Search
Wednesday 15 July 2020
  • :
  • :

ಸುವರ್ಣಾವತಾರ ಭಾಗ – 14

ಶ್ರೀಧರನ ಸ್ವಭಾವ ಭಗವಂತನಿಗೆ ಯಾವಾಗಲೂ ಅಚ್ಚುಮೆಚ್ಚು. ಅವನ ಮನೆಗೆ ಹೋಗುವುದು  ಅವನಿಗೆ ಪ್ರಿಯವಾದ ವಿಷಯವಾಗಿತ್ತು. ಅವರಿಬ್ಬರೂ ರಹಸ್ಯವಾಗಿ ಸಂವಾದ ನಡೆಸುತ್ತಿದ್ದರು ಮತ್ತು ಪರಸ್ಪರ ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಈ ರೀತಿ ಅವರು ಗಂಟೆಗಟ್ಟಲೆ ಸಂತಸದ ಸಮಯ ಕಳೆಯುತ್ತಿದ್ದರು.

ಶ್ರೀಧರನ ಭಕ್ತಿ

ಮನೆಗೆ ಬಂದ ಭಗವಂತನಿಗೆ ಶ್ರೀಧರನು ಗೌರವ ಅರ್ಪಿಸಿ ಆಸನ ತೋರಿದ. ನಿಮಾಯ್‌ನ ಉದ್ರಿಕ್ತ ವ್ಯಕ್ತಿತ್ವಕ್ಕೆ ಪ್ರತಿಯಾಗಿ ಶ್ರೀಧರನದು ಶಾಂತ ಮತ್ತು ಮೃದು ಸ್ವಭಾವ.

`ಶ್ರೀಧರ, ನೀನು ಸದಾ ಶ್ರೀ ಹರಿಯ ನಾಮ ಪಠಿಸುವೆ. ಆದರೂ ನಿನ್ನ ಸಂಕಷ್ಟಗಳಿಗೆ ಏನು ಕಾರಣ? ನೀನು ಅದೃಷ್ಟ ದೇವತೆ ಶ್ರೀ ಲಕ್ಷ್ಮೀದೇವಿಯ ಪತಿ ಮತ್ತು ಯಜಮಾನನ ಸೇವೆ ಮಾಡುತ್ತಿರುವೆ. ಆದರೂ ನಿನಗೆ ಯಾಕೆ ಯಾವಾಗಲೂ ಆಹಾರ ಮತ್ತು ವಸ್ತ್ರದ ಕೊರತೆ?’ ಶ್ರೀಧರ ಉತ್ತರಿಸಿದ, `ನಾನೇನು ಉಪವಾಸದಿಂದ ಇಲ್ಲ. ನೀನೇ ನೋಡುತ್ತಿರುವಂತೆ ನನ್ನ ಮೈ ಮೇಲೆ ಬಟ್ಟೆಗಳಿವೆ. ಅವು ಉತ್ತಮ ಅಥವಾ ಸರಿಯಾದ ಅಳತೆಯದಲ್ಲದಾಗಿರಬಹುದು. ಆದರೆ ನನ್ನ ದೇಹವನ್ನು ಮುಚ್ಚುತ್ತವೆ.’

