Search
Wednesday 15 July 2020
  • :
  • :

ಸುವರ್ಣಾವತಾರ ಭಾಗ – 18

ವೈಕುಂಠಾಧಿಪತಿಯು ಗುರು ಮತ್ತು ವಿದ್ವಾಂಸರ ಮುಕುಟ ಮಣಿಯಂತೆ ನವದ್ವೀಪದಲ್ಲಿ ನೆಲೆಸಿದ್ದ. ಮಾನವ ಸಮಾಜದ ಪರಿಸ್ಥಿತಿಯು ಯಾವ ಮಟ್ಟಕ್ಕೆ ಕುಸಿದಿತ್ತೆಂದರೆ ನಾಸ್ತಿಕರ ಸಂಖ್ಯೆ ಹೆಚ್ಚಾಗಿತ್ತು ಮತ್ತು ಭಕ್ತಿ ಸೇವೆಯು ಅಪರೂಪವಾಗಿತ್ತು. ಜನರು ತಾತ್ಕಾಲಿಕ ಮತ್ತು ಭ್ರಮೆಯ ಇಂದ್ರಿಯ ಭೋಗದಿಂದ ಆಕರ್ಷಿತರಾಗಿದ್ದರು. ಇದು ಭಕ್ತರಿಗೆ ದುಃಖ ಉಂಟುಮಾಡಿತ್ತು.

ಇದರೊಂದಿಗೆ ಶ್ರೀ ಗೌರಸುಂದರನು ತನ್ನ ವಿದ್ವತ್‌ಪೂರ್ಣ ಚಟುವಟಿಕೆಗಳಲ್ಲಿ ಲೀನವಾಗಿದ್ದನ್ನು ನೋಡಿ ಭಕ್ತರು ಹತಾಶರಾಗಿದ್ದರು. ದುಷ್ಕರ್ಮಿಗಳು ಮತ್ತು ಪಾಪಿಗಳು ವೈಷ್ಣವ ಭಕ್ತರನ್ನು ನಿಂದಿಸಿ ಅವರಿಗೆ ನೋವುಂಟುಮಾಡುವುದನ್ನು ಮುಂದುವರಿಸಿದ್ದರು. ಈ ಭಕ್ತರು ಮೌನದಿಂದ ಈ ಅಪಮಾನವನ್ನು ಸಹಿಸಿಕೊಂಡಿದ್ದರು. ತನ್ನ ಪರಮ ಪರಿಚಯವನ್ನು ಮತ್ತು ತನ್ನ ಅಲೌಕಿಕ ಲೀಲೆಗಳನ್ನು ಪ್ರತ್ಯಕ್ಷಗೊಳಿಸುವ ಕಾಲ ಕೂಡಿ ಬಂದಿದೆ ಎಂದು ದೇವೋತ್ತಮನಾದ ಶ್ರೀ ಗೌರಸುಂದರನು ತನ್ನ ಮನದಲ್ಲಿಯೇ ಯೋಚಿಸಿದ. ಆದರೆ ಮೊದಲು ಗಯಾಧಾಮಕ್ಕೆ ಭೇಟಿ ನೀಡಲು ನಿರ್ಧರಿಸಿದ. ಪರಿಪೂರ್ಣ ಸ್ವತಂತ್ರನಾದ ದೇವೋತ್ತಮ ಪರಮ ಪುರುಷ ಗೌರಸುಂದರನ ಅಭಿಲಾಷೆ ಹಾಗಿತ್ತು.

ಧಾರ್ಮಿಕ ವಿಧಿವಿಧಾನಗಳಂತೆ ಅವನು ತನ್ನ ತಂದೆಯ ಶ್ರಾದ್ಧ ಕರ್ಮ ಮಾಡಿದ. ಅನಂತರ ತನ್ನ ಶಿಷ್ಯರೊಂದಿಗೆ ಗಯಾಧಾಮಕ್ಕೆ ಹೊರಟ. ಗಯಾಧಾಮವನ್ನು ನೋಡುವ ಯೋಚನೆಯೇ ಅವನಿಗೆ ಪರಮಾನಂದ ಉಂಟುಮಾಡಿತ್ತು. ತಾಯಿ ಶಚೀಮಾತಾಳ ಆಶೀರ್ವಾದ ಪಡೆದು ಅವನು ಗಯಾಕ್ಕೆ ಹೊರಟ. ಅವನು ಅನೇಕ ಪಟ್ಟಣ ಮತ್ತು ಗ್ರಾಮಗಳ ಮೂಲಕ ತೆರಳಿದ. ಅವನ ಅಲೌಕಿಕ ಚರಣ ಕಮಲದ ಸ್ಪರ್ಶದಿಂದಲೇ ಆ ಸ್ಥಳಗಳು ಪುಣ್ಯ ಭೂಮಿ ಎನಿಸಿಕೊಂಡವು.

ಭಗವಂತನಿಗೂ ಜ್ವರ

ಮಾರ್ಗದಲ್ಲಿ ಅವನು ತನ್ನ ಶಿಷ್ಯರೊಂದಿಗೆ ಅನೇಕ ಆಧ್ಯಾತ್ಮಿಕ ವಿಷಯಗಳ ಬಗೆಗೆ ಚರ್ಚಿಸಿದ. ಕೆಲವು ಸಲ ಅವರೊಂದಿಗೆ ತಮಾಷೆಯಾಗಿ ಮಾತನಾಡುತ್ತ ನಗೆ ಬುಗ್ಗೆ ಹರಿಸುತ್ತಿದ್ದ. ಕೆಲವು ಸಂದರ್ಭದಲ್ಲಿ ತುಂಬ ಗಂಭೀರ. ಹೀಗೆ ಸಾಗುತ್ತ ಅವರು ಮಂದಾರ ಪರ್ವತ ತಲಪಿದರು. ಅವನು ಪ್ರಸಿದ್ಧ ಸ್ಥಳವಾದ ಮಂದಾರ ಗಿರಿಯಲ್ಲಿ ಅನೇಕ ದೇವಸ್ಥಾನಗಳನ್ನು, ಮುಖ್ಯವಾಗಿ ಶ್ರೀ ಮಧುಸೂದನ ಮಂದಿರದ ದರ್ಶನ ಪಡೆದ. ಒಂದು ದಿನ, ಪ್ರಯಾಣಿಸುತ್ತಿದ್ದಾಗ ಭಗವಂತನಿಗೆ ಜ್ವರ ಬಂದಿತು. ಗಯಾಕ್ಕೆ ಹೋಗುವ ಮಾರ್ಗದಲ್ಲಿ ವೈಕುಂಠಾಧಿಪತಿಯಾದ ಶ್ರೀ ಗೌರಾಂಗನು ಜೀವಿಗಳಿಗೆ ಪಾಠ ಕಲಿಸಲು ಸಾಮಾನ್ಯರಂತೆ ಜ್ವರ ಬಂದಿದೆ ಎಂದು ಪ್ರಕಟಿಸಿದ. ಅವನ ಜ್ವರದಿಂದ ಶಿಷ್ಯರಿಗೆ ಆತಂಕ ಉಂಟಾಯಿತು.

