Search
Wednesday 15 July 2020
  • :
  • :

ಸುವರ್ಣಾವತಾರ ಭಾಗ – 12

ಒಂದು ದಿನ, ಶ್ರೀ ಗೌರಾಂಗ ತನ್ನ ವಿದ್ಯಾರ್ಥಿಗಳಿಗೆ ಬೋಧಿಸಿದ ಅನಂತರ ಮನೆಗೆ ವಾಪಸಾಗುತ್ತಿದ್ದಾಗ, ದೈವ ಸಂಕಲ್ಪದಂತೆ ಈಶ್ವರಚಂದ್ರ ಪುರಿ ಅವರನ್ನು ಕಂಡನು. ತತ್‌ಕ್ಷಣ ತನ್ನ ಸೇವಕ ಮತ್ತು ಭಕ್ತನನ್ನು ಗುರುತಿಸಿದ ಭಗವಂತನು, ಅವರಿಗೆ ಅತ್ಯಂತ ಗೌರವದಿಂದ ತನ್ನ ಪ್ರಣಾಮ ಸಲ್ಲಿಸಿದ. ಶ್ರೀ ವಿಶ್ವಂಭರನ ಸೌಂದರ್ಯ ವರ್ಣನಾತೀತ. ಎಲ್ಲ ಸದ್ಗುಣಗಳ ಸಾಗರವಾದ ಅವನು ಎಲ್ಲ ರೀತಿಯಿಂದಲೂ ಪರಿಪೂರ್ಣ ವ್ಯಕ್ತಿ.

ಈಶ್ವರಚಂದ್ರ ಪುರಿ ತತ್‌ಕ್ಷಣ ನಿಮಾಯ್‌ನತ್ತ ನೋಟ ಹರಿಸಿದರು. ನಿಮಾಯ್ ಗಂಭೀರ ಮತ್ತು ಅಲೌಕಿಕ ವ್ಯಕ್ತಿ ಎಂದು ಅವರಿಗೆ ಕೂಡಲೇ ಅರ್ಥವಾಯಿತು. “ವಿದ್ವಾಂಸನಾದ ಬ್ರಾಹ್ಮಣನೇ, ನಿನ್ನ ಹೆಸರೇನು?” ಎಂದು ಪುರಿ ಕೇಳಿದರು. “ನಿನ್ನ ಬಳಿ ಇರುವುದು ಅದ್ಯಾವ ಪುಸ್ತಕಗಳು? ನೀನು ಏನನ್ನು ಬೋಧಿಸುವೆ? ನಿನ್ನ ಮನೆ ಎಲ್ಲಿದೆ?” – ಈಶ್ವರಚಂದ್ರರು ಒಂದೇ ಸಮನೆ ಪ್ರಶ್ನೆಗಳ ಮಳೆಗೈದರು. “ಇವರು ನಿಮಾಯ್ ಪಂಡಿತ” ಎಂದು ತಮ್ಮ ಗುರುವಿನ ಪರವಾಗಿ ಕೆಲವು ವಿದ್ಯಾರ್ಥಿಗಳು ಉತ್ತರಿಸಿದರು. ಶ್ರೀ ಈಶ್ವರಚಂದ್ರ ಸಂತೋಷದಿಂದ ಉಬ್ಬಿ ಹೋದರು. “ಓ! ನೀನಾ ನಿಮಾಯ್!” ಎಂದು ಉದ್ಗರಿಸಿದರು.

ಶ್ರೀ ಈಶ್ವರಚಂದ್ರರ ಆನಂದ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಭಗವಂತನು ತನ್ನ ಮನೆಯಲ್ಲಿ ಪ್ರಸಾದ ಸ್ವೀಕರಿಸಲು ಬರುವಂತೆ ವಿನಯದಿಂದ ಈಶ್ವರಚಂದ್ರ ಅವರನ್ನು ಆಹ್ವಾನಿಸಿದ. ಅನಂತರ ಅವರನ್ನು ಗೌರವದಿಂದ ತನ್ನ ಮನೆಗೆ ಕರೆತಂದ. ಶಚೀಮಾತಾ ಒಳ್ಳೆಯ ಹಬ್ಬದ ಅಡಿಗೆ ಮಾಡಿ ಶ್ರೀ ಕೃಷ್ಣನಿಗೆ ಅರ್ಪಿಸಿದಳು. ಶ್ರೀ ಪುರಿ ಆ ಮಹಾ ಪ್ರಸಾದವನ್ನು ಸ್ವೀಕರಿಸಿ, ಅನಂತರ ದೇವರಕೋಣೆಯಲ್ಲಿ ಕುಳಿತರು. ಶ್ರೀ ಕೃಷ್ಣನ ಅದ್ಭುತ ಗುಣ ಮತ್ತು ಲೀಲೆಗಳನ್ನು ಶ್ರೀ ಪುರಿ ವರ್ಣಿಸಿದರು. ಒಂದು ಹಂತದಲ್ಲಿ ಅವರು ಅಲೌಕಿಕ ಪ್ರೀತಿಯ ಭಾವೋತ್ಕರ್ಷವನ್ನು ತಡೆದುಕೊಳ್ಳಲಾರದೆ ಮೌನವಾದರು. ಅವರಿಗೆ ಮುಂದಕ್ಕೆ ಮಾತನಾಡುವುದು ಸಾಧ್ಯವಾಗಲಿಲ್ಲ. ಶ್ರೀ ಪುರಿ ಅವರಿಂದ ಪರಮಾನಂದದ ಭಕ್ತಿಯ ಮಾಧುರ್ಯವು ಅವ್ಯಾಹತವಾಗಿ ಹರಿಯತೊಡಗಿದಾಗ ನಿಮಾಯ್ ಮತ್ತಿತರೂ ಅದ್ಭುತ ಆನಂದವನ್ನು ಅನುಭವಿಸಿದರು. ಶ್ರೀ ಪುರಿ ಅವರು ಅದೃಷ್ಟಹೀನ ಲೌಕಿಕವಾದಿಗಳ ಮುಂದೆ ಎಂದಿಗೂ ತಮ್ಮ ಈ ಆಧ್ಯಾತ್ಮಿಕ ಭಾವೋತ್ಕರ್ಷವನ್ನು ಪ್ರದರ್ಶಿಸುತ್ತಿರಲಿಲ್ಲ. ಮುಂದೆ ಶ್ರೀ ಈಶ್ವರಚಂದ್ರ ಅವರು ನವದ್ವೀಪದಲ್ಲಿ, ಗೋಪಿನಾಥ ಆಚಾರ್ಯರ ಮನೆಯಲ್ಲಿ ಹಲವು ತಿಂಗಳು ಇದ್ದರು. ಅವರ ಸಾಮೀಪ್ಯದಿಂದ ವೈಷ್ಣವರ ಹೃದಯ ತುಂಬಿ ಬಂದಿತು. ಭಗವಂತನು ದಿನವೂ ಶ್ರೀ ಪುರಿ ಅವರನ್ನು ಭೇಟಿ ಮಾಡುತ್ತಿದ್ದ.

