Search
Wednesday 15 July 2020
  • :
  • :

ಸುವರ್ಣಾವತಾರ ಭಾಗ – 13

ಒಂದು ದಿನ ಶ್ರೀ ಚೈತನ್ಯನು ಅನಾರೋಗ್ಯ ಪೀಡಿತನಂತೆ ಕಂಡುಬಂದನು. ಆದರೆ ಈ ಪ್ರಸಂಗವನ್ನು ಭಕ್ತಿ ಸೇವೆಯ ಭಾವಪರವಶತೆಯನ್ನು ಪ್ರಕಟಪಡಿಸಲು ಬಳಸಿಕೊಂಡ. ಅವನು ಆ ರೋಗದ ಸ್ಥಿತಿಯಲ್ಲಿ ಏನೋ ನಿಗೂಢವಾದದ್ದನ್ನು ಅಸ್ಪಷ್ಟವಾಗಿ ನುಡಿದ. ನೆಲದ ಮೇಲೆ ಹೊರಳಾಡಿ ಕೈಗೆ ಸಿಕ್ಕಿದೆಲ್ಲವನ್ನೂ ಒಡೆಯತೊಡಗಿದ. ಸವಾಲೆಸೆಯುವ ಕುಸ್ತಿ ಪಟುವಿನಂತೆ ಅವನು ಗುಡುಗಿದ. ತನ್ನ ಬಳಿ ಬಂದವರನ್ನೆಲ್ಲಾ ಹೊಡೆದು ತಳ್ಳುತ್ತಿದ್ದ.

ಒಂದು ಕ್ಷಣ ಅವನು ಪಾರ್ಶ್ವವಾಯು ಪೀಡಿತನಂತೆ ಕಂಡರೆ, ಮತ್ತೊಂದು ಕ್ಷಣ ಅವನು ಪ್ರಜ್ಞಾಶೂನ್ಯನಾಗಿ ಬಿದ್ದು ಬಿಡುತ್ತಿದ್ದ. ಈ ರೋಗ ಕಂಡವರು ಭಯ ಭೀತರಾಗುತ್ತಿದ್ದರು. ಅವನು ಪ್ರಾಣವಾಯುವಿನ ಅಸಮತೋಲನದಿಂದ ಅಸ್ವಸ್ಥನಾಗಿದ್ದಾನೆಂಬ ಸುದ್ದಿಯು ಎಲ್ಲೆಡೆ ಹರಡಿತು. ಅವನ ಮಿತ್ರರು ನೆರವು ನೀಡಲು ಓಡೋಡಿ ಬಂದರು. ಬುದ್ಧಿಮಂತ ಖಾನ್, ಮುಕುಂದ ಸಂಜಯ ತಮ್ಮ ಇಡೀ ತಂಡದೊಂದಿಗೆ ನಿಮಾಯ್ ಮನೆಗೆ ಧಾವಿಸಿದರು. ಅವನನ್ನು ಮಾಮೂಲು ಸ್ಥಿತಿಗೆ ತರಲು ಅವರು ಅನೇಕ ಗಿಡಮೂಲಿಕೆಗಳ ತೈಲವನ್ನು ಅವನ ತಲೆಗೆ ಹಚ್ಚಿದರು. ವಾಸ್ತವವಾಗಿ, ನಿಮಾಯ್ ರೋಗಿಯಂತೆ ನಟಿಸುತ್ತಿದ್ದ. ಆದುದರಿಂದ ಅವನಿಗೆ ಆ ಸ್ಥಿತಿಗಾಗಿ ಯಾರೂ ಚಿಕಿತ್ಸೆ ನೀಡುವುದು ಸಾಧ್ಯವಿರಲಿಲ್ಲ. ಆದರೂ ಅವನ ಇಡೀ ದೇಹ ಸತತವಾಗಿ ಅದುರುತ್ತಿತ್ತು ಮತ್ತು ಅವನು ಉಸಿರು ಬಿಡುವಾಗ ಶಬ್ದ ಮಾಡುತ್ತಿದ್ದ ಹಾಗೂ ಗುಡುಗುತ್ತಿದ್ದ. ಇದು ಎಲ್ಲರನ್ನೂ ಭಯಗೊಳಿಸುತ್ತಿತ್ತು.

