Search
Wednesday 15 July 2020
  • :
  • :

ಸುವರ್ಣಾವತಾರ ಭಾಗ – 15

ವೈಕುಂಠಾಧಿಪತಿ ನಿಮಾಯ್ ನಿರ್ಭಯವಾಗಿ ವಿದ್ವತ್ತಿನಲ್ಲಿ ಮಗ್ನನಾಗಿದ್ದ. ಆ ಕಾಲದಲ್ಲಿ ನವದ್ವೀಪವು ವಿದ್ವತ್ತಿನ ಪೀಠ. ಧರ್ಮ ಶಾಸ್ತ್ರದ ಎಲ್ಲ ಶಾಖೆಯಲ್ಲಿಯೂ ಪಾಂಡಿತ್ಯ ಹೊಂದಿದ್ದ ವಿದ್ವಾಂಸರು ಮತ್ತು ಗುರುಗಳಿಗೆ ಅದು ನೆಲೆಯಾಗಿತ್ತು. ಭಟ್ಟಾಚಾರ್ಯ, ಚಕ್ರವರ್ತಿ, ಮಿಶ್ರ, ಆಚಾರ್ಯ ಈ ಹೆಸರುಗಳು ಅಗ‌ ಪ್ರಸಿದ್ಧಿಯಾಗಿದ್ದವು ಮತ್ತು ಬೋಧನೆಯೇ ಅವರ ಮುಖ್ಯ ಕರ್ಮವಾಗಿತ್ತು. ಚರ್ಚೆಯೇ ಅವರ ಆಟವಾಗಿತ್ತು ಮತ್ತು ತಮ್ಮ ಅಸಹಿಷ್ಣತೆ, ಅಶಾಂತ ರೀತಿಯಲ್ಲಿ ಅವರು ವಾದವೊಂದನ್ನು ಗೆಲ್ಲಲು ಏನನ್ನೂ ಮಾಡಬಲ್ಲವರಾಗಿದ್ದರು. ಗೌರವಾನ್ವಿತ ಹಿರಿಯ ವಿದ್ವಾಂಸರೊಬ್ಬರು ಗಮನಾರ್ಹ ಅಂಶವನ್ನು ಮುಂದಿಟ್ಟರೂ ಇತರರು ಅವರೊಂದಿಗೆ ಸಹಮತ ವ್ಯಕ್ತಪಡಿಸುತ್ತಿರಲಿಲ್ಲ.

ಇತರ ವಿದ್ವಾಂಸರ ವಾದಗಳನ್ನು ಅವರ ಮುಂದೆಯೇ ಖಂಡಿಸುವುದು ಮತ್ತು ಅಲ್ಲಗೆಳೆಯುವುದು ಶ್ರೀ ನಿಮಾಯ್‌ನ ಹವ್ಯಾಸವಾಗಿತ್ತು. ಭಗವಂತನ ವಾದಗಳನ್ನು ಎದುರಿಸುವ ಮತ್ತು ಇನ್ನೊಂದು ಅಭಿಪ್ರಾಯ ಸೂಚಿಸುವ ಬೋಧಕರಾರೂ ಇಡೀ ನವದ್ವೀಪದಲ್ಲಿಯೇ ಇರಲಿಲ್ಲ. ಶ್ರೀ ನಿಮಾಯ್‌ನನ್ನು ನೋಡಿದ ಕೂಡಲೇ ಅವರಲ್ಲಿ ಒಂದು ರೀತಿಯ ಭಯ ಮೂಡಿ ಅವರು ತತ್‌ಕ್ಷಣ ಅವನಿಗೆ ವಿಧೇಯರಾಗಿಬಿಡುತ್ತಿದ್ದರು. ಆಕಸ್ಮಿಕವಾಗಿಯಾದರೂ ಭಗವಂತನೊಂದಿಗೆ ಚರ್ಚಿಸಿದವರು ಅವನ ಅನುಯಾಯಿಯಾಗುತ್ತಿದ್ದರು.

ಎಲ್ಲರಿಗೂ ಭಗವಂತನ ಅಗಾಧ ಪಾಂಡಿತ್ಯ ಮತ್ತು ಬುದ್ಧಿಶಕ್ತಿ ಬಗೆಗೆ ಅವನ ಬಾಲ್ಯದಿಂದಲೂ ತಿಳಿದಿತ್ತು. ಶ್ರೀ ನಿಮಾಯ್‌ನನ್ನು ಯಾರೂ ಎಂದಿಗೂ ಸೋಲಿಸುವುದು ಸಾಧ್ಯವಿಲ್ಲವೆಂದು ಅವರ ಹೃದ‌ಯಗಳಿಗೆ ಗೊತ್ತಿತ್ತು. ಭಗವಂತನ ದರ್ಶನದಿಂದಲೇ ವಿದ್ವಾಂಸರಲ್ಲಿ ಭಯ ಮಿಶ್ರಿತ ಗೌರವ ಭಾವನೆ ಮೂಡುತ್ತಿತ್ತು. ಆದುದರಿಂದ ಅವರು ಸಹಜವಾಗಿ ಅವನ ಮುಂದೆ ವಿಧೇಯರಾಗುತ್ತಿದ್ದರು. ಆದರೂ ಅವನ ನೈಜ ರೂಪವನ್ನು ಕಂಡುಕೊಳ್ಳಲು ಅವನ ಮಾಯಾ ಶಕ್ತಿ ಅವರನ್ನು ತಡೆಯುತ್ತಿತ್ತು. ಅವನು ತನ್ನ ಸ್ವ ಇಚ್ಛೆಯಿಂದ ತನ್ನ ಗುರುತನ್ನು ಹೊರಗೆಡಹಿದರೆ ಮಾತ್ರ ಅವನನ್ನು ಗ್ರಹಿಸಿಕೊಳ್ಳುವುದು ಸಾಧ್ಯವಿತ್ತು. ದೇವೋತ್ತಮ ಪರಮ ಪುರುಷನು ಎಲ್ಲ ರೀತಿಯಿಂದಲೂ ಉದಾರಿಯಾಗಿದ್ದರೂ ಅವನ ರಹಸ್ಯ, ಅಲೌಕಿಕ ಲೀಲೆಗಳನ್ನು ಗ್ರಹಿಸಿಕೊಳ್ಳುವದು ಅವನ ಸ್ವಂತ ಇಚ್ಛೆಯಿಂದ ಮಾತ್ರ. ನವದ್ವೀಪದಲ್ಲಿ ಗೌರಚಂದ್ರನು ತನ್ನ ನಿಗೂಢ ಪರಿಚಯವನ್ನು ಬಿಟ್ಟುಕೊಡದೆ ವಿದ್ವಾಂಸನ ಮನಸ್ಥಿತಿಯಲ್ಲಿ ತನ್ನ ಲೀಲೆಗಳನ್ನು ತೋರುತ್ತಿದ್ದ.

ದಿಗ್ವಿಜಯಿಯ ಪರಾಜಯ

ಒಮ್ಮೆ ಶ್ರೇಷ್ಠ ವಿದ್ವಾಂಸ, ಆದರೆ ಗರ್ವಿಷ್ಠ ಪಂಡಿತ ಕೇಶವ ಕಾಶ್ಮೀರಿ ನವದ್ವೀಪಕ್ಕೆ ಬಂದರು. ಎಲ್ಲ ಕಡೆಯೂ ವಿದ್ವಾಂಸರನ್ನು ಅಪಜಯಗೊಳಿಸಿದ್ದರಿಂದ ಎಲ್ಲರೂ ಅವರನ್ನು ದಿಗ್ವಿಜಯಿ ಎಂದು ಕರೆಯುತ್ತಿದ್ದರು. ಅವರು ಜ್ಞಾನ ದೇವತೆ ಸರಸ್ವತಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು ಮತ್ತು ಅವಳ ಅನುಗ್ರಹ ಪಡೆಯುವ ಮಂತ್ರವನ್ನು ಜಪಿಸಿ ಅವಳ ಆಶೀರ್ವಾದ ಪಡೆದುಕೊಂಡಿದ್ದರು. ತಾಯಿ ಸರಸ್ವತಿ ವಾಸ್ತವಿಕವಾಗಿ ಎಲ್ಲರ ಮಾತೆ. ದೇವೋತ್ತಮ ಪರಮ ಪುರುಷ ಶ್ರೀಮನ್ ನಾರಾಯಣನ ಪತ್ನಿ ಶ್ರೀ ಲಕ್ಷ್ಮಿ ಮತ್ತು ಸರಸ್ವತಿ ಭಿನ್ನರಲ್ಲ. ಲಕ್ಷ್ಮಿಯು ದೇವೋತ್ತಮನಿಗೆ ಅಲೌಕಿಕ ಪ್ರೀತಿಯ ಭಕ್ತಿ ಸೇವೆಯ ಸಾಕಾರ ರೂಪ. ಅವಳು ಭಗವಂತನ ಆಂತರ್ಯದ ಶಕ್ತಿಯಾಗಿದ್ದು ಸದಾ ಅವನ ಹೃದಯದಲ್ಲಿಯೇ ಅವಳಿಗೆ ಸ್ಥಾನ.