ಪುಸ್ತಕ ವಿಮರ್ಶೆ

ಪ್ರತಿ ದಿನ ಸಂಜೆ, ಅಧ್ಯಯನ ಮತ್ತು ಬೋಧನೆ ಅನಂತರ ಶ್ರೀ ಚೈತನ್ಯ ತನ್ನ ಗೌರವ ಸಲ್ಲಿಸಲು ಶ್ರೀ ಈಶ್ವರಚಂದ್ರ ಅವರನ್ನು ಭೇಟಿ ಮಾಡುತ್ತಿದ್ದ. ಅವರು ಭಗವಂತನಿಗೆ ಹೇಳಿದರು, “ನೀನು ಶೇಷ್ಠ ವಿದ್ವಾಂಸನೆಂದು ನನಗೆ ಗೊತ್ತು. ಶ್ರೀಕೃಷ್ಣನ ಸ್ವಭಾವ, ಸ್ವರೂಪದ ಬಗೆಗೆ ನಾನು ಒಂದು ಪುಸ್ತಕ ಬರೆದಿದ್ದೇನೆ. ನೀನು ಅದನ್ನು ನೋಡಿ ತಪ್ಪುಗಳನ್ನು ಕಂಡುಹಿಡಿಯಬೇಕೆಂಬುದು ನನ್ನ ವಿನಂತಿ.” “ಇದು ಒಬ್ಬ ಪರಿಶುದ್ಧ ಭಕ್ತನಿಂದ ಶ್ರೀಕೃಷ್ಣನ ವರ್ಣನೆ. ಭಕ್ತನೊಬ್ಬ ಮಾಡುವ ಶ್ರೀಕೃಷ್ಣನ ವರ್ಣನೆಯಲ್ಲಿ ತಪ್ಪು ಕಾಣುವವನು ಪಾಪಿ, ಅಪರಾಧಿ. ವ್ಯಾಕರಣಬದ್ಧವಾಗಿ ಇಲ್ಲದಿದ್ದರೂ ಕೂಡ ತನ್ನ ಪರಿಶುದ್ಧ ಭಕ್ತನ ಪದ್ಯದಿಂದ ಶ್ರೀಕೃಷ್ಣನು ಯಾವಾಗಲೂ ಸಂತೃಪ್ತಗೊಳ್ಳುತ್ತಾನೆ” ಎಂದು ನಿಮಾಯ್ ಉತ್ತರಿಸಿದ.

“ಅಜ್ಞಾನಿಯೊಬ್ಬ ದೇವಸ್ಥಾನದಲ್ಲಿ ಗೌರವ ಸಲ್ಲಿಸುವಾಗ `ವಿಷ್ಣಾಯ’ ಎಂದು ಉಚ್ಚರಿಸಿ ವ್ಯಾಕರಣ ದೋಷ ಮಾಡಬಹುದು. ಆದರೆ, ವಿದ್ಯಾವಂತನೊಬ್ಬನು `ವಿಷ್ಣುವೆ’ ಎಂದು ಸರಿಯಾಗಿ ಶ್ರೀಕೃಷ್ಣನನ್ನು ಸಂಬೋಧಿಸುವನು. ಆದರೂ, ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು ಭಕ್ತಿಯಿಂದ ಅರ್ಪಿಸಿದ ಇಬ್ಬರ ಪ್ರಣಾಮವನ್ನೂ ಸೀಕರಿಸುತ್ತಾನೆ. ಭಗವಂತನಾದ ಶ್ರೀ ಜನಾರ್ದನನು ಬರೀ ವಿದ್ವತ್ತಿನಿಂದಲೇ ಸಂಪ್ರೀತನಾಗುವುದಿಲ್ಲ, ಜೀವಿಗಳ ಶರಣಾಗತಿಯ ಆಂತರಿಕ ಮನಃಸ್ಥಿತಿಯನ್ನೂ ಪುರಸ್ಕರಿಸುತ್ತಾನೆ. ಅವಿದ್ಯಾವಂತರು `ವಿಷ್ಣಾಯ ನಮಃ’ ಎಂದು ತಪ್ಪಾಗಿ ಉಚ್ಚರಿಸಬಹುದು. ಆದರೆ, ಭಗವಂತನು ಭಕ್ತಿಯನ್ನು ನೋಡುತ್ತಾನೆ ಮತ್ತು ಅದರ ಆಧಾರದ ಮೇಲೆ ಫಲ ನೀಡುತ್ತಾನೆ.

“ನಿಮ್ಮ ಬರವಣಿಗೆಯಲ್ಲಿ ತಪ್ಪು ಕಂಡುಹಿಡಿಯುವವನೇ ತಪ್ಪಿತಸ್ಥ. ಏಕೆಂದರೆ, ಈ ಬರವಣಿಗೆಯು ಶ್ರೀಕೃಷ್ಣನ ಸಂತೋಷಕ್ಕೆ ಮಾತ್ರ ಬರೆಯಲ್ಪಟ್ಟಿರುವುದು. ಭಗವಂತನು ಪರಿಶುದ್ಧ ಭಕ್ತನ ಬರವಣಿಗೆಯಿಂದ  ಸಂತೃಪ್ತಗೊಳ್ಳುತ್ತಾನೆ. ನೀವು ಬರೆದಿರುವುದು ಶ್ರೀಕೃಷ್ಣನ ಮೇಲಿನ ನಿಮ್ಮ ಪ್ರೀತಿಯ ಅಭಿವ್ಯಕ್ತಿ. ಅದರಲ್ಲಿ ಫರಕು ಕಂಡುಹಿಡಿಯುವ ಧಾರ್ಷ್ಟ್ಯ ಯಾರಿಗಿದೆ?”

ನಿಮಾಯ್ ಪಂಡಿತನ ವಿವರಣೆ ಕೇಳಿ ಶ್ರೀ ಪುರಿ ಅವರ ಇಡೀ ದೇಹ ಆನಂದದ ಅನುಭವ ಪಡೆಯಿತು. ಅವನ ಮಾತು ಜೇನಿನ ಹೊಳೆಯಂತಾಗಿತ್ತು. ಆದರೂ ಈಶ್ವರ ಪುರಿಯವರು ಪ್ರೀತಿಯಿಂದಲೇ ಒತ್ತಾಯಿಸಿದರು, “ಟೀಕಾರಹಿತನಾಗಿರಬೇಕೆಂಬ ನಿನ್ನ ಆಶಯ ನನಗೆ ಗೊತ್ತು. ಆದರೆ ನನ್ನ ಕೃತಿಯಲ್ಲಿ ಕೆಲವು ಮುದ್ರಣ ದೋಷಗಳಿರ- ಬಹುದು. ದಯೆಯಿಟ್ಟು ಅವುಗಳನ್ನು ತೋರಿಸಿಕೊಡು. – ಇದರಿಂದ ನೀನು ತಪ್ಪೇನೂ ಮಾಡಿದಂತಾಗದು.” ಈ ಚರ್ಚೆ ಅನಂತರ ಶ್ರೀ ಪುರಿ ಮತ್ತು ನಿಮಾಯ್ ಪಂಡಿತ ಪ್ರತಿದಿನ ದಿನವೂ ಗಂಟೆಗಳ ಕಾಲ ಪುಸ್ತಕದ ಪರಿಶೀಲನೆ ನಡೆಸುತ್ತಿದ್ದರು.