ಅವರು ಅನೇಕ ಔಷಧಗಳನ್ನು ನೀಡಿದರೂ ಭಗವಂತನ ಅಪೇಕ್ಷೆಯಂತೆ ಜ್ವರವು ಮುಂದುವರಿದಿತ್ತು. ಕೊನೆಗೆ ಭಗವಂತನೇ ಪರಿಹಾರ ಸೂಚಿಸಿದ, `ಎಲ್ಲ ಸಂಕಷ್ಟಗಳಿಗೆ ಪರಿಹಾರವೆಂದರೆ ಶುದ್ಧ ಬ್ರಾಹ್ಮಣನ ಪಾದ ತೊಳೆದ ನೀರನ್ನು ಕುಡಿಯುವುದು.’ ಪರಿಶುದ್ಧ ಬ್ರಾಹ್ಮಣನ ಸ್ಥಾನವನ್ನು ಜಗತ್ತಿಗೆ ತೋರಿಸಲು ಅವನು ಅಂತಹ ಬ್ರಾಹ್ಮಣನ ಪಾದ ತೊಳೆದ ನೀರನ್ನು ಸೇವಿಸಿದ. ಅಂತಹ ಜಲಪಾನ ಮಾಡಿದ ಕೂಡಲೇ ಭಗವಂತನ ಜ್ವರ ಮಾಯವಾಗಿ ಅವನ ಆರೋಗ್ಯ ಸುಧಾರಿಸಿತು. ಎಲ್ಲ ವೈದಿಕ ಗ್ರಂಥಗಳಲ್ಲಿ ವರ್ಣಿಸಿರುವಂತೆ ಭಗವಂತನ ಅಂತಹ ಲೀಲೆಗಳು ಅವನ ನಿಜ ಸ್ವಭಾವವನ್ನು ಪ್ರಕಟಿಸುತ್ತವೆ.

ವಿಷ್ಣುಪಾದ ದರ್ಶನ, ಭಾವೋದ್ವೇಗ

ಜ್ವರ ಮುಕ್ತನಾದ ಭಗವಂತನು ತನ್ನ ಪ್ರಯಾಣ ಮುಂದುವರಿಸಿ ಪುಂಪುನಾ ನದಿ ಬಳಿಯ ಯಾತ್ರಾಸ್ಥಳಕ್ಕೆ ಬಂದ. ಭಗವಂತನು ಸ್ನಾನ ಮಾಡಿ ತನ್ನ ತಂದೆಯ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದ. ಅನಂತರ ಗಯಾಧಾಮವನ್ನು ಪ್ರವೇಶಿಸಿದ. ಈ ಪವಿತ್ರ ಯಾತ್ರಾಸ್ಥಳಕ್ಕೆ ಕೈ ಜೋಡಿಸಿ ತನ್ನ ಗೌರವ ಅರ್ಪಿಸಿದ. ಅನಂತರ ಬ್ರಹ್ಮ-ಕುಂಡಕ್ಕೆ ಬಂದ ಅವನು ಸ್ನಾನ ಮಾಡಿ ವಿಧಿವಿಧಾನದಂತೆ ತನ್ನ ತಂದೆಗೆ ಪೂಜೆ ಸಲ್ಲಿಸಿದ. ಅಲ್ಲಿಂದ ಭಗವಂತನು ಚಕ್ರ-ತೀರ್ಥಕ್ಕೆ ಹೋದ. ಶ್ರೀ ವಿಷ್ಣುವಿನ ಚರಣ ಕಮಲದ ಪಡಿಯಚ್ಚಿನ ದರ್ಶನಕ್ಕೆ ಅವನು ಮಂದಿರ ಪ್ರವೇಶಿಸಿದ. ಅಲ್ಲಿ, ವಿಷ್ಣು ಪಾದದ ಸುತ್ತ ಅನೇಕ ಬ್ರಾಹ್ಮಣ ಪೂಜಾರಿಗಳು ಕುಳಿತಿದ್ದರು. ಭಕ್ತರು ಅರ್ಪಿಸಿದ್ದ ಸುಗಂಧ ದ್ರವ್ಯ, ಪುಷ್ಪ, ವಸ್ತ್ರ ಮತ್ತು ಆಭರಣಗಳ ರಾಶಿಯೇ ಅಲ್ಲಿತ್ತು. ಹಣದ ಮೊತ್ತದ ಲೆಕ್ಕ ತೆಗೆದುಕೊಳ್ಳುವುದು ಯಾರಿಗೂ ಸಾಧ್ಯವಿರಲಿಲ್ಲ.

ದೇವೋತ್ತಮನ ಚರಣ ಕಮಲದ ವೈಭವವನ್ನು ಕೇಳಿ ಶ್ರೀ ಗೌರಾಂಗನು ಆನಂದ ಸಾಗರದಲ್ಲಿ ಮುಳುಗಿ ಹೋದ. ಅವನ ಕಮಲ ನಯನಗಳಿಂದ ಜಲಧಾರೆ ಹರಿಯಿತು. ಭಗವಂತನ ಪಾದಕಮಲದ ದರ್ಶನವಾದ ಕೂಡಲೇ ಅವನ ಅಲೌಕಿಕ ದೇಹದಲ್ಲಿ ರೋಮಾಂಚನ ಮತ್ತು ನಡುಕದ ಪರಮಾನಂದ ಕಂಡುಬಂದಿತು. ಇಡೀ ಮಾನವ ಸಮಾಜದ ಒಳಿತಿಗಾಗಿ, ಎಲ್ಲ ಜೀವಿಗಳ ಉತ್ತಮ ಭವಿಷ್ಯಕ್ಕಾಗಿ ದೇವೋತ್ತಮನಾದ ಗೌರಚಂದ್ರನು ಭಕ್ತಿ ಸೇವೆ, ಕೃಷ್ಣ-ಪ್ರೇಮದ ವಿಧಾನವನ್ನು ತೋರಲಾರಂಭಿಸಿದ.