`ನಾನು ಇಡೀ ವಿಶ್ವದ ಪ್ರಭು. ನಾನು ಜಗತ್ತಿನ ನಿರ್ವಾಹಕ ಮತ್ತು ಎತ್ತಿ ಹಿಡಿಯುವವ. ನನ್ನ ಹೆಸರು ವಿಶ್ವಂಭರ. ನಾನು ಎಲ್ಲ ಆಧ್ಯಾತ್ಮಿಕ ಗ್ರಹಗಳ ಭಗವಂತನಾದ ದೇವೋತ್ತಮ ಪರಮ ಪುರುಷ. ಆದರೆ ನಿಮಗೆ ಯಾರಿಗೂ ನಾನು ಯಾರೆಂದು ತಿಳಿಯದು’ ಎಂದು ನಿಮಾಯ್ ಹೇಳಿದ. ತನ್ನ ಈ ಹುಚ್ಚಾಟದಲ್ಲಿ ಅವನು ಯಾರನ್ನಾದರೂ ಹಿಡಿಯಲು ಓಡುತ್ತಿದ್ದ. ತನ್ನ ಈ ರೋಗಾವಸ್ಥೆ ಸಮಯದಲ್ಲಿ ಅವನು ತನ್ನ ನಿಜವಾದ ಪರಿಚಯವನ್ನು  ಹೊರಗೆಡಹಿದರೂ ಭಗವಂತನ ಆಂತರಿಕ ಶಕ್ತಿಯ ಕಾರಣ ಯಾರಿಗೂ ಅವನನ್ನು ಗುರುತು ಹಿಡಿಯಲಾಗಲಿಲ್ಲ. `ಯಾವುದೋ ರಾಕ್ಷಸ ಅವನನ್ನು ಹಿಡಿದುಕೊಂಡಿರಬೇಕು’ ಎಂದು ಯಾರೋ ಪ್ರತಿಕ್ರಿಯಿಸಿದರು. ಮತ್ತೊಬ್ಬರು ತತ್‌ಕ್ಷಣ ಪ್ರಶ್ನಿಸಿದರು, `ದೆವ್ವ ಈ ರೀತಿ ವರ್ತಿಸುವುದೇ?’ `ಅವನು ಸತತ ಮಾತನಾಡುತ್ತಿದ್ದಾನೆ. ಬಹುಶಃ ಅವನಿಗೆ ಯಾವುದೋ ರೀತಿಯ ರೋಗ ಇರಬಹುದು’ ಎಂದು ಮತ್ತೊಬ್ಬರು ನುಡಿದರು.

ಈ ರೀತಿಯಲ್ಲಿ ಅವರೆಲ್ಲ ತಮಗನಿಸಿದ ಅಭಿಪ್ರಾಯ ನೀಡುತ್ತಿದ್ದರು. ಆದರೆ  ಅವನ ಆಂತರಿಕ ಮಾಯಾ ಶಕ್ತಿ, ದೇವೋತ್ತಮ ಪರಮ ಪುರುಷ ಶ್ರೀ ವಿಷ್ಣುವಿನ ಆಂತರಿಕ ಶಕ್ತಿಯಿಂದಾಗಿ ಯಾರಿಗೂ ಅವನನ್ನು ಕುರಿತ ಸತ್ಯ ಅರ್ಥವಾಗಲಿಲ್ಲ. ಅವನ ದೇಹ ಮತ್ತು ಶಿರಕ್ಕೆ ಅನೇಕ ತೈಲಗಳನ್ನು ಸವರಿ ಅವನ ರೋಗ ವಾಸಿಮಾಡಲು ಜನರು ಪ್ರಯತ್ನಿಸುತ್ತಿದ್ದರು. ದೇಹದಿಂದ ತೈಲವು ತೊಟ್ಟಿಕ್ಕುತ್ತಿದ್ದರೂ ಅವನು ನಗುತ್ತಲೇ ಇರುತ್ತಿದ್ದ. ಅವನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದ್ದ ಅಸ್ವಸ್ಥತೆಯ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳಲೋ ಎಂಬಂತೆ ಈ ನಗು. ಕೆಲ ಸಮಯದ ಅನಂತರ ನಿಮಾಯ್ ತನ್ನಷ್ಟಕ್ಕೆ ತಾನೆ ಮಾಮೂಲು ಸ್ಥಿತಿಗೆ ಮರಳಿದ. ದೇವೋತ್ತಮ ಪರಮ ಪುರುಷನ ಅದ್ಭುತ ಲೀಲೆಗಳು ಅವು. ಆಗ ಎಲ್ಲರೂ ಸಮಾಧಾನವಾಗಿ ಶ್ರೀಹರಿ ನಾಮ ಪಠಿಸಿದರು. ಅವರಿಗೆಷ್ಟು ನೆಮ್ಮದಿಯಾಯಿತೆಂದರೆ, ಅವರು ಪರಸ್ಪರ ಉಡುಗೊರೆ ಹಂಚಿಕೊಂಡರು. ಅವರೆಲ್ಲ ಭಗವಂತನಿಗೆ `ದೀರ್ಘಾಯುಷ್ಯನಾಗು’ ಎಂದು ಹರಸಿದರು. ಅವನು ಸ್ವತಃ ಕೃಪೆಯಿಂದ ಹೊರಗೆಡಹದಿದ್ದರೆ ವೈಕುಂಠದ ಪರಮ ಪುರುಷನ ಈ ಅಲೌಕಿಕ ಲೀಲೆಗಳನ್ನು ಯಾರಿಗೆ ಗ್ರಹಿಸಿಕೊಳ್ಳುವುದು ಸಾಧ್ಯ?

