Search
Wednesday 15 July 2020
  • :
  • :

ಸುವರ್ಣಾವತಾರ ಭಾಗ – 17

ಚೈತನ್ಯನು ತನ್ನ ಗುರುತಿನ ಪರಮ ಸತ್ಯವನ್ನು ಯಾರೂ ಅರಿಯದಂತೆ ತನ್ನ ಪಾಂಡಿತ್ಯ ಲೀಲೆಯನ್ನು ಮುಂದುವರಿಸಿದನು.

ಮುಕುಂದ ಸಂಜಯನು ಭಗವಂತನ ಚಿರ ಸೇವಕ ಮತ್ತು ಪುರುಷೋತ್ತಮ ದಾಸ ಅವನ ಪುತ್ರ. ಈ ಮುಕುಂದ ಸಂಜಯನು ಅದೆಷ್ಟು ಅದೃಷ್ಟವಂತನೆಂದರೆ ದೇವೋತ್ತಮ ಪರಮ ಪುರುಷನಾದ ನಿಮಾಯ್ ಅವರ ಮನೆಗೆ ಬೋಧಿಸಲು ಪ್ರತಿ ದಿನವೂ ಹೋಗುತ್ತಿದ್ದ. ಅಲ್ಲಿಗೆ ತೆರಳಿದ ಕೂಡಲೇ ಶ್ರೀ ಗೌರಾಂಗನು ಅವರ ಮನೆಯ ಒಳಾಂಗಣದಲ್ಲಿ ಒಬ್ಬನೇ ಕೂತಿರುತ್ತಿದ್ದ. ಅನಂತರ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬರುತ್ತಿದ್ದರು. ಕೆಲವೊಮ್ಮೆ ವಿದ್ಯಾರ್ಥಿಗಳು ತಮ್ಮ ಹಣೆಯ ಮೇಲೆ ಊರ್ಧ್ವ-ಪುಂಡ್ರ-ತಿಲಕ ಹಾಕಿಕೊಳ್ಳುವುದನ್ನು ಮರೆತಿರುತ್ತಿದ್ದರು. ಸನಾತನ ಧರ್ಮದ ಪ್ರಚಾರಕ ಮತ್ತು ಸಂರಕ್ಷಕನಾಗಿ ನಿಮಾಯ್‌ಗೆ ಈ ಬದ್ಧಾತ್ಮಗಳು ಧರ್ಮ ಪಥದಿಂದ ಬೇರೆ ಮಾರ್ಗ ಹಿಡಿಯದಂತೆ ನೋಡಿಕೊಳ್ಳುವುದು  ಅನಿವಾರ್ಯವಾಗಿತ್ತು. ಆದುದರಿಂದ ಅವನು ಅಗತ್ಯ ಕಂಡಾಗಲೆಲ್ಲ ತನ್ನ ವಿದ್ಯಾರ್ಥಿಗಳನ್ನು ತಿದ್ದುತ್ತಿದ್ದನು. ಹಾಗೆ ಮರೆತ ವಿದ್ಯಾರ್ಥಿಯನ್ನು ಯಾವ ಮಟ್ಟದಲ್ಲಿ ದಂಡಿಸುತ್ತಿದ್ದನೆಂದರೆ ಆ ವಿದ್ಯಾರ್ಥಿ ಅಪಮಾನದಿಂದ ಮೌನ ವಹಿಸುತ್ತಿದ್ದ ಮತ್ತು ಅವನೆಂದಿಗೂ ತಿಲಕ ಹಾಕಿಕೊಳ್ಳುವುದನ್ನು ಖಂಡಿತ ಮರೆಯುತ್ತಿರ‌ಲಿಲ್ಲ.

`ನನ್ನ ಪ್ರೀತಿಯ ವಿದ್ಯಾರ್ಥಿಯೇ, ನೀನು ತಿಲಕ ಹಾಕಿಕೊಂಡಿಲ್ಲ. ಯಾಕೆ?’ ನಿಮಾಯ್ ಕೇಳುತ್ತಿದ್ದನು, `ತಿಲಕ ಹಾಕಿಕೊಳ್ಳದ ಹಣೆಯು ಸ್ಮಶಾನದಂತೆ ಎಂದು ವೈದಿಕ ಸಾಹಿತ್ಯಗಳು ಹೇಳಿವೆ. ನಿನ್ನ ಈ ನಿರ್ಲಕ್ಷ್ಯವು ನಿನ್ನಲ್ಲಿ ಬ್ರಾಹ್ಮಣ ಪದ್ಧತಿಯು ನಿಷ್ಪ್ರಯೋಜಕವಾಗಿದೆ ಎಂದು ನನಗೆ ಅರ್ಥವಾಗುತ್ತಿದೆ. ಹೋಗಿ, ಮನೆಗೆ ತೆರಳಿ ಮೊದಲು ನಿಮ್ಮ ಬ್ರಾಹ್ಮಣ್ಯ ಕರ್ತವ್ಯಗಳನ್ನು ಪುನಃ ಸರಿಯಾಗಿ ನಿರ್ವಹಿಸು. ಅನಂತರ ತಿಲಕ ಹಾಕಿಕೊಂಡು ಶಾಲೆಗೆ ಬರಬಹುದು.’

ಈ ರೀತಿ ಭಗವಂತನು ತನ್ನ ವಿದ್ಯಾರ್ಥಿಗಳಿಗೆ ಬ್ರಾಹ್ಮಣ್ಯ ಮತ್ತು ಧಾರ್ಮಿಕ ಪದ್ಧತಿ ಆಚರಣೆ ಬಗೆಗೆ ಬೋಧಿಸುತ್ತಿದ್ದ. ಶ್ರೀ ಗೌರಾಂಗನು ತನ್ನ ದರ್ಪದ ಸ್ವಭಾವವನ್ನು ಸುಧಾರಿಸಿಕೊಳ್ಳಲೂ ಇಲ್ಲ, ತನ್ನ ಟೀಕೆಗೆ ಜನರನ್ನು ಒಳಪಡಿಸುವುದನ್ನು ಬಿಡಲೂ ಇಲ್ಲ. ಯಾರು ನಿರ್ಲಕ್ಷ್ಯದಿಂದ ಇರುತ್ತಿದ್ದರೋ ಅವರು ಪ್ರಭುವಿನ ತಿದ್ದುವಿಕೆಗೆ ಅರ್ಹರಾಗುತ್ತಿದ್ದರು. ನಿಮಾಯ್‌ನ ವ್ಯಕ್ತಿತ್ವವು ಯಾವಾಗಲೂ ಅನುಕರಣೀಯ- ಮಹಿಳೆಯರ ಸಮ್ಮುಖದಲ್ಲಿ ಅವನೆಂದೂ ಹಾಸ್ಯವಾಗಿ ಮಾತನಾಡುತ್ತಿರಲಿಲ್ಲ ಅಥವಾ ನಗೆಯಾಡುತ್ತಿರಲಿಲ್ಲ. ಹಾಗೆ ನೋಡಿದರೆ, ಅವನು ಮಹಿಳೆಯರಿಂದ ಸಾಕಷ್ಟು ದೂರವೆ ಉಳಿಯುತ್ತಿದ್ದ.

ಶ್ರೀಹಟ್ಟಾದ ನಿವಾಸಿಗಳನ್ನು ಚುಡಾಯಿಸಿ ಅವರಲ್ಲಿ ತಪ್ಪು ಕಂಡುಹಿಡಿಯುವುದು ನಿಮಾಯ್‌ಗೆ ತುಂಬ ಇಷ್ಟದ ವಿಷಯವಾಗಿತ್ತು. ಅವನು ಅವರ ಪದ ಉಚ್ಚಾರಣೆಯನ್ನು ಹಾಸ್ಯವಾಗಿ ಅನುಕರಣ ಮಾಡುತ್ತಿದ್ದ. ಕುಪಿತ ಶ್ರೀಹಟ್ಟಾದ ನಿವಾಸಿಗಳು ಪ್ರತ್ಯುತ್ತರ ನೀಡುತ್ತಿದ್ದರು, `ಓ ಭಗವಂತ, ನೀನು ಯಾವ ಪ್ರದೇಶದಿಂದ ಬಂದವ? ನಿನ್ನ ತಂದೆ, ತಾಯಿ, ಅವರ ವಂಶಸ್ಥರು ಎಲ್ಲಿಂದ ಬಂದವರೆಂದು ಹೇಳು. ಅವರಲ್ಲಿ ಯಾರು ಶ್ರೀಹಟ್ಟಾದಲ್ಲಿ ಹುಟ್ಟಲಿಲ್ಲ? ನೀನೇ ಶ್ರೀಹಟ್ಟಾದಿಂದ ಬಂದವನು. ಆದರೂ ನಮ್ಮ ಬಗೆಗೆ ಯಾಕೆ ಹಾಗೆ ತಮಾಷೆ ಮಾಡುವೆ?’

