Search
Friday 7 August 2020
  • :
  • :

ಸುವರ್ಣಾವತಾರ ಭಾಗ – 19

ಗಯಾ-ಧಾಮದಿಂದ ಆಗಷ್ಟೇ ಮರಳಿ ಬಂದ ಶ್ರೀ ವಿಶ್ವಂಭರನಿಗೆ ಇಡೀ ನವದ್ವೀಪವೇ ಭವ್ಯ ಸ್ವಾಗತ ಕೋರಿತು. ಮಿತ್ರರು ಮತ್ತು ಬಂಧುಗಳು ಭಗವಂತನನ್ನು ಕಾಣಲು ಓಡೋಡಿ ಬಂದರು. ಎಲ್ಲರ ಬಳಿ ಮೃದು ಸ್ವರದಲ್ಲಿ ಮಾತನಾಡಿದ ಅವನನ್ನು ಕಂಡು ಜನರ ಆನಂದಕ್ಕೆ ಎಣೆಯೇ ಇರಲಿಲ್ಲ. ಅವರೆಲ್ಲ ಅವನನ್ನು ಸುತ್ತುವರಿದು ಮನೆಗೆ ಕರೆ ತಂದರು. ಅವನು ತನ್ನ ಯಾತ್ರೆಯ ಅನುಭವವನ್ನು ಹೇಳಲಾರಂಭಿಸಿದ.

ಭಗವಂತನೆಂದ, `ನಿಮ್ಮ ಶುಭಾಶೀರ್ವಾದದಿಂದ ನಾನು ಗಯಾ-ಧಾಮಕ್ಕೆ ಭೇಟಿ ನೀಡುವುದು ಸಾಧ್ಯವಾಯಿತು ಮತ್ತು ಯಾವುದೇ ತೊಂದರೆ ಇಲ್ಲದೆ ವಾಪಸಾಗುವಂತಾಯಿತು.’ ಅತ್ಯಂತ ವಿನಯದಿಂದ ಮಾತನಾಡಿ ಎಲ್ಲರನ್ನೂ ಸಂತೋಷಪಡಿಸಿದ. ಅವನ ಸೌಜನ್ಯ, ಸಭ್ಯತೆ ಕಂಡು ಅವರೆಲ್ಲ ಸಂತೃಪ್ತರಾದರು.

ಹಿರಿಯರು ಅವನ ಶಿರದ ಮೇಲೆ ತಮ್ಮ ಹಸ್ತಗಳನ್ನಿಟ್ಟು `ದೀರ್ಘಾಯುಷ್ಯನಾಗು’ ಎಂದು ಆಶೀರ್ವದಿಸಿದರು. ಅವನ ಶುಭಾಕಾಂಕ್ಷಿಗಳು ಅವನ ದೇಹದ ವಿವಿಧ ಭಾಗಗಳನ್ನು ಸ್ಪರ್ಶಿಸುತ್ತ ಅವನ ರಕ್ಷಣೆಗೆ ಮಂತ್ರ ಪಠಿಸಿದರು. ಇನ್ನೂ ಕೆಲವರು `ಆ ಗೋವಿಂದ ನಿನಗೆ ಪರಮಾನಂದ, ಶಾಂತಿ ಕರುಣಿಸಲಿ’ ಎಂದು ಹಾರೈಸಿದರು.

ಮಗನು ಯಾತ್ರೆಯಿಂದ ಸುಖವಾಗಿ ವಾಪಸಾಗಿರುವುದನ್ನು ಕಂಡ ಶಚೀಮಾತೆಯ ಆನಂದವನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ತನ್ನ ದೇವರ ವದನ ಕಂಡ ವಿಷ್ಣುಪ್ರಿಯಳ ಮುಖ ಸಂತೋಷದಿಂದ ಬೀಗಿತು ಮತ್ತು ಅವಳ ಒಂಟಿತನದ ಮೋಡ ಚದುರಿತು. ನಿಮಾಯ್ ಯಾತ್ರೆಯಿಂದ ಮರಳಿದ ಸುದ್ದಿ ಕೇಳಿ ಅವನ ಮಾವನ ಮನೆಯಲ್ಲಿ ಕೂಡ ಆನಂದ ಸಾಗರ ಹರಿಯಿತು. ವಿಶೇಷವಾಗಿ ವೈಷ್ಣವರು ಸಂತೋಷದಿಂದ ಭಗವಂತನ ಬಳಿಗೆ ಓಡಿ ಬಂದರು. ಶ್ರೀ ವಿಶ್ವಂಭರನು ಎಲ್ಲರ ಬಳಿಯೂ ಅತ್ಯಂತ ವಿನಯದಿಂದ ಮಾತನಾಡಿದ. ಅನಂತರ ಅವರನ್ನು ಬೀಳ್ಕೊಟ್ಟು ತನ್ನ ಕೋಣೆಗೆ ಬಂದ. ತನ್ನ ಗಯಾ ಯಾತ್ರೆಯ ರಹಸ್ಯ ವಿಷಯಗಳನ್ನು ಚರ್ಚಿಸಲು ಕೆಲವು ಭಕ್ತರನ್ನು ಒಳಗೆ ಕರೆದೊಯ್ದ.

ಭಗವಂತನೆಂದ, `ನನ್ನ ಪ್ರೀತಿಯ ಗೆಳೆಯರೇ, ಸತತವಾಗಿ ಶ್ರೀಕೃಷ್ಣನನ್ನು ನೆನಪು ಮಾಡಿದ ಅದ್ಭುತ ಸ್ಥಳಗಳ ಬಗ್ಗೆ ನಿಮಗೆ ತಿಳಿಸಲಿಚ್ಛಿಸುತ್ತೇನೆ. ನಾನು ಗಯಾ ಪ್ರವೇಶಿಸಿದ ಕೂಡಲೇ ನನಗೆ ಜಪ, ಶಂಖ ಮತ್ತು ಗಂಟೆಯ ನಿನಾದ ಕೇಳಿಸಿತು. ನೂರಾರು ಬ್ರಾಹ್ಮಣ ಪೂಜಾರಿಗಳು ವೇದ ಪಠಣ ಮಾಡುತ್ತಿದ್ದರು. ಅವರು ಕೃಷ್ಣನನ್ನು ಮತ್ತು ಅವನು ತನ್ನ ಚರಣ ಕಮಲದ ಅಚ್ಚೊತ್ತಿದ್ದ ಯಾತ್ರಾ ಸ್ಥಳದ ವೈಭವವನ್ನು ವರ್ಣಿಸುತ್ತಿದ್ದರು.’

ಅವರೆಂದರು, `ಭಗವಂತನು ತನ್ನ ಪಾದಗಳನ್ನು ತೊಳೆದುಕೊಂಡ ಪವಿತ್ರ ಸ್ಥಳಕ್ಕೆ ಸ್ವಾಗತ. ಹಿಂದಿನ ಯುಗಗಳಲ್ಲಿ , ಶ್ರೀ ಕೃಷ್ಣನು ಗಯಾಕ್ಕೆ ದರ್ಶನ ನೀಡಿದ್ದಾಗ ಅವನು ಈ ಸ್ಥಳದಲ್ಲಿ ತನ್ನ ಅಲೌಕಿಕ ಚರಣಗಳನ್ನು ತೊಳೆದುಕೊಂಡಿದ್ದ. ಭಗವಂತನ ಚರಣದ ಜಲ ಸ್ಪರ್ಶದಿಂದ ಗಂಗೆಯು ಹೆಚ್ಚು ಮಹಿಮೆ ಮತ್ತು ಪಾವಿತ್ರ್ಯ ಪಡೆದುಕೊಂಡಳು. ಈ ಜಲವು ಶ್ರೀ ಕೃಷ್ಣನ ಚರಣ ಕಮಲದಿಂದ ಹರಿದು ಬಂದದ್ದು ಎಂಬುದನ್ನು ಗ್ರಹಿಸಿಕೊಂಡ ಶಿವನು ಈ ಜಲವನ್ನು ತನ್ನ ಶಿರದ ಮೇಲೆ ಇಟ್ಟುಕೊಂಡಿದ್ದಾನೆ. ಆದುದರಿಂದ ಈ ಯಾತ್ರಾಸ್ಥಳವು ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದ್ದು, ಪಾದೋದಕ ತೀರ್ಥ ಎಂದು ಪ್ರಸಿದ್ಧಿಯಾಗಿದೆ –  ಭಗವಂತನು ತನ್ನ ಚರಣ ಕಮಲದ ಜಲವನ್ನು ಹರಿಸಿದ ಯಾತ್ರಾ ಸ್ಥಳ.’

ಭಾವ ಪರವಶತೆ

ಗಯಾ-ಧಾಮ ಮತ್ತು ಪಾದಪದ್ಮ-ತೀರ್ಥದ ಹೆಸರನ್ನು ಹೇಳುತ್ತಲೇ ಶ್ರೀ ವಿಷ್ಣುವಿನ ಪಾದ ಕಮಲದ ನೆನಪಾಗಿ ಭಗವಂತನಾದ ಶ್ರೀ ಗೌರಾಂಗನು ಭಾವಪರವಶನಾದನು. ಅವನ ನಯನಗಳಿಂದ ಅಶ್ರುಧಾರೆ ಹರಿಯಿತು. ಅವನು ಸಂಪೂರ್ಣವಾಗಿ ಅಶಾಂತನಾದನು. ತನ್ನ ಆಧ್ಯಾತ್ಮಿಕ ಭಾವೋದ್ರೇಕವನ್ನು ತಡೆದುಕೊಳ್ಳಲಾಗದೆ ಅವನು ಶ್ರೀ ಕೃಷ್ಣನನ್ನು ಒಂದೇ ಸಮನೆ ಕರೆಯತೊಡಗಿದ. ಕೃಷ್ಣ-ಪ್ರೇಮದ ಆ ಕಣ್ಣೀರು ಇಡೀ ಹೂ ತೋಟಕ್ಕೆ ನೀರುಣಿಸುವಂತಿತ್ತು.

