Warning: Parameter 2 to wp_hide_post_Public::query_posts_join() expected to be a reference, value given in /home/iskconbr/public_html/blog/wp-includes/class-wp-hook.php on line 298
ಸುವರ್ಣಾವತಾರ ಭಾಗ – 11
Search
Sunday 20 September 2020
  • :
  • :
ಇತ್ತೀಚಿನ ಲೇಖನ

Warning: Parameter 2 to wp_hide_post_Public::query_posts_join() expected to be a reference, value given in /home/iskconbr/public_html/blog/wp-includes/class-wp-hook.php on line 298

ಸುವರ್ಣಾವತಾರ ಭಾಗ – 11

ದೇವಾನುದೇವ ಶ್ರೀ ಗೌರಚಂದ್ರನಿಗೆ ಜಯ! ಜಯ!  ಅವನ ಅದ್ವಿತೀಯ ಸುಂದರ ಯೌವನವು ಲಕ್ಷಾಂತರ ಮನ್ಮಥರ ಸೌಂದರ್ಯವನ್ನೇ ಪರಾಭವಗೊಳಿಸುವಂತಿತ್ತು. ಅವನ ಅಲೌಕಿಕ ದೇಹದ ಪ್ರತಿಯೊಂದು ಅಂಗವೂ ಪರಿಪೂರ್ಣ ಸೌಂದರ್ಯದ ಪ್ರತೀಕವಾಗಿತ್ತು. ಅವನ ತೋಳುಗಳು ಮೊಣಕಾಲು ಮುಟ್ಟುವಂತಿದ್ದರೆ, ಅವನ ಸುಂದರವಾದ ಕಣ್ಣುಗಳು ಕಮಲ ದಳಗಳಂತಿದ್ದವು. ಅವನ ಆಕರ್ಷಕ ತುಟಿಗಳು ಎಷ್ಟು ಕೆಂಪಾಗಿತ್ತೆಂದರೆ ಅವನು ತಾಂಬೂಲ ಹಾಕಿಕೊಂಡಿದ್ದನೇನೋ ಎಂದೆನಿಸುತ್ತಿತ್ತು. ಸದಾ ಅತ್ಯುತ್ತಮ ವೈಭವೋಪೇತ ಉಡುಗೆಯಲ್ಲಿ ವಿಜೃಂಭಿಸುತ್ತಿದ್ದ. ನವದ್ವೀಪದ ವಿವಿಧ ವರ್ಗದ ಜನರು ಮಹಾಪ್ರಭುವನ್ನು ತಮ್ಮದೇ ದೃಷ್ಟಿಯಿಂದ ನೋಡುತ್ತಿದ್ದರು. ಕೌಟುಂಬಿಕ ಜೀವನಕ್ಕೆ ಅಂಟಿಕೊಂಡಿದ್ದ ಲೌಕಿಕ ಲಾಭದ ಆಸೆ ಉಳ್ಳವರು ಅವನಲ್ಲಿ ಭಗವಂತನನ್ನು ಕಾಣುತ್ತಿದ್ದರು. ಮತ್ತು ಅವರ್ಣನೀಯ ಅಚ್ಚರಿಯನ್ನು ಅನುಭವಿಸುತ್ತಿದ್ದರು. “ಅವನು ಅನುಗ್ರಹಿಸುವ ಪ್ರತಿ ಮನೆಯೂ ಸದಾ ಸಮೃದ್ಧಿಯಿಂದಿರುವುದು ಎಂತಹ ಅದ್ಭುತ!” ಎಂದು ಅವರು ಉದ್ಗರಿಸುತ್ತಿದ್ದರು. ಮಹಿಳೆಯರು ಅವನನ್ನು ಅತ್ಯಂತ ಆಕರ್ಷಕ ಮನ್ಮಥನಂತೆ  ನೋಡುತ್ತಿದ್ದರು. ಆದರೆ ನಾಸ್ತಿಕರ ಹೃದ‌ಯದಲ್ಲಿ ಅವನು ಮೃತ್ಯು ದೇವತೆಯ ಭಯ ಮೂಡಿಸಿದ್ದ. ದೇವತೆಗಳಲ್ಲಿಯೇ ಪರಮ ಜ್ಞಾನಿಯಾದ ಬೃಹಸ್ಪತಿಯೇ ಭೂಮಿಯಲ್ಲಿ ಅವತಾರವೆತ್ತಿದ್ದಾನೆ ಎಂದು ವಿದ್ವಾಂಸರಿಗೆ ಮನವರಿಕೆಯಾಗಿತ್ತು.