ಭಗವಂತನ ಕಮಲನಯನಗಳಿಂದ ಅವ್ಯಾಹತವಾಗಿ ಗಂಗೆ ಹರಿದಳು. ಅಲ್ಲಿ ನೆರೆದಿದ್ದ ಬ್ರಾಹ್ಮಣ ಪೂಜಾರಿಗಳು ಈ ದೃಶ್ಯ ಕಂಡು ಬೆರಗಾದರು. ದೈವ ಪ್ರೇರಣೆಯಂತೆ ಶ್ರೀಲ ಈಶ್ವರ ಪುರಿ ಅವರೂ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಗೌರಚಂದ್ರನು ಶ್ರಿ ಈಶ್ವರ ಪುರಿ ಅವರನ್ನು ಕಂಡಕೂಡಲೇ ಅವರಿಗೆ ಪ್ರೀತಿ ವಾತ್ಸಲ್ಯಗಳಿಂದ ಗೌರವ ಅರ್ಪಿಸಿದನು. ಶ್ರೀ ಗೌರಸುಂದರನನ್ನು ಕಂಡು ಶ್ರೀಲ ಪುರಿ ಅವರಿಗೂ ಪರಮಾನಂದವಾಯಿತು. ಅವರು ಪ್ರೀತಿಯಿಂದ ಅವನನ್ನು ಆಲಿಂಗಿಸಿಕೊಂಡರು. ಇಬ್ಬರಿಗೂ ತಮ್ಮ ಭಾವೋದ್ರೇಕವನ್ನು ತಡೆದುಕೊಳ್ಳಲಾಗಲಿಲ್ಲ. ಪರಸ್ಪರರ‌ ಕಣ್ಣೀರಧಾರೆಯಿಂದ ಇಬ್ಬರೂ ತೋಯ್ದು ಹೋದರು.

ಶ್ರೀ ಗೌರಾಂಗ ನುಡಿದ, `ನಿಮ್ಮ ಪಾದಕಮಲಗಳ ದರ್ಶನವಾಯಿತು. ನನ್ನ ಗಯಾ ಭೇಟಿಯು ಫಲಪ್ರದವಾಯಿತು. ಯಾತ್ರಾಸ್ಥಳದಲ್ಲಿ ಒಬ್ಬರ ಪಿತೃಗಳ ಅಗಲಿದ ಆತ್ಮಗಳಿಗೆ ಆಹುತಿ ಸಲ್ಲಿಸಿದರೆ ಅದು ಯಾರನ್ನು ಉದ್ದೇಶಿಸಿ ಮಾಡಲಾಗುವುದೋ ಅವರಿಗೆ ಮಾತ್ರ ಫಲ ನೀಡುತ್ತದೆ. ಆದರೆ ನಿಮ್ಮ ಅಸ್ತಿತ್ವದಿಂದಲೇ ಅಗಲಿದ ಅಸಂಖ್ಯ ಪಿತೃಗಳ ಆತ್ಮಗಳನ್ನು ಮುಕ್ತಿಗೊಳಿಸಿರುವಿರಿ. ಆದುದರಿಂದ ಯಾವುದೇ ಯಾತ್ರಾಸ್ಥಳವನ್ನು ನಿಮ್ಮೊಂದಿಗೆ ಹೋಲಿಸಲಾಗದು. ವಾಸ್ತವವಾಗಿ, ನೀವು ಯಾತ್ರಾಸ್ಥಳಗಳ ಶುದ್ಧಿಕಾರಕ. ದಯೆಯಿಟ್ಟು ಲೌಕಿಕ ಸಾಗರದಲ್ಲಿ ಮುಳುಗದಂತೆ ನನ್ನನ್ನು ಕಾಪಾಡಿ. ಏಕೆಂದರೆ, ನಾನು ನನ್ನ ಹೃದಯ, ಆತ್ಮ ಮತ್ತು ದೇಹವನ್ನು ನಿಮ್ಮ ಪಾದಗಳಿಗೆ ಅರ್ಪಿಸುತ್ತಿದ್ದೇನೆ. ನಾನು ಅಪೇಕ್ಷಿಸುವ ಒಂದೇ ವರವೆಂದರೆ, ಶ್ರೀ ಕೃಷ್ಣನ ಚರಣಕಮಲದಿಂದ ಅಮೃತವನ್ನು ನಾನು ಸೇವಿಸುವಂತೆ ಮಾಡಿ.’

ಅನಂತರ ಶ್ರೀಲ ಈಶ್ವರಚಂದ್ರ ಪುರಿ ಮಾತನಾಡಿದರು, `ಓ ಪಂಡಿತ, ಕೇಳು. ನೀನು ದೇವೋತ್ತಮನ ವಿಸ್ತರಣೆ ರೂಪವೆಂದು ನನಗೆ ಗೊತ್ತು. ಇಲ್ಲವಾದರೆ, ನಿನ್ನಷ್ಟು ಅಪಾರ ಪಾಂಡಿತ್ಯ ಮತ್ತು ಅಲೌಕಿಕ ಸ್ವಭಾವವನ್ನು ಹೊಂದಲು ಯಾರಿಗೆ ಸಾಧ್ಯ? ದೇವೋತ್ತಮನ ದರ್ಶನವಾಗುವುದೆಂದು ನಿನ್ನೆ ರಾತ್ರಿ ಕನಸು ಕಂಡೆ. ನಿನ್ನನ್ನು ನೋಡಿದ ಕೋಡಲೇ ಆ ಸ್ವಪ್ನ ಸಾಕಾರಗೊಂಡಿತು.

`ನಿಜ ಹೇಳಬೇಕೆಂದರೆ, ನಿನ್ನ ಮುಂದೆ ಪ್ರತಿ ಕ್ಷಣವೂ ನನ್ನ ಆನಂದವನ್ನು ಹೆಚ್ಚಿಸುತ್ತಿದೆ. ನವದ್ವೀಪದಲ್ಲಿ ನಿನ್ನ ದರ್ಶನವಾದಾಗಿನಿಂದ ನನ್ನ ಮನಸ್ಸಿನಲ್ಲಿ ನಿನ್ನನ್ನು ಬಿಟ್ಟರೆ ಬೇರೆ ಏನೂ ಇಲ್ಲ. ನಾನು ಹೇಳಿದ್ದೆಲ್ಲವೂ ಖಂಡಿತ ಸತ್ಯ. ಯಾವುದೇ ಆಕಾಂಕ್ಷೆ ಇಲ್ಲದೆ ನಾನು ಇದನ್ನು ಹೇಳಬಲ್ಲೆ : ಶ್ರೀ ಕೃಷ್ಣನ ದರ್ಶನದಲ್ಲಿ ಅನುಭವಿಸುವ ಆನಂದವನ್ನು ನಾನು ನಿನ್ನ ಬಳಿಯೂ ಅನುಭವಿಸುತ್ತಿದ್ದೇನೆ.’

