Search
Wednesday 15 July 2020
  • :
  • :

ಸುವರ್ಣಾವತಾರ ಭಾಗ – 16

ವಿದ್ವಾಂಸನ ಮನಃಸ್ಥಿತಿಯಲ್ಲಿ ತಲ್ಲೀನನಾಗಿದ್ದ ವೈಕುಂಠಾಧಿಪತಿಯು ತನ್ನ ಶಿಷ್ಯರೊಂದಿಗೆ ಶೈಕ್ಷಣಿಕ ಅನ್ವೇಷಣೆಯಲ್ಲಿ ತನ್ನ ಸಮಯವನ್ನು ವಿನಿಯೋಗಿಸಿದ್ದ.  ನವದ್ವೀಪದ ಸುತ್ತಮುತ್ತಲಿನಲ್ಲಿ ಅವನು ಆತ್ಮವಿಶ್ವಾಸದ ಲೀಲೆಗಳನ್ನು ಪ್ರದರ್ಶಿಸುತ್ತಿದ್ದ. ಆ ವೇಳೆಗೆ ನವದ್ವೀಪದಲ್ಲಿ ಎಲ್ಲರೂ ನಿಮಾಯ್ ಪಂಡಿತನನ್ನು ಶ್ರೇಷ್ಠ ವಿದ್ವಾಂಸ ಮತ್ತು ಗುರು ಎಂದು ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದರು. ಶ್ರೀಮಂತ, ಪ್ರಭಾವಿ ಮತ್ತು ಕುಲೀನ ಪುರುಷರು ನಿಮಾಯ್‌ನನ್ನು ನೋಡಿದ ಕೂಡಲೇ ವಿನಮ್ರದಿಂದ ಅವನಿಗೆ ಗೌರವ ಸಲ್ಲಿಸುತ್ತಿದ್ದರು. ಅವನ ಮನಮೋಹಕ ರೂಪದಿಂದ ಚಿತ್ತಾಕರ್ಷಕಗೊಂಡಿದ್ದ ನಿವಾಸಿಗಳಿಗೆ ಅವನ ಒಂದು ನೋಟವೇ ಭಯ – ಭಕ್ತಿ ಉಂಟುಮಾಡುತ್ತಿತ್ತು.

ನಿಮಾಯ್ ಪಂಡಿತನು ನವದ್ವೀಪದ ವಿವಿಧ ವರ್ಗಗಳ ಜನರಿಂದ ಉಡುಗೊರೆಗಳನ್ನು ಸ್ವೀಕರಿಸುತ್ತಿದ್ದ. ಅತ್ಯುತ್ತಮ ಗೃಹಸ್ಥರಿಗೆ ಪರಿಪಕ್ವ ಉದಾಹರಣೆಯಾಗಿದ್ದ ಅವನು ದೇವೋತ್ತಮ ಪರಮ ಪುರುಷನಂತೆ ಮಹಾ ದಾನಿಯಾಗಿದ್ದ.  ಬಡವರನ್ನು ನೋಡಿದಾಗ ಅವನು ಅವರಿಗೆ ಆಹಾರ, ಉಡುಪು ಮತ್ತು ಹಣ ನೀಡುತ್ತಿದ್ದ. ಈ ರೀತಿ ನಿಮಾಯ್ ಬಡವರಿಗೆ ಉದಾರವಾಗಿ ಉಡುಗೊರೆ ಹಂಚುತ್ತಿದ್ದ.

ಭಗವಂತನ ಮನೆಗೆ ಅತಿಥಿಗಳ ಮಹಾಪೂರವೇ ಹರಿದುಬರುತ್ತಿತ್ತು. ಅವರವರ ಸ್ಥಾನಮಾನಕ್ಕೆ ತಕ್ಕಂತೆ ಅವರಿಗೆ ಗೌರವ ನೀಡುತ್ತಿದ್ದ ನಿಮಾಯ್, ತೃಪ್ತಿಯಾಗುವವರೆಗೂ ಅವರಿಗೆ ಸೇವೆ ಸಲ್ಲಿಸುತ್ತಿದ್ದ. ಕೆಲವು ದಿನಗಳಲ್ಲಿ ಸಂನ್ಯಾಸಿಗಳು ಅವನ ನಿವಾಸಕ್ಕೆ ಭೇಟಿಕೊಡುತ್ತಿದ್ದರು ಮತ್ತು ಅವನು ಅವರಿಗೆ ಸೌಜನ್ಯದಿಂದ ಸೇವೆ ಸಲ್ಲಿಸುತ್ತಿದ್ದ.

ಲಕ್ಷ್ಮೀದೇವಿಯ ಭಕ್ತಿ

ಒಮ್ಮೆ, ಏಕಕಾಲಕ್ಕೆ, ೨೦ ಸಂನ್ಯಾಸಿಗಳು ಅವನ ನಿವಾಸಕ್ಕೆ ಬಂದರು. ಅವರಿಗೆಲ್ಲ ಭೋಜನ ತಯಾರಿಸುವಂತೆ ಅವನು ತನ್ನ ತಾಯಿಗೆ ತಿಳಿಸಿದ. ೨೦ ಸಂನ್ಯಾಸಿಗಳಿಗೆ ಆಹಾರ ತಯಾರಿಸುವಷ್ಟು ಸಾಮಗ್ರಿಗಳು ಮನೆಯಲ್ಲಿ ಇಲ್ಲದ್ದರಿಂದ ಶಚೀಮಾತೆ ಆತಂಕಕ್ಕೆ ಓಳಗಾದಳು. ಅವಳು ಎಷ್ಟು ಯೋಚನಾಮಗ್ನಳಾಗಿದ್ದಳೆಂದರೆ, ಯಾರೋ ಅಡುಗೆಗೆ ಅಗತ್ಯವಾದ ಸಾಮಗ್ರಿಗಳನ್ನು ಅಡುಗೆ ಮನೆಯಲ್ಲಿ ಇಟ್ಟುಹೋದದ್ದನ್ನೂ ಅವಳು ಗಮನಿಸ‌ಲಿಲ್ಲ. ಸ್ವಲ್ಪ ಸಮಯದ ಅನಂತರ ಲಕ್ಷ್ಮೀದೇವಿಯು ಅಡುಗೆ ಮನೆಗೆ ಹೋದಳು. ಅಲ್ಲಿದ್ದ ಸಾಮಗ್ರಿಗಳನ್ನು ನೋಡಿ ಆನಂದಿತಳಾದಳು. ತತ್‌ಕ್ಷಣ ವಿಶೇಷ ಆಹಾರ ಪದಾರ್ಥಗಳನ್ನು ತಯಾರಿಸಿದಳು. ಅಡುಗೆಯಾದ ಮೇಲೆ ಭಗವಂತನು ಸ್ವತಃ ಅವುಗಳನ್ನು ಪರಿಶೀಲಿಸಿದನು ಮತ್ತು ಸಂನ್ಯಾಸಿಗಳನ್ನು ಊಟಕ್ಕೆ ಕರೆದನು. ಅವರಿಗೆಲ್ಲ ಪ್ರಸಾದ ಅರ್ಪಿಸುವುದನ್ನು ಖುದ್ದು ಪರಿಶೀಲಿಸಿದ ಅವನು ಪ್ರತಿಯೊಬ್ಬರನ್ನೂ ತೃಪ್ತಿಪಡಿಸಿದ. ಈ ರೀತಿ ಭಗವಂತನು ಅತಿಥಿ ಸತ್ಕಾರದ ರೀತಿಯನ್ನು ಮತ್ತು ಗೃಹಸ್ಥ ಧರ್ಮವನ್ನು ಜಗತ್ತಿಗೇ ತೋರಿಸಿಕೊಟ್ಟ.