ತನ್ನ ಅಪೇಕ್ಷೆ ಮತ್ತು ಅದೃಷ್ಟದಂತೆ, ಬ್ರಾಹ್ಮಣನು ದಿಗ್ವಿಜಯ ವಿದ್ವಾಂಸನಾಗಲು ಮಾತೆ ಸರಸ್ವತಿಯಿಂದ ವರ ಪಡೆದುಕೊಂಡಿದ್ದ. ದೇವತೆ ಸರಸ್ವತಿಯಿಂದ ನೇರವಾಗಿ ಇಂತಹ ವರ ಪಡೆದಿದ್ದ ಬ್ರಾಹ್ಮಣನು ಎಲ್ಲ ಕಡೆ ಸಂಚರಿಸಿ ವಿದ್ವಾಂಸರನ್ನು ಗೆಲ್ಲುತ್ತಿದ್ದ. ಎಲ್ಲ ಧರ್ಮ ಗ್ರಂಥಗಳೂ ಅವನ ನಾಲಗೆ ತುದಿಯಲ್ಲಿತ್ತು. ಜಗತ್ತಿನಲ್ಲಿ ಯಾರೂ ಕೂಡ ಅವನಿಗೆ ಸವಾಲೊಡ್ಡುವುದು ಸಾಧ್ಯವಿರಲಿಲ್ಲ. ಎಷ್ಟೋ ಜನರಿಗೆ ಅವನ ಪ್ರೌಢ ಪ್ರಬಂಧವಿರಲಿ, ಪ್ರಸ್ತಾವನೆಯೇ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಅವನು ಯಾವುದೆ ಅಡ್ಡಿ ಆತಂಕಗಳಿಲ್ಲದೆ ಮತ್ತು ಸವಾಲುಗಳಿಲ್ಲದೆ ಎಲ್ಲೆಡೆ ಸಂಚರಿಸುತ್ತಿದ್ದ.

ನವದ್ವೀಪವು ಶ್ರೇಷ್ಠ ವಿದ್ವಾಂಸರ ಕೇಂದ್ರವೆಂದು ಪ್ರಸಿದ್ಧಿ ಪಡೆದಿದೆ ಎಂಬ ಸಂಗತಿ ಅವನ ಕಿವಿ ಮುಟ್ಟಿತು. ಅವನು  ಆನೆ, ಕುದುರೆ ಮತ್ತು ಜನರ ಮೆರವ‌ಣಿಗೆಯಲ್ಲಿ ಆಡಂಬರದಿಂದ ನಗರ ಪ್ರವೇಶಿಸಿದ. ಈ ವಿಷಯವು ನವದ್ವೀಪದ ಎಲ್ಲ ಮನೆಗಳಿಗೂ ಕಾಳ್ಗಿಚ್ಚಿನಂತೆ  ಹರಡಿ ಗೊಂದಲದ ಅಲೆ ಮೂಡಿತು. `ಎಲ್ಲ ಕಡೆ ಜಯಗಳಿಸಿದ ಮೇಲೆ ದಿಗ್ವಿಜಯನು ಇದೀಗ ನವದ್ವೀದ ವಿದ್ವಾಂಸರಿಗೆ ಸವಾಲೊಡ್ಡಲು ಬಂದಿದ್ದಾನೆ’ ಎಂಬ ಮಾತು ಎಲ್ಲೆಡೆ ಹರಡಿತು. ಅವನು ದೇವತೆ ಸರಸ್ವತಿಯಿಂದ ವರ ಪಡೆದುಕೊಂಡಿದ್ದಾನೆಂಬುದು ತಿಳಿದ ಮೇಲೆ ನವದ್ವೀಪದ ಗುರುಗಳು ಇನ್ನಷ್ಟು ಆತಂಕಗೊಂಡರು. `ನವದ್ವೀಪವು ಜ್ಞಾನ ಕೇಂದ್ರವೆಂದು ಜಗತ್ತಿನಲ್ಲೇ ಪ್ರಸಿದ್ಧಿ ಪಡೆದಿದೆ. ದಿಗ್ವಿಜಯನು ನಮ್ಮ ವಿದ್ವಾಂಸರನ್ನು ಸೋಲಿಸಿಬಿಟ್ಟರೆ ನವದ್ವೀಪದ ವೈಭವವು ಕನಿಷ್ಠ ದರ್ಜೆಗೆ ಇಳಿಯುತ್ತದೆ ಮತ್ತು ಜಗತ್ತು ನಮ್ಮ ವೈಫಲ್ಯದ ಬಗೆಗೆ ಮಾತನಾಡುತ್ತದೆ. ಆದರೂ, ಮಾತೆ ಸರಸ್ವತಿಯ ವಿಶೇಷ ವರ ಪಡಿದುಕೊಂಡಿರುವ ಅವನಿಗೆ ಸವಾಲೊಡ್ಡುವ ಧೈರ್ಯ ಯಾರಿಗೂ ಇಲ್ಲ. ಅವನು ಮಾತನಾಡುವಾಗ ದೇವತೆ ಸರಸ್ವತಿ ಅವನ ನಾಲಗೆ ಮೇಲೆ ಇರುತ್ತಾಳಂತೆ. ಹೀಗಾಗಿ ಮಾನವರು ಅವನನ್ನು ಸೋಲಿಸುವುದು ಸಾಧ್ಯವೇ?’ ಎಂದು ಅವರೆಲ್ಲ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.

ನವದ್ವೀಪದಲ್ಲಿ ವಾಸಿಸುತ್ತಿದ್ದ ನೂರಾರು ಭಟಾಚಾರ್ಯರು ಆತಂಕದಿಂದ ತಮ್ಮೆಲ್ಲ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದರು. ಬೌದ್ಧಿಕ ಶಕ್ತಿಯ ಸಂಘರ್ಷದ ಸಮಯ ಸಮೀಪಿಸುತ್ತಿದಂತೆಯೇ ನವದ್ವೀಪದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿತ್ತು. ಶ್ರೀ ಗೌರಾಂಗನ ವಿದ್ಯಾರ್ಥಿಗಳು ಈ ಎಲ್ಲ ವಿವರಗಳನ್ನು ಅವನಿಗೆ ನೀಡಿದರು. ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಜಯ ಗಳಿಸಿದ ಮೇಲೆ ಅವನು ನಮ್ಮ ವಿದ್ವಾಂಸರಿಗೆ ಚರ್ಚೆಯಲ್ಲಿ ಸವಾಲು ಒಡ್ಡಲು ಬಂದಿದ್ದಾನೆ. ಅವನು ದೇವತೆ ಸರಸ್ವತಿಯಿಂದ ವಿಶೇಷ ವರ ಪಡೆದಿದ್ದಾನೆಂದು ಹೇಳಲಾಗಿದೆ. ಅವನು ಆಡಂಬರದ ಮೆರವಣಿಗೆಯಲ್ಲಿ ನವದ್ವೀಪ ಪ್ರವೇಶಿಸಿದ್ದಾನೆ. ನವದ್ವೀಪದಲ್ಲಿ ಎದುರಾಳಿಗಳೇ ಇಲ್ಲವಾದರೆ ಅವನಿಗೆ `ವಿಜಯದ ಪ್ರಮಾಣ ಪತ್ರ’ ಬೇಕಂತೆ.

ತನ್ನ ವಿದ್ಯಾರ್ಥಿಗಳು ಹೇಳದನ್ನೆಲ್ಲ ಕೇಳಿಸಿಕೊಂಡ ಶ್ರೀ ಗೌರಚಂದ್ರನು ನಗುತ್ತಾ ಪರಾತ್ಪರನ ಸ್ವಭಾವವನ್ನು ಅವರ ನೆನಪಿಗೆ ತಂದ. `ಸೋದರರೇ, ನಾನು ವಾಸ್ತವ ಪರಿಸ್ಥಿತಿಯನ್ನು ವಿವರಿಸುವೆ. ದೇವೋತ್ತಮನು ದುರಹಂಕಾರಿಗಳನ್ನು ಸಹಿಸಿಕೊಳ್ಳುವುದಿಲ್ಲ. ಸೊಕ್ಕುಳ್ಳವರನ್ನು ಕಂಡಾಗ ಅವನು ಅದಕ್ಕೆ ಕಾರಣವಾದ ಅಂಶಗಳನ್ನು ತೆಗೆದೊಯ್ಯುತ್ತಾನೆ. ಫಲಭರಿತ ಮರ ಮತ್ತು ಸದ್ಗುಣಗಳಿಂದ ಸಂಪದ್ಭರಿತ ವ್ಯಕ್ತಿಯು ಸಹಜವಾಗಿ ವಿನಯದಿಂದ ತಲೆಬಾಗುತ್ತಾನೆ. ನಹುಷ, ವೇಮ, ಬಾಣ, ನರಕ, ರಾವಣರಂತಹ ಶ್ರೇಷ್ಠ ವಿಜಯಿಗಳ ಬಗೆಗೆ ನೀವು ಅರಿತಿರಬಹುದು. ಅವರ ಅತಿಯಾದ ಅಹಂ ಅನ್ನು ಕತ್ತರಿಸಲು ದೇವೋತ್ತಮನು ನಿರ್ಲಕ್ಷ್ಯ ತೋರಿದನೇ? ಇಲ್ಲಿ, ನವದ್ವೀಪದಲ್ಲಿ ಈ ಗರ್ವಿಷ್ಠ ವಿದ್ವಾಂಸನ ಅಂತ್ಯವನ್ನು ನೀವು ಕಾಣುವಿರಿ.’