ವೈಷ್ಣವರ ಆತಂಕ

ಆದಾಗ್ಯೂ ವೈಷ್ಣವರು ಗೌರಾಂಗ ಮತ್ತು ಅವನ ವರ್ತನೆ ಬಗೆಗೆ ಆತಂಕಗೊಂಡಿದ್ದರು. “ಅವನು ಎಂತಹ ಭವ್ಯ ದೈಹಿಕ ಸೌಂದರ್ಯದಿಂದ ಸಂಪನ್ನನಾಗಿದ್ದಾನೆ,” ಎಂದುಕೊಂಡರೂ  ಅವರು ವಿಷಾದದಿಂದ ಪ್ರತಿಕ್ರಿಯಿಸುತ್ತಿದ್ದರು, “ಆದರೂ ಅವನು ಶ್ರೀ ಕೃಷ್ಣನಿಂದ ಆಕರ್ಷಿತನಾಗಿರುವಂತೆ ತೋರುವುದಿಲ್ಲ. ಅವನ ವಿದ್ಯಾಭ್ಯಾಸ ಮತ್ತು ಪಾಂಡಿತ್ಯ ಅವನಿಗೆ ಏನು ತಂದು ಕೊಟ್ಟಿದೆ? ಇಷ್ಟು ವರ್ಷಗಳ ಸಮಯ ವ್ಯರ್ಥವೇ?” ಎಂದು ಅವರು ಕೇಳುತ್ತಿದ್ದರು. ವೈಷ್ಣವರು ಈ ರೀತಿ ಮಾತನಾಡಿದ್ದೇಕೆಂದರೆ ಅವರಿಗೆ ಭಗವಂತನ ಆಂತರಿಕ ಶಕ್ತಿ ತಬ್ಬಿಬ್ಬುಗೊಳಿಸಿತ್ತು.  ತಮ್ಮ ಮುಂದೆಯೆ ದೇವೋತ್ತಮ ಪರಮ ಪುರುಷನು ಪ್ರತ್ಯಕ್ಷನಾಗಿದ್ದರೂ ಅವರಿಗೆ ಅವನನ್ನು ಗುರುತಿಸಲಾಗಲಿಲ್ಲ.

ಒಮ್ಮೆ ವೈಷ್ಣವರೊಬ್ಬರು ಚೈತನ್ಯನನ್ನು ಭೇಟಿ ಮಾಡಿದಾಗ ಕೇಳಿದರು, “ಲೌಕಿಕ ಜ್ಞಾನ ಅರಿಯಲು ಸಮಯ ವ್ಯರ್ಥಗೊಳಿಸುವುದರಿಂದ ಏನು ಉಪಯೋಗ?” ತನ್ನ ಭಕ್ತರ ಆತಂಕಕ್ಕೆ ಅವನು ಮುಗುಳ್ನಗೆಯಿಂದ ಉತ್ತರಿಸಿದ, “ಭಕ್ತಿ ಸೇವೆಯ ಪಥವನ್ನು ನಾನು ಸ್ವೀಕರಿಸಬೇಕೆಂದು ನೀವು ಬೋಸುತ್ತಿರುವುದು ನಿಜವಾಗಿಯೂ ನನ್ನ ಅದೃಷ್ಟ.” ಈ ರೀತಿ ಭಗವಂತ ಮತ್ತು ಅವನ ಭಕ್ತರ ಮಧ್ಯೆ ಮಧುರ ರಸಗಳ ವಿನಿಮಯವಾಗುತ್ತಿತ್ತು. ವಿದ್ವಾಂಸನ ರೂಪದಲ್ಲಿ ತನ್ನ ಲೀಲೆಗಳನ್ನು ಅವನು ಹೊರಗೆಡಹುತ್ತಿದ್ದರೂ ಸಾಮಾನ್ಯ ಜನರಿರಲಿ, ಭಕ್ತರಿಗೇ ಭಗವಂತನನ್ನು ಗುರುತಿಸಲಾಗುತ್ತಿರಲಿಲ್ಲ.

ಅಂದಿನ ದಿನಗಳಲ್ಲಿ ನವದ್ವೀಪವು ಅತ್ಯುತ್ತಮ ಅಧ್ಯಯನ ಕೇಂದ್ರವಾಗಿತ್ತು. ಎಲ್ಲ ಕಡೆಗಳಿಂದಲೂ ವಿದ್ಯಾರ್ಥಿಗಳೂ ವಿದ್ವಾಂಸರೂ ಅಲ್ಲಿಗೆ ಬರುತ್ತಿದ್ದರು. ಅವರಲ್ಲಿ ಅನೇಕ ಮಂದಿ ಶುದ್ಧ ವೈಷ್ಣವ ಭಕ್ತರಿದ್ದರು, ಮುಖ್ಯವಾಗಿ ಚಟ್ಟಗ್ರಾಮದಿಂದ ಬಂದವರು. ಇವರು ಗಂಗಾ ತಟದಲ್ಲಿ ವಾಸಿಸಲು ಆಗಮಿಸಿದ್ದರು. ಭಗವಂತನ ಅಪೇಕ್ಷೆಯಂತೆ ಈ ಎಲ್ಲ ವೈಷ್ಣವ ಭಕ್ತರು ನವದ್ವೀಪದಲ್ಲಿ ಸೇರಿದ್ದರು. ಎಲ್ಲ ದೈಹಿಕ ಮತ್ತು ಲೌಕಿಕ ಸಂತೋಷಗಳನ್ನು ತ್ಯಜಿಸಿ ಅವರು ಶ್ರೀ ಕೃಷ್ಣನ ಚರಣ ಕಮಲಕ್ಕೆ  ಶರಣಾಗಿದ್ದರು. ಅವರು ಪ್ರತಿ ದಿನ ಭೇಟಿಯಾಗಿ, ಜೊತೆಯಾಗಿ ಏಕಾಂತವಾಗಿ ಅಧ್ಯಯನ ನಡೆಸುತ್ತಿದ್ದರು. ಲೌಕಿಕ ಜಗತ್ತಿನ ಗದ್ದಲ, ಗಡಿಬಿಡಿಯಿಂದ ದೂರವಾಗಿ ಅವರು ಶ್ರೀ ಗೋವಿಂದನ ಲೀಲೆಗಳನ್ನು ಚರ್ಚಿಸುತ್ತಿದ್ದರು.