ನಿಮಾಯ್‌ಗೆ ಭಕ್ತರಿಂದ ಸೇವೆ

ಒಂದು ದಿನ ನಿಮಾಯ್ ನೇಕಾರನ ಮನೆಗೆ ಹೋದ. ನೇಕಾರನು ತನ್ನ ಅತಿಥಿಯನ್ನು ಗೌರವದಿಂದ ಬರಮಾಡಿಕೊಂಡ. `ಒಳ್ಳೆಯ ಬಟ್ಟೆಯನ್ನು ತೆಗೆದುಕೊಂಡು ಬಾ’ ಎಂದು ನಿಮಾಯ್ ಹೇಳಿದ ಕೂಡಲೇ ನೇಕಾರನು ಅತ್ಯುತ್ತಮ ಬಟ್ಟೆಯನ್ನು ನೇಯ್ದು ಕೊಟ್ಟ. `ಇದಕ್ಕೆ ಎಷ್ಟು ಹಣ ತೆಗೆದುಕೊಳ್ಳುವೆ’ ಎಂದು ನಿಮಾಯ್ ಕೇಳಿದ. `ನಿಮಗೆ ಅನಿಸಿದಷ್ಟು’ ಎಂದ, ನೇಕಾರ. ನಿಮಾಯ್ ದರದ ಅಂದಾಜು ಮಾಡಿ, `ಈ ದಿನ ನನ್ನ ಬಳಿ ನಾಣ್ಯಗಳಿಲ್ಲ’ ಎಂದ. ನೇಕಾರನೆಂದ, `ನನ್ನ ಗೌರವಾನ್ವಿತ ಬ್ರಾಹ್ಮಣನೇ, ನೀನು ಹತ್ತು-ಹದಿನೈದು ದಿನಗಳ ಅನಂತರ ನೀಡಬಹುದು. ಈ ಬಟ್ಟೆಯನ್ನು ಒಯ್ದು ಧರಿಸಿಕೋ. ನಿನಗೆ ತೃಪ್ತಿಯಾದರೆ, ನೀನು ಅನಂತರ ಹಣ ಕೊಡುವೆಯಂತೆ.’ ಭಗವಂತನು ನೇಕಾರನತ್ತ ಕೃಪೆಯ ನೋಟ ಹರಿಸಿ ಅಲ್ಲಿಂದ ಹೊರಟ.

ಗೋಪಾಲಕನ ಮನೆಯಲ್ಲಿ ನಿಮಾಯ್ ತನ್ನ ಬ್ರಾಹ್ಮಣ ಸ್ಥಾನದ ಲಾಭ ಪಡೆದುಕೊಂಡ. `ನನಗೆ ಹಾಲು ಮತ್ತು ಮೊಸರು ತಾ. ಈ ದಿನ ನಾನು ನಿನ್ನಿಂದ ಸ್ವಲ್ಪ ದಾನ ಸ್ವೀಕರಿಸುವೆ’ ಎಂದ. ಅವನ ಅದ್ಭುತ ಸೌಂದರ್ಯದಿಂದಾಗಿ ನಿಮಾಯ್ ಹಾಲು ಮಾರುವವರಿಗೆ ಮನ್ಮಥನಂತೆ ಕಂಡ. ಅವನು ಸುಖಾಸೀನನಾಗುವಂತೆ ಮಾಡಿದ ಅವರು ಅವನೊಂದಿಗೆ ತಮಾಷೆಯಾಗಿ ಹರಟೆ ಕೊಚ್ಚಿದರು. ಪ್ರೀತಿಯಿಂದ ಅವನನ್ನು `ಮಾವ’ ಎಂದರು. `ಮಾವ, ನಮ್ಮ ಮನೆಗೆ ಬಂದು ಅನ್ನ ತೆಗೆದುಕೋ’ ಎಂದು ಒಬ್ಬ ನಿಮಾಯ್ ಕೈ ಹಿಡಿದೆಳೆದು ಕರೆದ. `ಇಲ್ಲ, ನೀನು ನಮ್ಮ ಮನೆಗೆ ಬಂದು ಅನ್ನ ಸ್ವೀಕರಿಸಬೇಕು. ನೀನು ಈ ಹಿಂದೆ ನನ್ನ ಮನೆಯಲ್ಲಿ ಸ್ವೀಕರಿಸಿದ್ದು ನೆನಪಿಲ್ಲವೇ?’ ಎಂದು ಮತ್ತೊಬ್ಬ ಹಾಸ್ಯ ಚಟಾಕಿ ಹಾರಿಸಿದ.