ನವದ್ವೀಪದಲ್ಲಿ ದೇವೋತ್ತಮ ಪರಮ ಪುರುಷನು ನಿಮಾಯ್ ಪಂಡಿತ, ವಿದ್ವಾಂಸ. ವೈಕುಂಠಾಧಿಪತಿಯು ಗುರುವಾಗಿ ಮುಕುಂದ ಸಂಜಯ ಅವರ ಗೃಹದಲ್ಲಿ ತನ್ನ ಅಲೌಕಿಕ ಲೀಲೆಗಳನ್ನು ಆನಂದಿಸುತ್ತಿದ್ದ. ಅವನ ಶಿಷ್ಯರೆಲ್ಲ ಅವನ ಸುತ್ತ ಕೂರುತ್ತಿದ್ದರು. ಅವನು ಬಹಳ ಸಂತೋಷದಿಂದ ಅವರಿಗೆ ಬೋಧಿಸುತ್ತಿದ್ದ. ಕೆಲವೊಮ್ಮೆ ಅವನು ತಲೆನೋವೆಂದು ನಟಿಸಿ ನೀವಿಸಿಕೊಳ್ಳುತ್ತಿದ್ದ. ಅನಂತರ ಅವನು ಪುನಃ ಚರ್ಚೆ ಮುಂದುವರಿಸುತ್ತಿದ್ದ ಮತ್ತು ತನ್ನ ಆಧ್ಯಾತ್ಮಿಕದಲ್ಲಿ ಮಗ್ನನಾಗುತ್ತಿದ್ದ,

ಪುನರ್ ವಿವಾಹ:

ಈ ರೀತಿ ಭಗವಂತನು ತನ್ನ ಚಟುವಟಿಕೆಗಳಲ್ಲಿ ಮಗ್ನನಾಗಿರುತ್ತಿದ್ದರೆ, ಅವನ ಮಾತೆ ಶಚೀದೇವಿಯು ಅವನ ಪುನರ್ ವಿವಾಹದ ಬಗೆಗೆ ಯೋಚಿಸುತ್ತಿದ್ದಳು. ಅವಳು ನವದ್ವೀಪದಲ್ಲಿ ನಿಮಾಯ್‌ಗೆ ಸೂಕ್ತವಾದ ಹೆಣ್ಣನ್ನು ಹುಡುಕುತ್ತಿದ್ದಳು. ಶ್ರೀ ಸನಾತನ ಮಿಶ್ರ ಒಬ್ಬ ಧರ್ಮನಿಷ್ಠ ಮತ್ತು ಉದಾರಿ ಬ್ರಾಹ್ಮಣ. ಅವನು ಪರಿಶುದ್ಧ ಹೃದಯದ ಶ್ರೀ ವಿಷ್ಣು ಭಕ್ತನಾಗಿದ್ದ. ಅವನು ಅತಿಥಿ ಸತ್ಕಾರ ಮಾಡುತ್ತ ಅಗತ್ಯ ಉಳ್ಳವರಿಗೆ ಸೇವೆ ಸಲ್ಲಿಸುತ್ತ ನವದ್ವೀಪದಲ್ಲಿ ವಾಸಿಸುತ್ತಿದ್ದ. ಕುಲೀನ ಕುಟುಂಬದಲ್ಲಿ ಜನಿಸಿದ್ದ ಅವನು ಪ್ರಾಮಾಣಿಕ ಮತ್ತು ಸ್ವಯಂ ನಿಯಂತ್ರಿತ ವ್ಯಕ್ತಿಯಾಗಿದ್ದ. ವಿದ್ವಾಂಸನಾಗಿ `ರಾಜ್ ಪಂಡಿತ’ ಎಂಬ ಬಿರುದು ಪಡೆದಿದ್ದ ಅವನು ನವದ್ವೀಪದ ಒಬ್ಬ ಶ್ರೀಮಂತನಾಗಿ ಅನೇಕ ಜನರ ಜೀವನ ಪೋಷಕನಾಗಿದ್ದ.

ಸನಾತನ ಮಿಶ್ರನ ಮಗಳು ಶ್ರೀ ಲಕ್ಷ್ಮೀದೇವಿಯಂತೆ ಸುಂದರಿಯೂ ಸುಶೀಲಳೂ ಆಗಿದ್ದಳು. ಅವಳನ್ನು ನೋಡಿದ ಕೂಡಲೇ ಇವಳು ತನ್ನ ಮಗನಿಗೆ ಹೆಂಡತಿಯಾಗಲು ತಕ್ಕವಳೆಂದು ಅವಳಿಗೆ ದೃಢವಾಗಿಬಿಟ್ಟಿತು. ಆ ಯುವತಿಯು ಬಾಲ್ಯದಿಂದಲೂ ದಿನಕ್ಕೆ ಎರಡು, ಮೂರು ಬಾರಿ ಗಂಗಾ ಸ್ನಾನ ಮಾಡುತ್ತಿದ್ದಳು. ಅವಳು ತನ್ನ ಪೋಷಕರಿಗೆ ವಿಧೇಯಳಾಗಿದ್ದಳು ಮತ್ತು ಶ್ರೀ ಕೃಷ್ಣನ ಭಕ್ತಿಯಲ್ಲದೆ ಬೇರಾವ ಆಸಕ್ತಿಯೂ ಅವಳಿಗೆ ಇರಲಿಲ್ಲ. ಪ್ರತಿ ದಿನವೂ ಅವಳು ಗಂಗೆಯ ಸ್ನಾನ ಘಟ್ಟದಲ್ಲಿ ಶಚೀಮಾತೆಯನ್ನು ಕಂಡಾಗ ಅವಳಿಗೆ ತನ್ನ ಗೌರವ ಅರ್ಪಿಸುತ್ತಿದ್ದಳು. ಆಗ ಶಚೀಮಾತೆಯು ಅವಳನ್ನು `ಕೃಷ್ಣನು ನಿನಗೆ ಒಳ್ಳೆಯ ಪತಿಯನ್ನು ದಯಪಾಲಿಸಲಿ’ ಎಂದು ಆಶೀರ್ವದಿಸುತ್ತಿದ್ದಳು.

ಅದೊಂದು ದಿನ ಸ್ನಾನ ಮಾಡುವಾಗ ಶಚೀಮಾತೆ `ಈ ಯುವತಿ ನನ್ನ ಮಗನನ್ನು ಮದುವೆಯಾಗಬೇಕು’ ಎಂದು ಹೇಳಿಕೊಂಡಳು. ಭಗವಂತನನ್ನು ಅಳಿಯ ಮಾಡಿಕೊಳ್ಳಲು ಶ್ರೀ ಸನಾತನ ಮಿಶ್ರ ಮತ್ತು ಅವರ ಬಂಧುಗಳೂ ಕಾತರರಾಗಿದ್ದರು. ಒಂದು ದಿನ ಶಚೀಮಾತೆಯು ಕಾಶೀನಾಥ ಪಂಡಿತರನ್ನು ಕರೆಯಿಸಿಕೊಂಡು, `ಸ್ವಾಮಿ, ನನ್ನ ಬಳಿ ಪ್ರಸ್ತಾವವೊಂದಿದೆ. ಹೋಗಿ, ರಾಜಾ ಪಂಡಿತರನ್ನು ಭೇಟಿ ಮಾಡಿ. ಅವರಿಗೆ ಅಪೇಕ್ಷೆ ಇದ್ದರೆ ಅವರ ಮಗಳನ್ನು ನನ್ನ ಮಗನಿಗೆ ಮದುವೆ ಮಾಡಿಕೊಡಲಿ.’ ಕಾಶೀನಾಥ ಪಂಡಿತನು ಸಂತೋಷದಿಂದ ಮನಸ್ಸಿನಲ್ಲೇ ಭಗವಂತನ ನಾಮ ಸ್ಮರಣೆ ಮಾಡುತ್ತ ಶ್ರೀ ಸನಾತನ ಮಿಶ್ರ ಅವರ ಮನೆಗೆ ತೆರಳಿದ.