`ಆದರೂ, ಶ್ರೀಧರ’, ನಿಮಾಯ್ ವಾದಿಸಿದ, `ಬಟ್ಟೆಯು ಅನೇಕ ಕಡೆ ಹರಿದಿದೆ. ಮನೆಯಲ್ಲಿ ಅಕ್ಕಿ ಬೇಳೆ ಇಲ್ಲ ಎಂದು ನನಗೆ ಗೊತ್ತು. ನಿನ್ನ ಸುತ್ತಮುತ್ತ ನೋಡು, ಎಲ್ಲರೂ ಶತ್ರು ನಾಶಕಿ ಚಂಡಿ ದೇವತೆ (ದುರ್ಗಾ ಮಾತೆ)ಯನ್ನು ಪೂಜಿಸುತ್ತಾರೆ ಮತ್ತು ಅವರು ಯಾರೂ ಆಹಾರ, ವಸ್ತ್ರ ಮತ್ತು ವಸತಿ ಕೊರತೆಯ ಸಂಕಷ್ಟಕ್ಕೆ ಒಳಗಾಗಿಲ್ಲ.’ ಶ್ರೀಧರ ಉತ್ತರಿಸಿದ, `ನೀನು ಒಳ್ಳೆಯ ಅಂಶ ಹೇಳಿದೆ. ಸಾಮಾನ್ಯವಾಗಿ ಹೇಳುವುದಾದರೆ, ಎಲ್ಲರ ಬದುಕೂ ಒಂದೆ. ರಾಜನು ವೈಭವದ ಅರಮನೆಯಲ್ಲಿದ್ದು ಮೃಷ್ಟಾನ್ನ ಭೋಜನ ಮಾಡಿದರೆ, ಪಕ್ಷಿಗಳು ಮುಕ್ತವಾಗಿ ಅಥವಾ ತಮ್ಮ ಗೂಡಿನಲ್ಲಿ ಇದ್ದುಕೊಂಡು ಸರಳ ಆಹಾರವನ್ನು ತಾವೇ ಸಂಗ್ರಹಿಸಿಕೊಳ್ಳುತ್ತವೆ. ಆದರೂ, ಮೂಲತಃ, ಬದುಕಿನತ್ತ ಎಲ್ಲರ ದೃಷ್ಟಿ ಒಂದೇ. ಭಗವಂತನು ರೂಪಿಸಿದಂತೆ, ಕರ್ತವ್ಯಶೀಲರಾಗಬೇಕು. ಹಾಗೇ ಮಾಡುವುದರಿಂದ ನಾವು ಹೆಚ್ಚೂಕಮ್ಮಿ ಒಂದೇ ತೆರನಾಗಿ ವರ್ತಿಸುತ್ತೇವೆ. ವೈಯಕ್ತಿಕವಾಗಿ, ನನಗೆ ನನ್ನ ಈಗಿನ ಬದುಕೇ ಪ್ರಿಯವಾಗಿದೆ.’

`ನಿನ್ನ ಬಳಿ ಹುದುಗಿಸಿಟ್ಟ ಅಪಾರ ಸೊತ್ತು ಇದೆ.’ ಭಗವಂತ ಛೇಡಿಸಿದ. `ನೀನು ರಹಸ್ಯವಾಗಿ ವೈಭವದ ಅಮೃತವನ್ನು ಸವಿಯುತ್ತಿರುವೆ. ಶೀಘ್ರದಲ್ಲೇ ನಾನು ಎಲ್ಲವನ್ನೂ ಬಯಲಿಗೆಳೆಯುವೆ. ಆಗ ನೋಡೋಣ, ನೀನು ಜನರನ್ನು ಹೀಗೆ ಮೂರ್ಖರನ್ನಾಗಿ ಮಾಡುವಿಯೋ ಇಲ್ಲವೊ ಎಂದು.’ ಶ್ರೀಧರನೆಂದ, `ವಿದ್ವಾಂಸನಾದ ಬ್ರಾಹ್ಮಣನೇ, ನೀನೇ ನನ್ನ ಮನೆ ಒಳಗೆ ನೋಡು. ನಾವು ಇಲ್ಲಿ ವಾದಿಸುವುದು ಬೇಡ.’ ನಿಮಾಯ್ ಎಂದ, `ನಿನ್ನನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಅದಿರಲಿ, ನೀನು ನನಗೆ ಏನು ಉಣಿಸುವೆ, ಹೇಳು.’ ಶ್ರೀಧರ ಉತ್ತರಿಸಿದ, `ಗೌರವಾನ್ವಿತ ಬ್ರಾಹ್ಮಣನೇ, ನಾನು ಸರಳ ಬದುಕಿಗೆ ದೊನ್ನೆಗಳನ್ನು ತಯಾರಿಸಿ ಮಾರಾಟ ಮಾಡುವೆ. ಅಂತಹ ವರಮಾನದಿಂದ ನಾನು ನಿನಗೆ ಏನು ಕೊಡಬಲ್ಲೆ?’  ನಿಮಾಯ್ ನುಡಿದ, `ನಾನು ಈಗ ನಿನ್ನ ಬಚ್ಚಿಟ್ಟ ಸೊತ್ತನ್ನು ಮುಟ್ಟುವುದಿಲ್ಲ. ಅದನ್ನು ನಾನು ಅನಂತರ ಪಡೆಯುವೆ. ಆದರೆ, ನೀನು ಈಗ ಸ್ವಲ್ಪ ಬಾಳೆ ಮತ್ತು ಬಾಳೆ ದಿಂಡನ್ನು ಹಣ ಪಡೆಯದೆ ನೀಡಿದರೆ ನಾನು ನಿನ್ನೊಂದಿಗೆ ಜಗಳವಾಡುವುದಿಲ್ಲ.’