ಅನಂತರ ಭಗವಂತನು ಈಶ್ವರಚಂದ್ರ ಪುರಿ ಅವರ ಅನುಮತಿ ಪಡೆದು ಸ್ನಾನಕ್ಕೆ ತೆರಳಿದ. ಅವನು ತನ್ನ ತಂದೆಯ ಶ್ರಾದ್ಧ‌‌ ಮಾಡಿದ. ತನ್ನ ಪಿತೃವಿಗೆ ಆಹುತಿ ಅರ್ಪಿಸುವ ವಿಧಿಗಳನ್ನು ಪೂರೈಸಿದ ಮೇಲೆ ಶ್ರೀ ಗೌರಾಂಗನು ಪ್ರೇತ-ಗಯಾದತ್ತ ಹೊರಟ. ಅಲ್ಲಿ ಕೂಡ ಶ್ರೀ ಚೈತನ್ಯನು ಶ್ರಾದ್ಧವನ್ನು ನೆರವೇರಿಸಿ ತನ್ನ ವಿನಮ್ರ ಮಾತುಗಳಿಂದ ಪೂಜಾರಿಗಳನ್ನು ತೃಪ್ತಗೊಳಿಸಿದ. ಇದು ಅವನು ಪೂಜಾರಿಗಳನ್ನು ಸಂತೋಷಪಡಿಸುವ ರೀತಿ. ಅಲ್ಲಿಂದ ಅವನು ದಕ್ಷಿಣ -ಮಾನಸ ಮತ್ತು ಶ್ರೀರಾಮ ಗಯಾಕ್ಕೆ ತೆರಳಿದ. ಶ್ರೀರಾಮ ಗಯಾದಲ್ಲಿ ಅವನು ಶ್ರೀರಾಮನ ಅವತಾರಕ್ಕೆ ಶ್ರಾದ್ಧ ಸಲ್ಲಿಸಿದ. ಅನಂತರ ಅವನು ಯುಧಿಷ್ಠಿರ-ಗಯಾಕ್ಕೆ ತೆರಳಿ ಪಾಂಡವ ಪುತ್ರನಿಗೆ ಗೌರವ ಸಲ್ಲಿಸಿದ.

ಪ್ರತಿ ಬಾರಿ ಶ್ರೀ ಗೌರಸುಂದರನು ಶ್ರಾದ್ಧ ಆಚರಿಸಿದಾಗಲೂ ಬ್ರಾಹ್ಮಣ ಪೂಜಾರಿಗಳು ಅವನ ಸುತ್ತ ಕುಳಿತು ಮಂತ್ರ ಪಠಣ ಮಾಡುತ್ತಿದ್ದರು. ಅವನು ಜಲಕ್ಕೆ ಅಹುತಿ ಸಲ್ಲಿಸಿದ ಮೇಲೆ ಆ ಬ್ರಾಹ್ಮಣರು ಸಂಭಾವನೆ ಮತ್ತು ಉಡುಗೊರೆಗಳಿಗಾಗಿ ಅವನಿಗೆ ಮುಗಿ ಬೀಳುತ್ತಿದ್ದರು. ಅಂತಹ ವರ್ತನೆ ನೋಡಿ ನಸು ನಗುತ್ತಿದ್ದ ಭಗವಂತನು ಅವರ ಹೃದಯದಲ್ಲಿದ್ದ ಲೌಕಿಕ ಆಸೆಯ ಸರಪಳಿಯನ್ನು ಕರುಣೆಯಿಂದಲೇ ಕತ್ತರಿಸಿ ಹಾಕಿದ. ಶ್ರೀ ಗೌರಾಂಗನು ಅನಂತರ ಭೀಮ-ಗಯಾ, ಶಿವ-ಗಯಾ, ಬ್ರಹ್ಮ-ಗಯಾ ಹಾಗೂ ಇತರ ಪವಿತ್ರ ಸ್ಥಳಗಳ ದರ್ಶನ ಮಾಡಿದ.

ಅವನು ಷೋಡಶ-ಗಯಾಕ್ಕೆ ಬಂದು ೧೬ ವಿಶೇಷ ವಸ್ತುಗಳನ್ನು ಆಹುತಿಯಾಗಿ ನೀಡಿದನು. ಅನಂತರ ಅವನು ಪ್ರತಿಯೊಬ್ಬರಿಗೂ ಗೌರವವನ್ನು ಅರ್ಪಿಸಿದನು. ಅನಂತರ ಭಗವಂತನು ಬ್ರಹ್ಮ ಕುಂಡದಲ್ಲಿ ಸ್ನಾನ ಮಾಡಿ ಗಯಾ-ಶಿರ ಅರ್ಪಿಸಿದನು. ಅಲ್ಲಿ ಅಚ್ಚೊತ್ತಿದ್ದ ಶ್ರೀ ವಿಷ್ಣು ಪಾದಕ್ಕೆ ಸುಂದರವಾದ ಪುಷ್ಪಹಾರ ಮತ್ತು ಶ್ರೀಗಂಧವನ್ನು ಸ್ವತಃ ಅರ್ಪಿಸಿ ಪೂಜೆ ಮಾಡಿದನು. ಎಲ್ಲ ಪವಿತ್ರ ಸ್ಥಳಗಳ ದರ್ಶನ ಮಾಡಿ ಎಲ್ಲ ಬ್ರಾಹ್ಮಣ ಪೂಜಾರಿಗಳನ್ನು ತೃಪ್ತಿ ಪಡಿಸಿದ ಮೇಲೆ ಅವನು ತನ್ನ ನಿವಾಸಕ್ಕೆ ಹಿಂತಿರುಗಿದ.

ಭೋಜನ ಸವಿ

ಶ್ರೀ ಚೈತನ್ಯನು ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಂಡ ಮೇಲೆ ಅಡುಗೆ ಮಾಡಲಾರಂಭಿಸಿದ. ಅವನು ಅಡುಗೆಯ ಕೊನೆ ಹಂತದಲ್ಲಿದ್ದಾಗ ಶ್ರೀ ಈಶ್ವರಚಂದ್ರ ಪುರಿ ಅವರು ಅಲ್ಲಿಗೆ ಬಂದರು. ಶ್ರೀ ಕೃಷ್ಣನ ಪವಿತ್ರ ನಾಮ ಜಪ ಮತ್ತು ಭಗವಂತನಲ್ಲಿನ ಅಪಾರ ಪ್ರೀತಿಯ ಮತ್ತಿನಲ್ಲಿ ಅವರು ಗೌರಾಂಗನ ಕೋಣೆ ಪ್ರವೇಶಿಸಿದರು.