ತನ್ನ ಮನೆಗೆ ಬಂದ ಕಾಶೀನಾಥ ಪಂಡಿತನಿಗೆ ಆಸನ ನೀಡಿದ ರಾಜ ಪಂಡಿತನು, `ಸ್ವಾಮಿ, ಇಲ್ಲಿಗೆ ಬರಲು ಕಾರಣವೇನು’ ಎಂದು ಕೇಳಿದ.

ಕಾಶೀನಾಥ ಪಂಡಿತನು ಉತ್ತರಿಸಿದ, `ನಾನು ಒಂದು ಪ್ರಸ್ತಾವವನ್ನು ತಂದಿರುವೆ. ನಿನಗೆ ಇಷ್ಟವಾದರೆ ಅದನ್ನು ಹೊರಗೆೆಡಹುವೆ. ನೀನು ನಿನ್ನ ಮಗಳು ವಿಷ್ಣುಪ್ರಿಯಳನ್ನು ವಿಶ್ವಂಭರ ಪಂಡಿತನಿಗೆ ವಿವಾಹ ಮಾಡಿಕೊಡಬೇಕು. ಇದು ಅತ್ಯುತ್ತಮ ಜೋಡಿ ಎಂದು ನನಗನಿಸಿದೆ. ಅವನೊಬ್ಬ ದೈವಿಕ ವ್ಯಕ್ತಿಯಾಗಿದ್ದು ಎಲ್ಲ ರೀತಿಯಿಂದಲೂ ನಿನ್ನ ಮಗಳಿಗೆ ಸೂಕ್ತನಾಗಿದ್ದಾನೆ. ಅತ್ಯಂತ ಗುಣವಂತೆಯಾದ ನಿನ್ನ ಮಗಳು ಅವನಿಗೆ ಸೂಕ್ತಳಾದವಳು. ವಿಷ್ಣುಪ್ರಿಯ ಮತ್ತು ನಿಮಾಯ್ ಪಂಡಿತ ನನಗೆ ದೈವ ದಂಪತಿ ಶ್ರೀ ಕೃಷ್ಣ ಮತ್ತು ರುಕ್ಮಿಣಿಯರನ್ನು ನೆನಪು ಮಾಡಿಕೊಡುತ್ತದೆ. ಎಂತಹ ಅದ್ಭುತ ಜೋಡಿ!’

ರಾಜ ಪಂಡಿತನು ತನ್ನ ಪತ್ನಿ ಮತ್ತು ನಿಕಟ ಬಂಧುಗಳಿಗೆ ಈ ವಿಷಯ ತಿಳಿಸಿ ಅವರ ಸಲಹೆ ಕೇಳಿದ. ಎಲ್ಲರೂ ಒಮ್ಮತದಿಂದ ಒಪ್ಪಿಕೊಳ್ಳುತ್ತ, `ಈ ವಿಷಯದಲ್ಲಿ ಇನ್ನೇನು ಚರ್ಚೆ? ಇದು ಅತ್ಯುತ್ತಮ ಪ್ರಸ್ತಾವ‌. ಕ್ಷಿಪ್ರವಾಗಿ ಎಲ್ಲ ವ್ಯವಸ್ಥೆ ಶುರು ಮಾಡಿ’ ಎಂದರು. ಸಂತೋಷದಿಂದ ಬೀಗುತ್ತಿದ್ದ ರಾಜಾ ಪಂಡಿತನು ಕಾಶೀನಾಥ ಪಂಡಿತನಿಗೆ ಹೇಳಿದ, `ವಿಶ್ವಂಭರನೊಂದಿಗೆ ನನ್ನ ಮಗಳು ವಿಷ್ಣುಪ್ರಿಯಳ ವಿವಾಹ ಮಾಡಲು ನಾನು ನಿರ್ಧರಿಸಿರುವೆ. ಆದುದರಿಂದ ಎಲ್ಲ ವ್ಯವಸ್ಥೆಯಾಗಲಿ. ದೇವೋತ್ತಮ ಪರಮ ಪುರುಷನು ಈ ರೀತಿ ಅಪೇಕ್ಷಿಸಿದರೆ, ನನ್ನ ಕುಟುಂಬ ಮತ್ತು ಪಿತೃಗಳು ನನ್ನ ಮಗಳ ಈ ಮದುವೆಯಿಂದ ಕೃತಾರ್ಥರು. ನಾನು ಸಂಪೂರ್ಣವಾಗಿ ಈ ಮದುವೆ ಪರವಾಗಿದ್ದೇನೆ. ದಯೆಯಿಟ್ಟು ಅವರ ಮನೆಗೆ ತೆರಳಿ ಈ ವಿಷಯವನ್ನು ಅರುಹಿ.’

ತಮ್ಮ ಈ `ಯಾತ್ರೆ’ಯ ಯಶಸ್ಸಿನಿಂದ ತೃಪ್ತಿಗೊಂಡ ಕಾಶೀನಾಥ ಪಂಡಿತರು ಶಚೀಮಾತೆಗೆ ಎಲ್ಲ ವಿವರ ನೀಡಿದರು. ಎಲ್ಲವೂ ಸರಾಗವಾಗಿ ನಡೆದ ಕಾರಣ ಶಚೀಮಾತೆಗೆ ಸಮಾಧಾನವಾಯಿತು. ಸ್ವಲ್ಪವೂ ವಿಳಂಬಿಸದೆ ಅವಳು ಮದುವೆ ಸಿದ್ಧತೆ ಆರಂಭಿಸಿದಳು.

ನಿಮಾಯ್‌ನ ವಿವಾಹದ ಸುದ್ದಿ ತಿಳಿಯುತ್ತಿದಂತೆಯೇ ಅವನ ವಿದ್ಯಾರ್ಥಿಗಳು ಆನಂದಿತರಾದರು. ಬುದ್ಧಿಮಂತ ಖಾನ್ ಎಂಬ ಒಬ್ಬ ಶ್ರೀಮಂತನು, `ಮದುವೆಯ ಖರ್ಚನ್ನು ನಾನು ವಹಿಸಿಕೊಳ್ಳುವೆ’ ಎಂದು ಮುಂದೆ ಬಂದ. ಆದರೆ, ಮುಕುಂದ ಸಂಜಯನು ಆಕ್ಷೇಪ ವ್ಯಕ್ತಪಡಿಸಿದ, `ನನ್ನ ಪ್ರೀತಿಯ ಮಿತ್ರನೇ, ನೀನೇ ಎಲ್ಲ ಜವಾಬ್ದಾರಿ ವಹಿಸಿಕೊಂಡರೆ ನಾನು ಮಾಡಬೇಕಾದದ್ದು ಏನು?’ ಅದಕ್ಕೆ ಬುದ್ಧಿಮಂತ ಖಾನ್, `ಪ್ರಿಯ ಮಿತ್ರನೇ, ಈ ವಿವಾಹವು ಮತ್ತೊಂದು ಬಡ ಬ್ರಾಹ್ಮಣನ ಮನೆಯ ಮದುವೆಯಾಗಲು ನಾನು ಅವಕಾಶ ನೀಡುವುದಿಲ್ಲ. ನಾನು ನಿಮಾಯ್ ಪಂಡಿತನ ಮದುವೆಗೆ ಎಂತಹ ವ್ಯವಸ್ಥೆ ಮಾಡುತ್ತೇನೆಂದರೆ ಒಬ್ಬ ದೊಡ್ಡ ರಾಜಕುಮಾರನ ವಿವಾಹ ಆಗುತ್ತಿದೆಯೇನೋ ಎಂದು ಎಲ್ಲರೂ ಭಾವಿಸಬೇಕು.’

ಮದುವೆಗೆ ಮುನ್ನ ನಡೆಯುವ ಪ್ರಮುಖ ವಿಧಿಯಾದ ಅಧಿವಾಸ ಶಾಸ್ತ್ರವು ಸಡಗರ ಸಂಭ್ರಮದ ಮಧ್ಯೆ ಶುಭ ಗಳಿಗೆಯಲ್ಲಿ ನಡೆಯಿತು. ವಿವಾಹ ನಡೆಯುವ ಸ್ಥಳವನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿತ್ತು. ಬಣ್ಣ ಬಣ್ಣದ ವಿನ್ಯಾಸಗಳಿದ್ದ ನೀರಿನ ಪಾತ್ರೆಗಳು, ತುಪ್ಪದ ದೀಪಗಳು, ಧಾನ್ಯಗಳು, ಮೊಸರು, ಮತ್ತು ಮಾವಿನ ಎಲೆಯ ತೋರಣ ಎಲ್ಲವೂ ಕಣ್ ಸೆಳೆಯುವಂತೆ ಇದ್ದವು. ಅಂತಹ ಸಮಾರಂಭಕ್ಕೆ ಅಗತ್ಯವಾದ ವಿಧ ವಿಧವಾದ ಶುಭ ವಸ್ತುಗಳನ್ನು ನೆಲದ ಮೇಲೆ ಇಡಲಾಗಿತ್ತು. ನೆಲವನ್ನು ಬಣ್ಣದ ರಂಗೊಲಿಯಿಂದ ಅಲಂಕರಿಸಲಾಗಿತ್ತು.