ಅತಿಥಿಗಳನ್ನು ಸತ್ಕರಿಸುವುದೇ ಗೃಹಸ್ಥನ ಪರಮ ಕರ್ತವ್ಯ. ಜವಾಬ್ದಾರಿಯುತ ಗೃಹಸ್ಥನು ಆ ಗುಣಮಟ್ಟದಲ್ಲಿ ಬದುಕಬೇಕು. ತನ್ನ ಅತಿಥಿಗಳಿಗೆ ಸರಿಯಾಗಿ ಸೇವೆ ಸಲ್ಲಿಸದ ಮತ್ತು ತೃಪ್ತಿ ಪಡಿಸದ ಗೃಹಸ್ಥನು ಪ್ರಾಣಿ ಅಥವಾ ಪಕ್ಷಿಗಳಿಗಿಂತಲೂ ಕೀಳು. ತಮ್ಮ ಹಿಂದಿನ ಅಧಾರ್ಮಿಕ ಚಟುವಟಿಕೆಗಳ ಕಾರಣ ಆತಿಥ್ಯ ನೀಡಲು ಸಾಕಷ್ಟು ಅನುಕೂಲ ಇಲ್ಲದವರೂ ಕೂಡ ಅತಿಥಿಗಳಿಗೆ ಕೂರಲು ಸ್ಥಳ ನೀಡಿ ನೀರನ್ನಾದರೂ ಅರ್ಪಿಸಬಹುದು. ಲಕ್ಷ್ಮೀದೇವಿಯು ಯಾರದೇ ಸಹಾಯವಿಲ್ಲದೆ ತನ್ನ ಭಗವಂತ ಮತ್ತು ಯಜಮಾನನಿಗೆ ಬಹಳ ಶ್ರಮದಿಂದ ಸೇವೆ ಸಲ್ಲಿಸುತ್ತಿದ್ದಳು. ಆದರೂ ಅವಳು ಸದಾ ಉತ್ಸಾಹಭರಿತಳಾಗಿರುತ್ತಿದ್ದಳು. ಲಕ್ಷ್ಮೀದೇವಿಯ ಸದ್ಗುಣ ಮತ್ತು ಶ್ರದ್ಧಾ ಭಕ್ತಿಯನ್ನು ಕಂಡು ಶಚೀದೇವಿಯ ಸಂತೋಷ ಪ್ರತಿ ಕ್ಷಣವೂ ಇಮ್ಮಡಿಸುತ್ತಿತ್ತು. ಮುಂಜಾನೆಯಿಂದಲೂ ಒಬ್ಬಂಟಿಗಳಾಗಿ ಗೃಹಕೃತ್ಯದಲ್ಲಿ ತೊಡಗಿಸಿಕೊಂಡಿರುತ್ತಿದ್ದ ಲಕ್ಷ್ಮೀದೇವಿಯು ಆದರ್ಶ ಪತ್ನಿಗೆ ನಿದರ್ಶನವಾಗಿದ್ದಳು.

ದೇವರ ಕೋಣೆಯಲ್ಲಿ ಅವಳು ಬಣ್ಣ ಬಣ್ಣದ ರಂಗೋಲಿಯಿಂದ ನೆಲವನ್ನು ಅಲಂಕರಿಸುತ್ತಿದ್ದಳು. ಶಂಖ, ಚಕ್ರದಂತಹ ಭಗವಂತನ ವಿವಿಧ ಚಿಹ್ನೆಗಳನ್ನು ಅವಳು ರಂಗೋಲಿಯಲ್ಲಿ ಬಿಡಿಸುತ್ತಿದ್ದಳು. ಕರ್ಪೂರ, ಹೂವು, ದೀಪ, ನೀರು ಮುಂತಾದ ಅಗತ್ಯ ಪೂಜಾ ಪರಿಕರಗಳನ್ನು ಅವಳು ಪೂಜೆಗಾಗಿ ಸಿದ್ಧಪಡಿಸಿಡುತ್ತಿದ್ದಳು. ಅವಳು ತುಳಸಿಮಾತೆಯ ಪೂಜೆ ಮಾಡುತ್ತಿದ್ದಳು ಮತ್ತು ಶಚೀಮಾತೆಯ ಅಗತ್ಯಗಳಿಗೆ ಪ್ರೀತಿಯಿಂದ ಗಮನಕೊಡುತ್ತಿದ್ದಳು. ಲಕ್ಷ್ಮೀಪ್ರಿಯಾ ದೇವಿಯ ಅದ್ಭುತ ಗುಣ ಲಕ್ಷಣಗಳನ್ನು ಗಮನಿಸುತ್ತಿದ್ದ ಗೌರಚಂದ್ರನು ಎಂದೂ ಪ್ರತಿಕ್ರಿಯಿಸುತ್ತಿರಲಿಲ್ಲವಾದರೂ ಸಂಪೂರ್ಣವಾಗಿ ತೃಪ್ತನಾಗಿದ್ದ.

ಲಕ್ಷ್ಮೀಪ್ರಿಯಾ ದೇವಿಯು ಭಗವಂತನ ಚರಣ ಕಮಲವನ್ನು ತನ್ನ ಮಡಿಲಲ್ಲಿರಿಸಿಕೊಂಡು ಹಲವು ಗಂಟೆಗಳ ಕಾಲ ನೀವುತ್ತಿದ್ದಳು. ಅವಳು ಆ ರೀತಿ  ಸೇವೆ ಸಲ್ಲಿಸುತ್ತಿದ್ದಾಗ, ಕೆಲವು ಬಾರಿ ಗೌರ‌ಚಂದ್ರನ ಪಾದಗಳಿಂದ ಹೊರಹೊಮ್ಮುತ್ತಿದ್ದ ಅದ್ಭುತ  ಕಾಂತಿಯನ್ನು ಶಚೀಮಾತೆ ನೋಡುತ್ತಿದ್ದಳು. ಮತ್ತೂ ಕೆಲವು ವೇಳೆ ಕಮಲದ ಹೂವಿನ ಸುವಾಸನೆ ಇಡೀ ಮನೆಯಲ್ಲಿ ಹರಡಿಕೊಂಡಿರುತ್ತಿತ್ತು. ಶಚೀಮಾತೆ ಮನೆಯಲ್ಲೆಲ್ಲ ಶೋಧಿಸಿದರೂ ಅವಳಿಗೆ ಸುವಾಸನೆಯ ಮೂಲವನ್ನು ಕಂಡುಕೊಳ್ಳಲಾಗುತ್ತಿರಲಿಲ್ಲ. ಅದೃಷ್ಟ ದೇವತೆ ಶ್ರೀಮತಿ ಲಕ್ಷ್ಮೀ ದೇವಿ ಮತ್ತು ದೇವೋತ್ತಮನಾದ ನಾರಾಯಣ ನವದ್ವೀಪದ ನಿವಾಸಿಗಳಿಂದ ಗುರುತಿಸಲ್ಪಡದಂತೆ ನಿಗೂಢರಾಗಿಯೇ ಉಳಿದರು.

ದಿಢೀರ್ ಪಯಣ

ಒಂದು ದಿನ, ಯಾವ ಮುನ್ಸೂಚನೆಯೂ ಇಲ್ಲದೆ ಶ್ರೀ ಗೌರಾಂಗನು ಪೂರ್ವ ಬಂಗಾಳಕ್ಕೆ ಭೇಟಿ ನೀಡುವ ಅಪೇಕ್ಷೆಯನ್ನು ಪ್ರಕಟಿಸಿದನು. ಕೆಲವು ದಿನಗಳವರೆಗೆ ತಾನು ಹೋಗುವುದಾಗಿ ಅವನು ತನ್ನ ತಾಯಿಗೆ ತಿಳಿಸಿದನು. ಅನಂತರ, ಹೊರಡುವ ಮುನ್ನ, ತನ್ನ ತಾಯಿಯ ಅಗತ್ಯಗಳನ್ನು ನೋಡಿಕೊಳ್ಳುವಂತೆ ಪತ್ನಿ ಲಕ್ಷ್ಮೀದೇವಿಗೆ ಆದೇಶಿಸಿದನು.  ಭಗವಂತನು ತನ್ನ ಕೆಲವು ಆಪ್ತ ಶಿಷ್ಯರನ್ನು ಒಟ್ಟುಗೂಡಿಸಿಕೊಂಡು ಪ್ರಯಾಣದ ಸಿದ್ಧತೆ ನಡೆಸಿದ. ಅವನನ್ನು ಬೀಳ್ಕೊಡಲು ಸೇರಿದ್ದ ಜನರು ಅವನು ಹೊರಡುತ್ತಿದ್ದಂತೆ ನಿಂತಲ್ಲೇ ನಿಂತು ಬಿಟ್ಟರು. ತಮ್ಮ ನೋಟವನ್ನು ಭಗವಂತನಿಂದ ದೂರಮಾಡುವುದು ಅವರಿಗೆ ತುಂಬ ಕಷ್ಟವಾಯಿತು.