ಶ್ರೀ ಮುಕುಂದನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಏಕೆಂದರೆ ತನ್ನ ಮಧುರ ಸಂಗೀತದಿಂದ ಅವರು ಯಾರ ಹೃದಯವನ್ನಾದರೂ ಕರಗಿಸಿಬಿಡುತ್ತಿದ್ದರು. ಸಂಜೆ ವೇಳೆಗೆ ಭಕ್ತರೆಲ್ಲ ಶ್ರೀ ಅದ್ವೈತ ಆಚಾರ್ಯರ ಮನೆಯಲ್ಲಿ ಸೇರುತ್ತಿದ್ದರು. ಮುಕುಂದರು ಶ್ರೀಕೃಷ್ಣನಿಗಾಗಿ ಭಕ್ತಿ ಗೀತೆಗಳನ್ನು ಹಾಡತೊಡಗಿದರೆ ಭಕ್ತರು ತಮ್ಮ ಮೈ-ಮನಗಳನ್ನು ಮರೆಯುತ್ತಿದ್ದರು. ಕೆಲವರು ಅಳುತ್ತಿದ್ದರು, ಮತ್ತೂ ಕೆಲವರು ಜೋರಾಗಿ ನಗುತ್ತಿದ್ದರು. ಇನ್ನಷ್ಟು ಭಕ್ತರು ನೃತ್ಯದಲ್ಲಿ ಲೀನರಾಗುತ್ತಿದ್ದರು. ಕೆಲವರಂತೂ ತಮ್ಮ ಮೇಲಿನ ಹತೋಟಿ ಕಳೆದುಕೊಂಡು, ಭಾವೋತ್ಕರ್ಷದಿಂದ ಮೈಮೇಲಿನ ವಸ್ತ್ರಗಳ ಪರಿವೆಯೂ ಇಲ್ಲದೆ ನೆಲದಲ್ಲಿ ಹೊರಳಾಡುತ್ತಿದ್ದರು. ಕೆಲವರು ಸಿಂಹ ಗರ್ಜನೆಯಂತೆ ಗಟ್ಟಿಯಾಗಿ ಜಪಿಸುತ್ತಿದ್ದರೆ ಮತ್ತಷ್ಟು ಭಕ್ತರು ತಮ್ಮ ಸಂಗಾತಿಗಳ ಬೆನ್ನಿನ ಮೇಲೆ ತಟ್ಟುತ್ತಾ  ಸಂಗೀತಧಾರೆಯನ್ನು ಅನುಭವಿಸುತ್ತಿದ್ದರು. ಹಲವರು ಶ್ರೀ ಮುಕುಂದರ ಪಾದ ಸ್ಪರ್ಶಿಸುತ್ತಿದ್ದರು. ಆ ಇಡೀ ಸ್ಥಳವು ಪರಮಾನಂದದ ದೃಶ್ಯವಾಗಿ ಮಾರ್ಪಟ್ಟು, ವೈಷ್ಣವರು ತಮ್ಮ ಹಿಂದಿನ ಸಂಕಷ್ಟಗಳನ್ನು ಮರೆಯುತ್ತಿದ್ದರು.

ಮುಕುಂದ ಮತ್ತು ಶ್ರೀವಾಸ – ನಿಮಾಯ್‌ನಿಂದ ದೂರ ಯತ್ನ

ಗೌರಸುಂದರನಿಗೆ ಮುಕುಂದ ಎಂದರೆ ಬಲು ಇಷ್ಟ. ಅವನು ಮುಕುಂದರನ್ನು ಕಂಡಾಗಲೆಲ್ಲ ಅವರ ಬಳಿಗೆ ಓಡುತ್ತಲೇ ಬರುತ್ತಿದ್ದ. ನಿಮಾಯ್ ಮುಕುಂದರ ಮುಂದೆ ಸಮಸ್ಯೆಗಳನ್ನು ಇಡುತ್ತಿದ್ದ. ಅವರು ಅದಕ್ಕೆ ಪ್ರಾಮಾಣಿಕವಾಗಿ ವಿವರಣೆ ನೀಡುತ್ತಿದ್ದರು. ಆದರೆ ಭಗವಂತನು ತತ್‌ಕ್ಷಣ ಮುಕುಂದರ ಉತ್ತರವೆಲ್ಲ ತಪ್ಪು ಎಂದು ವಾದಿಸುತ್ತಿದ್ದ. ಆಗ ಅನಿವಾರ್ಯವಾಗಿ ವಾದ ವಿವಾದ ಉಂಟಾಗುತ್ತಿತ್ತು. ಭಗವಂತನೊಂದಿಗಿನ ಅಂತಹ ಸಂವಾದಗಳಿಂದ ಮುಕುಂದರು ಗೌರವಾನ್ವಿತ ವಿದ್ವಾಂಸರೆಂದು ಪರಿಗಣಿತರಾಗಿದ್ದರು. ಭಗವಂತನ ಮುಂದೆ ವಿಷಯ ಮಂಡಿಸುವಾಗ ಅವರು ಅದರ ಪರ, ವಿರೋಧವನ್ನು ಸಮರ್ಥವಾಗಿ ಹೇಳುತ್ತಿದ್ದರು. ಭಗವಂತನು ತನ್ನ ಭಕ್ತರನ್ನು ಮಾನ್ಯಮಾಡುತ್ತಿದ್ದ ಮತ್ತು ಅಂತಹ ಸಂವಾದಗಳಿಂದ ಸಂತೋಷಪಡುತ್ತಿದ್ದ.