ನವದ್ವೀಪದಲ್ಲಿದ್ದ ಭಗವಂತನ ವೈಷ್ಣವ ಭಕ್ತರು, ಬ್ರಾಹ್ಮಣರು ಮತ್ತು ಎಲ್ಲ ಸಜ್ಜನರು ಶುಭ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಧಿವಾಸದಂದು ಸಂಜೆ ಸಮಾರಂಭಕ್ಕೆ ತಪ್ಪದೇ ಬರುವಂತೆ ಅವರಿಗೆಲ್ಲ ಆಹ್ವಾನ ಪತ್ರಿಕೆ ಹಂಚಲಾಗಿತ್ತು. ಮಧ್ಯಾಹ್ನಕ್ಕೆ ಮುನ್ನವೇ ಸಂಗೀತಗಾರರು ಆಗಮಿಸಿ ಪ್ರದರ್ಶನ ನೀಡಲಾರಂಭಿಸಿದರು. ಮೃದಂಗದ ಮೃದು, ಗಟ್ಟಿ ಧ್ವನಿ, ಶೆಹನಾಯ್ ಮತ್ತು ತಾಳಗಳ ಮಾಧುರ್ಯ ಎಲ್ಲೆಡೆ ಪಸರಿಸಿತ್ತು. ಪಂಡಿತರು ವೈದಿಕ ಮಂತ್ರಗಳನ್ನು ಪಠಿಸತೊಡಗಿದರು. ಮಹಿಳೆಯರ ಆನಂದದ ಕಲರವವು ಮದುವೆ ಮನೆಗೆ ಇನ್ನಷ್ಟು ಕಳೆ ಕೊಟ್ಟಿತ್ತು.

ಬ್ರಾಹ್ಮಣ ಪಂಗಡದ ಮಕುಟ ಮಣಿಯಾದ ನಿಮಾಯ್ ಪಂಡಿತನು ವೈದಿಕ ಮಂತ್ರ ಘೋಷಕರ ಮಧ್ಯೆ ಆಸೀನನಾಗಿದ್ದ. ಅವನ ಉಪಸ್ಥಿತಿಯಿಂದ ಬ್ರಾಹ್ಮಣರು ಮತ್ತು ಪುರೋಹಿತರು ಪರಾಮಾನಂದಗೊಂಡಿದ್ದರು. ಅತಿಥಿಗಳನ್ನು ಔಪಚಾರಿಕವಾಗಿ ಸ್ವಾಗತಿಸಲು ಅಗತ್ಯವಾದ ವಿಧ ವಿಧವಾದ ವಸ್ತುಗಳನ್ನು ನಿಮಾಯ್ ಬಳಿಗೆ ತರಲಾಯಿತು. ಗೌರವಾನ್ವಿತ ಅತಿಥಿಗಳಿಗೆ ಹೂವಿನ ಹಾರ ಹಾಕಿದ ನಿಮಾಯ್, ಅವರ ಹಣೆಗೆ ಗಂಧವನ್ನು ತೀಡಿದ. ಆ ಸಂದರ್ಭಕ್ಕೆ ಅನುಗುಣವಾಗಿ ಅವರಿಗೆಲ್ಲ ಎಲೆೆ ಅಡಕೆಯನ್ನು ನೀಡಿದ.

ಆ ದಿನಗಳಲ್ಲಿ ನವದ್ವೀಪದಲ್ಲಿ ಬ್ರಾಹ್ಮಣರ ಸಂಖ್ಯೆ ಅಧಿಕವಾಗಿತ್ತು. ಆದುದರಿಂದ ಲೆಕ್ಕವಿಲ್ಲದಷ್ಟು ಮಂದಿ ಬಂದು ಹೋದರು. ಕೆಲವರಂತೂ ದುರಾಸೆಯಿಂದ ಪದೇ ಪದೇ ವಾಪಸು ಬರುತ್ತ, ಮೊದಲ ಸಲ ಬಂದವರಂತೆ ನಟಿಸಿ ಉಡುಗೊರೆ ಸ್ವೀಕರಿಸುತ್ತಿದ್ದರು.  ಆಹ್ವಾನ ಪತ್ರಿಕೆ ಪಡೆದಿದ್ದ, ವಿವಿಧ ಬಡಾವಣೆಗಳಿಂದ ಬಂದಿದ್ದ ಜನರಿಗೆ ಪರಸ್ಪರ ಪರಿಚಯವಿಲ್ಲದಿದ್ದರೂ ಎಲ್ಲರಲ್ಲಿಯೂ ಹಬ್ಬದ ಉತ್ಸಾಹವಿತ್ತು. ಭಗವಂತನು ತುಂಬ ಸಂತೋಷದಿಂದ ಬೀಗುತ್ತಿದ್ದ ಮತ್ತು ಪರಿಪೂರ್ಣ ಆತಿಥೇಯನಾಗಿದ್ದ.

`ಹೂವಿನ ಹಾರ, ಗಂಧ ಮತ್ತು ಇತರ ಉಡುಗೊರೆಗಳನ್ನು ಅತಿಥಿಗಳಿಗೆ ಮೂರು ಬಾರಿಯಾದರೂ ನೀಡಿ’ ಎಂದು ನಿಮಾಯ್ ಆದೇಶಿಸಿದ. `ಖರ್ಚಿನ ಬಗೆಗೆ ಚಿಂತೆ ಬೇಡ. ಎಲ್ಲರಿಗೂ ಉದಾರವಾಗಿ ನೀಡಿ’ ಎಂದು ಅವನು ಹೇಳಿದ. ಭಗವಂತನ ಈ ಔದಾರ್ಯದಿಂದ ಅನೇಕ ಬಾರಿ ಉಚಿತ ಉಡುಗೊರೆ ಪಡೆಯುತ್ತಿದ್ದ ದುರಾಸೆಯ ಬ್ರಾಹ್ಮಣರು ನಾಚಿ ತಲೆತಗ್ಗಿಸುವಂತಾಯಿತು. ದೇವೋತ್ತಮನಿಗೆ ಬ್ರಾಹ್ಮಣರು ಪ್ರಿಯರಾದವರು, ಆದುದರಿಂದ ಅವನು ಅವರ ಧರ್ಮನಿಷ್ಠೆಯನ್ನು ರಕ್ಷಿಸಲು ಬಯಸಿದ್ದ. ಕೆಲವರು ಅನೇಕ ಬಾರಿ ಉಡುಗೊರೆ ಸಂಗ್ರಹಿಸುತ್ತಿದ್ದದ್ದು ಅವನ ಗಮನಕ್ಕೆ ಬಂದ ಮೇಲೆ ಅವನು ಮೂರು ಬಾರಿ ಉಡುಗೊರೆ ನೀಡಲು ಆದೇಶಿಸಿದ್ದ. ಮೂರು ಬಾರಿ ಪಡೆದ ಮೇಲೆ ಯಾರಿಗೂ ಮತ್ತೂ ಬೇಕೆನಿಸಲಿಲ್ಲ. ಅವರಿಗೆಲ್ಲ ತೃಪ್ತಿಯಾಗಿತ್ತು.