ಅವರನ್ನು ನೋಡಿದ ತತ್‌ಕ್ಷಣ ಭಗವಂತನು ಅಡುಗೆ ಮನೆಯಿಂದ ಹೊರಗೆ ಬಂದು ಗೌರವ ಅರ್ಪಿಸಿ ಆಸನ ನೀಡಿದ. ಶ್ರೀ ಈಶ್ವರಚಂದ್ರ ಪುರಿ ಅವರು ನಗುತ್ತಾ ನುಡಿದರು, `ಓ ಪಂಡಿತ, ನಾನು ಸರಿಯಾದ ಸಮಯಕ್ಕೆ ಬಂದಿರುವೆ.’ ಭಗವಂತ ಉತ್ತರಿಸಿದ, `ನಿಮ್ಮನ್ನು ಇಲ್ಲಿಗೆ ಕಳುಹಿಸುವ ಮೂಲಕ ಅದೃಷ್ಟವು ನನ್ನತ್ತ ಮಂದಹಾಸ ಬೀರಿದೆ. ನೀವು ಸ್ವಲ್ಪ ಪ್ರಸಾದ ಸ್ವೀಕರಿಸಬೇಕೆಂದು ಕೋರುವೆ.’ ಶ್ರೀ ಪುರಿಪಾದರು ನಗುತ್ತಾ ಕೇಳಿದರು. `ಅದನ್ನು ಬಿಟ್ಟರೆ ನಿನಗೇನಿದೆ?’

ಭಗವಂತ‌ನೆಂದ, `ನಾನು ನನಗಾಗಿ ಸ್ವಲ್ಪ ಅನ್ನ ಮಾಡುವೆ.’ `ಪುನಃ ಅಡುಗೆ ಮಾಡುವುದೇಕೆ? ನೀನು ಈಗ ಮಾಡಿರುವುದನ್ನು ಇಬ್ಬರೂ ಹಂಚಿಕೊಳ್ಳೋಣ,’  ಶ್ರೀ ಪುರಿಪಾದರೆಂದರು. ಅದಕ್ಕೆ ಭಗವಂತನು ನಗುತ್ತ, `ಈಗ ಮಾಡಿರುವುದೆಲ್ಲಾ ನಿಮಗೆ. ಅತಿ ಕಡಮೆ ಸಮಯದಲ್ಲಿ ನಾನು ಅಡುಗೆ ಮಾಡಿ ಬಿಡುವೆ. ನೀವು ಸಂಕೋಚ ಮಾಡಿಕೊಳ್ಳಬೇಡಿ. ನೀವು ಮೊದಲು ಭೋಜನ ಮಾಡಿ.’ ತಾನು ತಯಾರಿಸಿದ್ದೆಲ್ಲವನ್ನೂ ಶ್ರೀ ಪುರಿ ಅವರಿಗೆ ನೀಡಿ ಶ್ರೀ ಗೌರಾಂಗನು ಪುನಃ ಅಡುಗೆ ಮನೆಗೆ ತೆರಳಿ ತನಗಾಗಿ ಅಡುಗೆ ಮಾಡಿಕೊಳ್ಳತೊಡಗಿದ.

ಭಗವಂತನು ಸಂತೋಷದಿಂದ ಶ್ರೀ ಪುರಿ ಅವರಿಗೆ ಕರುಣೆ ತೋರಿದ. ಶ್ರೀಪಾದ ಪುರಿ ಅವರು ಮಾತ್ರ ಶ್ರೀ ಕೃಷ್ಣನ ಬಗೆಗೇ ಯೋಚಿಸುತ್ತಿದ್ದರು. ಶ್ರೀ ಗೌರಸುಂದರನು ತನ್ನ ಕೈನಿಂದಲೇ ಶ್ರೀಪಾದ ಪುರಿ ಅವರಿಗೆ ಉಣಬಡಿಸಿದ. ಅವರು ಆನಂದದಿಂದ ಭಗವಂತನ ಅಡುಗೆಯನ್ನು ಆಸ್ವಾದಿಸಿದರು. ಇದು ನಡೆಯುತ್ತಿದ್ದಾಗ, ಅದೃಷ್ಟ ದೇವತೆ ಶ್ರೀ ಲಕ್ಷ್ಮಿಯು ಪ್ರತ್ಯಕ್ಷಳಾಗಿ, ಆದರೆ ಯಾರ ಕಣ್ಣಿಗೂ ಕಾಣಿಸದಂತೆ, ಭಗವಂತನಿಗೆ ಅಡುಗೆ ಸಿದ್ಧಗೊಳಿಸಿ ಮರೆಯಾದಳು. ಶ್ರೀಪಾದ ಪುರಿ ತೃಪ್ತರಾದುದನ್ನು ಕಂಡು ಭಗವಂತನು ತಾನೂ ಪ್ರಸಾದ ಸ್ವೀಕರಿಸಲು ಆಸೀನನಾದ.

ಭಗವಂತ ಮತ್ತು ಅವನ ಭಕ್ತರ ಈ ಅಲೌಕಿಕ ಲೀಲೆಗಳು ಎಷ್ಟು ಅದ್ಭುತ ಎಂದರೆ ಇದನ್ನು ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ಯಾರು ಕೇಳುವರೋ ಅವರಿಗೆ ಶ್ರೀ ಕೃಷ್ಣ ಚರಣಕಮಲದಲ್ಲಿ ಭಕ್ತಿ ಸೇವೆ ಸಲ್ಲಿಸಲು ಅವಕಾಶ ದೊರೆಯುತ್ತದೆ.

ಶ್ರೀ ಈಶ್ವರಚಂದ್ರ ಪುರಿ ಅವರ ಉನ್ನತ ಸ್ಥಾನವನ್ನು ಯಾರು ತಾನೇ ವರ್ಣಿಸಬಲ್ಲರು? ದೇವೋತ್ತಮ ಪರಮ ಪುರುಷನಾದ ಶ್ರೀ ಚೈತನ್ಯನು ಆದರ್ಶ ಶಿಷ್ಯನಂತೆ ಶ್ರೀ ಪುರಿ ಅವರ ಜನ್ಮ ಸ್ಥಳದ ದರ್ಶನಕ್ಕೆ ತೆರಳಿದ. ಅಲ್ಲಿಗೆ ಹೋದ ಕೂಡಲೇ ಭಗವಂತನು ಭಕ್ತಿಪೂರ್ವಕವಾಗಿ ನುಡಿದ, `ಶ್ರೀ ಈಶ್ವರಚಂದ್ರ ಪುರಿ ಅವರು ಜನ್ಮ ತಳೆದ ಕುಮಾರಹಟ್ಟ ಗ್ರಾಮಕ್ಕೆ ನನ್ನ ಗೌರವ ಅರ್ಪಿಸುವೆ.’