ವಾಸ್ತವವಾಗಿ ನಿಮಾಯ್ ತನ್ನ ಹಿಂದಿನ ಶ್ರೀಕೃಷ್ಣ ಅವತಾರದ ಸಂದರ್ಭದಲ್ಲಿ ಬಿಟ್ಟರೆ ಬೇರೆ ಎಂದೂ ಅವರ ಮನೆಗಳಿಗೆ ಭೇಟಿ ನೀಡಿರಲಿಲ್ಲ. ಹಾಲು ಮಾರುವವರಿಗೆ ತಮ್ಮ ತಮಾಷೆಯ ಆಳ ಗೊತ್ತಿರಲಿಲ್ಲ ಮತ್ತು ನಿಮಾಯ್ ಅದನ್ನು ಹೊರಗೆಡವಲೂ ಇಲ್ಲ. ಹಾಲು ಮಾರುವವನು (ಗೌಳಿಗ) ಹಾಲು, ಮೊಸರು, ಬೆಣ್ಣೆ, ಕೆನೆ ಎಲ್ಲವನ್ನೂ ಭಗವಂತನಿಗೆ ಅರ್ಪಿಸಿದ. ಗೌಳಿಗನ ಆದರಾತಿಥ್ಯದಿಂದ ಸಂತೃಪ್ತನಾದ ಭಗವಂತನು ಅವನನ್ನು ಆಶೀರ್ವದಿಸಿ ಅಲ್ಲಿಂದ ಸುವಾಸನೆ ವಸ್ತು ಮಾಡುವವರ ಮನೆಗೆ ತೆರಳಿದ.

ಸುಗಂಧ ದ್ರವ್ಯ ತಯಾರಕನು ಭಗವಂತನನ್ನು ಗೌರವದಿಂದ ಸ್ವಾಗತಿಸಿ ಪಾದಗಳಿಗೆರಗಿದ.  ನಿಮಾಯ್ ನುಡಿದ, `ಪ್ರೀತಿಯ ಸೋದರನೇ, ಒಳ್ಳೆಯ ಸುಗಂಧ ದ್ರವ್ಯ ತೆಗೆದುಕೊಂಡು ಬಾ.’ ಅವನು ತತ್‌ಕ್ಷಣ ಒಳಗಿನಿಂದ ಅತ್ಯುತ್ತಮ ಸುಗಂಧ ದ್ರವ್ಯ ತಂದ. `ಬೆಲೆ ಎಷ್ಟು?’ ಎಂದು ನಿಮಾಯ್ ಕೇಳಿದ. ಸುಗಂಧ ದ್ರವ್ಯ ವರ್ತಕನೆಂದ, `ನಿನಗೆ ಎಲ್ಲ ಗೊತ್ತು. ನಿನ್ನಿಂದ ಹಣ ಕೇಳುವುದು ಯುಕ್ತವೇ? ಇದನ್ನು ತೆಗೆದುಕೊಂಡು ಹೋಗಿ ಕೆಲವು ದಿನ ಬಳಸು. ನಿನಗಿದು ಸೂಕ್ತವೆನಿಸಿದರೆ, ನಿನಗನಿಸಿದಷ್ಟನ್ನು ನೀನು ನನಗೆ ನೀಡಬಹುದು.’ ಅವನು ನಿಮಾಯ್ ದೇಹದ ಮೇಲೆಲ್ಲಾ ಸುವಾಸಿತ ತೈಲವನ್ನು ಪೂಸಿದ. ಈ ಸೇವೆಯಿಂದ ಅವನ ಆನಂದಕ್ಕೆ ಪಾರವೇ ಇರಲಿಲ್ಲ. ಸಾವಿರಾರು ಜೀವಿಗಳನ್ನು ಆಕರ್ಷಿಸುವ ಭಗವಂತನ ದೇಹಕ್ಕೆ ಸೇವೆ ಸಲ್ಲಿಸುವುದರಿಂದ ಯಾರು ತಾನೆ ಪುನೀತರಾಗುವುದಿಲ್ಲ? ನಿಮಾಯ್ ಅವನನ್ನು ಆಶೀರ್ವದಿಸಿ ಅಲ್ಲಿಂದ ಹೂವು ಕಟ್ಟಿ ಮಾರುವವನ ಮನೆಗೆ ತೆರಳಿದ.

