Search
Friday 7 August 2020
  • :
  • :

ಸುವರ್ಣಾವತಾರ ಭಾಗ – 10

ಜಗನ್ನಿಯಾಮಕ ಶ್ರೀ ನಿಮಾಯ್ ಪಂಡಿತ ಪ್ರತಿ ದಿನ ಬೆಳಗ್ಗೆ ತನ್ನ ನಿತ್ಯದ ಬ್ರಾಹ್ಮಣ್ಯ ಕರ್ತವ್ಯಗಳನ್ನು ಪೂರೈಸಿಕೊಂಡು ಶ್ರೀ ಗಂಗಾದಾಸ ಪಂಡಿತರ ಮನೆಗೆ ಹೋಗುವುದು ವಾಡಿಕೆ.  ಅವನನ್ನು ಉದ್ದಾಮ ಪಂಡಿತನೆಂದು ಗೌರವಿಸುವ ಮತ್ತು ಆತನ ಶಿಷ್ಯರೆಂದು ಪರಿಗಣಿಸಲ್ಪಟ್ಟವರು ಅವನ ಜೊತೆಗೂಡುವರು, ಗಂಗಾದಾಸರ ನಿವಾಸದಲ್ಲಿ ಅವನು ಚರ್ಚಾಕೂಟ ಏರ್ಪಡಿಸುವನು.  ಅವನ  ತಂಡದಲ್ಲಿ ಇಲ್ಲದವರನ್ನು ಮತ್ತು ಅವನ ಬೋಧನೆಗೆ ಒಳಗಾಗದ ಅನೇಕ ವಿದಾರ್ಥಿಗಳನ್ನು ನಿಮಾಯ್ ಮತ್ತು ಅವನ ಶಿಷ್ಯ ವೃಂದ ಕಡೆಗಣಿಸುತ್ತದೆ. ಚರ್ಚೆಯಲ್ಲಿ ತಮ್ಮ ವಾದವನ್ನು ಸ್ಪಷ್ಟಪಡಿಸಿದ ಮೇಲೆ ನಿಮಾಯ್ ಅದನ್ನು ತನ್ನ ತಂಡದ ಜೊತೆ ಹಂಚಿಕೊಳ್ಳುವನು. ಇದು ಸಾಮಾನ್ಯವಾಗಿ ಎಲ್ಲ ತಂಡಗಳಲ್ಲಿ ನಡೆಯುವಂತಹುದೇ. ಮುರಾರಿ ಗುಪ್ತ ಅವರು ನಿಮಾಯ್ ತಂಡದಲ್ಲಿ ಇರಲಿಲ್ಲ. ಆದುದರಿಂದ ನಿಮಾಯ್ ಅವರಿಗೆ ಮುಖಾಮುಖಿಯಾಗಿ ಅವರ ವಾದಗಳನ್ನೆಲ್ಲ  ತಳ್ಳಿಹಾಕುತ್ತಾನೆ.

ನಿಮಾಯ್ ತನ್ನ ಆಕರ್ಷಕ ದೇಹದ ಮೇಲೆ ಧೋತಿಯನ್ನು ಸುಂದರವಾಗಿ ಉಡುತ್ತಿದ್ದ. ವಿದ್ಯಾರ್ಥಿಗಳ ಮಧ್ಯೆ ರ, ಶೂರ ರಾಜಕಮಾರನಂತೆ ಕೂಡುತ್ತಿದ್ದ. ಅವನ ಹಣೆಯಲ್ಲಿ ಗಂಧದ ತಿಲಕವು ಚಿನ್ನದಂತೆ ಪ್ರಜ್ವಲಿಸುತ್ತಿತ್ತು. ಅವನ ದಂತ ಪಂಕ್ತಿ ಎಷ್ಟು ಉಜ್ಜ್ವಲವಾಗಿತ್ತೆಂದರೆ, ಸುಂದರವಾದ ಮುತ್ತು ಕೂಡ ಮಂಕಾಗಿ ಕಾಣುತ್ತಿತ್ತು. ಹದಿನಾರರ ಹರೆಯದಲ್ಲಿ ನಿಮಾಯ್‌ನ ಯೌವನವು ಚಿಮ್ಮುತ್ತಿತ್ತು . ಸೌದರ್ಯವೇ ಮೈತಳೆದಂತಿದ್ದ ನಿಮಾಯ್‌ನ ಮೋಹಕ ರೂಪಕ್ಕೆ ಮನ್ಮಥನೇ ಆಕರ್ಷಿತನಾದ.

ವಿದ್ವಾಂಸನಾಗಿ ನಿಮಾಯ್ ತೋರಿದ ಪಾಂಡಿತ್ಯವು ಬೃಹಸ್ಪತಿಯ ಜ್ಞಾನವನ್ನೇ ಮೀರಿಸುತ್ತಿತ್ತು. ಯಾರಾದರು ಶಿಷ್ಯರು ತಮಗೆ ತಾವೇ ಧರ್ಮ ಗ್ರಂಥಗಳನ್ನು ಕಲಿಯಲು ಪ್ರಯತ್ನಿಸಿದರೆ, ನಿಮಾಯ್ ಅವರನ್ನು ಮೂದಲಿಸುತ್ತಿದ್ದ.  ಅವರಿಗೆ ಸವಾಲೆಸೆಯುತ್ತಿದ್ದ. “ಯಾರಲ್ಲಿ? ನನ್ನ ವಾದಗಳನ್ನು ಖಂಡಿಸುವ ಶ್ರೇಷ್ಠ ವಿದ್ವಾಂಸರು  ಯಾರು, ನೋಡೋಣ?  ಧಾತುಗಳ ವರ್ಗೀಕರಣದ ನಿಯಮಗಳನ್ನು ಸರಿಯಾಗಿ ಅರಿಯದ ಕೆಲವರು ತಮಗೆ ತಾವೇ ವ್ಯಾಕರಣವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಮೂರ್ಖರಾಗುತ್ತಾರೆ. ಬಂಡವಾಳವಿಲ್ಲದ ಬಡಾಯಿಗಳಾದ ಅವರಿಗೆ ತಮ್ಮ ಮೌಢ್ಯದಿಂದಾಗಿ ನನ್ನ ವಾದಗಳಿಗೆ ಸರಿಯಾಗಿ ಉತ್ತರಿಸಲಾಗುವುದಿಲ್ಲ. ಅವರಿಗೆ ಚರ್ಚೆಯಲ್ಲಿ ಸೂಕ್ತವಾಗಿ ವಾದಗಳನ್ನು ಮಂಡಿಸಲೂ ಆಗುವುದಿಲ್ಲ.”

ಮುರಾರಿ ಗುಪ್ತರನ್ನು ಛೇಡಿಸಿದ ಚೈತನ್ಯ

ಶ್ರೀ ಚೈತನ್ಯರ ಈ ಪ್ರಚೋದನಕಾರಿ ಮಾತುಗಳನ್ನು ಕೇಳಿದರೂ ಮುರಾರಿ ಗುಪ್ತರು ಮೌನವಾಗಿದ್ದರು ಮತ್ತು ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋದರು. ಆದರೆ ನಿಮಾಯ್ ಅವರನ್ನು ಸುಮ್ಮನೆ ಬಿಟ್ಟಾನೆಯೇ? ಅವಕಾಶ ದೊರೆತಾಗಲೆಲ್ಲ ಅವರನ್ನು ಛೇಡಿಸುತ್ತಿದ್ದ. ಆದರೆ ವಾಸ್ತವವಾಗಿ ತನ್ನ ಪ್ರೀತಿಯ ಸೇವಕನ ಶಾಂತ ಪ್ರತಿಕ್ರಿಯೆ ಕಂಡು ಅವನಿಗೆ ತೃಪ್ತಿಯಾಯಿತು.