ಈ ರೀತಿ ಭಗವಂತನು ತನ್ನ ವಿದ್ಯಾರ್ಥಿಗಳನ್ನು ಸಮಾಧಾನ- ಪಡಿಸಿದ. ಸಂಜೆ ಅವನು ಗಂಗಾ ನದಿಯ ದಡಕ್ಕೆ ತೆರಳಿದ. ತನ್ನ ಶಿರದ ಮೇಲೆ ಗಂಗಾ ಜಲ ಪ್ರೋಕ್ಷಣೆ ಮಾಡಿಕೊಂಡು ಗೌರವ ಅರ್ಪಿಸಿ ತನ್ನ ವಿದ್ಯಾರ್ಥಿಗಳ ಮಧ್ಯೆ ಕುಳಿತ. ಧರ್ಮ ಮತ್ತು ವಿವಿಧ ಧರ್ಮ ಗ್ರಂಥ ಮತ್ತು ಇತರ ವಿಷಯಗಳ ಬಗೆಗೆ ವಿವರಿಸಿದ. ಅದೇ ವೇಳೆ ಅವನು ದಿಗ್ವಿಜಯ ಪಂಡಿತನನ್ನು ಹೇಗೆ ಪರಾಜಯಗೊಳಿಸುವುದು ಎಂಬುದರ ಬಗೆಗೂ ಯೋಚಿಸುತ್ತಿದ್ದ ಎಂಬುವುದು ಯಾರಿಗೂ ಅರ್ಥವಾಗುವಂತಿರಲಿಲ್ಲ.

`ಈ ಬ್ರ್ರಾಹ್ಮಣನು ದುರಹಂಕಾರಿಯಾಗಿದ್ದಾನೆ.  ಅವನನ್ನು ಸೋಲಿಸುವವರು ಈ ಜಗತ್ತಿನಲ್ಲಿಯೆ ಯಾರೂ ಇಲ್ಲವೆಂದು ಭಾವಿಸಿದ್ದಾನೆ. ಎಲ್ಲರ ಮುಂದೆ ನಾನು ಅವನ ಗರ್ವಭಂಗ ಮಾಡಿದರೆ ಅದು ಅವನಿಗೆ ಅಪಮಾನದ ಸಾವೇ ಸರಿ. ಜನರು ಅವನಿಗೆ ಅಗೌರವ ತೋರಿಸುತ್ತಾರೆ ಮತ್ತು ಅವನು ಎಲ್ಲವನ್ನೂ ಕಳೆದುಕೊಂಡು ಅಪಮಾನದಿಂದ ಸಾಯುತ್ತಾನೆ. ಆದುದರಿಂದ ನಾನು ಅವನನ್ನು ರಹಸ್ಯ ಸ್ಥಳದಲ್ಲಿ ಎದುರಿಸಿ ಅವನು ಕುಸಿಯುವಂತೆ ಮಾಡಬೇಕು. ಈ ರೀತಿ ನಾನು ಅವನನ್ನು ನಾಶಪಡಿಸದೆ ಅವನ ಪೊಳ್ಳುತನವನ್ನು ತಡೆಯಬಹುದು’ ಎಂದು ನಿಮಾಯ್ ಯೋಚಿಸಿದ.

ದೇವೋತ್ತಮನು ಈ ರೀತಿ ಯೋಚಿಸುತ್ತಿದ್ದಾಗ, ದಿಗ್ವಿಜಯನು ಗಂಗಾ ನದಿ ಬಳಿಗೆ ಬಂದ. ಮುಸ್ಸಂಜೆಯು ರಾತ್ರಿಯಾಗಿ ಪರವರ್ತಿತವಾಗುತ್ತಿದ್ದಂತೆ ಸ್ವಚ್ಛ ಆಕಾಶದ ಪೂರ್ಣ ಚಂದ್ರನ ಕೆಳಗೆ ಗಂಗಾ ನದಿಯು ಪ್ರಜ್ವಲಿಸುತ್ತಿತ್ತು. ದೇವೋತ್ತಮನು ತನ್ನ ವಿದ್ಯಾರ್ಥಿಗಳ ಸಮೂಹದಲ್ಲಿ ಕಾಂತಿಯಿಂದ ಹೊಳೆಯುತ್ತಿದ್ದ. ಅವನ ಮನಮೋಹಕ ಸೌಂದರ್ಯವು ಇಡೀ ಸೃಷ್ಟಿಯನ್ನೇ ಸೆರೆ ಹಿಡಿದಿತ್ತು.

ಭಗವಂತನ ಚಂದ್ರನಂತಹ ಕಾಂತಿಯುಕ್ತ ವದನದಲ್ಲಿ ಸಿಹಿ ನಗೆಯೊಂದು ಹೊಮ್ಮಿತು. ಅವನ ಸುಂದರ ಕಣ್ಣುಗಳು ಅಲೌಕಿಕ ಕಾರುಣ್ಯದ ದೃಷ್ಟಿ ಹರಿಸಿದವು. ಅವನ ದಂತಗಳಿಗೆ ಹೋಲಿಸಿದರೆ ಮುತ್ತುಗಳು ಕಾಂತಿ ಹೀನ‌ವಾದವು ಮತ್ತು ಅವನ ಉಜ್ವಲ ತುಟಿಗಳು ಉದಯಿಸುತ್ತಿರುವ ಸೂರ್ಯನೆಂದು ತಪ್ಪಾಗಿ ಭಾವಿಸುವಂತಿತ್ತು. ಮೃದು ಮತ್ತು ಸೂಕ್ಷ್ಮವಾದ ದೇಹದಿಂದ ಅವನು ಕಾರುಣ್ಯದ ಮೂರ್ತಿಯಾಗಿದ್ದ. ಶಿರದಲ್ಲಿ ದಟ್ಟ ಕಪ್ಪು ಗುಂಗುರು ಕೂದಲು ಆಕರ್ಷಿತವಾಗಿದ್ದರೆ, ಅವನ ಸಿಂಹದಂತಹ ಕೊರಳು ಸುಂದರ, ವಿಶಾಲ ಭುಜಗಳ ಮೇಲೆ ಪರಿಪಕ್ವವಾಗಿ ವಿರಮಿಸಿದ್ದವು. ಅವನ ಪರಿಪೂರ್ಣ ಸಮಾನನುಪಾತ ದೇಹವು ದೊಡ್ಡದಾಗಿತ್ತು ಮತ್ತು ಅವನ ಹೃದಯವು ಅವನ ಉದಾರ ಸ್ವಭಾವದ ನಿಯಂತ್ರಣದಲ್ಲಿತ್ತು. ಅವನ ಜನಿವಾರವು ಅನಂತಶೇಷನ ಬಿಲ್ಲಾಗಿತ್ತು. ಅವನ ನೀಳ ಬಾಹುಗಳು ಮಂಡಿವರೆಗೆ ಚಾಚಿತ್ತು. ಅವನ ವಿಶಾಲ ಹಣೆಯನ್ನು ಅಲಂಕರಿಸಿದ್ದ ಊರ್ಧ್ವಪುಂಡ್ರ ತಿಲಕವು ಪ್ರತಿಯೊಬ್ಬರನ್ನೂ ಆನಂದಪರವಶಗೊಳಿಸುತ್ತಿತ್ತು.

ಸೊಂಟಕ್ಕೆ ದೋತಿಯನ್ನು ಸೊಗಸಾಗಿ ಕಟ್ಟಿಕೊಂಟಿದ್ದ ಶ್ರೀ ಗೌರಾಂಗನು ಕಾಲು ಮಡಿಸಿ ಯೋಗಿಯ ಭಂಗಿಯಲ್ಲಿ ಕುಳಿತಿದ್ದ. ಉಪನ್ಯಾಸದ ಎಂದಿನ ರೀತಿಯಲ್ಲಿಯೇ ವಾದಗಳನ್ನು ಮಂಡಿಸುತ್ತಿದ್ದ, ಖಂಡಿಸುತ್ತಿದ್ದ. ಆ ಸಂಜೆ ಮಹಾಪ್ರಭುವಿನ ಸುತ್ತ ಅನೇಕ ವಿದ್ಯಾರ್ಥಿಗಳು ಸೇರಿದ್ದರು. ಇಂತಹ ಅದ್ಭುತ ಸಭೆಯನ್ನು ಕಂಡು ದಿಗ್ವಿಜಯ ಪಂಡಿತನಿಗೆ ಅಚ್ಚರಿ. `ಇದೇ ನಿಮಾಯ್ ಪಂಡಿತನಿರಬಹುದೇ?’ ಎಂದು ಅವನು ಯೋಚಿಸಿದ. ಭಗವಂತನ ಅಪೂರ್ವ ಸೌಂದರ್ಯ ಕಂಡು ಅವನು ಮೂಕಸ್ಮಿತನಾದ. `ಯಾರವನು?’ ಎಂದು ಅಲ್ಲಿದ್ದ ವಿದ್ಯಾರ್ಥಿಯೊಬ್ಬನನ್ನು ಕೇಳಿದ. `ಇವನೇ ಪ್ರಸಿದ್ಧ ನಿಮಾಯ್ ಪಂಡಿತ’ ಎಂದು ಅವನು ಉತ್ತರಿಸಿದ.