ಆ ಸ್ಥಳದಲ್ಲಿ ಭಗವಂತನು ಎಷ್ಟು ಭಾವೋದ್ರೇಕಗೊಂಡನೆಂದರೆ ಅವನು ತನ್ನ ಗುರುವಿನ ಹೆಸರನ್ನು ಪದೇ ಪದೇ ಜಪಿಸುತ್ತ ಕಣ್ಣೀರಧಾರೆ ಹರಿಸಿದನು. ಅಲ್ಲಿ ತನ್ನ ಕೈತುಂಬ ಮಣ್ಣನ್ನು ತೆಗೆದುಕೊಂಡು ತನ್ನ ಬಟ್ಟೆಯಲ್ಲಿ ಕಟ್ಟಿಕೊಂಡ. ಭಗವಂತನೆಂದ, `ಶ್ರೀ ಈಶ್ವರಚಂದ್ರ ಪುರಿ ಅವರು ಆವಿರ್ಭವಿಸಿದ ಈ ಸ್ಥಳದಿಂದ ಪಡೆದಿರುವ ಈ ಮಣ್ಣು ನನಗೆ ಅಮೂಲ್ಯ.’ ದೇವೋತ್ತಮ ಪರಮ ಪುರುಷನಿಗೆ ಮಾತ್ರ ತನ್ನ ಭಕ್ತರ ವೈಭವವನ್ನು ಹೆಚ್ಚಿಸುವ ಸಾಮರ್ಥ್ಯ ಇರುವುದು. ಅದು ಶ್ರೀ ಪುರಿ ಅವರ ಬಗೆಗೆ ಭಗವಂತನಿಗೆ ಇರುವ ಅಸೀಮ ಪ್ರೀತಿಯಲ್ಲಿ ಬಿಂಬಿತವಾಗಿದೆ. ಭಗವಂತನೆಂದ, `ಶ್ರೀ ಈಶ್ವರಚಂದ್ರ ಪುರಿ ಅವರ ಜೊತೆಗೂಡುವುದರೊಂದಿಗೆ ನಾನು ನನ್ನ ಗಯಾ ಯಾತ್ರೆಯನ್ನು ಫಲಪ್ರದಗೊಳಿಸಿದೆ.’

ಚೈತನ್ಯನಿಗೆ ದೀಕ್ಷೆ

ಮರುದಿನ ಭಗವಂತನು ಶ್ರೀ ಈಶ್ವರ ಪುರಿ ಅವರ ಬಳಿಗೆ ಹೋಗಿ ವಿನಮ್ರತೆಯಿಂದ ದೀಕ್ಷಾ ಮಂತ್ರ ಬೋಧಿಸಲು ಕೋರಿದ. ಆಗ ಶ್ರೀಲ ಪುರಿಪಾದರು ಹೇಳಿದರು, `ನೀನು ನನ್ನ ಬಳಿ ದೀಕ್ಷಾ ಮಂತ್ರ ಕೇಳುತ್ತಿರುವೆಯಾ? ನಾನು ನನ್ನ ಬದುಕು ಆತ್ಮವನ್ನೆ ನಿನಗೆ ಅರ್ಪಿಸಿಬಿಟ್ಟಿರುವೆ.’ ಎಲ್ಲರ ಆಧ್ಯಾತ್ಮಿಕ ಗುರುವಾದ ದೇವೋತ್ತಮ ಪರಮ ಪುರುಷ ಶ್ರೀ ನಾರಾಯಣನು ದಶಾಕ್ಷರೀ ಮಂತ್ರವನ್ನು ಸ್ವೀಕರಿಸಿದನು. ಶ್ರೀಪುರಿಪಾದರಿಗೆ  ಪ್ರದಕ್ಷಿಣೆ ಮಾಡಿದ ಭಗವಂತನು, `ನಾನು ನಿಮಗೆ ಶರಣಾಗಿರುವೆ. ದಯೆಯಿಟ್ಟು ಸದಾ ನನ್ನತ್ತ ಕರುಣೆಯ ದೃಷ್ಟಿ ಹರಿಸಿ. ಇದರಿಂದ ನಾನು ಕೃಷ್ಣನ ಪ್ರೀತಿಯ ಸಾಗರದಲ್ಲಿ ಸದಾ ತೇಲುತ್ತಿರಬಹುದು.’ ಭಗವಂತನ ನುಡಿಗಳಿಂದ ಭಾವೋದ್ರಿಕ್ತರಾದ ಶ್ರೀಪಾದಪುರಿ ಅವರು ಶ್ರೀ ಗೌರಾಂಗನನ್ನು ಆಲಿಂಗಿಸಿಕೊಂಡು ತಮ್ಮ ಎದೆಗೆ ಒತ್ತಿ ಹಿಡಿದರು. ಇಬ್ಬರ ಕಣ್ಣುಗಳಲ್ಲೂ ಜಲಧಾರೆ.

ಸರ್ವಜ್ಞನಾದ ಭಗವಂತನು ಶ್ರೀಲ ಪುರಿಪಾದರಿಗೆ ತನ್ನ ಕರುಣೆಯನ್ನು ನೀಡುತ್ತ ಕೆಲ ಸಮಯ ಗಯಾದಲ್ಲಿಯೇ ನೆಲೆಸಿದ್ದ. ತನ್ನ ಆವಿರ್ಭಾವದ ಕಾರಣವನ್ನು ಜನರಿಗೆ ಅರುಹಲು ಸಮಯವು ನಿಧಾನವಾಗಿ ಭಗವಂತನನ್ನು ಸಮೀಪಿಸುತ್ತಿತ್ತು. ಕೃಷ್ಣನ ಮೇಲಿನ ಅವನ ಪ್ರೀತಿ ದಿನೇ ದಿನೇ ಹೆಚ್ಚು ವ್ಯಕ್ತವಾಗುತ್ತಿತ್ತು. ಒಂದು ದಿನ ಭಗವಂತನು ತನ್ನ ದೀಕ್ಷಾ ಮಂತ್ರವನ್ನು ಜಪಿಸುತ್ತ ಏಕಾಂತ ಸ್ಥಳದಲ್ಲಿ ಕುಳಿತಿದ್ದ. ದೇವೋತ್ತಮನ ನೆನಪಿನಲ್ಲಿ ಅವನು ಆನಂದಲೋಕದಲ್ಲಿ ಕಳೆದುಹೋಗಿದ್ದ. ಮತ್ತು ಪ್ರಜ್ಞೆ ಮರಳಿ ಬಂದಾಗ, ಅವನು ತನ್ನ ದೇವರನ್ನು ಕರೆಯುತ್ತ ಅಳಲಾರಂಭಿಸಿದ.