ಶ್ರೀಧರ ತನ್ನಲ್ಲೇ ಯೋಚಿಸಿದ, `ಇವನು ಉದ್ರಿಕ್ತ ಬ್ರಾಹ್ಮಣ. ಎಂದಾದರೊಂದು ದಿನ ಇವನು ನನ್ನನ್ನು ಹೊಡೆಯಲೂ ಬಹುದು. ಅವನು ಹಾಗೆ ಬಡಿದರೆ ನಾನು ಏನು ಮಾಡಲು ಸಾಧ್ಯ?  ಅವನಿಗೆ ಬೇಕಾದುದನ್ನು ಪ್ರತಿ ದಿನ ನೀಡುವ ಸಾಮರ್ಥ್ಯ ನನಗಿಲ್ಲ. ಆದರೂ ಅವನದು ದೈವೀರೂಪ. ಅವನು ಖಂಡಿತ ಸಾಮಾನ್ಯನಲ್ಲ. ಅವನು ಬಲಾತ್ಕಾರದಿಂದ ಅಥವಾ ಯಾವುದೇ ತಂತ್ರದಿಂದ ನನ್ನ ವಸ್ತುಗಳನ್ನು ತೆಗೆದುಕೊಳ್ಳಬಯಸಿದರೆ, ಅವನು ಹಾಗೇ ಮಾಡಿಕೊಳ್ಳಲಿ. ಅಂತಿಮವಾಗಿ ಅದು ನನ್ನ ಅದೃಷ್ಟ. ಆದುದರಿಂದ, ಬಡತನವಿದ್ದರೂ ಅವನಿಗೆ ಬೇಕಾದುದನ್ನು ನಾನು ಅವನಿಗೆ ಕೊಡುವೆ.’ ಈ ರೀತಿ ನಿರ್ಧರಿಸಿದ ಮೇಲೆ ಶ್ರೀಧರ ಹೇಳಿದ, `ಪ್ರೀತಿಯ ಬ್ರಾಹ್ಮಣನೇ, ನೀನು ನನಗೆ ಹಣ ನೀಡಬೇಕಾಗಿಯೇ ಇಲ್ಲ. ನಿನಗೆ ಬೇಕಾಗಿರುವುದನ್ನು ನಾನು ಮುಕ್ತ ಮತ್ತು ಸಂತೋಷ ಮನಸ್ಸಿನಿಂದ ನೀಡುವೆ. ನೀನು ಬಾಳೆ ಮತ್ತು ಇತರ ತರಕಾರಿಗಳನ್ನು ತೆಗೆದುಕೋ. ನನ್ನ ಬಳಿ ಇರುವ ದೊನ್ನೆಗಳನ್ನೂ ತೆಗೆದುಕೋ. ದಯೆಯಿಟ್ಟು ನನ್ನ ಬಳಿ ಜಗಳ ಮಾತ್ರ ಮಾಡಬೇಡ.’

`ಇದೀಗ ತೃಪ್ತಿಕರವಾದ ಒಪ್ಪಂದ. ಮುಂದೆ ಜಗಳವಿರಬಾರದು. ನನಗೆ ಒಳ್ಳೆಯ ಗುಣಮಟ್ಟದ ಬಾಳೆ ಮತ್ತು ಮೂಲಂಗಿ ಸಿಗುವಂತೆ ಮಾಡು’ ಎಂದು ನಿಮಾಯ್ ನುಡಿದ. ಅನಂತರ ಭಗವಂತನು ಪ್ರತಿದಿನ  ಬಾಳೆ, ಬಾಳೆ ದಿಂಡು, ಮೂಲಂಗಿ ಮತ್ತು ಶ್ರೀಧರ ಪೂರೈಸುವ ಆಹಾರವನ್ನು ಅವನು ನೀಡಿದ ದೊನ್ನೆಯಲ್ಲಿ ಆಸ್ವಾದಿಸುತ್ತಿದ್ದ. ಯಾವಾಗಲಾದರೂ ಒಮ್ಮೆ ಶ್ರೀಧರನ ಮಾಳಿಗೆ ಮೇಲೆ ವಿವಿಧ ಕಾಯಿಗಳು ಬೆಳೆದರೆ, ಭಗವಂತನು ಅದನ್ನು ಒಯ್ದು ಅದನ್ನು ಹಾಲು ಮತ್ತು ಮಸಾಲೆ ಪದಾರ್ಥಗಳಿಂದ ಬೇಯಿಸಿ ಆಸ್ವಾದಿಸುತ್ತಿದ್ದ. ಒಂದು ದಿನ ಭಗವಂತ ಶ್ರೀಧರನನ್ನು ಕೇಳಿದ. `ನೀನು ನನ್ನ ಬಗೆಗೆ ಏನೆಂದು ಭಾವಿಸುವೆ? ನೀನು ಅದನ್ನು ಹೇಳಿದ ಕೂಡಲೇ ನಾನು ನನ್ನ ಮನೆಗೆ ಮರಳುವೆ.’ ಶ್ರೀಧರ ಉತ್ತರಿಸಿದ, `ನೀನು ಬ್ರಾಹ್ಮಣ, ದೇವೋತ್ತಮ ಪರಮ ಪುರುಷನಾದ ವಿಷ್ಣುವಿನ ಅವಿಭಾಜ್ಯ ಅಂಗ.’