ಒಂದು ದಿನ ಶ್ರೀ ಈಶ್ವರ ಪುರಿ ಅವರ ಒಂದು ಪದ್ಯದಲ್ಲಿ ನಿಮಾಯ್ ತಪ್ಪು ಕಂಡು ಹಿಡಿದ. ಒಂದು ನಿರ್ದಿಷ್ಟ ಕ್ರಿಯಾಪದದ ಬಳಕೆ ಸರಿಯಾಗಿಲ್ಲ ಎಂದು ನಿಮಾಯ್ ಅಭಿಪ್ರಾಯ ವ್ಯಕ್ತಪಡಿಸಿದ. ಚರ್ಚೆ ಅನಂತರ ನಿಮಾಯ್ ಮನೆಗೆ ತೆರಳಿದ. ಎಲ್ಲ ಧರ್ಮ ಗ್ರಂಥಗಳ ಬಗೆಗೆ ಪಾಂಡಿತ್ಯ ಹೊಂದಿದ್ದ ಶ್ರೀ ಪುರಿ ಅವರು ವ್ಯಾಕರಣದಲ್ಲಿಯೂ ಪ್ರಕಾಂಡ ವಿದ್ವಾಂಸರಾಗಿದ್ದರು, ಅವರು ನಿಮಾಯ್‌ನ ಪ್ರಸ್ತಾವನೆಯನ್ನು ಪರಿಶೀಲಿಸಿದರು. ಬೌದ್ಧಿಕ ವಿಷಯಗಳನ್ನು ವಿಶ್ಲೇಷಿಸುವುದು ಅವರಿಗೆ ಪ್ರಿಯವಾದುದಾಗಿತ್ತು. ಅವರು ಅನೇಕ ಅಂಶಗಳಿಂದ ನಿಮಾಯ್ ಪ್ರತಿಕ್ರಿಯೆಯನ್ನು ಪರಿಶೀಲಿಸಿದರು ಮತ್ತು ಅನೇಕ ಶಾಸ್ತ್ರೀಯ ನಿರ್ಣಯಗಳೊಂದಿಗೆ ಹೋಲಿಸಿ ನೋಡಿದರು.

ಮರು ದಿನ ನಿಮಾಯ್ ಅವರನ್ನು ನೋಡಲು ಬಂದ. ಆಗ ಶ್ರೀ ಪುರಿ ಅವರು ತಮ್ಮ ನಿರ್ಣಯ ನೀಡಿದರು, “ನೀನು ತಪ್ಪೆಂದು ಭಾವಿಸಿರುವ ಮತ್ತು ನಾನು ಬಳಸಿರುವ ಆ ಕ್ರಿಯಾ ಪದ ಮೂಲವು ವಾಸ್ತವವಾಗಿ ಸರಿಯಾಗಿಯೇ ಇದೆ. ನಿನ್ನೆ ನೀನು ಸಲಹೆ ಮಾಡಿದಂತೆ ಅದನ್ನು ಪರಸ್ಮೈಪದಿ ರೂಪದಲ್ಲಿ ಬಳಸಬಾರದು. ವಾಸ್ತವವಾಗಿ, ಆತ್ಮನೇಪದಿ ರೂಪ ಸರಿಯಾಗಿದೆ.” ಈ ವಿಶ್ಲೇಷಣೆ ಕೇಳಿದ ಮೇಲೆ ಭಗವಂತ ಅದನ್ನು ಒಪ್ಪಲೇಬೇಕಾಯಿತು ಮತ್ತು ಅವನಿಗೆ ಇನ್ನೇನೂ ತಪ್ಪು ಕಾಣಲಿಲ್ಲ. ತನ್ನ ಭಕ್ತ-ಸೇವಕ ತನ್ನೊಂದಿಗೆ ವಿಜಯ ಗಳಿಸಿದ್ದಕ್ಕೆ ಅವನು ಮನಸ್ಸಿನಲ್ಲೇ ತೃಪ್ತಿಪಟ್ಟುಕೊಂಡ. ತನ್ನ ಉದಾತ್ತ ಗುಣದಿಂದಾಗಿ ಭಗವಂತನು ತನ್ನ ಭಕ್ತರ ಹೆಸರು, ಪ್ರಸಿದ್ಧಿ ಮತ್ತು ವಿಜಯವನ್ನು ಅಪೇಕ್ಷಿಸುತ್ತಿದ್ದ – ಇದು ಅವನಿಗೆ ನಷ್ಟ ಅಥವಾ ಹಾನಿ ಉಂಟು ಮಾಡಿದರೂ. ಇದನ್ನು ಎಲ್ಲ ವೈದಿಕ ಸಾಹಿತ್ಯಗಳೂ ಸ್ಪಷ್ಟಪಡಿಸಿವೆ.