ನಿಮಾಯ್ ಒಮ್ಮೆ ಮುರಾರಿ ಗುಪ್ತರಿಗೆ, “ನೀವು ವೈದಿಕ ವೈದ್ಯರು. ನೀವು ಇಲ್ಲಿ ಯಾಕೆ ವ್ಯಾಕರಣ ಕಲಿಯುತ್ತಿದ್ದೀರಿ?  ನಿಮ್ಮ ಗಿಡ ಮೂಲಿಕೆಗಳ ಬಳಿಗೆ ಹೋಗಿ. ಔಷಧ  ತಯಾರಿಸಿ, ರೋಗಿಗಳ‌ನ್ನು ಗುಣಪಡಿಸಬಹುದು. ವ್ಯಾಕರಣ ಕಲಿಯುವುದು ಕಬ್ಬಿಣದ ಕಡಲೆಯಂತೆೆ. ಇಲ್ಲಿ ಲೋಳೆ, ಪಿತ್ಥರಸ ಅಥವಾ ಅಜೀರ್ಣದ ಪ್ರಸ್ತಾವವಿಲ್ಲ. ನಿಮ್ಮಷ್ಟಕ್ಕೆ ನೀವು ಓದಿಕೊಳ್ಳುತ್ತ ಅದು ಹೇಗೆ ವ್ಯಾಕರಣದಲ್ಲಿ ಪರಿಣತರಾಗಬೇಕೆಂದು ಬಯಸುತ್ತೀರಿ? ಇದಕ್ಕೆ ಬದಲಾಗಿ, ಮನೆಗೆ ಹೋಗಿ ರೋಗಿಗಳನ್ನು ಗುಣಪಡಿಸಲು ಪ್ರಯತ್ನಿಸಿ.”

ಶ್ರೀ ಮುರಾರಿ ಗುಪ್ತರು ರುದ್ರ, – ಶಿವನ ಒಂದು ಭಾಗ. ಸ್ವಭಾವತಃ ಉದ್ರಿಕ್ತ . ಆದರೂ, ಅವರಲ್ಲಿ ಕಿಂಚಿತ್ತೂ ಕೋಪದ ಲಕ್ಷಣವು ಶ್ರೀ ವಿಶ್ವಂಭರನಿಗೆ ಕಾಣಲಿಲ್ಲ.

ಮುರಾರಿ ಗುಪ್ತರು ಉತ್ತರಿಸಿದರು. `ಓ! ವಿದ್ವಾಂಸನಾದ ಬ್ರಾಹ್ಮಣನೇ, ನನಗೆ ಒಂದು ವಿಷಯ ಹೇಳು. ನೀನು ಎಲ್ಲರನ್ನೂ ಮೂದಲಿಸುವೆ, ರೇಗಿಸುವೆ. ನಿನಗೆ ಯಾಕೆ ಇಷ್ಟು ಅಹಂಕಾರ? ಯಾವ ವಿಷಯದ ಮೇಲೆ ನಾನು ನಿನಗೆ ಸೂಕ್ತ ಉತ್ತರ ಕೊಟ್ಟಿಲ್ಲ? ಚರ್ಚೆಯು ಕ್ರಿಯಾಪದದ ನಿಯಮಗಳಿರಬಹುದು, ವಿವಿಧ ಭಾವಾರ್ಥಗಳ ಜ್ಯೋತಿಶಾಸ್ತ್ರವಿರಬಹುದು, ಅಥವಾ ಇತರೆ ಆಧ್ಯಾತ್ಮಿಕ ಪ್ರಶ್ನೆಗಳಿರಬಹುದು, ನಾನು ಅವುಗಳಿಗೆಲ್ಲ ಉತ್ತರಿಸಿರುವೆ. ಈಗ, ಏನೂ ಕೇಳದೆ ಮತ್ತು ಉತ್ತರಕ್ಕೂ ಕಾಯದೆ ನೀನು `ನಿನಗೇನು ಗೊತ್ತು?’ ಎಂದು ಮೂದಲಿಸುತ್ತಿರುವೆ. ನೀನು ವಿದ್ವಾಂಸನಾದ ಬ್ರಾಹ್ಮಣ. ನೀನು ಯಾಕೆ ಹೀಗೆ ಮಾಡುವೆ? ಇನ್ನು ನಾನು ಏನು ಹೇಳಲಿ?’

“ಸರಿ, ನೀವು ಇಂದು ಓದಿರುವುದನ್ನು ವಿವರಿಸಿ ವಿಶ್ಲೇಷಿಸಿ.” ಎಂದು ನಿಮಾಯ್ ಸವಾಲೆಸೆದ. ಮುರಾರಿ ಗುಪ್ತರು ವಿವರ ನೀಡತೊಡಗಿದರು. ಆದರೆ ವಿಶ್ವಂಭರ ತತ್‌ಕ್ಷಣ ಅದನ್ನು ತಳ್ಳಿಹಾಕಿದ. ಮುರಾರಿ ಗುಪ್ತ ಒಂದು ರೀತಿಯಲ್ಲಿ ವಿವರಿಸಿದರೆ, ನಿಮಾಯ್ ಇನ್ನೊಂದು ರೀತಿಯಲ್ಲಿ ವಿವರಿಸಿದ. ಪ್ರಭುವಾಗಲೀ, ಸೇವಕನಾಗಲೀ ಪರಸ್ಪರ ಸೋಲಿಸಲಾಗಲಿಲ್ಲ. ಭಗವಂತನ ಪ್ರಭಾವದಿಂದ ಮುರಾರಿ ಗುಪ್ತ ಪಾಂಡಿತ್ಯ ಪ್ರದರ್ಶಿಸಿದರು. ಅವರು ನೀಡಿದ ವಿವರಗಳಿಂದ ನಿಮಾಯ್ ಸಂತುಷ್ಟನಾದ. ಭಗವಂತನು ತನ್ನ ಮೃದುವಾದ ಕರಗಳನ್ನು ಮುರಾರಿ ಗುಪ್ತರ ಮೇಲಿರಿಸಿದ. ಇಂತಹ ಉದಾತ್ತ ಪ್ರೀತಿಯ ಸ್ಪರ್ಶದಿಂದ ಮುರಾರಿ ಗುಪ್ತ ವರ್ಣಿಸಲಸಾಧ್ಯವಾದ ಪರಮಾನಂದವನ್ನು ಅನುಭವಿಸಿದರು.