ಸತತವಾಗಿ ಕೃಷ್ಣನ ನಾಮಸ್ಮರ‌ಣೆ ಮಾಡುತ್ತ ಅವನು ನಿಟ್ಟುಸಿರುಬಿಟ್ಟ. ಅವನ ದೇಹ ರೋಮಾಂಚನಗೊಂಡಿತು. ಅವನಿಗೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗಲಿಲ್ಲ  ಮತ್ತು ತರಗೆಲೆಯಂತೆ ನಡುಗಿದ. ಅಲ್ಲಿದ್ದ ಶ್ರೀಮಾನ್ ಪಂಡಿತ ಮತ್ತು ಇತರರು ಕೃಷ್ಣ ಪ್ರೇಮದ ಅಭಿವ್ಯಕ್ತಿಯನ್ನು ಕಂಡು ಚಕಿತರಾದರು. ಗಂಗೆಗೆ ಮತ್ತೊಂದು ಮೂಲ ಲಭ್ಯವಾಯಿತೇನೋ ಎಂಬುವಂತೆ ಶ್ರೀ ನಿಮಾಯ್ ಕಣ್ಣುಗಳಿಂದ ಜಲಧಾರೆ ಹರಿಯಿತು.

ಅವರೆಲ್ಲ ಯೋಚಿಸಲಾರಂಭಿಸಿದರು, `ಇದೆಂತಹ ದೃಶ್ಯ? ಭಗವಂತನು ಈ ರೀತಿ ನಡೆದುಕೊಂಡದ್ದನ್ನು ನಾವು ಎಂದೂ ನೋಡಿರಲಿಲ್ಲ. ಇಂತಹ ಆಧ್ಯಾತ್ಮಿಕ ಭಾವೋದ್ರೇಕವನ್ನು ನೋಡಲು ಅವಕಾಶ ಕಲ್ಪಿಸಿ ಶ್ರೀ ಕೃಷ್ಣನು ನಮ್ಮ ಮೇಲೆ ಕೃಪೆ ತೋರಿರಬೇಕು.’ ಸ್ವಲ್ಪ ಸಮಯದ ಅನಂತರ, ಅವನಿಗೆ ಬಾಹ್ಯ ಪ್ರಜ್ಞೆ ಮರಳಿತು. ಅವನು ಮತ್ತೆ ಹೇಳತೊಡಗಿದ, `ಪ್ರೀತಿಯ ಮಿತ್ರರೇ, ದಯೆಯಿಟ್ಟು ನಿಮ್ಮ ಮನೆಗಳಿಗೆ ತೆರಳಿ. ಆದರೆ ನಾನು ನಾಳೆ ಏಕಾಂತ ಸ್ಥಳದಲ್ಲಿ ನಿಮ್ಮೊಡನೆ ರಹಸ್ಯವಾಗಿ ಮಾತನಾಡಬಯಸುತ್ತೇನೆ. ನನ್ನ ಹೃದಯದಲ್ಲಿನ ತೀವ್ರ ಸಂತಾಪವನ್ನು ಹೊರಗೆಡಹುತ್ತೇನೆ. ಶ್ರೀಮಾನ್, ನೀವು ಮುರಾರಿ ಮತ್ತು ಸದಾಶಿವ ಅವರೊಂದಿಗೆ  ಶುಕ್ಲಾಂಬರ ಬ್ರಹ್ಮಚಾರಿ ಮನೆಗೆ ಸ್ವಲ್ಪ ಬೇಗನೆ ಬನ್ನಿ.’

ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದ ಮೇಲೆ ಭಗವಂತನು ತನ್ನದೇ ಜಗತ್ತಿನಲ್ಲಿ ಮಗ್ನನಾದ. ಅವ‌ನ ದೇಹದಲ್ಲಿ ಕೃಷ್ಣ-ಪ್ರೇಮದ ಆತ್ಮ ರೂಪುಗೊಂಡಿತ್ತು ಮತ್ತು ಅವನಿಗೆ ಸಾಮಾನ್ಯವಾದ ಯಾವುದೂ ರುಚಿಸದಾಯಿತು. ಮಗನಲ್ಲಾಗಿದ್ದ ಹೊಸ ಪರಿವರ್ತನೆ ಶಚೀಮಾತೆಗೆ ಅರ್ಥವಾಗಲಿಲ್ಲ. ಆದರೆ ಮಗ ಹತ್ತಿರದಲ್ಲಿದ್ದಾನೆ ಎಂಬುದಷ್ಟೇ ಅವಳ ಸಂತೋಷಕ್ಕೆ ಕಾರಣವಾಗಿತ್ತು. ಮಗ ಕೃಷ್ಣನ ಹೆಸರನ್ನು ಕೂಗುವುದನ್ನು ಮತ್ತು ಅವನ ಕಣ್ಣಿನಿಂದ ಸತತವಾಗಿ ಹರಿಯುತ್ತಿದ್ದ ಕೃಷ್ಣ-ಪ್ರೇಮದ ಅಶ್ರುವನ್ನು ಅವಳು ಕಂಡಳು. ಶ್ರೀ ಗೌರಾಂಗ ಕರೆಯುತ್ತಿದ್ದ, `ನನ್ನ ಪ್ರೀತಿಯ ಕೃಷ್ಣನೆಲ್ಲಿ?’ ಇದು ಕೃಷ್ಣ ಪ್ರೇಮದಲ್ಲಿ ವಿಯೋಗದ ಅವನ ಮನಸ್ಥಿತಿಯನ್ನು ತೀವ್ರಗೊಳಿಸಿತು. ಶಚೀದೇವಿಗೆ ಭಗವಂತನ ಅಂತಹ ಚಟುವಟಿಕೆಗಳು ಅವೇದ್ಯವಾಗಿತ್ತು. ಆದುದರಿಂದ ಅವಳು ಕೈ ಜೋಡಿಸಿ ಶ್ರೀ ಗೋವಿಂದನ ಆಶ್ರಯಕ್ಕೆ ಪ್ರಾರ್ಥನೆ ಸಲ್ಲಿಸಿದಳು. ಶ್ರೀ ಚೈತನ್ಯರು ತಮ್ಮ ನಿಜವಾದ ಗುರುತನ್ನು ಹೊರಗೆಡಹುವ ಕಾಲ ಸಮೀಪಿಸುತ್ತಿತ್ತು. ಇಡೀ ಜಗತ್ತಿನಲ್ಲಿ ಆನಂದದ ಅಲೆ ಏಳುತ್ತಿತ್ತು. ಶ್ರೀ ಚೈತನ್ಯರು ಸತತವಾಗಿ ಕೃಷ್ಣ-ಪ್ರೇಮದ ಅಶ್ರುಧಾರೆ ಹರಿಸುತ್ತಿರುವ ವಿಷಯವು ಕ್ಷಿಪ್ರವಾಗಿ ವೈಷ್ಣವ ಭಕ್ತರಲ್ಲಿ ಹರಡಿತು. ಅವರೆಲ್ಲ ಅವನ ದರ್ಶನಕ್ಕಾಗಿ ಅವನ ಧಾಮದ ಮುಂದೆ ನೆರೆದರು. ಭಗವಂತನು ಅವರೊಂದಿಗೆ ವಿನಯವಾಗಿ ಮಾತನಾಡಿದ.

ಅವನು ವೈಷ್ಣವರಲ್ಲಿ ಕೋರಿದ, `ದಯೆಯಿಟ್ಟು ನೀವುಗಳೆಲ್ಲ ನಾಳೆ ಶುಕ್ಲಾಂಬರರ ಮನೆಯಲ್ಲಿ ನನ್ನನ್ನು ಭೇಟಿ ಮಾಡಿ. ನಾನು ನನ್ನ ದುಃಖ ಭರಿತ ಹೃದಯವನ್ನು ನಿಮ್ಮ ಮುಂದೆ ತೆರೆದಿಡುತ್ತೇನೆ.’