ಅತ್ಯಂತ ಮೋಹಕ ವ್ಯಕ್ತಿಯನ್ನು ಕಂಡು ಹೂವಾಡಿಗನು ಚಕಿತಗೊಂಡ. ಭಗವಂತನಿಗೆ ಗೌರವ ಸಲ್ಲಿಸಿ ಪ್ರೀತಿಯಿಂದ ಆಸನ ತೋರಿಸಿದ. ನಿಮಾಯ್ ನುಡಿದ, `ನನಗೆ ಸುಂದರವಾದ ಹಾರ ಬೇಕು. ಆದರೆ ನನ್ನ ಬಳಿ ಈಗ ಹಣ ಇಲ್ಲ.’ ನಿಮಾಯ್‌ನಲ್ಲಿದ್ದ ದೈವತ್ವವನ್ನು ಕಂಡ ಹೂವಾಡಿಗನು, `ನೀನು ಏನೂ ಕೊಡಬೇಕಾಗಿಲ್ಲ’ ಎಂದ. ಅನಂತರ ಹೂವಾಡಿಗನು ಸುಂದರವಾದ ಪುಷ್ಪಹಾರವನ್ನು ತಂದು ಭಗವಂತನ ಕೊರಳಿಗೆ ಹಾಕಿದ. ಇದರಿಂದ ಸಂತೃಪ್ತಗೊಂಡ ನಿಮಾಯ್, ತನ್ನೊಂದಿಗೆ ಬಂದಿದ್ದ ಶಿಷ್ಯರು ಮತ್ತು ವಿದ್ಯಾರ್ಥಿಗಳೊಂದಿಗೆ ನಗೆ ಸೂಸಿದ. ಭಗವಂತನು ಹೂವಾಡಿಗನನ್ನು ಹರಸಿ ಅಲ್ಲಿಂದ ಬೀಡಾ (ಎಲೆ ಅಡಿಕೆ) ಮಾಡುವವನಲ್ಲಿಗೆ ತೆರಳಿದ. ಬೀಡಾ ಮಾರಾಟಗಾರನಿಗೆ ಮನ್ಮಥನೇ ಬಂದನೆನಿಸಿತು. ಭಗವಂತನ ಚರಣ ಕಮಲಗಳಿಗೆರಗಿದ ಅವನು ಆಸನ ತೋರಿದ. `ನೀನು ಈ ದೀನನ ಮನೆಗೆ ಬಂದದ್ದು ನನ್ನ ಭಾಗ್ಯ.’ ಎಂದು ವಿನಯದಿಂದ ನುಡಿದ. ಅವನು ಸ್ವಪ್ರೇರಿತನಾಗಿ ತಾಂಬೂಲ ತಯಾರಿಸಿ ನಿಮಾಯ್‌ಗೆ ನೀಡಿದ. `ಹಣ ಕೊಡದಿದ್ದರೂ ನೀನು ಈ ತಾಂಬೂಲ ಏಕೆ ನೀಡಿದೆ’ ಎಂದು ಅವನು ನಗುತ್ತಾ ಕೇಳಿದ. `ನಾನು ನನ್ನ ಹೃದಯದ ಕರೆಗೆ ಓಗೊಟ್ಟು ಮಾಡಿದೆ’ ಎಂದ ಬೀಡಾ ತಯಾರಕ. ಆ ವರ್ತಕನ ಸರಳ ಪ್ರಾಮಾಣಿಕತೆಯಿಂದ ಆನಂದಿತನಾದ ಭಗವಂತ ಆ ತಾಂಬೂಲವನ್ನು ಸವಿದ. ವರ್ತಕನು ಅನಂತರ ಎಲೆ ಮತ್ತು ಕರ್ಪೂರ ಮತ್ತಿತರ ಅಮೂಲ್ಯ ರುಚಿಕರ ಪದಾರ್ಥಗಳಿದ್ದ ಪೊಟ್ಟಣವನ್ನು ನಿಮಾಯ್‌ಗೆ ಗೌರವದಿಂದ ಸಮರ್ಪಿಸಿದ. ಇದಕ್ಕೆ ಬದಲಾಗಿ ಅವನಿಗೆ ಭಗವಂತನ ಕೃಪೆ ಲಭ್ಯವಾಯಿತು.

ಈ ರೀತಿ ನಿಮಾಯ್ ನವದ್ವೀಪದ ನಿವಾಸಿಗಳನ್ನು ಭೇಟಿ ಮಾಡುವುದನ್ನು ಮುಂದುವರಿಸಿದ. ಭಗವಂತನು ಆವಿರ್ಭಾವಿಸುವ ಮೊದಲೇ, ಮಥುರಾದ ಪ್ರತಿಕೃತಿಯಂತಿದ್ದ ನವದ್ವೀಪವು ಸಂಪದ್ಭರಿತ, ವೈಭವದಿಂದ ಕೂಡಿತ್ತು. ಲಕ್ಷಾಂತರ ನಿವಾಸಿಗಳು ನಗರದಲ್ಲಿ ಸದಾ ಚಟುವಟಿಕೆಯಿಂದ ಇರುತ್ತಿದ್ದರು. ಭಗವಂತನ ಅಪೇಕ್ಷೆಯಂತೆ ಇದೆಲ್ಲಾ ವ್ಯವಸ್ಥೆಯಾಗಿತ್ತು. ಮತ್ತು ದೇವೋತ್ತಮ ಪರಮ ಪುರುಷನ ಆವಿರ್ಭಾವವನ್ನು ಸ್ವಾಗತಿಸಲು ನವದ್ವೀಪವನ್ನು ಸಿದ್ಧಪಡಿಸಲಾಗಿತ್ತು. ಮಥುರಾದಲ್ಲಿ ಶ್ರೀಕೃಷ್ಣನು ಅಲ್ಲಿನ ನಿವಾಸಿಗಳನ್ನು ಭೇಟಿ ಮಾಡುತ್ತಿದ್ದಂತೆ ಇಲ್ಲಿ, ಈ ಆವಿರ್ಭಾವದಲ್ಲಿ, ಶ್ರೀ ಚೈತನ್ಯ ಅದೇ ರೀತಿಯ ಅದ್ಭುತ ಲೀಲೆಗಳನ್ನು ಪ್ರದರ್ಶಿಸಿದ.