ತಾವು ಸ್ವೀಕರಿಸಿದ ಹೂವಿನ ಹಾರ, ಗಂಧ ಮತ್ತು ಎಲೆ ಅಡಿಕೆಯು ವಾಸ್ತವವಾಗಿ ದೇವೋತ್ತಮ ಪರಮ ಪುರುಷ ನಿಮಾಯ್‌ಗೆ ಸೇವೆ ಸಲ್ಲಿಸುತ್ತಿದ್ದ ಶ್ರೀ ಅನಂತ ಆದಿಶೇಷನ ವಿಸ್ತರಣೆ ಎಂಬುವುದು ಅತಿಥಿಗಳಿಗೆ ಯಾರಿಗೂ ತಿಳಿದಿರಲಿಲ್ಲ.  ಉಡುಗೊರೆಗಳನ್ನು ಹಂಚುವ ಸಂಭ್ರಮದಲ್ಲಿ ಅನೇಕ ಹೂವಿನ ಹಾರ, ಗಂಧ ಮತ್ತು ಎಲೆ ಅಡಿಕೆ ನೆಲದ ಪಾಲಾಯಿತು. ಅದಿರಲಿ, ಈ ವಸ್ತುಗಳು ಎಷ್ಟು ಉಳಿದಿತ್ತೆಂದರೆ, ಅದು ಇನ್ನೂ ಐದು ವೈಭವದ ಮದುವೆಗೆ ಸಾಕಾಗುವಷ್ಟು. ಇದರಲ್ಲಿ ಅತಿಥಿಗಳು ಮನೆಗೆ ಒಯ್ದ ಉಡುಗೊರೆ ಸೇರಿಲ್ಲ. ಅತಿಥಿಗಳು ಮದುವೆ ಮನೆಯ ಸುವ್ಯವಸ್ಥೆಯಿಂದ ಸಂತೃಪ್ತಗೊಂಡು ಅಲ್ಲಿನ ವೈಭವವನ್ನು ಹಾಡಿ ಹೊಗಳುತ್ತ ತಮ್ಮ ಮನೆಗಳಿಗೆ ಹಿಂತಿರುಗಿದರು. ತಮ್ಮ ತಂದೆ ತಮ್ಮ ಮದುವೆಗಳಲ್ಲಿ ಇಷ್ಟೆಲ್ಲ ವೆಚ್ಚ ಮಾಡಲಿಲ್ಲ ಎಂದು ನವದ್ವೀಪದ ಶ್ರೀಮಂತರು ಮಾತನಾಡಿಕೊಂಡರು. ಹೂವಿನ ಹಾರ, ಗಂಧ, ಎಲೆ ಅಡಿಕೆ ಮತ್ತಿತರ ಉಡುಗೊರೆಗಳ ರಾಶಿಯನ್ನು ಹಿಂದೆಂದೂ ಯಾರೂ ನವದ್ವೀಪದಲ್ಲಿ ಕಂಡಿರಲಿಲ್ಲ.

ಶ್ರೀ ಸನಾತನ ಮಿಶ್ರ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರೂ ಮತ್ತು ಅವರ ನಿಕಟ ಬಂಧುಗಳೂ ಅಮೂಲ್ಯ ಉಡುಗೊರೆಗಳೊಂದಿಗೆ ಅಧಿವಾಸ ವಿಧಿಯಲ್ಲಿ ಪಾಲ್ಗೊಂಡಿದ್ದರು. ಶುಭ ಗಳಿಗೆಯಲ್ಲಿ, ವೇದಗಳಲ್ಲಿ ತಿಳಿಸಿರುವಂತೆ ಅವರು ಶ್ರೀ ಗೌರಾಂಗನ ಹಣೆಯ ಮೇಲೆ ತಿಲಕವಿಟ್ಟರು. ಸಂಗೀತಗಾರರ ಸುಮಧುರ ಗಾನ ಮತ್ತು ಕಲಕಲ ಶಬ್ದ ಮಾಡುತ್ತಿದ್ದ ಮಹಿಳೆಯರ ಮಧ್ಯೆ ಶ್ರೀ ಹರಿಯ ನಾಮದ ಜಪದಿಂದ ಇಡೀ ವಾತಾವರಣ ಸಡಗರ ಸಂಭ್ರಮದಿಂದ ತುಂಬಿತ್ತು. ಕರ್ತವ್ಯದಂತೆ ಎಲ್ಲ ವಿಧಿ ವಿಧಾನಗಳನ್ನು ಪೂರೈಸಿ ರಾಜ ಪಂಡಿತರು ತಮ್ಮ ಮನೆಗೆ ಹಿಂತಿರುಗಿದರು. ರಾಜ ಪಂಡಿತರ ಮನೆಯಲ್ಲಿಯೂ ಅಧಿವಾಸ ವಿಧಿ ಆಚರಣೆಗಾಗಿ ನಿಮಾಯ್ ಪಂಡಿತನ ಬಂಧುಗಳು ಅಲ್ಲಿಗೆ ತೆರಳಿದರು. ದುವೆಯ ಸಂಪ್ರದಾಯಗಳು ಏನೇ ಇರಲಿ, ಅಂದಿನ ದಿನಗಳಲ್ಲಿ ಎಲ್ಲವೂ ದೊಡ್ಡ ಹಬ್ಬದ ಉತ್ಸಾಹದಲ್ಲಿ ನಡೆಯುತ್ತಿದ್ದವು.

ಮರು ದಿನ ಮುಂಜಾನೆಯೇ ಭಗವಂತನು ಗಂಗಾ ಸ್ನಾನಕ್ಕೆಂದು ತೆರಳಿದ. ಅಲ್ಲಿಂದ ವಾಪಸಾದ ಕೂಡಲೇ ಶ್ರೀ ವಿಷ್ಣುವನ್ನು ಪೂಜಿಸಲು ಮಂದಿರಕ್ಕೆ ತೆರಳಿದ. ಅದಾದ ಮೇಲೆ ಅವನು ತನ್ನ ನಿಕಟ ಬಂಧುಗಳ ಜೊತೆ ಕುಳಿತು ಪಿತೃಗಳಿಗೆ ಗೌರವ ಸಲ್ಲಿಸಿದ. ಸಂಗೀತಗಾರರು, ನರ್ತಕರು ಕಣ್ ಸೆಳೆಯುವಂತೆ ಅದ್ಭುತ ಪ್ರದರ್ಶನದ ಮೂಲಕ ವಾತಾವರಣದ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದರು.

ಶ್ರೀ ಗೌರಸುಂದರನನ್ನು ಮದುವೆಗೆ ಸಿದ್ಧಗೊಳಿಸಲು ಅವನ ಬಂಧುಗಳು ಮಧ್ಯಾಹ್ನ ಬಂದರು. ವಿವಾಹ ಕಾರ್ಯ ಸಂಜೆ ನಡೆಯುವುದಿತ್ತು. ಅವನ ದೇಹಕ್ಕೆ ಗಂಧವನ್ನು ಪೂಸಲಾಯಿತು. ಅನಂತರ ದೇಹದ ವಿವಿಧ ಭಾಗಗಳಿಗೆ ಸುಗಂಧ ದ್ರವ್ಯಗಳನ್ನು ಹಾಕಲಾಯಿತು. ಅವನ ಹಣೆಯಲ್ಲಿ ಗಂಧದ ಅರ್ಧ ಚಂದ್ರಾಕಾರವನ್ನು ಹಾಕಿದ ಅವರು ಅವನ ಶಿರದ ಮೇಲೆ ಸುಂದರ ಕಿರೀಟವನ್ನು ಇಟ್ಟರು. ಸುವಾಸಿತ ಹೂವಿನ ಹಾರ ಅವನ ಕೊರಳನ್ನು ಅಲಂಕರಿಸಿತು. ಅತ್ಯುತ್ತಮವಾದ, ಅತಿ ದುಬಾರಿಯಾದ ರೇಷ್ಮೆ ಪಂಚೆಯನ್ನು ಅವನ ಸೊಂಟಕ್ಕೆ ಸುತ್ತಲಾಯಿತು. ಅದರ ಸುವರ್ಣ ಹಳದಿ ವರ್ಣವು ಸೂರ್ಯಾಸ್ತದಂತೆ ಕಾಣುತ್ತಿತ್ತು. ಅವನ ನಸುಗೆಂಪು ಬಣ್ಣದ ಕಣ್ಣುಗಳಿಗೆ ಕಣ್ಗಪ್ಪು ಹಚ್ಚಲಾಗಿತ್ತು. ಅವನ ಕಿವಿಗಳಲ್ಲಿ ಚಿನ್ನದ ಕರ್ಣಾಭರಣ ತೂಗುತ್ತಿತ್ತು. ಅವನ ತೋಳು ಮತ್ತು ಕೊರಳಲ್ಲಿ ಕೂಡ ಆಭರಣಗಳು ಕಂಗೊಳಿಸುತ್ತಿದ್ದವು. ಅವನು ತನ್ನ ಕರಗಳಲ್ಲಿ ಶುಭ ಸಂಕೇತವಾದ ಹುಲ್ಲು ಮತ್ತು ಬಾಳೆ ಗಿಡದ ಕಾಂಡಗಳನ್ನು ಹಿಡಿದಿದ್ದ. ಅವನ ಬಂಧುಗಳು ತಮ್ಮ ಇಚ್ಛೆಗೆ ಅನುಗುಣವಾಗಿ ವಿವಿಧ ಆಭರಣಗಳನ್ನು ತೊಡಿಸಿದರು. ವೈಕುಂಠಾಧಿಪತಿ ಶ್ರೀ ಗೌರಾಂಗನ ಅನುಪಮ ಸೌಂದರ್ಯ ಕಂಡು ನೆರೆದಿದ್ದ ಜನರು ಬೆರಗಾದರು. ದೇವೋತ್ತಮ ಪರಮ ಪುರುಷನ ಸೌಂದರ್ಯದಲ್ಲಿ ಅವರು ಪೂರ್ಣವಾಗಿ ಮುಳುಗಿ ಹೋದರು.