`ಇಲ್ಲ, ನಿನಗೆ ಗೊತ್ತಿಲ್ಲ’ ನಿಮಾಯ್ ನುಡಿದ, `ನಾನು ಗೋಪಾಲಕರ ಸಮುದಾಯಕ್ಕೆ ಸೇರಿದವನು. ನೀನು ನನ್ನನ್ನು ಬ್ರಾಹ್ಮಣ ಯುವಕನಂತೆ ನೋಡುವೆ. ಆದರೆ ನಾನು ನನ್ನನ್ನು ಸರಳವಾದ ಗೌಳಿಗನೆಂದು ಭಾವಿಸುವೆ.’ ಭಗವಂತನ ಮಾತಿಗೆ ಶ್ರೀಧರ ನಸುನಕ್ಕನಷ್ಟೆ. ಅವನಿಗೆ ತನ್ನ ಭಗವಂತನನ್ನೇ ಗುರುತಿಸಲಾಗಲಿಲ್ಲ. ದೇವೋತ್ತಮನ ಆಂತರಿಕ ಶಕ್ತಿಯೇ ಅದಕ್ಕೆ ಕಾರಣ. `ಶ್ರೀಧರ, ನಾನು ನಿನಗೆ ಒಂದು ಪರಮ ಸತ್ಯವನ್ನು ಹೇಳುವೆ. ನೀನು ಗಂಗಾ ನದಿಯನ್ನು ನೋಡುವೆಯಲ್ಲವೇ? ನಾನೇ ಗಂಗಾ ನದಿಯ ಮೂಲ.’ `ಓ! ನಿಮಾಯ್ ಪಂಡಿತ, ಈ ರೀತಿ ಗಂಗಾದೇವಿಗೆ ಅಗೌರವ ತೋರಲು ನಿನಗೆ ಹೆದರಿಕೆಯಾಗದೇ?’ ಆತಂಕದಿಂದ ಶ್ರೀಧರ ಕೇಳಿದ. `ವಯಸ್ಸಾಗುತ್ತಿದಂತೆ ಜನರು ಹೆಚ್ಚು ಪ್ರೌಢ ಮತ್ತು ಗಂಭೀರರಾಗುತ್ತಾರೆ. ಆದರೆ ನಿನ್ನ ಹುಡುಗಾಟವು ನಿನ್ನ ಬಾಲ್ಯದಿಂದಲೂ ಇಮ್ಮಡಿಸಿದೆ.’ ಶ್ರೀಧರನೊಂದಿಗೆ ಸ್ವಲ್ಪ ಸಮಯವಿದ್ದು ನಿಮಾಯ್ ಪಂಡಿತ ಮನೆಗೆ ಹಿಂತಿರುಗಿದ. ಅವನು ತನ್ನ ಶ್ರೀ ವಿಷ್ಣುವಿನ ಮಂದಿರ ಕೋಣೆ ಪ್ರವೇಶಿಸಿದ. ಅದು ಅವನ ವಿದ್ಯಾರ್ಥಿಗಳಿಗೆ ಅವರವರ ಮನೆಗೆ ಹಿಂತಿರುಗುವ ಸೂಚನೆಯೂ ಹೌದು.