ಅನಂತರ ನಿಮಾಯ್ ಶಂಖ ಮಾರಾಟಗಾರನಲ್ಲಿಗೆ ಹೋದ. ವರ್ತಕನು ತುಂಬು ಗೌರವದಿಂದ ಭಗವಂತನನ್ನು ಬರಮಾಡಿಕೊಂಡು ಅವನ ಚರಣ ಕಮಲಗಳಿಗೆರಗಿದ. `ಪ್ರೀತಿಯ ಸಹೋದರನೆ, ದಯೆಯಿಟ್ಟು ಸುಂದರವಾದ ಶಂಖವನ್ನು ತೆಗೆದುಕೊಂಡು ಬಾ’ ಎಂದ ಭಗವಂತನ ಮಾತಿನಿಂದ ವರ್ತಕನಿಗೆ ಪರಮಾನಂದವಾಯಿತು. ಅವನು ಸುಂದರವಾದ ಶಂಖ ತಂದು ಗೌರವದಿಂದ ಅರ್ಪಿಸಿದ. `ನನ್ನ ಬಳಿ ಹಣ ಇಲ್ಲ. ಇದನ್ನು ಹೇಗೆ ಒಯ್ಯಲಿ?’ ಎಂದ ಭಗವಂತನ ಮಾತಿಗೆ, ವರ್ತಕನು, `ಗೌರವಾನ್ವಿತ ಬ್ರಾಹ್ಮಣನೇ, ಈ ಶಂಖವನ್ನು ಮನೆಗೆ ತೆಗೆದುಕೊಂಡು ಹೋಗು. ನೀನು ಅನಂತರ ಹಣ ಕೊಡಬಹುದು ಅಥವಾ ಕೊಡದಿದ್ದರೂ ಚಿಂತೆ ಇಲ್ಲ’, ಎಂದನು. ವರ್ತಕನ ಪ್ರೀತಿಯಿಂದ ತೃಪ್ತನಾದ ಭಗವಂತನು ಅವನನ್ನು ಆಶೀರ್ವದಿಸಿದ.

ಜ್ಯೋತಿಷಿಯ ದೃಷ್ಟಿ

ಈ ರೀತಿ ಭಗವಂತನು ನವದ್ವೀಪದ ಅನೇಕ ಮನೆಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಕೃಪೆ ತೋರಿದ. ಅದೇ ಅದೃಷ್ಟದಿಂದ ನವದ್ವೀಪದ ನಿವಾಸಿಗಳು ಇಂದಿಗೂ ಶ್ರೀ ಗೌರಚಂದ್ರ ಮತ್ತು ಶ್ರೀ ನಿತ್ಯಾನಂದರ ಚರಣ ಕಮಲಗಳ ಆಶ್ರಯ ಪಡೆಯುತ್ತಿದ್ದಾರೆ. ಸರ್ವ ಸ್ವತಂತ್ರನಾದ ದೇವೋತ್ತಮ ಪರಮ ಪುರುಷ ಶ್ರೀ ಗೌರಚಂದ್ರನು ಅನಂತರ ಜ್ಯೋತಿಷಿಯೊಬ್ಬರ ಮನೆಗೆ ಹೋದ. ಆಧ್ಯಾತ್ಮಿಕ ಕಾಂತಿಯಿಂದ ಪ್ರಜ್ವಲಿಸುತ್ತಿದ್ದ ದೈವಿಕ ವ್ಯಕ್ತಿಯನ್ನು  ಆ ಜ್ಯೋತಿಷಿ ಕಂಡ. ಅವನು ವಿನಮ್ರನಾಗಿ ನಿಮಾಯ್‌ಗೆ ಗೌರವ ಸಲ್ಲಿಸಿ ಆಸನ ತೋರಿದ.

`ನೀನು ಒಳ್ಳೆಯ ಜ್ಯೋತಿಷಿ ಎಂದು ಕೇಳಿರುವೆ. ನನ್ನ ಹಿಂದಿನ ಜನ್ಮದಲ್ಲಿ ನಾನು ಯಾರು, ತಿಳಿಸು’, ಎಂದು ನಿಮಾಯ್ ಅವರನ್ನು ಕೇಳಿದ.  ಜ್ಯೋತಿಷಿಯು ತನ್ನ ಗೋಪಾಲ-ಮಂತ್ರವನ್ನು ಪಠಿಸಿ ಧ್ಯಾನಾಸಕ್ತನಾದ. ಅವನು ದಟ್ಟ ಮೋಡದ ವರ್ಣದ, ಚತುರ್ಭುಜ ಸ್ವರೂಪದ ಶ್ರೀಕೃಷ್ಣನನ್ನು ನೋಡಿದ. ಭಗವಂತನು ಶಂಖ, ಸುದರ್ಶನ ಚಕ್ರ, ಗದೆ ಮತ್ತು ಕಮಲ ಪುಷ್ಪವನ್ನು ಹಿಡಿದಿದ್ದ. ಕಂಠದಲ್ಲಿ ಕೌಸ್ತುಭ ಹಾರ ಧರಿಸಿದ್ದ ಭಗವಂತನು ತೇಜಸ್ಸಿನಲ್ಲಿ ಮಿಂದಿರುವುದನ್ನು ಅವನು ಕಂಡ. ಅವನ ಎದೆಯ ಮೇಲೆ ಶ್ರೀವತ್ಸ ಗುರುತು.