ಭಗವಂತನಲ್ಲಿ ಈ ಅದ್ಭುತ ಪರಿವರ್ತನೆಯನ್ನು – ಅಸಾಧಾರಣ ಕೃಷ್ಣ ಪ್ರೇಮ-ಕಂಡು ಶ್ರೀಮಾನ್ ಪಂಡಿತರಿಗೆ ಅತೀವ ಆನಂದ. ಮರುದಿನ ಮುಂಜಾನೆಯೇ ಶ್ರೀಮಾನ್ ಎಂದಿನಂತೆ ಹೂವು ಕಿತ್ತು ತರಲು ಶ್ರೀವಾಸ ಅವರ ಮನೆಗೆ ತೆರಳಿದರು. ಅಲ್ಲಿ ಮಲ್ಲಿಗೆ ಗಿಡವಿತ್ತು, ಅದು ಕಲ್ಪವೃಕ್ಷದಂತೆ. ಅಲ್ಲಿ ಎಷ್ಟು ಹೂವು ಕಿತ್ತರೂ ಅದು ಬರಡಾಗುತ್ತಿರಲಿಲ್ಲ. ಸದಾ ತಾಜಾ ಹೂವು ಇರುತ್ತಿತ್ತು. ಸಾಮಾನ್ಯವಾಗಿ ಭಕ್ತರೆಲ್ಲ ಹೂವು ಕೀಳಲು ಪ್ರತಿದಿನ ಅಲ್ಲಿ ಸೇರುತ್ತಿದ್ದರು ಮತ್ತು ಕೃಷ್ಣನ ಲೀಲೆಗಳ ಬಗೆಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ರೀತಿಯಾಗಿ ಗದಾಧರ, ಗೋಪಿನಾಥ, ರಾಮಾಯ್ ಮತ್ತು ಶ್ರೀವಾಸ ಅವರುಗಳು ಪ್ರತಿ ದಿನ ಬೆಳಗ್ಗೆ ಪರಸ್ಪರ ಆನಂದದ ಸಮಯ ಕಳೆಯುತ್ತಿದ್ದರು.

ಶ್ರೀಮಾನ್ ಪಂಡಿತ ಸಂತೋಷದಿಂದ ನಗುತ್ತಾ ಅಲ್ಲಿಗೆ ಬಂದರು. ಎಲ್ಲರೂ ಅವರನ್ನು ಸ್ವಾಗತಿಸುತ್ತ ಕೇಳಿದರು, `ನೀವು ಇಂದು ಇಷ್ಟು ಸಂತೋಷವಾಗಿರಲು ಕಾಣವೇನು?’ ಶ್ರೀಮಾನ್ ಮುಗುಳ್ನಗುತ್ತ ನುಡಿದರು, `ಖಂಡಿತ ಸಂತೋಷಕ್ಕೆ ಕಾರಣವಿದೆ. ನೀವು ಅದನ್ನು ಕೇಳಬೇಕು. ಅತ್ಯಂತ ಅದ್ಭುತ ಮತ್ತು ಅಸಾಧ್ಯವಾದುದು ನಡೆದಿದೆ! ನಿಮಾಯ್ ಪಂಡಿತನು ಶ್ರೇಷ್ಠ ವೈಷ್ಣವ ಭಕ್ತನಾಗಿದ್ದಾನೆ. ಅವನು ಗಯಾದಿಂದ ವಾಪಸಾಗಿದ್ದಾನೆಂದು ಕೇಳಿ ನಾನು ಸಂಜೆ ಅವನ ಭೇಟಿಗೆ ಹೋದೆ. ಅವನು ಎಲ್ಲರೊಡನೆ ಅತಿ ವಿನಯದಿಂದ ಮಾತನಾಡಿದ. ಅವನು ಅಹಂಕಾರ  ಅಥವಾ ಒರಟುತನವನ್ನು ಕಿಂಚಿತ್ತೂ ತೋರಲಿಲ್ಲ. ಅನಂತರ ಅವನು ವೈಷ್ಣವರನ್ನು ಪಕ್ಕಕ್ಕೆ ಕರೆದು ತನ್ನ ಯಾತ್ರೆ ಮತ್ತು ಕೃಷ್ಣನ ಕುರಿತ ತನ್ನ ಭಾವನೆಗಳನ್ನು ವಿವರಿಸತೊಡಗಿದ. ಶ್ರೀ ಕೃಷ್ಣನ ಚರಣ ಕಮಲ ಮತ್ತು ಪಾದಪದ್ಮ-ತೀರ್ಥ ಕುರಿತು ಹೇಳುವಾಗ ಅವನ ಕಣ್ಣಿನಿಂದ ಕೃಷ್ಣ-ಪ್ರೇಮದ ಧಾರೆ ಹರಿಯತೊಡಗಿತು. ಅವನ ದೇಹವು ಪರಮಾನಂದದ ಲಕ್ಷಣ, ನಡುಕ ಮತ್ತು ರೋಮಾಂಚನದಿಂದ ಪರವಶಗೊಂಡಿತ್ತು. ಕೃಷ್ಣನ ಹೆಸರನ್ನು ಕೂಗುತ್ತಿದಂತೆಯೇ ಅವನು ಪ್ರಜ್ಞಾಶೂನ್ಯನಾದ. ಪ್ರಜ್ಞೆ ಮರಳಿದಾಗ ಅವನು ಪದೇ ಪದೇ ಕೃಷ್ಣನನ್ನು ಕರೆಯುತ್ತಿದ್ದ ಮತ್ತು ಅವನ ವಿಯೋಗದಿಂದ  ಕಣ್ಣೀರಿಡುತ್ತಿದ್ದ – ಅವನ ಕಣ್ಣಿನಿಂದ ಗಂಗಾ ನದಿಯಂತೆ ಜಲಧಾರೆ ಹರಿಯುತ್ತಿತ್ತು!’ ಶ್ರೀಮಾನ್ ಪಂಡಿತ ಈ ವೈಷ್ಣವ ಸಭೆಯಿಂದ ಶುಕ್ಲಾಂಬರ ಬ್ರಹ್ಮಚಾರಿ ಅವರ ಮನೆಗೆ ಹೊರಟರು.

ಎಲ್ಲರೂ ಹೂವು ಕೀಳುತ್ತಿದ್ದಾಗ ಮೌನವಾಗಿ ಎಲ್ಲವನ್ನೂ ಕೇಳುತ್ತಿದ್ದ ಗದಾಧರ ಪಂಡಿತರು ಕೂಡ ಶುಕ್ಲಾಂಬರ ಬ್ರಹ್ಮಚಾರಿ ಮನೆಯತ್ತ ಧಾವಿಸಿದರು. ಅವರೆಂದುಕೊಂಡರು, `ಅವನು ಕೃಷ್ಣನ ಬಗೆಗೆ ಏನು ಹೇಳುತ್ತಾನೋ ಕೇಳೋಣ.’  ಅವರು ಅಲ್ಲಿಗೆ ತೆರಳಿ ಒಳಗೆ ಬಚ್ಚಿಟ್ಟುಕೊಂಡರು. ಸದಾಶಿವ, ಮುರಾರಿ, ಶ್ರೀಮಾನ್, ಶುಕ್ಲಾಂಬರ ಮತ್ತಿತರ ಶ್ರೇಷ್ಠ ಭಕ್ತರು ಆಗಲೇ ಅಲ್ಲಿ ಸೇರಿದ್ದರು.

ಕೃಷ್ಣ ಎಲ್ಲಿಗೆ ಹೋದ?

ಆಗ, ಬ್ರಾಹ್ಮಣರ ಮುಕುಟ ಮಣಿ ಶ್ರೀ ವಿಶ್ವಂಭರನು ಅಲ್ಲಿ ಪ್ರತ್ಯಕ್ಷನಾದ. ಅವರೆಲ್ಲ ಪರಸ್ಪರ ಶುಭ ಕೋರಿದರು. ಆದರೆ ಭಗವಂತನು ತನ್ನಲ್ಲೆ ತಾನು ಮುಳುಗಿಹೋಗಿದ್ದ. ವೈಷ್ಣವ ಭಕ್ತರ ಜೊತೆಗೂಡಿದ ಕೂಡಲೇ ಅವನು ಭಕ್ತಿಯ ಸ್ವರೂಪ ಮತ್ತು ಧಾರ್ಮಿಕ ಸೇವೆಯನ್ನು ಕೊಂಡಾಡುವ ಶ್ಲೋಕಗಳನ್ನು ಹೇಳತೊಡಗಿದ.

ಅವನೆಂದ, `ನಾನು ನನ್ನ ಪ್ರೀತಿಯ ಭಗವಂತನನ್ನು ಕಂಡೆ. ಆದರೆ ಅವನು ಅನಂತರ ಮಾಯವಾದ. ಅವನು ಯಾವ ದಿಕ್ಕಿನತ್ತ ಹೋದ?’ ಈ ರೀತಿ ಹೇಳುತ್ತ ಅವನು ಕೆಳಗೆ ಬಿದ್ದ. ಅವನು ಮನೆಯ ಕಂಬಗಳನ್ನು  ಆಲಿಂಗಿಸಿ `ಕೃಷ್ಣ ಎಲ್ಲಿ’ ಎಂದು ಕೇಳುತ್ತ ಪುನಃ ಕುಸಿದ. ಕೃಷ್ಣನ ಅಗಲಿಕೆಯಿಂದ ಭಗವಂತನಲ್ಲಿ ಕಂಡು ಬಂದ ಮನಸ್ಥಿತಿಯು ಭಕ್ತರ ಮೇಲೆ ಪ್ರಭಾವ ಬೀರಿತು. ಅವನು ಪದೇ ಪದೇ `ಓ ಕೃಷ್ಣ, ನನ್ನ ಕೃಷ್ಣ ಎಲ್ಲಿ?’ ಎಂದು ಕೇಳುತ್ತಿದ್ದ. ವಾತಾವರಣವು ಭಕ್ತರಿಗೆ ಆನಂದಪರವಶತೆ ಉಂಟುಮಾಡಿತಲ್ಲದೆ ಆ ಕೋಣೆಯಲ್ಲಿ ಓಲಾಡಿ ತತ್ತರಿಸುವಂತೆ ಮಾಡಿತು.