ವಧುವಿನ ಗೃಹದತ್ತ ದಿಬ್ಬಣ

ಮದುವೆ ಮುಹೂರ್ತಕ್ಕೆ ಸರಿ ಸುಮಾರು ಒಂದು ಗಂಟೆಗೆ ಮುನ್ನ ಭಗವಂತನನ್ನು ವಧುವಿನ ಗೃಹಕ್ಕೆ ಕರೆದೊಯ್ಯಲು ಬಂಧುಗಳು ನಿರ್ಧರಿಸಿದರು. `ನಾವು ವರನ ಯಾತ್ರೆ ಆರಂಭಿಸೋಣ. ವಧುವಿನ ಮನೆ ತಲಪುವ ಮುನ್ನ ವರನು ಒಂದು ಗಂಟೆ ಕಾಲ ನಗರದಲ್ಲಿ ಮೆರವಣಿಗೆ ನಡೆಸಲಿ’ ಎಂದು ಅವರು ನುಡಿದರು. ಆಗ ದಿಢೀರನೆ ಬುದ್ಧಿಮಂತ ಖಾನ್ ಸುಂದರವಾದ ಪಲ್ಲಕ್ಕಿಯೊಂದಿಗೆ ಅಲ್ಲಿಗೆ ಬಂದ. ಪಂಡಿತರು ವೇದ ಮಂತ್ರಗಳನ್ನು ಜಪಿಸಲಾರಂಭಿಸಿದರು ಮತ್ತು ಸಂಗೀತಗಾರರು ಪುನಃ ಮಧುರ ವಾತಾವರಣ ನಿರ್ಮಿಸಿದರು. ಗಾಯಕರು, ನ‌ರ್ತಕರು ಮತ್ತು ಬಂಧುಗಳು ಎಲ್ಲ ಸೇರಿ ವಾತಾವರಣದ ಸಂಭ್ರಮವನ್ನು ಹೆಚ್ಚಿಸಿದರು. ಭಗವಂತನು ಮೊದಲು ತನ್ನ ತಾಯಿ ಶಚೀಮಾತೆಗೆ ನಮಸ್ಕರಿಸಿ ಗೌರವ ಸಲ್ಲಿಸಿದನು. ಅನಂತರ ಬ್ರಾಹ್ಮಣರಿಗೆ ಗೌರವ ಸಲ್ಲಿಸಿ ಪಲ್ಲಕ್ಕಿಯಲ್ಲಿ ಆಸೀನನಾದನು. ಹರ್ಷಾತಿರೇಕದ ಮತ್ತು ಮಹಿಳೆಯರ ಕಲರವದ ಮಧ್ಯೆ ಪಲ್ಲಕ್ಕಿ ಹೊರಟಿತು.

ಅದು ಮುಸ್ಸಂಜೆಯಾಗಿತ್ತು. ಮದುವೆ ದಿಬ್ಬಣವು ಮೊದಲು ಗಂಗಾ ನದಿ ದಡಕ್ಕೆ ತೆರಳಿತು. ವರ್ಧಿಸುತ್ತಿದ್ದ ಚಂದ್ರನ ಬಿಂಬ ನೀರಿನಲ್ಲಿ ಕಾಣುತ್ತಿತ್ತು. ಉತ್ಸಾಹಕ್ಕೆ ಎಣೆಯೆ ಇರಲಿಲ್ಲ. ನೂರಾರು ದೀಪಗಳನ್ನು ಬೆಳಗಲಾಯಿತು ಮತ್ತು ಸಂಗೀತ ಮಾರ್ದನಿಸಿತು. ಭಗವಂತನ ಪಲ್ಲಕ್ಕಿಯ ಮುಂದೆ ಬುದ್ಧಿಮಂತ ಖಾನ್ ಅವರ ನೌಕರರು ಎರಡು ಸಾಲಿನಲ್ಲಿ ನಿಂತಿದ್ದರೆ ಬಣ್ಣದ ಬಾವುಟ ಹಿಡಿದಿದ್ದವರು ಅನಂತರದ ಸಾಲಿನಲ್ಲಿ ಕಂಡುಬಂದರು. ಇವರ ಮಧ್ಯೆ ಹಾಸ್ಯಗಾರರು ಹಾಸ್ಯ ಚಟಾಕಿ ಹರಿಸುತ್ತಿದ್ದರು. ವಿವಿಧ ನೃತ್ಯ ಶೈಲಿಯ ನರ್ತನ ಕಣ್ ಸೆಳೆದರೆ ಅಸಂಖ್ಯ ಸಂಗೀತಗಾರರು ಐದು ರೀತಿಯ ಡೋಲು, ತಾಳ, ಶಂಖ, ಕೊಳಲು, ಗಂಟೆ ಮತ್ತಿತರ ವಾದ್ಯಗಳನ್ನು ನುಡಿಸುತ್ತ ಉತ್ಸಾಹವನ್ನು ಇಮ್ಮಡಿಗೊಳಿಸಿದರು. ಮಕ್ಕಳು ತುಂಬು ಉತ್ಸಾಹದಿಂದ ಸಂಗೀತಕ್ಕೆ ಹೆಜ್ಜೆ ಹಾಕಿದಾಗ ಹಿರಿಯರೂ ತಮ್ಮ ಗಂಭೀರವದನ ಬಿಟ್ಟು ನಗುತ್ತಾ ಅವರ ಜೊತೆಗೂಡಿದರು. ನೆರೆದಿದ್ದವರ ಹರ್ಷಾತಿರೇಕ ಕಂಡು ಭಗವಂತನು ಮುಗುಳ್ನಕ್ಕನು. ಮದುವೆ ದಿಬ್ಬಣವು ಗಂಗಾನದಿ ಬಳಿ ಒಂದು ಕ್ಷಣ ನಿಂತು ವಧುವಿನ ಮನೆಯತ್ತ ಸಾಗಿತು. ಗಂಗಾ ಮಾತೆಗೆ ಪುಷ್ಪ ಅರ್ಪಿಸಿದ ಮೇಲೆ ಮೆರವಣಿಗೆಯು ಅಲ್ಲಿಂದ ಹೊರಟಿತು. ಈ ದಿಬ್ಬಣದ ವೈಭೋಗ ಕಂಡು ಜನ ಮೂಕವಿಸ್ಮಿತರಾದರು. `ಅನೇಕ ವೈಭವದ ಮದುವೆಗಳನ್ನು ನೋಡಿರುವೆ. ಇಂತಹುದನ್ನು ಎಂದೂ ವೀಕ್ಷಿಸಿರಲಿಲ್ಲ.’ ಎಂದು ಒಬ್ಬರು ಉದ್ಗರಿಸಿದರು. ಪಲ್ಲಕ್ಕಿಯಲ್ಲಿ ಸಾಗುತ್ತಿದ್ದ ದೇವೋತ್ತಮ ಪರಮ ಪುರುಷನನ್ನು ನೋಡಿದ ನವದ್ವೀಪದ ವಾಸಿಗಳೇ ಪುಣ್ಯವಂತರು.

ಸುಂದರ, ಅವಿವಾಹಿತ ಪುತ್ರಿಯರನ್ನು ಹೊಂದಿದ್ದ ಬ್ರಾಹ್ಮಣರು ಉದ್ಗರಿಸಿದರು, `ಈ ಸುಂದರ ಯುವಕನಿಗೆ ನನ್ನ ಮಗಳನ್ನು ಮದುವೆ ಮಾಡಿಕೊಡಲಾಗದ್ದು ನನ್ನ ದುರದೃಷ್ಟ. ಈಗೇನು ಮಾಡುವುದು? ಭಗವಂತನ ಈ ಅಲೌಕಿಕ ಲೀಲೆಯನ್ನು ಕಂಡ ನವದ್ವೀಪದ ವಾಸಿಗಳಿಗೆ ಗೌರವ ಅರ್ಪಿಸುತ್ತೇವೆ.’