ಮುರಾರಿ ಗುಪ್ತರ ಚಿಂತನಾ ಲಹರಿ ಹರಿಯಿತು, “ಈ ನಿಮಾಯ್ ಸಾಮಾನ್ಯ ಮನುಷ್ಯನಾಗಿರುವುದು ಸಾಧ್ಯವಿಲ್ಲ. ಇಂತಹ ಅಗಾಧ ಪಾಂಡಿತ್ಯವನ್ನು ಸಾಮಾನ್ಯನೊಬ್ಬ ಹೊಂದಿರುವುದು ಹೇಗೆ ಸಾಧ್ಯ? ಅವನ ಕರ ಸ್ಪರ್ಶದಿಂದಲೇ ನನಗೆ ಎಂತಹ ಅದ್ಭುತ ಆಧ್ಯಾತ್ಮಿಕ ಅನುಭವ ಉಂಟಾಯಿತು! ಅವನ ಬಳಿ ಕಲಿಯಲು ನಾನು ಅಪಮಾನಪಟ್ಟುಕೊಳ್ಳಬೇಕಾಗಿಲ್ಲ. ನವದ್ವೀಪದಲ್ಲಿ ಅವನಷ್ಟು ಜ್ಞಾನಿ ಮತ್ತು ಪಾಂಡಿತ್ಯ ಹೊಂದಿರುವವರು ಬೇರಾರೂ ಇಲ್ಲ.”

ಅನಂತರ ಆಯುರ್ವೇದ ವೈದ್ಯರಾದ ಮುರಾರಿ ಗುಪ್ತ ಪ್ರಭುವಿಗೆ ಶರಣಾದರು. “ಓ! ವಿಶ್ವಂಭರ, ನಾನು ನಿನ್ನ ಶಿಷ್ಯನಾಗಿ ಕಲಿಯುವೆ.” ಈ ರೀತಿ ಪ್ರಭು ಮತ್ತು ಸೇವಕರು ಸರಸ ಮತ್ತು ಪ್ರೀತಿಯ ಸಂವಾದ ನಡೆಸಿದರು. ಅನಂತರ ಭಗವಂತನು ತನ್ನ ಎಲ್ಲ ಮಿತ್ರರನ್ನು ಸ್ನಾನಕ್ಕೆಂದು ಗಂಗಾ ನದಿಗೆ ಕರೆದೊಯ್ದ. ವಿದ್ವಾಂಸನಾಗಿ ಶ್ರೀ ಚೈತನ್ಯ ಈ ರೀತಿ ತನ್ನ ಲೀಲೆಗಳನ್ನು ತೋರುತ್ತಿದ್ದ.

ಜಂಬದ ವಿದ್ವಾಂಸ

ನವದ್ವೀಪದಲ್ಲಿ ಶ್ರೀ ಮುಕುಂದ ಸಂಜಯ ಅವರು ಅದೃಷ್ಟವಂತ ಚೇತನ. ಏಕೆಂದರೆ ಅವರ ಮನೆಯಲ್ಲಿಯೇ ಶ್ರೀಚೈತನ್ಯ ತನ್ನ ಈ ಅನೇಕ ಪಾಂಡಿತ್ಯಪೂರ್ಣ ಲೀಲೆಗಳನ್ನು ತೋರಿದ್ದು. ಮುಕುಂದನ ಮಗನು ನಿಮಾಯ್ ಪಂಡಿತನ ಶಿಷ್ಯನಾಗಿದ್ದ. ಅವರೂ ಕೂಡ ಭಕ್ತಿ ಸೇವೆಯಲ್ಲಿ ಭಗವಂತನ ಚರಣ ಕಮಲಗಳಿಗೆ ಶರಣಾಗಿದ್ದರು. ಮುಕುಂದರ ಮನೆಗೆ ಹೊಂದಿಕೊಂಡಂತೆ ದುರ್ಗಾಮಾತೆಯ ಮಂದಿರವಿತ್ತು. ಅದರ ಅಂಗಳದಲ್ಲಿ ವಿದ್ಯಾರ್ಥಿಗಳು ಬಂದು ಶ್ರೀ ನಿಮಾಯ್  ಸುತ್ತ ಕೂರುತ್ತಿದ್ದರು. ಇಡೀ ಆವರಣ ಶಿಷ್ಯರಿಂದ ತುಂಬಿರುತ್ತಿತ್ತು. ಬ್ರಾಹ್ಮಣರಲ್ಲಿ ಅತ್ಯುತ್ತಮನಾದ ಶ್ರೀ ನಿಮಾಯ್ ಪಂಡಿತ ಅಲ್ಲಿ ಕುಳಿತು ಬೋಸುತ್ತಿದ್ದ.  ಶ್ರೀ ಗೌರಾಂಗನು ವಿದ್ವತ್ ಸಭೆ ನಡೆಸುತ್ತಿರುವಂತೆ ಕಾಣುತ್ತಿತ್ತು. ಅನೇಕ ವಿವರಣೆಗಳನ್ನು ಕೊಡುತ್ತಿದ್ದ ನಿಮಾಯ್, ತನ್ನ ವಾದವನ್ನು ಪುಷ್ಟೀಕರಿಸಲು ಉದಾಹರಣೆಗಳನ್ನು ನೀಡುತ್ತಿದ್ದ ಮತ್ತು ಅದೇ ವಾದಗಳನ್ನು  ಹೊಸ ವಾದಗಳಿಂದ ತಳ್ಳಿಹಾಕುತ್ತಿದ್ದ.

ನಿಮಾಯ್  ಆಗಾಗ್ಗೆ ನವದ್ವೀಪದ ಇತರ ಗುರುಗಳ ವಿರುದ್ಧ ನೇರವಾಗಿಯೇ ಟೀಕಿಸುತ್ತಿದ್ದ. ಒಮ್ಮೆ ಭಗವಂತನೆಂದ, “ಕೆಲವು ವೇಳೆ ಜನರು ಕ್ರಿಯಾಪದಗಳ ಮೂಲ ಜ್ಞಾನವನ್ನೇ  ಹೊಂದಿರುವುದಿಲ್ಲ. ಆದರೆ ಇದು ಕಲಿಯುಗ. ಅಂತಹ ಜನರು `ಭಟ್ಟಾಚಾರ್ಯ’  ಎಂಬ ಬಿರುದನ್ನು ಸ್ವೀಕರಿಸುತ್ತಾರೆ. ಈ `ಭಟ್ಟಾಚಾರ್ಯ’ ರಲ್ಲಿ ಯಾರಾದರೂ ನನ್ನ ವಾದ ಮತ್ತು ವಿವರಣೆಗಳಲ್ಲಿ ಏನಾದರೂ ವ್ಯತ್ಯಾಸ ಕಂಡುಹಿಡಿಯಲಿ, ನೋಡೋಣ. ಆಗ, ನಾನು ಅವರ ಆ ದೊಡ್ಡ ದೊಡ್ಡ `ಭಟ್ಟಾಚಾರ್ಯ’, `ಮಿಶ್ರಾ’ ಬಿರುದುಗಳನ್ನು ಒಪ್ಪಿಕೊಳ್ಳುವೆ.” ಈ ರೀತಿ, ಭಗವಂತನು ಜಂಬದ ವಿದ್ವಾಂಸನಂತೆ ನಡೆದುಕೊಳ್ಳುತ್ತಿದ್ದ. ಅವನ ಸೇವಕರಾರಿಗೂ ಅವನ ಮನಸ್ಥಿತಿ ಅರ್ಥವಾಗುತ್ತಿರಲಿಲ್ಲ. ಅವರಿಗೆ ಅವನು ದೇವೋತ್ತಮನೆಂದು ಗುರುತಿಸುವುದೂ ಸಾಧ್ಯವಾಗುತ್ತಿರಲಿಲ್ಲ.