ಶ್ರೀ ಗೌರಸುಂದರನು ತನ್ನ ಪ್ರಯಾಣವನ್ನು ಮುಂದುವರಿಸಿ ಪದ್ಮಾವತಿ ನದಿ ತೀರಕ್ಕೆ ಬಂದನು. ನದಿ ದೃಶ್ಯ ಆಕರ್ಷಣೀಯವಾಗಿತ್ತು. ಸಣ್ಣ ಸಣ್ಣ ಅಲೆಗಳು ನೀರಿನಲ್ಲಿ ಮಡಿಕೆಮಡಿಕೆಯಾಗಿ ಕಾಣುತ್ತಿದ್ದವು. ಉಭಯ ತೀರದಲ್ಲಿ ಹಸಿರು ವನಗಳು ಪ್ರಬಲ ಹರಿವಿನೊಂದಿಗೆ ಸಾಲಾಗಿ ಕಂಡುಬಂದವು. ನದಿಯ ನೋಟದಿಂದ ಆಕರ್ಷಿತನಾದ ಭಗವಂತನು ತನ್ನ ಮಿತ್ರರೊಂದಿಗೆ ಸ್ವಚ್ಛ ನೀರಿನಲ್ಲಿ ಸ್ನಾನಕ್ಕಾಗಿ ಇಳಿದನು.

ಭಗವಂತನು ಪೂರ್ವ ಬಂಗಾಳವನ್ನು ಪ್ರವೇಶಿಸುತ್ತಿದಂತೆಯೇ ಆ ಭೂಮಿಯು ಪವಿತ್ರವಾಯಿತು. ಇಂದಿಗೂ ಅದು ಪವಿತ್ರ ಭೂಮಿ. ಭಗವಂತನು ಪದ್ಮಾವತಿ ನದಿ ತೀರದಲ್ಲಿ ಕೆಲವು ದಿನಗಳಿರುತ್ತಾನೆಂದು ಕೇಳಿ ಅಲ್ಲಿನ ನಿವಾಸಿಗಳು ಆನಂದಿತರಾದರು. ಗೌರಾಂಗನ ಆಗಮನವು ಕ್ಷಿಪ್ರವಾಗಿ ಎಲ್ಲೆಡೆ ಹರಡಿತು. `ಎಲ್ಲ ವಿದ್ವಾಂಸರ ಮುಕುಟ ಮಣಿ ಮತ್ತು ಶ್ರೇಷ್ಠ ಗುರು ನಿಮಾಯ್ ಪಂಡಿತ ಆಗಮಿಸಿದ್ದಾನೆ’ ಎಂದು ನಿವಾಸಿಗಳು ಘೋಷಿಸಿದರು.

ಧರ್ಮನಿಷ್ಠ ಬ್ರಾಹ್ಮಣರು ಕೈಯಲ್ಲಿ ಉಡುಗೊರೆ ಹಿಡಿದು ಭಗವಂತನನ್ನು ಸ್ವಾಗತಿಸಲು ಉತ್ಸಾಹದಿಂದ ಬಂದರು. ಅವರು ಅವನಿಗೆ ತಮ್ಮ ಗೌರವ ಸಲ್ಲಿಸಿ ವಿನಮ್ರದಿಂದ ನುಡಿದರು, `ಈ ದೇಶ‌ದಲ್ಲಿ ನಿಮ್ಮ ದರ್ಶನವು ನಮ್ಮ ಅಸೀಮಿತ ಅದೃಷ್ಟವೆ ಆಗಿದೆ.’

ಒಬ್ಬ ಬ್ರಾಹ್ಮಣ ನುಡಿದ, `ಪೂರ್ವ ಬಂಗಾಳದ ಜನರು ನಿಮಾಯ್ ಪಂಡಿತರ ಬಳಿ ಅಧ್ಯಯನ ನಡೆಸಲು ತುಂಬ ಕಷ್ಟದಿಂದ ಹಣವನ್ನು ಕ್ರೋಡೀಕರಿಸಿಕೊಳ್ಳುತ್ತಾರೆ. ಆದರೆ, ಈಗ, ದೇವೋತ್ತಮ ಪರಮ ಪುರುಷನ ಕೃಪೆಯಿಂದ ಜ್ಞಾನ ಸಾಗರವೇ ನಮ್ಮ ಮನೆ ಬಾಗಿಲಿಗೆ ಬಂದಿದೆ. ಬೇರಾವ ಗುರುಗಳನ್ನೂ ಹೋಲಿಸಲಾಗದ್ದರಿಂದ ನೀನು ಬೃಹಸ್ಪತಿಯ ಅವತಾರವೆ ಸರಿ.  ಕೂಲಂಕಷವಾಗಿ ಪರಿಶೀಲಿಸಿದರೆ ಆ ಹೋಲಿಕೆಯೇ ಸರಿಯಲ್ಲವೆನಿಸುತ್ತದೆ. ನೀನು ದೇವೋತ್ತಮ ಪರಮ ಪುರುಷ ಕೃಷ್ಣನ ಶಕ್ತ್ಯಾವೇಶಾವತಾರ ಎಂಬುವುದು ನನಗೆ ದೃಢವಾಗಿದೆ. ಪರಾತ್ಪರನಲ್ಲಿ ಅಲ್ಲದೆ ಇಂತಹ ಪಾಂಡಿತ್ಯವನ್ನು ಬೇರೆಲ್ಲಿಯೂ ಕಾಣುವುದು ಸಾಧ್ಯವಿಲ್ಲ ಎಂದು ನನ್ನ ಹೃದಯ ಹೇಳುತ್ತಿದೆ. ನಮ್ಮ ವಿನಮ್ರ ಮನವಿ:  ನೀನು ನಮಗೆ ಜ್ಞಾನವನ್ನು ನೀಡು ಎಂಬುವುದು ನಮ್ಮ ಆಶಯವಾಗಿದೆ. ನಿನ್ನ ಅನುಪಸ್ಥಿತಿಯಲ್ಲಿ ನಾವು ಸದಾ ನಿನ್ನ ಬಗೆಗೆ ಯೋಚಿಸುತ್ತಿದ್ದೆವು ಮತ್ತು ನಮ್ಮ ನಮ್ಮಲ್ಲೇ ನಿನ್ನ ವ್ಯಾಖ್ಯಾನಗಳನ್ನು ಅಧ್ಯಯನ ಮಾಡುತ್ತಿರುವೆವು. ಅದನ್ನೇ ನಮ್ಮ ಶಿಷ್ಯರಿಗೂ ಬೋಧಿಸುತ್ತಿರುವೆವು. ಆದರೆ ಈಗ ನೀನೇ ಪ್ರತ್ಯಕ್ಷವಾಗಿ ಬಂದಿರುವೆ, ದಯೆಯಿಟ್ಟು ನಮ್ಮನ್ನು ನಿನ್ನ ಶಿಷ್ಯರಾಗಿ ಸ್ವೀಕರಿಸು ಮತ್ತು ನಿನ್ನ ಅದ್ಭುತ ಲೀಲೆ ಇಡೀ ಜಗತ್ತಿಗೇ ತಿಳಿಯಲಿ.’

ಅವರಿಗೆಲ್ಲ ಸಂತೋಷದಿಂದ ಆಶ್ವಾಸನೆ ನೀಡುತ್ತ ಭಗವಂತನು ಮುಗುಳ್ನಕ್ಕನು. ಪೂರ್ವ ಬಂಗಾಳದ ಪ್ರದೇಶ ಮತ್ತು ಜನರೊಂದಿಗೆ ಆನಂದದಿಂದ ಕಾಲ ಕಳೆಯುತ್ತ ಭಗವಂತನು ಕೆಲ ಸಮಯ ಆ ಪ್ರದೇಶದಲ್ಲಿಯೆ ಇದ್ದನು. ಈ ಪ್ರಸಂಗದ ಕಾರಣ ಪೂರ್ವ ಬಂಗಾಳದ ನಿವಾಸಿಗಳು ಪವಿತ್ರ ನಾಮದಿಂದ ಆಕರ್ಷಿತರಾದರು ಮತ್ತು ಇಂದಿಗೂ ಅವರು ಸಂಕೀರ್ತನೆಯಲ್ಲಿ ತೊಡಗಿಕೊಂಡಿದ್ದಾರೆ.