ಕೆಲ ಸಮಯದ ಅನಂತರ ಭಗವಂತನು ಶಾಂತನಾಗಿ ಕೆಳಗೆ ಆಸೀನನಾದ. ಆದರೆ ಅವನ ನಯನಗಳಿಂದ ಜಲಧಾರೆ ಅವ್ಯಾಹತವಾಗಿ ಹರಿಯುತ್ತಿತ್ತು. ಅವನು ಎಲ್ಲರನ್ನೂ ಆಲಿಂಗಿಸಿಕೊಂಡು `ನನ್ನ ಕೃಷ್ಣನೆಲ್ಲಿ?’ ಎಂದು ಅಳಲಾರಂಭಿಸಿದ. ಅವನಲ್ಲಿ ಕೃಷ್ಣನ ಅಗಲಿಕೆ ನೋವನ್ನು ಕಂಡು ಭಕ್ತರ ಮನಕರಗಿತು. ಅವರು ಏನೂ ಮಾತನಾಡಲಾಗದೆ ಮೌನ ವಹಿಸಿದರು.

ಯಾರೂ ಗಮನಿಸದಂತೆ ಆ ದಿನ ಕಳೆದು ಹೋಯಿತು. ಅನಂತರ ಭಗವಂತನು ಅಲ್ಲಿಂದ ಹೊರಟ. ಆಮೇಲೆ ಭಕ್ತರು ಆಶ್ಚರ್ಯಚಕಿತರಾಗಿ ಮಾತನಾಡಿದರು. ಅವರಲ್ಲಿ ಪ್ರತಿಯೊಬ್ಬರೂ ಭಗವಂತನನ್ನು ನೋಡಿ ಬೆರಗಾದರು ಮತ್ತು ಅವರ ಬಾಹ್ಯ ಇಂದ್ರಿಯಗಳು ಮತ್ತು ದೇಹ ನಿಶ್ಚೇಷ್ಟಿತವಾಯಿತು. ಈ ಹೊಸ ತಿರುವಿನಿಂದ ಇಡೀ ವೈಷ್ಣವ ಸಮುದಾಯವು ಆನಂದಪರವಶಗೊಂಡಿತು. ಒಬ್ಬರೆಂದರು, `ಅವನು ಶ್ರೀಕೃಷ್ಣನ ಅತ್ಯಂತ ರಹಸ್ಯವಾದ ಲೀಲೆಯನ್ನು ಹೊರಗೆಡಹುತ್ತಾನೆ ಎಂಬುವುದರಲ್ಲಿ ಕಿಂಚಿತ್ತು ಅನುಮಾನವಿಲ್ಲ.’ ಮತ್ತೊಬ್ಬರೆಂದರು, `ಬಹುಶಃ ಈಶ್ವರ ಪುರಿ ಅವರಂತಹ ಶುದ್ಧ ಭಕ್ತರೊಂದಿಗಿನ ಸಹವಾಸದಿಂದ ಅವನು ಕೃಷ್ಣನನ್ನು ನೋಡಿರಬೇಕು.’ ಶ್ರೀ ಚೈತನ್ಯರ ಪರಿವರ್ತನೆಗೆ ಅವರು ನಾನಾ ಕಾರಣಗಳನ್ನು ಹುಡುಕುತ್ತಿದ್ದರು.

ಆದರೂ ಭಕ್ತರಿಗೆ  ನಿಮಾಯ್ ಪಂಡಿತನ ಸ್ಥಿತಿಯಿಂದ ಸಂತೋಷವುಂಟಾಯಿತು ಮತ್ತು ಅವರು `ಶ್ರೀ ಕೃಷ್ಣನ ಕೃಪೆ ಅವನ ಮೇಲಿರಲಿ.’ ಎಂದು ಹಾರೈಸಿದರು. ಭಕ್ತರು ಸಂತೋಷ ಸಂಭ್ರಮದಿಂದ ನರ್ತಿಸಿದರು ಮತ್ತು ಹೊಸ ಬದುಕಿನಿಂದ ಪ್ರೀತಿಯ ಧಾರೆ ಹರಿಸಿದರು. ಈ ರೀತಿ ಭಕ್ತರು ಹಾಡುತ್ತ ನರ್ತಿಸುತ್ತಿದ್ದರೆ ಭಗವಂತನು ಅಗಲಿಕೆಯ ಮನಸ್ಥಿತಿಯಲ್ಲಿ ಮುಳುಗಿದ್ದ. ಅವನು ಗಂಗಾದಾಸ ಪಂಡಿತರ ಮನಗೆ ತೆರಳಿ ತನ್ನ ಗುರುವಿನ ಚರಣಗಳಿಗೆ ಗೌರವ ಅರ್ಪಿಸಿದ. ಗುರು ತತ್‌ಕ್ಷಣ ಎದ್ದು ತಮ್ಮ ಶಿಷ್ಯನನ್ನು ಆಲಿಂಗಿಸಿಕೊಂಡರು. ಗಂಗಾದಾಸ ಪಂಡಿತರೆಂದರು, `ಎಂತಹ ವೈಭವ ಜೀವನ! ನೀನು ನಿನ್ನ ತಂದೆ ಮತ್ತು ತಾಯಿಯ ಕುಟುಂಬಗಳೆರಡನ್ನೂ ಮುಕ್ತಗೊಳಿಸಿರುವೆ. ನಿನ್ನ ಶಿಷ್ಯರೆಲ್ಲ ನಿನಗಾಗಿ ಕಾಯುತ್ತಿದ್ದಾರೆ, ಅವರು ನೀನು ಹೋದಾಗಿನಿಂದ ಪುಸ್ತಕವನ್ನೆ ತೆರೆದಿಲ್ಲ. ಶ್ರೀ ಬಲರಾಮನೇ ಬಂದು ಓದಲು ಹೇಳಿದ್ದರೂ ಅವರು ನಿರಾಕರಿಸುತ್ತಿದ್ದರು. ಎಲ್ಲರ ಬದುಕನ್ನು ಉಜ್ಜ್ವಲಗೊಳಿಸಲು ನೀನು ವಾಪಸಾಗಿರುವೆ. ಆದರೆ ಈಗ ಮನೆಗೆ ಹೋಗು, ನಾಳೆಯಿಂದ ಬೋಧನೆ ಶುರು ಮಾಡು.’ ಭಗವಂತನು ಪುನಃ ತನ್ನ ಗುರುವಿಗೆ ಗೌರವ ಅರ್ಪಿಸಿದ. ಅನಂತರ ಚಂದ್ರನ ಸುತ್ತ ತಾರೆಗಳು ಸುತ್ತುವರಿಯುವಂತೆ ಎಲ್ಲ ವಿದ್ಯಾರ್ಥಿಗಳು ಗೌರಾಂಗನನ್ನು ಸುತ್ತುವರಿದರು.

ಅವನು ಮನೆಗೆ ಬಂದು ತನ್ನ ವಿಷ್ಣು ಮಂದಿರದ ಹೊಸ್ತಿಲಿನಲ್ಲಿ ಆಸೀನನಾದ. ತನ್ನ ಶಿಷ್ಯರನ್ನು ಪ್ರೀತಿಯಿಂದ ಹೋಗುವಂತೆ ತಿಳಿಸಿದ. ಈಗ ಯಾರು ಭಗವಂತನ ಬಳಿಗೆ ಬಂದು ಮಾತನಾಡಿದರೂ  ಅವನ ಮನಸ್ಥಿತಿಯ ಪರಿವರ್ತನೆಯಿಂದ ಗೊಂದಲಗೊಂಡು ಹೋಗುತ್ತಿದ್ದರು. ಭಗವಂತನ ಸ್ವಭಾವದಲ್ಲಿ ಆ ಹಿಂದಿನ ದುರಹಂಕಾರ ಮತ್ತು ಜ್ಞಾನದ ಉದ್ಧಟತನದ ಛಾಯೆಯೂ ಇರಲಿಲ್ಲ. ಅವನು ಸಂಪೂರ್ಣವಾಗಿ ಕಳಚಿಕೊಂಡಂತಿದ್ದ ಮತ್ತು ಗಾಢ ಧ್ಯಾನದಲ್ಲಿ ಮಗ್ನನಾಗಿರುವುದನ್ನು ಎಲ್ಲರೂ ಕಂಡರು.

ಶಚೀಮಾತಾ ಕಂಗಾಲಾಗಿದ್ದಳು. ಅವಳಿಗೆ ಈಗ ತನ್ನ ಮಗ ಅರ್ಥವಾಗುತ್ತಿರಲಿಲ್ಲ. ಮಗನ ಸೌಖ್ಯಕ್ಕಾಗಿ ಅವಳು ಶ್ರೀ ವಿಷ್ಣು ಮತ್ತು  ಗಂಗಾ ಮಾತೆಯನ್ನು ಪ್ರಾರ್ಥಿಸಿದಳು. ಅವಳು ಕೋರಿದಳು, `ಓ ನನ್ನ ದೇವರಾದ ಶ್ರೀ ಕೃಷ್ಣಚಂದ್ರ, ನೀನು ನನ್ನ ಪತಿಯನ್ನು ಕರೆಸಿಕೊಂಡೆ. ನೀನು ನನ್ನ ಮಗನನ್ನೂ ತೆಗೆದುಕೊಂಡೆ. ನಿಮಾಯ್ ಮಾತ್ರ ನನ್ನ ಬಳಿ ಉಳಿದಿದ್ದಾನೆ. ಕೃಷ್ಣ, ನಾನು ಅಸಹಾಯಕಳು ಮತ್ತು ಒಬ್ಬಂಟಿ. ಈ ಒಂದು ಅಪೇಕ್ಷೆಯನ್ನು ದಯಪಾಲಿಸು: ನನ್ನ ಮಗು ವಿಶ್ವಂಭರನು ಮನೆಯಲ್ಲಿ, ಸದಾ ಆರೋಗ್ಯಪೂರ್ಣವಾಗಿರಲಿ.’