ಗಂಗಾಗೆ ತನ್ನ ಪ್ರಣಾಮ ಸಲ್ಲಿಸಿದ ಮೇಲೆ ದಿಗ್ವಿಜಯನು ಭಗವಂತನ ಸಮೀಪಕ್ಕೆ ಬಂದ. ಅವನನ್ನು ಗಮನಿಸಿದ ನಿಮಾಯ್ ಅವನತ್ತ ಪ್ರೀತಿಯ ನಗೆ ಬೀರಿ ಆಸನ ನೀಡಿದ. ಜಗತ್ತಿನ ಎಲ್ಲ ವಿದ್ವಾಂಸರನ್ನೂ ಸೋಲಿಸಿದ್ದ ದಿಗ್ವಿಜಯನಿಗೆ ಸಹಜವಾಗಿ ಭಯ ಇರಲಿಲ್ಲ. ಆದರೆ ಭಗವಂತನ ಮುಂದೆ ಅವನು ಭಯ-ವಿಸ್ಮಿತಗೊಂಡ. ಭಗವಂತನು ಅವನನ್ನು ಪ್ರೀತ್ಯಾದರಗಳಿಂದ ಬರಮಾಡಿಕೊಂಡ. ಆದರೆ ಕೇಶವ ಕಾಶ್ಮೀರಿಯು ಅಹಂಕಾರಿಯಾಗಿದ್ದ ಕಾರಣ ಅವನು ಭಗವಂತನನ್ನು ಅಗಣ್ಯನಾಗಿ ಪರಿಗಣಿಸಿ ಮಾತನಾಡಿದ.

`ನೀನು ವ್ಯಾಕರಣ ಬೋಧಕನೆಂದು ಅರಿತಿರುವೆ. ಮತ್ತು ನಿನ್ನ ಹೆಸರು ನಿಮಾಯ್ ಪಂಡಿತ. ವ್ಯಾಕರಣ ಆರಂಭಿಕರಿಗೆ ನೀನು ಒಳ್ಳೆಯ ಬೋಧಕನೆಂದು ಜನರು ಶ್ಲಾಘಿಸುವರು. ನೀನು ಕಲಾಪ-ವ್ಯಾಕರಣವನ್ನು ಕಲಿಸುವೆಯಂತೆ. ನಿನ್ನ ವಿದ್ಯಾರ್ಥಿಗಳು ವ್ಯಾಕರಣದ ಪದ ಕೌಶಲದಲ್ಲಿ ನಿಪುಣರಂತೆ’ ಎಂದು ದಿಗ್ವಿಜಯ ಪಂಡಿತ ಒಂದೇ ಸಮನೆ ಮಾತನಾಡಿದ. ಭಗವಂತನೆಂದ, `ಹೌದು, ನಾನು ವ್ಯಾಕರಣ ಶಿಕ್ಷಕನೆಂದು ಪ್ರಸಿದ್ಧಿ ಪಡೆದಿರುವೆ. ಆದರೆ ವಾಸ್ತವವಾಗಿ, ವ್ಯಾಕರಣ ಜ್ಞಾನದಲ್ಲಿ ನಾನು ನನ್ನ ವಿದ್ಯಾರ್ಥಿಗಳ ಮೇಲೆ ಒಳ್ಳೆಯ ಪ್ರಭಾವ ಬೀರಲಾರೆ. ಅವರೂ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲಾರರು.’ ನಿಮಾಯ್ ಮತ್ತೂ ನುಡಿದ, `ಸ್ವಾಮಿ, ನೀವಾದರೋ ಎಲ್ಲ ಧರ್ಮ ಗ್ರಂಥಗಳ ಅಗಾಧ ವಿದ್ವಾಂಸರು. ಅಲ್ಲದೆ, ಕಾವ್ಯ ರಚನೆಯಲ್ಲಿ ನೀವು ಅನುಭವಿಗಳು. ನಾನಾದರೋ ಇನ್ನೂ ಹುಡುಗ-ಒಬ್ಬ ಹೊಸ ವಿದ್ಯಾರ್ಥಿಯಷ್ಟೆ. ಆದುದರಿಂದ ನಿಮ್ಮ ಕಾವ್ಯ ರಚನೆ ಕೌಶಲವನ್ನು ಕೇಳಲು ಅಪೇಕ್ಷಿಸುತ್ತೇನೆ. ನೀವು ಕೃಪೆಯಿಂದ ಗಂಗಾ ಮಾತೆಯ ವೈಭವದ ಬಗೆಗೆ ನಮಗೆ ಕಾವ್ಯದ ಧಾರೆ ಹರಿಸಿದರೆ ನಾವು ಕೇಳುತ್ತೇವೆ.’  ನಿಮಾಯ್‌ನ ಮಾತುಗಳನ್ನು ಕೇಳಿ ದಿಗ್ವಿಜಯ ಪಂಡಿತ ಇನ್ನಷ್ಟು ಉಬ್ಬಿ ಹೋದ. ಒಂದು ತಾಸಿನಲ್ಲಿ ಅವನು ಗಂಗೆಯನ್ನು ವರ್ಣಿಸುವ ಒಂದು ನೂರು ಶ್ಲೋಕಗಳನ್ನು ರಚಿಸಿದ. ಅವನನ್ನು ಶ್ಲಾಘಿಸಿದ ನಿಮಾಯ್, `ಇಡೀ ಜಗತ್ತಿನಲ್ಲಿ ನಿಮಗಿಂತ ಶ್ರೇಷ್ಠ ಕವಿಗಳಿಲ್ಲ. ನಿಮ್ಮ ಕವನಗಳು ಎಷ್ಟು ಕಠಿಣವಾಗಿದೆಯೆಂದರೆ ನೀವೂ ಮತ್ತು ಜ್ಞಾನ ದೇವತೆ ಸರಸ್ವತಿ ಮಾತೆ ಬಿಟ್ಟರೆ ಇನ್ಯಾರಿಗೂ ಅರ್ಥವಾಗುವುದಿಲ್ಲ. ಆದರೆ, ನೀವು ಒಂದು ಶ್ಲೋಕದ ಅರ್ಥವನ್ನು ವಿವರಿಸಿದರೆ, ನಿಮ್ಮ ಬಾಯಿಂದಲೇ ಕೇಳಿದರೆ ನಮಗೆಲ್ಲ ಸಂತೋಷವಾಗುತ್ತದೆ.’ ಯಾವ ಶ್ಲೋಕದ ಅರ್ಥ ಬೇಕೆಂದು ಕೇಶವ ಕಾಶ್ಮೀರಿ ಕೇಳಿದ. ಆಗ ಭಗವಂತನು, ದಿಗ್ವಿಜಯ ರಚಿಸಿದ್ದ ನೂರು ಶ್ಲೋಕಗಳಲ್ಲಿ ಒಂದನ್ನು ವಾಚಿಸಿದ.

ಮಹತ್ತ್ವಂ ಗಙ್ಗಾಯಾಃ ಸತತಮ್ ಇದಮ್ ಆಭಾತಿ ನಿತರಾಂ |

ಯದ್ ಏಷಾ ಶ್ರೀ ವಿಷ್ಣೋಶ್ಚರಣ ಕಮಲೋತ್ಪತ್ತಿ ಸುಭಗಾ ||

ದ್ವಿತೀಯ ಶ್ರೀ ಲಕ್ಷ್ಮೀರ್ ಇವ ಸುರ ನರೈರ್ ಅರ್ಚ್ಯ ಚರಣಾ

ಭವಾನೀ ಭರ್ತುರ್ ಯಾ ಶಿರಸಿ ವಿಭವತಿ ಅದ್ಭುತ ಗುಣಾ ||

“ಗಂಗಾಮಾತೆಯ ಗರಿಮೆ ಎಂದೆಂದಿಗೂ ಇರುತ್ತದೆ.  ಆಕೆ ಅತ್ಯಂತ ಧನ್ಯಳು.  ಏಕೆಂದರೆ ಆಕೆ ಭಗವಾನ್ ವಿಷ್ಣುವಿನ ಪಾದಾರವಿಂದಗಳಲ್ಲಿ ಹುಟ್ಟಿದವಳು.  ಆಕೆ ದ್ವಿತೀಯ ಲಕ್ಷ್ಮಿಯಾದ್ದರಿಂದಲೇ ಆಕೆಯು ಸುರರಿಂದಲೂ ನರರಿಂದಲೂ ಪೂಜಿಸಲ್ಪಟ್ಟಿದ್ದಾಳೆ.  ಅದ್ಭುತ ಗುಣಸಂಪನ್ನೆಯಾದ್ದರಿಂದ ಆಕೆ ಶಿವನ ತಲೆಯನ್ನು  ಅಲಂಕರಿಸಿದ್ದಾಳೆ.”