ಅವನು ಅನಂತರ, ವಸುದೇವ ಮತ್ತು ನವಜಾತ ಶಿಶುವನ್ನು ಎತ್ತಿಕೊಂಡಿದ್ದ ದೇವಕಿಯರಿದ್ದ ಕಂಸನ ಸೆರೆಮನೆ ಕಂಡ. ಅದರ ಅನಂತರ ವಸುದೇವನು ಮಗುವನ್ನು ಸುರಕ್ಷಿತ ತಾಣ ಗೋಕುಲಕ್ಕೆ ಒಯ್ದ.

ಜ್ಯೋತಿಷಿಯು ಪುನಃ ಭಗವಂತನನ್ನು ಕಂಡ. ಈ ಬಾರಿ ಕಾಂತಿಯುಕ್ತ, ಎರಡು ಬಾಹುಗಳ, ವಸ್ತ್ರಧರಿಸದ ಚಿಕ್ಕ ಬಾಲಕನ ರೂಪದಲ್ಲಿ ಆ ದೇವರನ್ನು ಕಂಡ. ಅವನ ಸೊಂಟವನ್ನು ಅಲಂಕರಿಸಿದ್ದ ಆಭರಣಗಳು ಮಧುರವಾದ ಕಿಣಿ ಕಿಣಿ ಶಬ್ದ ಮಾಡುತ್ತಿದ್ದವು. ಅವನ ಕೈಗಳ ತುಂಬ ಬೆಣ್ಣೆ. ಜ್ಯೋತಿಷಿಯು ತಾನು ಪ್ರತಿದಿನ ಧ್ಯಾನಿಸುವ ಶ್ರೀಕೃಷ್ಣನ ರೂಪ ಗೋಪಾಲನ ಮೈಮೇಲಿನ ದೈವಿಕ ಚಿಹ್ನೆಗಳನ್ನು ಶ್ರೀ ಚೈತನ್ಯರ ಮೇಲೆ ಕೂಡ ಕಂಡ. ಮತ್ತೊಮ್ಮೆ ಜ್ಯೋತಿಷಿಯ ನೋಟ ಬದಲಾಯಿತು. ಅವನು ಕೊಳಲು ನುಡಿಸುತ್ತಿದ್ದ ಶ್ರೀ ಶ್ಯಾಮಾನಂದ, ಕೃಷ್ಣನನ್ನು ಕಂಡ. ಅವನ ಸುತ್ತ ಗೋಪಿಯರು ವೈವಿಧ್ಯಮಯವಾದ ವಾದ್ಯಗಳನ್ನು ನುಡಿಸುತ್ತಿದ್ದರು.

ಅಚ್ಚರಿಗೊಂಡ ಜ್ಯೋತಿಷಿಯು ನಿಮಾಯ್‌ನ ಸುಂದರ ರೂಪ ನೋಡಲು ತನ್ನ ಕಣ್ಣು ತೆರೆದ. ಅವನು ಪುನಃ ನಿಮಾಯ್‌ನನ್ನು ಧ್ಯಾನಿಸತೊಡಗಿದ. ಅವನು, ಅನಂತರ, ತಾನು ಪೂಜಿಸುವ ಶ್ರೀ ಗೋಪಾಲನಿಗೆ ಗಟ್ಟಿಯಾಗಿ ಪ್ರಾರ್ಥನೆ ಸಲ್ಲಿಸಿದ: `ಓ, ಗೋಪಾಲ, ಈ ಯುವ ಬ್ರಾಹ್ಮಣನ ನಿಜವಾದ ಗುರುತನ್ನು ತಿಳಿಸು.’