ಶಚೀದೇವಿಯು ವಿಷ್ಣುಪ್ರಿಯಳನ್ನು ಕರೆ ತಂದು ಭಗವಂತನ ಮುಂದೆ ಕೂರುವಂತೆ ಮಾಡಿದಳು. ಆದರೆ ಶ್ರೀ ಚೈತನ್ಯನು ಅವಳತ್ತ ಗಮನ ಹರಿಸದೆ ನೆಟ್ಟನೋಟ ಹರಿಸುತ್ತಿದ್ದ. ಭಗವಂತನು ನಿರಂತರವಾಗಿ ಶ್ಲೋಕಗಳನ್ನು ಹೇಳುತ್ತಿದ್ದ. ದುಃಖಭರಿತನಾಗಿ ಪದೇ ಪದೇ ಕೇಳುತ್ತಿದ್ದ. `ಕೃಷ್ಣ ಎಲ್ಲಿ? ಕೃಷ್ಣ ಎಲ್ಲಿ?’ ಕೆಲವು ಸಂದರ್ಭದಲ್ಲಿ ಭಗವಂತನು ಪರಮಾನಂದದಲ್ಲಿ ಕೂಗಾಡಿದರೆ, ವಿಷ್ಣುಪ್ರಿಯಳು ಭಯದಿಂದ ಓಡಿಹೋಗುತ್ತಿದ್ದಳು. ಶಚೀಮಾತಾ ಅಸಹಾಯಕಳಾಗಿ ಆತಂಕದಿಂದ ನಿಂತುಬಿಡುತ್ತಿದ್ದಳು. ಶ್ರೀ ಚೈತನ್ಯರಿಗೆ ಕೃಷ್ಣನ ಮೇಲಿನ ಪ್ರೀತಿಯು ನಿದ್ರೆಯಿಂದ ದೂರ ಮಾಡಿತ್ತು ಮತ್ತು ಶ್ರೀ ಹರಿಯೊಂದಿಗಿನ ಅಗಲಿಕೆಯಿಂದ ಇಡೀ ರಾತ್ರಿ ಎದ್ದು ಕೂರುವಂತೆ ಮಾಡುತ್ತಿತ್ತು. ಆದರೂ ಲೌಕಿಕ ವ್ಯಕ್ತಿಯನ್ನು ಕಂಡ ಕೂಡಲೇ ಅವನು ಒಳಗೆ ಹೋಗುತ್ತಿದ್ದ ಮತ್ತು ಯಾವುದೇ  ಪ್ರೇಮ ಪರವಶತೆ ಲಕ್ಷಣ ತೋರುತ್ತಿರಲಿಲ್ಲ.

ಪ್ರತಿ ದಿನ ಬೆಳಗ್ಗೆ ಭಗವಂತನು ಗಂಗಾ ಸ್ನಾನಕ್ಕೆ ಹೋಗುತ್ತಿದ್ದ. ವಾಪಸು ಬಂದಾಗ ಶಿಷ್ಯರು ಕಾದಿರುತ್ತಿದ್ದರು. ಭಗವಂತನು ಕೃಷ್ಣನ ಹೆಸರಲ್ಲದೆ ಬೇರೇನೂ ನುಡಿಯುತ್ತಿರಲಿಲ್ಲ. ಶಿಷ್ಯರಿಗೆ ತಮ್ಮ ಗುರುವಿನ ಮನಸ್ಥಿತಿ ಅರ್ಥವಾಗುತ್ತಿರಲಿಲ್ಲ. ಶಿಷ್ಯರ ಕೋರಿಕೆ ಮೇರೆಗೆ ಭಗವಂತನು ಬೋಧಿಸಲು ಆಸೀನನಾಗುತ್ತಿದ್ದ. ವಾಡಿಕೆಯಂತೆ ಶಿಷ್ಯರು ಶ್ರೀ ಹರಿ ಎನ್ನುತ್ತ ತಮ್ಮ ಪುಸ್ತಕಗಳನ್ನು ತೆರೆಯುತ್ತಿದ್ದರು. ತನ್ನ ಪ್ರೀತಿಯ ಭಗವಂತನ ಹೆಸರು ಕೇಳಿ ನಿಮಾಯ್ ಪಂಡಿತನ ಆನಂದಕ್ಕೆ ಎಣೆಯೇ ಇರಲಿಲ್ಲ. ಅವನು ಪುನಃ ಬಾಹ್ಯ ಜಗತ್ತನ್ನು ಮರೆತು ಕೃಷ್ಣನಲ್ಲಿ ತಲ್ಲೀನನಾಗುತ್ತಿದ್ದ ಮತ್ತು ಎಲ್ಲರತ್ತ ತನ್ನ ಕೃಪೆಯ ದೃಷ್ಟಿ ಬೀರುತ್ತಿದ್ದ. ಕೃಷ್ಣನಲ್ಲಿ ಮುಳುಗಿಹೋಗಿದ್ದ ಅವನು ತನ್ನ ಶಿಷ್ಯರಿಗೆ ಶ್ರೀ ಹರಿಯ ವೈಭವಗಳನ್ನು ವಿವರಿಸುತ್ತಿದ್ದ. ಎಲ್ಲದರ ಪಾಠವೆಂದರೆ ಕೃಷ್ಣ  ಮತ್ತು ಎಲ್ಲ ವಿಶ್ಲೇಷಣೆ, ವ್ಯಾಖ್ಯಾನಗಳು ವಾಸ್ತವವಾಗಿ ಪವಿತ್ರ ನಾಮದ ವೈಭವವನ್ನು ವಿವರಿಸುತ್ತವೆ ಎಂದು ಬೋಧಿಸುತ್ತಿದ್ದ.

ಶಾಶ್ವತ ಸತ್ಯ

ಭಗವಂತನೆಂದ, `ಕೃಷ್ಣನ ಪವಿತ್ರ ನಾಮವೇ ಶಾಶ್ವತ ಸತ್ಯ. ಎಲ್ಲ ಧರ್ಮ ಗ್ರಂಥಗಳಲ್ಲಿಯೂ ಕೃಷ್ಣನೊಬ್ಬನೇ ಪೂಜಿಸತಕ್ಕ ಭಗವಂತ. ಕೃಷ್ಣನು ಪರಮ ನಿಯಂತ್ರಕ, ನಿರ್ವಾಹಕ, ಪೋಷಕ ಮತ್ತು ಇಡೀ ಸೃಷ್ಟಿಯ ದೇವೋತ್ತಮ. ಶಿವ, ಬ್ರಹ್ಮ ಮತ್ತಿತರ ದೇವತೆಗಳು ಅವನ ಸೇವಕರು. ಶ್ರೀ ಕೃಷ್ಣನ ಚರಣ ಕಮಲವನ್ನು ವರ್ಣಿಸದೆ ಏನನ್ನಾದರೂ ವಿವರಿಸಲೆತ್ನಿಸಿದರೆ ಅದು ಮಾಯೆ. ಅವನ ಮಾತುಗಳು ಅಸತ್ಯ ಮತ್ತು ಅವನ ಜನ್ಮ ನಿರುಪಯುಕ್ತ‌. ಇಡೀ ವೇದಾಂತ, ಆಗಮ ಮತ್ತು ಇತರ ಎಲ್ಲ ಆಧ್ಯಾತ್ಮಿಕ ಗ್ರಂಥಗಳು ಕೃಷ್ಣನ ಚರಣ ಕಮಲವೇ ಅಂತಿಮ ಮತ್ತು ಏಕೈಕ ಗುರಿ ಎಂದು ಹೇಳುತ್ತವೆ.’

ಸಾಮಾನ್ಯವಾಗಿ ಜನರು ಮೂರ್ಖರು. ದೇವೋತ್ತಮನ ಬಗೆಗೆ ಧ್ಯಾನಿಸುವ ಬದಲು ಅವರು ಇತರ ವ್ಯಕ್ತಿಗಳ ಮೇಲೆ ಧ್ಯಾನಿಸುತ್ತಾರೆ. ತನ್ನನ್ನು ಕೊಲ್ಲಲು ಬಂದ ಪೂತನಿಯಂತಹ ರಾಕ್ಷಸಿಗೇ ಭಗವಂತನು ಕೃಪೆ ತೋರಿ ಮುಕ್ತಿಗೊಳಿಸಿದ್ದು ಅವರಿಗೆ ಗೊತ್ತಿಲ್ಲ. ಕೃಷ್ಣನನ್ನು ಕೊಂಡಾಡುವುದರಿಂದ ಲಭಿಸುವ ಆನಂದ ಬೇರಿನ್ನಾವುದರಿಂದ ಬಂದೀತು? ಅತಿ ದೊಡ್ಡ ಪಾಪಿಷ್ಠ ಅಘಾಸುರನನ್ನೆ ಕ್ಷಮಿಸಲಿಲ್ಲವೇ? ದೇವೋತ್ತಮನಾದ ಕೃಷ್ಣ ಎಂಬ ಪವಿತ್ರ ನಾಮ ಮಾತ್ರವೇ ಇಡೀ ಜಗತ್ತನ್ನು ಶುದ್ಧೀಕರಿಸಬಹುದು. ಅತಿ ದೊಡ್ಡ ಜೀವಿಯಾದ ಬ್ರಹ್ಮನು ತನ್ನ ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸುತ್ತಾನೆ. ಆದರೂ ಕೃಷ್ಣನನ್ನು ಸುತ್ತುವರಿದಿರುವ ಸಂಕೀರ್ತನೆ ಸಂಭ್ರಮದಲ್ಲಿ ಪಾಲ್ಗೊಂಡಾಗ ಆನಂದಿತನಾಗುತ್ತಾನೆ. ಆದರೂ ಈ ದುರದೃಷ್ಟ ಪತಿತ ಆತ್ಮಗಳು ಹಾಡಲು, ನರ್ತಿಸಲು ಮತ್ತು ಅಶುಭ ಆಚರಣೆಗಳನ್ನು ಆನಂದಿಸಲು ಈ ಭವ್ಯವಾದ ಅಮೃತವನ್ನು ಅಲಕ್ಷಿಸುತ್ತವೆ.