ಮುಂದಿನ ಕೆಲವು ತಿಂಗಳು ಮಹತ್ತ್ವಪೂರ್ಣ. ಈ ಇಬ್ಬರು ಶೇಷ್ಠ ವಿದ್ವಾಂಸರು ತಮ್ಮ  ಪಾಂಡಿತ್ಯಪೂರ್ಣ ಲೀಲೆಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದರು. ಅವರು ಪರಸ್ಪರ ತಮ್ಮ ಚರ್ಚೆಯ ಪ್ರತಿ ಕ್ಷಣವನ್ನೂ ಆನಂದಿಸುತ್ತಿದ್ದರು. ಆದರೆ ಶ್ರೀ ಈಶ್ವರಚಂದ್ರ ಅವರು ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಇರುವವರಲ್ಲ. ಅವರು ಭಕ್ತಿಯ ಭಾವೋದ್ರೇಕದಲ್ಲಿ ತಲ್ಲೀನರಾಗಿರುತ್ತಿದ್ದರು. ಒಂದು ರೀತಿ ಅಶಾಂತರಾಗುತ್ತಿದ್ದರು, ಒಂದೇ ಕಡೆ ಇದ್ದರೆ. ಹೀಗಾಗಿ, ಅವರು ಭೂಮಿಯನ್ನು ಪರಿಶುದ್ಧಗೊಳಿಸಲು, ನವದ್ವೀಪದಿಂದ ಯಾತ್ರೆ ಹೊರಟರು. ಈಶ್ವರಚಂದ್ರರನ್ನು ಕುರಿತ ಈ ಅದ್ಭುತ ವರ್ಣನೆಯನ್ನು ಆಸಕ್ತಿಯಿಂದ ಕೇಳುವ ಅದೃಷ್ಟವಂತರು ಸದಾ ಆಶ್ರಯ ಮತ್ತು ಕೃಪೆ ತೋರುವ ಶ್ರೀಕೃಷ್ಣನ ಪಾದ ಕಮಲದ ಸ್ಥಳವನ್ನು ತಲಪುವರು. ತಮ್ಮ ಶಿಷ್ಯನ ಬಗೆಗೆ ಸಂತೃಪ್ತಗೊಂಡ ಶ್ರೀ ಮಾಧವೇಂದ್ರ ಪುರಿ ಅವರು ತಮ್ಮ ಶಿಷ್ಯನಿಗೆ ಕೃಷ್ಣನ ಪ್ರೀತಿಯನ್ನು ಅನುಗ್ರಹಿಸಿದ್ದರು. ಶ್ರೀಕೃಷ್ಣನ ಅಸೀಮಿತ ಕೃಪೆಯಿಂದ ಶ್ರೀ ಈಶ್ವರಚಂದ್ರ ಪುರಿ ಅವರು ತಮ್ಮ ಆಧ್ಯಾತ್ಮಿಕ ಗುರು ಶ್ರೀ ಮಾಧವ ಪುರಿ ಅವರ ಆಶ್ರಯ ಪಡೆದಿದ್ದರು. ಮತ್ತು ಅವರು ಈ ರೀತಿ  ಯಾವುದೇ ಆತಂಕವಿಲ್ಲದೆ ಪರಮಾನಂದದಿಂದ ಎಲ್ಲ ಕಡೆ ಸಂಚರಿಸುತ್ತಿದ್ದರು.

ದೇವೋತ್ತಮ ಪರಮ ಪುರುಷನಾದ ಶ್ರೀ ಗೌರಸುಂದರನಿಗೆ ಜಯ! ಜಯ! ಶಾಶ್ವತವಾಗಿ ಭಗವಂತನ ಜೊತೆಗಿರುವ ಅವನ ಎಲ್ಲ ಸೇವಕರಿಗೆ ಜಯ! ಜಯ!

ನಿಮಾಯ್ ನವದ್ವೀಪದಲ್ಲಿ ವಿದ್ವಾಂಸನಾಗಿ ತನ್ನ ಅಲೌಕಿಕ ಲೀಲೆಗಳನ್ನು ಪ್ರದರ್ಶಿಸುವುದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ. ಸದಾ ಕೈಯಲ್ಲೊಂದು ಗ್ರಂಥ ಹಿಡಿದು ಅವನು ಎಲ್ಲ ವಿದ್ವಾಂಸರು ಮತ್ತು ಶಿಕ್ಷಕರಿಗೆ ಯಾವುದೇ ವಿಷಯದ ಬಗೆಗೆ ಚರ್ಚಿಸಲು ಸವಾಲು ಒಡ್ಡುತ್ತ ನವದ್ವೀಪದಲ್ಲಿ ಸಂಚರಿಸುತ್ತಿದ್ದ. ಆದರೆ ಯಾರಿಗೂ ಅವನ ಸವಾಲನ್ನು ಸ್ವೀಕರಿಸುವುದು ಸಾಧ್ಯವಿರಲಿಲ್ಲ. ಭಗವಂತನು ವ್ಯಾಕರಣ ಅಧ್ಯಯನದಲ್ಲಿ ಯಶಸ್ಸನ್ನಷ್ಟೇ ಮುಟ್ಟಿದ್ದಾನೆಂದು ಭಾವಿಸಲಾಗಿತ್ತು. ಆದರೂ ಅವನು ಪ್ರಸಿದ್ಧ ಮತ್ತು ಹೆಸರಾಂತ ವಿದ್ವಾಂಸರ ಬಗೆಗೆ ಉಪೇಕ್ಷೆಯಿಂದಿದ್ದ. ಅವನು ಸ್ವಯಂ-ತೃಪ್ತಿಯ ವಿದ್ವಾಂಸನಾಗಿದ್ದ ಮತ್ತು ತನ್ನ ಶಿಷ್ಯರು ಹಾಗೂ ವಿದ್ಯಾರ್ಥಿಗಳೊಂದಿಗೆ ನವದ್ವೀಪದಲ್ಲಿ ಸಂಚರಿಸುತ್ತಿದ್ದ. ಅವನ ಸಾಂಗತ್ಯದಿಂದ ಅವರು ಅದೃಷ್ಟವಂತರಾಗಿದ್ದರು.

ಮುಕುಂದನಿಗೆ ಸವಾಲು

ಒಂದು ದಿನ ಅವನು ಅನಿರೀಕ್ಷಿತವಾಗಿ, ಹಾದಿಯಲ್ಲಿ, ಮುಕುಂದನನ್ನು ಭೇಟಿ ಮಾಡಿದ. ಅವನ ಕೈಯನ್ನು ಗಟ್ಟಿಯಾಗಿ ಹಿಡಿದು, ಭಗವಂತ ಒತ್ತಾಯಪೂರ್ವಕವಾಗಿ ಕೇಳಿದ, `ನನ್ನನ್ನು ನೋಡಿದಾಗ  ಪಲಾಯನ ಮಾಡಲು ಏನು ಕಾರಣ? ಈವತ್ತು ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ನೀನು ಅದು ಹೇಗೆ ತಪ್ಪಿಸಿಕೊಳ್ಳುವೆ, ನೋಡೋಣ.’

`ಇವನನ್ನು ಈವತ್ತು ಹೇಗಪ್ಪಾ ಸೋಲಿಸುವುದು?’ ಎಂದು ಮುಕುಂದ ಯೋಚಿಸಿದ. `ಅವನು ವ್ಯಾಕರಣದಲ್ಲಿ ಪಂಡಿತನೆಂದು ಗೊತ್ತು. ಆದ್ದರಿಂದ ನಾನು ಅವನನ್ನು ಅಲಂಕಾರದಲ್ಲಿ ಪ್ರಶ್ನಿಸುವೆ. ಅವನು ಪುನಃ ನನ್ನ ಮುಂದೆ ಜಂಭಕೊಚ್ಚಿಕೊಳ್ಳದಂತೆ ಅವನನ್ನು ಸೋಲಿಸಿಬಿಡುವೆ.’ ಚರ್ಚೆ ಆರಂಭವಾಯಿತು. ಅವರು ಪರಸ್ಪರ ಪ್ರಶ್ನೆಗಳ ಸರಮಾಲೆಯನ್ನೆ ಎಸೆದುಕೊಂಡರು. ಮುಕುಂದನ ಪ್ರತಿ ವಿವರವನ್ನೂ ಭಗವಂತ ತಳ್ಳಿಹಾಕಿದಾಗ ಮುಕುಂದ ಸಲಹೆ ಮಾಡಿದ: `ವ್ಯಾಕರಣವು ಸಣ್ಣ ಮಕ್ಕಳಿಗೆ. ಚಿಕ್ಕ ಪುಟ್ಟ ವಿದ್ಯಾರ್ಥಿಗಳಷ್ಟೇ ಇದನ್ನು ಚರ್ಚಿಸುವುದು. ನಾವು ಅಲಂಕಾರ ಶಾಸ್ತ್ರದ ಬಗೆಗೆ ಚರ್ಚಿಸಬೇಕು.’