ದೈವೀ ಜೋಡಿ

ಶಚೀಮಾತಾ ಎಷ್ಟಾದರೂ ತಾಯಿ. ತನ್ನ ಮಗ ಹದಿಹರೆಯದಿಂದ ಯೌವನಾವಸ್ಥೆಗೆ ಕಾಲಿಡುತ್ತಿರುವುದನ್ನು ಅತಿ ಶೀಘ್ರ ಗಮನಿಸಿದಳು. ಸಹಜವಾಗಿ ಅವಳು ಅವನ ಮದುವೆ ಬಗೆಗೆ ಚಿಂತಿಸತೊಡಗಿದಳು. ಆ ಸಮಯದಲ್ಲಿ  ಶ್ರೀ ವಲ್ಲಭ ಆಚಾರ್ಯ ಎಂಬ ಸಜ್ಜನ ಬ್ರಾಹ್ಮಣರೊಬ್ಬರು ನವದ್ವೀಪದಲ್ಲಿ ವಾಸಿಸುತ್ತಿದ್ದರು. ಅವರನ್ನು ಸೀತಾದೇವಿಯ ಪಿತ ಜನಕ ಮಹಾರಾಜನಿಗೆ ಹೋಲಿಸಬಹುದು. ಅವರ ಮಗಳು ಲಕ್ಷ್ಮೀದೇವಿ ಅನುಪಮ ಸುಂದರಿ. ಅದೃಷ್ಟ ದೇವತೆಯಾದ ಈ ಲಕ್ಷ್ಮಿಗೆ ಮದುವೆ ಮಾಡುವ ಸನ್ನಾಹದಲ್ಲಿದ್ದರು, ಶ್ರೀ ವಲ್ಲಭ ಆಚಾರ್ಯ. ಅವಳಿಗೆ ಸೂಕ್ತ ವರನನ್ನು ಹುಡುಕಲು ಅವರು ಯೋಚಿಸುತ್ತಿದ್ದರು.

ಅದೊಂದು ದೈವಿಕ ವ್ಯವಸ್ಥೆ. ಒಮ್ಮೆ ಸ್ನಾನಕ್ಕೆ ಹೋದಾಗ, ಗಂಗಾ ತಟದಲ್ಲಿ  ಶ್ರೀ ಲಕ್ಷ್ಮೀದೇವಿಯು ಶ್ರೀ ಗೌರಸುಂದರನನ್ನು ಭೇಟಿ ಮಾಡಿದಳು.  ಗೌರಸುಂದರನು ತತ್‌ಕ್ಷಣ ತನ್ನ ಚಿರಂತನ ಸಂಗಾತಿಯನ್ನು ಕಂಡುಹಿಡಿದುಬಿಟ್ಟ . ಅವಳತ್ತ ನಗೆ ಸೂಸಿದ. ಲಕ್ಷ್ಮೀದೇವಿ ಕೂಡ ತನ್ನ ಶಾಶ್ವತ ಸಂಗಾತಿಯನ್ನು ಗುರುತುಹಿಡಿದು, ಸಂತಸದಿಂದ ಅವನ ಕಾಲಿಗೆರಗಿದಳು. ಈ ಎರಡೂ ಅಲೌಕಿಕ ವ್ಯಕ್ತಿಗಳು ಪರಸ್ಪರ ಗುರುತು ಹಿಡಿದುಕೊಂಡು ಪರಮಾನಂದದಿಂದ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು. ಭಗವಂತನ ಅಂತಹ ಭವ್ಯ ಮತ್ತು ಅತೀತ ಲೀಲೆಗಳನ್ನು ಯಾರು ಅರ್ಥ ಮಾಡಿಕೊಳ್ಳಬಲ್ಲರು?

ಇದೂ ಕೂಡ ದೈವನಿಯಮ. ವನಮಾಲಿ ಎಂಬ ಬ್ರಾಹ್ಮಣರೊಬ್ಬರು ಶಚೀಮಾತಾ ಅವರನ್ನು ಭೇಟಿ ಮಾಡಲು ಬಂದರು. ಅವರು ಪರಸ್ಪರ ಗೌರವ ವಿನಿಮಯ ಮಾಡಿಕೊಂಡ ಮೇಲೆ ಶಚೀಮಾತಾ ಆ ಬ್ರಾಹ್ಮಣನಿಗೆ ಆದರದಿಂದ ಕೂರಲು ಕೋರಿದರು. ಅನಂತರ ಶ್ರೀ ವನಮಾಲಿ ಕೇಳಿದರು, “ನಿಮ್ಮ ಮಗನ ಮದುವೆ ಬಗೆಗೆ ಗಂಭೀರ ಆಲೋಚನೆ ಇಲ್ಲವೇ? ನವದ್ವೀಪದಲ್ಲಿ ಒಬ್ಬ ಸಜ್ಜನ ಬ್ರಾಹ್ಮಣ ವಾಸಿಸುತ್ತಿದ್ದಾರೆ. ಅವರು ಪರಿಶುದ್ಧರು, ಸದಾ ಧರ್ಮದ ಪಥದಲ್ಲಿ ಸಾಗುವವರು. ಅವರ ಪುತ್ರಿ ಲಕ್ಷ್ಮೀದೇವಿಯು ಸೌಂದರ್ಯ, ಚಾರಿತ್ರ್ಯ ಮತ್ತು ಗೌರವಾರ್ಹತೆಗಳಲ್ಲಿ ಆ ವಿಷ್ಣು ಪತ್ನಿ ಲಕ್ಷ್ಮಿಗೆ ಯಾವುದರಲ್ಲಿಯೂ ಕಡಮೆ ಇಲ್ಲ.”

ಶಚೀಮಾತಾ ಉತ್ತರಿಸಿದಳು, `ನನ್ನ ಮಗ ತಂದೆಯನ್ನು ಕಳೆದುಕೊಂಡಿದ್ದಾನೆ. ಅವನು ಇನ್ನಷ್ಟು ಅಧ್ಯಯನ ನಡೆಸಲಿ, ಇನ್ನೂ ದೊಡ್ಡವನಾಗಲಿ. ಆಗ ನಾನು ಖಂಡಿತ ಅವನ ಮದುವೆ ಬಗೆಗೆ ಯೋಚಿಸುವೆ.’  ಈ ನಿರಾಶಾದಾಯಕ ಪ್ರತ್ಯುತ್ತರದಿಂದ ಹತಾಶರಾದ ವನಮಾಲಿ ಅಲ್ಲಿಂದ ತೆರಳಿದರು. ಆದರೇನು, ದೈವನಿಯಮವೇ ಬೇರೆಯಲ್ಲವೇ? ವನಮಾಲಿ ತಮ್ಮ ಮನೆಗೆ ಹೋಗುವ ಹಾದಿಯಲ್ಲಿ  ಶ್ರೀ ಗೌರಾಂಗನನ್ನು ಸಂಸಿದರು. ಗೌರಾಂಗನು ಅವರನ್ನು ಕಂಡಕೂಡಲೇ ಆಲಿಂಗಿಸಿಕೊಂಡ.

“ಯಾರ ಭೇಟಿಗೆಂದು ಬಂದಿದ್ದೀರಿ?” ಎಂದು ಅವನು ವಿಚಾರಿಸಿಕೊಂಡ.