ನವದ್ವೀಪದ ಪ್ರಮುಖ ಬಡಾವಣೆಗಳಲ್ಲಿ ಸಾಗಿದ ಮೇಲೆ ಮದುವೆ ದಿಬ್ಬಣವು ಸನಾತನ ಮಿಶ್ರ ಅವರ ನಿವಾಸ ತಲಪಿತು. ಎಲ್ಲರೂ ಮನೆಯಿಂದ ಹೊರಗೆ ಬಂದರು. ಮದುವೆ ಮನೆಯ ಕಲರವ ಉತ್ಸಾಹವನ್ನು ಇಮ್ಮಡಿಸಿತ್ತು. ರಾಜ ಪಂಡಿತ ಮುಂದೆ ಬಂದು ವರನನ್ನು ಬರಮಾಡಿಕೊಂಡರು. ಪಲ್ಲಕ್ಕಿಯಿಂದ ಅವನನ್ನು ಕೈ ಹಿಡಿದು ಕರೆದೊಯ್ದ ಅವರು ಮನೆ ಒಳಗೆ ಸಿದ್ಧಪಡಿಸಿದ್ದ ವಿಶೇಷ ಆಸನದಲ್ಲಿ ಕೂರಿಸಿದರು. ರಾಜ ಪಂಡಿತರ ಸಂತೋಷಕ್ಕೆ ಎಣೆಯೇ ಇರಲಿಲ್ಲ. ನಿಮಾಯ್ ಪಂಡಿತನನ್ನು ಮನೆ ಒಳಗೆ ಕರೆದೊಯ್ಯುವಾಗ ಅವರ ಮುಖದಲ್ಲಿ ಕಂಡ ಪರಮಾನಂದವನ್ನು ವರ್ಣಿಸಲಸಾಧ್ಯ. ಶುಭ ಹಾರೈಕೆಯ ಸಂಕೇತವಾಗಿ ಅವರು ಭಗವಂತನ ಮೇಲೆ ಪುಷ್ಪ ವೃಷ್ಟಿ ಹರಿಸಿದರು.

ವರನನ್ನು ಸ್ವಾಗತಿಸಿದ ತಂಡದಲ್ಲಿ ವಧುವಿನ ಬಂಧುಗಳು ಮತ್ತು ಪಂಡಿತರೂ ಇದ್ದರು. ಅವರು ವಸ್ತ್ರ, ಆಭರಣ ಮತ್ತಿತರ ಅಮೂಲ್ಯ ಉಡುಗೊರೆಗಳೊಂದಿಗೆ ಭಗವಂತನನ್ನು ಸ್ವಾಗತಿಸಿದರು. ವಧುವಿನ ತಾಯಿಯು ಭಗವಂತನ ಶಿರದ ಮೇಲೆ ಹುಲ್ಲನ್ನು ಇರಿಸಿದಳು. ಅನಂತರ ಏಳು ಬತ್ತಿಗಳ ತುಪ್ಪದ ದೀಪದ ಮೂಲಕ ಅವನನ್ನು ಪೂಜಿಸಿದಳು. ಅದೇ ಸಮಯದಲ್ಲಿ ಅತಿ ಸುಂದರವಾಗಿ ಅಲಂಕೃತಗೊಂಡಿದ್ದ ಶ್ರೀ ವಿಷ್ಣುಪ್ರಿಯ ದೇವಿಯು ತನ್ನ ಆಸನ ಸ್ವೀಕರಿಸಿದಳು.

ಸಂತೃಪ್ತಿ

ಅಂತಹ ಅದ್ಭುತ ಸುಂದರ ವಧುವನ್ನು ಕಂಡು ನಿಮಾಯ್ ಪಂಡಿತನ ಬಂಧುಗಳು ತೃಪ್ತರಾದರು. ಮದುವೆಯ ವಿಧಿಯಂತೆ ಅವರು ಭಗವಂತನನ್ನು ಎತ್ತಿ ಅವನ ಆಸನಕ್ಕೆ ಕರೆದೊಯ್ದರು. ಅವರು ನಿಮಾಯ್‌ನ ಸುತ್ತ ತೆರೆ ಹಿಡಿದರು. ಆಗ ವಿಷ್ಣುಪ್ರಿಯಳು ಗೌರಾಂಗನ ಸುತ್ತ ಏಳು ಬಾರಿ ಪ್ರದಕ್ಷಿಣೆ ಮಾಡಿದಳು. ಅನಂತರ ಅವನ ಮುಂದೆ ನಿಂತು ಕೈ ಜೋಡಿಸಿ ಗೌರವ ಅರ್ಪಿಸಿದಳು. ಬಂಧುಗಳು ದಂಪತಿ ಮೇಲೆ ಹೂವಿನ ಮಳೆಗರೆದರು. ಸಂಗೀತ ಹಾಗೂ ಮದುವೆ ಮನೆಯ ಕಲರವ ವಾತಾವರಣವನ್ನು ತುಂಬಿತ್ತು. ವಿಷ್ಣುಪ್ರಿಯಳು ಭಗವಂತನ ಪಾದಗಳಿಗೆ ಹೂವಿನ ಹಾರ ಅರ್ಪಿಸಿ ತನ್ನ ಜೀವನ ಮತ್ತು ಆತ್ಮವನ್ನು ಸಮರ್ಪಿಸಿಕೊಂಡಳು. ಭಗವಂತನು ಆ ಹಾರವನ್ನು ತೆಗೆದುಕೊಂಡು ನಸುನಗುತ್ತ ಅದನ್ನು ಅವಳ ಕೊರಳಿಗೆ ಹಾಕಿದ. ಪುನಃ ದೈವೀ ದಂಪತಿಗೆ ಬಂಧುಗಳಿಂದ ಪುಷ್ಪ ವೃಷ್ಟಿಯಾಯಿತು. ಜನ ಸಾಮಾನ್ಯರಿಗೆ ಗೋಚರವಾಗದಂತೆ, ಬ್ರಹ್ಮ ಮತ್ತಿತರ ದೇವತೆಗಳು ಶ್ರೀ ವಿಷ್ಣುಪ್ರಿಯ ಮತ್ತು ಶ್ರೀ ವಿಶ್ವಂಭರ ಅವರ ಮೇಲೆ ಪುಷ್ಪವೃಷ್ಟಿಗರೆದರು. ಗೌರಸುಂದರ ಮತ್ತು ವಿಷ್ಣುಪ್ರಿಯ ತಂಡಗಳು ಹೂವಿನ ಮಳೆಗರೆಯುವುದರಲ್ಲಿ ಪೈಪೋಟಿ ತೋರಿ ಸಂತಸ ವಾತಾವರಣಕ್ಕೆ ಕೊಡುಗೆ ನೀಡಿದರು.

ಸಾವಿರಾರು ದೀಪಗಳು ಎಲ್ಲಡೆ ಬೆಳಕನ್ನು ಪಸರಿಸಿದವು. ಸಂಗೀತ ಮಾಧುರ್ಯವು ಮಾರ್ದನಿಸುತ್ತಿತ್ತು. ವಧು-ವರರು ತಮ್ಮ ನೋಟವನ್ನು ವಿನಿಮಯ ಮಾಡಿಕೊಳ್ಳುವ ಕ್ಷಣ ಬಂದಾಗ ಇಡೀ ವಿಶ್ವವೇ ಹರ್ಷೋದ್ಗಾರಗೈಯುತ್ತಿದೆಯೇನೋ ಎಂದೆನಿಸುತ್ತಿತ್ತು. ಅನಂತರ ದೈವೀ ದಂಪತಿ ಔಪಚಾರಿಕ ವಿಧಿ ವಿಧಾನಗಳಿಗೆ ಆಸೀನರಾದರು. ಎಲ್ಲ ವಿಧಿಗಳು ಮತ್ತು ಮಂತ್ರಗಳ ಪಠಣದ ಮಧ್ಯೆ ರಾಜ ಪಂಡಿತನು ತನ್ನ ಮಗಳನ್ನು ಶ್ರೀ ಗೌರಸುಂದರನಿಗೆ ಧಾರೆ ಎರೆದು ಕೊಟ್ಟನು. ಹೀಗೆ ಮದುವೆಯ ವಿಧಿಗಳು ಆರಂಭವಾದವು. ರಾಜ ಪಂಡಿತನು ತನ್ನ ಮಗಳೊಂದಿಗೆ ಹಾಲು ತುಂಬಿದ್ದ ಉತ್ತಮ ಹಸುಗಳನ್ನು, ಭೂಮಿ ಮತ್ತಿತರ ಆಸ್ತಿ, ಪೀಠೋಪಕರಣ, ಸೇವಕರು ಮತ್ತಿತರ ಅಮೂಲ್ಯ ಉಡುಗೊರೆಗಳನ್ನೂ ಶ್ರೀ ವಿಶ್ವಂಭರನಿಗೆ ನೀಡಿದ. ಬ್ರಾಹ್ಮಣರು ಹೋಮಕ್ಕಾಗಿ ಅಗ್ನಿ ಸಿದ್ಧಪಡಿಸಿದಾಗ ವಿಷ್ಣುಪ್ರಿಯಳು ಭಗವಂತನ ಎಡ ಭಾಗದಲ್ಲಿ ಆಸೀನಳಾದಳು. ಎಲ್ಲ ಸಂಪ್ರದಾಯ ಮತ್ತು ವಿಧಿಗಳ ಆಚರಣೆ ಅನಂತರ ವಧು-ವರರು ಅಲಂಕೃತ ಸ್ವಾಗತ ಕೋಣೆಗೆ ಹೋದರು.