`ನಿಮ್ಮಿಷ್ಟದಂತೆಯೇ ಆಗಲಿ’ ಎಂದುತ್ತರಿಸಿದ, ನಿಮಾಯ್.  ಮುಕುಂದನು ಒಂದಾದ ಮೇಲೆ ಒಂದರಂತೆ ಅತ್ಯಂತ ಕಠಿಣ ಮತ್ತು ಶ್ರೇಷ್ಠವಾದ ಶ್ಲೋಕಗಳನ್ನು ಉಲ್ಲೇಖಿಸುತ್ತ, ಅಲಂಕಾರ ಶಾಸ್ತ್ರದ ವಿವಿಧ ಅಂಶಗಳ ಬಗೆಗೆ ಪ್ರಶ್ನೆಗಳನ್ನೆಸೆದ. ಸರ್ವಶಕ್ತನಾದ ಭಗವಂತನು ಮುಕುಂದನ ಪ್ರತಿಯೊಂದು ರಚನೆಯಲ್ಲಿಯೂ ತಪ್ಪುಗಳನ್ನು ತೋರಿಸುತ್ತಾ ಅವನ ಎಲ್ಲ ವಾದಗಳನ್ನು ತಳ್ಳಿಹಾಕಿದ. ಮುಕುಂದನಿಗೆ ಯಾವುದೇ ಹೊಸ ಅಂಶ ಮಂಡಿಸುವುದು ಸಾಧ್ಯವಾಗಲಿಲ್ಲ.

ಭಗವಂತನು ಮುಗುಳ್ನಗುತ್ತ ಸೂಚಿಸಿದ, `ಇಂದು ಮನೆಗೆ ಹೋಗಿ ದಯೆಯಿಟ್ಟು ನಿನ್ನ ಗ್ರಂಥಗಳನ್ನು ಸರಿಯಾಗಿ ಅಧ್ಯಯನ ಮಾಡು. ನಿನಗಿಷ್ಟವಾದರೆ ನಾಳೆ ನಾನು ನಿನ್ನನ್ನು ಮತ್ತೆ ಪರೀಕ್ಷೆಗೆ ಒಳಪಡಿಸುವೆ.’ ಮುಕುಂದನು ಭಗವಂತನ ಚರಣ ಕಮಲದ ದೂಳನ್ನು ತೆಗೆದುಕೊಂಡು ಅಂದಿನ ಅದ್ಭುತ ಅನುಭವವನ್ನು ಮೆಲುಕು ಹಾಕಿದ. `ಸಾಮಾನ್ಯ ಮನುಷ್ಯನೊಬ್ಬ ಇಂತಹ ಜ್ಞಾನ ಹೊಂದಿರುವುದು ಸಾಧ್ಯವೇ ಇಲ್ಲ’ ಎಂದು ಯೋಚಿಸಿದ ಮುಕುಂದ. `ಅವನು ಎಲ್ಲ ಧರ್ಮ ಗ್ರಂಥ ಮತ್ತು ವಿಷಯಗಳಲ್ಲಿ ಪರಿಣತನಾಗಿದ್ದಾನೆ. ಅವನ ಅಗಾಧ ಬುದ್ಧಿಶಕ್ತಿ ಎಷ್ಟಿದೆಯೆಂದರೆ, ಅವನಿಗೆ ಗೊತ್ತಿರದ ವಿಷಯವೇ ಇಲ್ಲವೆನಿಸುತ್ತದೆ. ಅವನು ಶ್ರೀ ಕೃಷ್ಣನ ಭಕ್ತನಾದರೆ ನಾನು ಅವನನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ,’ ಎಂದು ಯೋಚನಾ ಲಹರಿ ಹರಿಸಿದ.

ಗದಾಧರರಿಗೆ ನಿಮಾಯ್ ಸವಾಲು

ಈ ರೀತಿ ವೈಕುಂಠಾಧಿಪತಿಯು ನವದ್ವೀಪದಲ್ಲಿ ಸುತ್ತಾಡುವಾಗ ವಿದ್ವಾಂಸನ ಮನಃಸ್ಥಿತಿಯನ್ನು ಆನಂದಿಸುತ್ತಿದ್ದ. ಮತ್ತೊಂದು ಸಂದರ್ಭದಲ್ಲಿ ಅವನು ಗದಾಧರ ಪಂಡಿತರನ್ನು ಭೇಟಿ ಮಾಡಿದ. ಭಗವಂತನು ಅವರ ಎರಡೂ ಕೈಗಳನ್ನು ಹಿಡಿದು `ನೀವು ತರ್ಕವನ್ನು ಅಧ್ಯಯನ ಮಾಡುತ್ತಿರುವಿರೆಂದು ಕೇಳಿದ್ದೇನೆ. ನೀವು ಇಲ್ಲಿಂದ ತೆರಳುವ ಮುನ್ನ ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಹೋಗಬೇಕು.’ ಗದಾಧರ ಪಂಡಿತರು ಒಪ್ಪಿದರು. ಆಗ ಭಗವಂತ ಪ್ರಶ್ನಿಸಿದ, `ಮುಕ್ತಿಯ ಸ್ವಭಾವವನ್ನು ತಿಳಿಸಿ.’ ತಮ್ಮ ಅಧ್ಯಯನದಿಂದ ತಾವು ಗಳಿಸಿದ್ದ ಜ್ಞಾನಕ್ಕೆ ಅನುಸಾರವಾಗಿ ಪಂಡಿತರು ಉತ್ತರಿಸಿದರು. ಆದರೆ, ಭಗವಂತನೆಂದ, `ನಿಮ್ಮ ವಿವರಣೆಗಳು ಉತ್ತಮ ಮಟ್ಟದಲ್ಲಿ ಇಲ್ಲ.’ ಆದರೆ ಗದಾಧರ ಪಂಡಿತರು ವಾದಿಸಿದರು, `ಧರ್ಮ ಗ್ರಂಥಗಳ ಪ್ರಕಾರ ತೀವ್ರ ಸಂಕಷ್ಟಗಳ ಮೂಲೋತ್ಪಾಟನೆ ಅನಂತರವೇ ಮುಕ್ತಿ ಲಭಿಸುವುದು.’ ಜ್ಞಾನ ದೇವತೆ ಸರಸ್ವತಿಯ ಪ್ರಭುವಾದ ನಿಮಾಯ್ ಪಂಡಿತರ ಗದಾಧರ ಪಂಡಿತನ ವಿವರಗಳಲ್ಲಿನ ಫರಕುಗಳನ್ನು ವಿವಿಧ ದೃಷ್ಟಿಕೋನಗಳಿಂದ ಎತ್ತಿ ತೋರಿಸಿದ. ಭಗವಂತನನ್ನು ಸೋಲಿಸುವವರು ಯಾರೂ ಇರಲಿಲ್ಲ. ಅವನೊಂದಿಗೆ ಚರ್ಚೆಯಲ್ಲಿ ಗೆಲ್ಲುವವರು ಯಾರೂ ಇರಲಿಲ್ಲ.