ಕೃಷ್ಣನ ಅರಸುತ್ತ

`ಓ, ಕೃಷ್ಣ, ನನ್ನ ಪ್ರೀತಿಯ ದೇವರೇ. ಓ ಶ್ರೀಹರಿ, ನೀನು ನನ್ನ ಜೀವ ಮತ್ತು ಆತ್ಮ! ನೀನು ನನ್ನ ಹೃದಯವನ್ನು ಕದ್ದಿರುವೆ. ಆದರೆ, ಈಗ ಎಲ್ಲಿಗೆ ಓಡಿಹೋಗಿರುವೆ? ನನ್ನ ಪ್ರೀತಿಯ ದೇವನನ್ನು ಯಾವ ದಿಕ್ಕಿನಲ್ಲಿ ಕಂಡು ಹಿಡಿಯಲಿ?’ ತನ್ನ ಪ್ರೀತಿಯ ಭಗವಂತನ ಅಗಲಿಕೆಯಿಂದ ಶ್ರೀ ಗೌರಾಂಗನು ಪ್ರಲಾಪಿಸತೊಡಗಿದ. ಕೃಷ್ಣಪ್ರೇಮದ ಅಮೃತದ ಸವಿಯನ್ನು ಆಸ್ವಾದಿಸುತ್ತ ನೆಲದ ಮೇಲೆ ಹೊರಳಾಡಿದ. ಅವನ ದೇಹ ಧೂಳಿನಿಂದ ಆವೃತವಾಗಿತ್ತು. ಅವನು ಮತ್ತೆ ಕೂಗಿದ, `ನನ್ನ ಪ್ರೀತಿಯ ಕೃಷ್ಣನೆಲ್ಲಿ? ನನ್ನನ್ನು ಬಿಟ್ಟು ಅವನೆಲ್ಲಿಗೆ ಹೋದ?’

ವಿದ್ವಾಂಸ ಮತ್ತು ಗುರುವಾಗಿ ಪ್ರಕಟಗೊಂಡಿದ್ದ ಶ್ರೀ ನಿಮಾಯ್ ಪಂಡಿತನು ಈಗ ಅಶಾಂತನಾಗಿ ಕೃಷ್ಣನ ಪ್ರೀತಿಯ ಬಾಣದಿಂದ ಸ್ತಬ್ಧಗೊಂಡಿದ್ದ. ಭಗವಂತನ ಅಗಲಿಕೆಯನ್ನು ತಾಳಲಾರದೆ ಮತ್ತೆ ಮತ್ತೆ ನೆಲದಲ್ಲಿ ಹೊರಳಾಡುತ್ತಿದ್ದ. ಅತಿ ಶೀಘ್ರವಾಗಿ ಅವನ ಶಿಷ್ಯರು ಬಂದು ದೈವೀ ವಾಣಿಯ ನುಡಿ ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಬಹಳ ಎಚ್ಚರಿಕೆಯಿಂದ ಅವನನ್ನು ಅವರು ಬಾಹ್ಯ ಪ್ರಜ್ಞೆಗೆ ತಂದರು. ಆಗ ಭಗವಂತನೆಂದ, `ನೀವೆಲ್ಲರೂ ಮನೆಗೆ ಹಿಂತಿರುಗಿ. ನನಗೆ ನನ್ನ ಕುಟುಂಬಕ್ಕೆ ಮರಳಲು ಇಷ್ಟವಿಲ್ಲ. ನನ್ನ ಹೃದಯದ ದೇವ ಶ್ರೀ ಕೃಷ್ಣನನ್ನು ಅರಸುತ್ತ ನಾನು ವೃಂದಾವನಕ್ಕೆ ಹೋಗುತ್ತಿರುವೆ.’

ಶಿಷ್ಯರು ತಮ್ಮೆಲ್ಲ ಬುದ್ಧಿಯನ್ನೂ ಉಪಯೋಗಿಸಿ ಭಗವಂತನನ್ನು ಶಾಂತಗೊಳಿಸಿದರು. ಸತತವಾಗಿ ಕೃಷ್ಣನ ಪ್ರೀತಿಯಲ್ಲಿ ಮುಳುಗಿಹೋಗಿದ್ದ ವೈಕುಂಠಾಧಿಪತಿಯು ಈಗ ಶುದ್ಧ ಭಕ್ತನ ಮನಸ್ಥಿತಿಯಲ್ಲಿದ್ದ. ಕೃಷ್ಣನ ಅಗಲಿಕೆಯಿಂದ ಅವನ ಹೃದಯ ಅಶಾಂತವಾಗಿತ್ತು. ಒಂದು ದಿನ ಬೆಳಗಿನ ಜಾವ ಅವನು ಯಾರಿಗೂ ತಿಳಿಯದಂತೆ ಮನೆಯಿಂದ ಹೊರನಡೆದ. ಅವನು ಮಥುರಾಕ್ಕೆ ತೆರಳಲು ಅಪೇಕ್ಷಿಸಿದ್ದ. ಅವನು ಧ್ಯಾನಪರವಶನಾಗಿ ಅರೆ ಪ್ರಜ್ಞಾವಸ್ಥೆಯಲ್ಲಿ  `ಕೃಷ್ಣ, ನನ್ನ ಪ್ರೀತಿಯ ಕೃಷ್ಣ ನಿನ್ನನ್ನು ಎಲ್ಲಿ ಹುಡುಕಲಿ?’ ಎಂದು ಪ್ರಲಾಪಿಸುತ್ತ ಸಾಗಿದ.

ಸ್ವಲ್ಪ ಸಮಯದ ಅನಂತರ ಅವನಿಗೆ ದೈವೀ ವಾಣಿಯೊಂದು ಕೇಳಿಸಿತು, `ಈಗ ನೀನು ಮಥುರಾಕ್ಕೆ ಹೋಗಬೇಡ. ನೀನು ಮಥುರಾಕ್ಕೆ ತೆರಳಬೇಕಾದ ಸಮಯ ಬರುತ್ತದೆ. ಆದರೆ ಈಗ ನೀನು ನವದ್ವೀಪಕ್ಕೆ, ನಿನ್ನ ಮನೆಗೆ ಹಿಂತಿರುಗು. ನೀನು ದೇವೋತ್ತಮ ಪರಮ ಪುರುಷ, ವೈಕುಂಠಾಪತಿ. ಇಡೀ ವಿಶ್ವವನ್ನು ಮುಕ್ತಗೊಳಿಸಲು ನೀನು ನಿನ್ನ ಎಲ್ಲ ಶಾಶ್ವತ ಸಹಚರರೊಂದಿಗೆ ಈ ಲೌಕಿಕ ಜಗತ್ತಿಗೆ ಬಂದಿರುವೆ. ನೀನು ಜಗತ್ತಿನಾದ್ಯಂತ ಕೃಷ್ಣನ ಪವಿತ್ರ ನಾಮವನ್ನು ಜಪಿಸುವ ಪ್ರಚಾರ ಮಾಡುವೆ. ಮತ್ತು ಅಮೂಲ್ಯವಾದ ಕೃಷ್ಣನ ಪ್ರೀತಿಯನ್ನು ಎಲ್ಲರಿಗೂ ಉಚಿತವಾಗಿ ಹಂಚುವೆ. ನೀನು ಸರ್ವಜ್ಞ ಮತ್ತು ಈಗಾಗಲೇ ನಿನಗೆ ಎಲ್ಲ ತಿಳಿದಿದೆ.