“ನಿಮ್ಮ ತಾಯಿಗೆ ಗೌರವ ಸಲ್ಲಿಸಲು ಬಂದಿದ್ದೆ. ನಾನು ನಿನ್ನ ಮದುವೆ ವಿಷಯ ಪ್ರಸ್ತಾವಿಸಿದೆ. ಆದರೆ ಅವರೇಕೋ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಲಿಲ್ಲ.”  ಎಂದು ವನಮಾಲಿ ನಿರುತ್ಸಾಹದಿಂದ ನುಡಿದರು. ನಿಮಾಯ್ ಇದಕ್ಕೆ ಏನೂ ಬದಲು  ನೀಡದೆ ಮೌನ ತಾಳಿದ. ಅವನು ತನ್ನಲ್ಲೇ ನಗುತ್ತಾ ಮನೆಗೆ ತೆರಳಿದ. ಮನೆಯಲ್ಲಿ ತತ್‌ಕ್ಷಣ ತಾಯಿ ಬಳಿ ಮಾತನಾಡಿದ, “ಆ ಬ್ರಾಹ್ಮಣ ಮಾಡಿದ ಮದುವೆ ಪ್ರಸ್ತಾವಕ್ಕೆ ನೀನು ಯಾಕೆ ಮನಗೊಡಲಿಲ್ಲ?”

ಶಚೀಮಾತಾಗೆ ತನ್ನ ಮಗನ ಮನಸ್ಸು ಅರ್ಥವಾಯಿತು. ಅವಳಿಗೆ ತುಂಬ ಸಂತೋಷವಾಯಿತು.  ಅವಳು ಮರುದಿನವೇ ವನಮಾಲಿಯನ್ನು ಕರೆಸಿಕೊಂಡು ಅವರು ಮಾಡಿದ ಮದುವೆ ಪ್ರಸ್ತಾವವನ್ನು ಮುಂದುವರಿಸಲು ಕೋರಿದಳು.  ವನಮಾಲಿ ಅವಳ ಪಾದ ಸ್ಪರ್ಶಿಸಿ, ಗೌರವ ಅರ್ಪಿಸಿ ನೇರವಾಗಿ ವಲ್ಲಭ ಆಚಾರ್ಯರ ಮನೆಗೆ ತೆರಳಿದರು.

ವನಮಾಲಿಗೆ ಶ್ರೀ ವಲ್ಲಭರು ತುಂಬು ಸ್ವಾಗತ ಕೋರಿ ಗೌರವ ಪೀಠ ನೀಡಿದರು. ವನಮಾಲಿ ಸಮಯ ವ್ಯರ್ಥ ಮಾಡದೆ, ನೇರವಾಗಿ ತಾನು ಬಂದ ಉದ್ದೇಶ ಸಾರಿದರು; “ನೀವು ನಿಮ್ಮ ಮಗಳ ಮದುವೆ ಮಾಡಲು ಇದು ಸುಸಮಯ. ನಾನು ಅವಳಿಗೆ ಸೂಕ್ತನಾದ ವರನನ್ನು ನೋಡಿರುವೆ. ಅವನ ಹೆಸರು ವಿಶ್ವಂಭರ. ಅತ್ಯಂತ ಉನ್ನತ ಮತ್ತು ಗೌರವಾನ್ವಿತ ಬ್ರಾಹ್ಮಣ ಶ್ರೀ ಜಗನ್ನಾಥ ಮಿಶ್ರ ಅವರ ಪುತ್ರ. ಅಗಾಧ ಪಂಡಿತನಾದ ವಿಶ್ವಂಭರನು ಎಲ್ಲ ಸದ್ಗುಣಗಳ ಸಾಗರ. ಇವುಗಳನ್ನು ಪರಿಶೀಲಿಸಿ, ನಿಮ್ಮ ಅಭಿಪ್ರಾಯ ತಿಳಿಸಿ.”

ವಲ್ಲಭ ಆಚಾರ್ಯರ ಆನಂದಕ್ಕೆ ಪಾರವೇ ಇಲ್ಲ. ಅವರೆಂದರು, “ನಿಜವಾದ ಪುಣ್ಯದಿಂದಲೇ ಹುಡುಗಿಯೊಬ್ಬಳಿಗೆ ಅಂತಹ ಗಂಡ ದೊರೆಯುವುದು ಸಾಧ್ಯ. ನನ್ನ ಮೇಲೆ ಕೃಷ್ಣನ ಕೃಪೆ ಇದ್ದರೆ ಅಥವಾ ಅದೃಷ್ಟ ದೇವತೆಗೆ ನನ್ನ ಮಗಳ ಬಗೆಗೆ ತೃಪ್ತಿ ಇದ್ದರೆ ಮಾತ್ರ ನಾನು ಅಂತಹ ಅಳಿಯನಿಗೆ ಆಶಿಸಬಹುದು. ದಯೆಯಿಟ್ಟು  ಇನ್ನು  ತಡಮಾಡಬೇಡಿ. ಈ ಪ್ರಸ್ತಾವವನ್ನು ಮುಂದುವರಿಸಿ ಮತ್ತು ಎಲ್ಲ ಔಪಚಾರಿಕಗಳನ್ನು ಮಾಡಿ. ಆದರೆ ಒಂದು ವಿಷಯ ಹೇಳಲೇ ಬೇಕಾಗಿದೆ. ಅದನ್ನು ಹೇಳಲು ಹಿಂಜರಿಕೆಯಾದರೂ ಅನಿವಾರ್ಯ. ವರದಕ್ಷಿಣೆ ಕೊಡಲು ನನ್ನ ಬಳಿ ಏನೂ ಸಾಧನಗಳಿಲ್ಲ. ನಾನು ನನ್ನ ಮಗಳನ್ನು ಕೊಡುವೆ ಮತ್ತು ಶುಭಕರವಾದ ಐದು ಹರಿತಾಕಿ ಹಣ್ಣುಗಳನ್ನು ನೀಡುವೆ.”

ಶ್ರೀ ವಲ್ಲಭ ಆಚಾರ್ಯರ ಬಿಚ್ಚು ಮಾತು ಮತ್ತು ವಿವಾಹ ಪ್ರಸ್ತಾವಕ್ಕೆ ಅವರ ಒಪ್ಪಿಗೆಯು ಆ ಬ್ರಾಹ್ಮಣನಿಗೆ ತೃಪ್ತಿ ಉಂಟು ಮಾಡಿತು. ತನ್ನ ಯಶಸ್ವೀ ಯಾತ್ರೆಯ ವಿಷಯ ಅರುಹಲು ಅವರು ಶಚೀದೇವಿ ಮನೆಗೆ ತೆರಳಿದರು. “ಅವರಿಗೆ ಒಪ್ಪಿಗೆ ಇದೆ. ನಾವು ಈಗ ಜ್ಯೋತಿಶಾಸ್ತ್ರದ ಲೆಕ್ಕಾಚಾರದಂತೆ  ಶುಭ ದಿನ ಮತ್ತು ಶುಭ ಮುಹೂರ್ತ ಹುಡುಕಬೇಕಾಗಿದೆ” ಎಂದು ವನಮಾಲಿ ಹೇಳಿದರು.