`ಗದಾಧರ, ಇಂದು ನೀವು ಮನೆಗೆ ಹೋಗಿ. ನಾಳೆ ನಾವು ಮತ್ತೆ ಭೇಟಿ ಮಾಡೋಣ ಮತ್ತು ನಿಮಗೆ ಮತ್ತೊಂದು ಅವಕಾಶ ಸಿಗುತ್ತದೆ’ ಎಂದು ನಿಮಾಯ್ ಸೂಚಿಸಿದ. ಆದರೆ ಗದಾಧರ ಅವನಿಂದ ಪಾರಾಗುವುದು ಹೇಗೆಂದು ಯೋಚಿಸುತ್ತಿದ್ದರು. ಅವರು ನಿಮಾಯ್‌ಗೆ ಸೂಕ್ತ ಗೌರವ ಸಲ್ಲಿಸಿ ಅಲ್ಲಿಂದ ತತ್‌ಕ್ಷಣ ಹೊರಟುಬಿಟ್ಟರು. ಇತ್ತ ನಿಮಾಯ್ ತನ್ನ ವಿದ್ಯಾರ್ಥಿಗಳೊಂದಿಗೆ ನವದ್ವೀಪದಲ್ಲಿ ಸುತ್ತಾಟ ಮುಂದುವರಿಸಿದ.

ಈಗ ಎಲ್ಲರೂ ನಿಮಾಯ್‌ನನ್ನು ಅಭೂತಪೂರ್ವ ವಿದ್ವಾಂಸನೆಂದು ಗುರುತಿಸತೊಡಗಿದರು ಮತ್ತು ಸಾಮಾನ್ಯವಾಗಿ ಜನರು ಅವನ ಬಗೆಗೆ ಗೌರವ ತಳೆದಿದ್ದರು. ಮಧ್ಯಾಹ್ನ ಕಳೆದ ಮೇಲೆ ಭಗವಂತನು ಗಂಗಾ ನದಿ ತೀರದಲ್ಲಿ ತನ್ನ ವಿದ್ಯಾರ್ಥಿಗಳ ಮಧ್ಯೆ ಕೂರುತ್ತಿದ್ದ. ಈ ಬ್ರಹ್ಮಾಂಡದಲ್ಲಿ ಯಾವುದನ್ನೂ ಅವನ ಮೋಹಕ ಚಿತ್ತಾಕರ್ಷಣೆಗೆ ಹೋಲಿಸುವುದು ಸಾಧ್ಯವಿರಲಿಲ್ಲ. ಸಂಪತ್ತಿನ ಅಧಿದೇವತೆ ಶ್ರೀಲಕ್ಷ್ಮಿಯು ಅವನನ್ನು ಪೂಜಿಸುತ್ತಲೇ ಇದ್ದಳು. ಶ್ರೀ ಶಚೀನಂದನನು ಧರ್ಮಗ್ರಂಥಗಳನ್ನು ವಿವರಿಸುತ್ತಿದ್ದರೆ ಅವನ ವಿದ್ಯಾರ್ಥಿಗಳು ತದೇಕಚಿತ್ತರಾಗಿ ಕೇಳುತ್ತಿದ್ದರು.

ನಿಮಾಯ್‌ಗಾಗಿ ವೈಷ್ಣವರ ಪ್ರಾರ್ಥನೆ

ಸಂಜೆ ವೇಳೆ ವೈಷ್ಣವರು ಭಗ‌ವಂತನಿಗೆ ಸ್ವಲ್ಪ ದೂರದಲ್ಲಿ ಬಂದು ಕೂರುತ್ತಿದ್ದರು. ಅವರು ಉಲ್ಲಾಸ ಮತ್ತು ಹತಾಶೆಯ ಮಿಶ್ರ ಭಾವನೆಯಿಂದ ನಿಮಾಯ್‌ನ ಉಪನ್ಯಾಸ ಕೇಳುತ್ತಿದ್ದರು. `ಕೃಷ್ಣನನ್ನು ಪೂಜಿಸದಿದ್ದ ಮೇಲೆ ಇಂಥ ಅಗಾಧ ಸೌಂದರ್ಯ ಮತ್ತು ಜ್ಞಾನ ಇದ್ದರೇನು ಪ್ರಯೋಜನ?’ ಎಂದು ಒಬ್ಬ ಭಕ್ತ ಅಭಿಪ್ರಾಯಪಟ್ಟರೆ, ಮತ್ತೊಬ್ಬರು, `ಅವನನ್ನು ನೋಡಿದಾಗ ಓಡಿ ಹೋಗೋಣವೆನಿಸುತ್ತದೆ. ಏಕೆಂದರೆ ಅವನು ನನ್ನನ್ನು ಹಿಡಿದು ಜಾಣ ಪ್ರಶ್ನೆಗಳಿಂದ ಸೋಲಿಸಿಬಿಡುತ್ತಾನೆ’ ಎಂದು ಹೇಳುತ್ತಿದ್ದರು. `ಅವನು ಹಿಡಿದುಕೊಂಡರೆ, ನಿನಗೆ ಪಾರಾಗುವುದು ಸಾಧ್ಯವೇ ಇಲ್ಲ. ಸರ್ಕಾರಿ ಅಧಿಕಾರಿಯ ಅಧಿಕಾರವಿರುವಂತೆ ಅವನು  ನೀವು ಅಲ್ಲೇ ಇರುವಂತೆ ನಿಮ್ಮ ಮೇಲೆ ಒತ್ತಡ ಹೇರುತ್ತಾನೆ’ ಮತ್ತೊಬ್ಬರು ದೂರಿದರು. ಮತ್ತೊಬ್ಬ ಭಕ್ತರು ಈ ಮಾತುಗಳಿಗೆ ಮುಕ್ತಾಯ ಹಾಡಿದರು. `ಆದರೇನು, ಅವನ ಶಕ್ತಿ ಅಸಾಧಾರಣವಾದುದು. ಅವನು ದೊಡ್ಡ ವ್ಯಕ್ತಿ ಇರಬಹುದೆಂದೆನಿಸುತ್ತದೆ. ಅವನು ತನ್ನ ಜಾಣ ಪ್ರಶ್ನೆಗಳಿಂದ ನಮಗೆ ಕಾಟ ಕೊಟ್ಟರೂ ಅವನನ್ನು ಪ್ರತಿ ಬಾರಿ ನೋಡಿದಾಗಲೆಲ್ಲ ನನಗೆ ತುಂಬಾ ಆನಂದವಾಗುತ್ತದೆ. ಅವನಂತಹ ಪಾಂಡಿತ್ಯ ಉಳ್ಳ ಬೇರೆಯವರನ್ನು ನಾನು ಇನ್ನೂ ಭೇಟಿ ಮಾಡಬೇಕಾಗಿದೆ. ಅವನೊಂದಿಗೆ ನನಗಿರುವ ಒಂದೇ ಭಿನ್ನಾಭಿಪ್ರಾಯವೆಂದರೆ ಅವನು ಕೃಷ್ಣನನ್ನು ಪೂಜಿಸುವುದಿಲ್ಲ.’