ಶ್ರೀ ವಿಶ್ವಂಭರನು ಪರಾತ್ಪರ ಪರಮ ಸತ್ಯ, ಅಲೌಕಿಕ ಶಕ್ತಿ ತರಂಗದ ಮೂರ್ತರೂಪ. ಆದುದರಿಂದ ಅವನು ಏನು ಹೇಳಿದರೂ ಅದು ಪರಮ ಸತ್ಯ. ಭಗವಂತನು ಅರೆ ಪ್ರಜ್ಞಾವಸ್ಥೆಯಲ್ಲಿರುವಂತೆ  ಪರಮ ಸತ್ಯದ ಬಗೆಗೆ ಮಾತನಾಡುತ್ತಿದ್ದರೆ ಶಿಷ್ಯರು ಸಮ್ಮೋಹಕ್ಕೊಳಗಾದಂತೆ ತದೇಕಚಿತ್ತರಾಗಿ ಕೇಳುತ್ತಿದ್ದರು. ಶ್ರೀ ಗೌರಾಂಗನು ಎಲ್ಲವನ್ನೂ ಕೃಷ್ಣಪ್ರಜ್ಞೆ ಹಿನ್ನೆಲೆಯಲ್ಲಿ ವಿವರಿಸಿದನು ಮತ್ತು ಪ್ರತಿಯೊಂದು ಶಬ್ದವನ್ನೂ ದೇವೋತ್ತಮ ಕೃಷ್ಣನಿಗೆ ಸ್ಪಷ್ಟವಾಗಿ ಸಂಪರ್ಕಿಸಿದನು. ಭಗವಂತನಿಗೆ ಕೂಡ ಇದು ಚತ್ಕಾರ ಎನ್ನಿಸಿತು. ಅತಿ ಶೀಘ್ರದಲ್ಲಿ ಶ್ರೀ ವಿಶ್ವಂಭರನು ಅರೆ ಪ್ರಜ್ಞಾವಸ್ಥೆಯಿಂದ ಮರಳಿದ ಮತ್ತು ಬಾಹ್ಯ ಜಗತ್ತಿನ ಬಗೆಗೆ ಅರಿವುಂಟಾಯಿತು. ತನ್ನ ಶಿಷ್ಯರು ತನ್ನನ್ನು ಹುಚ್ಚ ಅಥವಾ ಅಸಮತೋಲನದವ ಎಂದು ಭಾವಿಸಿದ್ದಾರೇನೋ ಎಂಬ ಅಳುಕೂ ಅವನಿಗುಂಟಾಯಿತು. ಅದನ್ನು ಮರೆ ಮಾಚಲು ಅವನು ಕೆಲವು ಮಾತುಗಳನ್ನಾಡಿದ. ಅವನು ತನ್ನ ಶಿಷ್ಯರನ್ನು ಕೇಳಿದ, `ನನ್ನ ಇಂದಿನ ವ್ಯಾಖ್ಯಾನಗಳು ಹೇಗಿದ್ದವು?’ ಶಿಷ್ಯರೆಂದರು, `ನಮಗೆ ಏನೂ ಅರ್ಥವಾಗಲಿಲ್ಲ. ಪ್ರತಿ ಶಬ್ದಕ್ಕೂ ಕೃಷ್ಣನೇ ಅರ್ಥ ಎಂದು ನೀವು ವಿವರಿಸಿರುವಿರಿ. ನಿಮ್ಮ ವರ್ಣನೆಯನ್ನು ಅರ್ಥಮಾಡಿಕೊಳ್ಳುವವರು ಯಾರಿದ್ದಾರೆ?’ ಇದಕ್ಕೆ ಶ್ರೀ ವಿಶ್ವಂಭರ ನಕ್ಕುಬಿಟ್ಟ. ಅನಂತರ ನುಡಿದ, `ನನ್ನ ಪ್ರೀತಿಯ ಸಹೋದರರೇ ಕೇಳಿ, ನಿಮ್ಮ ಪುಸ್ತಕಗಳನ್ನು ಜೋಡಿಸಿಕೊಳ್ಳಿ. ನಾವು ಈಗ ಗಂಗಾ ಸ್ನಾನಕ್ಕೆ ಹೋಗೋಣ.’ ವಿದ್ಯಾರ್ಥಿಗಳು ತಮ್ಮ ಪುಸ್ತಕಗಳನ್ನು ಬದಿಗಿಟ್ಟು ತಮ್ಮ ಗುರುವಿನ ಜೊತೆ ಗಂಗಾ ನದಿಯತ್ತ ಸಾಗಿದರು. ನೀರಿನಲ್ಲಿ ಆಟವಾಡುತ್ತ, ತಮಾಷೆ ಮಾಡುತ್ತ ಅವರೆಲ್ಲ ಸಂತೋಷಪಟ್ಟುಕೊಂಡರು. ವಿದ್ಯಾರ್ಥಿಗಳಿಂದ ಸುತ್ತುವರಿಯಲ್ಪಟ್ಟ ಶ್ರೀ ಚೈತನ್ಯನು ಸಾಗರದಿಂದ ಉದಯಿಸುವ ಪೂರ್ಣಚಂದ್ರನಂತೆ ಕಂಡ. ಜಲದಲ್ಲಿ ಆಡುತ್ತಿದ್ದ ಭಗವಂತನನ್ನು ಕಂಡವರೇ ಪುಣ್ಯವಂತರು. ಈ ರೀತಿ ಭಗವಂತನು ನೀರಿನಲ್ಲಿ ಆಟವಾಡುವುದನ್ನು ನೋಡಲು ಬ್ರಹ್ಮ ಕೂಡ ಇಚ್ಛಿಸುತ್ತಾನೆ. ಗಂಗಾ ನದಿಯಲ್ಲಿ ಮೀಯಲು ಬಂದವರೆಲ್ಲರೂ ಶ್ರೀ ಗೌರಚಂದ್ರನ ಪರಮ ಸುಂದರ ವದನವನ್ನು ನೋಡುತ್ತಲೇ ಇದ್ದರು. ಅವರು ಪರಸ್ಪರ ಹೇಳಿಕೊಂಡರು. `ಅವನೆಷ್ಟು ಸುಂದರ! ಅವನ ತಂದೆ, ತಾಯಿ ಅದೃಷ್ಟವಂತರು.’

ಸ್ನಾನದ ಅನಂತರ ಅವನು ಮನೆಗೆ ವಾಪಸಾದ. ವಿದ್ಯಾರ್ಥಿಗಳೂ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು. ಶ್ರೀ ಚೈತನ್ಯನು ತನ್ನ ವಸ್ತ್ರ ಬದಲಿಸಿ ಕಾಲು ತೊಳೆದು, ಅನಂತರ ತುಳಸಿ ಗಿಡಕ್ಕೆ ನೀರುಣಿಸಿದ. ಶ್ರೀ ಗೋವಿಂದನಿಗೆ ತನ್ನ ನಿತ್ಯದ ಪೂಜೆಯನ್ನು ಸಲ್ಲಿಸಿ ಭೋಜನ ಸ್ವೀಕರಿಸಲು ಬಂದ. ಶಚೀಮಾತಾಳು ತುಳಸಿ ದಳ, ಅನ್ನ ಮತ್ತಿತರ ತಿನಿಸುಗಳಿದ್ದ ತಟ್ಟೆಯನ್ನು ತಂದಳು. ಭಗವಂತನು ವಿಶ್ವೇಶ್ವರನಿಗೆ ಆಹಾರ ಅರ್ಪಿಸಿದ ಮೇಲೆ ಭೋಜನ ಸ್ವೀಕರಿಸಿದ.  ಮಾತೆ ಶಚೀದೇವಿಯು ಭಗವಂತನ ಮುಂದೆ ಕುಳಿತಳು. ಪತಿವ್ರತೆಯಾದ ವಿಷ್ಣುಪ್ರಿಯಳು ಯಾರಿಗೂ ಕಾಣದಂತೆ ಪಕ್ಕದ ಕೋಣೆಯಲ್ಲಿ ಕುಳಿತು ತನ್ನ ದೇವರನ್ನು ನೋಡುತ್ತಿದ್ದಳು.