ವಿದ್ವಾಂಸನ ಮನಃಸ್ಥಿತಿಯಲ್ಲಿ ತಲ್ಲೀನನಾಗಿದ್ದ ವೈಕುಂಠಾಧಿಪತಿ ಶ್ರೀ ಗೌರಚಂದ್ರನು ಪೂರ್ವ ಬಂಗಾಳದಲ್ಲಿ ಆನಂದದಿಂದ ಪಯಣಿಸುತ್ತಿದ್ದ.  ಆಹ್ಲಾದಕರ ನದಿಯ ತೀರದಲ್ಲಿ, ಅರಣ್ಯದಲ್ಲಿ ಭಗವಂತನು ಸುತ್ತಾಡುತ್ತ ಕುತೂಹಲದಿಂದ ಸೇರುತ್ತಿದ್ದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಜ್ಞಾನ ಪ್ರಸಾರ ಮಾಡುತ್ತಿದ್ದ. ಅವನ ಉಪನ್ಯಾಸ ಕೇಳಲು ನೂರಾರು ಆಸಕ್ತರು ನಾನಾ ಕಡೆಗಳಿಂದ ಬರುತ್ತಿದ್ದರು. ಅವರೆಲ್ಲರ ಮನಸ್ಸಿನಲ್ಲಿ ಇದ್ದದ್ದು ಒಂದೇ. `ನಿಮಾಯ್ ಪಂಡಿತನಲ್ಲಿ ನಾನು ಅಧ್ಯಯನ ಮಾಡಬೇಕು.’ ಅವರ ಮೇಲೆ ಭಗವಂತನ ಕೃಪೆ ಎಷ್ಟಿತ್ತೆಂದರೆ, ಎರಡು ತಿಂಗಳಲ್ಲಿ ಅವರೆಲ್ಲ ಸಾಕಷ್ಟು ಜ್ಞಾನ ಪಡೆದುಕೊಂಡು ವಿದ್ವಾಂಸರಾದರು. ಅನೇಕ ಜನರು ಭಗವಂತನ ಉಪನ್ಯಾಸ ಕೇಳಲೆಂದೇ ಬಂದರೆ ನೂರಾರು ವಿದ್ಯಾರ್ಥಿಗಳು ಪದವಿ ಪಡೆದು ತಮ್ಮ ಮನೆಗಳಿಗೆ ಹಿಂತಿರುಗಿದರು. ಈ ರೀತಿ ಭಗವಂತನು ಪೂರ್ವ ಬಂಗಾಳದಲ್ಲಿ ವಿದ್ವಾಂಸನಾಗಿ ತನ್ನ ಲೀಲೆ ತೋರಿದನು.

ಲಕ್ಷ್ಮಿಗೆ ಗಂಗಾ ಪ್ರಾಪ್ತಿ

ಈ ಮಧ್ಯೆ ನವದ್ವೀಪದಲ್ಲಿ ಲಕ್ಷ್ಮೀದೇವಿಯು ಭಗವಂತನ ಅಗಲಿಕೆಯ ನೋವನ್ನು ಅನುಭವಿಸುತ್ತಿದ್ದಳು. ಆದರೂ ಅವಳು ತನ್ನ ಏಕಾಂಗಿತನದ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅವಳು ಎಂದಿನ ಪ್ರೀತಿ ವಾತ್ಸಲ್ಯದಿಂದಲೇ ಶಚೀಮಾತೆಗೆ ಉಪಚರಿಸುತ್ತಿದ್ದಳು. ಆದರೆ ಭಗವಂತನು ನವದ್ವೀಪದಿಂದ ತೆರಳಿದ ಮೇಲೆ ಅವಳು ತನ್ನ ಆಹಾರ ಸೇವನೆಯನ್ನು ತೀರ ಕಡಮೆ ಮಾಡಿಬಿಟ್ಟಳು. ಅವನ ಜೊತೆಯಿಲ್ಲದೆ ಹತಾಶಳಾಗಿದ್ದ ಅವಳು ರಾತ್ರಿ ಇಡೀ ಅಳುತ್ತಿದ್ದಳು.  ತನ್ನ ಹೃದಯದಲ್ಲಿ ತುಂಬಿದ್ದ ದುಃಖವನ್ನು ನಿಃಶಬ್ದವಾಗಿ ಅಡಗಿಸಿಕೊಳ್ಳುತ್ತಿದ್ದಳು.

ದೇವೋತ್ತಮನ ಶಾಶ್ವತ ಸತಿ ಲಕ್ಷ್ಮೀದೇವಿಗೆ ಅವನ ಅಗಲಿಕೆಯನ್ನು ಇನ್ನು ತಾಳಲಾಗಲಿಲ್ಲ. ಒಂದು ದಿನ ಅವಳು ತನ್ನ ಅಲೌಕಿಕ ದೇಹದ ಪ್ರತಿ ರೂಪವನ್ನು ಹಿಂದೆ ಬಿಟ್ಟು ರಹಸ್ಯವಾಗಿ ಭಗವಂತನನ್ನು ಕಾಣಲು ಹೊರಟುಬಿಟ್ಟಳು. ಗಂಗಾ ನದಿಯ ತೀರದಲ್ಲಿ ಆಸೀನಳಾದ ಲಕ್ಷ್ಮೀದೇವಿಯು ತನ್ನ ಹೃದಯದಲ್ಲಿ ದೇವೋತ್ತಮನ ಚರಣ ಕಮಲವನ್ನು ಅಚ್ಚೊತ್ತಿಕೊಂಡು ಮತ್ತೆಂದೂ ಹಿಂತಿರುಗದಂತೆ ಧ್ಯಾನದಲ್ಲಿ ತಲ್ಲೀನಳಾದಳು. ಶ‌ಚೀಮಾತೆಯ ದಿಗ್ಭ್ರಮೆ ಮತ್ತು ದುಃಖ ವರ್ಣಿಸಲಸಾಧ್ಯ. ಅವಳ ಶೋಚನೀಯ ರೋದನವು ಕಲ್ಲನ್ನು ಕರಗಿಸಬಹುದಿತ್ತೇನೋ. ಸಂತ ವೈಷ್ಣವರೂ ಅತೀವ ದುಃಖಿತರಾದರು. ಅಗತ್ಯ ವಿಧಿ ಪೂರೈಸಲು ಅವರೆಲ್ಲ ಮುಂದೆ ಬಂದರು.

ಪೂರ್ವ ಬಂಗಾಳದಲ್ಲಿ ಕೆಲ ಸಮಯವಿದ್ದ ದೇವೋತ್ತಮನು ತನ್ನ ಸ್ವೇಚ್ಛೆಯಿಂದ ನವದ್ವೀಪಕ್ಕೆ ಹಿಂತಿರುಗಲು ನಿರ್ಧರಿಸಿದ. ಭಗವಂತನು ವಾಪಸಾಗುವನೆಂದು ತಿಳಿದ ಕೂಡಲೆ ಅಲ್ಲಿನ ನಿವಾಸಿಗಳು ಅವನಿಗಾಗಿ ಉಡುಗೊರೆ ಮತ್ತು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿದರು. ಅವರು ಅವನಿಗೆ ಚಿನ್ನ, ಬೆಳ್ಳಿ, ಕುಡಿಯುವ ನೀರಿನ ಪಾತ್ರೆ, ಸುಂದರವಾದ ಚಾಪೆ, ಮೃದು ಮತ್ತು ಬೆಚ್ಚಗಿನ ಕಂಬಳಿ ಹಾಗೂ ವಿಧವಿಧವಾದ ವಸ್ತ್ರಗಳನ್ನು ಅರ್ಪಿಸಿದರು. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿದ್ದ ಅತ್ಯಮೂಲ್ಯ ವಸ್ತುವನ್ನು ತೆಗೆದುಕೊಂಡು ಹೋಗಿ ಭಗವಂತನಿಗೆ ಸಂತೋಷ‌ದಿಂದ ಸಮರ್ಪಿಸಿದರು. ಭಗವಂತನು ಉಡುಗೊರೆಗಳನ್ನು ಸ್ವೀಕರಿಸಿ ಅವರನ್ನು ಆಶೀರ್ವದಿಸಿದನು. ದೇವೋತ್ತಮನು ಅನೇಕ ನಿವಾಸಗಳಿಗೆ ಭೇಟಿ ನೀಡಿ ಅಲ್ಲಿಂದ ಹೊರಟನು. ಅವನ ಬಳಿ ಅಧ್ಯಯನ ಮಾಡಲು  ಅನೇಕ ವಿದ್ಯಾರ್ಥಿಗಳೂ ಅವನೊಂದಿಗೆ ನವದ್ವೀಪಕ್ಕೆ ಹೊರಟರು.