ಶ್ರೀ ಚೈತನ್ಯ ಮಹಾಪ್ರಭುವು ಅದೇ ರೀತಿ ಶ್ರೀವಾಸರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದ. ಆದುದರಿಂದ ಅನೇಕ ವೈಷ್ಣವರು ನಿಮಾಯ್‌ನನ್ನು ನೋಡಿದಾಗ ಕಣ್ ತಪ್ಪಿಸಿಕೊಂಡು ಹೋಗುತ್ತಿದ್ದರು. ಅನುಪಯುಕ್ತ ಕುತರ್ಕ ಮತ್ತು ವಾದಗಳಿಂದ ಅಂತಹ ಭೇಟಿಯು ವ್ಯರ್ಥ ಎಂದೇ ಅವರು ಭಾವಿಸಿದ್ದರು. ಕೃಷ್ಣನ ಪ್ರೀತಿಯಲ್ಲಿ ಸಂಪೂರ್ಣ ಮಗ್ನರಾಗಿದ್ದ ವೈಷ್ಣವರು ಎಲ್ಲ ರೀತಿಯ ಲೌಕಿಕ ಆನಂದದಿಂದ ಕಳಚಿಕೊಂಡಿದ್ದರು. ಆದುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ಬಿಟ್ಟು ಬೇರಾವ ವಿಷಯದಲ್ಲಿಯೂ ಆಸಕ್ತಿ ಇರಲಿಲ್ಲ. ತರ್ಕ ಅಥವಾ ಇತರೆ ಲೌಕಿಕ  ವಿಷಯಗಳ ಬಗ್ಗೆ ಭಗವಂತನೊಂದಿಗೆ ವಾದ ಮಾಡುವುದು ಅವರಿಗೇನೂ ಸೂರ್ತಿದಾಯಕವಾಗಿರಲಿಲ್ಲ. ಅದೆಲ್ಲ ಏನೇ ಇರಲಿ, ಸಂವಾದವು ಯಾವಾಗಲೂ ಭಗವಂತನು ತಮ್ಮ ಕುರಿತು ಮಾಡುವ ತಮಾಷೆ, ಹಾಸ್ಯದೊಂದಿಗೆ ಮುಕ್ತಾಯವಾಗುತ್ತಿತ್ತು. ಆದುದರಿಂದ ಅವರು ಯಾರಾದರೂ ನಿಮಾಯ್‌ನನ್ನು ನೋಡಿದರೆ ತತ್‌ಕ್ಷಣ ತಮ್ಮ ಮಾರ್ಗ ಬದಲಿಸಿ ದೂರ ಉಳಿಯುತ್ತಿದ್ದರು. ಅವರಿಗೆ ಕೃಷ್ಣ ಪ್ರ್ಞ‌ೆ ವಿಷಯಗಳ ಬಗ್ಗೆ ಮಾತ್ರ ಆಸಕ್ತಿ ಇತ್ತು ಆದರೆ ನಿಮಾಯ್ ಸಿಕ್ಕಾಗಲೆಲ್ಲಾ ಅವನು ತರ್ಕ ಮತ್ತು ಇತರೆ ಲೌಕಿಕ ವಿಷಯಗಳ ಬಗೆಗೆ ಪ್ರಶ್ನೆ ಕೇಳುತ್ತಿದ್ದ.

ಒಂದು ದಿನ ಚೈತನ್ಯ ತನ್ನ ಕೆಲವು ವಿದ್ಯಾರ್ಥಿಗಳ ಜೊತೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಕಸ್ಮಾತ್ ಮುಕುಂದ ಕೂಡ ಅಲ್ಲೇ ಹಾದು ಹೋಗಬೇಕಾಯಿತು. ಆದರೆ ದೂರದಿಂದಲೇ ಭಗವಂತನನ್ನು ನೋಡಿದ ಮುಕುಂದರು ದಾರಿ ಬದಲಿಸಿದರು. ಮುಕುಂದ ಹಾಗೆ ತಪ್ಪಿಸಿಕೊಂಡು ಹೋಗುವುದನ್ನು ಕಂಡ ನಿಮಾಯ್ ತನ್ನ ಸೇವಕ ಗೋವಿಂದನಲ್ಲಿ  “ನನ್ನನ್ನು ನೋಡಿ ಅವನು ಯಾಕೆ ಹಾಗೆ ಓಡಿ ಹೋದ?” ಎಂದು ಕೇಳಿದ.

“ನನ್ನ ಪ್ರೀತಿಯ ವಿದ್ವಾಂಸನಾದ ಬ್ರಾಹ್ಮಣನೇ,  ಅವರು ಯಾಕೆ ಹಾಗೆ ಹೋದ‌ರೆಂದು ತಿಳಿಯದು. ಬಹುಶಃ ಅವರಿಗೆ ಬೇರೆ ಕೆಲಸವಿರಬೇಕು” ಎಂದು ಗೋವಿಂದ ಉತ್ತರಿಸಿದ. “ಅವನು ಯಾಕೆ ಓಡಿಹೋದನೆಂದು ನನಗೆ ಗೊತ್ತು. ಅವನಿಗೆ ಲೌಕಿಕ ವಿಷಯಗಳ ಬಗೆಗೆ ಮಾತನಾಡುವುದು ಇಷ್ಟವಿಲ್ಲ. ಇವನು ಧಾರ್ಮಿಕ ಗ್ರಂಥಗಳನ್ನು ಮಾತ್ರ ಓದಿದರೆ ನಾನು ಜ್ಯೋತಿರ್ ಶಾಸ್ತ್ರ, ತತ್ತ್ವಶಾಸ್ತ್ರ, ಕ್ರಿಯಾ ಪದಗಳ ನಿಯಮ ಮತ್ತು ವ್ಯಾಕರಣದಲ್ಲಿ ಮಗ್ನನಾಗುವೆ. ಹೀಗಾಗಿ, ನಾನು ಕೃಷ್ಣನ ಬಗೆಗೆ ಮಾತನಾಡುವುದಿಲ್ಲವಾದ ಕಾರಣ ಅವನು ಹಾಗೆ ತಲೆ ತಪ್ಪಿಸಿಕೊಂಡು ಹೋಗುತ್ತಿದ್ದಾನೆ” ಎಂದು ಚೈತನ್ಯ ನುಡಿದ. ಕಟು ಶಬ್ದಗಳನ್ನು ಬಳಸಿ ಅವನು ಮುಕುಂದರನ್ನು ನಿಂದಿಸುವಂತೆ ನಟಿಸಿದ. ಆದರೆ, ವಾಸ್ತವವಾಗಿ ಅವನು ಮುಕುಂದರ ಬಗ್ಗೆ ತೃಪ್ತಿಗೊಂಡಿದ್ದ. ಆದರೂ ಅವನು ಅದೇ ವೇಳೆ ತನ್ನ ಸ್ವಸ್ವರೂಪದ ಪರಿಚಯವನ್ನು ಗೌಪ್ಯವಾಗಿ ಹೊರಗೆಡಹಿದ.

