿಂದ ಬರುತ್ತಿದ್ದ ಈ ಹರ್ಷೋದ್ಗಾರವನ್ನು ಕೇಳಿ ನವದ್ವೀಪದ ಜನರು ಅಲ್ಲಿಗೆ ಧಾವಿಸಿದರು. ನೆರೆ ಮನೆಗಳಲ್ಲಿದ್ದ ವೈಷ್ಣವರು ಗಟ್ಟಿ ಧ್ವನಿಯ ಕೀರ್ತನೆ ಕೇಳಿ ಶಚೀದೇವಿ ಮನೆಗೆ ಬಂದರು. ವೈಷ್ಣವರು ಭಗವಂತನ ಪರಮಾನಂದದ ಪ್ರಜ್ಞಾಶೂನ್ಯ ಸ್ಥಿತಿಯನ್ನು ನೋಡಿ ಚಕಿತರಾದರು. ಸಂತೋಷದಿಂದ ಬೀಗಿದ ಅವರು `ಅಂತೂ ನವದ್ವೀಪದಲ್ಲಿ ಕೀರ್ತನೆಯು ಅವತರಿಸಿತು’ ಎಂದು ಉದ್ಗರಿಸಿದರು. ಅವರು ಯೋಚಿಸಿದರು, `ಇಡೀ ವಿಶ್ವದಲ್ಲಿ ಇಂತಹ ಅಪರೂಪದ ಭಕ್ತಿ ಸೇವೆಯ ಆಚರಣೆ ಮತ್ತು ಪ್ರಚಾರ ಕಾರ್ಯವಿದೆಯೇ?

ಇದೇ ವಿಶ್ವಂಭರನು ಅಹಂಕಾರದ ಪ್ರತೀಕವಾಗಿದ್ದ. ಆದರೆ ಈಗ ಅವನು ಸ್ವಪ್ರೇರಣೆಯಿಂದ ಸೃಷ್ಟಿಸುವ ಭಕ್ತಿಯ ಆನಂದ- ಪರವಶತೆಯನ್ನು ಸಾಧಿಸಲು  ನಾರದ ಮುನಿ ಮತ್ತಿತರ ಶ್ರೇಷ್ಠ ಭಕ್ತರಿಗೂ ಸಾಧ್ಯವಾಗದು. ಹಿಂದೆ ಅಂತಹ ಅಹಂಕಾರದ ವ್ಯಕಿಯಾಗಿದ್ದವನೊಬ್ಬ ಈಗ ಇಂತಹ ಭಕ್ತಿಯನ್ನು ಪ್ರದರ್ಶಿಸಿದರೆ, ಕೃಷ್ಣನ ಮನದಲ್ಲಿ ಏನಿದೆ ಮತ್ತು ಭವಿಷ್ಯವೇನು ಎಂಬುದು ನಮಗೆ ಅರ್ಥವಾಗದು.’

ಸ್ವಲ್ಪ ಸಮಯದ ಅನಂತರ ಶ್ರೀ ವಿಶ್ವಂಭರನು ಸಮಾಧಿಸ್ಥಿತಿಯಿಂದ ಬಾಹ್ಯ ಜಗತ್ತಿಗೆ ಮರಳಿ, `ಕೃಷ್ಣ, ಕೃಷ್ಣ’ ಎಂದು ಹೇಳತೊಡಗಿದ. ಬಾಹ್ಯ ಪ್ರಜ್ಞೆ ಮರಳಿದ್ದರೂ ಅವನು ಈ ಸಾಮಾನ್ಯ ಜಗತ್ತಿನ ಬಗೆಗೆ ಏನೂ ಮಾತನಾಡಲಿಲ್ಲ. ಅವನು ಎಲ್ಲ ವೈಷ್ಣವರನ್ನು ಆಲಿಂಗಿಸಿಕೊಂಡು ಅಳುತ್ತಿದ್ದ. ಭಾವೋದ್ರೇಕಗೊಂಡಿದ್ದ ಭಗವಂತನನ್ನು ವೈಷ್ಣವರೇ ಸಾಂತ್ವನಗೊಳಿಸಿದರು. ಸಂತೋಷದಿಂದ ಬೀಗುತ್ತ ಅವರು ಭಗವಂತನ ಮನೆಯಿಂದ ತಮ್ಮ ಮನೆಗಳಿಗೆ ತೆರಳಿದರು.

ಭಗವಂತನ ಕೃಷ್ಣ ಪ್ರೇಮದಿಂದ ಪ್ರಭಾವಿತರಾದ ಅವನ ಅನೇಕ ಶಿಷ್ಯರು ಲೌಕಿಕ ಅಸ್ತಿತ್ವದಿಂದ ಕಳಚಿಕೊಂಡು ದೇವೋತ್ತಮನ ಚರಣ ಕಮಲಗಳ ಬಗೆಗೆ ಪ್ರೀತಿ ಬೆಳೆಸಿಕೊಂಡು ತ್ಯಾಗದ ಪಥ ಸ್ವೀಕರಿಸಿದರು.

ಶ್ರೀ ಚೈತನ್ಯ ಮಹಾಪ್ರಭುಗಳು ಪರಿಪೂರ್ಣತೆಯ ಪ್ರತೀಕವಾಗಿ ಶ್ರೀ ಕೃಷ್ಣನ ಪವಿತ್ರ ನಾಮದ ಸಂಕೀರ್ತನೆಯನ್ನು ವೈಭವದಿಂದ ಆರಂಭಿಸಿದರು. ತಾನೇ ಪ್ರಕಟಗೊಂಡು ದೇವೋತ್ತಮನು ತನ್ನದೇ ಹೆಸರಿನ ಅಮೃತವನ್ನು ಹಂಚಲು ಆರಂಭಿಸಿದ. ಈ ರೀತಿ ಅವನು ಎಲ್ಲ ವೈಷ್ಣವ ಭಕ್ತರ ಸಂಕಷ್ಟಗಳನ್ನು ತೊಡೆದುಹಾಕಿದ.

(ಮುಂದುವರಿಯುವುದು)
Leave a Reply

Your email address will not be published. Required fields are marked *