ಈ ಪದ್ಯದ ಅರ್ಥವನ್ನು ವಿವರಿಸಲು ಚೈತನ್ಯ ಮಹಾಪ್ರಭು ಕೇಳಿದಾಗ, ಆ ಪಂಡಿತ ಅಚ್ಚರಿಗೊಂಡ. `ನಾನು ಎಲ್ಲ ಶ್ಲೋಕಗಳನ್ನೂ ಗಾಳಿಯಂತೆ ವೇಗವಾಗಿ ವಾಚಿಸಿದೆ. ಅವುಗಳಲ್ಲಿ ಒಂದನ್ನಾದರೂ ನೀನು ಅದು ಹೇಗೆ ಅಷ್ಟು ತ್ವರಿತವಾಗಿ ಕಂಠ ಪಾಠ ಮಾಡಿಕೊಂಡೆ?’ ಎಂದು ಪಂಡಿತ ಕೇಳಿದ. ನಿಮಾಯ್ ಉತ್ತರಿಸಿದ, `ಭಗವಂತನ ಕೃಪೆಯಿಂದ ಯಾರಾದರೂ  ದೊಡ್ಡ ಕವಿಗಳಾಗಬಹುದು. ಅದೇ ರೀತಿ ಅವನ ಕೃಪೆಯಿಂದ ಯಾರಾದರೂ ಶ್ರೇಷ್ಠ ಶ್ರುತಿ-ಧರ ಆಗಿ ತತ್‌ಕ್ಷಣ ಕಂಠ ಪಾಠ ಮಾಡಿಕೊಳ್ಳಬಹುದು.’ ಶ್ರೀ ಚೈತನ್ಯನ ಉತ್ತರದಿಂದ ತೃಪ್ತನಾದ ದಿಗ್ವಿಜಯನು  ಆ ಶ್ಲೋಕದ ವಿವರ ನೀಡಿದ. ಅನಂತರ ಭಗವಂತ‌, `ದಯೆಯಿಟ್ಟು ಈಗ ಶ್ಲೋಕದ ವಿಶೇಷ ಗುಣ ಮತ್ತು ದೋಷಗಳನ್ನು ವಿವರಿಸಿ’ ಎಂದು ಕೋರಿದ. ಅದಕ್ಕೆ ಬ್ರಾಹ್ಮಣನೆಂದ. `ಈ ಶ್ಲೋಕದಲ್ಲಿ ದೋಷ/ಲೋಪ‌ದ ಛಾಯೆಯೂ ಇಲ್ಲ. ಇದರಲ್ಲಿ ಉಪಮೆ ಮತ್ತು ಪ್ರಾಸಗಳ ಉತ್ತಮ ಗುಣಗಳಿವೆ.’  ಭಗವಂತನೆಂದ. `ಸ್ವಾಮಿ, ನೀವು ಕೋಪಿಸಿಕೊಳ್ಳದಿದ್ದರೆ ನಾನು ನಿಮಗೆ ಏನೋ ಹೇಳುವೆ. ಈ ಶ್ಲೋಕದಲ್ಲಿನ ದೋಷದ ಬಗೆಗೆ ವಿವರಿಸುತ್ತೀರಾ? ನಿಮ್ಮ ಶ್ಲೋಕವು ಅಪೂರ್ವವಾಗಿದೆ, ಸಂದೇಹವೇ ಇಲ್ಲ. ಇದು ಖಂಡಿತ ದೇವೋತ್ತಮನಿಗೆ ತೃಪ್ತಿ ನೀಡಿರುತ್ತದೆ. ಆದರೂ ನಾವು ಸೂಕ್ಷ್ಮವಾಗಿ ಇದನ್ನು ಪರಿಶೀಲಿಸಿದರೆ, ನಮಗೆ ಒಳ್ಳೆಯ ಗುಣ ಮತ್ತು ಲೋಪಗಳು ಸಿಗುತ್ತವೆ.’ `ನೀನು ವ್ಯಾಕರಣದ ಒಬ್ಬ ಸಾಮಾನ್ಯ ವಿದ್ಯಾರ್ಥಿ. ನಿನಗೆ ಸಾಹಿತ್ಯಿಕ ಅಲಂಕಾರಗಳ ಬಗೆಗೆ ಏನು ಗೊತ್ತು? ನಿನಗೆ ಅದರ ಬಗ್ಗೆ ಏನೂ ಗೊತ್ತಿಲ್ಲದಿರುವುದರಿಂದ ನೀನು ಅದನ್ನು ಪರಾಮರ್ಶಿಸಲಾರೆ.’

ಶ್ರೀ ಚೈತನ್ಯ ಮಹಾಪ್ರಭು ವಿನಯವಾಗಿ ಹೇಳಿದರು. `ನಾನು ನಿಮ್ಮ ಮಟ್ಟದಲ್ಲಿ ಇಲ್ಲದಿರುವುದರಿಂದ ನಿಮ್ಮ ಶ್ಲೋಕದಲ್ಲಿನ ಒಳ್ಳೆಯ ಗುಣ ಮತ್ತು ಲೋಪಗಳನ್ನು ವಿವರಿಸಿ ಕಲಿಸಲು ನಾನು ಕೇಳಿದೆ. ನನಗೆ ಸಾಹಿತ್ಯಿಕ ಶೃಂಗಾರಗಳ ಬಗೆಗೆ ಖಂಡಿತ ತಿಳಿಯದು. ಆದರೆ ನಾನು ಅವುಗಳ ಕುರಿತು ಉನ್ನತ ಮಟ್ಟಗಳಲ್ಲಿ ಕೇಳಿರುವೆ. ಹೀಗಾಗಿ ನಾನು ಈ ಶ್ಲೋಕವನ್ನು ವಿಮರ್ಶಿಸಬಲ್ಲೆ ಮತ್ತು ಇದರಲ್ಲಿ ಅನೇಕ ಲೋಪ ಮತ್ತು ಒಳ್ಳೆಯ ಗುಣಗಳನ್ನು ಕಂಡುಹಿಡಿಯಬಲ್ಲೆ.’ ಕವಿ ಹೇಳಿದ, `ಒಳ್ಳೆಯದು, ನೀನು ಯಾವ ಒಳ್ಳೆಯ ಗುಣ ಮತ್ತು ಲೋಪಗಳನ್ನು ಪತ್ತೆ ಮಾಡಿರುವೆ, ನೋಡೋಣ.’

ಸರಸ್ವತಿ ಮಾತೆಯ  ಒಲವಿನ ಪುತ್ರನಾದ ದಿಗ್ವಿಜಯ ಪಂಡಿತನು ತನ್ನ ಬುದ್ಧಿ ಶಕ್ತಿ ಕಳೆದುಕೊಂಡ. ನಿಮಾಯ್ ತೋರಿಸಿದ ತಪ್ಪುಗಳಿಗೆ ಸೂಕ್ತ ವಿವರಣೆ ನೀಡಲು ವಿಫಲನಾದ. ತನ್ನ ರಚನೆಯನ್ನು ಪುಷ್ಟೀಕರಿಸಲು ದಿಗ್ವಿಜಯ ಮಾಡಿದ ದುರ್ಬಲ ಮತ್ತು ಗೊಂದಲಮಯ ಪ್ರಯತ್ನಗಳು ನಿಮಾಯ್‌ನ ಟೀಕೆಗೆ ಒಳಗಾಯಿತು. ಭಗವಂತನು ಪದ್ಯದಲ್ಲಿ ಮತ್ತು ವಿವರಣೆಯಲ್ಲಿನ ನ್ಯೂನತೆಗಳ ಮೇಲೆ ಬೆಳಕು ಚೆಲ್ಲಿದ. ಪಂಡಿತನ ಅಸದೃಶ ಪಾಂಡಿತ್ಯವು ಮಾಯವಾದಂತೆ ಕಂಡಿತು ಮತ್ತು ಅವನಿಗೆ ಪರಿಸಿತ್ಥಿಯನ್ನು ಗ್ರಹಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಅವನು ತನ್ನ ಗುರುತನ್ನೇ ಮರೆತಿರುವಂತೆ ಕಂಡು ಬಂದಿತು.