ಭಗವಂತನೆಂದ. “ಒಳ್ಳೆಯದು, ಮುಕುಂದ, ನೀನು ನನ್ನಿಂದ ಅದೆಷ್ಟು ಸಮಯ ತಪ್ಪಿಸಿಕೊಂಡು ಹೋಗುವೆ, ನೋಡೋಣ. ಈ ರೀತಿ ಓಡಿಹೋಗುವ ತಂತ್ರದಿಂದ ನೀನು ನನ್ನಿಂದ ಪಾರಾಗಬಹುದು ಎಂದು ಕೊಂಡಿದ್ದೀಯಾ?” ಭಗವಂತ ನಸುನಕ್ಕ, “ಮತ್ತೊಂದು ದಿನ ನನ್ನ ಅಧ್ಯಯನ ಮುಗಿದ ಮೇಲೆ ನಿನ್ನನ್ನು ಹಿಡಿಯುವೆ. ಆಗ ನೀನು ನೋಡುವೆಯಂತೆ, ನಾನು ಎಂತಹ ವೈಷ್ಣವ ಎಂದು! ನಾನೆಂತಹ ವೈಷ್ಣವ ಭಕ್ತನಾಗುವೆನೆಂದರೆ, ಬ್ರಹ್ಮ, ಶಿವ ಕೂಡ ನನ್ನ ಮನೆ ಬಾಗಿಲಿನಲ್ಲಿ ತಾಳ್ಮೆಯಿಂದ ಕಾಯುತ್ತಾರೆ.” “ಆದುದರಿಂದ, ನನ್ನ ಪ್ರೀತಿಯ ಸಹೋದರರೇ, ಎಚ್ಚರಿಕೆಯಿಂದ ನಾನು ಹೇಳುವುದನ್ನು ಕೇಳಿಸಿಕೊಳ್ಳಿ. ನಾನು ಅತ್ಯಂತ ಜನಪ್ರಿಯ ಮತ್ತು ಅಸಾಧಾರಣ ವೈಷ್ಣವನಾಗುವೆ. ಇಂದು, ನನ್ನನ್ನು ನೋಡಿ ಓಡಿ ಹೋಗುವವರು, ನಾಳೆ, ನನ್ನ ಗುಣಗಾನ ಮಾಡುವರು ಮತ್ತು ವೈಭವದ ಬಗೆಗೆ ಹಾಡುವರು.”

ತನ್ನ ಈ ಹೇಳಿಕೆಯ ಅನಂತರ ಭಗವಂತನು ನಸುನಕ್ಕ. ಅನಂತರ ತನ್ನ ಶಿಷ್ಯರೊಂದಿಗೆ ಮನೆಯತ್ತ ತೆರಳಿದ. ಭಗವಂತನೇ ಸ್ವತಃ ಮತ್ತೊಬ್ಬರ ಹೃದಯದೊಳಗೆ ಹೊರಗೆಡಹದಿದ್ದರೆ ಯಾರು ತಾನೆ ಆ ಆನಂದಭರಿತ ಲೀಲೆಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ?