ಶ್ರೀಕೃಷ್ಣನ ಚರಣ ಕಮಲಗಳಿಗೆ ನಿಮಾಯ್ ಸ್ವಲ್ಪವಾದರೂ ಒಲವು ಬೆಳೆಸಿಕೊಳ್ಳಬೇಕೆಂದು ಭಕ್ತರು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತಿದ್ದರು. ಅವರು ಗಂಗಾ ತಟದಲ್ಲಿ ಸೇರಿ ಭಗವಂತನಿಗೆ ನಿಮಾಯ್ ಪರವಾಗಿ ಕೋರಿಕೆ ಸಲ್ಲಿಸುತ್ತಿದ್ದರು. `ಓ! ಕೃಷ್ಣ, ಶ್ರೀ ಜಗನ್ನಾಥ ಮಿಶ್ರ ಅವರ ಪುತ್ರನು ತನ್ನ ಇನ್ನಿತರ ಗುರಿಗಳನ್ನು ಬದಿಗಿಟ್ಟು ನಿನ್ನಲ್ಲಿ ಮಗ್ನನಾಗಿರುವಂತೆ ಮಾಡು. ಪ್ರೀತಿಯಿಂದ ನಿನ್ನನ್ನು ಅವನು ಪ್ರಾರ್ಥಿಸುವಂತೆ ಮಾಡು. ಆಗ ನಾವು ಅವನೊಂದಿಗೆ ಇರಬಹುದು.’ ಈ ರೀತಿ ನಿಮಾಯ್ ಪರಿಶುದ್ಧ ವೈಷ್ಣವ ಭಕ್ತರ ಆಶೀರ್ವಾದ ಪಡೆದಿದ್ದ. ದೇವೋತ್ತಮ ಪರಮ ಪುರುಷನು ಪ್ರತಿಯೊಬ್ಬರ ಹೃದಯದಲ್ಲಿರುವುದರಿಂದ ಅವನಿಗೆ ಭಕ್ತರ ಮನಃಸ್ಥಿತಿ ಚೆನ್ನಾಗಿ ಗೊತ್ತು.

ಭಗವಂತನು ಶ್ರೀವಾಸ ಮತ್ತು ಇತರ ಶ್ರೇಷ್ಠ ಭಕ್ತರನ್ನು ಯಾವಾಗ ಕಂಡರೂ ಅವರಿಗೆ ಗೌರವ ಸಲ್ಲಿಸುತ್ತಿದ್ದ. ಅಂತಹ ಕೃಪೆಯಿಂದ ಮಾತ್ರ ಕೃಷ್ಣನ ಪ್ರೀತಿ ಪಡೆಯುವುದು ಸಾಧ್ಯವೆಂದು ಅರಿತಿದ್ದ ಅವನು ವೈಷ್ಣವರ ಆಶೀರ್ವಾದವನ್ನು ಸ್ವೀಕರಿಸಿದ್ದ.

ಅನೇಕ ಬಾರಿ ಭಕ್ತರು, `ಲೌಕಿಕ ಜ್ಞಾನದ ಬೆನ್ನಟ್ಟಿ ನೀನು ಯಾಕೆ ನಿನ್ನ ಸಮಯವನ್ನು ವ್ಯರ್ಥ ಮಾಡುತ್ತಿರುವೆ? ಇದರಿಂದ ನಿನಗೆ ಆಗುವ ಲಾಭವಾದರೂ ಏನು?’ ಎಂದು ಕೇಳುತ್ತಿದ್ದರು. `ನೀನು ಈ ಕೂಡಲೇ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನನ್ನು ಪೂಜಿಸಲು ಆರಂಭಿಸಬೇಕು. ಶಿಕ್ಷಣದ ಅಂತಿಮ ಗುರಿಯಾದರೂ ಏನು? ಅದು ಭಗವಂತನನ್ನು ಅರಿಯುವುದಕ್ಕಾಗಿ ಮಾತ್ರ. ಈ ಅಂಶವನ್ನು ನೀನು ಮರೆತರೆ ನಿನ್ನ ಪಾಂಡಿತ್ಯದಿಂದ ಆಗುವ ಪ್ರಯೋಜನವಾದರೂ ಏನು?’ ಎಂದು ಕೆಲವರು ಸಲಹೆ ನೀಡುತ್ತಿದ್ದರು. ಆಗ ಭಗವಂತನು ಪ್ರೀತಿಯಿಂದ ಉತ್ತರಿಸುತ್ತಿದ್ದ, `ಕೃಷ್ಣನ ಭಕ್ತಿ ಸೇವೆಯ ಪಥದ ಬಗೆಗೆ ನೀವೆಲ್ಲ ನನಗೆ ಬೋಧಿಸುತ್ತಿರುವುದು ನನ್ನ ಅದೃಷ್ಟ. ನಿಮ್ಮ ಕೃಪೆ ಪಡೆದವರು ಅದೃಷ್ಟವಂತರೆಂದು ನನಗೆ, ನನ್ನ ಹೃದಯಕ್ಕೆ ಗೊತ್ತು. ನಾನು ಪರಿಶುದ್ಧ ವೈಷ್ಣವ ಭಕ್ತನಲ್ಲಿ ಆಶ್ರಯ ಪಡೆಯುವೆನೆಂದು ಯಾವಾಗಲೂ ಯೋಚಿಸುವೆ. ಆದರೆ ಅದು ನಾನು ಇನ್ನಷ್ಟು ಅಧ್ಯಯನ ನಡೆಸಿದ ಮೇಲೆ.’