ಮಾತೆಗೆ ಬೋಧನೆ

ಶಚಿಮಾತಾ ಕೇಳಿದಳು, `ಮಗನೇ, ನೀನು ಯಾವ ಗ್ರಂಥ ಪಠಿಸುತ್ತಿರುವೆ? ಯಾರೊಂದಿಗೆ ಚರ್ಚೆ ನಡೆಯಿತು?’ ಭಗವಂತ ಉತ್ತರಿಸಿದ, `ನಾವು ಇಂದು ಕೃಷ್ಣನ ಪವಿತ್ರ ನಾಮ ಮತ್ತು ಪರಮೋತ್ತಮ ಧಾಮವಾದ ಅವನ ಚರಣ ಕಮಲದ ವೈಭವಗಳ ಬಗೆಗೆ ಓದಿದೆವು. ಅವನ ನಾಮ ಮತ್ತು ಅಲೌಕಿಕ ಗುಣಗಳು ಶಾಶ್ವತ-ಭಗವಂತನ ನಾಮವನ್ನು ಜಪಿಸುವುದು ಮತ್ತು ಕೇಳುವುದೂ ಶಾಶ್ವತ. ಅವನ ಶರಣಾದ ಸೇವಕರು ಮತ್ತು ಭಕ್ತರೂ ಶಾಶ್ವತ. ದೇವೋತ್ತಮ ಕೃಷ್ಣನಿಗೆ ಭಕ್ತಿ ಸೇವೆ ಸಲ್ಲಿಸುವ ವಿಧಾನವನ್ನು ವಿವರಿಸುವ ಧರ್ಮ ಗ್ರಂಥಗಳು ನಿಜ ಮತ್ತು ಶಾಶ್ವತ. ಇಲ್ಲವಾದರೆ ಅಂತಹ ಗ್ರಂಥಗಳನ್ನು ಧರ್ಮ ಗ್ರಂಥಗಳೆಂದು ಕರೆಯಲಾಗದು. ವೇದ ಗ್ರಂಥಗಳು ಹೇಳುತ್ತವೆ, `ಭಕ್ತಿ ಸೇವೆಯ ವಿಧಾನಗಳನ್ನು ಸ್ಥಾಪಿಸದ ಧರ್ಮ ಗ್ರಂಥಗಳನ್ನು ತಿರಸ್ಕರಿಸಬೇಕು. ಬ್ರಹ್ಮ ಬಂದು ಹೇಳಿದರೂ ಯಾರೂ ಅದನ್ನು ಪಠಿಸಬೇಕಾಗಿಲ್ಲ.’

`ಮಾನವ ಸಮಾಜದ ಕೀಳು ವ್ಯಕ್ತಿಗಳಿರಬಹುದು, ನಾಯಿ ಭಕ್ಷಕನಿರಬಹುದು, ಅವನು ಕೃಷ್ಣನ ಪವಿತ್ರ ನಾಮವನ್ನು ಹೇಳಿದರೆ, ಅವನು ಕೀಳು ಮನುಷ್ಯನಾಗುವುದಿಲ್ಲ. ಮತ್ತು ಉನ್ನತ ಕುಟುಂಬದಲ್ಲಿ ಜನಿಸಿದ ಬ್ರಾಹ್ಮಣನು ಧರ್ಮ ಗ್ರಂಥಗಳ ತತ್ತ್ವ ಮತ್ತು ಧರ್ಮವನ್ನು ಪಾಲಿಸದಿದ್ದರೆ ಅವನು ಬ್ರಾಹ್ಮಣನಲ್ಲ.’ ಶ್ರೀ ಕಪಿಲನು ತನ್ನ ತಾಯಿ ದೇವಹೂತಿಗೆ ತಿಳಿಸಿದಂತೆ ಶ್ರೀ ವಿಶ್ವಂಭರನು ತನ್ನ ಮಾತೆಗೆ ಹೇಳಿದನು.

ಶ್ರೀಮದ್ ಭಾಗವತ ಹೇಳುತ್ತದೆ, `ದೇವೋತ್ತಮನ ಲೀಲೆಗೆ ಸಂಬಂಧಪಟ್ಟಂತೆ ಶುದ್ಧ ಗಂಗೆಯು ಅಲ್ಲಿ ಹರಿಯುತ್ತಿಲ್ಲದಿದ್ದರೆ, ಅಥವಾ ಅಂತಹ ಪುಣ್ಯ ನದಿಯ ತೀರದಲ್ಲಿ ಸೇವೆ ಸಲ್ಲಿಸುವ ಭಕ್ತರಿಲ್ಲದಿದ್ದರೆ, ಅಥವಾ ಅಲ್ಲಿ ಹಬ್ಬಗಳಿಲ್ಲದಿದ್ದರೆ ಮತ್ತು ಮುಖ್ಯವಾಗಿ ಇಂದಿನ ಕಾಲದಲ್ಲಿ ಭಗವಂತನನ್ನು ತೃಪ್ತಿ ಪಡಿಸಲು ಸಂಕೀರ್ತನ-ಯಜ್ಞಗಳಿಲ್ಲದಿದ್ದರೆ, ಅತ್ಯುತ್ತಮ ಗ್ರಹ ವ್ಯವಸ್ಥೆಯಿದ್ದರೂ ಅಂತಹ ಸ್ಥಳದಲ್ಲಿ  ಇರಲು ಬುದ್ಧಿವಂತ ವ್ಯಕ್ತಿಯು ಆಸಕ್ತಿ ತೋರುವುದಿಲ್ಲ.’ ನಿನ್ನ ಚರಣ ಕಮಲವನ್ನು ಸ್ಮರಿಸಿಕೊಳ್ಳುವಂತಾದರೆ, ತಾಯಿಯ ಬಿಗಿ ಗರ್ಭದಲ್ಲಿ ನೋವು ಅನುಭವಿಸುತ್ತ ಇರುವುದು ಉತ್ತಮ. ನಿನ್ನ ಚರಣ ಕಮಲವನ್ನು ಮರೆಯುವ ಯಾವ ಸ್ಥಳದಲ್ಲಿಯೂ ಇರಲು ನನಗೆ ಇಷ್ಟವಿಲ್ಲ. ಓ, ದೇವರೇ! ನನ್ನ ಮೇಲೆ ಕೃಪೆ ತೋರು, ಅಂತಹ ಸ್ಥಳದಲ್ಲಿ ನನ್ನನ್ನು ಇಡಬೇಡ.

`ಭಗವಂತನೆ’, ಅನೇಕ ಜನ್ಮಗಳಲ್ಲಿ ನಾನು ಈ ಸ್ಥಿತಿಯಲ್ಲಿ ನೋವು ಅನುಭವಿಸಿದ್ದೇನೆ. ನನ್ನ ಪಾಪದ ಕೃತ್ಯಗಳೇ ಇದಕ್ಕೆ ಕಾರಣ. ನನ್ನ ನೆನಪಿನ ಕನ್ನಡಿಯಲ್ಲಿ ನೀನು ಕರುಣಾ ಮೂರ್ತಿಯಾಗಿ ದರ್ಶನ ನೀಡುವುದಾದರೆ ನಾನು ಇದೇ ಸಂಕಷ್ಟ ಸ್ಥಿತಿಯಲ್ಲಿ ಇರುವೆ. ದೇವರೇ, ಮಾರಾಟದ ಜೀತದಾಳಿನಂತೆ  ನನ್ನನ್ನು ನಿನ್ನ ಚರಣ ಕಮಲದಲ್ಲಿ ಶಾಶ್ವತವಾಗಿ ಇರಿಸಿಕೋ. ಈ ಬಾರಿ ನೀನು ನನ್ನನ್ನು ಈ ನೋವಿನ ಸ್ಥಿತಿಯಿಂದ ಮುಕ್ತಗೊಳಿಸಿದರೆ ನನಗೆ ನಿನ್ನ ಪಾದ ಕಮಲಗಳಲ್ಲದೆ ಬೇರೇನೂ ಬೇಡ.’

`ಈ ರೀತಿ ಜೀವಿಯು ಗರ್ಭದಲ್ಲಿ ನೋವು ಅನುಭವಿಸುತ್ತಿರುತ್ತಾನೆ. ಆದರೂ ಅವನು ಶ್ರೀ ಕೃಷ್ಣನನ್ನು ಸ್ಮರಿಸಿಕೊಳ್ಳುವುದರಿಂದ ಈ ನೋವಿನ ಸ್ಥಿತಿಯನ್ನು ಪ್ರೀತಿಸುತ್ತಾನೆ. ಈ ರೀತಿ ಭಗವಂತನನ್ನು ಪ್ರಾರ್ಥಿಸುವುದರಿಂದ ಭಕ್ತನಿಗೆ ನೋವಿನ ಅರಿವಾಗುವುದಿಲ್ಲ ಮತ್ತು ಅವನು ಮುಂದೆ ತನಗಿಷ್ಟವಿಲ್ಲದೆ ಗರ್ಭದಿಂದ ಹೊರಬರುತ್ತಾನೆ.’