ನಾಸ್ತಿಕರಿಂದ ವೈಷ್ಣವರ ನಿಂದನೆ

ಅತ್ತ ನವದ್ವೀಪದ ಭಕ್ತರು ತಮ್ಮ ಭಕ್ತಿ ಪ್ರದರ್ಶಿಸುತ್ತಿದ್ದರೆ, ಇತ್ತ ಅಲ್ಲಿನ‌ ನಿವಾಸಿಗಳು ಸ್ವತ್ತು, ಪುತ್ರರು ಮತ್ತಿತರ ತಾತ್ಕಾಲಿಕ ಲೌಕಿಕ ಸಿರಿ ಸಂಪತ್ತು ಪಡೆಯಲು ಹುಚ್ಚರಾಗಿದ್ದರು. ಭಗವಂತನ ಪವಿತ್ರ ನಾಮ ಪಠಣ ಕೇಳಿದಾಗ ಅವರು ಭಕ್ತರನ್ನು ಮೂದಲಿಸುತ್ತಿದ್ದರು ಮತ್ತು ದೂಷಿಸುತ್ತಿದ್ದರು. “ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ನಿರೀಕ್ಷೆಯಿಂದ ಅವರು ಹಾಡುತ್ತಿದ್ದಾರೆ” ಎಂದು ಹಂಗಿಸುತ್ತಿದ್ದರು. “ಈ ಜನರು ರಸ್ತೆಯಲ್ಲಿ ಹುಚ್ಚರಂತೆ ಕುಣಿಯುತ್ತ  ಜ್ಞಾನಾಭಿವೃದ್ಧಿಯಿಂದ ದೂರ ಸರಿಯುತ್ತಿದ್ದಾರೆ. ಇದೆಂತಹ ವರ್ತನೆ?” ಎಂದು ಕೆಲವು ನಾಸ್ತಿಕರು ಉದ್ಗರಿಸುತ್ತಿದ್ದರು.  “ಇವರೆಲ್ಲ ಭಾಗವತ ಮತ್ತಿತರ ಧರ್ಮ ಗ್ರಂಥಗಳನ್ನು ಎಷ್ಟರಮಟ್ಟಿಗೆ ಓದಿದ್ದಾರೆ, ಹೀಗೆ ನರ್ತಿಸುತ್ತಾ ಅರಚುತ್ತಾರಲ್ಲ? ಇದನ್ನೆಲ್ಲಾ ನಾನು ಯಾವುದೇ ಧರ್ಮ ಗ್ರಂಥಗಳಲ್ಲಿ ಓದಿಲ್ಲ. ಇದು ಅವರ ಭಕ್ತಿ ಪಥವೇ?” “ಈ ಶ್ರೀವಾಸ ಪಂಡಿತ ಮತ್ತು ಅವರ ಮೂವರು ಸೋದರರು ನಮಗೆ ಊಟ ಮಾಡಿದ ಮೇಲೆ ಮಲಗಲೂ ಅವಕಾಶ ಕೊಡುವುದಿಲ್ಲ.” “ಮೃದುವಾಗಿ ಕೃಷ್ಣ ನಾಮ ಜಪಿಸಿದರೆ ಆಧ್ಯಾತ್ಮಿಕ ಫಲ ಇಲ್ಲವೇ? ಅಥವಾ ಈ ರೀತಿ ಬೊಬ್ಬೆ ಇಡುತ್ತಾ ನರ್ತಿಸಿದರೆ ಮಾತ್ರ ವಿಶೇಷ ಫಲ ದೊರಕುವುದೇ?” ಎಂದು ಮತ್ತೊಬ್ಬರು ಹೇಳಿದರು. ಈ ರೀತಿ ನಾಸ್ತಿಕರು ವೈಷ್ಣವರ ಮೇಲೆ ವಾಗ್ಬಾಣ ಎಸೆಯುತ್ತಿದ್ದರು.

ಇಂತಹ ನಿಂದನೆಯ ಶಬ್ದಗಳನ್ನು ಕೇಳಿ ಹತಾಶರಾಗುತ್ತಿದ್ದ ವೈಷ್ಣವರು ಜನರ ಒಟ್ಟಾರೆ ದುಃಸ್ಥಿತಿಗೆ ಮರುಗುತ್ತಿದ್ದರು. ಭಕ್ತರು ಕಣ್ಣೀರಿಡುತ್ತಾ ಕೃಷ್ಣನ ಆಶ್ರಯ ಪಡೆಯುತ್ತಿದ್ದರು. ಅವನ ಪವಿತ್ರ ನಾಮ ಜಪಿಸುತ್ತ, “ಓ! ದೇವರೇ! ಈ ಜಗತ್ತಿನಿಂದ ಈ ಸಂಕಷ್ಟಗಳನ್ನು ಯಾವಾಗ ದೂರಮಾಡುವೇ?” ಎಂದು ಅವರು ಪ್ರಾರ್ಥಿಸುತ್ತಿದ್ದರು. “ಪ್ರೀತಿಯ ಕೃಷ್ಣಚಂದ್ರ, ಈ ಪಾಪದ ಲೌಕಿಕ ಜಗತ್ತಿನಲ್ಲಿ ನೀನು ಪ್ರಕಟಗೊಳ್ಳು” ಎಂದು ಕೋರುತ್ತಿದ್ದರು.

ನವದ್ವೀಪದ ನಾಸ್ತಿಕರು ತಮಗೆ ಮಾಡಿದ ಅಪಮಾನವನ್ನು ವೈಷ್ಣವರು ಶ್ರೀ ಅದ್ವೈತ ಆಚಾರ್ಯರ ಮನೆಯಲ್ಲಿ ವಿವರಿಸಿದರು. ಭಕ್ತರಿಗಾದ ಅಪಮಾನವನ್ನು ಸಹಿಸಿಕೊಳ್ಳಲಾಗದ ಅದ್ವೈತ ಆಚಾರ್ಯ ಪ್ರಭುಗಳು, ಲೌಕಿಕ ಜಗತ್ತಿನ ನಾಶಕ ರುದ್ರನ ಅವತಾರವೆಂಬಂತೆ ರೋಷಗೊಂಡರು. ಅವರು ಕೋಪೋದ್ರಿಕ್ತರಾಗಿ ಗರ್ಜಿಸಿದರು, “ಎಲ್ಲರನ್ನೂ ನಾಶಪಡಿಸುವೆ! ಸುದರ್ಶನ ಚಕ್ರ ಹಿಡಿದಿರುವ ನನ್ನ ದೇವರು ಇಲ್ಲಿ, ನದಿಯಾದಲ್ಲಿ ಆವಿರ್ಭವಿಸುತ್ತಾನೆ. ಆಗ ನೋಡಿ, ಅವನೇನು ಮಾಡಬಲ್ಲ ಎಂದು!  ದೇವೋತ್ತಮ ಪರಮ ಪುರುಷ ಕೃಷ್ಣನು ಎಲ್ಲರ ಕಣ್ಣು ಮುಂದೆಯೇ ಪ್ರತ್ಯಕ್ಷಗೊಳ್ಳುವಂತೆ ಮಾಡುವೆ, ಮತ್ತು ಈ ದೂಷಣೆಗಳ ನೇರ ವರದಿ ಮಾಡುವೆ. ಆಗಷ್ಟೇ `ಅದ್ವೈತ’ ಎಂಬ ಹೆಸರಿನ ವ್ಯಕ್ತಿ `ಕೃಷ್ಣ ಸೇವಕ’ ಎಂದು ಕರೆಸಿಕೊಳ್ಳುವುದಕ್ಕೆ ಯೋಗ್ಯ. ನನ್ನ ಪ್ರೀತಿಯ ಸೋದರರೇ, ಸ್ವಲ್ಪ ತಾಳ್ಮೆಯಿಂದ ಇರಿ. ಇಲ್ಲೇ, ನದಿಯಾದಲ್ಲೇ, ತನ್ನ ಲೀಲೆಗಳನ್ನು ತೋರುವ ಶ್ರೀಕೃಷ್ಣನನ್ನು ನೀವು ಪ್ರತ್ಯಕ್ಷವಾಗಿ ನೋಡುವಿರಂತೆ.”