ಈ ಸೋಲಿನ ಪ್ರಹಾರವ‌ನ್ನು ಜೀರ್ಣಿಸಿಕೊಳ್ಳಲು ದಿಗ್ವಿಜಯ ಒದ್ದಾಡುತ್ತಿದ್ದಾಗ, ವಿದ್ಯಾರ್ಥಿಗಳು ಕಿಸಿಕಿಸಿ ನಕ್ಕರು. ನಿಮಾಯ್ ತತ್‌ಕ್ಷಣ ಅವರನ್ನು ತಡೆದು, ಪಂಡಿತನಿಗೆ ಮೃದುವಾಗಿ, ಹಿತವಾಗಿ ಹೇಳಿದ, `ದೊಡ್ಡ ವಿದ್ವಾಂಸನಾದ ನೀವು ಶ್ರೇಷ್ಠ ಕವಿ. ಇಲ್ಲವಾದರೆ ಇಷ್ಟು ಒಳ್ಳೆಯ ಕವನಗಳು ನಿಮ್ಮ ಬಾಯಿಂದ ಹೊರಬರುತ್ತಿದ್ದವೇ? ಗಂಗಾ ನದಿಯಲ್ಲಿ ನಿರಂತರ ನೀರು  ಹರಿಯುವಂತೆ ನಿಮ್ಮ ಕಾವ್ಯ ಕೌಶ‌ಲ್ಯ. ನಿಮ್ಮೊಂದಿಗೆ ಯಾರೂ ರ್ಸ್ಪಸಲಾರರು. ಭವಭೂತಿ, ಕಾಳಿದಾಸ, ಜಯದೇವರಂತಹ ಶ್ರೇಷ್ಠ ಕವಿಗಳ ರಚನೆಗಳಲ್ಲಿ ಕೂಡ ಲೋಪಗಳ ಉದಾಹರಣೆಗಳಿವೆ. ಅಂತಹ ತಪ್ಪುಗಳನ್ನು ಅಗಣ್ಯವೆಂದು ಪರಿಗಣಿಸಬೇಕು. ಕವಿಗಳು ತಮ್ಮ ಕಾವ್ಯ ಶಕ್ತಿಯನ್ನು ಹೇಗೆ ತೋರಿದ್ದಾರೆಂಬುದು ಮುಖ್ಯ. ನಾನು ನಿಮ್ಮ ಶಿಷ್ಯನಾಗಲೂ ಅರ್ಹನಲ್ಲ. ಆದುದರಿಂದ ನಾನು ತೋರಿದ ಹುಡುಗಾಟದ ಉದ್ಧಟತನವನ್ನು ಗಂಭೀರವಾಗಿ ಪರಿಗಣಿಸಬೇಡಿ. ದಯೆಮಾಡಿ ಈಗ ಮನೆಗೆ ತೆರಳಿ. ನಾಳೆ ನಾವು ಮತ್ತೆ ಭೇಟಿಯಾಗಬಹುದು. ಮತ್ತು ನಾನು ಶಾಸ್ತ್ರಗಳ ಕುರಿತಂತೆ ನಿಮ್ಮ ಉಪನ್ಯಾಸ ಕೇಳಬಹುದು.’

ಭಗವಂತನ ನಡವಳಿಕೆ ಎಷ್ಟು ನಯ ಮತ್ತು ವಿನಯವಾಗಿತ್ತೆಂದರೆ, ಸೋತ ವ್ಯಕ್ತಿ ಕೂಡ ಅವಮಾನಿತನಾಗಲಿಲ್ಲ. ಭಗವಂತನು ಚರ್ಚೆಗಳಲ್ಲಿ ಸದಾ ವಿಜಯಿಯಾದರೂ ಅವನು ನವದ್ವೀಪದ ವಿದ್ವಾಂಸರು ಮತ್ತು ಗುರುಗಳ ಬಗೆಗೆ ಆಸ್ಥೆವಹಿಸಿ ಮಾತನಾಡುತ್ತಿದ್ದ. ಅವನೆಷ್ಟು ಕರುಣಾಮಯಿಯಾಗಿದ್ದನೆಂದರೆ, ತಾನು ಜಯಗಳಿಸಿದ್ದರೂ ಅವನು ಶ್ರೇಷ್ಠ ವಿದ್ವಾಂಸರಿಗೆ ಅಗೌರವ ತೋರುತ್ತಿರಲಿಲ್ಲ. ಭಗವಂತನ ಈ ಮನೋವೃತ್ತಿಯಿಂದಾಗಿ ನವದ್ವೀಪದ ವಿದ್ವಾಂಸರಿಗೆ ಅವನೆಂದರೆ ಅಚ್ಚು ಮೆಚ್ಚು.

ಭಗವಂತ ಮತ್ತು ವಿದ್ಯಾರ್ಥಿಗಳು ಆ ಸ್ಥಳದಿಂದ ಮನೆಯತ್ತ ತೆರಳಿದರು. ಆದರೆ ದಿಗ್ವಿಜಯ ಅಪಮಾನ ಮತ್ತು ಹತಾಷೆಯಿಂದ ಅಲ್ಲೆ ಕುಳಿತಿದ್ದ. ಅವನು ತನ್ನಲ್ಲೇ ಹೇಳಿಕೊಂಡ. `ಮಾತೆ ಸರಸ್ವತಿಯೇ ಈ ವರವನ್ನು ನನಗೆ ನೀಡಿದ್ದು, ಚರ್ಚೆಯಲ್ಲಿ ನನ್ನನ್ನು ಎದುರಿಸುವವರು ಯಾರೂ  ಇಲ್ಲ. ಆರು ತತ್ತ್ವಶಾಸ್ತ್ರ ಶಾಖೆಗಳಾದ ನ್ಯಾಯ, ವೈಶೇಷಿಕ, ಸಾಂಖ್ಯ, ಪತಾಂಜಲಿ, ಮೀಮಾಂಸ ಅಥವಾ ವೇದಾಂತದ ವಿದ್ವಾಂಸರಾಗಲಿ ಶಾಸ್ತ್ರದ ವಿದ್ವಾಂಸರಾಗಲಿ ಯಾರೂ ಕೂಡ ನನ್ನ ಪ್ರಾಬಲ್ಯವನ್ನು ಪ್ರಶ್ನಿಸುವುದಿಲ್ಲ. ಹೀಗಿದ್ದರೂ ಈ ಮಕ್ಕಳ ವ್ಯಾಕರಣ ಶಿಕ್ಷಕನಿಗೆ ಈ ರೀತಿ ನನ್ನನ್ನು ಸೋಲಿಸಲು ಭಗವಂತ ಅದು ಹೇಗೆ ಅವಕಾಶ ನೀಡಿದ? ಈ ಹೀನಾಯ ಸೋಲಿನಲ್ಲಿ ನನ್ನ ಎಲ್ಲ ಪಾಂಡಿತ್ಯ ಮತ್ತು ಜ್ಞಾನ ಅಪಕೀರ್ತಿಗೆ ಒಳಗಾಗಿ ನಾನು ದೇವತೆಯನ್ನು ಹೇಗೆ ನೋಯಿಸಿಬಿಟ್ಟಿರುವೆ.  ಈ ಪರಿಸ್ಥಿತಿಗೆ ಕಾರಣ ಕಂಡು ಕೊಳ್ಳಲೇಬೇಕು.’ ಈ ರೀತಿ ಯೋಚಿಸಿ ಅವನು ಸ್ವಲ್ಪ ಸಮಯ  ಮಂತ್ರ ಜಪಿಸಿ ನಿದ್ರೆಗೆ ಶರಣಾದ.

ಕನಸಿನಲ್ಲಿ ಮಾತೆ, ಸರಸ್ವತಿಯು ಆ ಬ್ರಾಹ್ಮಣನ ಮೇಲೆ ಕರುಣೆಯ ದೃಷ್ಟಿ ಬೀರಿದಳು. ಮತ್ತು ಹೀಗೆಂದಳು: `ನನ್ನ ಮಾತು ಕೇಳು. ವೇದಗಳಲ್ಲಿಯೂ ಹೊರಗೆಡಹದಂತಹ ಜ್ಞಾನವನ್ನು ನಾನು ನಿನಗೆ ಈಗ ಅರಹುವೆ. ಯಾವುದೆ ಕಾರಣಕ್ಕೂ ನೀನು ಈ ರಹಸ್ಯವನ್ನು ಯಾರಿಗಾದರೂ ತಿಳಿಸಿದರೆ ನೀನು ತತ್‌ಕ್ಷಣ ನಿನ್ನ ದೇಹವನ್ನು ತ್ಯಜಿಸಬೇಕಾಗುತ್ತದೆ. ಇಂದು ನಿನ್ನನ್ನು ಸೋಲಿಸಿದವನು ಇಡೀ ಬ್ರಹ್ಮಾಂಡದ ದೇವೋತ್ತಮ. ಅವನ ಚರಣ ಕಮಲದಲ್ಲಿ ನಾನು ಶಾಶ್ವತ ಭಕ್ತೆ. ನಾಚಿಕೆಯಿಂದ ಅವನ ಮುಂದೆ ನಿಲ್ಲಲು ಹಿಂಜರಿಯುವೆ.

ಭಗವಂತನ ಸಮ್ಮುಖದಲ್ಲಿ ನಾನು ನಿನ್ನ ನಾಲಗೆ ಮೇಲೆ ಬರಲಾಗಲಿಲ್ಲ. ನಾನು ನನ್ನ ಶಕ್ತಿಯನ್ನು ಕಳೆದುಕೊಂಡೆ, ಆದರೆ ಅದು ನನ್ನ ತಪ್ಪಲ್ಲ. ಅದು ಇನ್ನೇನಾದೀತು? ತನ್ನ ಸಾವಿರ ಬಾಯಿಗಳಿಂದ ವೇದ ಪಠಣ ಮಾಡುವ ಅನಂತ ಶೇಷ, ಬ್ರಹ್ಮ, ಶಿವ ಮತ್ತು ಎಲ್ಲ ದೇವತೆಗಳು ಅವನನ್ನು ಪೂಜಿಸುತ್ತಾರೆ ಮತ್ತು ಅವನ ಸಮ್ಮುಖದಲ್ಲಿ ದಿಗ್ಭ್ರಾಂತರಾಗುತ್ತಾರೆ. ಇನ್ನು ನನ್ನ ಪಾಡೇನು? ಅವನು ಪರಮ ಸತ್ಯ, ಶಾಶ್ವತ, ಪರಿಶುದ್ಧ, ಅವಿಭಾಜ್ಯ ಮತ್ತು ದೋಷಾತೀತ. ಅವನು ಎಲ್ಲರ ಹೃದಯದಲ್ಲಿ ಪರಮ ಆತ್ಮವಾಗಿ ವಾಸಿಸುವ ಸರ್ವಂತರ್ಯಾಮಿ.