ಮದುವೆ ವಿಷಯ ಹಬ್ಬಿತು. ನಿಕಟವಾದ ಬಂಧುಗಳೂ ಮಿತ್ರರೂ ಸಂತೋಷದಿಂದ ಈ ಸಂದರ್ಭದಲ್ಲಿ ಪಾಲ್ಗೊಂಡು ನೆರವಾಗಲು ಮುಂದಾದರು. ಮದುವೆಗೆ ಮುನ್ನಾದಿನ ಶುಭ ಗಳಿಗೆಯಲ್ಲಿ ವಿಶೇಷ ವಿ ವಿಧಾನಗಳು ನಡೆದವು. ವೃತ್ತಿಪರ  ಸಂಗೀತಗಾರರು ಮತ್ತು ನರ್ತಕರು ಅಮೋಘ ಪ್ರದರ್ಶನ ನೀಡಿದರು. ವಿವಾಹ ಸ್ಥಳದ ನಾಲ್ಕೂ ದಿಕ್ಕಿನಲ್ಲಿ ವಿರಾಜಿಸಿದ್ದ ಬ್ರಾಹ್ಮಣ ಪೂಜಾರಿಗಳು ವೇದ ಮಂತ್ರ ಪಠಿಸಿದರು. ಮಧ್ಯ ಭಾಗದಲ್ಲಿ ಬ್ರಾಹ್ಮಣರ ಮುಕುಟಮಣಿ ಶ್ರೀ ಗೌರಾಂಗ ಆಸೀನನಾದ, ಪೂರ್ಣ ಚಂದ್ರನಂತೆ ಕಂಗೊಳಿಸುತ್ತಿದ್ದ. ಈ ಸಮಾರಂಭದ ಅಂತ್ಯದಲ್ಲಿ ಬ್ರಾಹ್ಮಣರಿಗೆ ಸುಗಂಧ ದ್ರವ್ಯ, ಗಂಧ, ಹೂವಿನ ಹಾರ, ಮತ್ತು ಸಂಬಾರ ಪದಾರ್ಥಗಳನ್ನು ನೀಡಲಾಯಿತು. ಪದ್ಧತಿಯಂತೆ ಶ್ರೀ ವಲ್ಲಭ ಆಚಾರ್ಯರೂ ಆಗಮಿಸಿ ವಿವಿಧಾನಗಳನ್ನು ಮಾಡಿ ಕರ್ತವ್ಯನಿಷ್ಠರಾದರು.

ಮದುವೆ ಸಂಭ್ರಮ

ಮದುವೆ ದಿನ  ಸಡಗರ ಸಂಭ್ರಮ. ಅಂದು ಮುಂಜಾನೆಯೇ ನಿಮಾಯ್ ತನ್ನ ಪಿತೃಗಳಿಗೆ ಗೌರವ ಆಹುತಿ ಅರ್ಪಿಸಿದ. ಸುಮಧುರ ಸಂಗೀತ ಮತ್ತು ನರ್ತಕರ ಗೆಜ್ಜೆನಾದ ಎಲ್ಲೆಡೆ ಪ್ರತಿಧ್ವನಿಸುತ್ತಿತ್ತು. ಸಂತೋಷದ ಚಿಲಿಪಿಲಿ ಶಬ್ದ ಎಲ್ಲ ದಿಕ್ಕಿನಿಂದಲೂ ಕೇಳಿಬರುತ್ತಿತ್ತು. ಅಸಂಖ್ಯ ಅತಿಥಿಗಳು ನೆರೆದಿದ್ದರು. ಪತಿವ್ರತೆಯರ ಗುಂಪು ಕೂಡ ಅಲ್ಲಿತ್ತು. ಬಂಧುಗಳು ಮತ್ತು ಗೌರವಾನ್ವಿತ ಬ್ರಾಹ್ಮಣರು ಆಗಮಿಸಿದರು. ಶಚೀಮಾತಾ ಹಣ್ಣು, ಧಾನ್ಯ, ಕುಂಕುಮ, ತೈಲ ಮತ್ತಿತರ ಪದಾರ್ಥಗಳನ್ನು ನೀಡಿ ಸ್ವಾಯರನ್ನು ತೃಪ್ತಿಪಡಿಸಿದರು. ಅನೇಕ ದೇವತೆಗಳು ತಮ್ಮ ತಮ್ಮ ಪತ್ನಿಯರ ಜೊತೆ ಭಗವಂತನ ವಿವಾಹ ವೀಕ್ಷಿಸಲು ಮಾನವ ರೂಪದಲ್ಲಿ ಆಗಮಿಸಿದ್ದರು. ಸಂತೋಷದಿಂದ ಬೀಗುತ್ತಿದ್ದ ಶ್ರೀ ವಲ್ಲಭ ಆಚಾರ್ಯರು ಅನೇಕ ವಿವಿಧಾನಗಳನ್ನು ನೆರವೇರಿಸಿದರು. ಸಂಜೆ, ಸೂರ್ಯಾಸ್ತಕ್ಕೆ ಮುನ್ನ, ನಿಗದಿಪಡಿಸಿದ್ದ ಶುಭ ಸಮಯದಲ್ಲಿ, ನಿಮಾಯ್ ಶ್ರೀ ವಲ್ಲಭ ಆಚಾರ್ಯರ ಗೃಹಕ್ಕೆ ತೆರಳಿದ. ಅವನೊಂದಿಗೆ ಅನೇಕ ಮಂದಿ ಇದ್ದರು. ಅವನು ಆಗಮಿಸಿದಾಗ ಅತಿಥಿಗಳು ಭಾವೋತ್ಕರ್ಷಿತರಾದರು.

ಧರ್ಮ ಗ್ರಂಥಗಳ ನಿಯಮಾನುಸಾರ ವಲ್ಲಭ ಆಚಾರ್ಯರು ಅತ್ಯಂತ ಗೌರವದಿಂದ ಶ್ರೀ ಗೌರಾಂಗನಿಗೆ ಪೀಠ ನೀಡಿದರು. ಅವರ ಹೃದಯ ತುಂಬಿತ್ತು. ಅನಂತರ ಅವರು ತಮ್ಮ ಮಗಳು ಲಕ್ಷ್ಮೀದೇವಿಯನ್ನು ಕರೆತಂದರು. ಆಭರಣಗಳಿಂದ ಅಲಂಕೃತಳಾಗಿದ್ದ ಲಕ್ಷ್ಮಿಯ ಸೌಂದರ್ಯವನ್ನು ವರ್ಣಿಸಲಸಾದ್ಯ. ಪದ್ಧತಿಯಂತೆ ಲಕ್ಷ್ಮಿಯನ್ನು ನೆಲದಿಂದ ಮೇಲಕ್ಕೆ ಎತ್ತಿ ಭಗವಂತನ ಸುತ್ತ ಏಳು ಬಾರಿ ಪ್ರದಕ್ಷಿಣೆ ಮಾಡಲಾಯಿತು. ಹರಿನಾಮ ಪಠಣ ಪ್ರತಿಧ್ವನಿಸುತ್ತಿತ್ತು.