ಶಚೀಮಾತೆಯ ಅದೃಷ್ಟ

ಸಂಜೆ ವೇಳೆ ಪೂರ್ಣಚಂದ್ರನ ಉದಯವು ನಿಮಾಯ್‌ನ ಅಂತರಂಗದಲ್ಲಿ ಅದ್ಭುತ ಆಧ್ಯಾತ್ಮಿಕ ಭಾವನೆಗಳನ್ನು ಮೀಟುತ್ತಿತ್ತು. ಚಂದ್ರನಂತಹ ವೃಂದಾವನ ಚಂದ್ರನ ನೆನಪುಗಳು ಅವನ ಹೃದಯದಲ್ಲಿ ಪುಟಿದೇಳುತ್ತಿತ್ತು. ಅವನು ಅತಿ ಮಧುರವಾಗಿ ಕೊಳಲು ನುಡಿಸುತ್ತಿದ್ದ. ಇದನ್ನು ಶಚೀಮಾತೆ ಮಾತ್ರ ಕೇಳಬಹುದಿತ್ತು. ಇಡೀ ಸೃಷ್ಟಿಗೇ ಆಕರ್ಷಕವಾದ ಆ ವೇಣುವಾದನವು ಶಚೀಮಾತೆಯ ಮನಸ್ಸನ್ನು ತುಂಬಿಸಿತ್ತು ಮತ್ತು ಪರಮಾನಂದದಿಂದ ಹಾರುವಂತೆ ಮಾಡುತ್ತಿತ್ತು. ನಿಧಾನವಾಗಿ ಬಾಹ್ಯ ಜಗತ್ತಿಗೆ ಮರಳುತ್ತಿದ್ದ ಅವಳು ತನ್ನ ಮನಸ್ಸನ್ನು ನಿಗ್ರಹದಲ್ಲಿಟ್ಟಕೊಂಡು ಆ ಸುಮಧುರ ದನಿಗೆ ಕಿವಿಗೊಡುತ್ತಿದ್ದಳು. ಈ ಮನ, ಹೃದಯ ಸೆಳೆಯುವ ವೇಣುವಾದನವು ಗೌರಸುಂದರನ ಕಡೆಯಿಂದ ಬರುವಂತೆ ಭಾಸವಾಗುತ್ತಿತ್ತು. ಸಂಗೀತವು ಅವಳನ್ನು ತನ್ನ ಕೋಣೆಯಿಂದ ಮಂದಿರ ದ್ವಾರಕ್ಕೆ ಕರೆತರುತಿತ್ತು. ಅಲ್ಲಿ ಅವಳು ತನ್ನ ನಿಮಾಯ್‌ನನ್ನು ಕಾಣುತ್ತಿದ್ದಳು. ಕೊಳಲಿನ ದನಿಯು ಸಂಪೂರ್ಣವಾಗಿ ಸ್ತಬ್ಧಗೊಂಡು ಅವನ ಎದೆಯ ಮೇಲೆ ಅವಳು ಉದಯಿಸುತ್ತಿದ್ದ ಪೂರ್ಣ ಚಂದ್ರ ಮತ್ತು ಆಕಾಶವನ್ನು ಕಂಡಳು. ಅವಳು ಅಲ್ಲೇ ಕುಸಿದು ಕುಳಿತಳು. ತಾನು ಆಗಷ್ಟೇ ಕೇಳಿದ ಮತ್ತು ನೋಡಿದ್ದನ್ನು ವಿಶ್ಲೇಷಿಸಲು ಪ್ರಯತ್ನಿಸಿದಳು. ಆದರೆ ಅವಳಿಗೆ ಸೂಕ್ತವಾದ ವಿವರಣೆ ಸಿಗಲಿಲ್ಲ.