ತಪನ ಮಿಶ್ರ ಭೇಟಿ

ಭಗವಂತನು ಹೊರಡಬೇಕೆಂದಿದ್ದ ಸಮಯದಲ್ಲಿ ತಪನ ಮಿಶ್ರ ಎಂಬ ಬುದ್ಧಿವಂತ ಬ್ರಾಹ್ಮಣನೊಬ್ಬ ಅಲ್ಲಿಗೆ ಬಂದ. ತಪನ ಮಿಶ್ರ ಒಬ್ಬ ಪರಿಶುದ್ಧ ಭಕ್ತ ಮತ್ತು ವೇದಗಳಲ್ಲಿ ಪರಿಣತನಾಗಿದ್ದರೂ ಪರಿಪೂರ್ಣ ಆಧ್ಯಾತ್ಮಿಕ ಪಥ ಮತ್ತು ಅಂತಿಮ, ಪಾರಮ್ಯ ಪೂಜಾರ್ಹ ವಸ್ತುವಿನ ಬಗೆಗೆ ಅವನಿಗಿದ್ದ  ಪ್ರಶ್ನೆಗಳಿಗೆ ಉತ್ತರಿಸುವವರು ಯಾರೂ ಇರಲಿಲ್ಲ. ಅವನು ಸತತವಾಗಿ ಕೃಷ್ಣ ನಾಮ ಜಪಿಸುತ್ತಿದ್ದ. ಆದರೂ ಸರಿಯಾದ ಆಧ್ಯಾತ್ಮಿಕ ಗ್ರಹಿಕೆ ಇಲ್ಲದ ಕಾರಣ ಅವನು ಅತೃಪ್ತನಾಗಿದ್ದ. ಅವನು ಇಂತಹ ಗೊಂದಲ ಸ್ಥಿತಿಯಲ್ಲಿ ಕೆಲ ಸಮಯವಿದ್ದ.  ಭಕ್ತಿ ಶ್ರದ್ಧೆ ಇದ್ದುದರಿಂದ ಅವನಿಗೆ ಬೆಳಗಿನ ಜಾವ ಒಂದು ಕನಸು ಬಿತ್ತು.

ದೇವತೆಯಂತೆ ಕಾಣುತ್ತಿದ್ದ ಒಬ್ಬ ಕಾಂತಿಯುಕ್ತ ವ್ಯಕ್ತಿಯು ಕೆಲವು ರಹಸ್ಯ ಆದೇಶಗಳನ್ನು ನೀಡಿದ: `ಓ! ಬ್ರಾಹ್ಮಣನೇ ಕೇಳು, ನೀನು ತ್ಯಾಗಜೀವಿಯಾಗಿರುವುದರಿಂದ ತುಂಬ ಚಿಂತಿಸಬೇಕಾಗಿಲ್ಲ. ನಿನ್ನ ಮನಸ್ಸನ್ನು ಸಮಾಧಾನಪಡಿಸಿಕೋ. ಹೋಗು, ನಿಮಾಯ್ ಪಂಡಿತನನ್ನು ಭೇಟಿ ಮಾಡು. ಆಧ್ಯಾತ್ಮಿಕ ಪಥ ಮತ್ತು ಅತ್ಯುನ್ನತ ಆಧ್ಯಾತ್ಮಿಕ ಧ್ಯೇಯ ಕುರಿತಂತೆ ನಿನಗೆ ಬೇಕಾಗಿರುವುದನ್ನೆಲ್ಲ ಅವನು ವಿವರಿಸುತ್ತಾನೆ. ಅವನು ಸಾಧಾರಣ ಆತ್ಮವಲ್ಲ, ಅವನು ದೇವೋತ್ತಮ ಪರಮ ಪುರುಷನಾದ ನಾರಾಯಣ. ತನ್ನ ಅದ್ಭುತ ಅಲೌಕಿಕ ಲೀಲೆಗಳನ್ನು ತೋರಲು ಅವನು ಮಾನವ ದೇಹವನ್ನು ಸ್ವೀಕರಿಸಿ ಈ ಲೌಕಿಕ ಜಗತ್ತಿನಲ್ಲಿ ಆವಿರ್ಭವಿಸಿದ್ದಾನೆ. ಆದರೂ, ನಾನು ನಿನಗೆ ಈಗ ಹೇಳಿದ್ದನ್ನು ಪುನರುಕ್ತಿಸಬೇಡ ಎಂದು ನಿನ್ನನ್ನು ಎಚ್ಚರಿಸುವೆ. ಈ ಜ್ಞಾನವು ಅತ್ಯಂತ ರಹಸ್ಯವಾದುದು. ವೇದಗಳಲ್ಲಿಯೂ ಇದು ಲಭ್ಯವಿಲ್ಲ. ಇದನ್ನು ನೀನು ಹೊರಗೆಡಹಿದರೆ, ನೀನು ಜನ್ಮದಿಂದ ಜನ್ಮಕ್ಕೆ ವಿಪರೀತ ಸಂಕಷ್ಟ ಅನುಭವಿಸುವೆ.’

ದೇವತೆಯು ಅವನ ಕನಸಿನಿಂದ ಕಣ್ಮರೆಯಾದನು. ಬ್ರಾಹ್ಮಣ ಎಚ್ಚರಗೊಂಡ. ಅದ್ಭುತ ದರ್ಶನವು ಅವನಿಗೆ ರೋಮಾಂಚನ ಉಂಟುಮಾಡಿತು ಮತ್ತು ಅವನು ಆನಂದಬಾಷ್ಪ ಸುರಿಸಿದ. ತನ್ನ ಅದೃಷ್ಟವೆ ಬದಲಾಯಿತೆಂದು ಅವನಿಗೆ ಅರ್ಥವಾಯಿತು. ಹೊಸ ಜನ್ಮ ಪಡೆದುಕೊಂಡ ಬ್ರಾಹ್ಮಣನು ಭಗವಂತನನ್ನು ಕಾಣಲು ಹೊರಟನು. ಅವನು ಪದ್ಮಾವತಿ ನದಿ ತೀರ ತಲಪಿದಾಗ ಭಗವಂತನು ನೂರಾರು ಶಿಷ್ಯರಿಂದ ಸುತ್ತುವರಿಯಲ್ಪಟ್ಟಿದ್ದ. ಅಂತಹ ಅಪೂರ್ವ ದೃಶ್ಯದ ಮಧ್ಯೆ ಬ್ರಾಹ್ಮಣನು ಭಗವಂತನ ಚರಣ ಕಮಲಕ್ಕೆರಗಿದನು. ಅನಂತರ ಮೇಲೆದ್ದು ಅಂಜಲೀಬದ್ಧನಾಗಿ ನಿಂತನು. ಅವನೆಂದ. `ನಾನು ಪತಿತ ಮತ್ತು ನಿರ್ಭಾಗ್ಯ. ದಯೆಯಿಟ್ಟು ನನ್ನತ್ತ ಕರುಣೆಯ ದೃಷ್ಟಿ ತೋರಿ ಮತ್ತು ನನ್ನ ಗೊಂದಲ ನಿವಾರಿಸಿ. ಪರಿಪೂರ್ಣ ಆಧ್ಯಾತ್ಮಿಕ ಪಥ ಮತ್ತು ಮಾನವ ಜೀವನದ ಅಂತಿಮ ಗುರಿ ಬಗೆಗೆ ನನಗೆ ತಿಳಿಯದು. ಉದಾರ ಮನಸ್ಸಿನಿಂದ ಈ ಜ್ಞಾನವನ್ನು ನನಗೆ ನೀಡಿ. ನನ್ನ ಹೃದಯವು ಲೌಕಿಕ ಆನಂದ ಮತ್ತು ವೈಭೋಗವನ್ನು ಬಯಸುವುದಿಲ್ಲ. ಪ್ರಭುವೇ, ನನ್ನ ಆತ್ಮಕ್ಕೆ ಅಂತಿಮ ಆಶ್ರಯ ಯಾವುದೆಂದು ತಿಳಿಸಿ.’