ಅನಂತರ ಜ್ಯೋತಿಷಿಯು ದೂರ್ವೆ ಹುಲ್ಲಿನ ಬಣ್ಣದ, ಕೈಯಲ್ಲಿ ಬಿಲ್ಲು ಹಿಡಿದಿದ್ದ ಮತ್ತು ಸಿಂಹಾಸನದ ಮೇಲೆ ಆಸೀನನಾಗಿದ್ದ ದೇವೋತ್ತಮನನ್ನು ತನ್ನ ಧ್ಯಾನದಲ್ಲಿ ಕಂಡ. ಭೂಮಿಯನ್ನು ತನ್ನ ಕೋರೆಹಲ್ಲಿನ ಮಧ್ಯೆ ಸಮತೋಲನ ಮಾಡಿಕೊಳ್ಳುತ್ತ ಸಾಗರದ ಆಳದಿಂದ ಅದ್ಭುತವಾಗಿ ಮೇಲೇಳುತ್ತಿದ್ದ ವರಾಹ ರೂಪದ ಭಗವಂತನನ್ನು ಜ್ಯೋತಿಷಿ ನೋಡಿದ. ತನ್ನ ಪರಿಶುದ್ಧ ಭಕ್ತರನ್ನು ರಕ್ಷಿಸಲು ಬಂದ ಭಯಾನಕ ರೂಪದ ಅರ್ಧ ಮಾನವ-ಅರ್ಧ ಸಿಂಹಾವತಾರದ ದೇವೋತ್ತಮನನ್ನು ಅವನು ಕಂಡ. ಅನಂತರ ಬಲಿ ಮಹಾರಾಜನ ಯಾಗ ಪ್ರದೇಶದಲ್ಲಿ ವಾಮನ ಪ್ರತ್ಯಕ್ಷನಾದ, ಅನಂತರ ಸರ್ವನಾಶದ ಜಲದಿಂದ ವೈದಿಕ ಸಾಹಿತ್ಯವನ್ನು ರಕ್ಷಿಸಲು ಬಂದ ಮತ್ಸ್ಯವನ್ನು ಕಂಡ. ಅನಂತರ ಧರ್ಮನಿಷ್ಠ ಜ್ಯೋತಿಷಿಯು ತನ್ನ ಧ್ಯಾನದಲ್ಲಿ ದೈವಿಕ ಹಲಾಯುಧವನ್ನು ಹಿಡಿದಿದ್ದ ಶ್ರೀ ಬಲರಾಮನನ್ನು ನೋಡಿದ. ಅದರ ಅನಂತರ ಅವನು ಸುಭದ್ರಾ ಸಮೇತ ಜಗನ್ನಾಥ ಮತ್ತು ಬಲರಾಮರನ್ನು ಕಂಡ. ಭಗವಂತನ ಎಲ್ಲ ಅವತಾರಗಳನ್ನೂ ಜ್ಯೋತಿಷಿಗೆ ನೋಡಲು ಸಾಧ್ಯವಾಯಿತು. ಆದರೆ, ಭಗವಂತನ ಮಾಯಾ ಶಕ್ತಿಯಿಂದಾಗಿ ಅವನಿಗೆ ತನ್ನ ಆ ನೋಟದ ಆಳವಾದ ಅರ್ಥವನ್ನು ಅರಿಯಲಾಗಲಿಲ್ಲ.

ವಿಸ್ಮಿತನಾದ ಜ್ಯೋತಿಷಿಯು ತನಗೆ ತನ್ನಲ್ಲೇ ಯೋಚಿಸಿಕೊಂಡ, `ಬಹುಶಃ ಈ ಬ್ರಾಹ್ಮಣನು ಅವತಾರಗಳಿಗೆ ಮಂತ್ರ ಪಠಿಸುವುದರಲ್ಲಿ ತಜ್ಞನಿರಬಹುದು ಅಥವಾ ತನಗೆ ತಾನೆ ವಿನೋದ ಮಾಡಿಕೊಳ್ಳುತ್ತ ಮತ್ತು ನನ್ನನ್ನು ಪರೀಕ್ಷಿಸಲು ಬ್ರಾಹ್ಮಣ ರೂಪದಲ್ಲಿ ಬಂದ ದೇವತೆ ಇರಬಹುದು. ಅಥವಾ ನನ್ನನ್ನು ಕೀಳಾಗಿಸಲು ಬಂದ ಜ್ಯೋತಿಷಿ ಮತ್ತು ಅತೀಂದ್ರಿಯ ಪ್ರಜ್ಞೆ ಉಳ್ಳವನಾಗಿರಬಹುದು.’ ನಿಮಾಯ್ ಅವನ ಆಲೋಚನೆಗಳಿಗೆ ತಡೆ ಹಾಕಿದ, `ಏನು ನೋಡಿದಿರಿ? ನಾನು ಯಾರೆಂದು ಹೇಳಿ. ಎಲ್ಲವನ್ನೂ ವಿವರವಾಗಿ ತಿಳಿಸಿ’ ಎಂದ.

ಗೊಂದಲದಲ್ಲಿದ್ದ ಜ್ಯೋತಿಷಿಯು, `ದಯೆಯಿಟ್ಟು ಈಗ ಹೋಗು. ನಾನು ನನ್ನ ಮಂತ್ರಗಳನ್ನು ಸರಿಯಾಗಿ ಪಠಿಸಿದ ಮೇಲೆ, ಮಧ್ಯಾಹ್ನದನಂತರ ನಿನಗೆ ಎಲ್ಲವನ್ನೂ ಹೇಳುವೆ’ ಎಂದ. ಭಗವಂತನು ಅವನಿಗೆ ಶುಭ ಕೋರಿ ತನ್ನ ಪ್ರಿಯ ಮಿತ್ರ ಶ್ರೀಧರನ ಮನೆಗೆ ಹೋದ.

(ಮುಂದುವರಿಯವುದು)
Leave a Reply

Your email address will not be published. Required fields are marked *