ನಿಮಾಯ್‌ನ ಅಸೀಮಿತ, ಅತೀಂದ್ರಿಯ ಪ್ರದರ್ಶನವನ್ನು ನೋಡುವ ಅದೃಷ್ಟ ಶಚೀಮಾತೆಯದಾಯಿತು. ಅನೇಕ ಜನರು ವಾದನಗಳನ್ನು ನುಡಿಸುವುದನ್ನು ಅವಳು ಕೆಲ ರಾತ್ರಿ ಕೇಳುತ್ತಿದ್ದಳು. ಅಲ್ಲಿ ಯಾವುದೋ ಉತ್ಸವ ನಡೆಯುತ್ತಿದೆಯೇನೋ ಎಂದೆನಿಸುತ್ತಿತ್ತು. ಇಡೀ ಮನೆ, ಬಾಗಿಲು, ಗೋಡೆ ಮತ್ತು ಕಿಟಕಿಗಳು  ಪ್ರಜ್ವಲ ಬೆಳಕನ್ನು ಹೊರಸೂಸುತ್ತಿರುವುದನ್ನು ಅವಳು ಕೆಲವು ಬಾರಿ ನೋಡುತ್ತಿದ್ದಳು. ಕೆಲವು ದಿನಗಳಲ್ಲಿ ಅವಳು ಅದೃಷ್ಟ ದೇವತೆ ಶ್ರೀ ಲಕ್ಷ್ಮಿಯಷ್ಟೇ ಆಕರ್ಷಕ‌ರಾದ ಸುಂದರ, ದೈವಿಕ ಸ್ತ್ರೀಯರು ತಮ್ಮ ಕೈಯಲ್ಲಿ ಕಮಲದ ಪುಷ್ಪ ಹಿಡಿದು ಅಡ್ಡಾಡುತ್ತಿರುವುದನ್ನು ನೋಡುತ್ತಿದ್ದಳು. ಆಗಾಗ್ಗೆ ದೇವತೆಗಳು ಪ್ರತ್ಯಕ್ಷಗೊಂಡು ಕ್ಷಣ ಮಾತ್ರದಲ್ಲಿ ಮಾಯವಾಗುವ ದೃಶ್ಯವೂ ಅವಳಿಗೆ ಗೋಚರವಾಗುತ್ತಿತ್ತು. ಶಚೀಮಾತೆಯ ದೃಷ್ಟಿಯಂತೂ ಖಂಡಿತ ಕಲ್ಪನೆಯಾಗಿರಲಿಲ್ಲ. ಅವಳು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಭಕ್ತಿ ಸೇವೆಯ ಸಾಕಾರ ಮೂರ್ತಿಯಾಗಿದ್ದಳು. ಎಲ್ಲ ವೇದಗಳೂ ಅವಳನ್ನು ಕೊಂಡಾಡಿವೆ. ಯಾವುದೇ ವ್ಯಕ್ತಿಯ ಮೇಲೆ ಅವಳ ಒಂದೇ ನೋಟವು ಅವರನ್ನು ಪ‌ರಿಶುದ್ಧರನ್ನಾಗಿಸಿ ಅದೇ ದಿವ್ಯ ದೃಶ್ಯಗಳನ್ನು ನೋಡುವ ಅರ್ಹತೆ ಕೊಡುತ್ತಿತ್ತು. ಸ್ವತಃ ಕೃಷ್ಣನೇ ಆದ ದೇವೋತ್ತಮ ಪರಮ ಪುರುಷ ಶ್ರೀ ಗೌರಸುಂದರನು ತನ್ನದೇ ದೈವಿಕತೆಯನ್ನು ಆಸ್ವಾದಿಸುತ್ತ ನವದ್ವೀಪದಲ್ಲಿ ಅಜ್ಞಾತ ವೇಷದಲ್ಲಿ ಜೀವಿಸಿದ್ದ. ಕೆಲವು ಬಾರಿ ಅವನು ತನ್ನ ನಿಗೂಢ ವ್ಯಕ್ತಿತ್ವವ‌ನ್ನು ಹೊರಗೆಡಹುತ್ತಿದ್ದ. ಆದರೆ ಅವನ ಶಾಶ್ವತ ಸೇವಕರಾರಿಗೂ ಅವನನ್ನು ಗುರುತುಹಿಡಿಯಲಾಗುತ್ತಿರಲಿಲ್ಲ. ನವದ್ವೀಪ ಲೀಲೆಯಲ್ಲಿ ಭಗವಂತನು ತುಂಬ ಅಹಂಕಾರದಂತಿರುತ್ತಿದ್ದ. ಹಾಗೆ ನೋಡಿದರೆ ಅವನ ಅಹಂಕಾರಕ್ಕೆ ಇನ್ಯಾರೂ ಸಾಟಿ ಇರಲಿಲ್ಲ.

ಒಂದು ದಿನ ಭಗವಂತನು ನವದ್ವೀಪದ ರಸ್ತೆಯಲ್ಲಿ ಠೀವಿಯಿಂದ ನಡೆದುಕೊಂಡು ಹೋಗುತ್ತಿದ್ದ. ಎಂದಿನಂತೆ ಅವನು ತನ್ನ ವಿದ್ಯಾರ್ಥಿ, ಶಿಷ್ಯರಿಂದ ಸುತ್ತುವರಿಯಲ್ಪಟ್ಟಿದ್ದ. ಅವನ ನಡಿಗೆ, ಉಡುಪು ಮತ್ತು ನಡವಳಿಕೆ ಥೇಟ್ ರಾಜನಂತೆ ಇತ್ತು ಮತ್ತು ಅವನು ಕೃಷ್ಣನಂತೆಯೇ ಚಿನ್ನದ ಹಳದಿ ಬಣ್ಣದ ಧೋತಿ ಉಟ್ಟಿದ್ದ. ಸಹಸ್ರಾರು ಹುಣ್ಣಿಮೆ ಚಂದ್ರರನ್ನು ಬಿಂಬಿಸುವಂತಹ ಮುಖದ ಅವನ ತುಟಿ ಕೆಂಪಾಗಿತ್ತು. ಅವನತ್ತ ದೃಷ್ಟಿ ಹರಿಸುತ್ತ ಜನರೆನ್ನುತ್ತಿದ್ದರು, `ಏನು, ಇವನು ಪ್ರಣಯರಾಜನೇ?’ ಅವನ ಮನಮೋಹಕ ಹಣೆಯಲ್ಲಿ ತಿಲಕ ರಾರಾಜಿಸಿದರೆ ಕೈಗಳು ಗ್ರಂಥಗಳನ್ನು ಹಿಡಿದಿದ್ದವು. ಅವನ ಕಮಲ ದಳದಂತಹ ನೇತ್ರಗಳನ್ನು ಯಾರಾದರೂ ವೀಕ್ಷಿಸಿದರೆ ಸಾಕು ಅವರು ಎಲ್ಲ ರೀತಿಯ ಪಾಪದ ಯೋಚ‌ನೆಗಳಿಂದ ಮತ್ತು ಪ್ರತಿಕ್ರಿಯೆಗಳಿಂದ ಮುಕ್ತರಾಗುತ್ತಿದ್ದರು.