ಶ್ರೀ ಅದ್ವೈತ ಆಚಾರ್ಯರ ಉತ್ತೇಜಿತ ಮಾತುಗಳು ವೈಷ್ಣವರಲ್ಲಿ ನವೋತ್ಸಾಹ ಉಂಟುಮಾಡಿತು. ಅವರು ತಮ್ಮ ಹತಾಶ ಸ್ಥಿತಿಯನ್ನು ಮರೆತರು. ಶ್ರೀ ಕೃಷ್ಣನ ಪವಿತ್ರ ನಾಮಗಳ ಜಪ ಮಾಡಲಾರಂಭಿಸಿದರು. ಈ ಮಧ್ಯೆ, ನಿಮಾಯ್ ಪಂಡಿತ ಸಂತೋಷದಿಂದ ತನ್ನ ಅಧ್ಯಯನ ಮುಂದುವರಿಸಿದ ಮತ್ತು ಶಚಿಮಾತಾಗೆ ಸದಾ ಆನಂದದ ಗಣಿಯಾಗಿದ್ದ.

ಶ್ರೀ ಈಶ್ವರ ಪುರಿ, ಶ್ರೀ ಅದ್ವೈತರ ಭೇಟಿ

ಅದೇ ಸಮಯದಲ್ಲಿ ಶ್ರೀ ಈಶ್ವರಚಂದ್ರ ಪುರಿ ಅವರು ನಿರಾಕಾರವಾದಿ ಪಂಥದ ಏಕದಂಡಿ ಸನ್ಯಾಸಿ ವೇಷದಲ್ಲಿ ನವದ್ವೀಪಕ್ಕೆ ಬಂದರು. ಆದರೆ ಅವರದು ಅದ್ಭುತ ವ್ಯಕ್ತಿತ್ವ. ಸದಾ ಶ್ರೀಕೃಷ್ಣನ ಪ್ರೀತಿಯ ಮಧುವಿನ ರುಚಿಯಲ್ಲೇ ಮಗ್ನರು. ಅವರು ಕೃಷ್ಣನಿಗೆ ಪರಮಾಪ್ತರು ಮತ್ತು ಎಲ್ಲರಿಗೂ ಕರುಣಾಳು. ಆ ವೇಷದಲ್ಲಿ ಅವರನ್ನು ಯಾರೂ ಗುರುತು ಹಿಡಿಯುವುದು ಸಾಧ್ಯವಿರಲಿಲ್ಲ. ಆದರೆ, ಒಂದು ದಿನ, ದೈವ ನಿಯಾಮಕವೆಂಬಂತೆ  ಈಶ್ವರ ಪುರಿ ಅವರು ಶ್ರೀ ಅದ್ವೈತ ಆಚಾರ್ಯ ಅವರ ಮನಗೆ ಹೋದರು. ಆ ಸಮಯದಲ್ಲಿ ಆಚಾರ್ಯರು ಪೂಜೆಯಲ್ಲಿ ನಿರತರಾಗಿದ್ದರು.  ಈಶ್ವರ ಪುರಿಯವರು ಆಚಾರ್ಯರ ಸಮೀಪವೇ, ಅಂಗಳದಲ್ಲಿ, ವಿನಮ್ರರಾಗಿ ಕುಳಿತರು.

ಪರಿಶುದ್ಧತೆಯು ವೈಷ್ಣವನಿಗೆ ಒಂದು ರೀತಿಯ ತೇಜಸ್ಸು ನೀಡುತ್ತದೆ. ಅದನ್ನು ಗೌಪ್ಯವಾಗಿ ಇಡಲಾಗದು, ಅದರಲ್ಲಿಯೂ ಮತ್ತೊಬ್ಬ ವೈಷ್ಣವನಿಂದ. ಹೀಗಾಗಿ, ಅದ್ವೈತ ಆಚಾರ್ಯರು ಪದೇ ಪದೇ ತಿರುಗಿ ನೋಡುತ್ತಿದ್ದರು. ತನ್ನ ಮುಂದೆ ಕುಳಿತಿರುವುದು ಸಾಮಾನ್ಯ ಸಂನ್ಯಾಸಿಯಲ್ಲ, ಪರಿಶುದ್ಧ ವೈಷ್ಣವ ಇರಬೇಕು ಎಂದು ಆಚಾರ್ಯರಿಗೆ ತತ್‌ಕ್ಷಣ ಅರ್ಥವಾಯಿತು. ಕೊನೆಗೆ, ಆಚಾರ್ಯರು ಈಶ್ವರ ಪುರಿ ಅವರನ್ನು ಮಾತನಾಡಿಸಿದರು. “ಪ್ರೀತಿಯ ಸಂತ ಪುರುಷನೇ, ನೀನು ಯಾರು? ನೀನು ವೈಷ್ಣವ ಸಂನ್ಯಾಸಿ ಇರಬೇಕೆಂದು ನನ್ನ ಭಾವನೆ.”