ಸನಾತನ ಪಂಡಿತನ ಸಂತೋಷವನ್ನು ವರ್ಣಿಸಲಸಾಧ್ಯ. ನಾಗಜಿತ್, ಜನಕ, ಭೀಷ್ಮ ಮತ್ತು ಜಾಂಬವಂತರಂತಹ ಶ್ರೇಷ್ಠರ ಸಾಲಿಗೆ ಸೇರಿದ ಅದೃಷ್ಟ ಅವರದಾಗಿತ್ತು. ಅವರೆಲ್ಲ ಒಂದಾನೊಂದು ಕಾಲದಲ್ಲಿ ಶ್ರೀ ಕೃಷ್ಣ ಅಥವಾ  ಶ್ರೀರಾಮಚಂದ್ರನ ಮಾವನಾಗಿದ್ದವರೆ.

ದೈವಿಕ ದಂಪತಿಯು ಆ ರಾತ್ರಿ ಮತ್ತು ಮರುದಿನ ಮಧ್ಯಾಹ್ನದವರೆಗೆ ಸನಾತನ ಮಿಶ್ರ ಅವರ ಮನೆಯಲ್ಲಿಯೇ ತಮ್ಮ ಸಮಯ ಕಳೆದರು. ಅನಂತರ ರಾಜ ಪಂಡಿತ ಮತ್ತು ಅವನ ಬಂಧುಗಳು ಶ್ರೀ ಗೌರಸುಂದರ ಮತ್ತು ವಿಷ್ಣುಪ್ರಿಯ ಅವರನ್ನು ಬೀಳ್ಕೊಟ್ಟರು. ಸಂಗೀತ, ಕೀರ್ತನೆ, ಬ್ರಾಹ್ಮಣರ ಆಶೀರ್ವಾದ ಮತ್ತು ಮಂತ್ರಗಳ ಪಠಣದ ಮಧ್ಯೆ ನಿಮಾಯ್ ತನ್ನ ಗೌರವ ಅರ್ಪಿಸಿದ. ಅನಂತರ ಪಲ್ಲಕ್ಕಿಯಲ್ಲಿ ವಿಷ್ಣುಪ್ರಿಯಳ ಜೊತೆ ಶಚೀಮಾತೆಯ ಮನೆಗೆ ಹೊರಟ. ಮಾರ್ಗದ ಮಧ್ಯೆ ಮಹಿಳೆಯರು ವಧುವಿನ ಅದೃಷ್ಟವನ್ನು ಕೊಂಡಾಡುತ್ತಿದ್ದರು. `ಅವಳು ಅದೃಷ್ಟವಂತೆ. ಅವಳು ಅನೇಕ ಜನ್ಮಗಳಲ್ಲಿ ಲಕ್ಷ್ಮೀದೇವಿಯನ್ನು ಪೂಜಿಸಿರಬೇಕು’ ಎಂದು ಕೆಲವರು ಹೇಳಿದರೆ, `ಈ ದಂಪತಿ ಗೌರಿ-ಶಿವರಂತೆ ಇದ್ದಾರೆ.’ ಎಂದು ಇನ್ನಷ್ಟು ಮಂದಿ ಉದ್ಗರಿಸುತ್ತಿದ್ದರು. `ಅವರು ಶ್ರೀ ಲಕ್ಷ್ಮೀ ಮತ್ತು ಶ್ರೀ ಹರಿ ಇರಬೇಕು. ಅವರು ರತಿ, ಮನ್ಮಥ ಇರಬಹುದು. ಅಥವಾ ಇಂದ್ರ-ಶಚಿಯೇ ಆಗಿರಬಹುದು ಅಥವಾ ರಾಮ-ಸೀತೆ ಇರಬಹುದು’ ಎಂದೆಲ್ಲ ನುಡಿಯುತ್ತಿದ್ದರು.

ಶಚೀಮಾತೆಯ ಆನಂದ

ಈ ದೈವಿಕ ದಂಪತಿ ಶಚೀಮಾತಾ ಮನೆಗೆ ಬಂದರು. ಇತರ ಮಹಿಳೆಯರೊಡಗೂಡಿ ಶಚೀಮಾತೆಯು ಅತ್ಯಂತ ಸಂತೋಷದಿಂದ ದಂಪತಿಯನ್ನು ಬರಮಾಡಿಕೊಂಡಳು. ಸಂಗೀತದ ಮಾರ್ದನಿಯ ನಡುವೆ ಅವಳು ದಂಪತಿಗೆ ವಿಶೇಷ ಆಸನ ನೀಡಿದಳು. ವಿಷ್ಣುಪ್ರಿಯ ಮತ್ತು ಗೌರಹರಿಯರ ಪ್ರತ್ಯಕ್ಷ ದರ್ಶನದಿಂದ ಶಚೀಮಾತೆ ಮತ್ತು ಇತರರ ಆನಂದವನ್ನು ವರ್ಣಿಸುವುದು ಸಾಧ್ಯವೇ?

ದೇವೋತ್ತಮ ಪರಮ ಪುರುಷನು ಎಂತಹ ಉದಾರ ಹೃದಯಿ ಎಂದರೆ ಅವನ ಅಲೌಕಿಕ ತೇಜಸ್ಸನ್ನು ನೋಡುವುದರಿಂದಲೆ ಎಲ್ಲ ರೀತಿಯ ಪಾಪಗಳಿಂದ ಮುಕ್ತರಾಗಬಹುದು. ಅಷ್ಟೇ ಅಲ್ಲ, ವೈಕುಂಠ ಪ್ರವೇಶಕ್ಕೂ ಅರ್ಹರಾಗಬಹುದು. ಬದುಕಿನ ಎಲ್ಲ ಸ್ತರದ ಜನರೂ ಭಗವಂತನ ಆಧ್ಯಾತ್ಮಿಕ ಕಾಂತಿಯನ್ನು ಕಾಣಬಹುದು. ಆದುದರಿಂದ ಅವನನ್ನು ಅತ್ಯಂತ ಕರುಣಾಮಯಿ ಎಂದು ಕರೆಯುತ್ತಾರೆ. ಅವನು ಪತಿತ ಆತ್ಮಗಳ ಮಿತ್ರನೆಂದೂ ಹೇಳುತ್ತಾರೆ.

ನಿಮಾಯ್ ಪಂಡಿತನು ಶಚೀಮಾತೆಯ ಮನೆಗೆ ಬಂದಿದ್ದ ಎಲ್ಲ ಸಂಗೀತಗಾರರು, ನರ್ತಕರು ಮತ್ತು ಭಿಕ್ಷುಕರಿಗೆ ಉದಾರವಾಗಿ ವಸ್ತ್ರ ಮತ್ತು ಇತರ ಉಡುಗೊರೆಗಳನ್ನು ಹಂಚಿದ. ಬ್ರಾಹ್ಮಣರು ಮತ್ತು ಇತರ ಬಂಧುಗಳಿಗೆ ಅವನು ಅವರಿಗೆ ತೃಪ್ತಿಯಾಗುವಷ್ಟು ಉಡುಗೊರೆ ನೀಡಿದ ಮತ್ತು ಅದರಿಂದ ತಾನೂ ಸಂತೃಪ್ತನಾದ. ಬುದ್ಧಿಮಂತ ಖಾನ್‌ನನ್ನು ಆಲಿಂಗಿಸಿಕೊಂಡು ತನ್ನ ಪ್ರೀತಿವಾತ್ಸಲ್ಯ ತೋರಿದ. ಖಾನ್ ಪರಮಾನಂದಿತನಾದ.

(ಮುಂದುವರಿಯುವುದು)

 
Leave a Reply

Your email address will not be published. Required fields are marked *