`ಯಾರ ವೈಭವವನ್ನು ಅನಂತ ಶೇಷನು ಸತತವಾಗಿ ಹಾಡುವನೋ, ಯಾರ ಅಮೃತ ಸವಿಯನ್ನು ಬ್ರಹ್ಮ, ಶಿವ, ಸನತ್ ಕುಮಾರರು ಆಸ್ವಾದಿಸುವರೋ ಅಂತಹ ಅಪೇಕ್ಷಿತವಾದುದನ್ನು ಹಂಚಲು ನೀನು ಬಂದಿರುವೆ. ನಾವು ನಿನ್ನ ಶಾಶ್ವತ ಸೇವಕರು-ನಿನ್ನ ಆವಿರ್ಭಾವದ ಉದ್ದೇಶವನ್ನು ನಿನಗೆ ನೆನಪಿಸುವುದು ನಮ್ಮ ಕರ್ತವ್ಯ. ನಾವು ನಮ್ಮ ಈ ಕೋರಿಕೆಯನ್ನು ನಿನ್ನ ಚರಣಕಮಲದಡಿ ಇಡುತ್ತೇವೆ. ನೀನು ಎಲ್ಲ ಜೀವಿಗಳ ಪೋಷಕ, ಪರಮ ಸ್ವತಂತ್ರ ಸತ್ಯ. ನಿನ್ನ ಪರಿಶುದ್ಧ ಅಪೇಕ್ಷೆಗಳನ್ನು ಕಾರ್ಯಗತಗೊಳಿಸಲು ಯಾರೂ ನಿನಗೆ ತಡೆ ಒಡ್ಡಲಾರರು. ಆದುದರಿಂದ, ಪ್ರಭುವೇ, ದಯೆಯಿಟ್ಟು ನಿನ್ನ ಮನೆಗೆ ಹಿಂತಿರುಗು ಮತ್ತು ಅತಿ ಶೀಘ್ರದಲ್ಲಿ ನೀನು ಮಥುರಾಕ್ಕೆ ಹೋಗುವೆ.’

ಈ ದೈವೀ ಸಂದೇಶ ಕೇಳಿ ಶ್ರೀ ಗೌರಸುಂದರನು ತನ್ನ ಮಥುರಾ ಯಾತ್ರೆಗೆ ತಡೆ ಹಾಕಿ ಗಯಾದಲ್ಲಿದ್ದ ತನ್ನ ಕೋಣೆಗೆ ಹಿಂತಿರುಗಿದ. ಅವನು ಸಂತೋಷ ಮತ್ತು ಸಂತೃಪ್ತ ಭಾವದಿಂದಿದ್ದ. ಗಯಾದ ಯಾತ್ರೆ ಪೂರ್ಣಗೊಂಡಿದ್ದರಿಂದ ಕೃಷ್ಣನ ಪವಿತ್ರ ನಾಮದ ಪ್ರಚುರ ಮತ್ತು ಕೃಷ್ಣ-ಪ್ರೇಮವನ್ನು ಎಲ್ಲರಿಗೂ ಹಂಚಬೇಕಾದ ಪವಿತ್ರ ಕಾರ್ಯವನ್ನು ಆರಂಭಿಸಬೇಕಾದ ನವದ್ವೀಪಕ್ಕೆ ಶ್ರೀ ಗೌರಾಂಗನು ತನ್ನ ಶಿಷ್ಯರೊಂದಿಗೆ ತೆರಳಿದ. ಗಯಾದಿಂದ ವಾಪಸಾದ ಮೇಲೆ ಅವನಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದಿತ್ತು. ತನ್ನಲ್ಲಿ ಅಲೌಕಿಕ ಭಕ್ತಿ ಪ್ರೇಮ ಹೆಚ್ಚಾಗುತ್ತಿರುವ ಅನುಭವ ಅವನದಾಯಿತು.

ಭಗವಂತನ ಗಯಾ ಯಾತ್ರೆ ಬಗೆಗೆ ಯಾರು ಭಕ್ತಿ ಮತ್ತು ವಿಶ್ವಾಸದಿಂದ ಕೇಳುವರೋ ಅವರ ಹೃದಯದಲ್ಲಿ ಶ್ರೀ ಗೌರಸುಂದರನು ಖಂಡಿತ ಪ್ರತ್ಯಕ್ಷನಾಗುತ್ತಾನೆ. ಅವನ ಅಲೌಕಿಕ ಲೀಲೆಗಳನ್ನು ಕೇಳುವುದರಿಂದಲೇ ಯಾರೂ ಕೂಡ ಕೃಷ್ಣನ ಸಂಗಾತಿಗಳಾಗಬಹುದು. ಈ ಜೊತೆಯು ಶಾಶ್ವತ ಮತ್ತು ಅಂತಹ ಶುದ್ಧ ಭಕ್ತರನ್ನು ಭಗವಂತ ಎಂದಿಗೂ ಅಗಲುವುದಿಲ್ಲ.

ಗಯಾದಿಂದ ಹೊರಡುವ ಮುನ್ನ ಶ್ರೀ ಗೌರಾಂಗನು ಶ್ರೀ ಈಶ್ವರಚಂದ್ರ ಪುರಿ ಅವರನ್ನು ಭೇಟಿ ಮಾಡಿ ಅವರ ಅನುಮತಿ ಕೋರಿದ. ಅನಂತರ ಅವನು ನವದ್ವೀಪಧಾಮಕ್ಕೆ ಹಿಂತಿರುಗಿದ. ನವದ್ವೀಪದ ಜನರ ಸಂತೋಷಕ್ಕೆ ಎಣೆಯೇ ಇರಲಿಲ್ಲ.

(ಮುಂದುವರಿಯುವುದು)
Leave a Reply

Your email address will not be published. Required fields are marked *