ಭಗವಂತನೆಂದ. `ಬ್ರಾಹ್ಮಣನೇ, ನಿನ್ನ ಒಳ್ಳೆಯ ಅದೃಷ್ಟವನ್ನು ಯಾರು ತಾನೇ ವಿವರಿಸಲು ಸಾಧ್ಯ? ದೇವೋತ್ತಮ ಶ್ರೀ ಕೃಷ್ಣನನ್ನು ಪೂಜಿಸುವ ಅಪೇಕ್ಷೆಯನ್ನು ನೀನು ಹೊಂದಿರುವೆ. ಅದೇ ಪರಿಪೂರ್ಣ ಮತ್ತು ಶ್ರೇಷ್ಠ ಪಥ. ಭಗವಂತನ ಭಕ್ತನಾಗುವುದು ತುಂಬ ಕಷ್ಟ. ಆದುದರಿಂದ ಭಗವಂತನು ಆಯಾ ಯುಗದ ಧಾರ್ಮಿಕ ಗುಣ ಮಟ್ಟವನ್ನು ಸ್ಥಾಪಿಸಲು ಪ್ರತಿ ಯುಗದಲ್ಲಿಯೂ ಆವಿರ್ಭವಿಸುತ್ತಾನೆ. ಆಯಾ ಯುಗದ ಧಾರ್ಮಿಕ ಪದ್ಧತಿಯನ್ನು ಸ್ವತಃ ಸ್ಥಾಪಿಸಲು ಅವನು ನಾಲ್ಕೂ ಯುಗಗಳಲ್ಲಿ ಅವತಾರವೆತ್ತುತ್ತಾನೆ. ಅನಂತರ ಅವನು ತನ್ನ ಆಧ್ಯಾತ್ಮಿಕ ಧಾಮಕ್ಕೆ ಮರಳುತ್ತಾನೆ.

`ನಾಲ್ಕು ಯುಗಗಳಲ್ಲಿ ಮಾನವ ಸಮಾಜದ ಉನ್ನತೀಕರಣಕ್ಕಾಗಿ ಧರ್ಮದ ನಾಲ್ಕು ಭಿನ್ನ ಅಧಿಕೃತ ವಿಧಾನಗಳಿವೆ. ಪ್ರಸ್ತುತದ ಕಲಿಯುಗದಲ್ಲಿ ಶ್ರೀ ಕೃಷ್ಣನ ಪವಿತ್ರ ನಾಮ ಸಂಕೀರ್ತನೆಯೇ ಧಾರ್ಮಿಕ ಪದ್ಧತಿ/ವಿಧಾನ. ಧರ್ಮದ ನಿಜವಾದ ಉದ್ದೇಶವೆಂದರೆ, ದೇವೋತ್ತಮ ಪರಮ ಪುರುಷನಾದ ಶ್ರೀ ಹರಿಯನ್ನು ತೃಪ್ತಿಪಡಿಸುವುದೇ ಆಗಿದೆ. ಈ ಗುರಿ ಸಾಧನೆಗಾಗಿ ಭಗವಂತನೇ ವಿವಿಧ ಯುಗಗಳಲ್ಲಿ ವಿವಿಧ ಧಾರ್ಮಿಕ ಪದ್ಧತಿಗಳನ್ನು ಸ್ಥಾಪಿಸಿದ‌. ಕಲಿಯುಗದಲ್ಲಿ ಶ್ರೀ ಕೃಷ್ಣ ನಾಮ ಸಂಕೀರ್ತನೆಯು ಅಧಿಕೃತ ಧಾರ್ಮಿಕ ಪದ್ಧತಿ ಎಂದು ಶಿಫಾರಸು ಮಾಡಲಾಗಿದೆ. ಈ ವಿಧಾನದಲ್ಲಿ ಹಿಂದಿನ ಪದ್ಧತಿಗಳೂ ಸೇರಿರುತ್ತವೆ.

`ಕಲಿಯುಗದಲ್ಲಿ ತೀವ್ರವಾದ ತಪಸ್ಸು, ಯಜ್ಞ ಯಾಗಾದಿ ಅಥವಾ ತ್ಯಾಗದ ಅಗತ್ಯವಿಲ್ಲ. ನಿರೂಪಿಸಿರುವ ಜಪದ ಮೂಲಕ ಯಾರು ಶ್ರೀ ಕೃಷ್ಣನನ್ನು ಪೂಜಿಸುವರೋ ಅವರಿಗೆ ಅತಿ ಶ್ರೇಷ್ಠ ಅದೃಷ್ಟ ಮತ್ತು ಯಶಸ್ಸು ಲಭ್ಯವಾಗುತ್ತದೆ.

`ಆದುದರಿಂದ ಮನೆಗೆ ತೆರಳು ಮತ್ತು ಸಂಪೂರ್ಣ ಶ್ರದ್ಧೆ, ಆಸಕ್ತಿಯಿಂದ ಶ್ರೀ ಕೃಷ್ಣನನ್ನು ಪೂಜಿಸು. ವಂಚನೆಯ ಎಲ್ಲ ಲೌಕಿಕ ಆಸೆಗಳನ್ನು ತ್ಯಜಿಸು. ಶ್ರೀ ಹರಿ, ಕೃಷ್ಣನ ಪವಿತ್ರ ನಾಮ ಪಠಿಸುವುದರಿಂದ ನಿನಗೆ ಏಕಕಾಲಕ್ಕೆ ಸರಿಯಾದ ಆಧ್ಯಾತ್ಮಿಕ ಪದ್ಧತಿ ಮತ್ತು ಅಂತಿಮ ಧ್ಯೇಯ ಲಭ್ಯವಾಗುತ್ತದೆ. ಇಂದಿನ ಕದನ ಮತ್ತು ಕಪಟದ ಕಾಲದಲ್ಲಿ ಭಗವಂತನ ಪವಿತ್ರ ನಾಮ ಪಠಣ, ಪಠಣ, ಪಠಣ ಒಂದೆ ಮುಕ್ತಿಗಿರುವ ದಾರಿ. ಇನ್ಯಾವುದೇ ಮಾರ್ಗವಿಲ್ಲ. ಇನ್ನು ಯಾವುದೇ ಮಾರ್ಗವಿಲ್ಲ. ಇನ್ನು ಯಾವ ಮಾರ್ಗವೂ ಇಲ್ಲ. ನಿನ್ನ ಮುಕ್ತಿಗಾಗಿ ನಾನು ಈಗ ಈ ಶ್ರೇಷ್ಠ ಜಪವನ್ನು ಪುನರುಕ್ತಿಸುತ್ತಿದ್ದೇನೆ. ಇದರಲ್ಲಿ ೩೨ ಅಕ್ಷರಗಳೊಂದಿಗೆ ಭಗವಂತನ ೧೬ ಪುಣ್ಯ ನಾಮಗಳಿವೆ : ಹರೇ ಕೃಷ್ಣ ಹರೇ ಕೃಷ್ಣ , ಕೃಷ್ಣ ಕೃಷ್ಣ ಹರೇ ಹರೇ/ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ.