ಭಗವಂತನದು ಅಶಾಂತ ಸ್ವಭಾವ. ಅವನು ತನ್ನ ವಿದ್ಯಾರ್ಥಿ- ಗಳೊಂದಿಗೆ ನಡೆದು ಹೋಗುತ್ತಿದ್ದರೆ ಅವನ ಬಾಹುಗಳು ಬೀಸಾಗಿ ನಿಶ್ಚಿಂತೆಯಿಂದ ತೂಗಾಡುತ್ತಿದ್ದವು. ಶ್ರೀವಾಸ ಪಂಡಿತರು ಕೂಡ ಅದೇ ರಸ್ತೆಯಲ್ಲಿ ಹೋಗುತ್ತಿದ್ದರು. ಭಗವಂತನನ್ನು ನೋಡಿದ ಕೂಡಲೇ ಅವರು ಆನಂದಭರಿತರಾದರು. ಶ್ರೀವಾಸ ಪಂಡಿತರನ್ನು ಕಂಡ ಕೂಡಲೇ ಭಗವಂತನು ಅವರಿಗೆ ತನ್ನ ಗೌರವ ಸಲ್ಲಿಸಿದ.

ಉದಾತ್ತ ವ್ಯಕ್ತಿತ್ವದ ಶ್ರೀವಾಸ ಪಂಡಿತರು, `ದೀರ್ಘಾಯುಷ್ಯ- ವಂತನಾಗಿ ಬಾಳು’ ಎಂದು ಭಗವಂತನಿಗೆ ಆಶೀರ್ವದಿಸಿದರು. ಅನಂತರ ನಸು ನಗುತ್ತ, `ನನ್ನ ಪ್ರೀತಿಯ ಗರ್ವದ ಮೂರ್ತರೂಪವೇ, ಎತ್ತ ಹೊರಟೆ? ದೇವೋತ್ತಮ ಕೃಷ್ಣನನ್ನು ಪೂಜಿಸುವ ಬದಲು ನೀನು ನಿರರ್ಥಕವಾಗಿ ಕಾಲ ಕಳೆಯುತ್ತಿರುವೆ. ನೀನು ಯಾಕೆ ನಿರಂತರವಾಗಿ ಜನರಿಗೆ ಬೋಧಿಸುತ್ತಿರುವೆ? ಕೃಷ್ಣನ ಕುರಿತು ಜ್ಞಾನ ಮತ್ತು ಭಕ್ತಿ ಸೇವೆಯ ವಿಧಾನವನ್ನು ತಮ್ಮಷ್ಟಕ್ಕೆ ತಾವೇ ಅರಿಯಲು ಜನರಿಗೇಕೆ ಬಿಟ್ಟುಕೊಡುವುದಿಲ್ಲ? ಭಕ್ತಿ ಸೇವೆಯೇ ಅಂತಿಮ ಧ್ಯೇಯವಾಗದಿದ್ದರೆ ಶಿಕ್ಷಣ ಮತ್ತು ಜ್ಞಾನದಿಂದ ಏನು ಪ್ರಯೋಜನ? ಇನ್ನು ಮುಂದೆ, ಒಂದು ಕ್ಷಣವೂ ನಿಷ್ಪ್ರಯೋಜಕ ಚಟುವಟಿಕೆಯಲ್ಲಿ ಕಾಲ ಕಳೆೆಯಬೇಡ. ನೀನು ಶಿಕ್ಷಿತನಾಗಿರುವೆ, ಈಗ ನಿನ್ನ ಸಮಯವನ್ನು ಕೃಷ್ಣ ಭಕ್ತಿಗೆ ವಿನಿಯೋಗಿಸು’, ಎಂದು ಹೇಳಿದರು.