ಅವನ ಅಪೇಕ್ಷೆಯಂತೆ ಬ್ರಹ್ಮನಿಂದ ಆರಂಭವಾಗಿ ಕೆಳಮಟ್ಟದವರೆಗೆ ಎಲ್ಲ ಜೀವಿಗಳು ಸಂತೋಷ ಮತ್ತು ನೋವು ಅನುಭವಿಸುತ್ತಾರೆ. ಮತ್ಸ್ಯ, ಕೂರ್ಮ, ವರಾಹ ಮುಂತಾದ ಎಲ್ಲ ಅವತಾರಗಳಿಗೆ ಅವನೇ ಪರಮ ಮೂಲ. ಅವನು ಭೂಮಿಯನ್ನು ಎತ್ತಲು ವರಾಹನಾಗಿ ಮತ್ತು ಭಕ್ತ ಪ್ರಹ್ಲಾದನನ್ನು ರಕ್ಷಿಸಲು ನೃಸಿಂಹನಾಗಿ ಅವತರಿಸಿದ. ಅವನು ಪುನಃ ವಾಮನನಾಗಿ ಬಂದು ಬಲಿಯನ್ನು ತಂತ್ರದಲ್ಲಿ ಸಿಲುಕಿಸಿದ ಮತ್ತು ಅವನ ಚರಣ ಕಮಲವು ಮಾತೆ ಗಂಗಾಗೆ ಮೂಲ ಸ್ಥಾನವಾಯಿತು.

ಅವನು ಅಯೋಧ್ಯೆಯಲ್ಲಿ ರಾಮನಾಗಿ ಜನ್ಮ ತಳೆದು ಅನೇಕ ಲೀಲೆಗಳನ್ನು ತೋರಿ ಕೊನೆಗೆ ರಾವಣನನ್ನು ವಸಿದ. ಶ್ರೀ ವಸುದೇವ ಮತ್ತು  ನಂದನ ಪುತ್ರನಾದ ಅವನು ಈಗ ಪಾಂಡಿತ್ಯದ ಮಾಧುರ್ಯದಲ್ಲಿ ಮಗ್ನನಾಗಿ, ಬ್ರಾಹ್ಮಣ ಬಾಲಕನಾಗಿ ಆವಿರ್ಭಾವಿಸಿದ್ದಾನೆ.

`ಓ, ಬ್ರಾಹ್ಮಣ, ತತ್‌ಕ್ಷಣ ಅವನಲ್ಲಿಗೆ ಹೋಗಿ ಅವನ ಚರಣ ಕಮಲದಲ್ಲಿ ಆಶ್ರಯ ಪಡೆದುಕೋ. ಅವನಿಗೆ ಸಂಪೂರ್ಣವಾಗಿ ಶರಣಾಗು. ನೀನು ಪಠಿಸಿದ ಮಂತ್ರದ ಶಕ್ತಿಯು ನ್ನ‌ನ್ನು ಇಲ್ಲಿಗೆ ಬರುವಂತೆ ಮಾಡಿತು. ಮತ್ತು ವೇದದ ಅತ್ಯಂತ ನಿಗೂಢ ರಹಸ್ಯವನ್ನು ಹೊರಗೆಡಹುವಂತೆ ಮಾಡಿತು.’ – ಇಷ್ಟು ಹೇಳಿ ಸರಸ್ವತಿ ಮಾತೆಯು ಪಂಡಿತನನ್ನು ಸಮಾಧಾನ ಪಡಿಸಿ ಅಂತರ್ದಾನವಾದಳು. ಅವನು ಪರಿಶುದ್ಧ ಮತ್ತು ಅದೃಷ್ಟದ ಭಾವನೆಯಿಂದ ತನ್ನ ನಿದ್ರೆಯಿಂದ ಎದ್ದ. ಅವನು ಭಗವಂತನ ನಿವಾಸದತ್ತ ತೆರಳಿದಾಗ ಸೂರ್ಯ ಉದಯಿಸಲು ತಯಾರಾಗಿದ್ದ. ಅವನು ನಿಮಾಯ್ ಪಂಡಿತನ‌ ಕಾಲಿಗೆರಗಿ ಪ್ರಣಾಮ ಸಲ್ಲಿಸಿದ. ಭಗವಂತನೂ ಅವನನ್ನು ಮೇಲಕ್ಕೆತ್ತಿ ಆಲಂಗಿಸಿ ಅವನಿಗೆ ಗೌರವ ನೀಡಿದ.

`ಏನು, ನೀವು! ಹೀಗ್ಯಾಕೆ ಮಾಡುತ್ತಿರುವಿರಿ?’ ಎಂದು ನಿಮಾಯ್ ಕೇಳಿದ. `ನಿನ್ನ ಅನುಗ್ರಹಕ್ಕಾಗಿ’ ಎಂದ ದಿಗ್ವಿಜಯ ಪಂಡಿತ, `ಬ್ರಾಹ್ಮಣರಲ್ಲಿಯೇ ಹೆಚ್ಚು ಪಾಂಡಿತ್ಯ ಉಳ್ಳ ಭಗವಂತನೇ, ದಯೆಯಿಟ್ಟು ನನ್ನ ಮಾತು ಕೇಳು. ನಿನ್ನನ್ನು ಪೂಜಿಸುವುದರಿಂದ ಎಲ್ಲ ಚಟುವಟಿಕೆಗಳ ಅತ್ಯುನ್ನತ ಪರಿಪೂರ್ಣತೆಯನ್ನು ಸಾಸಬಹುದು. ನೀನು ದೇವೋತ್ತಮ ಪರಮ ಪುರುಷನಾದ ಶ್ರೀಮನ್ ನಾರಾಯಣ. ಈ ಕಲಿಯುಗದಲ್ಲಿ ನೀನು ಬ್ರಾಹ್ಮಣನಾಗಿ ಆವಿರ್ಭಾವಿಸಿರುವೆ. ಆದರೆ ಯಾರೂ ಕೂಡ ನಿನ್ನ ನಿಜವಾದ ಗುರುತು ಗ್ರಹಿಸುವ ಶಕ್ತಿ ಹೊಂದಿಲ್ಲ. ನೀನು ಪ್ರಶ್ನೆಗಳನ್ನು ಕೇಳಿದಾಗಲೇ ನನಗೆ ಸಂದೇಹಗಳು ಉಂಟಾದವು ಮತ್ತು ನಾನು ಮೌನವಾದೆ. ನೀನು ಉದಾತ್ತ ಮತ್ತು ಎಲ್ಲ ಅಹಂಕಾರಗಳಿಂದ ಮುಕ್ತ ಎಂಬುವುದು ಈಗ ನನಗೆ ಸಾಕ್ಷಾತ್ಕಾರವಾಗಿದೆ, ಮತ್ತು ಈ ಸಾಕ್ಷಾತ್ಕಾರವು ಎಲ್ಲ ವೈದಿಕ ಧರ್ಮ ಗ್ರಂಥಗಳ ನಿರ್ಣಯದಂತೆಯೇ ಇದೆ.

`ನಾನು ಉದ್ದಗಲಕ್ಕೂ ಯಾತ್ರೆ ಕೈಗೊಂಡಿರುವೆ – ಗೌಡ, ತ್ರಿಕೂಟ, ಕಾಶಿ, ಗುಜರಾತ್, ವಿಜಯನಗರ, ಅಂಗ, ಬಂಗ ಮತ್ತಿತರ ಪ್ರದೇಶಗಳಿಗೆ. ಪ್ರತಿಯೊಂದು ಪ್ರದೇಶದಲ್ಲಿಯೂ ಅತ್ಯಂತ ಅರ್ಹ ವಿದ್ವಾಂಸರು ನನ್ನಿಂದ ಸೋಲಲ್ಪಟ್ಟಿದ್ದಾರೆ. ನನ್ನ ಉಪನ್ಯಾಸಗಳಲ್ಲಿ ತಪ್ಪು ಕಂಡು ಹಿಡಿಯುವುದಿರಲಿ, ಅವರಿಗೆ ಅದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. ಆದಾಗ್ಯೂ, ನಿನ್ನ ಮುಂದೆ ನನ್ನ ಎಲ್ಲ ಶಿಕ್ಷಣ, ಬುದ್ಧಿಶಕ್ತಿಯು, ಎಲ್ಲಿಗೆ ಹೋಯಿತು ಎಂದು ತಿಳಿಯದು. ಇದು ನಿನಗೆ ಅಸಾಧಾರಣ ಕಾರ್ಯವಲ್ಲ ಎಂಬುವುದು ನನಗೆ ಈಗ ಅರಿವಾಗುತ್ತಿದೆ. ಏಕೆಂದರೆ, ನೀನೇ ಭಗವಂತ ಮತ್ತು ಮಾತೆ ಸರಸ್ವತಿಯ ಪ್ರಭು. ಸರಸ್ವತಿ ಸ್ವತಃ ಇದನ್ನು ನನಗೆ ಅರುಹಿದಳು.’