`ಓ! ಮಾತೆ, ಬದ್ಧಾತ್ಮಗಳಾದ ಜೀವಿಗಳ ಸ್ಥಿತಿ ಬಗೆಗೆ ಎಚ್ಚರದಿಂದ ಕೇಳಿಸಿಕೊಳ್ಳಬೇಕು. ಅವನು ಈ ಜಗತ್ತನ್ನು ಪ್ರವೇಶಿಸಿದ ಕೂಡಲೇ ಅವನು ತನ್ನ ಎಲ್ಲ ಜ್ಞಾನವನ್ನು ಕಳೆದುಕೊಳ್ಳುತ್ತಾನೆ. ಕೆಲವು ವೇಳೆ ಅವನು ಪ್ರಜ್ಞೆ ಇಲ್ಲದವನಂತೆ ಮಲಗಿರುತ್ತಾನೆ, ಕೆಲವು ಸಮಯ ಅಳುತ್ತ ಮತ್ತು ದೀರ್ಘವಾಗಿ ಉಸಿರಾಡುತ್ತ. ಏನನ್ನೂ ಹೇಳಿಕೊಳ್ಳಲಾಗದೆ ಅವನು ಸಂಕಷ್ಟದ ಸಾಗರದಲ್ಲಿ ಮುಳುಗಿರುತ್ತಾನೆ.’

`ಜೀವಿಗಳು ಶ್ರೀ ಕೃಷ್ಣನ ಶಾಶ್ವತ ಸೇವ‌ಕರು. ಅವರು ಭಗವಂತನಿಂದ ಮುಖತಿರುಗಿಸಿ ಹೋದರೆ, ಅವರು ಭಗವಂತನ ಮಾಯಾ ಶಕ್ತಿ ನೀಡುವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಕೆಲವು ವರ್ಷಗಳ ಅನಂತರ, ಜ್ಞಾನ ಮತ್ತು ಬುದ್ಧಿ ಅವನಿಗೆ ಬಂದರೆ ಮತ್ತು ಅವನು ಕೃಷ್ಣನನ್ನು ಪೂಜಿಸಿದರೆ ಅವನು ನಿಜಕ್ಕೂ ಅದೃಷ್ಟವಂತ. ಆದರೆ, ಕೆಟ್ಟ ಸಹವಾಸಗಳಿಂದ ಅವನು ಶ್ರೀ ಕೃಷ್ಣನ ಚರಣ ಕಮಲವನ್ನು ಪೂಜಿಸದಿದ್ದರೆ ಅವನು ಪಾಪದ ಮತ್ತು ಸಂಕಷ್ಟದ ಕತ್ತಲೆ ಬಾವಿಯಲ್ಲಿ ಬೀಳುತ್ತಾನೆ.’

ಭಾಗವತ ಹೇಳುತ್ತದೆ, `ಲೈಂಗಿಕ ತೃಪ್ತಿಯಲ್ಲಿ ತೊಡಗಿರುವ‌ವರ ಪ್ರಭಾವದಿಂದ ಮತ್ತು ನಾಲಗೆಯ ಸಂತೃಪ್ತಿಯಲ್ಲಿರುವ ಜೀವಿಯು ಪುನಃ ತಪ್ಪು ದಾರಿಯನ್ನು ತುಳಿದರೆ, ಅವನು ಮೊದಲಿನಂತೆ ನರಕಕ್ಕೆ ಹೋಗುತ್ತಾನೆ.’

ಧರ್ಮ ಗ್ರಂಥಗಳಲ್ಲಿಯೂ ಹೀಗೆ ಹೇಳಿದೆ, `ಶ್ರೀ ಕೃಷ್ಣನ ಪಾದ ಕಮಲವನ್ನು ಪೂಜಿಸದ ವ್ಯಕ್ತಿಗೆ ಗೊಂದಲವಿಲ್ಲದ ಬದುಕು ಮತ್ತು ಶಾಂತಿಯುತ ಸಾವು ಹೇಗೆ  ಸಾಧ್ಯ?’

`ಶಾಂತಿಯುತ ಬದುಕು ಮತ್ತು ಸಾವು ಬೇಕೆಂದರೆ ನೀವು ಶ್ರೀ ಕೃಷ್ಣನನ್ನು ಪೂಜಿಸಬೇಕು ಮತ್ತು ಸ್ಮರಿಸಬೇಕು. ಆದುದರಿಂದ, ಮಾತೆ, ಭಕ್ತರ ಸಹವಾಸ ಮಾಡು ಮತ್ತು ಶ್ರೀ ಕೃಷ್ಣನನ್ನು ಪೂಜಿಸು. ನಿನ್ನ ಮನಸ್ಸಿನಲ್ಲಿ ಸದಾ ಕೃಷ್ಣನ ಬಗೆಗೆ ಚಿಂತಿಸು ಮತ್ತು ನಿನ್ನ ಬಾಯಿಯಲ್ಲಿ ಸದಾ `ಹರಿ’ ಎಂದು ಹೇಳುತ್ತಿರು. ಭಕ್ತಿ ಇಲ್ಲದ ಚಟುವಟಿಕೆಗಳು ಯಾವುದೇ ಫಲ ನೀಡುವುದಿಲ್ಲ. ಅದು ದುರಂತ ಮತ್ತು ಸಂಕಷ್ಟಗಳನ್ನೇ ತರುತ್ತದೆ.’

ಈ ರೀತಿ ಶ್ರೀ ಕಪಿಲನ ಮನಸ್ಥಿತಿಯನ್ನು ಆವಾಹಿಸಿಕೊಂಡು ಶ್ರೀ ಚೈತನ್ಯನು ತನ್ನ ಮಾತೆಗೆ ಬೋಧಿಸಿದ. ಅವನ ಬೋಧನೆ ಕೇಳಿ ತಾಯಿ ಶಚೀದೇವಿ ಸಂತಸಪಟ್ಟಳು.

ಊಟ ಮಾಡುತ್ತಿರಲಿ, ಮಲಗುತ್ತಿರಲಿ ಅಥವಾ ಎಚ್ಚರದಿಂದಿರಲಿ, ಶ್ರೀ ಚೈತನ್ಯನು ಶ್ರೀ ಕೃಷ್ಣನ ಬಗೆಗೆ ಅಲ್ಲದೆ ಬೇರೆ ಏನೂ ಮಾತನಾಡುತ್ತಿರಲಿಲ್ಲ. ಭಗವಂತನ ಈ ಲೀಲೆಗಳ ಬಗೆಗೆ ಕೇಳಿದ ಭಕ್ತರು, ಅದನ್ನು ತಮ್ಮಲ್ಲೇ ಚರ್ಚಿಸಿದರು ಮತ್ತು ತಮ್ಮ ಹೃದಯಗಳಲ್ಲಿ ಅವಲೋಕಿಸಿದರು, `ಏನು, ಶ್ರೀ ಕೃಷ್ಣನು ಇವನ ದೇಹದಲ್ಲಿ ಅವತರಿಸಿದ್ದಾನಾ? ಇದು ಬಹುಶಃ ಭಕ್ತರೊಂದಿಗಿನ ಸಹವಾಸ ಅಥವಾ ಹಿಂದಿನ ಯಾವುದೇ ಶುದ್ಧೀಕರಣದ ವಿಧಾನಗಳಿಂದಿರಬಹುದೆ?’  ತಮ್ಮಲ್ಲೇ ಹೀಗೆ ಹೇಳಿಕೊಳ್ಳುತ್ತ  ಭಕ್ತರು ಅತೀವ ಆನಂದವನ್ನು ಅನುಭವಿಸಿದರು. ಈ ಜಗತ್ತಿನಲ್ಲಿ ಆವಿರ್ಭವಿಸಿದ ಶ್ರೀ ಚೈತನ್ಯನು ತನ್ನ ಭಕ್ತರ ನೋವುಗಳನ್ನು ನಿವಾರಿಸಿದ ಮತ್ತು ಐಹಿಕ ನಾಸ್ತಿಕರು ಹಾಗೂ ಅಪರಾಧಿಗಳನ್ನು ನಾಶ ಮಾಡಿದ.

ಈಗ, ವೈಷ್ಣವನ ಪಾತ್ರವನ್ನು ವಹಿಸಿಕೊಂಡು, ಮಹಾಪ್ರಭು ವಿಶ್ವಂಭರನು ಜಗತ್ತಿನ ಎಲ್ಲೆಡೆ ಸದಾ ಕೃಷ್ಣನ ಅಸ್ತಿತ್ವವನ್ನು ಕಂಡ. ಕಿಂಚಿತ್ತೂ ವಿರಾಮವಿಲ್ಲದೆ, ಹಗಲು, ರಾತ್ರಿ, ಅವನು ತನ್ನ ಕಿವಿಯಲ್ಲಿ ಶ್ರೀ ಕೃಷ್ಣನ ನಾಮವನ್ನು ಮಾತ್ರ ಕೇಳುತ್ತಿದ್ದ ಮತ್ತು ತನ್ನ ಬಾಯಿಯಲ್ಲಿ `ಕೃಷ್ಣಚಂದ್ರ’ ನ ಬಗೆಗೆ ಮಾತ್ರ ಮಾತನಾಡುತ್ತಿದ್ದ. ಒಂದು ಸಮಯದಲ್ಲಿ ವಿದ್ವತ್ತಿನ ಅಮಲಿನಲ್ಲಿ ಮಗ್ನನಾಗಿಹೋಗಿದ್ದ ದೇವೋತ್ತಮನಾದ ಶ್ರೀ ಚೈತನ್ಯನಿಗೆ ಈಗ ಕೃಷ್ಣನಲ್ಲದೆ ಬೇರೇನೂ ರುಚಿಸುತ್ತಿರಲಿಲ್ಲ.

(ಮುಂದುವರಿಯುವುದು)
Leave a Reply

Your email address will not be published. Required fields are marked *