ನಿಮಾಯ್ ಉತ್ತರಿಸಿದ, `ಗೌರವಾನ್ವಿತ ಪಂಡಿತರೇ, ನಿಮ್ಮ ಆಶೀರ್ವಾದದಿಂದ ನನಗೂ ಕೃಷ್ಣನಿಗೆ ಭಕ್ತಿ ಸೇವೆ ಸಲ್ಲಿಸುವುದು ಸಾಧ್ಯವಾದೀತು.’

ಶ್ರೀವಾಸರನ್ನು ಗೌರವಪೂರ್ವಕವಾಗಿ ಬೀಳ್ಕೊಟ್ಟು ಭಗವಂತನು ಗಂಗಾ ನದಿಯ ದಡಕ್ಕೆ ತೆರಳಿದ. ಅವನು ತನ್ನ ವಿದ್ಯಾರ್ಥಿಗಳ ಮಧ್ಯೆ ಕುಳಿತಿದ್ದರೆ ಅವನ ಆ ಸೌಂದರ್ಯ, ಪ್ರಜ್ವಲತೆ ವರ್ಣನಾತೀತ. ಗಗನದಲ್ಲಿ ನಕ್ಷತ್ರಗಳ ಮಧ್ಯೆ ಕಂಗೊಳಿಸುತ್ತಿದ್ದ ಚಂದ್ರನಂತೆ ಕಾಣುತ್ತಿದ್ದ ಎಂದು ಯಾರಾದರು ಹೇಳಬಹುದಿತ್ತು. ಆದರೆ ಆ ಹೋಲಿಕೆಯು ಅಸಮರ್ಪಕ. ಏಕೆಂದರೆ ಚಂದ್ರನಲ್ಲೂ ದೋಷಗಳಿದ್ದವಲ್ಲ. ಅವನ ವರ್ಧನೆ ಮತ್ತು ಕಳೆಗುಂದುವಿಕೆಯು ಅವನ ವೈಭವವನ್ನು ಕ್ಷೀಣಿಸುವಂತೆ ಮಾಡುತ್ತದೆ. ಆದರೆ ಭಗವಂತನ ಆಹ್ಲಾದಕರ ಸೌಂದರ್ಯವು ನಿರಂತರ. ಆದುದರಿಂದ ಭಗವಂತನ ಸೌಂದರ್ಯವನ್ನು ವರ್ಣಿಸುವಾಗ ಅಂತಹ ಹೋಲಿಕೆ ಅಸಮರ್ಪಕ.

ವೈಕುಂಠದ ಅತ್ಯಮೂಲ್ಯ ರತ್ನವು ತನ್ನ ಅದ್ಭುತ ಮತ್ತು ಆನಂದಮಯ ಲೀಲೆಗಳನ್ನು ಹೊರಗೆಡಹುತ್ತಾ ಗಂಗಾ ನದಿಯ ತಟದಲ್ಲಿ ತನ್ನ ವಿದ್ಯಾರ್ಥಿ ಸಮೂಹದ ಮಧ್ಯೆ ಆಸೀನನಾಗಿರುತ್ತಿದ್ದ. ಧರ್ಮನಿಷ್ಠರು ಭಗವಂತನನ್ನು ನೋಡ ಬಲ್ಲವರಾಗಿದ್ದರು ಮತ್ತು ನವದ್ವೀಪದವರೆಲ್ಲರೂ ಅವನ ಆಧ್ಯಾತ್ಮಿಕ ಶಕ್ತಿಯನ್ನು ಗ್ರಹಿಸಬಲ್ಲವರಾಗಿದ್ದರು. ಭಗವಂತನನ್ನು ಕಂಡ ಮಾತ್ರದಿಂದಲೇ ಜನರು ಪಡೆದ ಅನುಭವ ಮತ್ತು ಪರಮಾನಂದಕ್ಕೆ ಎಣೆಯೇ ಇರಲಿಲ್ಲ. ದೇವೋತ್ತಮನ ಪರಮಾನಂದ ಅಸ್ತಿತ್ವವನ್ನು ಸ್ಪರ್ಶಿಸಿದ ಹೃದಯ ಉಳ್ಳವರ ಅದೃಷ್ಟವಂತ ಆತ್ಮಗಳನ್ನು ನೋಡುವುದರಿಂದಲೇ ಲೌಕಿಕ ಬಂಧನದಿಂದ ಮುಕ್ತರಾಗುವುದು ಸಾಧ್ಯ.

(ಮುಂದುವರಿಯುವುದು)
Leave a Reply

Your email address will not be published. Required fields are marked *