ವಧೂವರರು ಪರಸ್ಪರ ನೋಟ ವಿನಿಮಯ ಮಾಡಿಕೊಳ್ಳುವ ಶುಭ ಆಚರಣೆ ಸಂದರ್ಭದಲ್ಲಿ , ಜನರು ಸಂಭ್ರಮದಿಂದ ಶ್ರೀ ಲಕ್ಷ್ಮೀ ಮತ್ತು ಶ್ರೀ ನಾರಾಯಣರಿಗೆ ಹೂವಿನ ಮಳೆಗರೆದರು. ಅಂದರೆ, ಶ್ರೀ ನಾರಾಯಣನು ಶ್ರೀ ಗೌರಾಂಗನಾಗಿ ಆವಿರ್ಭವಿಸಿದ್ದ ಮತ್ತು ಶ್ರೀಲಕ್ಷ್ಮಿಯು ಅವನ ಚರಣ ಕಮಲಗಳಿಗೆ ಹೂವಿನ ಹಾರ ಸಮರ್ಪಿಸಿದಳು. ಅವಳೇ ಆ ಪುಷ್ಪವೇನೋ ಎಂಬಂತೆ ಅವಳು ಅವನಿಗೆ ಶರಣಾದಳು, ಅವನನ್ನು ಪೂಜಿಸಿದಳು. ಚಂದ್ರವದನದಂತಹ ಸುಂದರ ಮುಖ ಉಳ್ಳ ಶ್ರೀ ಲಕ್ಷ್ಮೀ ಪಕ್ಕದಲ್ಲಿ ಭಗವಂತನು ಆಸೀನನಾದ. ಅವನ ಯೌವನ ಸೂಸುತ್ತಿದ್ದ ಸೌಂದರ್ಯಕ್ಕೆ ಮನ್ಮಥನೇ ಶರಣಾಗಿಬಿಟ್ಟ. ಶ್ರೀ ವಲ್ಲಭರ ಮನೆಯಲ್ಲಿನ ಅಂದಿನ ಆ ಸಂತೋಷ, ಆನಂದವನ್ನು ಯಾರಿಗೆ ತಾನೇ ಪರಿಪೂರ್ಣವಾಗಿ ವರ್ಣಿಸುವುದು ಸಾಧ್ಯ?

ಭೀಷ್ಮ ದೇವನಂತೆ ಕಾಣುತ್ತಿದ್ದ ಶ್ರೀ ವಲ್ಲಭ ಆಚಾರ್ಯರು, ಅನಂತರ ವಧುವನ್ನು ಒಪ್ಪಿಸಲು ಆಸೀನರಾದರು. ಭಗವಂತನು ಪುಷ್ಪಗಳ ಮಾಲೆ, ಗಂಧಗಳಿಂದ ಅಲಂಕೃತನಾಗಿದ್ದ.  ಅವನು ಅತ್ಯಂತ ಸುಂದರವಾದ ಹೊಳೆಯುವ ವಸ್ತ್ರಗಳನ್ನು ಧರಿಸಿದ್ದ. ವಲ್ಲಭ ಆಚಾರ್ಯರು ಭಗವಂತನ ಚರಣ ಕಮಲಗಳಿಗೆ ನೀರೆರೆದರು. ಇವು ಯಾವ ಪಾದಗಳು? ಬ್ರಹ್ಮ ಮತ್ತು ಶಿವ ತೊಳೆದು ಪೂಜಿಸಿದ ಪಾದಗಳೇ ಅವು.  ಲೌಕಿಕ ಜಗತ್ತನ್ನು ಸೃಷ್ಟಿಸಲು ಅಗತ್ಯವಾದ ಶಕ್ತಿ ಸಾಮರ್ಥ್ಯ ಪಡೆದುಕೊಳ್ಳಲು ಅವರು ಭಗವಂತನ ಪಾದ ಪೂಜೆ ಮಾಡಿದ್ದರು. ಅನಂತರ, ಧರ್ಮಗ್ರಂಥಗಳ ನಿಯಮಾನುಸಾರ ಆಚಾರ್ಯರು ತಮ್ಮ ಮಗಳನ್ನು ಭಗವಂತನಿಗೆ ಒಪ್ಪಿಸಿದರು. ಅವರು ಭಾವೋದ್ರೇಕಗೊಂಡಿದ್ದರು.  ಉಳಿದ ಆಚರಣೆಗಳು ಯೋಗ್ಯವಾಗಿ ನಡೆದವು. ಭಗವಂತನು ಅಂದು ರಾತ್ರಿ ಆಚಾರ್ಯರ ಮನೆಯಲ್ಲಿಯೇ ತಂಗಿದ್ದನು.

ಮರು ದಿನ ಬೆಳಗ್ಗೆ  ಶ್ರೀ ಗೌರಾಂಗನು ಲಕ್ಷ್ಮೀದೇವಿ ಜೊತೆಗೆ ತನ್ನ ಮನೆಗೆ ಹೊರಟನು. ಪಲ್ಲಕ್ಕಿಯಲ್ಲಿ ತೆರಳುತ್ತಿದ್ದ ಭಗವಂತ ಮತ್ತು ಅವನ ಸತಿಯನ್ನು ನೋಡಲು ಜನಸಾಗರವೇ ನೆರೆದಿತ್ತು. ಹೂವು, ಆಭರಣ, ರತ್ನಗಳಿದ್ದ ಕಿರೀಟ ಮತ್ತು ಮುಖದ ತುಂಬ ಗಂಧದ ಚುಕ್ಕೆಗಳಿಂದ ಅಲಂಕೃತರಾಗಿದ್ದ  ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ನಾರಾಯಣ ಅಲೌಕಿಕ ಕಾಂತಿಯಿಂದ ಪ್ರಜ್ವಲಿಸುತ್ತಿದ್ದರು. ಈ ದೈವಿಕ ದಂಪತಿಯನ್ನು ನೋಡಲು ಅವಕಾಶ ಲಭಿಸಿದ್ದು ತಮ್ಮ ಪುಣ್ಯ ಎಂದು ಜನರು ಭಾವಿಸಿದರು. ಈ ಅತಿ ಸುಂದರ ದೃಶ್ಯದಿಂದ, ವಿಶೇಷವಾಗಿ ಮಹಿಳೆಯರು ಮೈಮರೆತು ನಿಂತಿದ್ದರು. ಒಬ್ಬ ಮಹಿಳೆ ಉದ್ಗರಿಸಿದಳು, “ಅವಳು ಸುದೀರ್ಘ ಕಾಲ, ಅತ್ಯಂತ ಭಕ್ತಿಯಿಂದ ಶಿವ ಪಾರ್ವತಿಯರನ್ನು ಪೂಜಿಸಿರಬೇಕು. ಇಲ್ಲವಾದರೆ ಇಂತಹ ಸುಂದರ ಪತಿ ದೊರೆಯುವುದು ಸಾಧ್ಯವಿಲ್ಲ. ಬಹುಶಃ ಅವರೇ ಶಿವ, ಪಾರ್ವತಿ ಇರಬಹುದು.”

“ಅವರು ಇಂದ್ರ-ಶಚೀದೇವಿ ಅಥವಾ ಮದನ-ರತಿ ಇರಬಹುದು”,  “ಇಲ್ಲ, ಅವರು ಲಕ್ಷ್ಮೀ ನಾರಾಯಣ ಇರಬೇಕು”, “ಅವರು ಶ್ರೀರಾಮ-ಸೀತೆಯಂತೆ ಕಾಣುತ್ತಾರೆ”, “ಪಲ್ಲಕ್ಕಿಯಲ್ಲಿ ತೆರಳುತ್ತಿರುವ ಅವರು ಎಷ್ಟು ಸುಂದರ, ಉಜ್ಜ್ವಲವಾಗಿ ಕಾಣುತ್ತಾರೆ!” – ಹೀಗೆ ಸಾಗಿತ್ತು ಮಹಿಳೆಯರ ಮುತ್ತಿನಂತಹ ಮಾತುಗಳು. ಅವರಿಗೆ ಈ ದೈವ ದಂಪತಿಯನ್ನು ಕಂಡು ಅಚ್ಚರಿ, ಸಂತೋಷ.