“ನಾನು ಶೂದ್ರನಿಗಿಂತಲೂ ಕಡೆ, ನಾಲ್ಕನೇ ದರ್ಜೆಯವ. ನಿಮ್ಮ ಪಾದ ದರ್ಶನಕ್ಕೆಂದೇ ನಾನು ಇಲ್ಲಿಗೆ ಬಂದಿರುವುದು” ಎಂದು ಈಶ್ವರ ಪುರಿಯವರು ಉತ್ತರಿಸಿದರು. ಅಂಗಳದಲ್ಲಿ ಅಂತಹ ಪರಿಶುದ್ಧ ವೈಷ್ಣವ ಭಕ್ತನ ಲಕ್ಷಣಗಳನ್ನು ಗುರುತಿಸಿದ ಮುಕುಂದರು ತತ್‌ಕ್ಷಣ ಭಾವೋದ್ರೇಕದಿಂದ ಕೃಷ್ಣನ ಕುರಿತ ಹಾಡುಗಳನ್ನು ಹಾಡಲಾರಂಭಿಸಿದರು. ಶ್ರೀ ಮುಕುಂದರ ಸುಮಧುರ ಗಾಯನ ಕೇಳಿ ಈಶ್ವರ ಪುರಿ ಅಲ್ಲೇ ನೆಲದ ಮೇಲೆ ಕುಸಿದರು. ಅವರ ಕಣ್ಣಿನಿಂದ ಅಶ್ರುಧಾರೆ ಹರಿಯಿತು. ಪ್ರೇಮಭಕ್ತಿಯು ಅವರನ್ನು ಪರಮಾನಂದದಲ್ಲಿ ಮುಳುಗಿಸಿತು.

ಆದ್ವೈತ ಆಚಾರ್ಯರು ಚಕಿತಗೊಂಡರು. ತತ್‌ಕ್ಷಣ ಈಶ್ವರಚಂದ್ರ ಅವರನ್ನು ತಮ್ಮ ತೋಳಿನೊಳಗೆ ಹುದುಗಿಸಿಕೊಂಡರು. ಅವರೂ ಕೂಡ ಆ ಸಂತನ ಅಶ್ರುಧಾರೆಯಲ್ಲಿ ಮಿಂದರು. ಶ್ರೀಕೃಷ್ಣನ ಪ್ರೀತಿ ಆನಂದದ ಅಲೆಯಲ್ಲಿ ಇಬ್ಬರೂ ತೇಲಿ ಹೋದರು. ಅವರಿಗೆ ತಮ್ಮ ಆಧ್ಯಾತ್ಮಿಕ ಭಾವೋದ್ರೇಕವನ್ನು ತಡೆದುಕೊಳ್ಳವುದು ಸಾಧ್ಯವಾಗಲಿಲ್ಲ. ಈ ಅಪರೂಪದ ದೃಶ್ಯದಿಂದ ಸೂರ್ತಿಗೊಂಡ ಮುಕುಂದರು ಆ ಸಂದರ್ಭಕ್ಕೆ ಸೂಕ್ತವಾದ ಶ್ಲೋಕ, ಗೀತೆಗಳನ್ನು ಒಂದಾದರೊಂದಂತೆ ಹಾಡಿದರು.

ಇಂತಹ ಗಾಢವಾದ‌ ಆಧ್ಯಾತ್ಮಿಕ ಭಾವೋದ್ರೇಕದ ಪ್ರದರ್ಶನ ಕಂಡು ಅಲ್ಲಿ ನೆರೆದಿದ್ದ ವೈಷ್ಣವರು ಅಚ್ಚರಿಯಿಂದ ಮೂಕರಾದರು. ಅವರುಗಳ ಹೃದಯವೂ ದೈವಿಕ ಆನಂದದಿಂದ ತುಂಬಿಹೋಯಿತು. ಕೆಲ ಕ್ಷಣಗಳ ನಂತರ ಆ ವಿನಯಶೀಲ ಸಂನ್ಯಾಸಿಯು ಶ್ರೀ ಈಶ್ವರಚಂದ್ರ ಪುರಿ ಎಂದು ತಿಳಿದೊಡನೆ ಎಲ್ಲರೂ ಸಂತೋಷದಿಂದ ಸಂಕೀರ್ತನೆ ಶುರು ಮಾಡಿದರು. ಅಂತಹ ಶ್ರೇಷ್ಠ ಭಕ್ತ ತಮ್ಮೊಂದಿಗೆ ಇರುವುದೇ ತಮ್ಮ ಪರಮ ಭಾಗ್ಯ ಎಂದು ಅವರು ಭಾವಿಸಿದರು. ಈ ರೀತಿ, ವಿನಮ್ರರಾಗಿ ಈಶ್ವರಚಂದ್ರ ಅವರು ನವದ್ವೀಪದಲ್ಲಿ ಸಂಚರಿಸತೊಡಗಿದರು. ಆದರೆ ಅವರು ತಮ್ಮ ವೇಷದಿಂದ ಯಾರಿಗೂ ಗುರುತು ಸಿಗದಂತೆ ಅಡ್ಡಾಡಿದರು.

(ಮುಂದುವರಿಯುವುದು)
Leave a Reply

Your email address will not be published. Required fields are marked *