`ಈ ಮಹಾ ಮಂತ್ರವನ್ನು ಸತತವಾಗಿ ಜಪಿಸುವುದರಿಂದ‌ ಮತ್ತು ಪೂಜಿಸುವುದರಿಂದ ನಿನ್ನ ಹೃದಯದಲ್ಲಿ ಕೃಷ್ಣ-ಪ್ರೇಮ ಅರಳುವ ಭಾವನೆ ಮೂಡುತ್ತದೆ. ಅನಂತರ, ಕ್ರಮೇಣ ನಿನಗೆ ಸರಿಯಾದ ಆಧ್ಯಾತ್ಮಿಕ ಪಥ ಮತ್ತು ಅಂತಿಮ ಆಧ್ಯಾತ್ಮಿಕ ಧ್ಯೇಯದ ನಿಜ ಏನೆಂಬುವುದು ಅರ್ಥವಾಗುತ್ತದೆ.’

ಭಗವಂತನಿಂದ ಅಂತಹ ಉದಾತ್ತ ಬೋಧನೆ ಸ್ವೀಕರಿಸಿದ ಮೇಲೆ ತಪನ ಮಿಶ್ರ ದೇವೋತ್ತಮನ ಚರಣ ಕಮಲಗಳಿಗೆರಗಿ ಗೌರವ ಅರ್ಪಿಸಿದನು. `ನಿನ್ನ ಅನುಮತಿಯಿಂದ ನಾನು ನಿನ್ನ ಜೊತೆ ಬರುವೆ’ ಎಂದನು.

ಆಗ ಭಗವಂತನೆಂದ. `ನೀನು ತತ್‌ಕ್ಷಣ ವಾರಾಣಸಿಗೆ ಹೋಗು. ನಾವು ಅಲ್ಲಿ ಪುನಃ ಭೇಟಿಯಾಗೋಣ. ಮತ್ತು ನಿನ್ನ ಮನವಿಗೆ ಉತ್ತರವಾಗಿ ನಾನು ನಿನಗೆ ಇನ್ನಷ್ಟು ವಿವರ ಹೊರಗೆಡಹುವೆ.’

ಅನಂತರ ಭಗವಂತನು ಅವನನ್ನು ಆಲಿಂಗಿಸಿಕೊಂಡನು. ಆಗ ಬ್ರಾಹ್ಮಣನಿಗೆ ತನ್ನ ಇಡೀ ದೇಹ ರೋಮಾಂಚನ ಮತ್ತು ಆಧ್ಯಾತ್ಮಿಕ ಆನಂದದಲ್ಲಿರುವಂತೆ ಭಾಸವಾಯಿತು. ದೇವೋತ್ತಮನ ಆಲಿಂಗನವು ಮಿಶ್ರನಿಗೆ ಪರಮಾನಂದ ಉಂಟುಮಾಡಿತು. ಭಗವಂತನು ಹೊರಡಲು ಸಿದ್ಧನಾದಾಗ, ಬ್ರಾಹ್ಮಣನು ಅವನ ಪಾದಗಳನ್ನು ಗಟ್ಟಯಾಗಿ ಹಿಡಿದುಕೊಂಡು ರಹಸ್ಯವಾಗಿ ತನ್ನ ಕನಸನ್ನು ವಿವರಿಸಿದ. ಅದನ್ನು ಕೇಳಿ ಭಗವಂತನೆಂದ, `ಈ ಕನಸನ್ನು ಯಾರಿಗೂ ಹೇಳಬೇಡ. ಎಚ್ಚರದಿಂದಿರು.’  ಅದನ್ನೇ ಪುನಃ ಬ್ರಾಹ್ಮಣನಿಗೆ ಹೇಳಿದ. ತನಗೆ ಹೊರಡಲು ಶುಭ ಗಳಿಗೆ ಬಂದಿದೆ ಎಂದುಕೊಂಡು, ಜೋರಾಗಿ ನಗುತ್ತ ಅವನು ನವದ್ವೀಪದತ್ತ ತೆರಳಿದ. ಈ ರೀತಿ ಭಗವಂತನು ಪೂರ್ವ ಬಂಗಾಳದ ಇಡೀ ಭೂಮಿಯನ್ನು ಶುದ್ಧೀಕರಿಸಿ ತನ್ನ ಮನೆಗೆ ಹಿಂತಿರುಗಿದ.

ಕೆಲ ದಿನಗಳ ಅನಂತರ ನಿಮಾಯ್ ಅಪಾರ ಉಡುಗೊರೆಗಳ ಸಮೇತ ನವದ್ವೀಪಕ್ಕೆ, ಸಂಜೆ ಸಮಯದಲ್ಲಿ ಹಿಂತಿರುಗಿದ. ತಾಯಿಯ ಪಾದಗಳಿಗೆರಗಿ ಗೌರವ ಅರ್ಪಿಸಿ ಎಲ್ಲ ಉಡುಗೊರೆಗಳನ್ನು ನೀಡಿದ. ಅನಂತರ ಭಗವಂತ ಮತ್ತು ಅವನ ಶಿಷ್ಯರು ಗಂಗಾ ಸ್ನಾನಕ್ಕಾಗಿ ತೆರಳಿದರು. ಅವಳ ಹೃದಯ ನೋವಿನಿಂದ ತುಡಿಯುತ್ತಿದ್ದರೂ ಶಚೀದೇವಿ ತನ್ನ ಮಗನಿಗೆ ಭೋಜನ ತಯಾರಿಸಲು ತನಗೆ ತಾನೇ ಸಮಾಧಾನ ಮಾಡಿಕೊಂಡಳು.

ನಿಮಾಯ್ ತನ್ನ ಎಲ್ಲ ಶಿಷ್ಯರಿಗೆ ಆಧ್ಯಾತ್ಮಿಕ ಗುರುವಾಗಿ ವರ್ತಿಸುತ್ತಿದ್ದ. ಆದುದರಿಂದ ಅವನು ಗಂಗಾಗೆ ಗೌರವ ಅರ್ಪಿಸಲು ಅವರೊಂದಿಗೆ ಸೇರಿಕೊಂಡ. ಅನಂತ‌ರ ಗಂಗಾ ಜಲದಲ್ಲಿ ಸ್ವಲ್ಪ ಸಮಯ ಕ್ರೀಡೆಯಲ್ಲಿ ನಿರತನಾದ. ಸ್ನಾನ ಪೂರ್ಣಗೊಂಡ ಮೇಲೆ ಅವನು ಮನೆಗೆ ಹಿಂತಿರುಗಿ ತನ್ನ ನಿತ್ಯದ ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸಿದ. ಅದಾದ ಮೇಲೆ ಅವನು ಭೋಜನಕ್ಕೆ ಕುಳಿತ. ವೈಕುಂಠಾಧಿಪತಿ ಶ್ರೀ ಗೌರ ಹರಿಯು ಸಂತೃಪ್ತವಾಗಿ ಆಹಾರ ಸ್ವೀಕರಿಸಿದ. ಅನಂತರ ತನ್ನ ಮಂದಿರಕ್ಕೆ ಹೋದ.

ಸುದೀರ್ಘ ಕಾಲದ ಅನಂತರ ವಾಪಸಾದ ನಿಮಾಯ್‌ನನ್ನು  ನೋಡಲು ಒಬ್ಬರಾದ ಮೇಲೆ ಒಬ್ಬರಂತೆ ಅವನ ಬಂಧು ಬಳಗ ಬರುತ್ತಿದ್ದರು. ಪೂರ್ವ ಬಂಗಾಳದಲ್ಲಿನ ತನ್ನ ಅನುಭವವನ್ನು ಅವನು ಹಾಸ್ಯಾತ್ಮಕವಾಗಿ ವಿವರಿಸುತ್ತಿದ್ದರೆ ಅವರೆಲ್ಲ ಅವನ ಸುತ್ತ ಕುಳಿತು ನಗೆಯ ಬುಗ್ಗೆ ಹರಿಸುತ್ತಿದ್ದರು. ಪೂರ್ವ ಬಂಗಾಳದ ಜನರ ವಿಚಿತ್ರ ಹವಾಸ್ಯಗಳನ್ನು ನಿಮಾಯ್ ಅನುಕರಿಸುತ್ತಿದ್ದರೆ ಉಳಿದವರು ಗಟ್ಟಿಯಾಗಿ ನಗೆಯಾಡುತ್ತಿದ್ದರು. ಭಗವಂತ‌ನಿಗೆ ದುಃಖವಾಗುವುದೆಂದು ಯಾರೂ ಕೂಡ ಲಕ್ಷ್ಮೀದೇವಿಯ ತಿರೋಭಾವದ ವಿಷಯ ಪ್ರಸ್ತಾವಿಸುತ್ತಿರಲಿಲ್ಲ. ಕೆಲವು ಸಮಯದ ಅನಂತರ ಬಂಧುಗಳು ತಮ್ಮ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದರು. ಆಗ ಪ್ರಭು ತಾಂಬೂಲ ಮೆಲ್ಲುತ್ತ ಹಾಸ್ಯಮಯ ಸಂಭಾಷಣೆಯನ್ನು ಮೆಲುಕು ಹಾಕುತ್ತಿದ್ದ.