ಸುಮಧುರ ಸಂಗೀತ ಮತ್ತು ಹರ್ಷೋದ್ಗಾರಗಳ ಮಧ್ಯೆ ಭಗವಂತನು ತನ್ನ ಸತಿಯನ್ನು ತನ್ನ ನಿವಾಸಕ್ಕೆ ಕರೆತಂದಾಗ ಸಂಜೆಯಾಗಿತ್ತು. ಶಚೀಮಾತಾ ಮನೆಯಿಂದ ಹೊರಗೆ ಬಂದು ನವ ದಂಪತಿಗೆ ಸಡಗರದಿಂದ ಸ್ವಾಗತ ಕೋರಿದಳು. ಅನಂತರ ಅವರನ್ನು ಮನೆ ಒಳಗೆ ಕರೆತಂದಳು. ಅವಳು ಆನಂದತುಂದಿಲಳಾಗಿದ್ದಳು. ಅತಿಥಿಗಳಿಗೆ ಉಡುಗೊರೆ ಮತ್ತು ಸಿಹಿ ಹಂಚುವಾಗ ಅವಳ ಸಂತೋಷ ಬಿಂಬಿತವಾಗುತ್ತಿತ್ತು. ಭಗವಂತನ ವಿವಾಹದ ವರ್ಣನೆಯನ್ನು ಯಾರು ಭಕ್ತಿಪೂರ್ವವಾಗಿ ಕೇಳುವರೋ ಅವರು ಈ ಲೌಕಿಕ ಬಂಧನವನ್ನು ಬಿಡಿಸಿಕೊಳ್ಳಬಲ್ಲರು.

ಶಚೀದೇವಿಗೆ ತನ್ನ ಮನೆ ಹೊಸದೊಂದು ದೀಪದಿಂದ ಬೆಳಗುತ್ತಿದೆ ಎಂದೆನಿಸಿತು. ಈಗ ಲಕ್ಷ್ಮೀದೇವಿಯು ತನ್ನ ಸೂಕ್ತ ಸ್ಥಳವಾದ ನಾರಾಯಣನ, ಶ್ರೀ ಗೌರಾಂಗನ, ಪಕ್ಕದಲ್ಲಿ ಇರುವುದರಿಂದ ಮನೆ ಒಳಗೂ ಹೊರಗೂ ಅದ್ಭುತ ಬೆಳಕಿನ ಪ್ರಜ್ವಲತೆಯನ್ನು ಅವಳು  ಕಂಡಳು. ಅವಳಿಗೆ ಈ ದೃಶ್ಯವನ್ನು ವರ್ಣಿಸಲಾಗಲಿಲ್ಲ. ಕೆಲವು ಘಳಿಗೆ ಅವಳು ತನ್ನ ಮಗನ ಪಕ್ಕದಲ್ಲಿ ಸುಂದರ ದೀಪದ ಪ್ರಜ್ವಲತೆ ಕಾಣುತ್ತಿದ್ದಳು. ಮರು ಘಳಿಗೆ ಅದು ಅಲ್ಲಿ ಕಾಣ ಸಿಗುತ್ತಿರಲಿಲ್ಲ. ಕೆಲವು ಸಮಯ ಹೂವಿನ ಸುವಾಸನೆ ಅಥವಾ ದೈವಿಕ ಕಮಲದ ಕಂಪು. ಈ ಸತ್ಯ ಏನೆಂದು ಅವಳು ಚಕಿತಳಾದಳು.

“ಬಹುಶಃ ನನಗೆ ಇದೆಲ್ಲದರ ಕಾರಣ ತಿಳಿದಿದೆ. ನನ್ನ ಸೊಸೆ ಬಹುಶಃ ಒಂದು ಅವತಾರ ಅಥವಾ ಶ್ರೀ ಲಕ್ಷ್ಮೀದೇವಿಯ ವಿಸ್ತಾರ ರೂಪ. ಆದುದರಿಂದಲೇ ನಾನು ಪ್ರಜ್ವಲಿಸುವ ಬೆಳಕು ನೋಡುತ್ತಿರುವೆ ಮತ್ತು ದೈವಿಕ ಕಮಲದ ಕಂಪು ಸೇವಿಸುತ್ತಿರುವೆ. ನನ್ನ ಹಿಂದಿನ ಸಂಕಷ್ಟ ಮತ್ತು ಬಡತನ ಮಾಯವಾಗಿರಬೇಕು. ಇವಳಂತೂ ಲಕ್ಷ್ಮೀದೇವಿಯೇ. ನಾನು ಅವಳನ್ನು ಹೇಗೆ ಪಡೆದೆನೋ ಅದು ನನಗೆ ತಿಳಿಯುತ್ತಿಲ್ಲ”,  ಎಂದು ಶಚೀದೇವಿ ಮನ ಹರಿಯುತ್ತಿತ್ತು.

ಈ ರೀತಿ ಶಚೀದೇವಿ ಏನೋ ಊಹಿಸಿಕೊಳ್ಳುತ್ತಿದ್ದಳು. ಆದರೆ, ದೇವೋತ್ತಮನಾದ ಶ್ರೀ ಗೌರಾಂಗನು ಮಾತ್ರ ತನ್ನ ಮೂಲ ಮತ್ತು ಪರಮ ಸತ್ಯದ ಗುರುತನ್ನು ಹೊರಗೆಡಹಲಿಲ್ಲ. ಭಗವಂತನ ಅದ್ಭುತ ಚಟುವಟಿಕೆ ಮತ್ತು ಶಕ್ತಿಯನ್ನು ಯಾರು ಅರ್ಥ ಮಾಡಿಕೊಳ್ಳಬಲ್ಲರು?  ಯಾವಾಗ ಮತ್ತು ಎಲ್ಲಿ ತನ್ನ ಲೀಲೆ ತೋರಬೇಕೆಂದು ಅವನು ಬಯಸುತ್ತಾನೋ ಅದನ್ನು ಪ್ರದರ್ಶಿಸಲು ಅವನು ಸ್ವತಂತ್ರ. ಈ ರಹಸ್ಯ ಸತ್ಯಗಳನ್ನು ಭಗವಂತನೇ ಹೊರಗೆಡಹದಿದ್ದರೆ, ಲಕ್ಷ್ಮೀದೇವಿಗೂ ಅಲೌಕಿಕ ಸಂಗತಿಯನ್ನು ಅಳೆಯುವ ಶಕ್ತಿ ಇರುವುದಿಲ್ಲ. ಎಲ್ಲ ಧರ್ಮ ಗ್ರಂಥಗಳೂ – ವೇದ ಮತ್ತು ಪುರಾಣಗಳು – ಒಂದೇ ಸತ್ಯವನ್ನು ಪುನರುಕ್ತಿಸುತ್ತವೆ :  ಭಗವಂತನ ಕೃಪೆ ಇಲ್ಲದಿದ್ದರೆ ಯಾರಿಗೂ ಪರಮ ಸತ್ಯ, ದೇವೋತ್ತಮ ಪರಮ ಪುರುಷನ ಬಗೆಗೆ ಅರಿವು ಸಾಧ್ಯವಿಲ್ಲ.

(ಮುಂದುವರಿಯುವುದು)
Leave a Reply

Your email address will not be published. Required fields are marked *