ಈ ರೀತಿ ಭಗವಂತನು ತನ್ನ ಭಕ್ತರೊಂದಿಗೆ ಸಂಭಾಷಣೆಯಲ್ಲಿ ತೊಡಗುತ್ತಿದ್ದ. ಆದರೂ ಅವನ ಆಂತರಿಕ ಶಕ್ತಿ ಮಾಯೆಯ ಪ್ರಭಾವದಿಂದ ಅವರು ಯಾರಿಗೂ ಗುರುತು ಸಿಗದಂತೆ ಉಳಿದಿದ್ದ. ಎಲ್ಲರ ಆಕರ್ಷಣೆಗೆ ಒಳಗಾಗಿದ್ದ ಭಗವಂತನು ಅವರ ಹೃದಯ ಗೆದ್ದಿದ್ದ. ಅವನಿಗಾಗಿ ಕಾತರದಿಂದ ಕಾಯದವರೇ ಇರಲಿಲ್ಲ. ಶ್ರೀ ಗೌರಚಂದ್ರನನ್ನು ಭೇಟಿ ಮಾಡುವುದು ನವದ್ವೀಪದ ಜನರಿಗೆ ತುಂಬ ಸಂತೋಷದ ವಿಷಯವಾಗಿತ್ತು. ಅವನನ್ನು ನೋಡಿದಾಗಲೆಲ್ಲ ಅವರು ಅವನಿಗೆ ಗೌರವ ಅರ್ಪಿಸುತ್ತಿದ್ದರು.

ನವದ್ವೀಪದ ಜನರು ತಮ್ಮ ತಮ್ಮ ಮನೋಗುಣಕ್ಕೆ ಅನುಗುಣವಾಗಿ ಭಗವಂತನನ್ನು ನೋಡುತ್ತಿದ್ದರು. ಮಹಿಳೆಯರು,`ನೋಡಲ್ಲಿ, ಪ್ರಣಯ ದೇವತೆ’ ಎಂದು ಉದ್ಗರಿಸುತ್ತಿದ್ದರೆ, ವಿದ್ವಾಂಸರು ಅವನನ್ನು ಬೃಹಸ್ಪತಿ ಎಂದೇ ಭಾವಿಸಿ ಅವನಿಗೆ ಗೌರವ ನೀಡುತ್ತಿದ್ದರು. ಯೋಗಿಗಳು ಅವನನ್ನು ಪರಿಪೂರ್ಣನೆಂದು ಭಾವಿಸಿದರೆ, ದುಷ್ಟ ಮನಸ್ಸಿನ ನಾಸ್ತಿಕರು ಮತ್ತು ಪಾಪಿಗಳು ಅವನನ್ನು ಭಯದಿಂದ ನೋಡುತ್ತಿದ್ದರು.

ನಿಮಾಯ್‌ನ ಚಿತ್ತಾಕರ್ಷಕ ರೂಪಕ್ಕೆ ಮೋಹಗೊಳ್ಳದವರೇ ಇರಲಿಲ್ಲ. ಅವನೊಂದಿಗೆ ಮಾತನಾಡಿದವರೆಲ್ಲ ಅವನೊಂದಿಗೆ ಪ್ರೀತಿಯ ಹಗ್ಗದಲ್ಲಿ ಬಂಧಿತರಾಗುತ್ತಿದ್ದರು. ಅವನು ತನ್ನ ಪಾಂಡಿತ್ಯ ತೋರುತ್ತ ದೊಡ್ಡ ವಿದ್ವಾಂಸನಂತೆ ಬಿಂಬಿಸಿಕೊಂಡರೂ ಜನರು ಪ್ರೀತಿಯಿಂದ ಅವನ ಮಾತನ್ನು ಕೇಳುತ್ತಿದ್ದರು. ಮುಸ್ಲಿಮರೂ ಮತ್ತಿತರರೂ ಕೂಡ ಭಗವಂತನ ಪ್ರೀತಿಯನ್ನು ಅನುಭವಿಸುತ್ತಿದ್ದರು. ನಿಮಾಯ್ ಪಂಡಿತನ ಹೃದಯ ವೈಶಾಲ್ಯದ ಹಿನ್ನೆಲೆಯಲ್ಲಿ ಇದು ಸ್ವಾಭಾವಿಕವಾಗಿತ್ತು.

ಎಲ್ಲ ಆಧ್ಯಾತ್ಮಿಕ ಗ್ರಹಗಳ ದೇವೋತ್ತಮ ಪರಮ ಪುರುಷನು ಮುಕುಂದ ಸಂಜಯ ಅವರ ಗೃಹದಲ್ಲಿ ಅಸಂಖ್ಯ ವಿದ್ಯಾರ್ಥಿಗಳಿಗೆ ಬೋಧಿಸಿದ. ಯಾವುದೇ ಸಂದರ್ಭದಲ್ಲಿಯೂ ಚರ್ಚೆಯಿಂದ ವಿಚಲಿತನಾಗದೆ ಶ್ರೀ ವಿಶ್ವಂಭರ, ಶ್ರೀ ಶಚೀನಂದನ ವಿದ್ವಾಂಸನಾಗಿ ತನ್ನ ಲೀಲೆಗಳನ್ನು ತೋರುತ್ತಿದ್ದ. ಭಗವಂತನ ಸಂಗದಲ್ಲಿ ತಮಗೆ ಯಾಕೆ ಇಷ್ಟು ಆಹ್ಲಾದ ಆಗುತ್ತಿದೆ ಎಂಬುದರ ಕಾರಣವು ಗೌರಸುಂದರನೊಂದಿಗೆ ಸಂಪರ್ಕವಿದ್ದ ಮುಕುಂದ ಸಂಜಯ ಸೇರಿದಂತೆ ಅದೃಷ್ಟವಂತ ಆತ್ಮಗಳಿಗೆ ಅರ್ಥವಾಗುತ್ತಿರಲಿಲ್ಲ. ವೈಕುಂಠಾಧಿಪತಿಯು ಶಿಕ್ಷಣದ ಎಲ್ಲ ವಿಭಾಗಗಳಲ್ಲಿಯೂ ಪರಿಣತನಾಗಿದ್ದ. ಅವನು ಎಲ್ಲರ ಸಂತೋಷಕ್ಕಾಗಿ ವಿದ್ವಾಂಸನ ಮನಃಸ್ಥಿತಿಯಲ್ಲಿ ಈ ಎಲ್ಲ ಅಲೌಕಿಕ ಲೀಲೆಗಳನ್ನು ಪ್ರದರ್ಶಿಸುತ್ತಿದ್ದ.

(ಮುಂದುವರಿಯುವುದು)

 
Leave a Reply

Your email address will not be published. Required fields are marked *