ವಿನಯಶೀಲನಾಗಿ ದಿಗ್ವಿಜಯನು ಭಗವಂತನ ಮುಂದೆ ಪಶ್ಚಾತ್ತಾಪದಿಂದ ಮಾತನಾಡಿದನು. ಶ್ರೀ ಗೌರಸುಂದರ ಉತ್ತರಿಸಿದ, `ವಿದ್ವಾಂಸನಾದ ಬ್ರಾಹ್ಮಣನೇ, ನಿನ್ನ ನಾಲಗೆಯ ತುದಿಯಲ್ಲಿ ಮಾತೆ ಸರಸ್ವತಿ ಇರುವುದರಿಂದ ನೀನು ಅದೃಷ್ಟವಂತ. ಅದಿರಲಿ, ನಿಜವಾದ ವಿವೇಕಿಯಾದವನಿಗೆ ಸಾಮಾನ್ಯ ಜ್ಞಾನದಿಂದ ಪ್ರಪಂಚವನ್ನು ಗೆಲ್ಲುವುದು ಸೂಕ್ತ ಗುರಿ ಏನಲ್ಲ. ದೇವೋತ್ತಮನ ಆರಾಧನೆಯನ್ನು ವೃದ್ಧಿಸಿದರೆ ಮಾತ್ರ ಜ್ಞಾನಕ್ಕೆ ಮೌಲ್ಯ. ಬ್ರಾಹ್ಮಣನೇ, ಈಗ ಎಲ್ಲ ಅನ್ಯ ಚಟುವಟಿಕೆಗಳನ್ನು ಬದಿಗೊತ್ತಿ ನಿನ್ನ ಉಳಿದ ಬದುಕನ್ನು ಭಗವಂತನ ಚರಣ ಕಮಲವನ್ನು ಆರಾಸಲು ವಿನಿಯೋಗಿಸು. ಹೃದಯ ಮತ್ತು ಮನಸ್ಸನ್ನು ಯಾವ ಹಿಂಜರಿಕೆಯೂ ಇಲ್ಲದಂತೆ ಶ್ರೀಕೃಷ್ಣನ ಚರಣ ಕಮಲಗಳಿಗೆ ಜೋಡಿಸಿದರೆ ಮಾತ್ರ ನಿಜವಾದ ಜ್ಞಾನವನ್ನು ಆಸ್ವಾದಿಸಬಹುದೆಂಬದನ್ನು ನೆನಪಿಡಬೇಕು. ಎಲ್ಲ ಚಟುವಟಿಕೆಗಳಲ್ಲಿ ದೇವೋತ್ತಮ ವಿಷ್ಣುವಿಗೆ ಸಲ್ಲಿಸುವ ಭಕ್ತಿ ಸೇವೆಯೇ ಪರಮ ಸತ್ಯದ ಸ್ವರೂಪ. ನಾನು ನಿನಗೆ ನೀಡುವ ಸಲಹೆ ಇದೇ.’

ಶ್ರೀ ಗೌರಸುಂದರನು ಪಂಡಿತನನ್ನು ಆಲಂಗಿಸಿಕೊಂಡ ಕೂಡಲೇ ದಿಗ್ವಿಜಯನಿಂದ ಲೌಕಿಕ ಬಂಧನವು ದೂರವಾಯಿತು. ಭಗವಂತನೆಂದ, `ಬ್ರಾಹ್ಮಣನೇ, ನಿನ್ನ ಅಹಂಕಾರ ಮತ್ತು ಸೊಕ್ಕಿಗೆ ತಡೆ ಹಾಕು, ಕೃಷ್ಣನನ್ನು ಪೂಜಿಸು ಮತ್ತು ಎಲ್ಲ ಜೀವಿಗಳ ಬಗೆಗೆ ಕರುಣೆ ಇರಲಿ. ಮಾತೆ ಸರಸ್ವತಿ ನಿನಗೆ ಹೇಳಿದ್ದನ್ನು ಹೊರಗೆಡಹದಂತೆ ಎಚ್ಚರದಿಂದಿರು. ವೇದಗಳ ರಹಸ್ಯ ಜ್ಞಾನವನ್ನು ಅನಕೃತ ವ್ಯಕ್ತಿಗಳಿಗೆ ಅರುಹುವುದರಿಂದ ನಿನ್ನ ಆಯಸ್ಸು ಕಡಿಮೆಯಾಗುವುದಲ್ಲದೆ ಬದುಕು ಆಧ್ಯಾತ್ಮಿಕ ಪಥದಿಂದ ದಿಕ್ಕು ಬದಲಿಸಿಬಿಡುತ್ತದೆ.’

ಭಗವಂತನ ಬೋಧನೆ ಸ್ವೀಕರಿಸಿದ ಪಂಡಿತನು ಅಲ್ಲಿಂದ ನಿರ್ಗಮಿಸಲು ಅನುಮತಿ ಕೋರಿದ. ಅವನು ಸತತವಾಗಿ ಭಗವಂತನ ಚರಣಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಪ್ರಾರ್ಥನೆ ಸಲ್ಲಿಸಿದ. ಅತ್ಯಂತ ಅದೃಷ್ಟ ಮತ್ತು ಪರಿಶುದ್ಧತೆಯ ಭಾವನೆ ಅವನಿಗುಂಟಾಯಿತು. ಭಗವಂತನ ಕೃಪೆಯಿಂದ ಬ್ರಾಹ್ಮಣನು ಲೌಕಿಕ ವಿಷಯಗಳಿಂದ ಬಿಡುಗಡೆ, ಪರಮ ಸತ್ಯದ ಅರಿವು ಮತ್ತು ದೇವೋತ್ತಮನಿಗೆ ಭಕ್ತಿ ಸಲ್ಲಿಸುವ ಆಶೀರ್ವಾದ ಪಡೆದ. ಕೆಲವೇ ಕ್ಷಣದಲ್ಲಿ ಅವನ ಅಹಂಕಾರ ಮತ್ತು ಮಿಥ್ಯೆ ಮಾಯವಾಯಿತು ಮತ್ತು ಅವನು ಹುಲ್ಲಿನ ಗರಿಯಷ್ಟೇ ಮೃದುವಾದನು. ಅವನು ತನ್ನ ಬಳಿ ಇದ್ದ ಎಲ್ಲವ‌ನ್ನೂ-ಆನೆ, ಕುದುರೆ, ಪಲ್ಲಕ್ಕಿ, ಹಣ ಮತ್ತು ಅನಪೇಕ್ಷಿತ ಸಂಗಾತಿಗಳನ್ನು-ತ್ಯಾಗ ಮಾಡಿದ. ಶ್ರೀ ಗೌರಚಂದ್ರನ ಕೃಪೆ ಎಂತಹ ಪವಾಡ ಸದೃಶ ಪ್ರಭಾವ ಬೀರಿತ್ತೆಂದರೆ, ಬ್ರಾಹ್ಮಣ ದಿಗ್ವಿಜಯನು ಎಲ್ಲವನ್ನೂ ತೊರೆದು ಏಕಾಂಗಿಯಾಗಿ ಯಾತ್ರೆ ಕೈಗೊಂಡ.

ದಿಗ್ವಿಜಯನನ್ನು ಶ್ರೀ ಗೌರಸುಂದರನು ಸೋಲಿಸಿದ್ದು ಮತ್ತು ಅನಂತರ ಅವನು ಪರಿವರ್ತಿತನಾದ ಅದ್ಭುತ ಸಂಗತಿಗಳು ನದಿಯಾದ ಮೂಲೆ ಮೂಲೆಗೂ ಹರಡಿತು. `ಶ್ರೇಷ್ಠ ಪಂಡಿತ ದಿಗ್ವಿಜಯನ ಗರ್ವ ಭಂಗ ಮಾಡಿದ ನಿಮಾಯ್ ನಿಜಕ್ಕೂ ಶ್ರೇಷ್ಠ ವಿದ್ವಾಂಸನೇ ಇರಬೇಕು. ನಿಮಾಯ್ ಪಂಡಿತನು ನಮ್ಮ ಎಲ್ಲ ಶ್ಲಾಘನೆಗೆ ಅರ್ಹತೆಯನ್ನು ಸ್ವತಃ ತೋರಿದ್ದು ಅವನ ಖ್ಯಾತಿಯು ಉದ್ದಗಲಕ್ಕೂ ಹರಡುವುದು ಖಚಿತ’ ಎಂದು ಜನರು ಉದ್ಗರಿಸಿದರು.

ಭಗವಂತನ ಮಾಯಾ ಶಕ್ತಿ ಎಷ್ಟು ಪ್ರಬಲವಾಗಿತ್ತೆಂದರೆ ಅವನ ಪವಾಡಗಳನ್ನು ನೋಡಿದರೂ ಯಾರಿಗೂ ಅವನ ರಹಸ್ಯ ಪರಿಚಯ ಗ್ರಹಿಸಲಾಗಲಿಲ್ಲ. ಆ ದಿನದಿಂದ ನದಿಯಾದ ಜನರು ದಿಗ್ವಿಜಯನ ವಿರುದ್ಧ ನಿಮಾಯ್‌ನ ಯಶೋಗಾಥೆ ಕುರಿತು ಮಾತನಾಡುತ್ತಿದ್ದರು.

(ಮುಂದುವರಿಯುವುದು)

 
Leave a Reply

Your email address will not be published. Required fields are marked *