ಲಕ್ಷ್ಮೀಪ್ರಿಯಾಳ ಸಾವಿನಿಂದ ಜರ್ಜರಿತಳಾಗಿದ್ದ ಶಚೀಮಾತೆ ನಿಮಾಯ್‌ನನ್ನು ಭೇಟಿ ಮಾಡುವ ಅವಕಾಶಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಳು. ನಿಮಾಯ್ ತನ್ನ ತಾಯಿಯನ್ನು ಕಂಡಾಗ ಅವಳು ತುಂಬ ದುಃಖಿತಳಾಗಿದ್ದಳು. ಮೃದುವಾದ, ಸಮಾಧಾನಪಡಿಸುವ ಧ್ವನಿಯಲ್ಲಿ ಅವನು ತಾಯಿಗೆ ಹೇಳಿದ. `ಅಮ್ಮಾ, ನಿನ್ನ ದುಃಖಕ್ಕೆ ಕಾರಣವೇನು? ನಾನು ಪ್ರಯಾಣದಿಂದ ಸುಖವಾಗಿ ಮತ್ತು ಆರೋಗ್ಯಪೂರ್ಣವಾಗಿ ಬಂದಿದ್ದೇನೆ. ನೀನು ಸಂತೋಷದಿಂದ ಇರಬೇಕಾಗಿತ್ತು. ಆದರೆ ನಿನ್ನ ಮುಖದಲ್ಲಿ ಬರೀ ದುಃಖವೇ ಕಾಣುತ್ತಿದೆ. ಹೇಳು, ಮಾತಾ, ಏನು ಕಾರಣ?’

ಮಗನ ಮಾತು ಅವಳ ದುಃಖವನ್ನು ಹೆಚ್ಚಿಸಿತು. ಅವಳಿಗೆ ಮಾತಾಡುವುದು ಸಾಧ್ಯವಾಗಲಿಲ್ಲ. ಅವಳು ಅಳತೊಡಗಿದಳು.

`ಅಮ್ಮಾ, ನನಗೆ ಎಲ್ಲ ಗೊತ್ತು. ನಿನ್ನ ಸೊಸೆಗೆ ಏನಾದರೂ ಅಪಾಯವಾಯಿತೇ?’ ಕೆಲವು ಬಂಧುಗಳು ಮಾತಾಡಲು ಮುಂದೆ ಬಂದರು. `ನಿಮಾಯ್ ಪಂಡಿತ, ಕೇಳು. ನಿನ್ನ ಪತ್ನಿಗೆ ಗಂಗಾ ಪ್ರಾಪ್ತೆಯಾಗಿ ಭಗವಂತನ ಚರಣ ಕಮಲ ಸೇರಿದಳು.’

ದೇವೋತ್ತಮನು ತನ್ನ ಶಾಶ್ವತ ಸತಿ ಲಕ್ಷ್ಮೀದೇವಿಯ ನಿರ್ಗಮನದ ಬಗೆಗೆ ಧ್ಯಾನಿಸುತ್ತ, ತಲೆ ತಗ್ಗಿಸಿ ಮೌನಿಯಾದ. ಅಗಲಿಕೆಯ ನೋವು ತನ್ನನ್ನು ಆವರಿಸಿಕೊಳ್ಳಲು ಬಿಟ್ಟ ನಿಮಾಯ್ ಏನೂ ಮಾತನಾಡಲಿಲ್ಲ. ಎಲ್ಲ ವೈದಿಕ ಸತ್ಯಗಳ ಮೂರ್ತಿರೂಪವೇ ಅವನಾಗಿದ್ದರೂ ಅವನು ಮೌನವಾಗಿದ್ದ. ಸಾಮಾನ್ಯ ಮನುಷ್ಯರಂತೆ ಅವನು ತೀವ್ರ ದುಃಖದ ಭಾವೋದ್ರೇಕವನ್ನು ತೋರಗೊಟ್ಟ. ಅನಂತರ ಸಮಾಧಾನ ಮಾಡಿಕೊಂಡು ಹೇಳಿದ, `ದೈಹಿಕ ಪ್ರೀತಿ, ವಾತ್ಸಲ್ಯದಿಂದ ಪತಿ ಅಥವಾ ಮಗನೆಂದು ಸಂಬಂಧ ಪರಿಗಣಿಸಬಹುದು. ತಪ್ಪು ಅರ್ಥ ಗ್ರಹಿಕೆಯಿಂದ‌ ಈ  ಕಾಲ್ಪನಿಕ ಸಂಬಂಧಗಳುಂಟಾಗುತ್ತವೆ. ಅಮ್ಮಾ, ನೀನು ಯಾಕೆ ದುಃಖಿಸುವೆ?  ಭಗವಂತನ ಅಪೇಕ್ಷೆಯನ್ನು ನೀನು ಹೇಗೆ ಬದಲಿಸುವೆ? ಸಮಯವನ್ನು ಯಾರೂ ನಿರ್ಬಂಧಿಸಲಾರರು ಮತ್ತು ಈ ಜಗತ್ತಿನಲ್ಲಿ ಎಲ್ಲ ರೀತಿಯ ಸಂಬಂಧಗಳು ತಾತ್ಕಾಲಿಕ. ಇದು ವೇದಗಳ ತೀರ್ಪು.

`ಇಡೀ ಬ್ರಹ್ಮಾಂಡದ ಚಟುವಟಿಕೆಯು ದೇವೋತ್ತಮ ಪರಮ ಪುರುಷನ ಕೈಯಲ್ಲಿದೆ. ಜನರನ್ನು ಒಂದುಗೂಡಿಸುವುದನ್ನು ಮತ್ತು ಅಗಲಿಸುವುದನ್ನು ನಮ್ಮ ಭಗವಂತನಲ್ಲದೆ ಇನ್ಯಾರು ಮಾಡಲು ಸಾಧ್ಯ? ಪತಿಗಿಂತ ಮೊದಲು ಪತ್ನಿ ಅಗಲುವುದು ಅವಳಿಗೆ ಅದೃಷ್ಟ. ಅವಳು ಪುಣ್ಯವಂತೆ ಎಂಬುದನ್ನು ಇದು ದೃಢಪಡಿಸಿದೆ.’

ಇಂತಹ ಆಧ್ಯಾತ್ಮಿಕ ಸತ್ಯಗಳ ಮೂಲಕ ನಿಮಾಯ್ ತನ್ನ ತಾಯಿಯನ್ನು ಸಮಾಧಾನಪಡಿಸಲೆತ್ನಿಸಿದ. ಭಗವಂತನ ಈ ಶಮನಕಾರಿ ಮಾತುಗಳಿಂದ ಎಲ್ಲರ ದುಃಖ ಕರಗಿತು. ಈ ರೀತಿಯಾಗಿ, ವೈಕುಂಠಾಧಿಪತಿ ಶ್ರೀ ಗೌರ ಹರಿಯು ವಿದ್ವಾಂಸನ ಮನಃಸ್ಥಿತಿಯಲ್ಲಿ ಅದ್ಭುತ ಲೀಲೆಗಳನ್ನು ಪ್ರದರ್ಶಿಸುತ್ತಿದ್ದನು.

(ಮುಂದುವರಿಯುವುದು)
Leave a Reply

Your email address will not be published. Required fields are marked *